Homeಎಲೆಮರೆಸ್ಲಂನಿಂದ ರಾಷ್ಟ್ರೀಯ ನಾಟಕ ಶಾಲೆ ತನಕ ಪಯಣಿಸಿದ ಗಟ್ಟಿ ಪ್ರತಿಭೆ ಸಹನಾ ಪಿಂಜಾರ..

ಸ್ಲಂನಿಂದ ರಾಷ್ಟ್ರೀಯ ನಾಟಕ ಶಾಲೆ ತನಕ ಪಯಣಿಸಿದ ಗಟ್ಟಿ ಪ್ರತಿಭೆ ಸಹನಾ ಪಿಂಜಾರ..

ಳೆದ ಮೂರು ದಶಕದಿಂದ ಹೊಸಪೇಟೆಯ ಅಜಾದ್‌ ನಗರದ ಸ್ಲಂನಲ್ಲಿ ಹಿರಿಯ ರಂಗಕರ್ಮಿ ಅಬ್ದುಲ್ ಅವರು ರೂಪಿಸಿದ `ಭಾವೈಕ್ಯತಾ ವೇದಿಕೆ’ಯಲ್ಲಿ ಸಹನಾ ರೂಪುಗೊಂಡಿದ್ದಾರೆ.

- Advertisement -
- Advertisement -

ಕಳೆದ ಜನವರಿಯಲ್ಲಿ ಮೈಸೂರಿನ ಕುವೆಂಪು ನಗರದ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಯ ಮಕ್ಕಳು ಅಭಿನಯಿಸಿದ `ಪ್ಲೇಬ್ಯಾಕ್ ಥಿಯೇಟರ್’ ರಂಗಪ್ರಯೋಗ ರಂಗಾಸಕ್ತರ ಗಮನ ಸೆಳೆಯಿತು. ಇಂಡಿಯಾ ಫೌಂಡೇಷನ್ ಫಾರ್ ದ ಆರ್ಟ್ಸ್ ಸಂಸ್ಥೆಯ ಕಲಿಕಲಿಸು ಯೋಜನೆಯಡಿ ರಂಗಕರ್ಮಿ ರಿಯಾಜ್ ಸಿಹಿಮೊಗೆ ಮಕ್ಕಳಿಗೆ ತರಬೇತಿಗೊಳಿಸಿದ್ದರು.

ನಾಟಕ ಮಾಡಲು ಸಿದ್ಧವಿದ್ದ ಕಲಾವಿದರು ರಂಗಕ್ಕೆ ಬರುತ್ತಾರೆ, ನಾಟಕ ನೋಡಲು ಬಂದ ಪ್ರೇಕ್ಷಕರು ಅವರದ್ದೇ ಕಥೆ ಅಥವಾ ಘಟನೆಗಳನ್ನು ಹೇಳುತ್ತಾರೆ. ಪ್ರೇಕ್ಷಕರದೇ ಕಥೆ, ಘಟನೆಗಳನ್ನಿಟ್ಟುಕೊಂಡು ಸ್ಟೇಜಲ್ಲಿಯೇ ಕಲಾವಿದರು ಅಭಿನಯ ಮಾಡುತ್ತಾರೆ, ಇದು ನ್ಯೂಯಾರ್ಕ್ ಮೂಲದ `ಪ್ಲೇಬ್ಯಾಕ್ ಥಿಯೇಟರ್’ ಕಲ್ಪನೆಯ ಕನ್ನಡದ ಪ್ರಯೋಗ. ಈ ಪ್ರಯೋಗದ ಯಶಸ್ಸಿನ ಹಿಂದೆ ರಿಯಾಜ್ ಸಿಹಿಮೊಗೆಯ ಸಂಗಾತಿ ಸಹನಾ ಪಿಂಜಾರ ಇವರ ಕಲ್ಪನೆ ಮತ್ತು ನವೀನ ವಸ್ತ್ರವಿನ್ಯಾಸದ ಹೊಸತನವಿತ್ತು. ಇದೀಗ ಬೆಂಗಳೂರು ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ `ಸಮಕಾಲೀನ ಕನ್ನಡ ರಂಗಭೂಮಿಯಲ್ಲಿ ರಂಗವಿನ್ಯಾಸ’ದ ಕುರಿತು ಪಿಹೆಚ್ ಡಿ ಪದವಿಗಾಗಿ ಸಂಶೋಧನ ಪ್ರಬಂಧವನ್ನು ಸಲ್ಲಿಸಿದ ಸಹನಾ ರಂಗಭೂಮಿಯ ಬಗೆಗೆ ತಾಜಾ ಅನ್ನಿಸುವ ಹೊಸ ಕಲ್ಪನೆಗಳನ್ನಿಟ್ಟುಕೊಂಡ ಕನಸುಗಾರ್ತಿ.

