Homeಕರ್ನಾಟಕನಾಡವರ ಕಾಡುತ್ತಿರುವ ಸೋಗಲಾಡಿ ಸ್ವಾಮಿ

ನಾಡವರ ಕಾಡುತ್ತಿರುವ ಸೋಗಲಾಡಿ ಸ್ವಾಮಿ

ಬಾರ್ಕೂರು ಬಂಟ ಮಠಕ್ಕೆ ಯಾವುದೇ ಗುರು ಪರಂಪರೆ, ಇತಿಹಾಸವಿಲ್ಲ. ಆದರೆ ಸ್ವಯಂಘೋಷಿತ ಸಂತನಾಗಿ ದೀಕ್ಷೆ ಪಡೆದಿರುವ ಸಂತೋಷ ತನ್ನ ತೆವಲಿಗೆ ಕಟ್ಟಿಕೊಂಡ ಮಠವಿದು.

- Advertisement -
- Advertisement -

| ಶುದ್ಧೋದನ |

ತುಳುನಾಡಿನ ಬಂಟ ಸಮುದಾಯದ ಕುಲಗುರು ತಾನೆಂದು ಪೋಸುಕೊಡುತ್ತಿರುವ ಬಾರ್ಕೂರು ಮಹಾಸಂಸ್ಥಾನದ ಸ್ವಯಂಘೋಷಿತ ಪೀಠಾಧಿಪತಿ ವಿಶ್ವ ಸಂತೋಷ ಸ್ವಾಮಿಯ ಕಣ್ಣೀಗ ಉತ್ತರ ಕನ್ನಡದ “ನಾಡವ” ಸಮುದಾಯದ ಮೇಲೆ ಬಿದ್ದಿದೆ! ಸ್ವಜಾತಿ ಬಂಟರೇ ನಂಬದ ಈ ಢೋಂಗಿ ಅವಿಭಜಿತ ದಕ್ಷಿಣ ಕನ್ನಡದ ಬಂಟರು ಮತ್ತು ಉತ್ತರ ಕನ್ನಡದ ನಾಡವರು ಒಂದೇ ಕುಲ-ಗೋತ್ರದವರೆಂದು ಒಣ ಪ್ರವಚನ ಬಿಗಿಯುತ್ತಿದ್ದಾನೆ. ಇದರ ಹಿಂದೆ ತನ್ನ ಶ್ಯಾಂಪೋ ವಹಿವಾಟಿನ ಸಾಮ್ರಾಜ್ಯ ವಿಸ್ತರಣೆಯ ಹಕೀಕತ್ತು ಆತನಿಗಿದ್ದರೆ, ಆತನನ್ನು ಉತ್ತರ ಕನ್ನಡ ಪುರಪ್ರವೇಶ ಮಾಡಿಸಿರುವ ಕೆಲವು ಖಾಲಿ ಬರಡು ನಾಡವ ಪುಢಾರಿಗಳಿಗೆ ರಾಜಕೀಯ ಹಿತಾಸಕ್ತಿಯ ಹುನ್ನಾರವಿದೆ!!

