Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

ಸಾವರ್ಕರ್‌ರನ್ನು ’ಮಾಜಿ ವೀರ ಸಾವರ್ಕರ್’ ಎಂದು ಕರೆಯಬಹುದು ಅಷ್ಟೇ: ದೊರೆಸ್ವಾಮಿ

ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕಾಗಿ ಧೈರ್ಯವಾಗಿ ನೇಣುಗಂಬಕ್ಕೇರಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗುತ್ತಾರೆ ಭಗತ್‌ ಸಿಂಗ್‌ ಮತ್ತು ಆತನ ಸಂಗಾತಿಗಳು.. ಆದರೆ ಸಾವರ್ಕರ್‌ ಮಾಡಿದ್ದೇನು?

- Advertisement -
  • ಎಚ್.ಎಸ್ ದೊರೆಸ್ವಾಮಿಯವರ ಹಳೆಯ ಲೇಖನ
- Advertisement -

ಸಾವಿರಾರು ಜನ ವೀರ ಸಾವರ್ಕರ್ ಅವರನ್ನು ಟೀಕಿಸಿದ್ದಾರೆ. ಸಾವಿರದ ಏಳನೆಯವನು ನಾನು. ಆದರೆ ಬಿಜೆಪಿ, ಆರೆಸ್ಸೆಸ್‍ನವರು ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ? ನಾನು ಸಾರ್ವಜನಿಕ ಕಾರ್ಯದಲ್ಲಿ ಸಕ್ರಿಯನಾಗಿರುವುದೇ ತಪ್ಪೇ? ಯಾರದೇ ಅನುಮತಿ ಪಡೆದು ಸಾರ್ವಜನಿಕ ಜೀವನಕ್ಕೆ ಬಂದವನು ನಾನಲ್ಲ. ನನ್ನ ಕೊನೆಯುಸಿರುವವರೆಗೂ ನಾನು ಸಾರ್ವಜನಿಕರ ಸಮಸ್ಯೆಗಳ ಪರಿಹಾರಕ್ಕೆ ನನ್ನ ಅಳಿಲುಸೇವೆ ಸಲ್ಲಿಸುತ್ತಾ ಹೋಗುತ್ತೇನೆ.

ವೀರ ಸಾವರ್ಕರ್ ಆರಂಭದ ದಿನಗಳಲ್ಲಿ ವೀರರಂತೆಯೇ ವರ್ತಿಸಿದವರು. ಇಂಗ್ಲೆಂಡಿಗೆ ಹೋಗಿ ಅಲ್ಲಿಂದಲೂ ಭಾರತದ ಬಿಡುಗಡೆಗೆ ಅಪಾರ ಸೇವೆ ಸಲ್ಲಿಸಿದರು. 20 ಬಂದೂಕುಗಳನ್ನು ಭಾರತದಲ್ಲಿದ್ದ ತಮ್ಮನಿಗೆ ಕಳಿಸಿದರು. ಅದನ್ನು ಅವರು ಜಾಗರೂಕತೆಯಿಂದ ಹಂಚುತ್ತಿದ್ದರು. ಈ ಕಾರ್ಯದಲ್ಲಿ ತೊಡಗಿದ್ದಾಗ ಅವರು ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರು. ಅವರ ವಿರುದ್ಧ ಕೇಸಾಯಿತು. ಸಾವರ್ಕರ್‌ರನ್ನು ಬ್ರಿಟನ್‍ನಲ್ಲೇ ಬಂಧಿಸಲಾಯಿತು. ಫ್ರಾನ್ಸಿನ ಸರಹದ್ದಿನ ಊರಿನ ಹತ್ತಿರ ಹಡಗು ಸಂಚರಿಸುತ್ತಿದ್ದಾಗ, ಸಾವರ್ಕರ್ ಸಮುದ್ರಕ್ಕೆ ಹಾರಿ ಈಜುತ್ತಾ ಫ್ರೆಂಚ್ ದಡದತ್ತ ಧಾವಿಸಲಾರಂಭಿಸಿದರು. ಆದರೆ ಈಜುಬಲ್ಲ ಬ್ರಿಟಿಷ್ ಪೊಲೀಸರು ಅವರನ್ನು ಅಡ್ಡಗಟ್ಟಿ ಬಂಧಿಸಿ ಭಾರತಕ್ಕೆ ತಂದರು. ಅವರ ಮೇಲೆ ಮೊಕದ್ದಮೆ ಆಗಿ 1915ರಲ್ಲಿ ಆರು ವರ್ಷಗಳ ಕರಿನೀರು ಶಿಕ್ಷೆ ವಿಧಿಸಲಾಯಿತು.

