ತುರ್ತು ಪರಿಸ್ಥಿತಿ ಹೇರಿಕೆಯ ನೆನಪು: ಇಂದು ಪ್ರಜಾಪ್ರಭುತ್ವಗಳು ಸಾಯುವ ಬಗೆ ಬದಲಾಗಿದೆ

1
ತುರ್ತು ಪರಿಸ್ಥಿತಿ ಹೇರಿಕೆಯ ನೆನಪು: ಪ್ರಜಾಪ್ರಭುತ್ವ ಸಾಯುವ ಬಗೆ ಬದಲಾಗಿದೆ

ಪ್ರಜಾಪ್ರಭುತ್ವದ ಸಾವು ಹೇಗೆ ಆಗುತ್ತದೆ ಎಂಬುದರ ಒಂದು ದೊಡ್ಡ ವಿಪರ್ಯಾಸವೇನೆಂದರೆ, ಪ್ರಜಾಪ್ರಭುತ್ವದ ರಕ್ಷಣೆಯನ್ನೇ ಕಾರಣವಾಗಿಟ್ಟುಕೊಂಡು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗುತ್ತದೆ. ಮುಂಬರುವ ಸರ್ವಾಧಿಕಾರಿಗಳು ಎಂತಹ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಜಾರಿಗೊಳಿಸಿ, ಅದನ್ನು ಸಮರ್ಥಿಸಲು, ಆರ್ಥಿಕ ಬಿಕ್ಕಟ್ಟುಗಳು, ನೈಸರ್ಗಿಕ ವಿಕೋಪಗಳು ಹಾಗೂ ವಿಶೇಷವಾಗಿ ಯುದ್ಧ, ಸಶಸ್ತ್ರ  ದಂಗೆಗಳು ಅಥವಾ ಭಯೋತ್ಪಾದಕ ದಾಳಿಗಳಂತಹ ರಾಷ್ಟ್ರದ ಭದ್ರತೆಯ ವಿಷಯಗಳನ್ನೇ ಬಳಸುತ್ತಾರೆ.

ಮೂಲ: ಯೋಗೇಂದ್ರ ಯಾದವ್

ಅನುವಾದ: ರಾಜಶೇಖರ್‌ ಅಕ್ಕಿ

ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿಕೆಯಾಗಿ ಇಂದಿಗೆ 45 ವರ್ಷಗಳಾದವು. ತುರ್ತು ಪರಿಸ್ಥಿತಿಯ ಖಳನಾಯಕರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಈಗ ನೇಪಥ್ಯಕ್ಕೆ ಸರಿದಿದ್ದಾರೆ. ಈಗ ಅವರನ್ನು ಮತ್ತೆ ನೆನಪಿಸಿಕೊಂಡು ಬೈಯ್ಯುವುದರಲ್ಲಿ ಯಾವುದೇ ಉಪಯೋಗವಿಲ್ಲ. ನಿಸ್ಸಂಶಯವಾಗಿ ತುರ್ತುಪರಿಸ್ಥಿತಿಯ ವಿರುದ್ಧ ಈ ದೇಶ ಧೀರವಾಗಿ ಹೋರಾಡಿತು. ಆದರೆ, ಧೈರ್ಯದ ಆ ಕಥೆಗಳನ್ನು ಮತ್ತೊಮ್ಮೆ ಹೇಳುವುದರಲ್ಲಿ ಯಾವುದೇ ಉಪಯೋಗವಿಲ್ಲ. ಈಗ ಇವೆಲ್ಲವನ್ನು ಮಾಡುವುದು ಕಾಲಹರಣವಾದೀತು. ತುರ್ತುಪರಿಸ್ಥಿತಿಯ ಮತ್ತು ನಿರಂಕುಶಪ್ರಭುತ್ವದ ಆ ಅನುಭವಗಳನ್ನು ಬಳಸಿ, ಇಂದಿನ ಸಮಯದಲ್ಲಿ ಪ್ರಜಾಪ್ರಭುತ್ವ ಹೇಗೆ ನಾಶವಾಗುತ್ತಿದೆ ಎಂಬುದನ್ನು ಅರಿಯಬೇಕಿದೆ.

ತುರ್ತುಪರಿಸ್ಥಿತಿಯ ಆಯಾಮದಿಂದ ಪ್ರಜಾಪ್ರಭುತ್ವದ ಸ್ಥಿತಿ ಹಾಗೂ ದಿಕ್ಕಿನ ಬಗ್ಗೆ ಮಾಡುವ ಯೋಚನೆ ನಮ್ಮ ಚಿಂತನೆಗಳಿಗೆ ವೇಗ ಮತ್ತು ಶಕ್ತಿ ನೀಡುತ್ತದೆ ಆದರೆ ಅದು ದಾರಿ ತಪ್ಪಿಸುವಂತೆಯೂ ಆಗಬಹುದಾಗಿದೆ. ಆದರೂ ಇಂದಿರಾ ಗಾಂಧಿಯ ಸರ್ವಾಧಿಕಾರದ ವಿರುದ್ಧದ ಹೋರಾಟದ ನೆನಪುಗಳು ಆಳವಾಗಿವೆ, ಆ ನೆನಪುಗಳನ್ನು ಕೆದಕುವುದರಿಂದ ನಮ್ಮ ಶಕ್ತಿಯ ಅವಲೋಕನ ಕೂಡ ಆಗಬಹುದಾಗಿದೆ.