ಬಿರುಬಿಸಿಲ ಬಳ್ಳಾರಿಯ ಪರಿಸರದಲ್ಲಿ ರೂಪುಗೊಂಡ ಸಹನಾರ ರಂಗಭೂಮಿಯ ಪಯಣ ಕುತೂಹಲಕಾರಿಯಾಗಿದೆ. ಕಳೆದ ಮೂರು ದಶಕದಿಂದ ಹೊಸಪೇಟೆಯ ಅಜಾದ್‌ ನಗರದ ಸ್ಲಂನಲ್ಲಿ ಹಿರಿಯ ರಂಗಕರ್ಮಿ ಅಬ್ದುಲ್ ಅವರು ರೂಪಿಸಿದ `ಭಾವೈಕ್ಯತಾ ವೇದಿಕೆ’ಯಲ್ಲಿ ಸಹನಾ ರೂಪುಗೊಳ್ಳುತ್ತಾರೆ.

ಬಾಲ್ಯದಲ್ಲಿಯೇ ಬೀದಿನಾಟಕಗಳ ಮೂಲಕ ರಂಗಪ್ರವೇಶ ಮಾಡಿದ ಸಹನಾ, `ನೀರು ಕೊಡಿ’ ಎಂಬ ಘೋಷಣೆ ಕೂಗಿದಾಗ, ಕೊಳಗೇರಿಗಳ ಹೆಣ್ಣು ಓದಲೇಬೇಕು ಎಂದು ಪ್ರಭುತ್ವದ ಎದುರು ನಿಂತು ಕೇಳಿದಾಗ ಅವರ ವಯಸ್ಸು ಕೇವಲ ಐದು. ಸಹನಾ ಬಳ್ಳಾರಿ ಜಿಲ್ಲೆ, ಕುರುಗೋಡು ತಾಲ್ಲೂಕಿನ ಎಚ್. ವೀರಾಪುರದ ಪಿ.ಬಾಲೇಸಾಬ್ ಮತ್ತು ಗೌರಿಬೀಯರ ಮಗಳು. ಬಾಲ್ಯದಲ್ಲಿಯೇ ಇವರ ಚುರುಕುತನ ಮತ್ತು ಮಾತುಗಾರಿಕೆ ಕಂಡ ಮಾಮ ಪಿ.ಅಬ್ದುಲ್ ಸಹನಾರಿಗೆ ರಂಗಭೂಮಿಯ ದೀಕ್ಷೆ ಕೊಟ್ಟರು. ಇಡೀ ಜಿಲ್ಲೆಯಾದ್ಯಂತ ಬೀದಿನಾಟಕ ಆಡಿಸಿದರು. ಅವರ ಎಲ್ಲ ನಾಟಕಗಳಲ್ಲಿ ಬಾಲಕಿ ಸಹನಾರದ್ದೇ ಮುಖ್ಯಪಾತ್ರ.

