Homeಮುಖಪುಟಮತ್ತೆ ಗರಿಗೆದರಿದ ಡಬ್ಬಿಂಗ್ ವಿವಾದ: ಎರಡಲುಗಿನ ಖಡ್ಗದ ಎದುರು...! - ಬಿ.ಸುರೇಶ

ಮತ್ತೆ ಗರಿಗೆದರಿದ ಡಬ್ಬಿಂಗ್ ವಿವಾದ: ಎರಡಲುಗಿನ ಖಡ್ಗದ ಎದುರು…! – ಬಿ.ಸುರೇಶ

ಡಬ್ಬಿಂಗ್ ಪರವಾಗಿ ನಿಂತಿರುವವರೂ ಕನ್ನಡಿಗರೇ, ಡಬ್ಬಿಂಗ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವವರೂ ಕನ್ನಡಿಗರೇ. ಒಂದೇ ಭಾಷಿಕರ ನಡುವೆ ಇಂತಹ ಇಬ್ಬಂದಿತನ ಬಂದಿರುವುದರಿಂದ ಒಂದು ಸಮನ್ವಯ ಮಾರ್ಗವನ್ನು ಹುಡುಕಬೇಕಿದೆ. ಎಲ್ಲರಿಗೂ ಒಪ್ಪಿತವಾಗುವ ಮಾರ್ಗದಲ್ಲಿ ಈ ಡಬ್ಬಿಂಗ್ ಎಂಬ ಎರಡಲುಗಿನಿಂದ ತಪ್ಪಿಸಿಕೊಳ್ಳಬೇಕಿದೆ.

- Advertisement -
- Advertisement -

ಕಳೆದ ಕೆಲವು ವಾರಗಳಿಂದ ಡಬ್ಬಿಂಗ್ ಕುರಿತ ಚರ್ಚೆ ಮರಳಿ ಮುನ್ನೆಲೆಗೆ ಬಂದಿದೆ. ಇದಕ್ಕೆ ಕಾರಣವಾದುದು ಕೋವಿಡ್ 19 ಕಾರಣವಾಗಿ ಹುಟ್ಟಿದ ಹೊಸ ಪರಿಸ್ಥಿತಿ. ಸರಿಸುಮಾರು 75 ಧಾರಾವಾಹಿಗಳು ಚಿತ್ರೀಕರಣವಾಗಿ ಪ್ರಸಾರವಾಗುತ್ತಿದ್ದ, ಆ ಮೂಲಕ ಸರಿಸುಮಾರು ಆರು ಸಾವಿರ ಜನರಿಗೆ ಉದ್ಯೋಗ ಒದಗಿಸಿದ್ದ ಕನ್ನಡ ಟೆಲಿವಿಷನ್ ಉದ್ಯಮವು ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣಗಳನ್ನು ಮಾಡಲಾಗದ ಪರಿಸ್ಥಿತಿ ಉಂಟಾಯಿತು. ಆ ಲಾಕ್‍ಡೌನ್ ತೆರೆದಾಗ 26 ಧಾರಾವಾಹಿಗಳನ್ನು ನಿಲ್ಲಿಸಿ ಆ ಜಾಗದಲ್ಲಿ ಕನ್ನಡಕ್ಕೆ ಡಬ್ ಆದ ಇತರ ಭಾಷೆಯ ಧಾರಾವಾಹಿಗಳನ್ನು ಪ್ರಸಾರ ಮಾಡಲು ಹಲವು ವಾಹಿನಿಗಳು ಆರಂಭಿಸಿದವು. ಈವರೆಗೆ ಸಿನಿಮಾಗೆ ಇದ್ದ ಡಬ್ಬಿಂಗ್ ಎಂಬುದು ಧಾರಾವಾಹಿಗೂ ಬಂದುದರ ಹಿನ್ನೆಲೆಯಲ್ಲಿ ಡಬ್ಬಿಂಗ್ ಕುರಿತ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಈಗಿನ ಪರಿಸ್ಥಿತಿಯಲ್ಲಿ ಡಬ್ಬಿಂಗ್ ಪರ ಅಥವಾ ವಿರೋಧದ ಚರ್ಚೆ ಖಂಡಿತ ಅನುಪಯುಕ್ತ. ಏಕೆಂದರೆ ನ್ಯಾಯಾಲಯವು ಅದಾಗಲೇ ಸ್ಪರ್ಧಾತ್ಮಕ ಆಯೋಗದ ನಿಲುವಿನ ಹಿನ್ನೆಲೆಯಲ್ಲಿ ಆರು ದಶಕಗಳಿಂದ ಕನ್ನಡದಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳಿಗೆ ಇದ್ದ ತಡೆಯನ್ನು ತೆರವುಗೊಳಿಸಿದೆ. ಇನ್ನು ಮುಂದಿನ ದಿನಗಳಲ್ಲಿ ಡಬ್ಬಿಂಗ್ ಸಿನಿಮಾ ಮತ್ತು ಧಾರಾವಾಹಿಯು ನಮ್ಮ ನಡುವೆ ಇದ್ದೇ ಇರುತ್ತದೆ. ಈ ವಿವರವನ್ನು ನೆನಪಲ್ಲಿ ಇರಿಸಿಕೊಂಡು ನಮ್ಮ ಚರ್ಚೆಗಳನ್ನು ಮಾಡಬೇಕಿದೆ. ಈ ಎರಡಲುಗಿನ ವಿವರವನ್ನು ಅರ್ಥ ಮಾಡಿಕೊಳ್ಳಬೇಕಿದೆ.