ನನಗೆ ಆ ದಿನ ಇನ್ನೂ ಚೆನ್ನಾಗಿ ನೆನಪಿದೆ. 1975 ಜೂನ್ 26ರ ಬೆಳಗ್ಗೆ ರೇಡಿಯೊದಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯ ಘೋಷಣೆ ಮಾಡಿದರು. ಅದನ್ನು ಕೇಳುತ್ತಿದ್ದಂತೆಯೇ ನನ್ನ ತಂದೆಯವರ ಮುಖಚರ್ಯೆ ಬದಲಾಯಿತು. ಆಗ ನನಗೆ 12 ವರ್ಷ. ಅಂದು ನನ್ನ ಸಮಸ್ಯೆ, ಮೊದಲ ವಿಶ್ವ ಕಪ್‌ನಲ್ಲಿ ಗಾವಸ್ಕರ್ 60 ಓವರ್‌ಗಳಲ್ಲಿ 36 ರನ್ ಮಾಡಿದ್ದಾಗಿತ್ತೇ ಹೊರತು ಜೆಪಿ ಚಳವಳಿಗೆ ಪ್ರತಿಕ್ರಿಯೆಯಾಗಿ ಇಂದಿರಾ ಏನು ಮಾಡಿದರು ಎಂಬುದಲ್ಲ. ಮುಂದಿನ 19 ತಿಂಗಳುಗಳು ನನಗೆ ರಾಜಕೀಯ ಶಿಕ್ಷಣವಾಗಿ ಪರಿಣಮಿಸಿದವು; ರಾಜಕೀಯ ಆಂದೋಲನಗಳಿಂದ ದೂರವಿರುತ್ತಿದ್ದ ನನ್ನ ತಂದೆ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಲು ಬೇರೆ ಬೇರೆ ವಿಧಾನಗಳನ್ನು ಹುಡುಕುತ್ತಿದ್ದರು. ಸಹಜವಾಗಿಯೇ ಇದು ನಮ್ಮೆಲ್ಲರಲ್ಲಿ ಆತಂಕವನ್ನು ಸೃಷ್ಟಿಸಿತ್ತು.


ಇದನ್ನೂ ಓದಿ : ತುರ್ತು ಪರಿಸ್ಥಿತಿಯ ಆರಾಧಕರ ಮುದ್ದಿನ ಕಾನೂನು-‘ದೇಶದ್ರೋಹ’

ನಮ್ಮ ದೇಶದ ಆಗುಹೋಗುಗಳನ್ನು, ಅದರ ಸತ್ಯವನ್ನು ತಿಳಿಯಲು ನಾವು ಪ್ರತಿ ಸಂಜೆ ಬಿಬಿಸಿ ಹಿಂದಿ ಸರ್ವಿಸ್ ಅನ್ನು ಕೇಳುತ್ತಿದ್ದೆವು. ಒಂದು ಸಲ ಚರ್ಚಾಸ್ಪರ್ಧೆಯ ಹೆಸರಿನಲ್ಲಿ ನಾನು ತುರ್ತುಪರಿಸ್ಥಿತಿಯ ವಿರುದ್ಧ ಭಾವೋದ್ರೇಕದ ಭಾಷಣ ಮಾಡಿದ್ದೆ. ಕೊನೆಗೂ ಚುನಾವಣೆಗಳನ್ನು ಘೋಷಿಸಿದಾಗ, ನಾವು ಕಟುಂಬ ಸಮೇತ ಜನತಾ ಪಾರ್ಟಿಯ ಸಲುವಾಗಿ ಕ್ಯಾಂಪೇನ್ ಮಾಡಿದ್ದೆವು. ನನ್ನ ಮೊದಲ ಚುನಾವಣಾ ರ‍್ಯಾಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದಾಗ ನನಗೆ 14 ವರ್ಷವೂ ತುಂಬಿರಲಿಲ್ಲ.  ಮತಎಣಿಕೆಯ ಆ ದಿನವನ್ನು ನಾನೆಂದೂ ಮರೆಯುವಂತಿಲ್ಲ. ಸಾವಿರಾರು ಜನರು ಇಂದಿರಾ ಗಾಂಧಿಯ ಸೋಲನ್ನು ಸಂಭ್ರಮಿಸುತ್ತಿದ್ದಾಗ ನಾನೂ ಆ ಗುಂಪಿನಲ್ಲಿದ್ದೆ. ಚುನಾವಣೆಗಳಲ್ಲಿ ಆಸಕ್ತಿ  ಮತ್ತು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದಕ್ಕೆ ನನಗೆ ಅದೇ ಆರಂಭದ ಘಟ್ಟವಾಗಿತ್ತು.

ತುರ್ತುಪರಿಸ್ಥಿತಿಯ ವಿರುದ್ಧದ ಪ್ರತಿರೋಧದ ಕೆಲವೇ ಕೆಲವು ಶೌರ್ಯ ಮತ್ತು ಸಾಹಸದ ಕಥೆಗಳ ಜೊತೆಗೆ ಇಂತಹ ಲಕ್ಷಾಂತರ ಪುಟ್ಟ ಪುಟ್ಟ ಕಥೆಗಳನ್ನು ಹೆಣೆದು, ಭಾರತದ ಜನರೆಲ್ಲ ಸೇರಿ ಸರ್ವಾಧಿಕಾರವನ್ನು ಧಿಕ್ಕರಿಸಿದ ಒಂದು ಸಾಮೂಹಿಕ ಸ್ಮೃತಿಯನ್ನು ರಚಿಸಲಾಯಿತು. ಇದು ಸಂಪೂರ್ಣ ಸತ್ಯ ಅಲ್ಲದೇ ಇರಬಹುದು ಏಕೆಂದರೆ, ವಾಸ್ತವದಲ್ಲಿ ಪ್ರತಿರೋಧವು ಅಷ್ಟು ಶಕ್ತಿಶಾಲಿಯಾಗಿರಲಿಲ್ಲ. ನೇಪಾಳ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಪರವಾಗಿ ನಡೆದ ಹೋರಾಟಗಳ ಪ್ರತಿರೋಧಕ್ಕೆ ಅದನ್ನು ಹೋಲಿಸಲೂ ಆಗುವುದಿಲ್ಲ. ಆದರೂ, ತುರ್ತುಪರಿಸ್ಥಿತಿಯ ವಿರುದ್ಧದ ಹೋರಾಟ ನಮಗೆ ಸ್ಪೂರ್ಥಿ ನೀಡುವ ಹೋರಾಟವಾಗಿದೆ.

