ಹಸಿವಿನ ಭಾಷೆ ಕಲಿಸುವ ರಮಝಾನ್

ಜಗತ್ತಿಗೆರಗಿದ ಕೊರೋನಾ ವಿಪತ್ತು, ಲಾಕ್ಡೌನ್ ಸಂಕಷ್ಟಗಳ ನಡುವೆ ಈ ಬಾರಿಯ ರಮಝಾನ್ ಆಗಮಿಸಿ, ಇದೀಗ ನಿರ್ಗಮನದ ಹೊಸ್ತಿಲಲ್ಲಿದೆ. ದಿನವಿಡೀ ತೊಟ್ಟು ಹನಿಯನ್ನೂ ಗಂಟಲಿಗಿಳಿಸದೇ ಉಪವಾಸವಿದ್ದು ಹಸಿವಿನ ಆಳ ಅಗಲಗಳನ್ನು ಪರಿಚಯಿಸಿಕೊಳ್ಳುವ ರಮಝಾನ್ ಈ ಬಾರಿ ತುಸು ಹೆಚ್ಚೇ ತೀಕ್ಷ್ಣವಾಗಿದೆ. ಜಗತ್ತಿನ ಮೂಲೆ ಮೂಲೆಯಲ್ಲಿನ ಮನಕಲಕುವ ಹಸಿವಿನ ಚಿತ್ರಣಗಳು ಪ್ರತಿನಿತ್ಯ ಕಣ್ಣ ಮುಂದೆ ಬಂದು ನಿಲ್ಲುತ್ತಲೇ ಇವೆ. ಲಾಕ್ಡೌನ್ ಪ್ರಾರಂಭವಾದ ಆರಂಭದ ದಿನಗಳಲ್ಲಿ ಪ್ರಧಾನಿ ಮೋದಿಯವರ ಸ್ವಕ್ಷೇತ್ರ ವಾರಣಾಸಿಯ ಬುಡಕಟ್ಟು ಜನಾಂಗವೊಂದರ ಪುಟ್ಟ ಮಕ್ಕಳು ಕುರುಚಲು ಹುಲ್ಲನ್ನು ಉಪ್ಪು ಬೆರೆಸಿ ತಿನ್ನುವ ಹೃದಯ ವಿದ್ರಾವಕ ದೃಶ್ಯವನ್ನು ಪತ್ರಕರ್ತರಾದ ಇಸ್ಮತ್ ಅರಾ The wire.inನಲ್ಲಿ ವರದಿ ಮಾಡಿದ್ದರು. ಕಿನ್ಯಾದ ಮೊಂಬಾಸ ಎಂಬಲ್ಲಿ ಹಸಿವು ತಾಳಲಾರದೇ ರಚ್ಚೆ ಹಿಡಿಯುತ್ತಿದ್ದ ತನ್ನ ಮಕ್ಕಳನ್ನು ಸಂತೈಸುವುದಕ್ಕಾಗಿ ವಿಧವೆ ತಾಯಿಯೊಬ್ಬಳು ಮಡಕೆಯೊಳಗೆ ಕಲ್ಲುಗಳನ್ನು ಹಾಕಿ ಬೇಯಿಸುವಂತೆ ನಟಿಸಿದ್ದಳೆಂದರೆ ಹಸಿವಿನ ಕಾಠಿಣ್ಯವೆಷ್ಟಿರಬೇಕು..? ವ್ರತಾಚರಿಸಿದವನಿಗೆ ದಿನದ ಕೊನೆಯಲ್ಲಿ ಏನನ್ನಾದರೂ ಹೊಟ್ಟೆಗಿಳಿಸಬಹುದೆಂಬ ಭರವಸೆಯಿದೆ. ಆದರೆ ಸಂಕಷ್ಟದಲ್ಲಿ ಸಿಲುಕಿ ಉಪವಾಸ ಬಿದ್ದವರ ಪಾಡು, ತುತ್ತು ಕೂಳಿಗೂ ತತ್ವಾರಪಡುವ ದಟ್ಟ ದರಿದ್ರರ ಪಾಡು ಊಹೆಗೂ ನಿಲುಕದ್ದು.

ಹಸಿವು ಮರಣಕ್ಕಿಂತಲೂ ಭಯಾನಕ ಎನ್ನುತ್ತಾರೆ. ಲಾಕ್ಡೌನಿನಿಂದ ಹಸಿವು ತಾಳಲಾರದೇ ಕಾಳಿಂಗ ಸರ್ಪವೊಂದನ್ನು ಬೇಟೆಯಾಡಿ ತಿಂದ ಘಟನೆಯು ಇದನ್ನು ಸಮರ್ಥಿಸುವಂತಿದೆ.

