ಮಂದಿರ ಮಸೀದಿ

- Advertisement -
- Advertisement -

ಹಿಂದಿ ಮೂಲ: ಮುನ್ಷಿ ಪ್ರೇಮ್‍ಚಂದ್‍ಜಿ
ಕನ್ನಡಕ್ಕೆ: ಸೊಂದಲಗೆರೆ ಲಕ್ಷ್ಮೀಪತಿ |

ಮುನ್ಷಿ ಪ್ರೇಮ್‍ಚಂದ್. ಹಿಂದಿ ಸಾಹಿತ್ಯ ಲೋಕದ ದೊಡ್ಡ ಹೆಸರು. ಮನುಷ್ಯ ಸಂಬಂಧ ಹಾಗೂ ಸ್ನೇಹ ಬಾಂಧವ್ಯಗಳನ್ನೇ ತಮ್ಮ ರಚನೆಗಳ ಸರಕನ್ನಾಗಿಸಿಕೊಂಡಿದ್ದ ಇವರ ಮೂಲ ಹೆಸರು ಧನಪತ್ ರೈ ಶ್ರೀವಾತ್ಸವ್. 1880ರಿಂದ 1936ರವರೆಗೆ ಬರುಕಿದ್ದ ಇವರು ಆರಂಭದಲ್ಲಿ `ನವಾಬ್ ರೈ’ ಎಂಬ ಕಾವ್ಯನಾಮದಿಂದ ಬರೆದರಾದರು ನಂತರ `ಪ್ರೇಮ್‍ಚಂದ್’ ಹೆಸರೇ ಸಾಹಿತ್ಯ ಲೋಕದಲ್ಲಿ ಗಟ್ಟಿಯಾಗಿ ನೆಲೆನಿಂತಿತು. ಸುಮಾರು ಹನ್ನೆರಡಕ್ಕು ಹೆಚ್ಚು ಕಾದಂಬರಿ, 250ಕ್ಕೂ ಮಿಗಿಲಾದ ಕಥೆಗಳನ್ನು ರಚಿಸಿರುವ ಪ್ರೇಮ್‍ಚಂದ್‍ರ ಈ `ಮಂದಿರ ಮಸೀದಿ’ ಕಥೆಯು ಧಾರ್ಮಿಕ ಸೌಹಾರ್ದತೆಯ ಕುರಿತಾದದ್ದು. 1905ರಲ್ಲೇ ರಚನೆಗೊಂಡ ಈ ಕಥೆಯಲ್ಲಿ, ಮಂದಿರ-ಮಸೀದಿಗಳ ಹೆಸರಿನಲ್ಲಿ ಸ್ವಾರ್ಥ ರಾಜಕಾರಣ ಮಾಡಿಕೊಂಡು ಅಮಾಯಕ ಜನರ ನೆತ್ತರು ಹರಿಸಲು ಹವಣಿಸುತ್ತಿರುವ ಇವತ್ತಿನ ಸನ್ನಿವೇಶದ ಪ್ರತಿಫಲನವಿದೆ. ಪುಸ್ತಕ ಪ್ರಕಾಶಕರೂ, ಸ್ವತಃ ಬರಹಗಾರರೂ ಆಗಿರುವ ಸೊಂದಲಗೆರೆ ಲಕ್ಷ್ಮೀಪತಿಯವರು ಈ ಕಥೆಯನ್ನು ಅನುವಾದಿಸಿದ್ದಾರೆ. ತುಸು ಸುದೀರ್ಘ ಎನ್ನಿಸಿದರು ಪ್ರಸ್ತುತತೆಯನ್ನು ಮಡಿಲಲ್ಲಿಟ್ಟುಕೊಂಡಿರುವ ಈ ಕಥೆಯನ್ನು ಎರಡು ಕಂತುಗಳನ್ನು ಪ್ರಕಟಿಸಲಾಗುವುದು. ಮೊದಲ ಭಾಗ ಈ ಸಂಚಿಕೆಯಲ್ಲಿದೆ. ಅಂದಹಾಗೆ, ಕಥೆಯ ಕೊನೆಯ ಪ್ಯಾರಾಗಳಂತೂ ಓದುಗನ ಮನಸ್ಸನ್ನು ತೇವಗೊಳಿಸುತ್ತವೆ. ಅವುಗಳಿಗಾಗಿ ನೀವು ಮುಂದಿನವಾರದವರೆಗೆ ಕಾಯಲೇಬೇಕು.

ಮಂದಿರ ಮಸೀದಿ
ಜಿಲ್ಲೆಯ ಪ್ರಮುಖ ಭೂಮಾಲಿಕರಲ್ಲಿ ಚೌಧುರಿ ಇತರತ್ ಆಲಿಯೂ ಓರ್ವ. ಅವನ ವಂಶಸ್ಥರು ಬ್ರಿಟಿಷರ ಕೈಕೆಳಗೆ ಅನೇಕ ರೀತಿಯಲ್ಲಿ ಸೇವೆಗೈದಿದ್ದರಿಂದ ಸಿಕ್ಕ ಜಹಗೀರಿನಿಂದ ಚೌಧುರಿ ಸಾಹಬ್ ಉಚ್ಛ್ರಾಯ ಸ್ಥಿತಿಗೇರಿದ್ದ. ಕಡಿಮೆ ಅವಧಿಯಲ್ಲೇ ಇಡೀ ಜಿಲ್ಲೆಯಾದ್ಯಂತ ಚೌಧುರಿ ಸಾಹಬ್ ಅತ್ಯಂತ ಶ್ರೀಮಂತ ಹಾಗೂ ಪ್ರಖ್ಯಾತ ವ್ಯಕ್ತಿಯೆನಿಸಿದ್ದ. ಬ್ರಿಟಿಷ್ ಅಧಿಕಾರಿಗಳು ಜಿಲ್ಲೆಗೆ ಪ್ರವಾಸಕ್ಕೆಂದು ಯಾವಾಗಲಾದರೂ ಬಂದರೆ ಚೌಧುರಿ ಸಾಹಬ್‍ನ ಮನೆಗೆ ಭೇಟಿಯನ್ನೀಯುವುದನ್ನು ಮರೆಯುತ್ತಿರಲಿಲ್ಲ. ಆದರೆ ಚೌಧುರಿ ಸಾಹಬ್ ಮಾತ್ರ ಆ ಅತಿಥಿಗಳ ಮುಂದೆ ತಾನಾಗೆ ಹೋಗುತ್ತಿರಲಿಲ್ಲ. ನ್ಯಾಯಾಲಯವನ್ನಾಗಲೀ ಅಥವಾ ಇನ್ನಾವುದೇ ಸಾರ್ವಜನಿಕ ಕಚೇರಿಗಳನ್ನಾಗಲೀ ತಾನು ಹೊಕ್ಕುವುದಿಲ್ಲವೆಂಬ ಪ್ರತಿಜ್ಞೆ ಕೈಕೊಂಡಂತಿತ್ತು ಅವನ ಈ ವರ್ತನೆ. ಕೈಕಟ್ಟಿ, ಶಿರಬಾಗಿ ನಿಂತು ಅವರು ಹೇಳಿದ್ದಕ್ಕೆಲ್ಲ `ಜೀ, ಹುಜೂರ್’ ಎಂದು ಗೋಣಾಡಿಸುವುದು ತನ್ನ ಘನತೆಗೆ ತಕ್ಕುದಲ್ಲವೆಂಬುದು ಅವನು ನಂಬಿಕೆಯಾಗಿತ್ತು. ಸಾಧ್ಯವಾದಷ್ಟು ಮಟ್ಟಿಗೆ ಜಗಳಗಳಿಂದ, ಅದರಿಂದ ನಷ್ಟವಾದರೂ ಸರಿಯೆ, ದೂರವಿರಲು ತನ್ನ ಶಕ್ತಿಮೀರಿ ಪ್ರಯತ್ನಪಡುತ್ತಿದ್ದ. ಜಮೀನು, ಆಸ್ತಿಗೆ ಸಂಬಂಧಿಸಿದಂತೆ ಎಲ್ಲ ವಿಷಯವನ್ನು ಪಾರುಪತ್ಯಗಾರರ ಸುಪರ್ದಿಗೆ ವಹಿಸಿದ್ದ. ಸೇವಕ, ಪಾರುಪತ್ಯೆಗಾರರು, ಹಣವನ್ನು ದುವ್ರ್ಯಯ ಮಾಡುತ್ತಿದ್ದುದು ಬೇರೆ ವಿಷಯ!
ಅರೇಬಿಕ್ ಹಾಗೂ ಪರ್ಷಿಯನ್ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿದ್ದ ಅವನು ಷರಾವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಲ್ಲದೆ ಹಣದ ಮೇಲೆ ಬಡ್ಡಿ ತೆಗೆದುಕೊಳ್ಳುವುದು ಪಾಪವೆಂದು ಬಗೆದಿದ್ದ. ದಿನಕ್ಕೆ ಐದೈದು ಬಾರಿ ಪ್ರಾರ್ಥನೆ, ಪವಿತ್ರ ರಂಜಾನ್ ತಿಂಗಳಲ್ಲಿ ಮೂವತ್ತು ದಿನವೂ ಉಪವಾಸ, ನಿತ್ಯ ಕುರಾನ್ ಪಠಣ ಮಾಡುತ್ತಿದ್ದ. ದೃಢ ಧರ್ಮನಿಷ್ಠನಾದರೂ ಚೌಧುರಿ ಸಾಹಬ್ ಮಾತ್ರ ಯಾವುದೇ ರೀತಿಯ ಮತೀಯ ಸಂಕುಚಿತತೆಯಿಂದ ಕಳಂಕಿತನಾಗಿರಲಿಲ್ಲ. ಪ್ರಾತಃಕಾಲದಲ್ಲಿ ಗಂಗಾನದಿಯಲ್ಲಿ ಮೀಯುವುದು ಅವನ ದಿನಚರಿಯ ಒಂದು ಭಾಗವಾಗಿತ್ತು. ಮಳೆಯಾದರು ಸುರಿಯಲಿ, ಅಲ್ಲಿಕಲ್ಲಾದರು ಬೀಳಲಿ, ಮುಂಜಾನೆ ಐದು ಗಂಟೆಗೆ ಪ್ರತಿದಿನ ಎರಡು ಮೈಲಿ ನಡೆಯುತ್ತಿದ್ದ ನದಿ ದಂಡೆ ಸೇರಲು. ಮನೆಗೆ ಮರಳುವಾಗ ಬೆಳ್ಳಿ ಪಾತ್ರೆಯಲ್ಲಿ ಪವಿತ್ರಗಂಗೆ ತುಂಬಿ ತಂದು ಆ ದಿನ ಅದನ್ನಲ್ಲದೆ ಮತ್ತೇನು ಬಾಯಿಗೆ ಬಿಡುತ್ತಿರಲಿಲ್ಲ. ಚೌಧುರಿ ಸಾಹಬ್‍ಗಿಂತ ಹಿಂದೂ ಋಷಿ ಅಥವಾ ವಿರಕ್ತರ್ಯಾರಾದರು ಪವಿತ್ರಗಂಗೆಯ ಬಗೆಗೆ ಅಂತಹ ಭಕ್ತಿಯನ್ನು ಹೊಂದಿರುವರೆ ಎಂದು ನಂಬಲು ಕಷ್ಟವಾಗುತ್ತಿತ್ತು.