ಹುಸಿ ಹೋಲಿಕೆಗಳು:

ಅದನ್ನು ಹೇಳುತ್ತಲೇ ಗಮನಿಸಬೇಕಾದ್ದೇನೆಂದರೆ, ಇಂದು ತುರ್ತುಪರಿಸ್ಥಿತಿಯು ದಾರಿತಪ್ಪಿಸುವ ಸಾಧ್ಯತೆಯೂ ಇದೆ. ಇದು ನಮ್ಮನ್ನು ತಪ್ಪು ಪ್ರಶ್ನೆಗಳನ್ನು ಕೇಳಲು ಪ್ರೇರೇಪಿಸುತ್ತೆ, ಉದಾಹರಣೆಗೆ; ಮತ್ತೊಮ್ಮೆ ತುರ್ತು ಪರಿಸ್ಥಿತಿಯನ್ನು ಹೇರಬಹುದಾ? ನಾವು ಈಗಾಗಲೇ ಅಘೋಷಿತ ತುರ್ತುಪರಿಸ್ಥಿತಿಯಲ್ಲಿ ಇದ್ದೀವಾ? ಈಗಿರುವ ಆಳ್ವಿಕೆಯು, ಮೂಲಭೂತ ಹಕ್ಕುಗಳು, ಮಾಧ್ಯಮಗಳ ಸೆನ್ಸರ್‌ಶಿಪ್, ಪ್ರತಿಪಕಕ್ಷದ ನಾಯಕರ ಬಂಧನ ಮತ್ತು ಇಂತಹ ಇತರ ಕ್ರಮಗಳನ್ನು ಒಳಗೊಂಡ ತುರ್ತು ಪರಿಸ್ಥಿತಿಯನ್ನು ಹೇರುವುದೇ? ಇತ್ಯಾದಿ.

ಮುಂಬೈಯ ಕಾರ್ಮಿಕ ನಾಯಕ ಜಾರ್ಜ್ ಪರ್ನಾಂಡಿಸ್ ತುರ್ತು ಪರಿಸ್ಥಿತಿಯ ಸಮಯದಲ್ಲಿ

 

ತುರ್ತುಪರಿಸ್ಥಿತಿಯ ಅನುಭವದಲ್ಲಿ ಪ್ರಜಾಪ್ರಭುತ್ವದ ನಾಶದ ಬಗ್ಗೆ ಚಿಂತಿಸುವುದರಿಂದ ಒಂದು ಗಂಭೀರ ಸಮಸ್ಯೆ ಇದೆ. ಅದರಿಂದ ಪ್ರಜಾಪ್ರಭುತ್ವದ ವಿನಾಶ ಅಥವಾ ಅಮಾನತುಗೊಳಿಸುವ ಪ್ರಕ್ರಿಯೆ ಪ್ರತಿಬಾರಿ ಅದೇ ಸ್ವರೂಪ ಪಡೆದುಕೊಳ್ಳಬೇಕು ಎಂಬ ನಿರ್ಣಯಕ್ಕೆ ಬರುವ ಆತಂಕ. ‘ಅಘೋಷಿತ ತುರ್ತು ಪರಿಸ್ಥಿತಿ’ ಎಂಬುದು ತುರ್ತು ಪರಿಸ್ಥಿತಿಯ ಆ ಅನುಭವದ ಆದರೆ ಕಠೋರವಲ್ಲದ ಮತ್ತು ಕಣ್ಣಿಗೆ ಕಾಣದ ಪರಿಸ್ಥಿತಿಯ ದೃಶ್ಯವನ್ನು ಸೂಚಿಸುತ್ತದೆ. ಅದು ನಿಜವಲ್ಲ ಎಂಬುದು ಸುಸ್ಪಷ್ಟ. ಮೋದಿ ಆಳ್ವಿಕೆಯಲ್ಲಿ ನಾವು 1975-77ರ ಅನುಭವಗಳನ್ನು ಮತ್ತೆ ಕಾಣುತ್ತಿಲ್ಲ. ಇಂದಿನ ನಮ್ಮ ಸಮಯ ಅದಕ್ಕಿಂತ ಉತ್ತಮವಾಗಿದೆ ಎಂದೆನಿಸಬಹುದು ಆದರೆ ಅದಕ್ಕಿಂತ ತುಂಬಾ ಕೆಟ್ಟದಾಗಿರುವ ಸಾಧ್ಯತೆ ಇದೆ.