ಬಾರ್ಕೂರು ಬಂಟ ಮಠಕ್ಕೆ ಯಾವುದೇ ಗುರು ಪರಂಪರೆ, ಇತಿಹಾಸವಿಲ್ಲ. ಆದರೆ ಸ್ವಯಂಘೋಷಿತ ಸಂತನಾಗಿ ದೀಕ್ಷೆ ಪಡೆದಿರುವ ಸಂತೋಷ ತನ್ನ ತೆವಲಿಗೆ ಕಟ್ಟಿಕೊಂಡ ಮಠವಿದು. ಸ್ವಾತಂತ್ರ್ಯ ಸಂಗ್ರಾಮದ ಹೊತ್ತಲ್ಲಿ ಕರ್ನಾಟಕದ ಬಾರ್ಡೋಲಿ ಎಂದೇ ಪರಿಚಿತವಾಗಿದ್ದ ಅಂಕೋಲೆಯ ವೈಚಾರಿಕ ನೆಲದಲ್ಲಿ ಕುಕ್ಕರುಗಾಲಲ್ಲಿ ಕುಳಿತು ಈತ ಉತ್ತರ ಕನ್ನಡದ ನಾಡವರನ್ನು ಶಾಸ್ತ್ರೋಕ್ತವಾಗಿ ಬಂಟ ಸಮುದಾಯದೊಂದಿಗೆ ಸೇರಿಸಿದ್ದೇನೆಂದು ಘೋಷಿಸಿರುವುದು ಮಜ್‍ಮಜಾ ಆಗಿದೆ!! ಧಾರ್ಮಿಕ-ಸಾಮಾಜಿಕ ಪಾವಿತ್ರ್ಯವಿಲ್ಲದ ಈ “ಸಂತ”ನನ್ನು ನಾಡವರ ಮೇಲೆ ಹೇರುವುದಿದೆಯಲ್ಲಾ ಅದು, ಗುರುವಿಲ್ಲದೆ ಗುರಿ ಸಾಧಿಸಬಲ್ಲ ಪರಂಪರೆಯ ನಾಡವರ ವೈಚಾರಿಕತೆ, ಜಾಣ್ಮೆ, ಸಾಧನೆ, ಸಾಹಸಕ್ಕೆಲ್ಲ ಅಪಚಾರ ಬಗೆದಂತೆಯೇ ಸರಿ….

ಕುಮಟಾ ಮತ್ತು ಅಂಕೋಲಾ ತಾಲ್ಲೂಕಿನಲ್ಲಿ ನೆಲೆ ಹೊಂದಿರುವ ನಾಡವರದು ಹಿಂದುಳಿದ ಸಮುದಾಯವೆಂದು ಪರಿಗಣಿತವಾಗಿದ್ದರೂ ಬಲಾಢ್ಯ-ಪ್ರಭಾವಿ ಜಾತಿ. ಫ್ಯೂಡಲ್ ಎಂದು ಗುರುತಿಸಲ್ಪಟ್ಟರೂ ಅಸ್ಪ್ರಶ್ಯತೆ, ಮೂಢನಂಬಿಕೆ ಆಚರಿಸದೆ ಆದರ್ಶರಾದವರು. ಮೇಲ್ವರ್ಗದ ಕುತಂತ್ರಗಾರಿಕೆ ವಿರುದ್ಧ ತಿರುಗಿಬಿದ್ದು ಸಮರ್ಥವಾಗಿ ಎದುರಿಸಿದವರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ನಿರ್ವಹಿಸಿದವರು. ಇಂಥ “ರೆಬೆಲ್” ಸಮುದಾಯಕ್ಕೆ ಗುರು ಪರಂಪರೆಯ ಹಂಗು-ದರ್ದು ಎಂದೂ ಕಾಡಿರಲಿಲ್ಲ. ಆದರೆ ಬಿಜೆಪಿಯಿಂದ ಶಾಸಕನಾಗಬೇಕೆಂದು ನಾನಾ ನಮೂನೆಯ ನಾಟಕ ನಡೆಸಿರುವ ನಾಗರಾಜ ನಾಯಕ ಯಾನೆ ಫಹರೆ ನಾಗ ಎನ್ನುವ ಆಸಾಮಿಗೆ ತನ್ನ ನಾಡವ ಸಮಾಜಕ್ಕೆ ಗುರು ಸ್ವೀಕಾರ ಮಾಡಿಸಿದರೆ ಓಟ್ ಬ್ಯಾಂಕ್ ದೃಷ್ಟಿಯಿಂದ ಲಾಭದಾಯಕವೆಂಬ ಹುಕಿ ಹೊಕ್ಕಿದೆ. ಮಠ-ಮಂದಿರ ಬಳಸಿಕೊಂಡು ಧರ್ಮಕಾರಣ ಮಾಡುವ ಸಂರಸ್ಕೃತಿಯ ಬಿಜೆಪಿಯ ಪಹರೆ ನಾಗನಿಗೆ ಸಹಜವಾಗೇ ಬಾರ್ಕೂರು ಮಠದ ಸಂತೋಷ ಸ್ವಾಮಿಯ ಸೆಳೆತ ಶುರುವಾಗಿದೆ.

