Homeಮುಖಪುಟಸೆಕ್ಯುಲರ್ ಸರ್ಕಾರದ ಟೇಕಾಫ್ ಯಾವಾಗಣ್ಣಾ?

ಸೆಕ್ಯುಲರ್ ಸರ್ಕಾರದ ಟೇಕಾಫ್ ಯಾವಾಗಣ್ಣಾ?

- Advertisement -
- Advertisement -

ನೀಲಗಾರ |

ಎರಡು ದಿನಗಳ ಕೆಳಗೆ ಜೆಡಿಎಸ್ ಕಾರ್ಯಕರ್ತರೊಬ್ಬರ ಕೊಲೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಆಡಿದ ಮಾತು ಕೇವಲ ಭಾವನಾತ್ಮಕವಾದ ಸಂದರ್ಭದ ಮಾತು ಎಂದು ಮರೆತುಬಿಡುವಂಥದ್ದಲ್ಲ. ಏಕೆಂದರೆ, ಕಾರ್ಯಕರ್ತನ ಕುಟುಂಬದವರನ್ನು ಭೇಟಿ ಮಾಡಲು ಹೋದಾಗ ಅವರಿಗೆ ಕಣ್ಣೀರು ಬಂದದ್ದು ನಿಜ; ಆದರೆ ಅವರು ಫೋನಿನಲ್ಲಿ ಮಾತಾಡುವಾಗ ಸಾಕಷ್ಟು ತಣ್ಣಗೇ ‘ಶೂಟ್ ಮಾಡಿಬಿಡಿ, ಏನೂ ಆಗಲ್ಲ, ನಾನಿದ್ದೇನೆ’ ಎನ್ನುವ ರೀತಿಯಲ್ಲಿ ಹೇಳಿದರು. ಜೆಡಿಎಸ್ ಕಾರ್ಯಕರ್ತರ ಪಾಲಿನ ಕುಮಾರಣ್ಣ ಆಗಿರುವುದಕ್ಕಿಂತ ಹೆಚ್ಚಿನ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ತನಗಿದೆ, ಅದಕ್ಕಿಂತ ಹೆಚ್ಚಾಗಿ ತಾನು ಸಂವಿಧಾನವನ್ನು ಜಾರಿ ಮಾಡುತ್ತೇನೆಂದು ಪ್ರಮಾಣ ಸ್ವೀಕರಿಸಿ ಮುಖ್ಯಮಂತ್ರಿಯಾಗಿದ್ದೇನೆ ಎಂಬ ಅರಿವು ಕುಮಾರಸ್ವಾಮಿಯವರಿಗಿಲ್ಲದೇ ಹೋದದ್ದು ದುರಂತ.
ನನಗೆ ಕೆಲವು ಕನಸುಗ್ಳಿವೆ. ನಂದೇ ಆದಂಥಾ ಯೋಜ್ನೆ ಇವೆ. ಅವನ್ನ ಜಾರಿ ಮಾಡ್ತೀನಿ
ಬಹಳ ದೊಡ್ಡ ಮುನ್ನೋಟ ಕುಮಾರಸ್ವಾಮಿಯವರಿಗೆ ಹಿಂದೆಯೂ ಇರಲಿಲ್ಲ. ಆದರೆ ಮಾನವೀಯವಾಗಿ ಸ್ಪಂದಿಸುವ, ಜನರ ಜೊತೆಗೆ ಒಡನಾಡಲು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುವ ಮೂಲಕ ಹಿಂದಿನ 20 ತಿಂಗಳ ಅವಧಿಯಲ್ಲಿ ಜನಪ್ರಿಯ ಆಡಳಿತವನ್ನೇ ನೀಡಿದ್ದರು. ಆದರೆ, ಆ ನಂತರ ತನ್ನದೇ ಆದಂತಹ ಹೊಸ ಆಲೋಚನೆಗಳಿವೆ ಎಂಬ ಮಾತುಗಳನ್ನು ಕುಮಾರಸ್ವಾಮಿ ಆಡಿದ್ದರು. ಅವರ ಪ್ರಣಾಳಿಕೆಯಲ್ಲಿದ್ದ ಹಲವು ಕಲ್ಯಾಣ ಕಾರ್ಯಕ್ರಮಗಳು ಮತ್ತು ಬಜೆಟ್ ಮಂಡಿಸಿದಾಗಲೂ ಅಂತಹ ಕೆಲವು ಹೊಸತನವನ್ನು ಅವರು ತೋರಿದ್ದರು. ಅವರ ಮನಸ್ಸಿನಲ್ಲೇ ರೂಪುಗೊಂಡಿತೋ ಅಥವಾ ಅಲ್ಲಿ ಇಲ್ಲಿ ಕೇಳಿದ್ದನ್ನು ಸೇರಿಸಿ ಹೊಸ ರೀತಿಯ ಕಾರ್ಯಕ್ರಮಗಳನ್ನು ನೀಡುವ ಉಮೇದು ಬಂದಿತೋ ಬೇರೆ ವಿಚಾರ; ಆದರೆ ವಿಶೇಷ ಕಾರ್ಯಕ್ರಮಗಳು ಇದ್ದದ್ದಂತೂ ನಿಜ.
ಆದರೆ, ಈಗ ಅವುಗಳ ಅನುಷ್ಠಾನದ ವಿಚಾರ ನೋಡಿದರೆ, ಪ್ರಣಾಳಿಕೆ ರೂಪಿಸುವಾಗ ‘ತಾನು ಹೇಗೂ ಅಧಿಕಾರಕ್ಕೆ ಬರುವುದಿಲ್ಲ’ ಎಂಬ ಆಲೋಚನೆಯಿಂದ ರೂಪಿಸಿದ್ದರೇನೋ ಎಂಬ ಅನುಮಾನ ಬರುವಂತೆ ಆಗಿದೆ. ಈ ಸರ್ಕಾರವು ಯಾವ ರೀತಿಯ ವಿಶೇಷ ಸಾಧನೆ ಮಾಡುತ್ತಿದೆ ಎಂದು ಆಲೋಚಿಸಿದರೆ, ಅಂತಹ ಯಾವ ಮಹತ್ತರ ಕಾರ್ಯಕ್ರಮಗಳೂ ಕಣ್ಣ ಮುಂದೆ ಬರುವುದಿಲ್ಲ. ಏಕೆಂದರೆ, ಅಂತಹ ಮಹತ್ತರ ಕಾರ್ಯವೆಂದು ಬಣ್ಣಿಸಬಹುದಾಗಿದ್ದ ರೈತರ ಸಾಲಮನ್ನಾದ ಭರವಸೆಯ ಈಡೇರಿಕೆಯು ಬಾಲಗ್ರಹಕ್ಕೆ ತುತ್ತಾಗಿದೆ.