ಹೊಸಪೇಟೆಯ ವಿಜಯನಗರ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಇದ್ದಾಗೊಮ್ಮೆ ನೀನಾಸಂನ ಕೆ.ವಿ.ಸುಬ್ಬಣ್ಣ ಹಂಪಿಗೆ ಬಂದಿದ್ದರು. ಭಾವೈಕ್ಯತಾ ವೇದಿಕೆಯ ರಂಗಚಟುವಟಿಕೆಯನ್ನು ಮೆಚ್ಚಿದ ಸುಬ್ಬಣ್ಣ ಸಹನಾರಿಗೆ ನೀಸಾಸಂಗೆ ಬರುವಂತೆ ಸೂಚಿಸಿದರು. ಯಾವುದೇ ಸಂದರ್ಶನವಿಲ್ಲದೆ ನೀನಾಸಂ ಪ್ರವೇಶ ಪಡೆದರು. ಬಿ.ವಿ.ಕಾರಂತರು ನೀನಾಸಂಗೆ ಕೊನೆಯದಾಗಿ ನಿರ್ದೇಶಿಸಿದ ಅಂದೇರ್ ನಗರಿ ಚೌಪಟ್ ರಾಜ ನಾಟಕದಲ್ಲಿ ಅಭಿನಯಿಸಿದರು. ಕಾರಂತರ ಕಠಿಣ ರಂಗ ಶಿಬಿರದಲ್ಲಿ ಪಳಗಿದ ಅವರಿಗೆ ರಂಗಕಲೆ ಉಸಿರಾಯಿತು. ನೀನಾಸಂ ತಿರುಗಾಟದಲ್ಲಿ ಪಾಲ್ಗೊಂಡರು. ಚೆಕಾಫ್‌ನ ಥ್ರಿ ಸಿಸ್ಟರ್ಸ್, ಕೆ.ವಿ.ಸುಬ್ಬಣ್ಣ ಅವರ ಭಗವದಜ್ಜುಕೀಯಂ, ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ನಟರಾಜ ಹೊನ್ನವಳ್ಳಿ ನಿರ್ದೇಶನದ ಬಿರುಕು, ವೆಂಕಟರಮಣ ಐತಾಳ್ ನಿರ್ದೇಶನದ ಹಂಸ ದಮಯಂತಿ ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು.

ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದ ಸಹನಾ ಬಣ್ಣದ ಲೋಕಕ್ಕೆ ಕಾಲಿಟ್ಟು ದುಡ್ಡು ಹೆಸರು ಗಳಿಸುವ ಅವಕಾಶವಿದ್ದರೂ, ಭಾವೈಕ್ಯತಾ ವೇದಿಕೆಯನ್ನು ಕ್ರಿಯಾಶೀಲಗೊಳಿಸುವಲ್ಲಿ ಆಸಕ್ತಳಾಗಿದ್ದಾರೆ. ರಂಗಕರ್ಮಿ ಸಿ.ಬಸವಲಿಂಗಯ್ಯ ನಡೆಸಿದ ರಂಗ ಶಿಬಿರದಲ್ಲಿ ಸಹನಾ ಅಭಿನಯದ ಹಲವು ಮುಖಗಳನ್ನು ಅರಿತರು. ಮೈಮ್ ರಮೇಶ್ ಗರಡಿಯಲ್ಲಿ ದೈಹಿಕ ರಂಗಭೂಮಿಯ ಮಹತ್ವ ತಿಳಿದರು. ನಿರ್ದೇಶಕರಾದ ಸುರೇಶ್ ಆನಗಳ್ಳಿ, ಸಿ.ಜಿ.ಕೆ., ನಟರಾಜ ಹೊನ್ನವಳ್ಳಿ, ಯೋಗಾನಂದ ಮುಂತಾದ ರಂಗ ದಿಗ್ಗಜರ ಒಡನಾಟದಿಂದ ಮತ್ತಷ್ಟು ಪಕ್ವವಾದರು. ಅಕ್ಕ, ಮಗಳು ಮಾತಾಡಿದಳು, ನಾವು ಮನುಜರು, ಚೋರ್ ಚೋರ್ ಪಕ್ಡೋ ಪಕ್ಡೋ, ಕೆಂಪು ಹೂ, ರಸ್ತೆಗೆ ಡಾಂಬರು ಬಂದಿದೆ, ಅರಿವು ಮುಂತಾದ ನಾಟಕಗಳಲ್ಲಿ ಅಭಿನಯಿಸಿದರು.