ತುರ್ತು ಪರಿಸ್ಥಿತಿಯು ಪ್ರಜಾಪ್ರಭುತ್ವದ ಸಂಪ್ರದಾಯಕ್ಕೆ ಅಪವಾದವಾಗಿತ್ತು; ನಾವು ಈಗ ಕಾಣುತ್ತಿರುವುದು ಒಂದು ಬೇರೆಯ ಸಂಪ್ರದಾಯ. ತುರ್ತು ಪರಿಸ್ಥಿತಿ ಹೇರಲು ಒಂದು ಕಾನೂನಾತ್ಮಕ ಮತ್ತು ಅಧಿಕೃತ ಔಪಚಾರಿಕ ಘೋಷಣೆಯ ಅಗತ್ಯವಿತ್ತು. ಪ್ರಜಾಪ್ರಭುತ್ವದ ಮೂಲವನ್ನು ಬದಲಾಯಿಸಲು ಅವೆಲ್ಲ ಬೇಕಿಲ್ಲ. ತುರ್ತು ಪರಿಸ್ಥಿತಿಗೆ ಒಂದು ಆರಂಭವಿತ್ತು ಹಾಗೂ ಅದಕ್ಕೆ ಅಂತ್ಯದ ಅನಿವಾರ್ಯವೂ ಇತ್ತು.(ದಾಖಲೆಗಳಲ್ಲಾದರೂ ಇತ್ತು.) ನಾವಿರುವ ಈ ಹೊಸ ವ್ಯವಸ್ಥೆಗೆ ಆರಂಭವೇನೋ ಇದೆ ಆದರೆ ಅಂತ್ಯದ ಬಗ್ಗೆ ಯಾರಿಗೂ ಖಾತ್ರಿಯಿಲ್ಲ. ‘ಪ್ರಜಾಪ್ರಭುತ್ವಕ್ಕೆ ಇರವ ಸವಾಲು’ ಎಂಬುದು ಯಾವುದೋ ಒಂದು ಭವಿಷ್ಯಕಾಲದಲ್ಲಿ ಕಾಯುತ್ತಿರುವ ಸಮಸ್ಯೆ ಅಲ್ಲ. ನಮ್ಮ ದೇಶದಲ್ಲಿ ಈಗಾಗಲೇ ‘ಪ್ರಜಾಪ್ರಭುತ್ವದ ಕಬಳಿಕೆ’ ಆಗಿಬಿಟ್ಟಿದೆ. ಈ ಸಮಯದಲ್ಲಿ ತುರ್ತು ಪರಿಸ್ಥಿತಿಯನ್ನು ನೋಡುತ್ತ, ನಾವು ಮರೆತುಬಿಡುವುದೇನೆಂದರೆ, ಭಾರತದ ಸಂವಿಧಾನದೊಂದಿಗೆ ಉದ್ಘಾಟನೆಯಾದ ಮೊದಲ ಗಣರಾಜ್ಯ ಈಗಾಗಲೇ ಕಣ್ಮರೆಯಾಗಿದೆ.


ಇದನ್ನೂ ಓದಿ: ತುರ್ತುಪರಿಸ್ಥಿತಿಯ ವಿರುದ್ಧ ವಾಷಿಂಗ್ಟನ್‍ನಲ್ಲಿ ಪ್ರತಿಭಟಿಸಿದ್ದೆ: ಎಸ್.ಆರ್ ಹಿರೇಮಠ ಸಂದರ್ಶನ


ಇದನ್ನು ನಾನು ‘ ಪ್ರಜಾಪ್ರಭುತ್ವವನ್ನು ಕಬಳಿಸಿದ ಸರ್ವಾಧಿಕಾರ’ ಅಥವಾ ‘ಪ್ರಜಾಪ್ರಭುತ್ವದ ಬಿಕ್ಕಟ್ಟು’ ಎಂದು ಕರೆಯುವುದರ ಬದಲಿಗೆ  ‘ಪ್ರಜಾಪ್ರಭುತ್ವದ ಕಬಳಿಕೆ’ ಎಂದು ಕರೆಯುತ್ತೇನೆ. ಈ ಪದಗಳ ಬಳಕೆಯಿಂದ ತಿಳಿಯುವುದೇನೆಂದರೆ, ಪ್ರಜಾಪ್ರಭುತ್ವ ಎಂಬುದು ಈ ಕಬಳಿಕೆಯ ವಸ್ತು ಮತ್ತು ವಿಷಯ ಎರಡೂ ಆಗಿದೆ. ಈಗ ಕಬಳಿಕೆಯಾದ ವ್ಯವಸ್ಥೆಯೇ ಪ್ರಜಾಪ್ರಭುತ್ವ. ಇದರರ್ಥ ಪ್ರಜಾಪ್ರಭುತ್ವದ ಕಬಳಿಕೆ ಆಗಿದೆ ಹಾಗೂ ಈ ಕಬಳಿಕೆಯನ್ನು ಮಾಡಲು ಬಳಸಲಾದ ದಾರಿಗಳೂ ಪ್ರಜಾತಾಂತ್ರಿಕವಾಗಿಯೇ ಇವೆ. ಇದು ನಮಗೆ ಪ್ರಜಾಪ್ರಭುತ್ವದ ಔಪಚಾರಿಕ ಕಾರ್ಯವಿಧಾನಗಳನ್ನು ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ಬುಡಮೇಲು ಮಾಡಲು ಪ್ರಜಾಪ್ರಭುತ್ವವನ್ನೇ ಬಳಸಿಕೊಳ್ಳಲಾಗುತ್ತಿದೆ ಎಂಬುದನ್ನು ನೆನಪಿಸುತ್ತದೆ.