ಹಣಕಾಸಿನ ಮೊನೆ

ಮೂಲತಃ ಟೆಲಿವಿಷನ್ ಉದ್ಯಮವನ್ನು ವ್ಯಾಪಾರ ಎಂಬ ಹಿನ್ನೆಲೆಯಲ್ಲಿ ಗಮನಿಸಿದರೆ, ಸರಿಸುಮಾರು 2017ರ ಆದಿಭಾಗದಿಂದಲೇ ಈ ಉದ್ಯಮದಲ್ಲಿ ವಹಿವಾಟು ಕುಸಿತ ಕಾಣಲು ಆರಂಭಿಸಿತ್ತು. ಇದಕ್ಕೆ ನೇರ ಕಾರಣ ನೋಟು ಅಮಾನ್ಯೀಕರಣದಿಂದ ಸಾಮಾನ್ಯ ಜನರಲ್ಲಿ ಕಡಿಮೆಯಾದ ಕೊಳ್ಳುವ ಶಕ್ತಿ. 2016ರ ಸೆಪ್ಟಂಬರ್‍ನಲ್ಲಿ ನೂರು ರೂಪಾಯಿಯಿದ್ದ ವಹಿವಾಟು 2017ರ ಜನವರಿಗೆ ನಲವತ್ತು – ನಲವತ್ತೈದು ರೂಪಾಯಿಗಳ ಹಂತಕ್ಕೆ ಇಳಿದಿತ್ತು. ಈ ಉದ್ಯಮದ ಬಹುತೇಕರು ಕಡಿಮೆ ಖರ್ಚಿನಲ್ಲಿ ಕಾರ್ಯಕ್ರಮ ತಯಾರಿಸಲು ಆರಂಭಿಸಿದ್ದರು. 2018ರಲ್ಲಿ ಬಂದ ಜಿಎಸ್‍ಟಿ ಎಂಬುದು ಈ ಉದ್ಯಮದ ಮೇಲೆ ಮತ್ತಷ್ಟು ಹೊಸ ಒತ್ತಡಗಳನ್ನು ಹೇರಿತು. ಆ ಒತ್ತಡವು ಹೊಸ ತೆರಿಗೆಯಿಂದ ಬಂದುದಲ್ಲ, ಜಿಎಸ್‍ಟಿ ಸಂಗ್ರಹಕ್ಕೆ ಮಾಡಿಕೊಂಡಿದ್ದ ವ್ಯವಸ್ಥೆಯ ಕಾರಣವಾಗಿ ಬಂದದ್ದು. ಪ್ರತಿ ನೂರು ರೂಪಾಯಿ ಬಂಡವಾಳದ ಮೇಲೆ ಮತ್ತೆ ಹನ್ನೆರಡು ರೂಪಾಯಿಗಳ ಬಂಡವಾಳ ಹೂಡಬೇಕಾಗಿ ಬಂದಿತ್ತು. ಹೀಗೆ ತೆರಿಗೆ ರೂಪದಲ್ಲಿ ನೀಡಿದ ಜಿಎಸ್‍ಟಿ ಸೆಟ್‍ಆಫ್ ಮಾಡಿಕೊಳ್ಳುವ ವ್ಯವಸ್ಥೆಯು ಸರಳವಾಗಿರಲಿಲ್ಲ. ವರ್ಷಗಳ ಕಾಲ ಕಾದರೂ ಸೆಟ್‍ಆಫ್ ಆಗದೆ ತೆರಿಗೆ ಹಣ ಸಹ ಮೂಲ ಬಂಡವಾಳದ ಲೆಕ್ಕಕ್ಕೆ ಸೇರಿ ಶೇಕಡ ಹತ್ತರಷ್ಟು ವಹಿವಾಟು ಕಡಿಮೆಯಾಗಿತ್ತು. ಈ ಸಂಕಷ್ಟಗಳು ಕಾಲಾಂತರದಲ್ಲಿ ಸರಿಹೋಗಬಹುದು ಎಂದು ಸಾಗುತ್ತಿದ್ದವರಿಗೆ 2020ರ ಮಾರ್ಚ್ ತಿಂಗಳಿಂದ ಕೊರೊನ ಎಂಬ ಹೊಸ ಸಂಕಟ ಎದುರಾಯಿತು. ಇದು ವಾಹಿನಿಗಳ ಆದಾಯವನ್ನು 2016ರ ನೂರು ರೂಪಾಯಿಯ ಬದಲಿಗೆ ಕೇವಲ ಹತ್ತು ರೂಪಾಯಿಗೆ ಕೆಲಸ ಮಾಡುವಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿತು. ಜೊತೆಗೆ ಲಾಕ್‍ಡೌನ್ ಕಾರಣವಾಗಿ ವಾಹಿನಿಗಳಿಗೆ ಪ್ರತಿದಿನ ಧಾರಾವಾಹಿಗಳನ್ನು ಒದಗಿಸುತ್ತಾ ಇದ್ದವರು ಚಿತ್ರೀಕರಣ ನಿಲ್ಲಿಸಬೇಕಾಯಿತು. ಈ ಪರಿಸ್ಥಿತಿಯಲ್ಲಿ ವಾಹಿನಿಗಳಿಗೆ ಇದ್ದದ್ದು ಎರಡು ದಾರಿಗಳು. ಮೊದಲನೆಯದು ಹಳೆಯ ಕಾರ್ಯಕ್ರಮಗಳ ಮರುಪ್ರಸಾರ. ಎರಡನೆಯದು ಬೇರೆ ಭಾಷೆಯ ಕಾರ್ಯಕ್ರಮಗಳನ್ನು ಡಬ್ ಮಾಡಿ ಪ್ರಸಾರ ಮಾಡುವುದು. ಮರುಪ್ರಸಾರದ ಪ್ರಯತ್ನವನ್ನು ಬಹುತೇಕ ವಾಹಿನಿಗಳು ಎರಡು – ಮೂರು ವಾರಗಳವರೆಗೆ ಮಾಡಿದ್ದವು. ಆದರೆ ವಾಹಿನಿಗಳ ವೀಕ್ಷಕರ ಸಂಖ್ಯೆಯಲ್ಲಿ ಕೊರತೆ ಕಾಣಿಸಿತು. ಹೀಗಾಗಿ ನೋಡುಗರನ್ನು ಸೆಳೆಯಲು ಭಾರೀ ವೆಚ್ಚದ ಪರಭಾಷೆಯ ಕಾರ್ಯಕ್ರಮಗಳನ್ನು ಕನ್ನಡಕ್ಕೆ ಡಬ್ ಮಾಡುವ ಹಾದಿಯನ್ನು ಹಲವು ವಾಹಿನಿಗಳು ಪ್ರಯತ್ನಿಸಿದವು. ಇದೇ ಹೊತ್ತಿಗೆ ವಾಹಿನಿಗಳ ಆದಾಯವು ಸೊನ್ನೆ ಸ್ಥಿತಿಗೆ ಮುಟ್ಟಿತ್ತು. ಆಮದನಿ ಎಂಬುದು ಇಂತಹ ಹಂತಕ್ಕೆ ತಲುಪಿದಾಗ ಯಾವುದೇ ವಾಹಿನಿಯನ್ನು ನಡೆಸುವವರಾದರೂ ಸರ್ವೈವಲ್‍ಗಾಗಿ ಬದಲಿ ಮಾರ್ಗ ಹುಡುಕಲೇಬೇಕಾಗುತ್ತದೆ. ಖರ್ಚು ಕಡಿತ ಮೊದಲ ಹೆಜ್ಜೆಯಾದರೆ, ಸಿಬ್ಬಂದಿ ಕಡಿತವು ಎರಡನೇ ಹಾದಿ. ಮೊದಲ ಹೆಜ್ಜೆಯ ಹಿನ್ನೆಲೆಯಲ್ಲಿ ಡಬ್ಬಿಂಗ್ ಕಾರ್ಯಕ್ರಮಗಳ ಆಗಮನ ಆಗಿದೆ. ಎರಡನೆಯ ಹೆಜ್ಜೆಯಾದ ಸಿಬ್ಬಂದಿ ಕಡಿತ ಹಲವು ವಾಹಿನಿಗಳಲ್ಲಿ ಆಗುತ್ತಿದೆ. ಹಾಗೆ ಕೆಲಸ ಕಳಕೊಂಡವರ ವಿವರಗಳು ಪ್ರತಿದಿನವೂ ಬರುತ್ತಿವೆ.