ರೈತರ ಸಾಲಮನ್ನಾದ ದೊಡ್ಡ ಸಮಸ್ಯೆ

ಕುಮಾರಸ್ವಾಮಿ

ಅಧಿಕಾರಕ್ಕೆ ಬಂದ 24 ಗಂಟೆ ಒಳಗೆ ಸಾಲಮನ್ನಾ ಎಂಬ ಘೋಷಣೆ ಹೊರಡಿಸಿದ್ದ ಜೆಡಿಎಸ್‍ನ ನಾಯಕ ಕುಮಾರಸ್ವಾಮಿಯವರು, ‘ಸುಮ್ಮನೇ ಹೇಳಿಲ್ಲ. ಹಣ ಎಲ್ಲಿಂದ ಹೇಗೆ ತರಬೇಕು ಎಂಬುದರ ಕುರಿತು ನನಗೆ ಯೋಜನೆಗಳಿವೆ’ ಎಂತಲೂ ಹೇಳಿದ್ದರು. ಸಂಪನ್ಮೂಲ ಕ್ರೋಢೀಕರಣದ ಅಂತಹ ಯಾವ ವಿಶೇಷ ಯೋಜನೆಗಳು ಇದುವರೆಗಂತೂ ಕಂಡಿಲ್ಲ. ಸಾಲಮನ್ನಾದ ಪ್ರಮಾಣವೂ 34,000 ಕೋಟಿ ರೂ ಎಂದು ಒಮ್ಮೆ, 46,000 ಕೋಟಿ ಎಂದು ಇನ್ನೊಮ್ಮೆ ಹೇಳಲಾಯಿತು. ಆರಂಭದಲ್ಲಿ ಸುಸ್ತಿ ಸಾಲ ಮಾತ್ರ ಮನ್ನಾ ಆಗುತ್ತದೆ ಮತ್ತು ಸಾಲ ಕಟ್ಟಿರುವವರಿಗೆ 25,000 ರೂ. ವಿಶೇಷ ಕೊಡುಗೆಯನ್ನು ಪ್ರಕಟಿಸಲಾಯಿತು. ಅಂದರೆ ಚಾಲ್ತಿ ಸಾಲದವರಿಗೆ ಸಾಲಮನ್ನಾ ಇಲ್ಲ ಎಂಬುದು ಸ್ಪಷ್ಟವಾಗಿತ್ತು. ಸಹಕಾರೀ ಸಾಲದಲ್ಲಿ ಬಹಳಷ್ಟನ್ನು ಮುಂದಿನ ಸಾಲಿನಲ್ಲಿ ರಿನ್ಯೂವಲ್ ಮಾಡಿಬಿಡಲಾಗುತ್ತದೆ. ಹಾಗಾಗಿ ಅಲ್ಲಿ ಸುಸ್ತಿ ಸಾಲವೆಂಬುದು ಇರುವುದಿಲ್ಲ. ಅಂತಹವರು ಎಷ್ಟು ತೆಗೆದುಕೊಂಡಿದ್ದರೂ, 25,000 ರೂ ಮಾತ್ರ ಸಿಗುತ್ತದೆ ಎಂದಾಗುತ್ತಿತ್ತು. ಅಲ್ಲಿಗೆ ಸಹಕಾರಿ ಸಾಲಮನ್ನಾ ಆಗುವುದೇ ಇಲ್ಲ ಎಂಬುದೇ ಪಕ್ಕಾ ಎಂಬ ಸುದ್ದಿ ಹರಡಲಾರಂಭಿಸಿತು.
ಇದು ರೈತರಿಗೂ ಅರಿವಾಗಿ ಎಲ್ಲೆಡೆ ಅಸಮಾಧಾನ ಶುರುವಾಗುತ್ತದೆ ಎಂಬ ಹೊತ್ತಿಗೆ ಎಚ್ಚೆತ್ತುಕೊಂಡು ಚಾಲ್ತಿ ಸಾಲವನ್ನೂ ಮನ್ನಾ ಮಾಡಲಾಗುತ್ತದೆ ಎಂಬ ಭರವಸೆ ನೀಡಲಾಯಿತು. ಇಷ್ಟಾಗುವ ಹೊತ್ತಿಗೆ ಬಿಜೆಪಿಯು ‘ಸಾಲಮನ್ನಾ ಭರವಸೆ ಈಡೇರಿಸಲು ಹೋರಾಟದ ಕರೆ’ಯನ್ನು ಕೊಟ್ಟಾಗಿತ್ತು. ಆದರೆ, ವಾಸ್ತವದಲ್ಲಿ ಇಂದಿಗೂ ರೈತರಿಗೆ ಋಣಮುಕ್ತ ಪತ್ರ ಕೊಟ್ಟಿಲ್ಲ. ಪ್ರಧಾನಿ ನರೇಂದ್ರ ಮೋದಿ ಸಹಾ ಇದನ್ನು ರಾಯ್‍ಬರೇಲಿಯ ಭಾಷಣದಲ್ಲಿ ಪ್ರಸ್ತಾಪಿಸಿದರು. ರಾಷ್ಟ್ರೀಕೃತ ಬ್ಯಾಂಕ್‍ನವರು ಈ ವಿಚಾರದಲ್ಲಿ ಸಹಕರಿಸದಂತೆ ಬೇರೆ ಯಾರೋ ತಡೆಯುತ್ತಿದ್ದಾರೆ; ಅವರಲ್ಲಿ ಕೆಲವು ಅಧಿಕಾರಿಗಳೂ ಇದ್ದಾರೆ. ಅಂತಹವರಿಗೆ ಎಚ್ಚರಿಕೆ ಕೊಡುತ್ತಿದ್ದೇನೆ ಎಂಬ ಮಾತುಗಳೂ ಮುಖ್ಯಮಂತ್ರಿಯವರಿಂದ ಬಂದಿತು.