ಸೋಗಲಾಡಿ ಸ್ವಾಮಿ ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ

ಮೊನ್ನೆ ಈ ನಾಗನ ನೇತೃತ್ವದಲ್ಲಿ ಸಂತೋಷ್ ಸ್ವಾಮಿಯನ್ನು ನಾಡವರ ಮೇಲೆ ಪ್ರತಿಷ್ಠಾಪಿಸುವ ಕಾರ್ಯಕ್ರಮವೊಂದು ನಡೆಯಿತು. ಅಚ್ಚರಿಯ ಸಂಗತಿ ಎಂದರೆ, ಬಹುಸಂಖ್ಯೆಯಲ್ಲಿ ನಾಡವರೇ ಬಹಿಷ್ಕಾರ ಹಾಕಿದ್ದ ಈ ಗುರು-ಚೇಲಾ ಸಮಾರಂಭದಲ್ಲಿ ಊರಿಗೆಲ್ಲ ನೀತಿ-ನಿಯತ್ತು ಬೋಧಿಸುವ ನ್ಯಾ.ಸಂತೋಷ್ ಹೆಗ್ಡೆ ಭಾಗಿಯಾಗಿದ್ದು!
ಸುಪ್ರೀಮ್ ಕೋರ್ಟ್‍ನ ನ್ಯಾಯಾಧೀಶರಾಗಿ ನಂತರ ಲೋಕಾಯುಕ್ತರಾಗಿ ನಾಡಿನಲ್ಲಿ ನ್ಯಾಯ-ನೀತಿ-ಬದ್ಧತೆ-ಸಾರ್ವಜನಿಕ ಜೀವನದ ಪರಿಶುದ್ಧತೆಗೆ ಅನ್ವರ್ಥನಾಮವೇ ಆಗಿಹೋಗಿದ್ದ ನ್ಯಾ. ಸಂತೋಷ್ ಹೆಗ್ಡೆ ಉಪಸ್ಥಿತಿ ಅನೇಕ ಅನುಮಾನ ಹುಟ್ಟುಹಾಕಿದೆ. ಅವರ ಬಗ್ಗೆ ಜನರಿಗಿದ್ದ ವಿಶ್ವಾಸಾರ್ಹತೆ ಪುನರ್ ಪರಿಶೀಲನೆಗೆ ಒಳಗಾಗುವಂತಾಗಿದೆ. ವಕೀಲನೂ ಆಗಿರುವ ಪಹರೆ ನಾಗನ ಮುಲಾಜಿಗೆ ನ್ಯಾ. ಹೆಗ್ಡೆ ಹಿಂದುಳಿದ ಸಮಾರಂಭಕ್ಕೆ ಜನಿವಾರ ಧಾರಣೆ ಮಾಡುವ ಕಾರ್ಯಕ್ರಮಕ್ಕೆ ಬರುವಂತಾಯ್ತಾ? ತವರೂರಿನ ಸಂತೊಷ್ ಸ್ವಾಮಿಯ “ಸನ್ಯಾಸಿ ತೇಜಸ್ವಿಗೆ” ನ್ಯಾ. ಹೆಗ್ಡೆ ಕರಗಿಹೋದರಾ? ಆ ವೈದಿಕ ಕರ್ಮದ ಸಭೆಯ ಸಂಘಟಕರ ಪೂರ್ವಾಪರವೂ ನ್ಯಾ. ಹೆಗ್ಡೆಗೆ ಗೊತ್ತಾಗದೇ ಹೋಯಿತಾ?