ಅಮೆರಿಕ ಪಪೆಟ್ ರಂಗಭೂಮಿಯ ಪೀಟರ್ ಶುಮನ್ ನಡೆಸಿದ ತರಬೇತಿಯಲ್ಲಿ ಪಾಲ್ಗೊಂಡು ಅವರು ಬೊಂಬೆ ಮತ್ತು ಮುಖವಾಡ ತಯಾರಿಸುವ ಕಲೆ ಕಲಿತರು. ಸ್ವೀಡನ್‌ನಿಂದ ಬಂದಿದ್ದ ಟಾಮ್ ಐರಿಕ್ ಅವರ ಬಳಿ ಮಕ್ಕಳ ರಂಗಭೂಮಿ ತರಬೇತಿ ಪಡೆದುಕೊಂಡರು. ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಸ್ಕಾಲರ್‌ಶಿಪ್ ಪಡೆದು ದೆಹಲಿಯ ಎನ್‌ಎಸ್‌ಡಿಯಲ್ಲಿ ರಂಗತರಬೇತಿ ಪಡೆದರು.

ಎನ್‌ಎಸ್‌ಡಿ ವಿದ್ಯಾರ್ಥಿಯಾಗಿದ್ದಾಗಲೆ ಸಹನಾ, ಕಥೆಗಾರ ಫಕೀರ್ ಮುಹಮ್ಮದ್ ಕಟ್ಪಾಡಿ ಅವರ ಜುಲೇಕಾ ಕಥೆಯ ರಂಗರೂಪ `ಜನ್ನತ್ ಮಹಲ್’ ಗಾಗಿ ರಂಗಮಂಚದ ಚಿತ್ರಣವನ್ನೇ ಬದಲಿಸಿದ್ದರು. ಮುಸ್ಲಿಂ ಹೆಣ್ಣುಮಗಳೊಬ್ಬಳ ಮನದ ತೊಳಲಾಟವನ್ನು ರಂಗವಿನ್ಯಾಸದಲ್ಲಿಯೂ ಧ್ವನಿಸಲು ಪ್ರಯತ್ನಿಸಿದ್ದರು. ಬುರ್ಖಾದ ಪ್ರತೀಕವೆಂಬಂತೆ ಇಡೀ ರಂಗಮಂಚಕ್ಕೆ ಬುರ್ಖಾ ಹೊದಿಸಿದ್ದರು. ಪ್ರೇಕ್ಷಕರು ಮತ್ತು ರಂಗಂಚದ ನಡುವೆ ತೆಳುವಾದ ಪರದೆ ಅಳವಡಿಸಿ ಅದರೊಳಗಿನಿಂದಲೇ ಜನ ನಾಟಕ ನೋಡುವಂತೆ ಮಾಡಿದ್ದರು. ಕೀರ್ತಿ ಜೈನ್ ನಿರ್ದೇಶನದ ಏಕ್ ರುಖಾ ಹುವಾಫೈಸ್ಲಾ ನಾಟಕದಲ್ಲಿ ರಂಗವಿನ್ಯಾಸ ಮಾಡಿದ್ದ ಸಹನಾ ಈ ನಾಟಕದೊಂದಿಗೆ ಚೀನಾಕ್ಕೆ ಭೇಟಿ ನೀಡಿದ್ದರು. ಚೀನಾ ರಂಗಭೂಮಿ ಕುರಿತು ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಎನ್‌ಎಸ್‌ಡಿಯಲ್ಲಿ ವಸ್ತ್ರವಿನ್ಯಾಸಕಿಯಾಗಿಯೂ ಗಮನ ಸೆಳೆದ ಅವರು ಡಾಲ್ಸ್ ಹೌಸ್ ನಾಟಕದ ನೋರಾ ಪಾತ್ರಕ್ಕೆ ಸೈಕಲ್ ಟೈರ್, ಟ್ಯೂಬ್, ಚೈನ್‌ಗಳನ್ನು ಬಳಸಿ ವಸ್ತ್ರವಿನ್ಯಾಸ ಮಾಡಿದ್ದರು. ಗ್ರೀಕ್ ಶೈಲಿಯಲ್ಲಿದ್ದ ದೊರೆ ಈಡಿಪಸ್ ನಾಟಕವನ್ನು ಲಂಕೇಶರು ಕನ್ನಡೀಕರಿಸಿದ ಕೃತಿಯನ್ನಿಟ್ಟುಕೊಂಡು ದೃಶ್ಯ ನಿರ್ದೇಶನ ಮಾಡಿ ಗಮನ ಸೆಳೆದರು. ಇದು ಅವರ ಇನ್ನೊಂದು ಪ್ರಯೋಗವಾಗಿತ್ತು. ಜೊತೆಗೆ ತಮಿಳು ಚಿತ್ರನಟ ಷಣ್ಮಖರಾಜ ಅವರ ನಿಗಲ್ ಥಿಯೇಟರ್(ಮಧುರೈ) ರಂಗ ತಂಡಕ್ಕೆ  ವಸ್ತ್ರ, ಪರಿಕರ, ಬೆಳಕು ವಿನ್ಯಾಸ ಮಾಡಿದ್ದಾರೆ. ಬೆಂಗಳೂರಿನ ಎನ್‌ಎಸ್‌ಡಿ ಶಾಖೆಯಲ್ಲಿ ತರಗತಿ ಸಂಚಾಲಕಿಯಾಗಿ ಕೆಲಸ ಮಾಡಿದ್ದಾರೆ. ಈಚೆಗೆ ದೇವರಾಜ ಅರಸು ಬಗೆಗೆ ನಾಟಕ ನಿರ್ದೇಶಿಸಿ ಕರ್ನಾಟಕದಾದ್ಯಂತ ಸುತ್ತಾಡಿ ಗಮನ ಸೆಳೆದಿದ್ದಾರೆ.