ಆರಂಭದಲ್ಲಿ ಬಂದ ವದಂತಿಗಳ ಪ್ರಕಾರ, ಹಣಕಾಸು ಇಲಾಖೆ ಕಾರ್ಯದರ್ಶಿ ಐಎಸ್‍ಎನ್ ಪ್ರಸಾದ್ ಅವರೇ ಇದಕ್ಕೆ ಕಾರಣ; ಅವರು ಸಿದ್ದರಾಮಯ್ಯರಿಗೆ ಹತ್ತಿರವಾಗಿದ್ದರು ಮತ್ತು ಅವರನ್ನು ನಿಯಂತ್ರಿಸುವ ಸಲುವಾಗಿಯೇ ನಿವೃತ್ತ ಐಎಎಸ್ ಅಧಿಕಾರಿ ಸುಬ್ರಹ್ಮಣ್ಯ ಅವರನ್ನು ಆರ್ಥಿಕ ಸಲಹೆಗಾರರಾಗಿ ನೇಮಿಸಿಕೊಳ್ಳಲಾಗಿದೆ ಎಂದು ಹೇಳಲಾಗುತ್ತಿತ್ತು. ಇದರ ಸತ್ಯಾಸತ್ಯತೆಗಳೇನೇ ಇದ್ದರೂ, ಅದನ್ನು ಬಗೆಹರಿಸಲು ಇದುವರೆಗೂ ಸಾಧ್ಯವಾಗಿಲ್ಲ ಎಂಬುದಂತೂ ಸತ್ಯ.
ಇವೆಲ್ಲದರ ಪರಿಣಾಮವಾಗಿ ರೈತರ ಸಾಲಮನ್ನಾ ಮಾಡಿದರು ಎಂಬ ಕೀರ್ತಿ ಪಡೆದುಕೊಳ್ಳುವ ಅವಕಾಶವೂ ಇಲ್ಲದಂತಾಗಿದೆ.
ನಿಮ್ಮ ಕೃಷಿ ನೀತಿ ಯಾವುದು?
ಪ್ರಣಾಳಿಕೆಯಲ್ಲಿಯೇ ಇದ್ದ ಇಸ್ರೇಲಿ ಕೃಷಿ ಒಂದೆಡೆ. ಅದಕ್ಕೆ ಬಜೆಟ್‍ನಲ್ಲಿ 150 ಕೋಟಿ ರೂ. ಹಣವನ್ನು ಬಜೆಟ್‍ನಲ್ಲಿ ಒದಗಿಸಲಾಯಿತು. ಬಜೆಟ್‍ಗೆ ಸ್ವಲ್ಪ ಮುಂಚೆ ಪ್ರಸ್ತಾಪಿಸಲಾದ ಸಹಜ ಕೃಷಿಗೂ 50 ಕೋಟಿ ರೂ. ಒದಗಿಸಲಾಯಿತು. ಪರಸ್ಪರ ವಿರುದ್ಧವಾದ ಕೃಷಿ ನೀತಿಗೆ ಒಂದೇ ಸರ್ಕಾರ ಒಂದೇ ಬಜೆಟ್‍ನಲ್ಲಿ ಹಣ ನೀಡಿತ್ತು! ಎರಡನ್ನೂ ಪ್ರಯೋಗ ಎಂದುಕೊಳ್ಳುವುದಾದರೆ, ಅಷ್ಟೇ ಗಂಭೀರವಾಗಿ ಪ್ರಯೋಗದಲ್ಲಾದರೂ ತೊಡಗಿಕೊಳ್ಳಲು ಸರ್ಕಾರ ಎಚ್ಚರವಹಿಸಬೇಕಿತ್ತು.
ಆದರೆ ಸಹಜ ಕೃಷಿಗೆ ಸಂಬಂಧಿಸಿದಂತೆ ದೊಡ್ಡ ಎಡವಟ್ಟನ್ನು ಸರ್ಕಾರ ಮಾಡಿತು. ಯಾವ ಕೃಷಿ ವಿಶ್ವವಿದ್ಯಾಲಯಗಳ ಕೃಷಿ ವಿಧಾನದ ವಿರುದ್ಧ ಸುಭಾಷ್ ಪಾಳೇಕರ್‍ರಂತಹ ತಜ್ಞರು ‘ಶೂನ್ಯ ಬಂಡವಾಳದ ಸಹಜ ಕೃಷಿ’ಯನ್ನು ಮುಂದಿಟ್ಟರೋ, ಅದೇ ಕೃಷಿ ವಿಶ್ವವಿದ್ಯಾಲಯದ ‘ಪರಿಣಿತ’ರಿಗೇ ಸಹಜ ಕೃಷಿಯ ಅನುಷ್ಠಾನದ ಹೊಣೆ ವಹಿಸಲಾಯಿತು! ಇದರ ಕುರಿತು ಸಂಬಂಧಿಸಿದವರು ಎತ್ತಿದ ಆಕ್ಷೇಪಣೆಗಳಿಗೆ ಯಾವ ಬೆಲೆಯನ್ನೂ ಕೊಡದೇ, ಸಹಜ ಕೃಷಿಯ ಪ್ರಯೋಗವನ್ನು ವಿಫಲಗೊಳಿಸಬೇಕೆಂಬ ಉದ್ದೇಶದಿಂದಲೆ 50 ಕೋಟಿ ಹಣ ಮೀಸಲಿಟ್ಟಂತೆ ಸರ್ಕಾರವು ನಡೆದುಕೊಂಡಿತು.