ನ್ಯಾ. ಎಸ್.ಆರ್.ನಾಯಕ್ ನಾಡವ ಸಮಾಜದಲ್ಲಿ ಅತೀ ಉನ್ನತ ಸ್ಥಾನಕ್ಕೇರಿದ ವ್ಯಕ್ತಿ. ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ, ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿದ್ದವರು. ಈಗ ಕಾನೂನು ಆಯೋಗದ ಅಧ್ಯಕ್ಷರಾಗಿರುವ ಈತ ಒಂಥರಾ ಎಡಬಿಡಂಗಿ. ಬದ್ಧತೆಯಿಲ್ಲದ ನ್ಯಾ. ನಾಯಕ್ “ಗುರು ಸ್ವೀಕಾರ” ಸಮಾರಂಭಕ್ಕೆ ಕರೆದರೆ ಬರುತ್ತಿದ್ದರೇನೋ ಈತನನ್ನು ಕಾರ್ಯಕ್ರಮದಿಂದ ದೂರವಿಡಲಾಗಿತ್ತು. ನ್ಯಾ.ಸಂತೋಷ್ ಹೆಗ್ಡೆಯ ಮನದಿಂಗಿತವೇ ಇದಕ್ಕೆ ಕಾರಣವೆಂಬ ಪುಕಾರು ನಾಡವ ವಲಯದಿಂದ ಪುಟಿದೇಳುತ್ತಿದೆ.

ಈ ನಾಡವ ಜಾತಿಯಲ್ಲೇ ಹುಟ್ಟಿದ ಪ್ರಖ್ಯಾತ ವಿಮರ್ಶಕ, ಪಂಪ ಪ್ರಶಸ್ತಿ ವಿಜೇತ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸೃತ ಜಿ.ಎಚ್.ನಾಯಕ್ ಇಂಥ ಗುರು-ಶಿಷ್ಯ ಸಮಾರಾಧನೆಗೆಲ್ಲ ಹೋಗುವವರಲ್ಲ ಬಿಡಿ. ಈ ನಾಡಿನ ಸಾಕ್ಷಿ ಪ್ರಜ್ಞೆಯಂತಿರುವ ಜಿ.ಎಚ್.ನಾಯಕರ ಕರೆಯುವ ಧೈರ್ಯ ಸಂಘಟಕರಿಗೆ ಇರಲಿಲ್ಲ. ಕರೆದರೂ ಅವರು ಖಂಡಿತ ಬರುತ್ತಿರಲಿಲ್ಲ. ಆದರೆ ಇಂಥ ಬದ್ಧತೆಯಿಲ್ಲದ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ರಮಾನಂದ ನಾಯಕರನ್ನು ಬುದ್ಧಿಪೂರ್ವಕವಾಗೇ ದೂರ ಇಡಲಾಗಿತ್ತು. ನಿಷ್ಕಳಂಕ ವ್ಯಕ್ತಿತ್ವದ, ಜನಾನುರಾಗಿ ರಮಾನಂದ ನಾಯಕ್ ಸಮ್ಮೇಳನದಲ್ಲಿ ಕಂಡುಬಂದಿದ್ದರೆ ದೂ(ದು)ರಾಲೋಚನೆಯ ಸಂಘಟಕರು ಪ್ರಭಾವಳಿ ಮುಸುಕಾಗುತ್ತಿತ್ತು, ಅಲ್ಲವಾ?
ಒಂದು ಕಾಲದಲ್ಲಿ ನ್ಯಾ. ಸಂತೋಷ್ ಹೆಗ್ಡೆ ಜ್ಯೂನಿಯರ್ ಆಗಿದ್ದ ಮಾಜಿ ಅಡ್ವೊಕೇಟ್ ಜನರಲ್ ಎಂ.ಆರ್.ನಾಯಕ್, ಪೊಲೀಸ್ ಇಲಾಖೆಯಲ್ಲಿ ಎಡಿಜಿಪಿ ಆಗಿದ್ದ ಜೀವನ್‍ಕುಮಾರ್ ಗಾಂವ್ಕರ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಜಿ.ಎನ್.ನಾಯಕ್ ಮತ್ತು ಡಿ.ಎನ್.ನಾಯಕ್, ನಾಡವ ಸಮುದಾಯದ ನಾಮಾಂಕಿತ ಸಾಹಿತಿಗಳು ಈ ಮಠೋನ್ಮತ್ತ ಸಮ್ಮೇಳನದಲ್ಲಿ ಕಾಣಿಸಲಿಲ್ಲ. ಹಾಗಿದ್ದರೆ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪವಿತ್ರಾತ್ಮಗಳಾದರೂ ಯಾವುವು ಬಲ್ಲಿರಾ?