ಈ ಹಿನ್ನೆಲೆಯಲ್ಲಿ ಈಗ ನಮ್ಮೆದುರಿಗೆ ಬಂದಿರುವ ಡಬ್ಬಿಂಗ್ ಕಾರ್ಯಕ್ರಮಗಳನ್ನು ಆರ್ಥಿಕ ಸಂಕಷ್ಟ ದಾಟಿಕೊಳ್ಳಲು ಹೂಡಿಕೆದಾರ ಕಂಡುಕೊಂಡಿರುವ ಪರಿಹಾರೋಪಾಯ ಎನ್ನಬಹುದು. ಅಂತೆಯೇ ಈ ಬಗೆಯ ಡಬ್ ಆದ ಕಾರ್ಯಕ್ರಮಗಳು ಆಯಾ ವಾಹಿನಿಗೆ, ಪುರಾಣ ಕತೆಗಳ ಡಬ್ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ನೋಡುಗರ ಸೂಚಿಯಲ್ಲಿ ಹೆಚ್ಚುವರಿ ಸಂಖ್ಯೆಗಳನ್ನು ತಂದಿರುವುದನ್ನು ಕಾಣಬಹುದು. ಇದೇ ಮಾತನ್ನು ಸಾಮಾಜಿಕ ಧಾರಾವಾಹಿಗಳ ಡಬ್ ಕಾರ್ಯಕ್ರಮಗಳಿಗೆ ಹೇಳಲಾಗದು. ಅವುಗಳ ನೋಡುಗರ ಸಂಖ್ಯೆಯಲ್ಲಿ ಬೃಹತ್ ಕೊರತೆಯಿದೆ. ಹಾಗೆಂದು ಡಬ್ ಆದ ಕಾರ್ಯಕ್ರಮಗಳು ಕೊರೊನ ಕಳೆದ ನಂತರ ನಿಲ್ಲುತ್ತವೆ ಎನ್ನಲಾಗದು. ಏಕೆಂದರೆ ಸೊನ್ನೆ ಆದಾಯದ ಕಾಲದಲ್ಲಿ ಮುಳಗದೆ ಹುಲ್ಲುಕಡ್ಡಿಯ ಆಸರೆಯಲ್ಲಿ ತೇಲುವಲ್ಲಿ ಬಹುತೇಕ ವಾಹಿನಿಗಳಿಗೆ ಡಬ್ ಕಾರ್ಯಕ್ರಮಗಳು ಉಸಿರಾಟದ ಅವಕಾಶ ಒದಗಿಸಿವೆ ಎನ್ನಬಹುದು.