ಈ ವಿಚಾರದಲ್ಲಿ ಕೃಷಿ ಸಚಿವರಾದ ಶಿವಶಂಕರರೆಡ್ಡಿಯವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಸುಭಾಷ್ ಪಾಳೇಕರ್‍ರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ, ಎಲ್ಲರನ್ನೂ ಮುಂದಿಟ್ಟುಕೊಂಡೇ ಹಳ್ಳ ಹಿಡಿಸಲಾಯಿತು. ರೈತರ ಪರವಾದ ಸರ್ಕಾರ ಎಂದು ಹೇಳಿಕೊಳ್ಳುವ ಸರ್ಕಾರವು ಸರಿಯಾದ ಕೃಷಿ ನೀತಿಯನ್ನೇ ಹೊಂದಿಲ್ಲದಿರುವ ಅಂಶ ಎದ್ದು ಕಾಣುವಂತಾಯಿತು. ತಂತ್ರಜ್ಞಾನ ಮತ್ತು ಆಧುನಿಕ ವಿಧಾನಗಳ ಮೇಲೆ ಅತೀವ ಪ್ರೇಮ ಹೊಂದಿರುವ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಸಹಜ ಕೃಷಿಯ ಪರವಾಗಿ ತಾಳಿದ ಧೋರಣೆಯೂ ಮಣ್ಣಿನ ಮಕ್ಕಳ ಸರ್ಕಾರಕ್ಕೆ ಇಲ್ಲವಾಯಿತು.
ಬಿಲ್ ಆಗುತ್ತಿಲ್ಲ; ಅನುದಾನ ಕಡಿಮೆಯಾಗಿದೆ
ಜೆಡಿಎಸ್ ಪ್ರಬಲವಾಗಿರುವ ಮಂಡ್ಯ ಜಿಲ್ಲೆಯಲ್ಲಿ ಪತ್ರಕರ್ತರು ಜೆಡಿಎಸ್ ನಾಯಕರಿಗೆ ಪ್ರಶ್ನೆ ಕೇಳುವುದೇ ಇಲ್ಲ. ತಾವು ಕೇಳುವುದು ಹೋಗಲಿ, ಇತರ ಪತ್ರಕರ್ತರು ಪ್ರಶ್ನೆ ಕೇಳುವುದನ್ನೂ ತಡೆಯುತ್ತಾರೆ. ಹೊರ ಜಿಲ್ಲೆಯಿಂದ ವರ್ಗಾವಣೆ ಆದ ಕೆಲವು ಪತ್ರಕರ್ತರಿಗೆ ಷಾಕ್ ಆಗುವ ಪ್ರಮಾಣಕ್ಕೆ ಈ ಪಕ್ಷ (?ಜಾತಿ) ನಿಷ್ಠೆಯನ್ನು ಅಲ್ಲಿ ಮೆರೆಯಲಾಗುತ್ತದೆ. ಈಗಲೂ ಬಹಿರಂಗವಾಗಿ ಅದನ್ನೇ ಮಾಡುವ ಪತ್ರಕರ್ತರು ಖಾಸಗಿಯಾಗಿಯಂತೂ ಸರ್ಕಾರವನ್ನು ಬೈದುಕೊಳ್ಳುತ್ತಾರೆ. ಏಕೆಂದರೆ, ಈ ಸರ್ಕಾರದ ಅವಧಿಯಲ್ಲಿ ಸಣ್ಣ ಪುಟ್ಟ ಪತ್ರಿಕೆಗಳಿಗೆ ಜಾಹೀರಾತೂ ಕಡಿಮೆಯಾಗಿದೆ!
ಸಣ್ಣ ಪತ್ರಿಕೆಗಳ ಜಾಹೀರಾತಿನ ಸಮಸ್ಯೆ ಇದಲ್ಲ. ಗುತ್ತಿಗೆದಾರರೂ ಬಿಲ್ ಆಗುತ್ತಿಲ್ಲ ಎಂದು ಒದ್ದಾಡುತ್ತಿದ್ದಾರೆ. ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುವ ನೌಕರರಿಗೆ ಸಮಾನವೇತನ ಕೊಡುತ್ತೇವೆಂದು ಹೇಳಿದ್ದ ಕುಮಾರಸ್ವಾಮಿಯವರು ಅಧಿಕಾರಕ್ಕೆ ಬಂದ ಮೇಲೆ ಸುಮಾರು 30,000 ಸಂಖ್ಯೆಯ ಗುತ್ತಿಗೆ ನೌಕರರಿಗೆ ತಿಂಗಳುಗಟ್ಟಲೇ ಸಂಬಳವೇ ಆಗಲಿಲ್ಲ. ಅಷ್ಟೇ ಅಲ್ಲದೇ, ಹಲವಾರು ಇಲಾಖೆಗಳಲ್ಲಿ ಅನುದಾನದ ಕೊರತೆಯೆಂದು ಹೇಳಿ ಇದ್ದ ಗುತ್ತಿಗೆ ನೌಕರರನ್ನೇ ತೆಗೆದುಹಾಕುವ ಕೆಲಸ ನಡೆಯುತ್ತಿದೆ.
ಆದರೆ, ಒಂದು ಕಡೆ ಸಾಲಮನ್ನಾಕ್ಕಾಗಿ ಭಾರೀ ಪ್ರಮಾಣದ ಹಣವನ್ನೇನೂ ಸರ್ಕಾರವು ಬ್ಯಾಂಕುಗಳಿಗೆ ಪಾವತಿಸಿಲ್ಲ. ನಾಲ್ಕೈದು ಕಂತುಗಳಲ್ಲಿ ನೀಡುವ ಬಗ್ಗೆ ಮಾತ್ರ ಹೇಳುತ್ತಿದ್ದಾರೆ. ಇನ್ನೊಂದು ಕಡೆ, ಬೇರೆ ಕೆಲಸಗಳಿಗೂ ಹಣವಿಲ್ಲ ಎಂದು ಕೈ ಚೆಲ್ಲುತ್ತಿದ್ದಾರೆ. ಇದರರ್ಥವೇನು? ಸಂಪನ್ಮೂಲ ಕ್ರೋಢೀಕರಣವು ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರ ಇದ್ದಕ್ಕಿದ್ದಂತೆ ಕಡಿಮೆಯಾಗಿಬಿಟ್ಟಿತೇ?