ಮಿನಿ ವೀರಪ್ಪನ್ ಎಂದೇ ಕುಖ್ಯಾತನಾಗಿರುವ ಗಣಪತಿ ನಾಯಕ್ ಮೂಲಿಮನೆ, ಡಾಂಬರ್ ಕಳ್ಳರ ಕಿಂಗ್ ಗೋಪಾಲಕೃಷ್ಣ ನಾಯಕ್, ಸಂತೋಷ್ ಹೆಗ್ಡೆಯವರೇ ಲೋಕಾಯುಕ್ತರಾಗಿದ್ದಾಗ ಕೂಲಿಗಾಗಿ ಕಾಳು ಯೋಜನೆಯ ಅಕ್ಕಿ ಕದ್ದುಮಾರಿ ಜೈಲು ಪಾಲಾಗಿದ್ದ ನಿವೃತ್ತ ಅರಣ್ಯಾಧಿಕಾರಿ ನಾಗರಾಜ ನಾಯಕ್, ಚಿಪ್ಪಿ ಮರಳು ಲೂಟಿಕೋರ ಪ್ರದೀಪ್ ನಾಯಕ್, ಬಡ್ಡಿ ಮಾಫಿಯಾದವರು ಸದ್ರಿ ಗುರು-ಶಿಷ್ಯ ಪ್ರಹಸನದ ಮುಂಚೂಣಿಯಲ್ಲಿ ಮಿಂಚುತ್ತಿದ್ದರು. ಈ ಕ್ಷುದ್ರ ಗೃಹಗಳ ನಡುವೆ ನಿಂತು ನ್ಯಾ. ಹೆಗ್ಡೆ “ಇಂದಿನ ಸಾಮಾಜಿಕ ಪರಿಸ್ಥಿತಿಗೆ ಮೌಲ್ಯಗಳ ಕುಸಿತ ಕಾರಣವಾಗಿದೆ…” ಎಂದು ಹೇಳಿದ್ದು ವಿಪರ್ಯಾಸ. ನ್ಯಾ. ಹೆಗ್ಡೆ ಬಗ್ಗೆ ಗೌರವ ಇದ್ದವರು ಈ ದ್ವಂದ್ವ ಕಂಡು ಮುಸಿಮುಸಿ ನಕ್ಕರಷ್ಟೇ.
ಸಾನಿಧ್ಯ ವಹಿಸಿದ್ದ ಸಂತೋಷ್ ಸ್ವಾಮಿ ಅಣಿ ಮುತ್ತುಗಳಂತೂ ಶಿಷ್ಯರಲ್ಲಿಯ ಸೈತಾನನ ಕೆರಳಿಸುವಂತಿತ್ತು. “ಆರ್ಥಿಕವಾಗಿ, ಸಾಮಾಜಿಕವಾಗಿ ಬೆಳವಣಿಗೆ ಹೊಂದಿದ ನಾಡವರ ಸೈನ್ಯ ಇಲ್ಲಿದೆ. ಅಧರ್ಮಕ್ಕೆ ದಂಡಿಸುವ ಗುಣ ಇವರಿಗಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ..” ಎಂದು ಸಂತೋಷ್ ನಿವೃತ್ತ ಸುಪ್ರೀಮ್ ನ್ಯಾಯಾಧೀಶರೆದುರು ಹಲುಬಿದ್ದಾನೆ! ಇದೊಂದೇ ಸಾಕು, ಈ ಗುರು ಮುಂದೆ ನಾಡವರನ್ನು ಕೆಡಹುವ ಕೆಲಸಕ್ಕೆ ಹೇಗೆ ಬಳಸಿಕೊಳ್ಳಬಹುದು, ಹಿಂದೂತ್ವದ ಕಾಳಗಕ್ಕೆ ಕಾಲಾಳು ಮಾಡಬಹುದು, ಆ ಸಮಾಜದ ನೆಮ್ಮದಿ ಕದಡಬಹುದೆಂಬುದಕ್ಕೆ!!