ಪ್ರತಿವಾರ ಇಡೀ ಮನೆಯನ್ನು ಸಗಣಿಯಿಂದ ಸಾರಿಸಲಾಗುತ್ತಿತ್ತು. ಅವನ ಲೌಕಿಕ ನಂಬುಗೆಗಳು, ಕಟ್ಟುಪಾಡಿಗೆ ಬದ್ಧವಾಗಿರಲಿಲ್ಲ. ವರ್ಷವಿಡೀ ಅವನ ಉದ್ಯಾನದಲ್ಲಿ ಪಂಡಿತರು ಕುಳಿತು ಪವಿತ್ರ ಗ್ರಂಥಗಳ ಪಾರಾಯಣ ಮಾಡುತ್ತಿದ್ದರು. ತನ್ನ ಮನೆಗೆ ಆಗಮಿಸುತ್ತಿದ್ದ ಸನ್ಯಾಸಿಗಳಿಗೆ ಆತ ವಿಶಾಲ ಹೃದಯ ಶ್ರೀಮಂತಿಕೆಯಿಂದಲೂ, ಭಕ್ತಿಯಿಂದಲೂ ಆದರಿಸುತ್ತಿದ್ದುದನ್ನು ನೋಡಿದರೆ ಹಿಂದಿನ ರಾಜ ಮಹಾರಾಜರುಗಳು ತೋರುತ್ತಿದ್ದ ಸಾಂಪ್ರದಾಯಿಕ ಆತಿಥ್ಯವನ್ನೂ ಮೀರಿಸುವಂತಿತ್ತು ಅದು. ತನ್ನ ಮನೆಯ ಬಾಗಿಲನ್ನು ಎಲ್ಲ ಬಗೆಯ ಭಿಕ್ಷುಕರಿಂದ ಹಿಡಿದು, ಸತ್ಪುರುಷರೆಲ್ಲರಿಗೂ ತೆರೆದಿಟ್ಟಿದ್ದಾನೆ ಎಂದು ಯಾರು ಬೇಕಾದರೂ ಘಂಟಾಘೋಷವಾಗಿ ಹೇಳುತ್ತಿದ್ದರು.
ಮುಸ್ಲಿಂ ಫಕೀರರಿಗೆ ಅವನ ಖಾಸ ಪಾಕಶಾಲೆಯಲ್ಲಿ ಅಡುಗೆ ತಯಾರಾಗುತ್ತಿತ್ತು. ಪ್ರತಿದಿನ ಸಹಪಂಕ್ತಿ ಭೋಜನಕ್ಕೆ ನೂರಕ್ಕೂ ಹೆಚ್ಚು ಮಂದಿ ನೆರೆಯುತ್ತಿದ್ದರು. ಅತ್ಯುತ್ಕ್ರಷ್ಟ ಕೊಡುಗೈ ದೊರೆಯೆನಿಸಿದ ಚೌಧುರಿ ಸಾಹಬ್ ಯಾರಿಗೂ ಒಂದು ಕವಡೆಯಷ್ಟೂ ಸಾಲ ಕೊಡಬೇಕಾಗಿರಲಿಲ್ಲ. ದೇವರ ದಯೆಯಿಂದ ದಿನಗಳುರುಳಿದಂತೆ ಅವನ ಐಶ್ವರ್ಯ ವೃದ್ಧಿಸುತ್ತಾ ಹೋಯಿತು. ತನ್ನ ಪ್ರಜೆಗಳು ಧಾರ್ಮಿಕ ನೈವೇದ್ಯ ಮಾಡಲು, ಸತ್ತವರ ಅಗ್ನಿಸಂಸ್ಕಾರ ಮಾಡಲು, ವಿವಾಹ ಸಮಾರಂಭಗಳಲ್ಲಿ ಭಕ್ಷ್ಯ-ಭೋಜ್ಯ ಮಾಡಲು ಅಗತ್ಯವಾದಷ್ಟು ಸೌದೆಯನ್ನು ತನ್ನ ಕಾಡಿನಿಂದ ಕಡಿದುಕೊಳ್ಳಬಹುದೆಂದು ಒಂದು ಪರವಾನಾ ಹೊರಡಿಸಿದ್ದ. ಇಂತಹ ಎಲ್ಲ ಸಮಾರಂಭಗಳಿಗೆ ಮರ ಕಡಿಯಲು ಅವನ ಪ್ರಾರಂಭಿಕ ಒಪ್ಪಿಗೆ ಬೇಕಿರಲಿಲ್ಲ. ಹಿಂದೂ ಗುತ್ತಿಗೆದಾರರ ಮದುವೆ ಸಮಾರಂಭಗಳಿಗೆ ಅವನ ಪರವಾಗಿ ಒಬ್ಬ ಪ್ರತಿನಿಧಿ ತಪ್ಪದೇ ಹಾಜರಾಗುತ್ತಿದ್ದ. ಅಂತಹ ಸಮಾರಂಭಗಳಿಗೆ ನೀಡಬೇಕಾಗಿದ್ದ ಹಣ ಸಹ ಮೊದಲೇ ನಿರ್ಧರಿಸಲ್ಪಟ್ಟಿತ್ತು. ಅಂತೆಯೇ `ಕನ್ಯಾದಾನ’ದ ಸಮಯದಲ್ಲೂ ಸಹ. ಮದುವೆ ಸಮಾರಂಭಕ್ಕೆ ಬೇಕಾದ ಆನೆ, ಕುದುರೆ, ಡೇರೆ, ಗುಡಾರ, ಪಲ್ಲಕ್ಕಿ, ಜಮಖಾನ ಮತ್ತಿತರ ತರಹೆವಾರಿಯ ಪರಿಕರಗಳನ್ನು ಚೌಧುರಿ ಸಾಹಬ್ ಮನೆಯಿಂದ ಸುಲಭವಾಗಿ ತರಬಹುದಿತ್ತು. ಇಂತಹ ದಯಾಪರತೆ ಹಾಗೂ ಹೃದಯ ವೈಶಾಲ್ಯದ ಮನುಷ್ಯನಿಗೆ ಜನ ತಮ್ಮ ಪ್ರಾಣವನ್ನಾದರೂ ಅರ್ಪಿಸಲು ಸಿದ್ಧರಿದ್ದರು.
ಚೌದುರಿ ಸಾಹಬ್‍ನಿಗೆ ಠಾಕೂರ್ ಭಜನ್‍ಸಿಂಹ ಎಂಬ ರಜಪೂತ್ ಬಂಟನಿದ್ದ. ಈ ಆರಡಿ ಎತ್ತರದ, ಹರವಾದ ಎದೆಯ ದೃಢಕಾಯದ ವ್ಯಕ್ತಿ ದೊಣ್ಣೆ ವರಸೆಯಲ್ಲಿ ಎತ್ತಿದ ಕೈ. ಅಲ್ಲದೆ ಮಹಾ ಪರಾಕ್ರಮಶಾಲಿ. ಭಯದ ನೆರಳು ಅವನ ಹತ್ತಿರ ಸುಳಿಯುತ್ತಿರಲಿಲ್ಲ. ಚೌಧುರಿ ಸಾಹಬ್ ಅವನನ್ನು ಎಷ್ಟು ಹಚ್ಚಿಕೊಂಡಿದ್ದನೆಂದರೆ ಅವನು ಮೆಕ್ಕಾಯಾತ್ರೆಗೆ ಹೋದಾಗ ಭಜನ್‍ಸಿಂಹನನ್ನು ಜೊತೆಯಲ್ಲಿ ಕರೆದೊಯ್ದಿದ್ದ. ಚೌಧುರಿ ಸಾಹಬ್‍ಗೆ ಅಪಾರ ಸಂಖ್ಯೆಯಲ್ಲಿ ಶತ್ರುಗಳ ಹಿಂಡಿತ್ತು. ಅಕ್ಕಪಕ್ಕದ ಹಳ್ಳಿಯ ಎಲ್ಲ ಭೂಮಾಲಿಕರು ಅವನ ಖ್ಯಾತಿ ಹಾಗೂ ಐಶ್ವರ್ಯ ಕಂಡು ಉರಿದು ಬೀಳುತ್ತಿದ್ದರು. ಕಾರಣ ಹೀನಸ್ಥಿತಿಯಲ್ಲಿರುವವರ ಪರವಹಿಸಲು ಧಾವಿಸುತ್ತಿದ್ದ. ಆತ ಅತ್ಯಂತ ಗೌರವಾರ್ಹವಾದ ಹೆಸರನ್ನು ಗಳಿಸಿದ್ದ. ಏನೇ ಆಗಲಿ, ಭಜನ್‍ಸಿಂಹ ಅವನ ಜೊತೆ ಇರೋವರೆಗೂ ಅವನು ಶತ್ರುವಿನ ಮನೆ ಹೊಸ್ತಿಲಿನಲ್ಲಿ ಮಲಗಲು ಕೂಡ ಹೆದರಬೇಕಾಗಿರಲಿಲ್ಲ. ಕೆಲವೊಮ್ಮೆ ಭಜನ್‍ಸಿಂಹ, ಅವನನ್ನು ಕೊಂಚದರಲ್ಲೆ ಪಾರು ಮಾಡಿದ್ದ. ಮಾರಾಮಾರಿಗೆ ಇವನಷ್ಟು ಸಲೀಸಾಗಿ ಧುಮುಕಲು ಮುಂದೆ ಬರುವ ಮತ್ತೋರ್ವ ದೊರಕುವುದು ವಿರಳವಿತ್ತು. ಪ್ರತಿಸಾರಿ ಭಜನ್ ಸಿಂಹ ಹೊಸಲು ದಾಟಿ ಹೊರ ಹೊರಟನೆಂದರೆ ಚೌಧುರಿ ಸಾಹಬ್‍ಗೆ ವ್ಯಥೆ ಆವರಿಸುತ್ತಿತ್ತು. ಬೇರೆಯವರೊಂದಿಗಿನ ಅವನ ಗುದ್ದಾಟ ನೆನೆಸಿಕೊಂಡು, ಈ ವ್ಯಕ್ತಿ ಹಗ್ಗ ಕಳಚುವುದನ್ನೇ ಕಾಯುತ್ತಿರುವ ಕೊಬ್ಬಿದ ಪ್ರೀತಿಯ ಟಗರಿದ್ದಂತೆ. ಬಿಟ್ಟಿದ್ದೆ ತಡ ಓಡಿ ಯಾರದಾದರೂ ತಲೆ ಜಜ್ಜಿಬಿಡೋಕೆ. ಭಜನ ಸಿಂಹ ಅವನ ಬಳಿ ಇರುವವರೆಗೂ ಯಾರೂ ಕೂಡ ಈ ಮೂರು ಲೋಕದಲ್ಲಿ ಕವಕ್ ಕಿವುಕ್ ಎನ್ನುತ್ತಿರಲಿಲ್ಲ. ಅವನನ್ನು ದೊರೆ ಎನ್ನಿ, ಯಜಮಾನ ಎನ್ನಿ, ದೇವರು ಎನ್ನಿ ಚೌಧುರಿ ಸಾಹಬ್ ಅವನಿಗೆ, ಎಲ್ಲವೂ ಅವನೇ.