ಅನ್ನ ಸಂಪಾದನೆಗೆ ತಾಗಿದ ಮೊನೆ

ಹೀಗೆ ಡಬ್ಬಿಂಗ್ ಕಾರ್ಯಕ್ರಮಗಳ ಪ್ರಸಾರ ಆರಂಭವಾದಾಗ ಹಲವು ನೇರ ಕಾರ್ಯಕ್ರಮಗಳು ನಿಂತವು. ಇದರಿಂದಾಗಿ ನೇರವಾಗಿ ಉದ್ಯೋಗ ಕಳಕೊಂಡವರ ಸಂಖ್ಯೆ ಸರಿಸುಮಾರು ಎರಡೂವರೆ ಸಾವಿರ ಜನ. ಅದರೊಡನೆ ಕೋವಿಡ್ ಕಾರಣಕ್ಕಾಗಿ ಸರ್ಕಾರ ಚಿತ್ರೀಕರಣಕ್ಕೆ ಹಾಕಿದ್ದ ಷರತ್ತುಗಳ ಹಿನ್ನೆಲೆಯಲ್ಲಿ ಹಲವು ಹಿರಿಯ ಕಲಾವಿದರು ಸಹ ಚಿತ್ರೀಕರಣದಲ್ಲಿ ಭಾಗವಹಿಸದ ಹಾಗಾಯಿತು. ಈ ಬಗೆಯಲ್ಲಿ ಒಟ್ಟಾರೆ ಮೂರು ಸಾವಿರ ಜನ ಆದಾಯ ಇಲ್ಲದ ಸ್ಥಿತಿಗೆ ಬಂದರು. ಜೊತೆಗೆ ಈ ಪರಭಾಷಾ ಕಾರ್ಯಕ್ರಮಕ್ಕೆ ಕನ್ನಡ ದನಿ ನೀಡುವ ಹೊಸ ಉದ್ಯೋಗವೂ ಸೃಷ್ಟಿಯಾಯಿತು. ಇದು ಕೆಲವು ಕಂಠದಾನ ಕಲಾವಿದರಿಗೆ ಜೀವನ ನಿರ್ವಹಣೆ ಒದಗಿಸಿತು. ಈ ಬಗೆಯಲ್ಲಿ ಹೊಸ ಜೀವನೋಪಾಯ ಸಿಕ್ಕವರ ಸಂಖ್ಯೆಗೆ ಹೋಲಿಸಿದರೆ ಜೀವನೋಪಾಯದ ಮಾರ್ಗವನ್ನೇ ಕಳಕೊಂಡವರ ಸಂಖ್ಯೆ ದೊಡ್ಡದು. ಈ ಹಿನ್ನೆಲೆಯಲ್ಲಿ ಈ ಡಬ್ಬಿಂಗ್ ಅನ್ನುವುದು ಹಲವು ಕುಟುಂಬಗಳನ್ನು ಹೊಸ ಕಷ್ಟಕ್ಕೆ ದೂಡಿರುವುದು ಹೌದು. ಹೀಗಾಗಿ ಅನ್ನದ ಪ್ರಶ್ನೆಯನ್ನಿಟ್ಟುಕೊಂಡು ಕೆಲಸ ಕಳಕೊಂಡವರು ಸರ್ಕಾರಕ್ಕೆ ಮನವಿ ಕೊಟ್ಟಿರುವುದೂ ಹೌದು. ಆದರೆ ಯಾವುದೇ ರಾಜ್ಯಸರ್ಕಾರ ಇಂತಹುದಕ್ಕೆ ತನ್ನ ಅಧಿಕಾರ ಬಳಸಿ ಪರಿಹಾರ ಒದಗಿಸಲು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿರಬೇಕಾದ ಮತ್ತೊಂದು ಸತ್ಯ. ಮನವಿ ಕೊಟ್ಟವರಿಗೆ ತಮ್ಮ ಪ್ರತಿನಿಧಿಯ ಬಳಿ ಸಂಕಟ ಹೇಳಿಕೊಂಡಿದ್ದೇವೆ ಎಂಬ ಅರೆಕಾಲಿಕ ಸಂತೋಷ. ಆ ಜನಪ್ರತಿನಿಧಿಗೆ ನಾನು ಮನವಿ ಸ್ವೀಕರಿಸಿ, ಪರಿಹಾರ ಕೊಡಿಸುವೆ ಎಂಬ ಆಶ್ವಾಸನೆ ನೀಡಿದ ಸುಖ ಬಿಟ್ಟು ಮತ್ಯಾವ ಲಾಭವೂ ಆಗುವ ಸಾಧ್ಯತೆ ಸದ್ಯಕ್ಕೆ ಕಾಣುತ್ತಿಲ್ಲ

ಮುಂದೆ…?

ಈ ಪರಿಸ್ಥಿತಿಯನ್ನು ಅವಲೋಕಿಸಿದಾಗ ಕಾಣುವುದಿಷ್ಟು. ಡಬ್ಬಿಂಗ್ ಪರವಾಗಿ ನಿಂತಿರುವವರೂ ಕನ್ನಡಿಗರೇ, ಡಬ್ಬಿಂಗ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವವರೂ ಕನ್ನಡಿಗರೇ. ಒಂದೇ ಭಾಷಿಕರ ನಡುವೆ ಇಂತಹ ಇಬ್ಬಂದಿತನ ಬಂದಿರುವುದರಿಂದ ಒಂದು ಸಮನ್ವಯ ಮಾರ್ಗವನ್ನು ಹುಡುಕಬೇಕಿದೆ. ಎಲ್ಲರಿಗೂ ಒಪ್ಪಿತವಾಗುವ ಮಾರ್ಗದಲ್ಲಿ ಈ ಡಬ್ಬಿಂಗ್ ಎಂಬ ಎರಡಲುಗಿನಿಂದ ತಪ್ಪಿಸಿಕೊಳ್ಳಬೇಕಿದೆ.

ಡಬ್ಬಿಂಗ್ ಬೇಕು ಎನ್ನುವವರು ಕರ್ನಾಟಕದಲ್ಲಿ ಎಲ್ಲ ಕಡೆಯೂ ಕನ್ನಡದ್ದೇ ಕಾರ್ಯಕ್ರಮ ಬೇಕು ಎನ್ನುತ್ತಿದ್ದಾರೆ. ಅದು ಖಂಡಿತ ಕಲ್ಪಿತ ಆದರ್ಶ. ಏಕೆಂದರೆ ಕರ್ನಾಟಕದಲ್ಲಿ ಸರಿಸುಮಾರು ಹದಿಮೂರು ಜಿಲ್ಲೆಗಳಲ್ಲಿ ಕನ್ನಡ ಮೊದಲ ಆಯ್ಕೆಯಲ್ಲ. ಹೀಗಾಗಿ ಆಯಾ ಜಿಲ್ಲೆಗಳಲ್ಲಿ ಸ್ಥಳೀಯ ಆದ್ಯತೆಯ ಭಾಷೆಯ ಸಿನಿಮಾ/ಕಾರ್ಯಕ್ರಮ ಬೇಕು ಎನ್ನುತ್ತಾರೆ. ಜೊತೆಗೆ ಕನ್ನಡವೇ ಮೊದಲ ಆಯ್ಕೆಯಾದ ಜಿಲ್ಲೆಗಳಲ್ಲಿ ಇತರ ಭಾಷೆಯ ಸಿನಿಮಾಗಳು ಕನ್ನಡದಲ್ಲಿ ನುಡಿಯಾಡುತ್ತವೆ. ಇದರಿಂದ ಕನ್ನಡದ್ದೇ ಆದ ಒರಿಜಿನಲ್ ಸಿನಿಮಾಗಳಿಗೆ ಚಿತ್ರಮಂದಿರದ ಕೊರತೆ ಆಗುತ್ತದೆ. ಸ್ಟಾರ್ ನಟರು ಇದ್ದ ಸಿನಿಮಾಗಳು ಹೇಗೋ ಗುದ್ದಾಡಿ ಗೆಲ್ಲಬಹುದು. ಸಣ್ಣ ಕಲಾವಿದರ ಸಿನಿಮಾಗಳಿಗೆ ಜಾಗವೇ ಸಿಗದಂತೆ ಆಗಬಹುದು. ಈ ಹಿನ್ನೆಲೆಯಲ್ಲಿ ಯಾವ ಸಿನಿಮಾ/ ಯಾವ ಕಾರ್ಯಕ್ರಮಗಳು ಡಬ್ ಆಗಿ ಬಿಡುಗಡೆಯಾಗಬೇಕು ಎಂಬ ಆಲೋಚನೆಯನ್ನು ಎರಡೂ ಬಣದವರೂ ಕೂತು ಚರ್ಚೆ ಮಾಡಬೇಕು.