ಆದರೆ ಸಾವರ್ಕರ್‍ರಿಗೆ ಮೂರು ವರ್ಷಗಳ ಕರಿನೀರು ಶಿಕ್ಷೆ ಅನುಭವಿಸುವ ವೇಳೆಗಾಗಲೆ ಮನಸ್ಥಿತಿ ಬದಲಾಯಿತು. ಹೋರಾಟ, ಬಂಧನ, ಈ ಜೈಲುಶಿಕ್ಷೆ ಸಾಕು ಸಾಕೆನಿಸಿತು. ಬ್ರಿಟಿಷ್ ಸರ್ಕಾರಕ್ಕೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆ ಕೋರಿದರು.

‘ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದಿದ್ದೇ ತಪ್ಪಾಯಿತು. ನನ್ನನ್ನು ಬಿಡುಗಡೆ ಮಾಡಿ’ ಎಂದು ಬ್ರಿಟಿಷ್ ಸರ್ಕಾರವನ್ನು ಪ್ರಾರ್ಥಿಸಿದರು. ಸಾವರ್ಕರ್ ತಮ್ಮ ಜಿಲ್ಲೆ ಬಿಟ್ಟು ಬೇರೆಲ್ಲೂ ಹೋಗಕೂಡದು, ಪತ್ರಿಕೆಗೆ ಲೇಖನ ಬರೆಯಬಾರದು ಮುಂತಾದ ಷರತ್ತುಗಳನ್ನು ಹಾಕಿ ಬ್ರಿಟಿಷರು ಬಿಡುಗಡೆ ಮಾಡಿದರು.

ಸಾವರ್ಕರರಿಗೆ ಈ ಬಗೆಯ ಭಯ ಹೇಗೆ, ಏಕೆ ಉಂಟಾಯಿತು? ಬ್ರಿಟಿಷರು ಹಾಕಿದ ಷರತ್ತುಗಳನ್ನೆಲ್ಲ ಹೇಗೆ ಒಪ್ಪಿಕೊಂಡರು? ಮತ್ತು ಪಾಲನೆ ಮಾಡಿದರು? ಅರ್ಜುನನಿಗೆ ಯುದ್ಧಕ್ಕೆ ಹೋದಾಗ ಹೇಗೆ ಬುದ್ಧಿ ಗ್ಲಾನಿಯಾಯಿತೊ ಹಾಗೆ ಸಾವರ್ಕರರಿಗೂ ಆಯಿತೇನೊ. ಅರ್ಜುನನಿಗೆ ಸ್ವಧರ್ಮ ಪಾಲನೆ ಮಾಡುವಂತೆ ಹೇಳಲು ಕೃಷ್ಣ ಇದ್ದ. ಸಾವರ್ಕರರಿಗೆ ಈ ನೆರವು ಸಿಗಲಿಲ್ಲ. ಸ್ವಧರ್ಮ ಅವರು ಪಾಲನೆ ಮಾಡಲಿಲ್ಲ. ಹೀಗಾಗಿ ವೀರ ಸಾವರ್ಕರರು ಹೇಡಿ ಸಾವರ್ಕರರಾದರು. ಇದ್ದ ವಿಚಾರವನ್ನು ಇದ್ದಹಾಗೆ ಹೇಳಿದರೆ, ಹಿಂದೂತ್ವದ ಭೂತ ಹಿಡಿದ ಈ ಬಿಜೆಪಿ ಜನ, ಹಾಗೆ ಹೇಳಿದವರ ಮೇಲೆ ಎಲ್ಲರೂ ತಿರುಗಿಬೀಳುತ್ತಾರೆ, ಸಾವರ್ಕರರಿಗೆ ಅವಹೇಳನ ಮಾಡುತ್ತೀರಿ ಎಂದು ಆಪಾದನೆ ಹೊರಿಸುತ್ತಾರೆ.

ಹೋಗಲಿ ಇನ್ನುಮುಂದೆ ವೀರ ಸಾವರ್ಕರರನ್ನು ಹೇಗೆ ಕರೆಯಬೇಕು, ಅದನ್ನಾದರೂ ಹೇಳಿಬಿಡಿ. ಸಾವರ್ಕರರು ತಾನಾಗಿಯೇ ಬ್ರಿಟಿಷರಿಗೆ ಶರಣುಹೋಗಿ ವೀರಚಕ್ರವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರನ್ನು ‘ವೀರ’ ಎಂದು ಹೇಳುವುದು ಅವರನ್ನು ಅಪಹಾಸ್ಯ ಮಾಡಿದಂತೆ ಆಗುತ್ತೆ.