ಶೋಷಿತ ಸಮುದಾಯಗಳಿಗೆ ವಿಶೇಷ ಭರವಸೆಯ ಅಗತ್ಯ
ಈ ಸರ್ಕಾರವು ಬಂದ ನಂತರ ಅಹಿಂದ ಸಮುದಾಯಗಳ ಮೇಲೆ ವಿಶೇಷ ಪ್ರಹಾರವೇನೂ ಇಲ್ಲ. ಆದರೆ, ನಾವು ಈ ಸಮುದಾಯಗಳನ್ನು ಕಡೆಗಣಿಸುತ್ತಿಲ್ಲವೆಂದು ಸೂಚಿಸುವ ಅಗತ್ಯ ಈ ಸರ್ಕಾರಕ್ಕಂತೂ ಇತ್ತು. ಏಕೆಂದರೆ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೂ, ಅದರ ಮತಗಳಿಕೆಯಲ್ಲಿ ಆದ ಹೆಚ್ಚಳಕ್ಕೆ ಅಹಿಂದ ಸಮುದಾಯಗಳ ಬೆಂಬಲವೂ ಕಾರಣವಾಗಿತ್ತು. ಸ್ವತಃ ಸಿದ್ದರಾಮಯ್ಯನವರನ್ನೂ ಸೇರಿಸಿದಂತೆ ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‍ಅನ್ನು ಸೋಲಿಸಿದ್ದರಲ್ಲಿ ಬಲಾಢ್ಯ ಸಮುದಾಯಗಳ ಸಿಟ್ಟೂ ಕಾರಣವಾಗಿತ್ತು.
ಹೀಗಿರುವಾಗ, ಮೈತ್ರಿ ಸರ್ಕಾರವು ಎಲ್ಲರನ್ನೂ ಜೊತೆಗೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿತ್ತು. ಅದೇನೂ ಬಹಳ ಆದಂತೆ ಕಾಣುವುದಿಲ್ಲ. ಸಚಿವ ಸಂಪುಟ ರಚನೆಯಲ್ಲೂ ದೊಡ್ಡ ಅಸಮತೋಲನ ಉಂಟಾಗಿತ್ತು. ಇದೀಗ ಪುನರ್‍ರಚನೆಯ ಸಂದರ್ಭದಲ್ಲಿ ಅದನ್ನು ಒಂದು ಮಟ್ಟಿಗೆ ಹೋಗಲಾಡಿಸಲು ಪ್ರಯತ್ನಿಸಲಾಗಿದೆ. ಹಾಗೆ ನೋಡಿದರೆ ಶಾಸಕರಿಗೆ ಮಂತ್ರಿ ಸ್ಥಾನ ಕೊಡುವುದು, ಬಡ್ತಿ ಮೀಸಲಾತಿಯ ವಿಚಾರದಲ್ಲಿ ಉತ್ತಮ ಹೆಜ್ಜೆಗಳನ್ನಿಡುವುದರ ಜೊತೆಗೆ, ಜನಸಾಮಾನ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅಧಿಕಾರಸ್ಥರಿಗೆ ಮುಖ್ಯವಾಗಿತ್ತು.
ಉದಾಹರಣೆಗೆ ಸದಾಶಿವ ಆಯೋಗದ ಪರವಾಗಿದ್ದ ಜೆಡಿಎಸ್ ಮತ್ತು ಆ ವಿಚಾರದಲ್ಲಿ ಸಮಸ್ಯೆ ಮಾಡಿಕೊಂಡಿದ್ದ ಕಾಂಗ್ರೆಸ್ ಎರಡೂ ಪಕ್ಷಗಳು ಒಂದಾಗಿರುವ ಸರ್ಕಾರದಲ್ಲಿ ಆ ಕುರಿತು ಒಂದು ನಿಲುವು ತೆಗೆದುಕೊಂಡು ಮಾದಿಗ ಸಮುದಾಯದಲ್ಲಿ ಭರವಸೆ ಮೂಡಿಸುವ ಪ್ರಯತ್ನ ನಡೆಯಬೇಕಿತ್ತು. ಅದರ ಬದಲಿಗೆ ಅದಕ್ಕೆ ಕೈ ಹಾಕುವುದೇ ಬೇಡ ಎಂದು ತೀರ್ಮಾನಿಸಿದಂತಿದೆ.
ಸಾಮಾನ್ಯ ಕನಿಷ್ಠ ಕಾರ್ಯಕ್ರಮವೆಲ್ಲಿ?
ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ಮೊದಲ ದಿನದಿಂದ, ಅವರ ಪ್ರಣಾಳಿಕೆಯಲ್ಲಿದ್ದ ಅಂಶಗಳನ್ನು ಜಾರಿ ಮಾಡುವುದರ ಕಡೆ ವ್ಯವಸ್ಥಿತವಾಗಿ ಹೆಜ್ಜೆ ಹಾಕಿದ್ದರು. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಹೇಳಿಕೊಂಡಿದ್ದು ಆ ಕಾರಣಕ್ಕೇ. ಆ ಪ್ರಣಾಳಿಕೆಯಲ್ಲಿನ ಕೆಲವು ಅಂಶಗಳು ಜಾರಿಯಾಗಲಿಲ್ಲ; ಇನ್ನೂ ಹಲವು ಅರೆಬರೆ ಮಾತ್ರ ಜಾರಿಯಾಗಿದ್ದವು. ಅದರ ಹೊರತಾಗಿಯೂ, ಚುನಾವಣಾ ಪ್ರಣಾಳಿಕೆಯೇ ಸರ್ಕಾರದ ನೀತಿ ನಿರ್ಧಾರಗಳಿಗೆ ಒಂದು ರೆಫರೆನ್ಸ್ ಪಾಯಿಂಟ್ ಆಗುವುದು ಪ್ರಜಾತಂತ್ರದ ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿತ್ತು. ಆದರೆ, ಇಲ್ಲಿ ಪರಸ್ಪರ ಸೆಣೆಸಿದ ಎರಡು ಪಕ್ಷಗಳು ಜೊತೆಗೂಡಿ ಅಧಿಕಾರ ನಡೆಸುವಾಗ, ಎರಡು ಪ್ರಣಾಳಿಕೆಯಿಂದ ಆಯ್ದುಕೊಂಡ ಒಂದು ‘ಸಾಮಾನ್ಯ ಕನಿಷ್ಠ ಕಾರ್ಯಕ್ರಮ’ ರೂಪುಗೊಳ್ಳಬೇಕಿತ್ತು. ಯುಪಿಎ 1 ಸರ್ಕಾರ ರಚನೆಯಾದಾಗ ನಡೆದ ಅಂತಹ ಒಂದು ಪ್ರಯತ್ನವು, ಎಡಪಕ್ಷಗಳ ಪ್ರಾಬಲ್ಯದ ಕಾರಣಕ್ಕೆ, ಹಲವು ಉತ್ತಮ ಅಂಶಗಳ ಜಾರಿಗೂ ಕಾರಣವಾಗಿತ್ತು.
ಈ ಸರ್ಕಾರ ಬಂದಾಗಲೂ ಅಂತಹ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಕುರಿತು ಪ್ರಸ್ತಾಪವಾಗಿತ್ತು. ಅದನ್ನು ಕೆಲವೇ ದಿನಗಳಲ್ಲಿ ರೂಪಿಸುವುದೆಂತಲೂ ಹೇಳಲಾಗಿತ್ತು. ಆದರೆ, ಇದುವರೆಗೂ ಅದು ರೂಪುಗೊಂಡಿಲ್ಲ. ಯಾರೂ ಅದರ ಬಗ್ಗೆ ತಲೆಕೆಡಿಸಿಕೊಂಡಂತೆಯೂ ಇಲ್ಲ.
ಉದ್ಯೋಗ ಸೃಷ್ಟಿ ಮತ್ತು ಗುತ್ತಿಗೆ ನೌಕರರಿಗೆ ಭದ್ರತೆ
ವಾಸ್ತವದಲ್ಲಿ ಈ ಎಲ್ಲಾ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆಯನ್ನು ಒದಗಿಸಿ ಹಂತಹಂತವಾಗಿ ಖಾಯಂ ಮಾಡಿಕೊಳ್ಳಲಾಗುವುದು ಎಂದು ಕುಮಾರಸ್ವಾಮಿಯವರು ಭರವಸೆ ನೀಡಿದ್ದರು. ಪ್ರಣಾಳಿಕೆ ಬಿಡುಗಡೆ ತಡವಾಗುತ್ತಿದ್ದಾಗ, ಪತ್ರಿಕೆಗಳಲ್ಲಿ ಪೂರ್ಣಪುಟದ ಜಾಹೀರಾತನ್ನೂ ನೀಡಿ ಈ ಭರವಸೆಯನ್ನು ಸ್ಪಷ್ಟಪಡಿಸಿದ್ದರು. ಅಭದ್ರತೆಯಲ್ಲಿರುವ ಗುತ್ತಿಗೆ ನೌಕರರ ಪಾಲಿಗೆ ಕುಮಾರಸ್ವಾಮಿ ಕಣ್ಮಣಿ ಆಗಿದ್ದರು. ಅದೇ ರೀತಿ ಉದ್ಯೋಗ ಸೃಷ್ಟಿಯ ಕುರಿತು ಹಲವು ಅಂಶಗಳನ್ನು ಕುಮಾರಸ್ವಾಮಿ ಪದೇ ಪದೇ ಪ್ರಸ್ತಾಪಿಸಿದ್ದರು. ನಿರುದ್ಯೋಗಿಗಳು ಮತ್ತು ಗುತ್ತಿಗೆ ನೌಕರರ ಪರವಾಗಿ ಚುನಾವಣಾಪೂರ್ವ ಆಂದೋಲನ ನಡೆಸಿದ್ದ ‘ಉದ್ಯೋಗಕ್ಕಾಗಿ ಯುವಜನರು’ ವೇದಿಕೆಯ ಪ್ರತಿನಿಧಿಗಳಿಗೂ ನಿರ್ದಿಷ್ಟ ಅಂಶಗಳ ಮೇಲೆ ಭರವಸೆ ನೀಡಿದ್ದರು.
ಆದರೆ, ಆ ನಿಟ್ಟಿನಲ್ಲಿ ಕನಿಷ್ಠ ಪ್ರಯತ್ನವೂ ಸರ್ಕಾರದ ಕಡೆಯಿಂದ ಆಗುತ್ತಿಲ್ಲ. ಅತ್ಯಂತ ಸಂಘಟಿತರಾಗಿರುವ ಮತ್ತು ಚುನಾವಣೆಯಲ್ಲೂ ಪ್ರಜ್ಞಾಪೂರ್ವಕವಾಗಿ ಮತ ಹಾಕುವ ಸಮುದಾಯವಾಗಿ ಬೆಳೆಯುತ್ತಿರುವ ಗುತ್ತಿಗೆ ನೌಕರರ ವಿಚಾರದಲ್ಲಿ ಕುಮಾರಸ್ವಾಮಿಯವರು ಚುನಾವಣೆಗೆ ಮುಂಚೆ ಒಂದು ರೀತಿ, ಮುಖ್ಯಮಂತ್ರಿಯಾದ ನಂತರ ಇನ್ನೊಂದು ರೀತಿ ನಡೆದುಕೊಳ್ಳುತ್ತಿದ್ದಾರೆ. ಹಾಸ್ಟೆಲ್ ಹೊರಗುತ್ತಿಗೆ ನೌಕರರ ವಿಚಾರದಲ್ಲಿ ಸಕಾರಾತ್ಮಕವಾಗಿ ನಡೆದುಕೊಂಡಿದ್ದರಿಂದ ಹುಟ್ಟಿಸಿದ ಭರವಸೆಯೂ, ಇಂದು ಅಲ್ಲಿ ಅಧಿಕಾರಿಗಳ ಕೈ ಮೇಲಾಗುತ್ತಿದ್ದಂತೆ ಹುಸಿ ಹೋಗುತ್ತಿದೆ.