ಜಗತ್ತಿನಲ್ಲಿ ಹಸಿವಿಗಿಂತ ಮಿಗಿಲಾದ ಫಿಲಾಸಫಿ ಇನ್ನೊಂದಿಲ್ಲ. “ನೆರೆಮನೆಯವನು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ” ಎಂಬ ಪ್ರವಾದಿ ಮುಹಮ್ಮದ್ (ಸ) ರ ವಚನ ಅದೆಷ್ಟು ಸುಂದರ ಮತ್ತು ಅದರ ಹಿಂದಿನ ಕಾಳಜಿ ಅದೆಷ್ಟು ಶ್ರೇಷ್ಠ.. ಇಲ್ಲಿ ಪ್ರವಾದಿವರ್ಯರು ಹಸಿದ ಹೊಟ್ಟೆಯನ್ನಷ್ಟೇ ಉಲ್ಲೇಖಿಸಿದ್ದಾರೆಯೇ ಹೊರತು ಆ ಹೊಟ್ಟೆ ಹೊತ್ತ ಮನುಷ್ಯನ ಜಾತಿ, ಧರ್ಮವನ್ನಲ್ಲ. ಹಾಗಾಗಿ ಹಸಿದವನ ಹಸಿವು ತಣಿಸುವುದು ಮುಸಲ್ಮಾನನಿಗೆ ಧಾರ್ಮಿಕ ಬಾಧ್ಯತೆಯಾಗಿದೆ.

ಇಸ್ಲಾಂ ರಮಝಾನ್ ಉಪವಾಸವನ್ನು ಪ್ರತಿಯೊಬ್ಬರಿಗೂ ಕಡ್ಡಾಯಗೊಳಿಸಿರುವುದು ಹಸಿವಲ್ಲಿರಿಸಿ ದಂಡಿಸುವುದಕ್ಕಲ್ಲ. ಆತ್ಮ ಸಂಸ್ಕರಣೆಯೇ ಉಪವಾಸದ ಮೂಲ ಉದ್ದೇಶ. ಉಪವಾಸ ಕೇವಲ ಆರಾಧನೆಯಷ್ಟೇ ಅಲ್ಲ. ಅದರಾಚೆಗೆ ಕಲಿಯಬೇಕಾದ ಪಾಠಗಳು ಬಹಳಷ್ಟಿವೆ.

ಅನುಭವಕ್ಕಿಂತ ದೊಡ್ಡ ಪಾಠವಿಲ್ಲ. ಸ್ವಯಂ ಉಪವಾಸವಿದ್ದಾಗ ಮಾತ್ರ ಹಸಿವಿನ ಕಾಠಿಣ್ಯವನ್ನರಿಯಲು ಸಾಧ್ಯ. ಹೊಟ್ಟೆಗೆ ಹಿಟ್ಟಿಲ್ಲದ ಬಡವನ ಸಂಕಟವನ್ನು ಓರ್ವ ವ್ರತಧಾರಿ ಚೆನ್ನಾಗಿ ಅರ್ಥೈಸಬಲ್ಲನು. ಆದುದರಿಂದಲೇ ಇಂದು ನಮ್ಮ ದೇಶದಲ್ಲಿ ಹಸಿದವರ ಹಸಿವು ತಣಿಸುವ ಕೆಲಸದಲ್ಲಿ ಮುಸ್ಲಿಂ ಸಮುದಾಯ ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದು. ಕೈಗೆಟುಕದ ಆಹಾರವನ್ನು ದೂರದಿಂದ ಆಸೆಕಣ್ಣುಗಳಿಂದ ನೋಡುವ ಫಕೀರನ ಆ ಅನುಭವ ವ್ರತ ಅನುಷ್ಠಾನದ ಪ್ರತಿಯೊಬ್ಬನೊಳಗೂ ಉಂಟಾಗುತ್ತದೆ. ಕಣ್ಣ ಮುಂದೆ ಯಥೇಚ್ಛ ಆಹಾರ-ಪಾನೀಯಗಳಿದ್ದರೂ ಉಪವಾಸ ಪಾರಣೆಯ ಹೊತ್ತಾಗದೇ ಒಂದೇ ಒಂದು ಅಗುಳನ್ನೋ/ ಹನಿಯನ್ನೋ ಬಾಯಿಗಿಳಿಸುವಂತಿಲ್ಲ. ಖಾಲಿ ತಟ್ಟೆಯ ಹಸಿವಿನ ಕಾವು ತುಂಬು ಬಟ್ಟಲಿಗೆ ಮುಟ್ಟುವುದೇ ಇಲ್ಲಿ. ಜೊತೆಗೆ ಸಹನೆ ಎಂದರೆ ಏನೆಂಬುವುದನ್ನು ಉಪವಾಸವು ಕಲಿಸಿ ಕೊಡುತ್ತದೆ. ಹಸಿವಿನ ರುಚಿಯುಣ್ಣದ ಶ್ರೀಮಂತ ವರ್ಗವು ನಮ್ಮ ಸಮಾಜದಲ್ಲಿದೆ. ರಮಝಾನಿಗೆ ಬಡವ- ಶ್ರೀಮಂತ, ಗಂಡು- ಹೆಣ್ಣು, ಮಳೆ, ಚಳಿ, ಕರಟಿ ಹೋಗುವ ಬಿಸಿಲೆಂಬ ವ್ಯತ್ಯಾಸವಿಲ್ಲ. ರಮಝಾನ್ ಬಂತೆಂದರೆ ಬಡವನ ಹೊಟ್ಟೆಯಲ್ಲಿನ ಅದೇ ಸಂಕಟವನ್ನು ಶ್ರೀಮಂತನೂ ಆಸ್ವಾದಿಸಲೇಬೇಕಾಗುತ್ತದೆ, ಹಸಿವಿನ ಭಾಷೆಯನ್ನು ಕಲಿಯಬೇಕಾಗುತ್ತದೆ.