ಪ್ರಜಾಪ್ರಭುತ್ವಗಳು ಹೇಗೆ ಸಾಯುತ್ತವೆ!:

‘ಪ್ರಜಾಪ್ರಭುತ್ವಗಳು ಹೇಗೆ ಸಾಯುತ್ತವೆ’ ಎಂಬುದು ‘ಹೌ ಡೆಮಾಕ್ರಸೀಸ್ ಡೈ: ವಾಟ್ ಹಿಸ್ಟರಿ ರಿವೀಲ್ಸ್ ಅಬೌಟ್ ಅವರ್ ಫೂಚರ್'(ಪ್ರಜಾಪ್ರಭುತ್ವಗಳು ಹೇಗೆ ಸಾಯುತ್ತವೆ; ನಮ್ಮ ಭವಿಷ್ಯದ ಬಗ್ಗೆ ಇತಿಹಾಸ ಏನು ಹೇಳುತ್ತದೆ?) ಎಂಬ ಪುಸ್ತಕದ ಸಂದೇಶವಾಗಿದೆ. 2018ರಲ್ಲಿ ಪ್ರಕಟವಾದ ಈ ಪುಸ್ತಕವನ್ನು ಬರೆದಿದ್ದು, ಸ್ಟೀವನ್ ಲೆವಿಟ್‌ಸ್ಕಿ ಮತ್ತು ಡೇನಿಯಲ್ ಜಿಬ್ಲಾಂಯಟ್ ಎಂಬ ಇಬ್ಬರು. ಇವರಿಬ್ಬರೂ ಹಾರ್ವರ್ಡ್ನಲ್ಲಿ ರಾಜಕೀಯ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದಾರೆ. ಈ ಪ್ರಸಿದ್ಧ ಪುಸ್ತಕವು ನಮ್ಮ ಸಮಯದಲ್ಲಿ ಪ್ರಜಾಪ್ರಭುತ್ವಗಳು ಧ್ವಂಸಗೊಳ್ಳುತ್ತಿವುದು ಅಥವಾ ಕುಸಿಯುತ್ತಿರುವುದನ್ನ ದಾಖಲಿಸಿದೆ. ಈ ಪುಸ್ತಕ ನಮಗೆ ಹೇಳುವುದೇನೆಂದರೆ, ಪ್ರಜಾಪ್ರಭುತ್ವದ ಸಾವುಗಳು ಬಹುತೇಕವಾಗಿ, ನಿಧಾನವಾಗಿ, ಸದ್ದಿಲ್ಲದೆ ಘಟಿಸುತ್ತವೆ ಹಾಗೂ ಯಾರಿಗೂ ಗೋಚರವಾಗದ ಹಾಗೆ ಅದೃಶ್ಯವಾಗಿರುತ್ತವೆ. ಅದು ಕಾನೂನಾತ್ಮಕ ವಿಧಾನಗಳಿಂದ ಹಾಗೂ ಪ್ರಜಾತಾಂತ್ರಿಕವಾಗಿ ಆಯ್ಕೆಯಾದ ನಾಯಕರಿಂದಲೇ ನಡೆಯುತ್ತದೆ ಎಂಬ ಸತ್ಯವನ್ನು ಈ ಲೇಖಕರು ನೆನಪಿಸುತ್ತಾರೆ.

ಪುಸ್ತಕದಲ್ಲಿ ಒಂದೆಡೆ ಹೀಗೆ ಬರೆಯಲಾಗಿದೆ, “ಸರ್ವಾಧಿಕಾರದ ಕಡೆಗೆ ಕೊಂಡೊಯ್ಯುವ ಚುನಾವಣೆಯ ಮಾರ್ಗದ ಒಂದು ವಿಪರ್ಯಾಸವೇನೆಂದರೆ, ಪ್ರಜಾಪ್ರಭುತ್ವದ ಕೊಲೆಗಾರರು ಪ್ರಜಾಪ್ರಭುತ್ವದ ಸಂಸ್ಥೆಗಳನ್ನು ಬಳಸುತ್ತಾರೆ ಹಾಗೂ ಅದನ್ನು ಹಂತಹಂತವಾಗಿ, ನಾಜೂಕಾಗಿ ಮತ್ತು ಕಾನೂನಾತ್ಮಕವಾಗಿಯೂ ಬಳಸುತ್ತಾರೆ.”

ಇಲ್ಲಿ ಮಿಲಿಟರಿ ಉಚ್ಛಾಟನೆ ಅಥವಾ ತುರ್ತು ಪರಿಸ್ಥಿತಿಯಂತಹ ಸಾಂವಿಧಾನಿಕ ಅಸ್ತ್ರಗಳನ್ನು ಬಳಸುವುದಿಲ್ಲ, ಅದರ ಬದಲಿಗೆ ಸರ್ವಾಧಿಕಾರಿ ನಾಯಕರು ಸಾಮಾನ್ಯವಾಗಿ ದಿನನಿತ್ಯದ ರಾಜಕೀಯ ವ್ಯಾಕರಣವನ್ನು ಬದಲಿಸಿ ಪ್ರಜಾಪ್ರಭುತ್ವಗಳನ್ನು ನಾಶಪಡಿಸುತ್ತಾರೆ. ಇದರಲ್ಲಿ ಮೂರು ವಿಧಾನಗಳನ್ನು ಒಂದೊಂದಾಗಿ ಬಳಸಲಾಗುತ್ತದೆ; ಆಟದ ರೆಫರಿಗಳನ್ನು ಸೆರೆಯಾಳಾಗಿಸುವುದು, ಆಟಗಾರರನ್ನು ಆಟವಾಡದಂತೆ ಅಂಚಿಗೆ ತಳ್ಳುವುದು ಹಾಗೂ ಆಟದ ನಿಯಮಗಳನ್ನು ಹೊಸದಾಗಿ ಬರೆಯುವುದು. ಈ ಪುಸ್ತಕದಲ್ಲಿ ಪೆರು ದೇಶದ ಫುಜಿಮೊರಿ, ಪುಟಿನ್ ಆಳ್ವಿಕೆಯಡಿಯಲ್ಲಿ ರಷಿಯ, ಹ್ಯೂಗೊ ಷಾವೇಜ್ ಆಳ್ವಿಕೆಯಡಿಯಲ್ಲಿ ವೆನೆಜುವೆಲಾ, ಒರ್ಬನ್ ಆಳ್ವಿಕೆಯಲ್ಲಿ ಹಂಗರಿ ಹಾಗೂ ಸಹಜವಾಗಿಯೇ ಟ್ರಂಪ್ ಆಳ್ವಿಕೆಯಲ್ಲಿ ಅಮೇರಿಕದ ಉದಾಹರಣೆಗಳನ್ನು ವಿಶ್ಲೇಷಿಸಿ, ಪ್ರಜಾಪ್ರಭುತ್ವಗಳು ಹೇಗೆ ಸಾಯುತ್ತಿವೆ ಅಥವಾ ಕೊಲ್ಲಲಾಗುತ್ತಿದೆ ಎಂಬುದನ್ನು ದಾಖಲಿಸಲಾಗಿದೆ.

