Homeಅಂಕಣಗಳುಹವ್ಯಕ ತರುಣರ ಸಮಸ್ಯೆ ಹಾಗೇ ಉಳಿಯಿತಲ್ಲಾ!

ಹವ್ಯಕ ತರುಣರ ಸಮಸ್ಯೆ ಹಾಗೇ ಉಳಿಯಿತಲ್ಲಾ!

- Advertisement -
- Advertisement -

ಈ ವರ್ಷದ ಅಂತ್ಯಭಾಗದಲ್ಲಿ ನಡೆದ ಮಹತ್ವದ ಘಟನೆಗಳಲ್ಲಿ ಮೊದಲನೆಯದಾವುದೆಂದರೆ, ಅದು ಅಖಿಲ ಹವ್ಯಕ ಮಹಾಸಭಾದ ಅಮೃತ ಮಹೋತ್ಸವವಂತಲ್ಲಾ. ಹವ್ಯಕ ಸಮಾಜ ನಮ್ಮ ನಡುವೆ ತುಂಬಾ ಪ್ರಭಾವಿಯಾದ ಸಮಾಜ ಎಂಬುದರಲ್ಲಿ ಎರಡನೇ ಮಾತಿಲ್ಲ, ಮೂರನೇ ಸದ್ದಿಲ್ಲ! ಈ ಜನಾಂಗದ ಜಗದ್ಗುರು ಮಠದ ಭಕ್ತೆಗೆ ನಾನೇ ರಾಮ, ನೀನೇ ನನಗಾಗಿ ಜನ್ಮವೆತ್ತಿ ಹುಡುಕುತ್ತಾ ಬಂದ ಸೀತೆ ಎಂದು ನಂಬಿಸಿದ ಪುರುಷೋತ್ತಮ. ಸದರಿ ರಾಘವನ ರಾಸಲೀಲೆ ಅತಿಯಾದ ಕಾರಣಕ್ಕೆ ನೊಂದ ಸೀತೆ ಕೋರ್ಟ್ ಮೆಟ್ಟಿಲೇರಿದಳು. ಆದರೇನು ರಾಘವೇಶ್ವರನ ಪ್ರಭಾವಕ್ಕೆ ಅಂಜಿದ ಜಡ್ಜ್‍ಗಳು ಈ ಕೇಸನ್ನು ನಾವು ಮುಟ್ಟುವುದಿಲ್ಲ ಎಂದು ಹಿಂದೆ ಸರಿದರು. ಧೈರ್ಯ ಮಾಡಿದ ಜಡ್ಜ್ ಒಬ್ಬರು `ಈ ರಾಮನ ಅಪರಾವತಾರಿ, ಪೊಲೀಸರ ಸ್ಥಳ ತನಿಖಾ ವರದಿ ಪ್ರಕಾರ 159 ಬಾರಿ ರತಿಸುಖ ರಾಸಲೀಲೆ ನಡೆಸಿರುವುದರಿಂದ ಒಪ್ಪಿತ ವಿಲಾಸ ಕ್ರೀಡೆಯಾಗುತ್ತದೆ. ಆದ್ದರಿಂದ ಇದು ಅತ್ಯಾಚಾರಕ್ಕೆ ದೂರ’ ಎನ್ನಲಾಗಿ ಇಡೀ ಹವ್ಯಕರಲ್ಲಿನ ರಾಘು ಅಭಿಮಾನಿಗಳು ಅಂದೇ ಅಮೃತ ಮಹೋತ್ಸವ ಮಾಡಿ ರಾಘು ಮೆರೆಸುವ ತೀರ್ಮಾನ ಕೈಗೊಂಡರಂತಲ್ಲಾ ಥೂತ್ತೇರಿ.