ಚೌಧುರಿ ಸಾಹಬ್‍ನ ಈ ನಡವಳಿಕೆಗಳಿಂದ ಮುಸ್ಲಿಂರು ಅಸಹನೆಗೊಂಡಿದ್ದರು. ಅವನು ಶುದ್ಧ ಮುಸ್ಲಿಂನಂತಿರದೆ ದಾರಿ ತಪ್ಪಿರುವನೆಂದು ಅವರ ಭಾವನೆಯಾಗಿತ್ತು. ಅವನ ಈ ವಿಚಿತ್ರ ನಡವಳಿಕೆಗಳು ಅವರಿಗೆ ಅರ್ಥೈಸಲಸದಳವಾದವು. ಅದರಲ್ಲೂ ನಿಜವಾದ ಮುಸ್ಲಿಂನೇ ಆದರೆ ಅವನು ಪವಿತ್ರ ಗಂಗೆಯನ್ನೇತಕ್ಕೆ ಕುಡಿಯಬೇಕು? ಏತಕ್ಕೆ ಹಿಂದೂ ಸನ್ಯಾಸಿಗಳಿಗೆ ಅಂತಹ ಭರ್ಜರಿ ಆದರತೆಯನೀಯಬೇಕು; ಹೋಗಲಿ, ಪವಿತ್ರ ಗ್ರಂಥದ ಪಠಣಕ್ಕೇಕೆ ಪಂಡಿತರನ್ನು ಮನೆಗೆ ಆಹ್ವಾನಿಸಬೇಕು. ಮುಸ್ಲಿಂರಲ್ಲಿನ ಮತಾಂಧರು ಅವನ ವಿರುದ್ಧ ಒಳಸಂಚು ನಡೆಸಲು ಕಾರ್ಯೋದ್ಮುಕ್ತರಾದರು. ಜೊತೆಗೆ ಹಿಂದೂಗಳನ್ನು ಅಪಮಾನಗೊಳಿಸಲು ಕೂಟಗಳನ್ನು ಹೂಡಿದರು. ಅಂತ್ಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ದೇವಾಲಯದ ಮೇಲೆ ಆಕ್ರಮಣ ಮಾಡಿ ಹಿಂದೂಗಳಿಗೆ ಭಾರೀ ಪೆಟ್ಟನ್ನು ಕೊಡಬೇಕೆಂದು ಒಮ್ಮತದ ತೀರ್ಮಾನಕ್ಕೆ ಬಂದರು. ಚೌಧುರಿ ಸಾಹಬ್‍ನ ಆಶ್ರಯದಲ್ಲಿ ತಾವು ಮೆರೆಯಬಹುದೆಂಬ ಹಮ್ಮು ಹಿಂದೂಗಳಿಗಿದ್ದರೆ ಅದು ತಪ್ಪು ಎಂದು ಅವರಿಗೆ ಒಂದೇ ಏಟಿಗೆ ಮನವರಿಕೆ ಮಾಡಿಕೊಡಬೇಕು. ಮಸ್ಲಾ ಮಾತು, ಚೌಧುರಿ ಸಾಹಬ್ ಏನು ಮಾಡಬಲ್ಲ? ಅಕಸ್ಮಾತ್, ಅವನೇನಾದರೂ ಹಿಂದೂಗಳ ಪರವಹಿಸಿದರೆ ಅವನಿಗೂ ಒಂದು ಪಾಠ ಕಲಿಸಿದರೆ ಆಯ್ತು. ಅಲ್ಲಿಗೆ ಅವನ `ಹಿಂದೂ ಪ್ರೇಮ’ ಕೊನೆಗೊಂಡ ಹಾಗೆ.
ಅಂದು ಕಾರ್ಗತ್ತಲೆ. ದೇವಸ್ಥಾನದಲ್ಲಿ ಜನ್ಮಾಷ್ಠಮಿ ಪೂಜೆ ನಡೆಯುತ್ತಿತ್ತು. ತಂಬೂರಿ ಹಿಡಿದ ಓರ್ವ ಬಚ್ಚುಬಾಯಿ ಮುದುಕ ದ್ರುಪದ್ ಹಾಡುತ್ತಿದ್ದ. ಫೇರಾಯಿಸಿದ್ದ ಭಕ್ತರು ಡೋಲು ಖಂಜೀರಾ ಹಿಡಿದು ಕಾತುರದಿಂದ ಕಾಯುತ್ತಿದ್ದರು. ಈ `ರಾಗ’ ಯಾವಾಗ ಮುಕ್ತಾಯಗೊಳ್ಳುತ್ತದೋ ಎಂದು, ಏಕೆಂದರೆ ಅವರು ಭಕ್ತಿಗೀತೆಗಳನ್ನು ಆರಂಭಿಸಬೇಕಿತ್ತು. ಬಳಿಕ, ನೆರೆದ ಭಕ್ತ ಸಮೂಹಕ್ಕೆ ಹಂಚಲು ಪ್ರಸಾದದ ತಯಾರಿ ನಡೆದಿತ್ತು. ಸಾವಿರಾರು ಮಂದಿ ಸ್ತ್ರೀಪುರುಷರು ಮೆರವಣಿಗೆ ವೀಕ್ಷಿಸಲು ನೆರೆದಿದ್ದರು.
ಇದ್ದಕ್ಕಿದ್ದಂತೆ ಲಾಠಿ ಹಿಡಿದ ಮುಸ್ಲಿಂರ ಗುಂಪೆÇಂದು ಬಂದು ದೇವಾಲಯಕ್ಕೆ ಕಲ್ಲು ಬೀರಲು ಪ್ರಾರಂಭಿಸಿತು. ಆ ಗೊಂದಲದ ಮಧ್ಯೆ ಯಾರೋ ಒಬ್ಬ “ಎಲ್ಲಿಂದ ಕಲ್ಲು ತೂರಿ ಬರ್ತಿರೋದು? ಯಾರು ಕಲ್ಲು ಬೀರ್ತಿರೋರು?’’ ಎಂದು ಕೂಗಾಕಿದ. ದೇವಾಲಯದಿಂದ ಕೆಲವರು ಹೊರಬಂದರು. ಈ ತಂಟೆಗೆ ಕೈಹಾಕಿರೋರು ಯಾರೆಂದು ತಿಳಿಯಲು. ಇದೇ ಸಂದರ್ಭಕ್ಕಾಗಿ ಹೊಂಚು ಹಾಕಿ ಕಾಯುತ್ತಿದ್ದ ಮುಸ್ಲಿಂರು ನತದೃಷ್ಟ ಹಿಂದೂಗಳ ಮೇಲೆ ಲಾಠಿ ಬೀಸುತ್ತ ಥಟ್ಟನೆ ಮೇಲೆರಗಿದರು. ನಿರಾಯುಧರೂ, ಅರಕ್ಷಿತರೂ ಆದ ಅವರಲ್ಲಿ ಕೆಲವರು ದೇವಾಲಯದೊಳಗೆ ಓಡಿದರು ತೂರಿಕೊಳ್ಳಲು, ಇನ್ನೂ ಕೆಲವರು ವಿರುದ್ಧ ದಿಕ್ಕಿನಲ್ಲಿ ಪಲಾಯನ ಮಾಡಿದರು. ಕೋಲಾಹಲ ತುತ್ತ ತುದಿಗೇರಿತು.
ಈ ಹೊಡೆದಾಟದ ಸುದ್ದಿ ಚೌಧುರಿ ಸಾಹಬ್‍ಗೆ ಬೇಗನೆ ತಲುಪಿತು. ಅವನು ಭಜನ್ ಸಿಂಹನಿಗೆ “ಹೋಗಿ ನೋಡು ಠಾಕೂರ್, ಅದೇನು ಗದ್ದಲ. ಗೊಂದಲವೆಬ್ಬಿಸೋರ್ಗೆ ಹೇಳು, ಸುಮ್ಮನಿರಿ ಅಂತ. ಕೇಳ್ಲಿಲ್ಲ ಅಂದ್ರೆ ಕೆನ್ನೆಗೆ ಒಂದೆರಡು ಬಾರಿಸು. ಆದರೆ ಎಚ್ಚರವಿರಲಿ, ತೀರಾ ಹೆಚ್ಚು ಕಡಿಮೆ ಏನೂ ಮಾಡ್ಕೋಬೇಡ’’ ಎಂದ.
ಈ ಮಧ್ಯೆ ಠಾಕೂರ್ ಮೌನವಾಗಿ ಹಲ್ಲು ಮಸೆಯುತ್ತ ತನ್ನಲ್ಲಿ ಉಕ್ಕೇರುತ್ತಿರುವ ಅಸಹನೆಯನ್ನು ಬಿಗಿ ಹಿಡಿದು ಕುಳಿತಿದ್ದ. ಮೌನ ಪ್ರಾರ್ಥನೆಗೆ ಚೌಧುರಿ ಸಾಹಬ್‍ನ ಆಜ್ಞೆ ಉತ್ತರದಂತಿತ್ತು. ತನ್ನ ನೆಚ್ಚಿನ ದೊಣ್ಣೆ ಹೆಗಲಿಗೇರಿಸಿ ದೇವಸ್ಥಾನದ ಕಡೆ ದಡದಡನೆ ಹೆಜ್ಜೆ ಹಾಕಿದ. ಅಲ್ಲಿಗೆ ತಲುಪುತ್ತಿದ್ದಂತೆ ಮುಸ್ಲಿಂರ ದಾಂಧಲೆ ಪರಾಕಾಷ್ಠೆತೆಗೇರಿರುವುದು ಅವನ ಗಮನಕ್ಕೆ ಬಂದಿತು. ಹಿಂದೂಗಳನ್ನು ದೇವಾಲಯದೊಳಗಡೆವರೆಗೂ ಓಡಿಸಿಕೊಂಡು ಹೋಗಿದ್ದರು. ಅಲ್ಲದೆ ಈಗ ಅವರ ವರ್ತನೆ ಕುಂಬಾರನ ಅಂಗಡಿಗೆ ನುಗ್ಗಿದ ಗೂಳಿಗಳಂತಿತ್ತು.
ಠಾಕೂರನ ಕಣ್ಣುಗಳಲ್ಲಿ ಆವೇಶದ ಭುಗಿಲುರಿ ಉಕ್ಕಿತು. ಅವನ ಗುಂಡಿಗೆಯಲ್ಲಿ ರಕ್ತ ಕುದಿಯುವಂತಾಯಿತು. ಬೇರಿಡುವ ಕೂಗೊಂದನ್ನು ಹಾಕಿ, ದೇವಾಲಯದೊಳಗೆ ಕಾಲಿಟ್ಟ. ತಂಟೆಕೋರರನ್ನು ಹಿಡಿದು ಬಡಿಯಲು ಪ್ರಾರಂಭಿಸಿದ. ಇವನು ಏಕಾಂಗಿ, ಅವರಾದರೋ ಐವತ್ತು ಮಂದಿ. ಆದರೂ ಹುಲಿಯಂತೆ ಹೋರಾಡಿದ. ರೋಷಾವೇಷದಲ್ಲಿ ಮತ್ತನಾದ ಅವನು ಆ ಮಂದಿಯನ್ನು ಜಜ್ಜಿ ಹಣ್ಣುಗಾಯಿ ನೀರುಗಾಯಿ ಮಾಡುವುದೊಂದನ್ನು ಬಿಟ್ಟು ಬೇರೆ ಏನನ್ನು ಯೋಚಿಸದಾದ. ಆ ಸಮಯದಲ್ಲವನು ಸತ್ತೋರ್ಯಾರು, ಬದುಕ್ದೋರ್ಯಾರು ಎನ್ನುವುದನ್ನು ಲೆಕ್ಕಿಸಲೇ ಇಲ್ಲ. ದೇವರೊಬ್ಬನಿಗೆ ಗೊತ್ತು ಅವನಿಗೆ ಈ ಅತಿಮಾನುಷ ಶಕ್ತಿ ಅದೆಲ್ಲಿಂದ ಬಂತು ಅಂತ. ಯಾವುದೋ ದೈವಿಕಶಕ್ತಿ ತನ್ನ ಬೆಂಬಲಕ್ಕೆ ಬಂತು ಎನ್ನುವ ಭ್ರಮೆ ಅವನಿಗಾಗಿತ್ತು. ಶ್ರೀ ಕೃಷ್ಣ ಪರಮಾತ್ಮನೇ ಅವನಿಗೆ ರಕ್ಷಕನಾಗಿದ್ದಾನೆ ಎನ್ನುವಂತಿತ್ತು. ತಮ್ಮ ಧರ್ಮದ ಪಾವಿತ್ರ್ಯತೆಯನ್ನು ಕಾಪಾಡಲು ಜನರು ಅನೇಕ ಸಖೇದಾಶ್ಚರ್ಯ ಕಾಯಕಗಳನ್ನು ಮಾಡುತ್ತಾರೆ ಎಂಬುದು ಇದರಿಂದ ಜನಜನಿತ.