ಡಬ್ಬಿಂಗ್ ಬೇಕು ಎನ್ನುವವರು ಎಲ್ಲಾ ಭಾಷೆಯ ಕಾರ್ಯಕ್ರಮಗಳೂ ನಮ್ಮ ಭಾಷೆಯಲ್ಲಿ ನಮ್ಮ ವಾಹಿನಿಯಲ್ಲಿ ಪ್ರಸಾರವಾಗಬೇಕು ಎನ್ನುತ್ತಾರೆ. ಹೀಗೆ ಮಾಡುವಾಗ ಯಾವುದು ನಮ್ಮ ಭಾಷೆ ಎಂಬ ಸೊಗಡುಗಳ ಪ್ರಶ್ನೆ ಒಂದೆಡೆಯಾದರೆ, ಅದಾಗಲೇ ಚರ್ಚಿಸಿದ ಆರ್ಥಿಕ ವಿವರಗಳ ಹಿನ್ನೆಲೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುವ ಇತರ ಭಾಷೆಗಳಿಂದ ಕನ್ನಡಕ್ಕೆ ಡಬ್ ಆದ ಕಾರ್ಯಕ್ರಮಗಳನ್ನು ತೆಗೆದುಕೊಳ್ಳುವುದೇ ವ್ಯಾಪಾರಿ ಆದವನ ಮೊದಲ ಆಯ್ಕೆ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರ ಅನ್ನವನ್ನು, ಬದುಕುವ ಹಕ್ಕನ್ನು ಕಿತ್ತುಕೊಳ್ಳದ ಹಾಗೆ ಡಬ್ ಆದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ ವಾಹಿನಿಗಳಿಗೆ ಮನವಿ ಮಾಡಬಹುದು. ಅಥವಾ ಡಬ್ ಆದ ಕಾರ್ಯಕ್ರಮಗಳನ್ನು ಪ್ರತ್ಯೇಕ ವಾಹಿನಿಯಲ್ಲಿ ಪ್ರಸಾರ ಮಾಡಿ, ಒರಿಜಿನಲ್ ಕಾರ್ಯಕ್ರಮಗಳಿಗೆ ಪ್ರತ್ಯೇಕ ವಾಹಿನಿ ಇರುವಂತೆ ಮಾಡಿಕೊಳ್ಳಬೇಕಾಗುತ್ತದೆ.

ಹಳೆಯ ಎಡವುಗಳು

ಹತ್ತೊಂಬತ್ತನೆಯ ಶತಮಾನದ ಅರವತ್ತರ ದಶಕದಲ್ಲಿ ಅ.ನ.ಕೃ., ಮ.ರಾಮಮೂರ್ತಿಯಂತಹ ಕನ್ನಡ ಹೋರಾಟಗಾರರು ಡಬ್ಬಿಂಗ್ ಸಿನಿಮಾಗಳ ವಿರುದ್ಧ ಹೋರಾಟ ಆರಂಭಿಸಿದರು. ನಂತರ ಅಂತಹ ಸಾಹಿತಿಗಳ ಒತ್ತಾಯಕ್ಕೆ ಓಗೊಟ್ಟು ಈ ಚಳವಳಿಗೆ ರಾಜ್‍ಕುಮಾರ್ ತರಹದವರು ಸಹ ಧುಮುಕಿದರು. 1965ರ ನಂತರ ಕನ್ನಡಕ್ಕೆ ಇತರ ಭಾಷೆಯ ಸಿನಿಮಾಗಳು ಡಬ್ ಆಗಿ ಬರುವುದು ನಿಂತಿತು. ಆ ಮೂಲಕ ಕನ್ನಡದ ಕಲಾವಿದರು, ತಂತ್ರಜ್ಞರು ಒಂದು ಗೌರವಯುತ ಬದುಕು ಕಂಡುಕೊಳ್ಳಲು ಸಾಧ್ಯವಾಯಿತು.