ಆದ್ದರಿಂದ ಸಾವರ್ಕರರನ್ನು ಯಾವ ಸಾವರ್ಕರ್ ಎಂದು ಕರೆಯಬೇಕೆಂಬುದನ್ನು ಆರ್‌ಎಸ್‍ಎಸ್ ಮತ್ತು ಬಿಜೆಪಿ ನಾಯಕರೇ ತೀರ್ಮಾನ ಮಾಡಿ ಜನತೆಗೆ ಹೇಳಲಿ. ಬೇಕಾದರೆ ಅವರನ್ನು ಮಾಜಿ ವೀರ ಸಾವರ್ಕರ್ ಎಂದು ಕರೆಯಬಹುದು.

ಸುಭಾಷ್‍ಚಂದ್ರ ಬೋಸ್ ಮತ್ತು ಭಗತ್ ಸಿಂಗ್ ಬಗೆಗೆ ಏನು ಬಲ್ಲಿರಿ? ಎಂದು ನನ್ನನ್ನು ಕೇಳಿದ್ದಾರೆ. ಇನ್ನು ಕೆಲವರು `ಅವರ ಬಗೆಗೂ ನನ್ನಲ್ಲಿ ವೀರ ಸಾವರ್ಕರ್ ಬಗೆಗಿರುವ ಭಾವನೆಗಳೇ ಇವೆಯೇ?’ ಎಂದು ಕೇಳಿದ್ದಾರೆ. ನಾನು ಸುಭಾಷ್‍ಚಂದ್ರ ಬೋಸ್‍ರ ಬಗೆಗೆ 30 ಪುಟಗಳ ಜೀವನಚರಿತ್ರೆ ಬರೆದಿದ್ದೇನೆ. ಅದರಲ್ಲಿ ಅವರ ಗುಣಗಾನ ಮಾಡಿದ್ದೇನೆ. ಮೂದಲಿಕೆಯ ಒಂದೂ ಮಾತು ಬರೆದಿಲ್ಲ.

ಭಗತ್‍ಸಿಂಗ್ ಬಗೆಗೆ ಪುಸ್ತಕ ಬರೆದಿಲ್ಲ. ಲೇಖನ ಬರೆದಿದ್ದೇನೆ. ಇಂಗ್ಲಿಷ್ ಅಧಿಕಾರಿಗಳನ್ನು ಒಬ್ಬೊಬ್ಬರನ್ನಾಗಿ ಕೊಂದರೆ ಬ್ರಿಟಿಷರು ತಾವಾಗಿಯೇ ದೇಶ ಬಿಟ್ಟುಹೋಗುತ್ತಾರೆಂಬ ವಿಚಾರ ಭಗತ್‍ಸಿಂಗ್ ಮೊದಲಾದ ಕೆಲವರದಾಗಿತ್ತು. ಭಗತ್‍ಸಿಂಗ್ ಮತ್ತು ಇಬ್ಬರು ಸ್ನೇಹಿತರು ಬಾಂಬ್ ತೆಗೆದುಕೊಂಡು ಅಧಿವೇಶನ ನಡೆಯುತ್ತಿದ್ದ ಕಡೆಗೆ ಹೋಗಿ ಪಾಸ್ ಪಡೆದು ವಿಸಿಟರ್ಸ್ ಗ್ಯಾಲರಿಯಲ್ಲಿ ಕುಳಿತುಕೊಳ್ಳುತ್ತಾರೆ. ಸಮಯ ನೋಡಿ ಯಾರಿಗೂ ಅಪಾಯವಾಗದಂತೆ ಬಾಂಬ್ ಎಸೆದು ತಮ್ಮತ್ತ ಎಲ್ಲರ ಗಮನ ಸೆಳೆದು ಘೋಷಣೆ ಕೂಗುತ್ತಾರೆ. ತಾವೇ ಬಾಂಬ್ ಎಸೆದಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಳ್ಳುತ್ತಾರೆ. ಆ ಮೂವರಿಗೂ ಗಲ್ಲುಶಿಕ್ಷೆ ವಿಧಿಸಲಾಗುತ್ತದೆ.

ಭಗತ್‍ಸಿಂಗ್ ತಂದೆ ವೈಸ್‍ರಾಯ್‍ರಿಗೆ ಪತ್ರ ಬರೆದು ತಮ್ಮ ಮಗನ ಜೀವದಾನ ಕೇಳುತ್ತಾರೆ. ಆ ವಿಷಯ ತಿಳಿಯುತ್ತಲೂ ಭಗತ್‍ಸಿಂಗ್ ತನ್ನ ತಂದೆಯ ಬಗ್ಗೆ ಹೌಹಾರಿ ಬೀಳುತ್ತಾರೆ. ‘ಮಗನ ಮೇಲಿನ ಮೋಹದಿಂದ ಶತ್ರುವಿನಲ್ಲಿ ನನ್ನ ಪ್ರಾಣಭಿಕ್ಷೆ ಕೇಳಿದ ನಿಮಗೆ ನಾಚಿಕೆಯಾಗುವುದಿಲ್ಲವೇ’ ಎಂದು ತಂದೆಗೆ ತರಾಟೆಗೆ ತೆಗೆದುಕೊಳ್ಳುತ್ತಾರೆ. ಧೈರ್ಯವಾಗಿ ನೇಣುಗಂಬಕ್ಕೇರಿ ಸಾವಿರಾರು ಯುವಕರಿಗೆ ಸ್ಫೂರ್ತಿಯ ಚಿಲುಮೆಯಾಗುತ್ತಾರೆ ಆ ಮೂವರು.