ಠಾಕೂರ್ ಉದ್ರೇಕದ ರೋಷಾವೇಷದಲ್ಲಿ, ಹುಚ್ಚುತನದಲ್ಲಿ ಯಾರದಾದರೂ ರಕ್ತ ಹರಿಸುತ್ತಾನೆಂಬ ಯೋಚನೆ ಚೌಧುರಿ ಸಾಹಬ್‍ಗೆ ಅವನ ಹಿಂದೆಯೇ ಓಡಿ ಬರುವಂತೆ ಮಾಡಿತು. ದೇವಾಲಯದ ಬಳಿ ಬಂದಾಗ್ಗೆ ಅವನ ಕಣ್ಣಿಗೆ ಹಾಳು ಹೊಡೆದ ದೃಶ್ಯ ಗೋಚರಿಸಿತು. ಓಡಲು ತ್ರಾಣವಿದ್ದವರು ಕಾಲಿಗೆ ಬುದ್ಧಿ ಹೇಳಿದ್ದರು, ಜೀವಭೀತಿಯಿಂದ. ಇನ್ನೂ ಕೆಲವರು ಕೊರಗುತ್ತ ನೆಲದ ಮೇಲೆ ಬಿದ್ದಿದ್ದರು. ಮತ್ತೆ ಕೆಲವರು ನೋವು ತಾಳಲಾರದೆ ಆಕಾಶಭೂಮಿ ಒಂದೇ ಮಾಡಿದ್ದರು. ಚೌಧುರಿ ಸಾಹಬ್ ಇನ್ನೇನು ಠಾಕೂರ್‍ನನ್ನು ಹೆಸರಿಡಿದು ಕೂಗಬೇಕು ಎನ್ನುವಷ್ಟರಲ್ಲಿ ವ್ಯಕ್ತಿಯೊಂದು ಎತ್ತಲಿಂದಲೋ ಓಡಿಬಂದು ಅವನೆದುರು ದೊಪ್ಪನೆ ಕುಸಿದು ಬಿತ್ತು. ಪೆಟ್ಟು ತಿಂದ ಆ ವ್ಯಕ್ತಿಯನ್ನು ಚೌಧುರಿ ಸಾಹಬ್ ಗುರುತಿಸಿದ. ಆ ಕ್ಷಣದಲ್ಲಿ ಅವನಿಗೆ ಪ್ರಪಂಚ ಮಸುಕಾಯಿತು. ಆ ವ್ಯಕ್ತಿ ಮತ್ಯಾರು ಅಲ್ಲ. ಅವನ ಅಳಿಯ! ಸಹೀದ್ ಹುಸೇನ್…. ಅವನ ಐಹಿಕ ಆಸ್ತಿಯ ಏಕಮೇವ ದಾತಾರ!
ಸಹೀದ್‍ನನ್ನು ಹಿಡಿದೆತ್ತಲು ಮುಂಬಾಗಿದ ಚೌಧುರಿ ಸಾಹಬ್ ಠಾಕೂರನ ಹೆಸರಿಡಿದು ಕೂಗುತ್ತ “ಬೇಗ ಬಾ… ಲಾಟೀನು…. ಲಾಟೀನು ತಾ….! ಅಯ್ಯೊ! ನನ್ನ ಸಹೀದ್!’’ ಎಂಬ ಆಕ್ರಂದನ ಅವನ ಬಾಯಿಂದ ಹೊರಬಿತ್ತು. ಠಾಕೂರ್‍ನಿಗೆ ತತ್‍ಕ್ಷಣ ಜಂಘಾಬಲ ಉಡುಗಿ ಹೋಯಿತು. ಆತುರಾತುರದಲ್ಲಿ ಲಾಟೀನೊಂದನ್ನು ಕಿತ್ತುಕೊಂಡು ಓಡಿಬಂದ. ನೆಲದ ಮೇಲೆ ಹೊಟ್ಟೆ ಮಖಾಡೆಯಾಗಿ ಬಿದ್ದಿರುವವನು ವಾಸ್ತವವಾಗಿ ಸಹೀದ್‍ನೆ! ತಲೆ ಒಡೆದಿದೆ, ರಕ್ತ ಧಾರಾಕಾರವಾಗಿ ಸುರಿಯುತ್ತಿದೆ. ದುಃಖತಪ್ತ ಚೌಧುರಿ ಸಾಹಬ್ ಹಣೆಹಣೆ ಚಚ್ಚಿಕೊಳ್ಳುತ್ತ “ಠಾಕೂರ್, ನನ್ನ ಬಾಳಿನ ಜ್ಯೋತೀನೂýý ಆರಿಸಿಬಿಟ್ಟೆಲ್ಯಪ್ಪಾ’’ ಎಂದು ರೋಧಿಸಲಾರಂಭಿಸಿದ.
ಠಾಕೂರ್ ಅಡಿಯಿಂದ ಮುಡಿಯವರೆಗೂ ತರತರನೆ ತರಗುಟ್ಟುತ್ತ “ಸಾಬ್, ದೇವ್ರಾಣೆಗೂ ನನ್ಗೆ ಅವರ ಗುರ್ತು ಸಿಗಲಿಲ್ಲ’’ ಎಂದ. “ಇಲ್ಲಪ್ಪ, ನಾ….. ನಿನ್ನ ದೂಷಿಸುತ್ತಿಲ್ಲ. ದೇವರ ಪವಿತ್ರ ನೆಲೆಯನ್ನು ಯಾರಿಗೂ ಅತಿಕ್ರಮ ಪ್ರವೇಶ ಮಾಡುವ ಹಕ್ಕಿಲ್ಲ. ನನ್ನ ದುಃಖ ಇಷ್ಟೇ; ನನ್ನ ವಂಶದ ಕುಡಿ ಸುರಟಿ ಹೋಯ್ತಲ್ಲ, ಅದರಲ್ಲೂ ನಿನ್ನ ಕೈಯಿಂದಾನೆ! ನನಗಾಗಿ ನಿನ್ನ ಪ್ರಾಣನೇ ಕೊಡೋಕೆ ಸಿದ್ಧನಿದ್ದ ನಿನ್ನನ್ನೇ ಆ ಅಲ್ಲಾ ಆರಿಸಿಕೊಂಡನಲ್ಲ ನನ್ನ ಸರ್ವನಾಶಕ್ಕೆ!’’ ಹೀಗೆನ್ನುವಾಗ ಚೌಧುರಿ ಸಾಹಬ್‍ನ ಕಪೆÇೀಲದ ಮೇಲೆ ಕಣ್ಣೀರು ಧಾರೆಧಾರೆಯಾಗಿ ಉರುಳುತ್ತಿತ್ತು. ಠಾಕೂರ್ ನೆಲಕ್ಕೆ ಬೇರು ಬಿಟ್ಟಿದ್ದ. ಅಪರಾಧ ಪ್ರಜ್ಞೆ ಮತ್ತು ಪ್ರಾಯಶ್ಚಿತ ಅವನನ್ನು ನೆಲಕಚ್ಚಿಸಿತ್ತು. ತನ್ನ ಮಗನೇ ಸತ್ತಿದ್ದರೂ ಇಷ್ಟೊಂದು ದುಃಖ ಅವನಿಗೆ ಆಗುತ್ತಿರಲಿಲ್ಲ. ಆದರೆ ಓ! ತನ್ನ ಕೈಯಾರೆ ತಾನೇ ತನ್ನ ಸ್ವಾಮಿಯ ಸರ್ವನಾಶಕ್ಕೆ ಕಾರಣನಾದೆನಲ್ಲ. ಅವನ ಹುಬ್ಬಿನ ಮೇಲಿನ ಒಂದೇ ಒಂದು ತೊಟ್ಟು ಬೆವರಿನ ಹನಿಯ ರಕ್ಷಣೆಗೂ ತನ್ನದೇ ರಕ್ತ ಬಸಿಯಲು ಸಿದ್ಧನಿದ್ದ ಆತ, ಕೇವಲ ಅವನಿಗೆ ಯಜಮಾನ ಮಾತ್ರನಾಗಿರದೆ ಅವನ ಆರಾಧ್ಯ ದೈವ ಸಹ ಆಗಿದ್ದ. ಅವನ ಕಣ್ಸನ್ನೆಯೇ ಸುಗ್ರೀವಾಜ್ಞೆ. ಈಗ ಅವನೇ- ಅದೇ ವ್ಯಕ್ತಿಯೇ, ಅವನ ವಂಶದ ಕುಡಿಯನ್ನು ಬೇರುಸಹಿತ ಕಿತ್ತು ಹಾಕಿದನಲ್ಲ.
ತನ್ನ ಹೃದಯದಲ್ಲಿ ಪೆÇೀಷಿಸಿದ ವಿಶ್ವಾಸಘಾತಕ ಸರ್ಪ ಅವನಾಗಿದ್ದ, ಒಡೆಯನಿಗೆ.
“ಸಾಬ್, ನನಗಿಂತ ಭಾಗ್ಯಹೀನ ಇನ್ಯಾರಿದ್ದಾರೆ? ನನ್ನ ಮರ್ಯಾದೆ ಶಾಶ್ವತವಾಗಿ ಮುಕ್ಕಾಯಿತು’’ ಎಂದ ಗದ್ಗದಿತನಾಗಿ.