ಈ ಪುಸ್ತಕ ಭಾರತವನ್ನು ಉಲ್ಲೇಖಿಸುವುದಿಲ್ಲ, ಆದರೆ ಮೋದಿ ಮತ್ತು ಶಾ ಆಳ್ವಿಕೆಯ ಭಾರತ ಮತ್ತು ಮೇಲೆ ಹೇಳಿದ ದೇಶಗಳ ಮಧ್ಯೆ ಇರುವ ಸಾಮ್ಯತೆಗಳನ್ನು ಕಾಣಲು ಕಷ್ಟ ಪಡಬೇಕಿಲ್ಲ. ಸಿ.ಬಿ.ಐ. ಮತ್ತು ಸಿ.ವಿ.ಸಿ. ಯಂತಹ ತನಿಖಾ ಸಂಸ್ಥೆಗಳ ಕಬಳಿಸುವುದು, ಸಿಐಸಿ ಮತ್ತು ಸಿಎಜಿ ಯಂತಹ ಕಣ್ಗಾವಲು ಸಂಸ್ಥೆಗಳನ್ನು ನಿಷ್ಪ್ರಯೋಜಕ ಮತ್ತು ಬೆಲೆಯಿಲ್ಲದಂತೆ ಮಾಡುವುದು ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು, ಹೀಗೆ ಈ ಎಲ್ಲ ಪ್ರಜಾತಾಂತ್ರಿಕ ರೆಫರಿಗಳನ್ನು ಕಬಳಿಸಿ, ತನ್ನ ಅಡಿಯಲ್ಲಿ ಇಡುವ ಕೆಲಸಗಳು ಮೋದಿಯ ಭಾರತದಲ್ಲಿ ಅತ್ಯಂತ ನಾಜೂಕಾಗಿ ಹಾಗೂ ಸಂಪೂರ್ಣವಾಗಿಯೇ ಆಗಿವೆ. ಈ ಸಂಸ್ಥೆಗಳು ಸಾಷ್ಟಾಂಗ ನಮಸ್ಕಾರ ಮಾಡುವಂತೆ ಮಾಡಲು ಸರಕಾರಕ್ಕೆ ಹೆಚ್ಚು ಕಷ್ಟ ಪಡುವ ಅವಶ್ಯಕತೆ ಬರಲಿಲ್ಲ. ಸರಕಾರವು ತನ್ನ ಬತ್ತಳಿಕೆಯಲ್ಲಿರುವ ಅಸ್ತ್ರಗಳಾದ ಹೆದರಿಸುವುದು, ಬೆದರಿಸಿವುದು, ರೆಕ್ಕೆ ಕತ್ತರಿಸುವುದು, ಲಂಚದ ಆಮಿಷ ಒಡ್ಡುವುದು, ಪದಚ್ಯುತಿಗೊಳಿಸುವುದು ಅಥವಾ ಅವರ ಅಡಿಯಾಳತನ ಖಾತ್ರಿಪಡಿಸಲು ಆ ಸಂಸ್ಥೆಗಳನ್ನೇ ವಿಸರ್ಜಿಸುವುದು ಇತ್ಯಾದಿ ಅಸ್ತ್ರಗಳನ್ನು ಬಳಸುವ ಅವಶ್ಯಕತೆಯೇ ಬರಲಿಲ್ಲ.