ಆದರೆ 1985ರ ನಂತರ ಮುಕ್ತಮಾರುಕಟ್ಟೆ ಉದಾರವಾದಿ ಅರ್ಥವ್ಯವಸ್ಥೆಯನ್ನು ಒಪ್ಪಿಕೊಳ್ಳುವುದರ ಜೊತೆಗೆ ನಾವು ತಯಾರಿಸುತ್ತಿದ್ದ ಕಾರ್ಯಕ್ರಮಗಳಲ್ಲಿ ಸ್ಥಳೀಯತೆಗಿಂತ, ಕತೆಯ ಹೂರಣಕ್ಕಿಂತ – ಗ್ಲಾಮರ್ ಕಡೆಗೆ, ಪ್ಯಾಕೇಜಿಂಗ್ ಕಡೆಗೆ ಹೆಚ್ಚು ವಾಲಿದ್ದನ್ನು ಗಮನಿಸಬಹುದು. ಇದೇ ಮಾದರಿಯು ಕಿರುತೆರೆಗೂ ವಾಲಿತು. ಅಲ್ಲಿಯೂ ಸ್ಥಳೀಯ ಕತೆಗಳನ್ನು, ಸ್ಥಳೀಯ ಸೊಗಡುಗಳನ್ನು ಇಟ್ಟುಕೊಂಡ ಕಾರ್ಯಕ್ರಮಗಳ ಸಂಖ್ಯೆ ಕಡಿಮೆ ಆಯಿತು. ನಿಧಾನವಾಗಿ ತಯಾರಾಗುವ ಕಾರ್ಯಕ್ರಮಗಳಲ್ಲಿ ಶೇಕಡಾ 70ರಷ್ಟು ರಿಮೇಕ್ ಧಾರಾವಾಹಿಗಳು ಬರತೊಡಗಿದವು. ಕನ್ನಡತನ ಎಂಬುದು ಬಹುತೇಕ ಕನ್ನಡ ಧಾರಾವಾಹಿಗಳಿಂದ ದೂರವಾಯಿತು. ಅದರ ಜೊತೆಗೆ ಬಹುತೇಕ ಕನ್ನಡ ಕಿರುತೆರೆ ಬರಹಗಾರರು ಅನುವಾದಕರಾಗಿ ಉಳಿದು ಹೋದರು. ಇದನ್ನು ಬಹುತೇಕ ಕನ್ನಡ ಕಾರ್ಯಕ್ರಮ ತಯಾರಕರು ವಿರೋಧಿಸಲಿಲ್ಲ. ಕನ್ನಡದ್ದೇ ಕಾದಂಬರಿ, ಕತೆಗಳನ್ನು ಮಾಡುವ ಅವಕಾಶ ಹೆಚ್ಚಾಗಲಿ ಎಂದು ಬೇಡಲಿಲ್ಲ. ಎಲ್ಲರೂ ಹಣ ಸಂಪಾದನೆಯ ಓಟದಲ್ಲಿ ಏದುಸಿರು ಬಿಡುತ್ತಾ ಇದ್ದುಬಿಟ್ಟರು. ಇದರ ಪರಿಣಾಮ ಎಂಬಂತೆ ಇಂದು ನಮ್ಮಲ್ಲಿ ಹೊಸ ಕೃತಿಗಳ ಬರಹಗಾರರ ಮತ್ತು ತಯಾರಕರ ಸಂಖ್ಯೆ ಕಡಿಮೆ ಆಗಿದೆ. ಇಂತಹ ಎಡವುಗಳ ಕಾರಣವಾಗಿ ನೋಡುಗರು ಸಹ ಬಹುತೇಕ ಧಾರಾವಾಹಿಗಳನ್ನು, ಸಿನಿಮಾಗಳನ್ನು ಕುರಿತು ಹೇವರಿಕೆ ಬೆಳೆಸಿಕೊಂಡರು. ನಿಧಾನವಾಗಿ ಕನ್ನಡದ ನೋಡುಗರು ಬೇರೆಯ ಭಾಷೆಗಳ ಕಾರ್ಯಕ್ರಮದ ಕಡೆಗೆ ವಾಲತೊಡಗಿದರು. ಇಂತಹ ತಪ್ಪುಹೆಜ್ಜೆಗಳ ಪರಿಣಾಮವೇ ಕಡಿಮೆ ಹಣದಲ್ಲಿ ತಯಾರಿಸುವ ಸಾಧ್ಯತೆ ತೆರೆದಿಟ್ಟು ಪರಭಾಷೆಯಿಂದ ಕನ್ನಡಕ್ಕೆ ಡಬ್ ಆದ ಕಾರ್ಯಕ್ರಮಗಳ ಆಗಮನಕ್ಕೆ ದಾರಿ ಮಾಡಿಕೊಟ್ಟಿದೆ ಎಂಬುದನ್ನು ಅಲ್ಲಗಳೆಯಲಾಗದು.