ಈ ಮಾತುಗಳನ್ನು ಅವನಾಡುತ್ತಿದ್ದಂತೆ, ಠಾಕೂರ್ ತನ್ನ ಸೊಂಟದಿಂದ ಚಾಕುವನ್ನು ಹೊರಗಿರಿದ. ಸ್ವಯಂಕೃತಾಪರಾಧದ ಅಪಮಾನವನ್ನು ತನ್ನದೇ ರಕ್ತದಿಂದ ತೊಳೆಯಲು ನಿಶ್ಚಯಿಸಿದ. ಆಗ ಚೌಧುರಿ ಸಾಹಬ್ ಅವನ ಕೈಯಿಂದ ಚಾಕು ಕಿತ್ತುಕೊಳ್ಳುತ್ತಾ “ಏನು ಮಾಡ್ತಿದ್ದೀಯಾ? ಮೈಮೇಲೆ ಪ್ರಜ್ಞೆ ಇರಲಿ. ವಿಧಿ ನನ್ಗೆ ಇದನ್ನು ಕಾಯ್ದಿಟ್ಟಿತ್ತು. ಅದು ನಿನ್ನ ತಪ್ಪಲ್ಲ. ಏನು ನಡೆಯಿತೋ ಅದೆಲ್ಲಾ ಅಲ್ಲಾನ ಇಚ್ಛೆ. ಅಕಸ್ಮಾತ್, ನಾನೇನಾದರೂ ಸೈತಾನನಿಗೆ ಕೈವಶವಾಗಿ ಸೋತು ಈ ದೇವಾಲಯ ಹಾಗೂ ಅದರಲ್ಲಿನ ಮೂರ್ತಿಯನ್ನು ಭಗ್ನಗೊಳಿಸಿz್ದÉೀಯಾದರೆ ಆಗ ನೀನು ನನ್ನನ್ನೂ ಮುಗಿಸ್ತಿದ್ದೆ. ನನ್ನ ಕೊಂದಿದ್ದಕ್ಕೆ ನಿನ್ನನ್ನು ನಾನು ಕ್ಷಮಿಸಬಹುದಿತ್ತಷ್ಟೇ. ಮತ್ತೊಬ್ಬರ ಧರ್ಮವನ್ನು ಹೀಯಾಳಿಸುವುದಕ್ಕಿಂತ ದೊಡ್ಡ ಪಾಪ ಮತ್ತೊಂದಿಲ್ಲ. ನಿನ್ನ ಮೇಲೆ ನನಗ್ಯಾವ ದ್ವೇಷವೂ ಇಲ್ಲ ಎನ್ನುವುದು ಆ ಅಲ್ಲಾನಿಗೆ ಗೊತ್ತು. ನನಗೀಗ ಈ ಹೃದಯ ಚೂರಾಗ್ತಿದೆ ಅಂತ ಅನ್ನಿಸ್ತಿದೆ. ಈ ದುರಂತ ತಂದ ಆಘಾತ ಎಂದಿಗೂ ಶಮನವಾಗದು. ನಾನೇನಾದರೂ ನಿನ್ನ ಜಾಗದಲ್ಲಿ ಇದ್ದಿದ್ದರೆ, ನೀನು ಈಗೇನು ಮಾಡಿದೆಯೋ ಅದನ್ನೇ ನಾನು ನಿಸ್ಸಂಶಯವಾಗಿಯೂ ಮಾಡುತ್ತಿದ್ದೆ. ನನ್ನನ್ನು ನನ್ನ ಮನೆಯವರು ಮೂದಲಿಸುತ್ತಾರೆ ಅಂತ ಗೊತ್ತು. ನನ್ನ ಮಗಳು ತನ್ನ ಗಂಡನ ಪ್ರಾಣಕ್ಕೆ ಎರವಾದವರ ಮೇಲೆ ಮುಯ್ಯಿ ತೀರಿಸಿಕೊಳ್ಳಿ ಎಂದು ಕೇಳ್ತಾಳೆ, ಇಡೀ ಮುಸ್ಲಿಂ ಸಮಾಜ ನನ್ನ ರಕ್ತಕ್ಕೆ ತಹತಹಿಸುತ್ತದೆ. ನನ್ನನ್ನು ಕಾಫೀರ್ ಎಂದು ಕರೆಯುತ್ತಾರೆ. ನಾಸ್ತಿಕನೋರ್ವ, ಪ್ರಾಯಶಃ ಕೆಲವು ಕಂಕಣಬದ್ಧ ಯುವಕರು ನನ್ನನ್ನು ಕೊಲ್ಲಲು ನಿರ್ಧರಿಸಲೂಬಹುದು. ಆದರೆ ಸತ್ಯ ಮತ್ತು ನ್ಯಾಯದಿಂದ ನಾನು ಎಂದೂ ವಿಮುಖನಾಗಲಾರೆ. ಇನ್ನೂ ಕತ್ತಲೆ ಇದೆ. ಓಡಿಹೋಗು ಇಲ್ಲಿಂದ. ನನ್ನ ಎಸ್ಟೇಟಿನಲ್ಲಿ ಒಂದೆಡೆ ಬಚ್ಚಿಟ್ಟಿಕೊ. ಅತ್ಲ ನೋಡು, ಯಾರೋ ಮುಸ್ಲಿಂರು ಇತ್ಲಾಗಿ ಬತ್ತಾವ್ರೆ. ಅವರ ಜೊತೆ ನಮ್ಮ ಮನೆಯವರೂ ಇರುವಂತಿದೆ. ಓಡು…. ಓಡು!’’ ಎಂದ.
ಚೌಧುರಿ ಸಾಹಬ್‍ನ ಎಸ್ಟೇಟಿನಲ್ಲಿ ಒಂದು ವರ್ಷ ಪೂರಾ ಅಜ್ಞಾತವಾಸಗೈದ ಠಾಕೂರ್ ಭಜನ್‍ಸಿಂಹ. ಒಂದು ಕಡೆ ಮುಸ್ಲಿಂರು, ಮತ್ತೊಂದು ಕಡೆ ಪೆÇಲೀಸರು ಅವನಿಗಾಗಿ ಕಾದರು. ಆದರೆ ಚೌಧುರಿ ಸಾಹಬ್ ಅವನನ್ನು ಗೋಪ್ಯವಾಗಿ ಬಚ್ಚಿಟ್ಟಿದ್ದ ಸುರಕ್ಷಿತ ನೆಲೆಯಲ್ಲಿ. ಸಮಾಜದ ಮೂದಲಿಕೆ, ಮನೆಯವರ ನಿಂದನೆ, ಪೆÇಲೀಸರ ಕಿರುಕುಳ ಮುಲ್ಲಗಳ ಬೆದರಿಕೆಯನ್ನು ಸಮಚಿತ್ತದಿಂದ ಸಹಿಸಿಕೊಂಡು ಬಂದ. ಆದರೂ ಕೂಡ ಠಾಕೂರನ ರಹಸ್ಯ ನೆಲೆಯ ಗುಟ್ಟನ್ನು ರಟ್ಟು ಮಾಡಲಿಲ್ಲ. ಭಜನ್ ಸಿಂಹನಂತೆ ವಿಧೇಯ, ನಂಬಿಗಸ್ಥ ಸೇವಕನನ್ನು ಅವನುಸಿರಿರುವವರೆಗೂ ದಯಾಶೂನ್ಯ ಕಾನೂನಿನ ಇಕ್ಕಳಕ್ಕೆ ಸಿಲುಕಿಸಲು ಅವನು ಸಿದ್ಧನಿರಲಿಲ್ಲ. ಅವನ ಎಸ್ಟೇಟಿನ ಮನೆಯ ಮೇಲೆ ಅನೇಕ ಬಾರಿ ಪೆÇಲೀಸರು ದಾಳಿ ನಡೆಸಿದರು. ಮುಸ್ಲಿಂರಲ್ಲಿಯ ಮತಾಂಧರು ಅವನ ಮನೆಯಾಳುಗಳ ಮೂಲಕ ಸುದ್ದಿ ತಿಳಿಯಲು ಯತ್ನಿಸಿ ವಿಫಲರಾದರು. ಚೌಧುರಿ ಸಾಹಬ್‍ನ ಹಲವು ಅದೃಶ್ಯ ದಯಾಪರ ಗುಣದಂತೆಯೇ, ಭಜನ ಸಿಂಹ ಈಗ ಅದೃಶ್ಯನಾಗಿ ಉಳಿದುಬಿಟ್ಟ.
ಚೌಧುರಿ ಸಾಹಬ್ ತನ್ನಿಂದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿರುವುದನ್ನು ಕಂಡ ಭಜನ್ ಸಿಂಹ ಸಹಿಸಲಾಗದ ಬೇಗುದಿಯನ್ನು ಅನುಭವಿಸಿದ. ಆಗಾಗ್ಗೆ ತನ್ನ ಒಡೆಯನ ಬಳಿ ಹೋಗಿ “ಪೆÇಲೀಸರಿಗೆ ನನ್ನನ್ನು ಒಪ್ಪಿಸಿ’’ ಎನ್ನುತ್ತಿದ್ದ. ಆಗೆಲ್ಲ ಚೌಧುರಿ ಸಾಹಬ್ ಇನ್ನೂ ಸ್ವಲ್ಪ ದಿನ ಕಳೀಲಿ, ತಾಳು ಎಂದು ಸಮಾಧಾನ ಹೇಳಿ ಅವನನ್ನು ಹಿಂದಕ್ಕೆ ಕಳಿಸುವುದು ನಡೆದೇ ಇತ್ತು.
ಮಾಗಿಕಾಲ ಕಾಲಿಟ್ಟಿತ್ತು. ಹುಲುಸಾಗಿ ಬೆಳೆದ ತನ್ನ ಎಸ್ಟೇಟಿನ ಫಸಲನ್ನು ವೀಕ್ಷಿಸಲು ಚೌಧುರಿ ಸಾಹಬ್ ಹೊರಟ. ಇತ್ತೀಚೆಗಂತೂ ಅವನು ಮನೆಯಲ್ಲಿ ಸಿಗುವುದೇ ಅಪರೂಪ. ತನ್ನ ಮನೆಯವರು ಎಸೆವ ಉಗ್ರ ಕೂರಂಬುಗಳ ಮಡುವಿನಿಂದ ತಪ್ಪಿಸಿಕೊಳ್ಳಲು ಇದ್ದುದು ಇದೊಂದೇ ಮಾರ್ಗ. ಆಗಷ್ಟೇ ಊಟ ಮುಗಿಸಿ ಕುಳಿತಿದ್ದ. ಭಜನ್ ಸಿಂಹ ಎದುರು ಬಂದು ನಿಂತ. ಅವನಲ್ಲಿನ ಬದಲಾವಣೆ ಕಂಡು ಚೌಧುರಿ ಸಾಹಬ್‍ಗೆ ಅತ್ಯಾಶ್ಚರ್ಯವಾಯಿತು. “ಸಾಬ್, ಕ್ಷೇಮತಾನೆ?’’ ಎಂದ ಠಾಕೂರ್ ತಾನೆ ಮುಂದಾಗಿ.
“ಕ್ಷೇಮ, ಎಲ್ಲ ಅಲ್ಲಾನ ದಯೆ. ಅಲ್ಲ, ನೀನು ಗುರುತು ಸೀಗೋದೆ ಕಷ್ಟ ಈಗ ಇಷ್ಟೊತ್ತಿನಲ್ಲಿ ಎಲ್ಲಿಂದ ಬತ್ತಿದ್ದೀ?’’
“ಸಾಬ್, ನನ್ನಿಂದ ಈ ಕಣ್ಣು ಮುಚ್ಚಾಲೆ ಆಟ ಆಡೋಕೆ ಆಗಲ್ಲ. ತಾವು ಅಪ್ಪಣೆ ಕೊಟ್ಟರೆ, ನಾನೇ ಮ್ಯಾಜಿಸ್ಟ್ರೇಟರ ಮುಂದೆ ಹೋಗಿ ನಿಲ್ತೀನಿ. ಆಮೇಲೆ ನನ್ನ ಹಣೇಲಿ ಏನು ಬರೆದಿದೆಯೋ ಅದರಂಗಾಗ್ಲಿ. ನನ್ನಿಂದಾಗಿ ತಮಗೆ ಎಷ್ಟೊಂದು ಕಷ್ಟ. ಇನ್ನು ಹೆಚ್ಚು ದಿನ ನನ್ನ ಕೈಲಿ ಈ ಕಳ್ಳಾಟ ಸಹಿಸಲಿಕ್ಕಾಗಲ್ಲ.’’
“ಬೇಡ, ಠಾಕೂರ್, ಬೇಡ. ನಾನು ಬದುಕಿರೋವರೆಗೂ ಅದು ಸಾಧ್ಯವಿಲ್ಲ. ತಿಳಿದೂ, ತಿಳಿದೂ ನಿನ್ನನ್ನು ನಾನು ಎಂದಿಗೂ ನಾಯಿಗಳ ಕೈಗೆ ದೂಡಲ್ಲ. ಪೆÇಲೀಸ್ನೋರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಾಕ್ಷಿಗಳನ್ನು ತಿರುಚುತ್ತಾರೆ. ಆಮೇಲೆ ನೀನು ಸಕಾರಣವಿಲ್ಲದೆ ನಿನ್ನ ಜೀವನಾನ ಹಾಳು ಮಾಡಿಕೊಳ್ತಿಯಾ. ನನಗೋಸ್ಕರ ನೀನು ಈ ಹಿಂದೆ ಹಲವು ಸಾರಿ ನಿನ್ನ ಪ್ರಾಣವನ್ನೇ ಗಂಡಾಂತರಕ್ಕೆ ತಂದುಕೊಂಡಿದ್ದೆ ಅಲ್ವಾ. ಇವತ್ತು ನಿನಗೆ ಇಷ್ಟು ಸಹಾಯ ಮಾಡಕ್ಕೆ ಸೋತರೆ ನನ್ನಂತ ದೊಡ್ಡ ಕೃತಘ್ನ ಮತ್ತೊಬ್ಬನಿಲ್ಲ. ಮತ್ತೆಂದೂ ಈ ವಿಷಯ ಎತ್ತಬೇಡಪ್ಪ.’’