ಅದರಂತೆ, ಹಾಲಿ ಆಳ್ವಿಕೆಯು, ಕಣದಲ್ಲಿರುವ ಆಟಗಾರರನ್ನು ಅಂದರೆ, ವಿರೋಧಪಕ್ಷದ ನಾಯಕರು, ಮಾಧ್ಯಮಗಳು, ಸಾಂಸ್ಕೃತಿಕ ಐಕಾನ್‌ಗಳು ಹಾಗೂ ಬಿಸಿನೆಸ್ ನಾಯಕರನ್ನು ಅಂಚಿಗೆ ತಳ್ಳುವ ವಿಧಾನಗಳು, ಪ್ರಜಾಪ್ರಭುತ್ವವನ್ನು ಹತ್ಯೆಗೈದ ದೇಶಗಳಲ್ಲಿ ಅಲ್ಲಿನ ಸರ್ವಾಧಿಕಾರಿ ನಾಯಕರು ಅನುಸರಿಸಿದ ವಿಧಾನಗಳಿಗಿಂತ ಭಿನ್ನವಾಗಿಲ್ಲ. ಅದರಲ್ಲೂ ವಿಶೇಷವಾಗಿ, ಈ ಎಲ್ಲಾ ನಾಯಕರು ಅಧಿಕೃತ ಸೆನ್ಸಾರ್‌ಷಿಪ್ ಜಾರಿಗೆ ತರದೇ ಮಾಧ್ಯಮಗಳನ್ನು ಹೇಗೆ ಕಬಳಿಸಿದರು ಎಂಬುದರಿಂದ ಅನೇಕ ಪಾಠಗಳನ್ನು ಕಲಿಯಬಹುದು. ಪೆರು ದೇಶದ ಫುಜಿಮೊರಿಯ ಬಲಗೈ ಬಂಟ ಮಾಂಟೆಸಿನೋ ಒಂದು ಸಲ ಹೇಳಿದ್ದು, “ಅವರೆಲ್ಲರೂ, ಎಲ್ಲರೂ(ಮಾಧ್ಯಮದವರು) ಸಾಲಿನಲ್ಲಿ ನಿಂತಿದ್ದಾರೆ. ಪ್ರತಿನಿತ್ಯ 12.30 ಕ್ಕೆ ಅವರೊಂದಿಗೆ ಸಭೆ ಮಾಡುತ್ತೇನೆ… ಹಾಗೂ ಆ ಸಂಜೆಯ ಸುದ್ದಿಯನ್ನು ಪ್ಲಾಂಟ್ ಮಾಡುತ್ತೇವೆ.”  ಇದೇ ತರಹದ್ದು ನಮ್ಮ ದೇಶದಲ್ಲೂ ಆಗುತ್ತಿದೆ ಎಂದು ನಿಮಗೆ ಅನಿಸುತ್ತಾ?

‘ಹೌ ಡೆಮಾಕ್ರಸೀಸ್ ಡೈ: ವಾಟ್ ಹಿಸ್ಟರಿ ರಿವೀಲ್ಸ್ ಅಬೌಟ್ ಅವರ್ ಫೂಚರ್’ ಪುಸ್ತಕ

ಮೋದಿ ಸರಕಾರ ಒಂದನ್ನು ಮಾತ್ರ ಮಾಡಿಲ್ಲ – ಅಥವಾ ಅದನ್ನು ಮಾಡುವ ಅವಶ್ಯಕತೆ ಬಂದಿಲ್ಲ ಎನ್ನಬಹುದೇನೋ; ಮೋದಿ ಸರಕಾರವು ರಾಜನೀತಿಯ ಆಟದ ಸಾಂವಿಧಾನಿಕ ನಿಯಮಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿಲ್ಲ. ಇಲ್ಲಿಯವರೆಗೆ ಚುನಾವಣೆಗಳ ನಿಯಮಗಳು ಬದಲಾಗಿಲ್ಲ ಅಥವಾ ಚುನಾವಣೆಗಳನ್ನು ಮುಂದೂಡಲಾಗಿಲ್ಲ. ಈ ಆಳ್ವಿಕೆಗೆ ಇದನ್ನು ಮಾಡುವ ಅವಶ್ಯಕತೆ ಇನ್ನೂ ಒದಗಿ ಬಂದಿಲ್ಲ. ದೇಶದ ಮತದಾರರ ಮಧ್ಯೆ ಇರುವ ಜನಪ್ರಿಯತೆ, ಮಾಧ್ಯಮಗಳು ಮತ್ತು ನ್ಯಾಯಾಂಗದಲ್ಲಿ ಇವರು ಪಡೆದ ಯಶಸ್ಸುಗಳ ಕಾರಣದಿಂದ ಅಂತಹ ಬದಲಾವಣೆಗಳನ್ನು ಮಾಡುವುದು ಅನವಶ್ಯಕವಾಗಿಸಿವೆ. ಆದರೆ, ಸರಕಾರ ಹೀಗೆ ಮಾಡುವುದೇ ಇಲ್ಲ ಎಂದು ಯೋಚಿಸಬೇಡಿ.

ಮೇಲೆ ಉಲ್ಲೇಖಿಸಿದ ಪುಸ್ತಕದಲ್ಲಿ “ಪ್ರಜಾಪ್ರಭುತ್ವದ ಸಾವು ಹೇಗೆ ಆಗುತ್ತದೆ ಎಂಬುದರ ಒಂದು ದೊಡ್ಡ ವಿಪರ್ಯಾಸವೇನೆಂದರೆ, ಪ್ರಜಾಪ್ರಭುತ್ವದ ರಕ್ಷಣೆಯನ್ನೇ ಕಾರಣವಾಗಿಟ್ಟುಕೊಂಡು ಪ್ರಜಾಪ್ರಭುತ್ವವನ್ನು ಹತ್ಯೆ ಮಾಡಲಾಗುತ್ತದೆ. ಮುಂಬರುವ ಸರ್ವಾಧಿಕಾರಿಗಳು ಎಂತಹ ಪ್ರಜಾಪ್ರಭುತ್ವ ವಿರೋಧಿ ಕ್ರಮಗಳನ್ನು ಜಾರಿಗೊಳಿಸಿ, ಅದನ್ನು ಸಮರ್ಥಿಸಲು, ಆರ್ಥಿಕ ಬಿಕ್ಕಟ್ಟುಗಳು, ನೈಸರ್ಗಿಕ ವಿಕೋಪಗಳು ಹಾಗೂ ವಿಶೇಷವಾಗಿ ಯುದ್ಧ, ಸಶಸ್ತ್ರ  ದಂಗೆಗಳು ಅಥವಾ ಭಯೋತ್ಪಾದಕ ದಾಳಿಗಳಂತಹ ರಾಷ್ಟ್ರದ ಭದ್ರತೆಯ ವಿಷಯಗಳನ್ನೇ ಬಳಸುತ್ತಾರೆ.” ಎಂದು ಬರೆಯಲಾಗಿದೆ.