******

 

ರಾಘವೇಶ್ವರ ನೆಲೆಸಿರುವ ಪ್ರದೇಶದ ಶಾಸಕ ಹರತಾಳ ಹಾಲಪ್ಪ ರಾಘವನ ಪರಮ ಭಕ್ತ. ಆದ್ದರಿಂದ ಸಾಗರದ ಹವ್ಯಕರು ಆತನನ್ನು ಗೆಲ್ಲಿಸಿದರಂತಲ್ಲಾ. ಯಾಕೆಂದರೆ ಆ ಹಾಳು ತಿಮ್ಮಪ್ಪ ದಿನ ಬೆಳಗಾಯ್ತೆಂದರೆ ಜನಗಳ ಕೆಲಸ ಕುರಿತು ಯೋಚಿಸುತ್ತಾನೆ. ಕಾರ್ಯಕರ್ತರ ಖಾಸಗಿ ವಿಷಯವನೆಂದೂ ಕೇಳಿಲ್ಲ. ಅದೇ ಹಾಲಪ್ಪ ಜನರ ಖಾಸಗಿ ವಿಷಯ ಕೇಳುತ್ತಾನೆ. ಸಾಧ್ಯವಾದರೆ ಮನೆಗೂ ಬಂದುಬಿಡುತ್ತಾನೆ. ನಮ್ಮ ಮಡದಿಯ ಕೈಯಿಂದ ಕಾಫಿ ಮಾಡಿಸಿಕೊಂಡು ಕುಡಿಯುತ್ತಾನೆ. ನಮ್ಮ ಕೈಯಿಂದಲೇ ಬೀಡಿ ಸಿಗರೇಟು ಮಾತ್ರೆ ತರಿಸುತ್ತಾನೆ. ಇಂತಹ ಜನಾನುರಾಗಿ ಹಾಲಪ್ಪನೆಲ್ಲಿ ಆ ತಿಮ್ಮಪ್ಪನೆಲ್ಲಿ ಎಂದು ಚಿಂತಿಸಿ ಹಾಲಪ್ಪನನ್ನೇ ಆರಿಸಿದರಂತಲ್ಲಾ. ಅಂಥಾ ರಾಘವನಿಗೆ ಇಂತ ಹಾಲಪ್ಪನೇ ಸರಿ ಎಂದು ಹವ್ಯಕರು ಚಿಂತಿಸಿದ್ದಾಗ ರಾಘವನ ರಾಡಿ ತೆಗೆಯದೆ ಮೌನವಾಗಿದ್ದ ತಿಮ್ಮಪ್ಪನಿಗೆ ಹವ್ಯಕರು ಸರಿಯಾದ ಶಾಸ್ತಿ ಮಾಡಿದರಲ್ಲಾ. ಸದರಿ ಹಾಲಪ್ಪ ಯಾರಾದರೂ ಹವ್ಯಕರನ್ನ ಬೈದರೆ ನಾನು ಸುಮ್ಮನಿರುವುದಿಲ್ಲ, ರಾತ್ರಿ ನಿಮ್ಮ ಮನೆಗೇ ಬಂದು ಬಿಡುತ್ತೇನೆಂದು ಹೆದರಿಸಿದ್ದಾನಂತಲ್ಲಾ ಥೂತ್ತೇರಿ.

******

 