“ಆದರೆ ಸಾಬ್, ಯಾರಾದರೂ ಅಕಸ್ಮಾತ್…’’
“ಅದರ ಬಗ್ಗೆ ಭಯ ಬಿಡ್ಬಿಡು. ಎಲ್ಲಿವರೆಗೆ ನನ್ಗೆ ಕೆಡುಕು ಮಾಡೋಕೆ ಅಲ್ಲಾನಿಗೆ ಮನಸ್ಸಿಲ್ಲವೋ ಅಲ್ಲೀವರೆಗೆ ನನ್ನ ತಲೆ ಮೇಲಿನ ಒಂದು ಕೂದಲನ್ನು ಅಲ್ಲಾಡಿಸಕ್ಕಾಗಲ್ಲ ಯಾರಿಂದ್ಲೂ. ನೀನೀಗ ಹೋಗು. ಹೆಚ್ಚು ಹೊತ್ತು ಇಲ್ಲಿರೋದು ಒಳ್ಳೇದಲ್ಲ.’’
“ಜನ ನಿಮ್ಮ ಸಹವಾಸ ಬಿಟ್ಟಿದ್ದಾರೆ ಅಂತ ಕೇಳ್ದೆ.’’
“ಶತ್ರುಗಳಿಂದ ದೂರ ಇರೋದು ಒಳ್ಳೇದಲ್ವಾ.’’ ಆದರೆ ಠಾಕೂರಿನ ಮೆದುಳಿನಲ್ಲಿ ಆಲೋಚನೆಗಳು ಆಗಲೇ ಬೇರು ಬಿಟ್ಟಿದ್ದವು. ಅವುಗಳನ್ನು ಅಲುಗಾಡಿಸುವುದು ಸಾಧ್ಯವಿರಲಿಲ್ಲ. ಈ ಭೇಟಿ ಅವನ ಸಂಕಲ್ಪವನ್ನು ಮತ್ತಷ್ಟು ಗಟ್ಟಿ ಮಾಡಿತು. “ಚೌಧುರಿ ಸಾಬ್ ಅಲೆಮಾರಿಯಂತೆ ಅಲೆಯುತ್ತಿದ್ದಾರೆ ನನ್ನಿಂದಾಗಿ. ಅವರನ್ನು ರಕ್ಷಿಸಲು ಇಲ್ಲಿ ಯಾರಿದ್ದಾರೆ. ಯಾರಾದರೂ ಬಂದು ಮೇಲೆ ಬೀಳ್ಬಹುದು. ಅದೇನು ಶಾಪನೋ ನನ್ದು’’ ಎನ್ನುತ್ತ ವ್ಯಾಕುಲನಾಗಿ ಆತ್ಮನಿಂದನೆಯಲ್ಲಿ ತೊಡಗಿದ.
ಮರುದಿನ ಮುಂಜಾನೆ ಠಾಕೂರ್ ಜಿಲ್ಲಾ ಮ್ಯಾಜಿಸ್ಟ್ರೇಟರ ಬಂಗಲೆಯಲ್ಲಿ ಹಾಜರಾದ. ಆ ಆಂಗ್ಲ ಸಾಹೇಬ “ಇಲ್ಲಿವರ್ಗೆ ಚೌಧುರಿ ಆಶ್ರಯದಲ್ಲಿ ಅವಿತಿಟ್ಟುಕೊಂಡಿದ್ದೆಯಾ?’’ ಎಂದು ಪ್ರಶ್ನಿಸಿದ.
“ಇಲ್ಲ ಸಾಬ್, ಪ್ರಾಣ ಭಯದಿಂದ ನಾ.. ನೇ..
ಚೌಧುರಿ ಸಾಹಬ್‍ಗೆ ಈ ವಿಷಯ ಕೇಳಿ ಪರಮಾಶ್ಚರ್ಯವಾಯಿತು. ಈಗೇನು ಮಾಡುವುದು? ಅವನ ಪರವಾಗಿ ಒಬ್ಬ ವಕೀಲನನ್ನು ನೇಮಿಸದ ಹೊರತು ಠಾಕೂರನನ್ನು ಬದುಕಿಸಲು ಸಾಧ್ಯವಿಲ್ಲ. ಅವನ ಪರವಹಿಸಿದರೆ ಇಸ್ಲಾಂ ಜಗತ್ತಿನಲ್ಲಿ ಕೋಲಾಹಲವೇಳುತ್ತದೆ. ಇಸ್ಲಾಂನ `ಪಟ್ವಾ’ಗಳು ಎಲ್ಲ ದಿಕ್ಕಿನಿಂದ ಮುಸುಕುತ್ತವೆ. ಆದರೆ ಮುಸ್ಲಿಂರ್ಯಾರು ಅಂತಹ ಯಾವುದೇ ಸಂದಿಗ್ಧಕ್ಕೆ ಸಿಲುಕಿರಲಿಲ್ಲ. ಕೊಲೆಗಡುಕನಿಗೆ ಮರಣದಂಡನೆಯಾಗುವವರೆಗೂ ನಾವು ವಿಶ್ರಾಂತಿಯನ್ನು ಹೊಂದಕೂಡದೆಂಬ ತೀರ್ಮಾನಕ್ಕೆ ಅವರು ಬಂದುಬಿಟ್ಟಿದ್ದರು. ಈ ಉz್ದÉೀಶಕ್ಕಾಗಿ ಒಂದು ನಿಧಿಯನ್ನು ಸ್ಥಾಪಿಸಿದರು. ಈ ನಿಧಿಗೆ ಉದಾರವಾಗಿ ಧನಸಹಾಯ ಮಾಡಬೇಕೆಂದು ಮಸೀದಿಗಳ ಮೂಲಕ ಮುಲ್ಲಾಗಳು ಮನವಿ ಮಾಡಿದರು. ಜನರು ಚಂದಾ ಎತ್ತಲು ಮನೆಯಿಂದ ಮನೆಗೆ ಹೊರಟರು. ನ್ಯಾಯಾಲಯದ ಖಟ್ಲೆ ಹೋಗಿ ಈಗದು ಧಾರ್ಮಿಕ ಜಗಳವಾಗಿ ಪರಿವರ್ತಿತವಾಯಿತು. ರಂಗಸ್ಥಳದ ಮೇಲೆ ಮೂಡಿದ ಬೆಳಕಿನಲ್ಲಿ ತಮ್ಮ ಪಾಲನ್ನು ದೋಚಲು ಮುಸ್ಲಿಂ ವಕೀಲರು ಧುಮುಕಿದರು. ತಮ್ಮ ಧರ್ಮದ ಪಾವಿತ್ರ್ಯತೆಯನ್ನು ಸಂರಕ್ಷಿಸುವ ಯಾವ ಧರ್ಮಯುದ್ಧ ಶೀಘ್ರವೇ `ಜಿಹಾದ್’ ಆಯಿತೋ ಅದರಲ್ಲಿ ಭಾಗವಹಿಸಲು ಪಕ್ಕದ ಜಿಲ್ಲೆಗಳಿಂದ ಅವರು ತಂಡೋಪತಂಡವಾಗಿ ಧಾವಿಸಿದರು.
ಈ ನಡುವೆ ಭಜನ್ ಸಿಂಹನ ಪ್ರಕರಣವನ್ನು ಏನೇ ಆಗಲಿ ಹೋರಾಡಿ ಗೆಲ್ಲಬೇಕೆಂದು ಚೌಧುರಿ ಸಾಹಬ್ ನಿರ್ಧರಿಸಿದ. ಠಾಕೂರ್ ಕಾನೂನಿನ ಕಣ್ಣಿನಲ್ಲಿ ಸಂಪೂರ್ಣವಾಗಿ ಮುಗ್ಧ ಎನ್ನುವುದು ಅವನಿಗೆ ಸ್ಪಷ್ಟವಾಗಿ ಗೋಚರಿಸಿತು. ಅಲ್ಲದೆ ಓರ್ವ ಮುಗ್ಧನ ಪ್ರಾಣವನ್ನು ಉಳಿಸಲು ಯಾವನಿಗೂ ಹೆದರಲು ಸಕಾರಣಗಳು ಅವನಿಗೆ ತೋಚಲಿಲ್ಲ. ತತ್ಕಾಲಕ್ಕೆ ಮನೆ ತ್ಯಜಿಸಿ ನಗರದಲ್ಲಿ ವಾಸಿಸಬೇಕೆಂದು ನಿರ್ಧರಿಸಿಕೊಂಡ.
ಆರು ತಿಂಗಳವರೆಗೆ ನ್ಯಾಯಾಲಯದ ಖಟ್ಲೆಗಳ ಸುತ್ತಮುತ್ತ ಚೌಧುರಿ ಸಾಹಬ್‍ನ ಜೀವನ ಅಲೆದಾಡಿತು. ಕಂಬದಿಂದ ಕಂಬಕ್ಕೆ ಸುತ್ತುತ್ತ ಹಣವನ್ನು ನೀರಿನಂತೆ ಸುರಿದ. ಹಿಂದೆ ಮಾಡದಿದ್ದಂತ ಮುಂದೆ ಮಾಡಲಾಗದಂತ ಕೆಲಸಗಳಿಗೆಲ್ಲ ಕೈಹಾಕಬೇಕಾಯಿತು. ಕಾರಕೂನರು ಹಾಗೂ ಮತ್ತಿತರ ಕರ್ಮಚಾರಿಗಳ ಮುಖಸ್ತುತಿ ಮಾಡಿದ. ವಕೀಲರ ಡಾಂಭಿಕ ಹಾಗೂ ಪೆÇಳ್ಳುತನವನ್ನು ಸಹಿಸಿಕೊಂಡಿದ್ದಲ್ಲದೆ ಕರ್ಮಚಾರಿಗಳಿಗೆ ಲಂಚ ಮತ್ತಿತರ ಮರ್ಯಾದೆಗಳನ್ನು ಮಾಡಿ ಕೊನೆಗೂ ಠಾಕೂರ್‍ನನ್ನು ಮುಕ್ತಗೊಳಿಸುವಲ್ಲಿ ಸಫಲನಾದ. ಶೀಘ್ರವೇ ಈ ಸುದ್ದಿ ಇಡೀ ಜಿಲ್ಲೆಯಾದ್ಯಂತ ಕಾಡ್ಗಿಚ್ಚಿನಂತೆ ಹರಡಿತು. ಅಂತೂ ಇದನ್ನೇ ಪದವಿ ಜೊತೆಗೆ ಮರ್ಯಾದೆಯೂ ಉಳಿಯಿತು ಎನ್ನುವುದು! ಆಶ್ರಿತನನ್ನು ನೇಣುಗಂಬದಿಂದ ಪಾರು ಮಾಡಿದ್ದು!