ಸಂತೋಷ್ ಸ್ವಾಮಿ ಬಂಟರು-ನಾಡವರು ಒಂದಾಗಿದ್ದಾರೆಂದು ಭೋಂಗು ಬಿಟ್ಟಿದ್ದಾನಷ್ಟೇ. ದಕ್ಷಿಣ ಕನ್ನಡ ಬಂಟರ ಸಂಘದವರ್ಯಾರೂ ಇತ್ತ ಸುಳಿದಿರಲಿಲ್ಲ. ಹಿರಿಯ ಬಂಟರ ವಿದ್ವಾಂಸ ವರ್ಯ ಲಕ್ಷ್ಮೀನಾರಾಯಣ ಆಳ್ವರೇ ಈ ಸಮ್ಮಿಲನ ಸಾಧ್ಯವಿಲ್ಲ ಎಂದಿದ್ದಾರೆ.

ಮಠೋನ್ಮತ್ತರು ಸ್ವಾರ್ಥ ಸಾಧನೆಗಾಗಿ ಯಾವ್ಯಾವುದೇ ಇತಿಹಾಸ-ಪುರಾಣ ಗಂಟುಹಾಕಿ ನಾಡವರು-ಬಂಟರು ಒಂದೆಂದು ಬೊಬ್ಬೆಹಾಕುತ್ತಿದ್ದಾರೆ. ಆದರೆ ಮಾತೃ ಪ್ರಧಾನ ಹಾಗೂ ಅಳಿಯ ಕಟ್ಟಿನ ಸಂಪ್ರದಾಯದ ಬಂಟರಿಗೂ ಬಂಡಾಯ ಗುಣಧರ್ಮದ ನಾಡವರಿಗೂ ಸಾಮಾಜಿಕ-ಸಾಂಸ್ಕೃತಿಕ ಸಾಮ್ಯತೆಯಿಲ್ಲ. ನಾಡವರು ಹಿಂದುಳಿದ 2ಎ ವರ್ಗಕ್ಕೆ ಸೇರಿದರೆ, ಬಂಟರು 3ಬಿ ಯಲ್ಲಿ ಗುರುತಿಸಲಾಗಿದೆ. ಬಂಟರ ಜತೆಗೂಡಿದರೆ ತಮ್ಮ ಮೀಸಲಾತಿಗೆ ಸಂಚಕಾರ ಬರುವ ಭಯ ನಾಡವರಿಗಿದೆ.