ಹವ್ಯಕರು ಹೆಚ್ಚು ನೆಲೆಸಿರುವ ಸಾಗರ ಪ್ರಾಂತ್ಯದಲ್ಲಿನ ಪ್ರತಿ ಹಳ್ಳಿಗಳಿಲ್ಲಿ 20ರಿಂದ 30 ಹುಡುಗರು ಅವಿವಾಹಿತರಾಗಿಯೇ ಇದ್ದಾರಂತಲ್ಲಾ. ಈ ಸಮಸ್ಯೆ ರಾಮಚಂದ್ರಾಪುರ ಮಠದ ಗುರುಗಳನ್ನ ತೀವ್ರವಾಗಿ ಕಾಡಬೇಕಿತ್ತು. ಆದರೆ ತರುಣರ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸಿಕೊಂಡ ಗುರುಗಳ ಅನೈತಿಕ ಬದುಕನ್ನೇ ಮನ್ನಿಸಿದ ಜನ, ಅವರಿಗೆ ಪೂರ್ಣ ಬೆಂಬಲ ಕೊಡುವ ನಿರ್ಣಯವನ್ನೇ ಕೈಗೊಂಡರಂತಲ್ಲಾ. ಕಾರಣ ಈ ರಾಮಚಂದ್ರಾಪುರ ಮಠ ಜಗತ್ತಿನ ಏಕೈಕ ಮಠ ಅಂತಹ ಮಠದಲ್ಲಿ ಈ ತರಹ ಇರುವ ಏಕೈಕ ಜಗದ್ಗುರು ರಾಘವೇಶ್ವರ ಅವರ ಅಜನ್ಮ ಬ್ರಹ್ಮಚಾರಿ ಬದುಕನ್ನ ಕೊಂಡಾಡುತ್ತ ತರುಣರು, ಕನ್ಯೆ ಇಲ್ಲದ ತಮ್ಮ ಬದುಕನ್ನು ಪೂರ್ಣಗೊಳಿಸಬೇಕು ಎಂಬ ಗುಪ್ತ ಚರ್ಚೆ ಬೆಂಗಳೂರಲ್ಲಿ ಆಯ್ತಂತಲ್ಲಾ. ಅದೇನಾದರಾಗಲಿ ಅಖಿಲ ಭಾರತ ಹವ್ಯಕ ಮಹಾಸಭೆಯಲ್ಲಿ ಹವ್ಯಕ ತರುಣರ ಲೈಂಗಿಕ ಸಮಸ್ಯೆ ಚರ್ಚೆಗೇ ಬರದಿರುವುದಕ್ಕೆ ಕಾರಣ `ಎಲ್ಲರೂ ಅವರ ಜಗದ್ಗುರು ದಾರಿಯಲ್ಲಿ ನಡೆಯುತ್ತಾರೆ, ಇಲ್ಲವಾದಲ್ಲಿ ಅವರ ಬದುಕು ಅವರ ಕೈಯಲ್ಲಿ’ ಎಂಬ ತಾತ್ಸಾರದ ಮನೋಭಾವವೇ ಕಾರಣವಂತಲ್ಲಾ ಥೂತ್ತೇರಿ.

 

******

 

ಸಮ್ಮಿಶ್ರ ಸರಕಾರದ ವರಸೆ ನೋಡಿದ ರೈತರು ಈ ಸರಕಾರದಿಂದ ನಮ್ಮ ಸಾಲಮನ್ನಾ ಸಾಧ್ಯವೇ ಎಂದು ಚಿಂತಿಸುತ್ತಿರುವಾಗ, ಭಾವುಕರಾದ ಕುಮಾರಣ್ಣ `ರೈತ ಬಾಂಧವರೇ ಮತ್ತು ಅಣ್ಣತಮ್ಮಂದಿರೆ ಮತ್ತು ಅಕ್ಕಭಾವಂದಿರೆ ಹಾಗೂ ನಮ್ಮ ತಂದೆಯ ಅಭಿಮಾನಿಗಳೇ, ಏನು ನೀವು ಒಂದು ಅನುಮಾನ ಪಡ್ತಾ ಇರತಕ್ಕಂತ ವಿಷಯ ಏನಿದೆ ಅದು ನನಿಗೆ ಅರ್ಥ ಆಗ್ತಕ್ಕಂತದ್ದು. ಆ ದಿಸೆಲಿ ಯಾರು ಅನುಮಾನ ಪಡಬೇಡಿ. ಈಗಾಗಲೇ ರಾಜ್ಯೋತ್ಸವ ಪಡೆದಿರತಕ್ಕಂತ ಪ್ರಶಸ್ತಿ ವಿಜೇತರಿಗೆ ಕೊಡತಕ್ಕಂತ 63 ಲಕ್ಷ ರೂಪಾಯಿ ಹಣವನ್ನ ಒದಗಿಸಿ ಕೊಟ್ಟ ನಂತರ ನಮ್ಮ ರೈತ ಬಾಂಧವರ ಸಾಲವನ್ನ ಮನ್ನಾ ಮಾಡ್ತಕ್ಕಂತದ್ದರ ಬಗ್ಗೆ ಚಿಂತನೆ ಮಾಡ್ತಿನಿ. ನನ್ನ ಜೀವಿತಾವಧಿಯಲ್ಲೇ ನಿಮ್ಮ ಸಾಲ ಏನಿದೆ ಅದು ಯಾವುದೇ ಬ್ಯಾಂಕಿನಲ್ಲಿರಲಿ ಅಥವಾ ಬಡ್ಡಿ ದಂಧೆಯವರದ್ದೇ ಇರಲಿ, ಅದನ್ನ ಮನ್ನಾ ಮಾಡ್ತಕ್ಕಂತದಕ್ಕೆ ಬೇಗ ತೀರ್ಮಾನಕ್ಕೆ ಬರ್ತಕ್ಕಂತ ಕ್ಯೆಲುಸ ಮಾಡ್ತಿನಿ. ಈ ವಿಷಯದಲ್ಲಿ ನೀವು ಯಾವುದೇ ಚಾಡಿ ಮಾತನ್ನ ಕೇಳದೆ ನನ್ನನ್ನ ನಂಬಿದರೆ ನನ್ನ ಏಕೈಕ ಪುತ್ರ ನಿಖಿಲ್‍ಗೌಡನ ಮೇಲೆ ಆಣೆ ಮಾಡಿ ಹೇಳ್ತೀನಿ, ನಿಮ್ಮ ರುಣ ಇಟ್ಟಗಳಲ್ಲ’ ಎಂದರಂತಲ್ಲಾ ಥೂತ್ತೇರಿ.