ಆದಾಗ್ಯೂ ಚೌಧುರಿ ಸಾಹಬ್‍ನ ಈ ಕಾರ್ಯವನ್ನು ದ್ವೇಷವೆಂಬ ವರ್ಣಪಟಲದ ಮೂಲಕ ವೀಕ್ಷಿಸಿದಾಗ ಸಂಪೂರ್ಣವಾಗಿ ಅದು ವಿರೂಪಗೊಂಡಿರುವಂತೆ ಮುಸ್ಲಿಮರಿಗೆ ಭಾರೀ ಆಘಾತವನ್ನು ಹಿಂದೂಗಳಿಗೆ ಅಮಿತಾನಂದವನ್ನು ಉಂಟುಮಾಡಿದಂತೆ ತೋರಿತು. ಮುಸ್ಲಿಮರು ತಮ್ಮ ತಮ್ಮಲ್ಲೇ ಚೌಧುರಿ ಸಾಹಬ್ ತಾನ್ಯಾವ ಧರ್ಮದಲ್ಲಿ ಹುಟ್ಟಿದನೊ ಆ ಧರ್ಮದಲ್ಲಿ ಅವನಿಗೆ ನಂಬಿಕೆ ಲವಲೇಶವೂ ಉಳಿದಿಲ್ಲವೆಂದು ಮಾತನಾಡಿಕೊಳ್ಳುತ್ತಿದ್ದರು. ಈ ಕಡೆ ಹಿಂದೂಗಳು ಚೌಧುರಿ ಸಾಹಬ್‍ನನ್ನು ಹಿಡಿದು `ಶುದ್ಧಿ’ ಮಾಡಲು ಇದೇ ತಕ್ಕ ಸಮಯವೆಂದು ಭಾವಿಸಿದರು. ಮುಲ್ಲಾಗಳು ಧರ್ಮ ಬೋಧೆಯನ್ನು ಈಗ ಎಂದಿಗಿಂತ ಮತ್ತಷ್ಟು ಜೋರು ಮಾಡಿದರೆ ಹಿಂದೂಗಳು ಸಹ ತಮ್ಮ ಏಕತೆಯ ಬಾವುಟವನ್ನು ಎತ್ತಿ ಹಿಡಿದರು. ಪ್ರತಿಯೋರ್ವ ಮುಸ್ಲಿಂನ ಹೃದಯದಲ್ಲಿ ತಾನು ಮುಸ್ಲಿಂ ಎಂಬ ಆತ್ಮಪ್ರಜ್ಞೆ ಬೇರು ಬಿಟ್ಟರೆ, ಪ್ರತಿಯೋರ್ವ ಹಿಂದೂವಿನಲ್ಲಿ ತಾನು ಹಿಂದೂ ಎಂಬ ಕೆಚ್ಚು ಉಕ್ಕಿ ಹರಿಯಿತು. ಠಾಕೂರನೂ ಕೂಡ ಈ ಮೇರೆ ಮೀರಿದ ಧರ್ಮಶ್ರದ್ಧೆಯೆಂಬ ಅಲೆಯಲ್ಲಿ ಕೊಚ್ಚಿಕೊಂಡು ಹೋಗಿಬಿಟ್ಟ. ಪಾದರಸದಂತ ಚಾಲಾಕಿನವನು ಹೇಳಿ ಕೇಳಿ, ಸುಲಭವಾಗಿ ಹೊಗಳಿಕೆಗೆ ಉಬ್ಬಿ ಹೋಗುವ ಅವನು ಶೀಘ್ರವೇ ಹಿಂದೂಗಳ ಸ್ವಯಂಘೋಷಿತ ನೇತಾರನಾಗಿಬಿಟ್ಟ. ಈ ಮುಂಚೆ ಅವನಿಗೆ ಯಾವುದೇ ಧರ್ಮದ ಮೇಲೂ ಯಾವುದೇ ಧರ್ಮದ ಮೇಲೂ ಯಾವುದೇ ಬಗೆಯ ಭಾವಾವೇಶ ಕಿಂಚಿತ್ತೂ ಇರಲಿಲ್ಲ. ಅಂತಹವನು ಈಗ ಧರ್ಮದ ಹೆಸರಿನಲ್ಲಿ ಕ್ಯಾತೆ ತೆಗೆಯಲು ಕಾಲು ಕೆರೆದು ನಿಂತಿದ್ದಾನೆ. ಅವನ ಕೈಲಿ ಮುಸ್ಲಿಂರನ್ನು ಒಡಂಬಡಿಸಿ ಮತಾಂತರಗೊಳಿಸಲು ಕಿಸಿಯದಿದ್ದಾಗ ಸಮಾಜದಲ್ಲಿ ಆರ್ತರೆನಿಸಿಕೊಂಡ ಕೆಲವು `ಚಮ್ಮಾರ’ರನ್ನು ಹಿಡಿದು ಅವರ ಮೇಲೆ `ಶುದ್ಧಿ’ ಕಾರ್ಯ ಮಾಡಿ ಮುಗಿಸಿದ.
ಮತಾಂಧತೆ ಎಂಬ ಹಿಂಚಲನೆಯ ಅಲೆಯಲ್ಲಿ ಚೌಧುರಿ ಸಾಹಬ್‍ನ ಇತರ ಹಲಕೆಲವು ನೌಕರರು ಸಿಕ್ಕಿಕೊಂಡರು. ಒಂದು ಕಾಲಕ್ಕೆ ಮುಸ್ಲಿಂರು ಮಸೀದಿಯೊಂದರ ಮುಂದೆ ನಿಂತಿರುವುದನ್ನು ಕಾಣುವುದೇ ದುರ್ಲಭವಾಗಿತ್ತು. ಆದರೆ ಈಗವರು ಪ್ರತಿದಿನ ಮಸೀದಿಗೆ ಹೋಗಿ ಐದೈದು ಬಾರಿ ನಮಾಜು ಮಾಡಲು ಪ್ರಾರಂಭಿಸಿದರು. ಅಲ್ಲದೆ ಎಂದೂ ದೇವಾಲಯದ ಕಡೆ ಇಣುಕಿಯೂ ನೋಡದ ಹಿಂದೂಗಳು ಈಗ ಮುಂಜಾನೆ ಹಾಗೂ ಸಂಜೆ ಪ್ರಾರ್ಥನೆಗೆ ಇಳಿದರು.
ಪಟ್ಟಣದಲ್ಲಿ ಬಹುಸಂಖ್ಯಾತರು ಹಿಂದೂಗಳು. ಪೈಲ್ವಾನ್ ಎಂಬ ಖ್ಯಾತಿಯ ಪಕ್ಕದಳ್ಳಿಯ ಬಲಾಢ್ಯ ಭಜನ್ ಸಿಂಹ ಈಗ ಮುಂದಾಳು ಅವರೆಲ್ಲರಿಗೆ. ಈ ಹಿಂದೆ, ಮುಸ್ಲಿಂರು, ಅಲ್ಪಸಂಖ್ಯಾತರಿದ್ದರೂ ಸಹ ಹಿಂದೂಗಳನ್ನು ಅಡಗಿಸಿದ್ದರು. ಕಾರಣ, ಅವರೆಲ್ಲ ಹರಿದು ಹಂಚಿಹೋಗಿದ್ದರು. ಅಲ್ಲದೆ ಅವರಲ್ಲಿ ಸಂಘಟನೆ ಇರಲಿಲ್ಲ. ಆದರೆ ಇತ್ತೀಚೆಗೆ ಹಿಂದೂಗಳ ನಿಗಾವಹಿಸಿ ಸಂಘಟಿತರಾದರು. ಅಲ್ಲದೆ ತಮ್ಮ ಶಕ್ತಿಯನ್ನು ಬಲಪಡಿಸಿಕೊಂಡರು. ಹೀಗಾದ ಮೇಲೆ ಕೈ ಬೆರಳೆಣಿಕೆಯ ಮುಸ್ಲಿಂರು ಏನು ತಾನೆ ಮಾಡಿಯಾರು?
ಮತ್ತೊಂದು ವರುಷ ಬೇಗನೆ ಉರುಳಿತು. ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತೊಮ್ಮೆ ಬಂದಿತು. ಹಿಂದೂಗಳು, ಈ ಮಧ್ಯೆ, ಮುಸ್ಲಿಂರ ಕೈಲಿ ತಾವುಂಡಿದ್ದ ಈ ಮುಂಚಿನ ಸೋಲಿನ ಕಹಿಯನ್ನು ಮರೆತಿರಲಿಲ್ಲ. ಜಗಳ ತೆಗೆಯಲು ಬೇಕಾದ ತಯಾರಿಯನ್ನೆಲ್ಲ ಹಲವಾರು ತಿಂಗಳಿಂದ ಗುಟ್ಟಾಗಿ ನಡೆಸುತ್ತ ಹೋದರು. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನದಲ್ಲಿ ಜಮಾಯಿಸತೊಡಗಿದರು. ಪ್ರತಿಯೊಬ್ಬನ ಕೈಯಲ್ಲೂ ಲಾಠಿ, ಕೆಲವರಂತೂ ಸೊಂಟದಲ್ಲಿ ಚಾಕುವನ್ನು ಬಚ್ಚಿಟ್ಟುಕೊಂಡಿದ್ದರು. ಮುಸ್ಲಿಂರನ್ನು ಜಗಳಕ್ಕೆಳೆಯಲು ಸಾಕುಬೇಕಾದಷ್ಟನ್ನು ಮಾಡಬೇಕೆಂದು ಮೊದಲೇ ಒಪ್ಪಂದವಾಗಿತ್ತು. ಸಂಪ್ರದಾಯತೆಯನ್ನು ಬದಿಗೊತ್ತಿ ಈ ವರ್ಷ ಅದ್ಧೂರಿ ಮೆರವಣಿಗೆಯನ್ನು ಮಾಡಬೇಕೆಂದು ತಂತ್ರಗಳನ್ನು ಹೊಸೆಯಲಾಯಿತು.
ದೀಪಗಳು ಝಗಝಗಿಸಿದವು. ಮಹಮದೀಯ ಘೋಷಕ ಸಂಜೆಯ ಪ್ರಾರ್ಥನೆಗೆ ಕರೆಕೊಟ್ಟ. ಕೊಂಬು, ಕಹಳೆ, ತುತ್ತೂರಿಗಳ ಮೇಘನಾದಗಳೊಂದಿಗೆ ಮೆರವಣಿಗೆ ಹೊರಟಿತು. ಆನೆ, ಕುದುರೆ, ಸೂರೆಪಾನ, ಡೋಲು, ಕಹಳೆ ಮುಂತಾದ ಎಲ್ಲ ಡೌಲುದವಲತ್ತುಗಳ ಪ್ರದರ್ಶನ ಅಲ್ಲಿತ್ತು. ಭಜನಸಿಂಹ ಬಲಿಷ್ಠ ಪಡ್ಡೆ ಹೈದರ ಪಡೆಯೊಂದಿಗೆ ಮೆರವಣಿಗೆಯ ಮುಂದಾಳಾಗಿ ಜಬರ್‍ದಸ್ತಿನಿಂದ ಬೀಗುತ್ತಾ ನಡೆದಿದ್ದ.
ಸ್ವಲ್ಪ ಮುಂದೆ ಜಮಾ ಮಸೀದಿ ಕಾಣಿಸಿತು. ಪಡ್ಡೆ ಹೈದರು ಹೆಗಲ ಮೇಲೆ ಲಾಠಿ ಹಿಡಿದು ಸನ್ನದ್ಧರಾದರೆ, ಇತರರು ತಮ್ಮ ತಮ್ಮ ಆತ್ಮರಕ್ಷಣೆಗೆ ಸಿದ್ಧರಾಗಿ ನಿಂತರು. ಗುಂಪು ಬಿಟ್ಟು ಚದುರಿದ್ದ ಮಂದಿ ಈಗ ಹಿಂದಕ್ಕೆ ಸರಿಯಿತು ಒತ್ತಾತ್ತಾಗಿ ಒಟ್ಟಿಗೆ ಇರಲು. ಪಿಸುಪಿಸು ಮಾತು, ಗುಸುಗುಸು ಸಂಧಾನ-ಇದ್ದಕ್ಕಿದ್ದಂತೆ ಹಿಂದಿಗಿಂತಲೂ ಜೋರಾಗಿ ಡೋಲುಗಳ ಕಿವಿಗಡಚಿಕ್ಕುವ ಶಬ್ದ ತಾರಕಕ್ಕೇರಿತು. ಆನಂದಭರಿತ ಕೇಕೆ, ಸಿಳ್ಳು ಮತ್ತೂ ಮತ್ತೂ ಮುಗಿಲು ಮುಟ್ಟಿತು.