ಇದನ್ನು 2020 ಜೂನ್ 26 ರ ಭಾರತಕ್ಕಾಗಿಯೇ ಬರೆಯಲಾಗಿತ್ತು ಎಂದು ನಿಮಗನಿಸುತ್ತಿದೆಯೆ?


ಓದಿ: ಅನಿಮಲ್ ಫಾರ್ಮ್‌ ನೆನಪು ಮಾಡುವ ಸರ್ಕಾರದ ದಿನಕ್ಕೊಂದು ನಿಯಮಗಳು!


Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

1 COMMENT

  1. ಇಂದು ಪ್ರಜಾಪ್ರಭುತ್ವ ಸಾಯುವ ಬಗೆ ಬದಲಾಗಿದೆಯಂತೆ !
    ಹಿಂದೆ ರಾಜಾರೋಷವಾಗಿ ದೇಶದ ಮೂರೂ ಅಂಗಗಳ ಮೇಲೆ ದಾಳಿ ಮಾಡಿ ತುರ್ತು ಪರಿಸ್ಥಿತಿ ಹೇರಿದ್ದಲ್ಲದೆ 40 ವರ್ಷಗಳ ಕಾಲ ಅಭಿವೃದ್ಧಿಯ ನೆರಳಿನಲ್ಲಿ ಭ್ರಷ್ಟಾಚಾರ ಮಾಡುತ್ತ ವಂದಿಮಾಗಧರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತ, ದೇಶದ ಸಾವಿರಾರು ಕಿ.ಮೀ. ನೆಲವನ್ನು ಶತ್ರುದೇಶದವರು ಕಬಳಿಸಿದಾಗಲೂ ದಿಟ್ಟ ಉತ್ತರ ನೀಡದೆ ಕಾಲಹರಣ ಮಾಡುತ್ತ ಬಂದವರು, ಮೀಸಲಾತಿಯ ನೆಪದಲ್ಲಿ ಧರ್ಮ- ಜಾತಿಗಳ ಮೂಲಕ ಜನರನ್ನು ವಿಂಗಡಿಸಿ ಒಬ್ಬರನ್ನು ಎತ್ತಿಕಟ್ಟಿ ಇನ್ನೊಬ್ಬರನ್ನು ತುಳಿಯುವಾಗ, ತಮಗೆ ಮನಬಂದಂತೆ ಸಂವಿಧಾನ ತಿದ್ದುಪಡಿ ಮಾಡುವಾಗ ಪ್ರಜಾಪ್ರಭುತ್ವ ಅಪಾಯದಲ್ಲಿ ಇರಲಿಲ್ಲ.
    ಆದರೆ ಸಂವಿಧಾನದ ಅಡಿಯಲ್ಲೇ ಬಹುಮತದ ಮೂಲಕ ಆಡಳಿತ ಹಿಡಿದು, ಪ್ರತಿಯೊಂದು ನಿರ್ಧಾರಗಳನ್ನೂ ಸಂವಿಧಾನದ ಪದ್ಧತಿಯ ಮೂಲಕವೇ ತಳೆಯುತ್ತಿದ್ದರೂ, ಸ್ವ ಹಿತಾಸಕ್ತಿ ಕುಟುಂಬ ಹಿತಾಸಕ್ತಿ ಇಲ್ಲದೆ, ಸ್ವಜನ ಪಕ್ಷಪಾತ ಮಾಡದೇ ದೇಶದ ಹಿತದೃಷ್ಟಿಯಲ್ಲಿ ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವ ಸರ್ಕಾರದಿಂದ ಪ್ರಜಾಪ್ರಭುತ್ವ ಸಾಯುತ್ತಿದೆಯಂತೆ ! ಎಂಥ ಆತ್ಮವಂಚನೆ !
    ಸಂವಿಧಾನದ ರಕ್ಷಿಸಬೇಕೆನ್ನುವವರೂ ಇವರೇ. ಸಂವಿಧಾನಾತ್ಮಕವಾಗಿ ನಿರ್ಧಾರ ಕೈಗೊಂಡರೆ ಪ್ರಜಾಪ್ರಭುತ್ವ ಅಪಾಯದಲ್ಲಿದೆಯಂತೆ !
    ಮೋದಿ ಆಡಳಿತದಲ್ಲಿ ಸಂವಿಧಾನ ರಕ್ಷಿತವಾಗೇ ಇದೆ. ಆದರೆ ಕೇವಲ ಮೋದಿ ವಿರೋಧಕ್ಕಾಗಿ, ಕೇವಲ ಮೋದಿ ವಿರೋಧಕ್ಕಾಗಿ ದೇಶದ ಹಿತವನ್ನೂ ಕಡೆಗಣಿಸುವ ಹಾಗೂ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಿಜ ಸ್ಥಿತಿ ಮರೆಮಾಚುವ ಹೀನ ಬುದ್ಧಿ ಬೇಡ. ದೇಶಪ್ರೇಮದಲ್ಲಿ ಒಗ್ಗಟ್ಟಾಗಿ ಇರಬಾರದೇಕೆ ?

LEAVE A REPLY

Please enter your comment!
Please enter your name here