******

 

ಹಳೇ ಕಾಯಿಲೆಯ ಹೊಸ ಮನುಷ್ಯ ದಾಬಸ್‍ಪೇಟೆಯ ಡಿಶ್‍ನಾಗ್ ಮುಂದಿನ ಚುನಾವಣೆಯಲ್ಲಿ ದೇಶದ ಜನ ಮುಂದೆ ಮತ್ತೆ ಮೋದಿಯವರೇ ಇರಲಿ ಎಂದು ತೀರ್ಮಾನಿಸಿದರೆ ಆಶ್ಚರ್ಯವಿಲ್ಲ ಎಂಬ ಬೆದರಿಕೆ ಹುಟ್ಟಿಸಿದ್ದಾರಲ್ಲಾ. ಈ ರಾಜಕೀಯ ಪಂಡಿತರ ಪ್ರಕಾರ ಉತ್ತರ ಭಾರತದಲ್ಲಿ ಅಧಿಕಾರ ಕಳೆದುಕೊಂಡ ಬಿಜೆಪಿಯಲ್ಲಿ ಜನ ಗುರುತಿಸಿರುವ ಸಮಸ್ಯೆ ಇದೆ ಎಂದು ವ್ಯಾಖ್ಯಾನಿಸಿದ್ದಾರೆ. ಬಿಜೆಪಿಯಲ್ಲಿ ಇರಬಹುದಾದ ಆ ನಿಗೂಢ ಸಮಸ್ಯೆ ಯಾವುದೆಂಬುದನ್ನ ಪ್ರಖರ ಸಮಾಜವಾದಿಗಳು ವಿವರಿಸುವ ಗೋಜಿಗೆ ಹೋಗಿಲ್ಲ. ಕಾಂಗೈನ ಅಣುಅಣುವನ್ನ ವಿಶ್ಲೇಷಿಸಿ ಅವರ ಟೀಕೆಯಲ್ಲೇ ಖುಷಿಕಾಣುವ ಈ ರಾಜಕೀಯ ಪಂಡಿತರು ಬಿ.ಜೆ.ಪಿ ಸಮಸ್ಯೆಯನ್ನ ಅನಾವರಣ ಮಾಡಬೇಕಿತ್ತು. ಅದು ಬಿಟ್ಟು ಪಬ್ಲಿಕ್ ಟಿವಿಯ ಕಡ್ಡಿ ರಂಗನಂತೆ ಕಾಂಗೈ ಸೋತ ಕ್ಷೇತ್ರಗಳ ಬಗ್ಗೆ ಟೀಕೆಗೆ ತಮ್ಮ ವಿದ್ವತ್ತನ್ನ ಬಳಸಬಾರದಿತ್ತು. ಉತ್ತರ ಭಾರತದ ರಾಜ್ಯಗಳು ಬಿಜೆಪಿಯ ದೈತ್ಯ ಶಕ್ತಿ ಎದುರು ಬರಿಗೈಲಿ ಚುನಾವಣೆ ಎದುರಿಸಿ ಕಾಂಗೈ ಗೆಲ್ಲಿಸಿವೆ. ಇದು ಗುಪ್ತ ಬಿಜೆಪಿ ಅಭಿಮಾನಿ ವಿದ್ವಾಂಸರಿಗೆ ನಿದ್ದೆಗೆಡಿಸುವ ಸಂಗತಿಯಂತಲ್ಲಾ, ಥೂತ್ತೇರಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...