ದಿನವಿಡೀ ಉಪವಾಸವಿದ್ದು ಇಫ್ತಾರಿನ ಸಮಯದಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುವರೆಂಬ ತಪ್ಪು ಕಲ್ಪನೆ ಕೆಲವು ಮುಸ್ಲಿಮೇತರರಲ್ಲಿದೆ. ಇದು ಹೇಗೆಂದರೆ, ದಿನವಿಡೀ ಅನ್ನ ನೀರಿಲ್ಲದೆ ಬಳಲಿ ಬೆಂಡಾದವನ ಮುಂದೆ ವಿವಿಧ ಭೋಜನ ವಸ್ತುಗಳನ್ನಿಟ್ಟಂತೆ. ಆತ ಏನನ್ನೆಲ್ಲಾ ಹೊಟ್ಟೆಗಿಳಿಸಿಯಾನು? ದಿನವಿಡೀ ಹಸಿವಿನಲ್ಲಿದ್ದ ಕಾರಣಕ್ಕೆ ಬಡ್ಡಿ ಸೇರಿಸಿ ತಿನ್ನಲು ಆತನ ಬರಿ ಹೊಟ್ಟೆಗೆ ಸಾಧ್ಯವಾದೀತೇ? ಖಂಡಿತಾ ಇಲ್ಲ. ಬಡವನೊಡಲ ಈ ಅನುಭವವನ್ನು ವ್ರತಧಾರಿಯು ಇಫ್ತಾರಿನ ಸಮಯದಲ್ಲಿ ಅರಿತುಕೊಳ್ಳುತ್ತಾನೆ.

‘ತಿಬ್ಬುನ್ನಬಿ’ ಎಂಬ ಪ್ರವಾದಿ ಚಿಕಿತ್ಸೆಯಲ್ಲಿ ಈ ರೀತಿ ಉಲ್ಲೇಖಿಸಲಾಗಿದೆ, “ಮನುಷ್ಯರಿಗೆ ಆತನ ಹೊಟ್ಟೆಗಿಂತ ಕೆಟ್ಟ ಪಾತ್ರೆ ಬೇರೊಂದಿಲ್ಲ. ಹಾಗಾಗಿ ಹೊಟ್ಟೆಯನ್ನು ಮೂರು ಭಾಗಗಳನ್ನಾಗಿ ಮಾಡಿ, ಅದರಲ್ಲಿ ಒಂದಂಶ ನೀರಿಗೂ, ಒಂದಂಶ ವಾಯುವಿಗೂ, ಒಂದಂಶ ಆಹಾರಕ್ಕೂ ಮೀಸಲಿಡಬೇಕು.” ಆರೋಗ್ಯದ ದೃಷ್ಟಿಯಿಂದಲೂ ಮಿತಾಹಾರ ಒಳ್ಳೆಯದು ಎಂಬುವುದನ್ನು ಇಲ್ಲಿ ಮನಗಾಣಬಹುದು. ಒಟ್ಟಿನಲ್ಲಿ ಉಪವಾಸವೆಂಬುದು ಹೃದಯದ ಕಣ್ಣನ್ನು ತೆರೆಸುವ ಅಸ್ತ್ರ.