ಜಾತಿ ಪಕ್ಷವೆಂಬ ಪಟ್ಟ ಕಳೆದುಕೊಂಡೀತೇ ಗೌಡರ ಕುಟುಂಬ
ಒಕ್ಕಲಿಗರ ಪಕ್ಷವೆಂಬ ಪಟ್ಟವನ್ನು ಕಳೆದುಕೊಳ್ಳುವುದು ಸ್ವತಃ ಜೆಡಿಎಸ್ ಕುಟುಂಬಕ್ಕೇ ಇಷ್ಟವಿದ್ದಂತಿಲ್ಲ. ಇಲ್ಲದಿದ್ದರೆ ಉತ್ತರ ಕರ್ನಾಟಕದಲ್ಲಿ ಸುದೀರ್ಘ ಕಾಲ ದೇವೇಗೌಡರ ಜೊತೆಗೆ ಉಳಿದುಕೊಂಡಿರುವ ವಿಧಾನಪರಿಷತ್‍ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಯವರಿಗೆ ಏಕೆ ಸಚಿವ ಸ್ಥಾನ ನೀಡಿಲ್ಲವೆಂಬುದು ಯಾರಿಗೂ ಅರ್ಥವಾಗುತ್ತಿಲ್ಲ. ಸಚಿವ ಸಂಪುಟದಲ್ಲಿರುವ ಜೆಡಿಎಸ್ ಮಂತ್ರಿಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರು ಇದ್ದಾರೆ. ಸ್ವತಃ ಮುಖ್ಯಮಂತ್ರಿ ಮತ್ತು ಅವರ ಸೋದರ ರೇವಣ್ಣರಲ್ಲದೇ, ಬೀಗರಾದ ಡಿ.ಸಿ.ತಮ್ಮಣ್ಣರಿಗೂ ಸ್ಥಾನ ಕಲ್ಪಿಸಿದರು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಇನ್ನೊಬ್ಬ ಕುರುಬರಿಗೆ ಸ್ಥಾನ ಕಲ್ಪಿಸಿರಲಿಲ್ಲ. (ಪುನರ್‍ರಚನೆಯ ಸಂದರ್ಭದಲ್ಲಿ ಮೇಟಿಯವರನ್ನು ಮಂತ್ರಿಯನ್ನಾಗಿಸಿದ್ದರೂ, ನಂತರ ಅವರ ಸ್ಥಾನವೂ ಹೋಗಿತ್ತು.)
ಅದರ ಬದಲಿಗೆ ಕೆಲವು ಜಿಲ್ಲೆಗಳಿಗೆ ಎದ್ದು ಕಾಣುವಂತೆ ಅನುದಾನಗಳನ್ನು ದಯಪಾಲಿಸಿದ ಕುಮಾರಸ್ವಾಮಿಯವರ ಧೋರಣೆ ಅಸಮಾಧಾನಕ್ಕೆ ಕಾರಣವಾಯಿತು. ಉತ್ತರ ಕರ್ನಾಟಕದ ರಾಜಕಾರಣಿಗಳ್ಯಾರೂ (ಬಹುಶಃ ಖರ್ಗೆಯವರೊಬ್ಬರನ್ನು ಬಿಟ್ಟರೆ) ಆ ಭಾಗಕ್ಕೆ ವಿಶೇಷವಾದುದ್ದೇನೂ ಮಾಡಿಲ್ಲ ಎಂಬುದು ವಾಸ್ತವ. ಹಾಗೆಂದು ಉತ್ತರ ಕರ್ನಾಟಕದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಬೆಂಗಳೂರು ಕರ್ನಾಟಕದವರು ಎಡವುವಂತೆ ಇಲ್ಲ. ಕಳೆದ ಸಾಲಿನಲ್ಲಿ ಅಂತಹ ಪಟ್ಟ ತೆಗೆದುಕೊಂಡಿರದ ಕುಮಾರಸ್ವಾಮಿ ನಂತರ, ಅದಕ್ಕೆ ತಕ್ಕ ಚುನಾವಣಾ ಪ್ರತಿಫಲ ಬಂದಿಲ್ಲ ಎಂಬ ಕಾರಣಕ್ಕೋ ಏನೋ, ಹೆಚ್ಚಿನ ಮುತುವರ್ಜಿ ವಹಿಸುತ್ತಿಲ್ಲ.
ಕಾಂಗ್ರೆಸ್ಸಿನೊಳಗಿನ ಸಮಸ್ಯೆ
ಜೆಡಿಎಸ್‍ನ ಕುಟುಂಬ ರಾಜಕಾರಣ ಮತ್ತು ವಿರೋಧಿಗಳನ್ನು ತುಳಿಯುವ ದೇವೇಗೌಡರ ಸಾಮಥ್ರ್ಯದ ಅರಿವಿದ್ದೋ ಏನೋ, ಅದರೊಳಗೆ ಬಂಡಾಯವೇನೂ ಕಾಣುತ್ತಿಲ್ಲ. ಆದರೆ, ಕಾಂಗ್ರೆಸ್ಸಿನಲ್ಲಿ ಹಾಗಲ್ಲ. ಮಾಧ್ಯಮಗಳ ಅತಿರೇಕ ಏನೇ ಇದ್ದರೂ, ಅದಕ್ಕೆ ದಾರಿ ಮಾಡಿಕೊಡುತ್ತಿರುವುದು ಕಾಂಗ್ರೆಸ್ ನಾಯಕರೇ ಆಗಿದ್ದಾರೆ. ಕುಮಾರಸ್ವಾಮಿಯವರಿಗೆ ತೊಡಕುಂಟಾಗಿರುವ ಅಂಶದಲ್ಲಿ ಇದೂ ಒಂದಾಗಿದೆ. ಈ ಸರ್ಕಾರ ಯಾವಾಗ ಬೀಳುತ್ತೋ ಎಂಬ ವಾತಾವರಣವಿರುವಷ್ಟೂ ಕಾಲ, ಅಧಿಕಾರಿಗಳು ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮನಸ್ಸಿಟ್ಟು ಕೆಲಸ ಮಾಡುವುದಿಲ್ಲ.