ಒಟ್ಟಿನಲ್ಲಿ ಈ ಮಠ ಮಸಲತ್ತು ಒಂದು ಪ್ಲಾಪ್ ಶೋ. ಆದರೆ ಸಮಾಜಕ್ಕೆ ಘಾತುಕರಾದವರೇ ವಿಜೃಂಭಿಸಿದ ವೇದಿಕೆಯಲ್ಲಿ ಗೌರವಾನ್ವಿತ ನ್ಯಾ. ಸಂತೋಷ್ ಹೆಗ್ಡೆ ಮುಜುಗರವಿಲ್ಲದೆ ಕಾಣಿಸಿಕೊಂಡಿದ್ದು ಅರಗಿಸಿಕೊಳ್ಳಲಾಗುತ್ತಿಲ್ಲ!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

4 COMMENTS

  1. Neevu bariyovru barithira,

    Odho avru neev baradhaddhanna odhthaare,

    Majority mandhi neev bardhiro vishya 100% sari yendu oppi maathaad-thaare,

    Neevu yaarbagge bardhiddeero, avaru matthe avara chelagalu, enoo maad-dhe iro nannanthavranna kapatathanadhidha manege karesikondu gumpaagi baayige bandhange keelaadha kettmaathalli baydhu hedharisi alliruvavarige kaimugisikondu, kaalige beelisikondu, ivellara photogala thegedhukondu, blackmail maadi jeevadha bedharike haaki opas kalisutthaare.

    Neeve heli, idhu sarina?

    Nimma sariyaadha, 100% satya iruva article annu group alli share maadidhakke, neevu yaara bagge bareddhiddeera avarella nanna mele kapatavaagi nanna mele dhaali nadesiddhu sareena?

    Neeve heli

  2. Namaskara. illi melina comment nalli namma Vasant annoru ondhu ati mukkhya vishyavanna helalilla yaakendare avarameliruva jeevadha bedharike indha.

    Avaru helidha gatanegalu aaguva munche innondhu ati mukkhya gatane nadeyitu.
    Adhu yenendhare, neevu ee article alli yaarabagge baredhiruviyaro aa haedi napunsakaru Vasantannana manege raathro raathri gundagala gumpanna avarannu halle maadi hedharisalu kalesiddhaare. Baagilannu, kidakiyannu joraagi badedhu baagilige kallu thooraata maadi baagilu thereyalu hedharisidharu.

    Vichitthra sangati yenendhare, ee haedi napunsakaru namma jaathiyannu bereyaavdho Udupi jaathi jathe ondhanna maadalikke hogiddhaare, namma jaathiya bagge hemmeyindha maathaadutthaare matthe nadeyutthaare ivare jaathiya ganya mukkhyastharanthe,
    aadhare Vasantannana manege raathro raathri dhaali maadi hedharisuvudhakke kalisiruvudhu bere yaavdho Ankola dha moorane yaavdho jaathiya gandu-haedigalanna.

    Idhena namma jaathi baggiruva gourava, abhimaana, preethi ee haedi napunsakarige?

    Idharalle gottaagutthe Naadava samajadha janarige ee haedi napunsakaru maadutthiruva naatakagalindha estu saakaagogidhe antha.

LEAVE A REPLY

Please enter your comment!
Please enter your name here

- Advertisment -

Must Read

ಮಕ್ಕಳನ್ನು ಹೊಂದದೆ ಮೋದಿ, ಯೋಗಿ ನಿರುದ್ಯೋಗ ತಡೆದಿದ್ದಾರೆ ಎಂದ ಬಿಜೆಪಿ ಸಂಸದ!

0
ಯೂಟ್ಯೂಬರ್ ಒಬ್ಬರು ಉತ್ತರ ಪ್ರದೇಶದ ಬಿಜೆಪಿ ಸಂಸದನ ಬಳಿ ನಿರುದ್ಯೋಗ ಸಮಸ್ಯೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ವಿಚಿತ್ರವಾದ ಉತ್ತರ ನೀಡುವ ಮೂಲಕ ನಗೆ ಪಾಟಲಿಗೀಡಾಗಿದ್ದಾರೆ. ಯೂಟ್ಯೂಬರ್ ಜೊತೆ ಮಾತನಾಡಿರುವ ಆಝಂಘರ್ ಲೋಕಸಭಾ ಕ್ಷೇತ್ರದ ಬಿಜೆಪಿ...