ಮನುಷ್ಯ ಸಂಬಂಧವನ್ನು ಗಟ್ಟಿಗೊಳಿಸುವುದು ರಮಝಾನ್‍ನ ಇನ್ನೊಂದು ಅತೀ ಮಹತ್ವದ ಸಂದೇಶವಾಗಿದೆ. ರಮಝಾನ್ ಎಂಬ ಅರಬೀ ಪದಕ್ಕೆ ಸುಟ್ಟು ಹಾಕು ಎಂಬ ಅರ್ಥವಿದೆ. ಕೆಡುಕುಗಳನ್ನು ಸುಟ್ಟು ಹಾಕುವುದು ರಮಝಾನ್‍ನ ಮೂಲಭೂತ ಉದ್ದೇಶಗಳಲ್ಲೊಂದಾಗಿದೆ.

ರಮಝಾನ್‍ನಲ್ಲಿ ಮನುಷ್ಯರು ಪರಸ್ಪರರ ಮೇಲೆ ಅರಿತೋ, ಅರಿಯದೆಯೋ ಮಾಡಿದ ಅಕ್ರಮಗಳನ್ನು ಮಾಫ್ ಮಾಡಿಸಬೇಕಾದುದು ಅತೀ ಅಗತ್ಯ. ಆ ಮೂಲಕ ದ್ವೇಷ, ಈಷ್ರ್ಯೆಗಳನ್ನು ಸುಟ್ಟು ಹಾಕಿ ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮಹೋನ್ನತ ಉದ್ದೇಶ ರಮಝಾನಿಗಿದೆ.

ಎಳವೆಯಲ್ಲಿ ರಮಝಾನ್ ಎಂದರೆ ನಮಗೆ ಎಲ್ಲಿಲ್ಲದ ಸಂಭ್ರಮ, ಸಡಗರ. ಆ ದಿನಗಳಿಗೆಂದೇ ವಿವಿಧ ಅಡುಗೆ ಸಾಮಗ್ರಿಗಳು, ಹಣ್ಣು ಹಂಪಲುಗಳು ಮನೆ ಸೇರುತ್ತಿದ್ದವು. ಆಗೆಲ್ಲಾ ನಾನು ಕಲ್ಲಂಗಡಿ ಹಣ್ಣನ್ನು, ಕಡ್ಲೆ ಬೇಳೆ ಮನ್ನಿಯನ್ನು ಉಪವಾಸ ಅಂದುಕೊಳ್ಳುತ್ತಿದ್ದೆ. ಹೊಟ್ಟೆಗಿಲ್ಲದ ಮಕ್ಕಳಿಗೆ ಉಪವಾಸವೆಂದರೆ ವಿಶೇಷ ಅನ್ನಿಸಲಾರದು. ‘ಹಸಿವು’ ಜಗತ್ತಿನಲ್ಲಿ ಹೊಸತಾಗಿ ಹುಟ್ಟಿಕೊಂಡದ್ದೇನೂ ಅಲ್ಲ. ನಮ್ಮ ದೇಶದಲ್ಲಿ ಕೊರೊನಾ ಇದನ್ನು ಮತ್ತೊಮ್ಮೆ ತೆರೆಯ ಮೇಲೆ ಎಳೆದು ತಂದಿದೆ ಅಷ್ಟೇ. ಹಸಿವಿನ ಕಾಠಿಣ್ಯವರಿತು ಸುತ್ತ ಮುತ್ತಲ ಸಹಮಾನವರ ಹಸಿವು ತಣಿಸುವ ಪ್ರಯತ್ನಗಳು ನಮ್ಮಿಂದಾಗದಿದ್ದರೆ ನಮ್ಮ ಉಪವಾಸದ ಉದ್ದೇಶ ಪ್ರಶ್ನಾರ್ಹವಾಗಿಯೇ ಉಳಿಯಬಲ್ಲುದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here