ಈ ವಿಚಾರದಲ್ಲಿ ಸಿದ್ದರಾಮಯ್ಯ ನವರನ್ನೊಳಗೊಂಡಂತೆ ಕಾಂಗ್ರೆಸ್‍ನ ಹಿರಿಯ ನಾಯಕರು ಸ್ಪಷ್ಟ ನಿಲುವು ತಾಳಿ, ಸರ್ಕಾರವನ್ನು ನಡೆಸಲು ಸಂಪೂರ್ಣ ಸಹಕಾರ, ಮಾರ್ಗದರ್ಶನ ನೀಡದಿರುವುದೂ ಪ್ರಮುಖ ಸಮಸ್ಯೆಗಳಲ್ಲೊಂದಾಗಿದೆ.
ಇದು ಎಷ್ಟರಮಟ್ಟಿಗೆ ಸೆಕ್ಯುಲರ್ ಸರ್ಕಾರ?
ಟಿಪ್ಪು ಜಯಂತಿಯನ್ನು ಸಿದ್ದರಾಮಯ್ಯನವರ ಸರ್ಕಾರ ಆರಂಭಿಸಿತ್ತು. ಅದರ ಬಗ್ಗೆ ಜೆಡಿಎಸ್‍ಗೆ ಏನೇ ತಕರಾರುಗಳಿರಬಹುದಾದರೂ, ಮುಖ್ಯಮಂತ್ರಿ ಕುಮಾರಸ್ವಾಮಿ ಅದರ ಬಗ್ಗೆ ನಿರ್ಲಕ್ಷ್ಯದ ಧೋರಣೆ ತಾಳಿರುವುದಂತೂ ಖಂಡನೀಯ. ಹಾಗೆಯೇ ಆರೆಸ್ಸೆಸ್ ಪರಿವಾರದ ಕೋಮುವಾದಿ ರಾಜಕಾರಣಕ್ಕೆ ಕಡಿವಾಣ ಹಾಕುವುದರಲ್ಲೂ ಯಾವ ಕಟ್ಟುನಿಟ್ಟಿನ ಕ್ರಮಗಳನ್ನೂ ಇದುವರೆಗೆ ತೆಗೆದುಕೊಂಡಿಲ್ಲ. ಇದು ಕೇವಲ ಜೆಡಿಎಸ್ ಅಥವಾ ಕುಮಾರಸ್ವಾಮಿಯವರ ವೈಫಲ್ಯ ಮಾತ್ರವಾಗಿರದೇ, ಒಟ್ಟು ಸಮ್ಮಿಶ್ರ ಸರ್ಕಾರದ ಸಮಸ್ಯೆಯಾಗಿದೆ.
ಟೇಕಾಫ್ ಯಾವಾಗಣ್ಣ?
ಇವೆಲ್ಲಾ ಕಾರಣಗಳಿಂದಲೇ ಕುಮಾರಸ್ವಾಮಿಯವರ ಸರ್ಕಾರವು ಇನ್ನೂ ಟೇಕಾಫ್ ಆಗಿಲ್ಲ ಎಂದೆನಿಸುತ್ತಿದೆ. ದೇವೇಗೌಡರು ಮತ್ತು ಸಿದ್ದರಾಮಯ್ಯನವರು ಸೇರಿ ಈ ಬಗ್ಗೆ ಸರಿಯಾದ ಯೋಜನೆ ರೂಪಿಸದೇ ಇದ್ದಲ್ಲಿ, ಯಾವ ಕಾರಣಕ್ಕಾಗಿ ಈ ಸರ್ಕಾರವನ್ನು ರಚಿಸಿದೆವೆಂದು ಎರಡೂ ಪಕ್ಷಗಳು ಹೇಳಿಕೊಳ್ಳಬಹುದೋ ಅದನ್ನು ಸಾಧಿಸಿದಂತೆ ಆಗುವುದಿಲ್ಲ. ಬದಲಿಗೆ ಬಿಜೆಪಿಯು ಸಮಾಜವನ್ನು ಮತ್ತಷ್ಟು ಒಡೆದು, ಅಧಿಕಾರಕ್ಕೆ ಬರಲು ಇವರೇ ಮಣೆ ಹಾಕಿಕೊಟ್ಟಂತೆ ಆಗುತ್ತದೆ ಅಷ್ಟೇ. ಪ್ರಧಾನ ಜವಾಬ್ದಾರಿ ಕುಮಾರಸ್ವಾಮಿಯವರದ್ದೇ ಆದರೂ, ಕಾಂಗ್ರೆಸ್ ಸಹಾ ತನ್ನ ಜವಾಬ್ದಾರಿಯನ್ನು ಮರೆಯುವಂತಿಲ್ಲ. ಈಗಾಗಲೇ 6-7 ತಿಂಗಳ ಹನಿಮೂನ್ ಅವಧಿ ಮುಗಿದು ಹೋಗಿರುವಾಗ ಇನ್ನೂ ಹೆಚ್ಚು ಕಾಲ ತೆಗೆದುಕೊಳ್ಳುವುದೂ ಸಾಧ್ಯವಿಲ್ಲ ಎಂಬುದನ್ನು ಸರ್ಕಾರ ನಡೆಸುವವರು ಎಷ್ಟು ಬೇಗ ಅರಿತರೆ ಅಷ್ಟು ಒಳ್ಳೆಯದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...