ಸ್ಪರ್ಧೆ ಯಾರ ಜೊತೆಗೆ

ಡಬ್ಬಿಂಗ್ ಬೇಕು ಎನ್ನುವವರು ಸ್ಥಳೀಯ ಸಿನಿಮಾ ಮತ್ತು ಕಿರುತೆರೆ ಕಾರ್ಯಕ್ರಮ ತಯಾರಕರು ಅಂತಾರಾಷ್ಟ್ರೀಯ ಮಟ್ಟದ ಕಾರ್ಯಕ್ರಮದ ಜೊತೆಗೆ ಸ್ಪರ್ಧಿಸುವಂತಹ ಕಾರ್ಯಕ್ರಮ ಮಾಡಬೇಕು ಎಂದು ಬಯಸುತ್ತಾರೆ. ಆದರೆ ವಾಸ್ತವವಾಗಿ ಕನ್ನಡ ಕಾರ್ಯಕ್ರಮ ತಯಾರಿಕೆಗೆ ಹುಟ್ಟುವ ಗರಿಷ್ಟ ಹಣವೂ ಸಹ ಇತರ ಭಾಷೆಗಳ ಸಣ್ಣ ಸಿನಿಮಾದ, ಕಾರ್ಯಕ್ರಮಗಳ ಬಜೆಟ್‍ಗೆ ಹತ್ತಿರ ಇರುವುದಿಲ್ಲ ಎಂಬುದು ಅಂಕಿಸಂಖ್ಯೆಗಳ ಸಹಿತ ತಿಳಿಯುತ್ತದೆ. ಹೀಗಾದಾಗ ಸ್ಥಳೀಯ ಕಾರ್ಯಕ್ರಮ ತಯಾರಕನು ಪ್ಯಾನ್ ಇಂಡಿಯಾ ಎಂಬ ಯೋಚನೆಯಿಂದ ಕಾರ್ಯಕ್ರಮ ತಯಾರಿಸಲು ಪ್ರಾರಂಭಿಸುತ್ತಾನೆ ಎಂಬುದು ಮತ್ತೊಂದು ಆಶಯ. ಆದರೆ ವಾಸ್ತವವಾಗಿ ಅಂತಹ ಪ್ಯಾನ್ ಇಂಡಿಯಾ ಹೂರಣವನ್ನು ತಯಾರಿಸುವಾಗ ಸ್ಥಳೀಯತೆ ಎಂಬುದು ಸಂಪೂರ್ಣ ನಾಪತ್ತೆ ಆಗಿಬಿಡುತ್ತದೆ. ಗಿರಿಯಮ್ಮ ಅಥವಾ ಕುವೆಂಪು ರಾಮಾಯಣಕ್ಕೆ ಬದಲಿಗೆ ವಾಲ್ಮೀಕಿ ರಾಮಾಯಣವನ್ನೇ ಸ್ಥಳೀಯನು ಕಟ್ಟಲು ಪರಾಕ್ರಮಿಸುತ್ತಾನೆ. ಹಾಗಾದಾಗ ಸ್ಥಳೀಯ ಸೊಗಡುಗಳ ಜೊತೆಗೆ ಸಿನಿಮಾ ಅಥವಾ ಧಾರಾವಾಹಿ ಕಟ್ಟುವಿಕೆ ಎಂಬುದು ಬಹುತೇಕ ಇಲ್ಲವಾಗುತ್ತದೆ. ಇಂತಹದು ಕೊರೊನಾಪೂರ್ವ ಕಿರುತೆರೆಯಲ್ಲಿ ಅಥವಾ ಸ್ಥಳಿಯ ಸಿನಿಮಾಗಳಲ್ಲಿ ಇತ್ತೇ ಎಂದರೆ ಬೆರಳೆಣಿಕೆಯಷ್ಟಾದರೂ ಇತ್ತು. ಇನ್ನು ಮುಂದೆ ಪ್ಯಾನ್ ಇಂಡಿಯಾ ಕಂಟೆಂಟ್ ತಯಾರಕರು ಸ್ಥಳೀಯತೆಗೆ ಅವಕಾಶ ಕೊಡುವುದು ಅಪರೂಪ ಆಗುತ್ತದೆ ಎನ್ನಬಹುದು.

ಹಾಗಾದರೆ ಇತರ ರಾಜ್ಯಗಳಲ್ಲಿ ಅಥವಾ ದೇಶಗಳಲ್ಲಿ ಡಬ್ಬಿಂಗ್ ಕಂಟೆಂಟ್‍ನಿಂದ ಹೀಗಾಗಿದೆಯೇ ಎಂಬ ಪ್ರಶ್ನೆಗೆ ಉತ್ತರವಾಗಿ ನೆರೆಯ ತೆಲುಗು, ತಮಿಳುಗಳಲ್ಲಿ ತಯಾರಾಗುತ್ತಿರುವ ಸಿನಿಮಾಗಳು ಹೇಗೆ ಇನ್ನಿತರ ಜನಪ್ರಿಯ ಮಾದರಿಗಳನ್ನನುಸರಿಸಿ ಸ್ಥಳೀಯತೆಯನ್ನು ಬಿಟ್ಟುಕೊಟ್ಟು ಕಾರ್ಯಕ್ರಮ ರೂಪಿಸುತ್ತಿವೆ ಎಂಬುದನ್ನು ನೋಡಬಹುದು. ಈ ಮಾತಿಗೆ ಅಪವಾದ ಎಂಬಂತೆ ತಮಿಳು, ಮಲೆಯಾಳದಲ್ಲಿ ಕೆಲವರು ಸ್ಥಳೀಯ ಚೌಕಟ್ಟಿನಲ್ಲಿ ಸಿನಿಮಾ ಕಟ್ಟಿದ ಉದಾಹರಣೆಗಳಿವೆ. ಆದರೆ ಅಂತಹ ಪ್ರಯತ್ನಗಳ ಸಂಖ್ಯೆ ಅಪವಾದ ಎಂಬಷ್ಟು ಕಿರಿದು. ಆ ಪ್ರಯತ್ನಗಳಲ್ಲಿ ಕೆಲವನ್ನು ಬಿಟ್ಟರೆ ಉಳಿದವು ನಷ್ಟದ ಹಾದಿಯಲ್ಲಿಯೇ ಇವೆ ಎಂಬುದು ಸಹ ಗಮನಿಸಬೇಕಾದ ವಿಷಯ.

ಪ್ರೊಟೆಕ್ಷನಿಸಂ

ಮುಕ್ತಮಾರುಕಟ್ಟೆಯ ಆರ್ಥಿಕ ವ್ಯವಸ್ಥೆಯು ಬಳಕೆಗೆ ಬರುವ ಮೊದಲಿಗೆ ಈ ದೇಶದಲ್ಲಿ ಸ್ಥಳೀಯರ ರಕ್ಷಣೆಗೆ ಹಲವು ಅವಕಾಶಗಳಿದ್ದವು. ಅವುಗಳು ಸ್ಪರ್ಧಾತ್ಮಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಹಿಂದೆ ಸರಿದವು. ಬೆಂಗಳೂರಿನಲ್ಲಿಯೇ ಇದ್ದ ಎರಡು ಕೋಲಾ – ಸಾಫ್ಟ್‌ಡ್ರಿಂಕ್ ಕಂಪೆನಿಗಳು ಅಂತಾರಾಷ್ಟ್ರೀಯ ಕಂಪೆನಿಗಳ ಪ್ರವೇಶದ ಜೊತೆಗೆ ಬಾಗಿಲು ಹಾಕಿಕೊಂಡದ್ದು ಈ ಮಾತಿಗೆ ಉದಾಹರಣೆಯಾಗಿ ಗಮನಿಸಬಹುದು.