ಇನ್ನೊಂದು ವಿಷಯ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ಸಿನವರ ಪ್ರಭಾವ ಹೆಚ್ಚಿನದಾಗಿತ್ತಾದರೂ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರುರಾಣಿ ಚೆನ್ನಮ್ಮ, ಟಿಪ್ಪೂಸುಲ್ತಾನ್ ಮೊದಲಾದವರ ಪಾತ್ರವೂ ಪ್ರಶಂಸನೀಯವೇ. ಅಂತೆಯೇ ಉಗ್ರಗಾಮಿಗಳ ಪಾತ್ರವೂ ಅಷ್ಟೇ ಪ್ರಶಂಸನೀಯ. ಇವರ ಹೋರಾಟದ ಸ್ವರೂಪ ಬೇರೆಯದಾಗಿದ್ದರೂ ಈ ಬಣದವರ ದೇಶಾಭಿಮಾನ ಎಳ್ಳಷ್ಟೂ ಕಡಿಮೆಯಾದುದಲ್ಲ. ಅವರ್ಯಾರು ತಮ್ಮ ದೇಶಪ್ರೇಮದ ಬದ್ಧತೆಯಿಂದ ಯಾವತ್ತೂ ಹಿಂದೆ ಸರಿದವರಲ್ಲ.


ಇದನ್ನೂ ಓದಿ: ಸಾವರ್ಕರ್‌ & ದಲಿತರು ಕುರಿತಂತೆ ಪೋಸ್ಟ್‌ ಕಾರ್ಡ್ ಹರಡಿದ ಮೂರು ಸುಳ್ಳುಗಳು & ವಾಸ್ತವಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಸೋಲರಿಯದ ದಣಿವರಿಯದ ನಿರ್ಭಿಡೆಯ ಸ್ವಾತಂತ್ರ್ಯ ಯೋಧರಾದ ದೊರೆಸ್ವಾಮಿಯವರು ಸೂಚಿಸಿರುವಂತೆ, ಬಿಜೆಪಿ-ಸಂಘ ಪರಿವಾರದವರು ಸಾವರ್ಕರರನ್ನು ‘ಮಾಜಿ ವೀರ ಸಾವರ್ಕರ್’ ಎಂದು ಕರೆಯಲು ಬಯಸುವುದಾದರೆ ನಮ್ಮ ಅಭ್ಯಂತರವಿಲ್ಲ. ಮುಂದೆ ಬೇಕಾದರೆ ನಾವೂ ಹಾಗೆ ಕರೆಯುವ ಬಗ್ಗೆ ಯೋಚಿಸಬಹುದು.

    ಅಂಗೈ ಮೇಲಿನ ಸತ್ಯವನ್ನು ಒಪ್ಪದೆ, ಸತ್ಯ ಹೇಳುವವರನ್ನು ನಿಂದಿಸಿ ಮೂದಲಿಸುವುದರಿಂದ ಸುಳ್ಳು ಸತ್ಯವಾಗುವುದಿಲ್ಲ, ಮಾಜಿ ವೀರ ಸಾವರ್ಕರ್ ‘ವೀರಚಕ್ರ’ಕ್ಕೆ ಅರ್ಹರಾಗುವುದಿಲ್ಲ.

    – ಸಿರಿಮನೆ ನಾಗರಾಜ್.

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ: ಎಕ್ಸಿಟ್ ಪೋಲ್ ಪ್ರಸಾರ ಮಾಡದಂತೆ ನಿಷೇಧ ವಿಧಿಸಿದ ಚುನಾವಣಾ ಆಯೋಗ

0
ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಹಿನ್ನೆಲೆ ಏಪ್ರಿಲ್ 19ರಂದು ಬೆಳಿಗ್ಗೆ 7ರಿಂದ ಜೂನ್ 1ರ ಸಂಜೆ 6.30ರವರೆಗೆ ಸಮೀಕ್ಷೆಗಳನ್ನು ನಡೆಸುವುದು ಮತ್ತು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸುವುದನ್ನು ನಿಷೇಧಿಸಿ...