ಇದೀಗ ಸಹನಾ ತನ್ನ ಮೂಲ ಗೂಡಾದ ಭಾವೈಕ್ಯತಾ ವೇದಿಕೆಗೆ ಹೊಸ ಆಯಾಮ ನೀಡುವ ಕನಸು ಕಾಣುತ್ತಿದ್ದಾರೆ. ಅಂತೆಯೇ ಈ ಭಾಗದ ಬಯಲಾಟವನ್ನು ಮತ್ತೆ ಹೊಸ ನೆಲೆಯಲ್ಲಿ ಶೋಧಿಸಬೇಕೆಂದು ಮಕ್ಕಳಿಗಾಗಿ `ವೀರ ಅಭಿಮನ್ಯು ಬಯಲಾಟ ಕಾಳಗ’ ವನ್ನು ಹೊಸತನದಿಂದ ರಂಗಕ್ಕೆ ತಂದಿದ್ದರು. ಭಾವೈಕ್ಯತಾ ವೇದಿಕೆ ರೂಪಿಸಿದ ಪ್ರತಿಭಾವಂತ ರಂಗತಜ್ಞರಲ್ಲಿ ಸಹನಾ ಕೂಡಾ ಒಬ್ಬರು. ಬಹುಶಃ ಈ ವೇದಿಕೆಯನ್ನು ಮತ್ತಷ್ಟು ಎತ್ತರಕ್ಕೆ ಕಟ್ಟಿ ಬೆಳೆಸಬಹುದಾದ ಚೈತನ್ಯವಿರುವ ಪ್ರತಿಭಾವಂತೆ. ಪಾದರಸದಂತೆ ಲವಲವಿಕೆಯಿಂದಿರುವ ಸಹನಾ ರಂಗಭೂಮಿಯ ಸೂಕ್ಷ್ಮತೆಯನ್ನು ಚುರುಕಾಗಿ ಅರಿಯುವಂತವರು. ಅಂತೆಯೇ ಭವಿಷ್ಯದ ಕನ್ನಡ ರಂಗಭೂಮಿಯ ಬಹುಮುಖ್ಯ ರಂಗತಜ್ಞರಲ್ಲಿ ಒಬ್ಬರಾಗಿ ರೂಪುಗೊಳ್ಳುವ ಶಕ್ತಿ ಇರುವವರು. ಸಂಗಾತಿ ರಿಯಾಜ್ ಸಿಹಿಮೊಗೆ ಅವರ ಜೊತೆಗೂಡಿ ವೃತ್ತಿ ರಂಗಭೂಮಿಯ ರೆಪರ್ಟರಿ ತೆರೆಯುವ ಮತ್ತು ರಂಗ ತತ್ವದ ಮೇಲೆ ಪ್ರಾಥಮಿಕ ಶಾಲೆಯೊಂದನ್ನು ಆರಂಭಿಸುವ ಕನಸು ಸಹನಾ ಅವರದು.. ಅವರಿಗೆ ನಮ್ಮೆಲ್ಲರ ಹಾರೈಕೆಯಿರಲಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...