ಭಾಷೆಯನ್ನು ಕಾಪಾಡಲು ಹಲವು ಸುರಕ್ಷತಾ ಕಾಯಿದೆಗಳು, ಕಾನೂನುಗಳು ಹೇಗಿದೆಯೋ ಹಾಗೆಯೇ ಕಲೋದ್ಯಮಗಳ ರಕ್ಷಣೆಗೂ ಇರಬೇಕಾದದ್ದು ಸದ್ಯದ ಪರಿಸ್ಥಿತಿಯಲ್ಲಂತೂ ಅನಿವಾರ್ಯ ಅಗತ್ಯವಾಗಿದೆ. ಈ ಕೋವಿಡ್19 ಕಾಲದಲ್ಲಿ ಯಾವುದೇ ಸಂಸ್ಕøತಿಯ ಬಹುಮುಖ್ಯ ಅಂಗವಾದ ಕಲೆಗಳು ಸೊರಗುತ್ತಿರುವಂತೆ, ಸ್ಥಳೀಯ ಸಿನಿಮಾ ಮತ್ತು ಟೆಲಿವಿಷನ್ ಕಾರ್ಯಕ್ರಮ ತಯಾರಕರು ಸಹ ಬೆಂಬಲವಿಲ್ಲದಂತಾಗಿದ್ದಾರೆ ಎಂಬುದಂತೂ ಸತ್ಯ. ಅವರಿಗೆ ಬೆಂಬಲ ಒದಗಿಸಲು ಕೇವಲ ಸಹಾಯಧನ ಅಥವಾ ದಿನಸಿ ವಿತರಣೆಯಂತಹ ಕೆಲಸಗಳು ಸಾಲದು. ಆಯಾ ಭಾಷೆಯ ಕಲಾವಿದರ ಉಳಿವಿಗಾಗಿ ಪ್ರೊಟೆಕ್ಷನಿಸ್ಟ್ ಕಾಯಿದೆಗಳನ್ನು ತರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಇಡಿಯಾಗಿ ಸಮಾಜವು ಯೋಚಿಸಬೇಕಾಗುತ್ತದೆ. ಸ್ಥಳೀಯ ಸೊಗಡುಗಳನ್ನು, ಸ್ಥಳೀಯರ ಅನ್ನ ಹಾಗೂ ಬದುಕುವ ಹಕ್ಕನ್ನು ಕಾಪಾಡಲು ಪ್ರೊಟೆಕ್ಷನಿಸಂನ ಅಗತ್ಯವಿದೆ. ಆ ನಿಟ್ಟಿನಲ್ಲಿ ಎಲ್ಲ ಬಗೆಯ ವಾದ ಮಾಡುವ ಜನರೂ ಸೇರಿ ಒಂದು ದಾರಿ ಹುಡುಕಬೇಕಿದೆ.

ಹೀಗೆ ಹೇಳುವಾಗ ಡಬ್ಬಿಂಗ್ ಎಂಬುದನ್ನು ವೈಯಕ್ತಿಕ ನೆಲೆಯಲ್ಲಿ ಈ ಲೇಖಕ ಎಂದೂ ಒಪ್ಪುವವನಲ್ಲ, ನೋಡುವವನಲ್ಲ, ಬೆಂಬಲಿಸವವನಲ್ಲ. ಆದರೆ ಈ ಮುಕ್ತಮಾರುಕಟ್ಟೆಯ ವ್ಯವಸ್ಥೆಯಲ್ಲಿ ಕಾನೂನಿನ ಬೆಂಬಲ ಗ್ರಾಹಕರ ಆಯ್ಕೆ ಸ್ವಾತಂತ್ರಕ್ಕೆ ಇರುತ್ತದೆ. ಆದ್ದರಿಂದ ಬೇಕು ಎನ್ನುವವರ, ಬೇಡ ಎನ್ನುವವರ ಒಟ್ಟಾಗಿ ಕೂತು ಸಮನ್ವಯದ ದಾರಿಯನ್ನು ಹುಡುಕಬೇಕಿದೆ.


ಇದನ್ನು ಓದಿ: ಸುಶಾಂತ್ ಸಿಂಗ್ ಸಾವಿಗೆ ಕಾರಣ ತಿಳಿಯಬೇಕಾದರೆ ಬಾಲಿವುಡ್ ಎಂಬ ಚಕ್ರವ್ಯೂಹ ಅರಿಯಿರಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಹಿರಿಯರಾದ ಬಿ ಸುರೇಶ್ ಅವರ ಈ ಲೇಖನ ಅತ್ಯಂತ ಪ್ರಸ್ತುತ. ಕಲಾವಿದರು ಸಾಹಿತಿ ಚಳವಳಿಗಾರರು ಒಟ್ಟಾರೆ ಕುಳಿತು ಮೊದಲು ಚರ್ಚೆ ಮಾಡಿ ಹೋರಾಟ ರೂಪಿಸಬೇಕು. ಇಲ್ಲದಿದ್ದರೆ ನಮ್ಮ ಕಲೆ ಸಿನಿಮಾ ಧಾರಾವಾಹಿ ಉಳಿಯುವುದಿಲ್ಲ.

  2. ಬಿ ಸುರೇಶ್ ಅವರ ಅಭಿಪ್ರಾಯ ಸರಿಯಿದೆ. ಡಬ್ಬಿಂಗ್ ಗೆ ಕಾನೂನು ಬೆಂಬಲವಿರುವುದರಿಂದ ಸಂವಾದದಿಂದಲೇ ಪರಿಹಾರ ಸಾಧ್ಯ..

  3. ಕರ್ನಾಟಕ ಮಾರುಕಟ್ಟೆ ನಿಮ್ಮ ಅನೂಕೂಲಕಲ್ಲ, ಸ್ಪರ್ಧೆ ಮಾಡಿ ಇಲ್ಲ ಮನೆಗೆ ಹೋಗಿ, ಎಲ್ಲರಂತೆ ಸ್ವಾಭಿಮಾನದಿಂದ ಬದುಕಿ, ಸರ್ಕಾರದ ಮುಂದೆ ಅನುಧಾನ ಬೇಡುವುದನ್ನ ನಿಲ್ಲಿಸಿ.

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...