ಶೀಘ್ರವೇ ಮೆರವಣಿಗೆ ಮಸೀದಿ ಎದುರು ಬಂದಿತು. ಮುಸ್ಲಿಂನೋರ್ವ ಮಸೀದಿಯಿಂದ ಹೊರಬಂದು “ಈಗ ನಮಗೆ ನಮಾಜು ಮಾಡೋ ಸಮಯ. ಡೋಲು ಬಾರಿಸೋದ್ನ ನಿಲ್ಸಿ’’ ಎಂದ ಮೆರವಣಿಗೆಯ ಮುಖಂಡನನ್ನುz್ದÉೀಶಿಸಿ.
“ನಿಲ್ಸಲ್ಲ’’ ಎಂದು ಪ್ರತ್ಯುತ್ತರಿಸಿದ ಭಜನ್‍ಸಿಂಹ.
“ನಿಮ್ಮ ನಮಾಜನ್ನೇý ಯಾಕೆ ನಿಲ್ಸಬಾರ್ದು.’’
“ಚೌಧುರಿ ಸಾಹಬ್‍ನ ಪೆÇಳ್ಳು ಪ್ರತಿಷ್ಠೆನ ನೆಚ್ಚಿಕೋಬೇಡಿ.’’
“ಈ ಸಾರಿ ಕೊಡೋದ್ನಾ ನೀವು ಅವಸರದಲ್ಲಿ ಮರೀಬಾರ್ದು, ಅಂತ ಪಾಠ ಕಲಿಸ್ತೀವಿ.’’
“ಚೌಧುರಿ ಸಾಹಬ್‍ನ ಬೆಂಬಲ ಇದೆ ಅನ್ನೊ ಭ್ರಮೇಲಿ ನೀವೇ ಉಬ್ಬಿಹೋಗಿರೋರು. ನಮ್ಗೂ ತಾಕತ್ತು ಇದೆ ಅನ್ನೊ ನಂಬಿಕೆಯಿಂದನೇ ಬಂದಿರೋದು, ಸಜ್ಜಾಗಿ. ಇದು ನಮ್ಮ ಮತ ಧರ್ಮದ ಪ್ರಶ್ನೆ’’ ಎಂದು ಮಾರುತ್ತರಿಸಿದ ಭಜನ್‍ಸಿಂಹ.
ಈ ನಡುವೆ ಇನ್ನೂ ಕೆಲ ಮುಸ್ಲಿಂರು ಮಸೀದಿಯಿಂದ ಹೊರಬಂದರು. ಈ ಕ್ಷಣವೇ ಡೋಲು ಬಾರಿಸೋದ್ನ ನಿಲ್ಸಿ ಎಂದು ಅವರು ಕೂಡ ಆಗ್ರಹಿಸಿದರು. ಬದಲಿಗೆ ಡೋಲು ಈಗ ಇನ್ನೂ ಭಾರಿ ಮೊರೆತವನ್ನು ಮೊಳಗಿಸಿತು. ಒಂದ್ಹೋಗಿ ಮತ್ತೊಂದಾಯ್ತು. ಪರಿಸ್ಥಿತಿ, ತತ್‍ಕ್ಷಣ ಕೈಮೀರಿ ಹೋಯಿತು. ಭಜನಸಿಂಹನನ್ನು ಒಬ್ಬ ಮುಲ್ಲ ಕಾಫೀರ್, ನಾಸ್ತಿಕ ಎಂದು ಜರಿದ. ಠಾಕೂರ್ ಅವನ ಗಡ್ಡ ಹಿಡಿದೆಳೆದ. ಕೂಡಲೇ ಹುಯಿಲೋ ಹುಯಿಲು ಎಲ್ಲೆಲ್ಲೂ. ನಾಯಕರೆಂದುಕೊಂಡ ಸ್ವಯಂಘೋಷಿತ ಮಂದಿಯೆಲ್ಲ ಕಾಳಗಕ್ಕೆ ಧುಮುಕಿದರು. ನಿಜವಾದ ಹೊಡೆದಾಟ ಪ್ರಾರಂಭಗೊಂಡಿಯೇ ಬಿಟ್ಟಿತು. ಒಂದು ಭಾರೀ ಗರ್ಜನೆ ಹಾಕಿದ ಭಜನ್ ಸಿಂಹ ಮಸೀದಿಯೊಳಗೆ ನುಗ್ಗಿದ. ಕೈಗೆ ಸಿಕ್ಕಿದವರನ್ನೆಲ್ಲ ಹಿಡಿದು ಹಣ್ಣುಗಾಯಿ ನೀರುಗಾಯಿ ಮಾಡಿದ. ಆ ಹೃದಯವಿದ್ರಾವಕ ದೃಶ್ಯದಲ್ಲಿ ಯಾರದು ಮೇಲುಗೈ ಎಂದು ಹೇಳುವುದು ಕಷ್ಟವೆ! ಹಿಂದೂಗಳು ಅವರಿಗೆ ಸದೆಬಡಿದಿದ್ದೀವಿ ಎಂದರೆ ಮುಸ್ಲಿಂರು, ಹಿಂದೂಗಳು, ಇನ್ನೆಂದೂ ಕತ್ತು ಎತ್ತಬಾರ್ದು ಅಂಗೆ, ತಡಕಿ ಮುಟ್ಟಿ ನೋಡ್ಕೊಳಂಗೆ ಕೊಟ್ಟಿದ್ದೀವಿ ಎಂದರು. ಈ ಭಾವೋದ್ರೇಕ ವಾಗ್ಯುದ್ಧದ ಮಧ್ಯದಲ್ಲಿ ಒಂದು ವಿಷಯಕ್ಕಂತೂ ಸಮನಾದದ್ದು ಯಾವುದೂ ಇರಲಿಲ್ಲ. ಅದೇ ಭಜನ್‍ಸಿಂಹನ ಅತಿಮಾನುಷ ಶಕ್ತಿ! ಠಾಕೂರ್ ಏನಾದರೂ ಅಲ್ಲಿರದಿದ್ದರೆ ಒಬ್ಬನೇ ಒಬ್ಬ ಹಿಂದೂ ತನ್ನ ಜೀವಸಹಿತ ತಪ್ಪಿಸಿಗೊಳ್ಳೋಕೆ ಆಯ್ತಿರಲಿಲ್ಲ ಎನ್ನುವುದು ಮುಸ್ಲಿಂರ ಭಾವನೆಯಾದರೆ, ದಿಟವಾಗಿಯೂ ಠಾಕೂರ್ ಹನುಮನ ಅಪರಾವತಾರವೆಂದೇ ಹಿಂದೂಗಳ ನಂಬಿಕೆಯಾಗಿತ್ತು. ಅವನ ಲಾಠಿಯ ಒಂದೇ ಹೊಡೆತ ಸಾಕಾಗಿತ್ತು ಮುಸ್ಲಿಮರಿಗೆ ಕಾಲಿಗೆ ಬುದ್ಧಿ ಹೇಳಲು.
ಜನ್ಮಾಷ್ಠಮಿ ಮುಗಿಯಿತು. ದಿವಾನಾಖಾನೆಯಲ್ಲಿ ಕುಳಿತ ಚೌಧುರಿ ಸಾಹಬ್ ಹುಕ್ಕದಿಂದ ದಂ ಎಳೆಯುತ್ತಿದ್ದ. ಮುಖ ರಂಗೇರಿತ್ತು. ಹಣೆಯಲ್ಲಿ ನೆರಿಗೆಗಳು ಮೂಡಿದ್ದವು. ಆವೇಶದ ಕಿಡಿ ಕಣ್ಣಿಂದ ತೂರಿಬರುತ್ತಿತ್ತು. ಅಲ್ಲಾನ ಮನೆ ಅಪವಿತ್ರಗೊಂಡಿತ್ತು. ಭಾವನೆಗಳು ಹೃದಯವನ್ನು ಹಿಂಡುತ್ತಿದ್ದವು.
ಅಲ್ಲಾನ ನೆಲೆ ಅಪವಿತ್ರಗೊಂಡಿತ್ತು. ಮಸೀದಿಯ ಸುತ್ತಮುತ್ತಲಿನ ಬಯಲು ಅವರಿಗೆ ಹೊಡೆದಾಡಲು ಸಾಕಾಗ್ತಿರಲಿಲ್ಲವೇನು? ಅಲ್ಲಾನ ನೆಲೆಯಲ್ಲಿ ಎಷ್ಟೊಂದು ರಕ್ತದ ಓಕುಳಿ! ಮಸೀದಿಗೆ ಅಷ್ಟೂ ಅಗೌರವವೆ! ದೇವಾಲಯ ದೇವರಿಗೆ ನೆಲೆ ಹೇಗೋ ಹಾಗೆ ಮಸೀದಿಗೂ. ದೇವಾಲಯವನ್ನು ಅಪವಿತ್ರಗೊಳಿಸಿದ ಮುಸ್ಲಿಂ ಶಿಕ್ಷಾರ್ಹ, ಅಂತೆಯೇ ಮಸೀದಿಯನ್ನು ಅಪವಿತ್ರಗೊಳಿಸಿದ ಹಿಂದೂ ಶಿಕ್ಷಾರ್ಹನಲ್ಲವೆ?
ಠಾಕೂರನೇ ಈ ನೀಚ ಕೃತ್ಯಗಳ ಕರ್ತೃ! ಇದೇ ದುಷ್ಕøತ್ಯ ಎಸಗಿದ ನನ್ನ ಅಳಿಯನನ್ನು ಕೊಂದವನು ಅವನೇ. ಅವನು ಅಂತಹ ನೀಚ ಕಾರ್ಯಗಳಿಗೆ ಕೈಹಾಕುವ ಅಸಾಮಿ ಎಂದು ಅಂದು ಗೊತ್ತಾಗಿದ್ದರೆ ನಾನು ಕೈತೊಳೆದುಕೊಳ್ಳುತ್ತಿದ್ದೆ ನೇಣುಗಂಬ ಏರಲಿ ಬಿಡು ಎಂದು. ಆಗ ನಾನೇಕೆ ಅಷ್ಟೊಂದು ಅನುಭವಿಸಿದೆ, ನಿಂದನೆಗೆ ಈಡಾದೆ. ಅಷ್ಟೊಂದು ಸಾಲಸೋಲದ ಹೊರೆ ಹೊತ್ತೆ? ಠಾಕೂರ್ ನನ್ನ ನಂಬಿಗಸ್ಥ ಸೇವಕನೆಂದೇ? ಹಲವು ಬಾರಿ ನನ್ನ ಪ್ರಾಣ ಉಳಿಸಿದ್ದಾನೆಂದೇ? ನನಗೆ ರವೆಯಷ್ಟು ತೊಂದರೆಯಾದರೂ ತನ್ನ ರಕ್ತವನ್ನೇ ಬಸಿದು ನನ್ನ ಪ್ರಾಣ ಉಳಿಸಲು ಟೊಂಕಕಟ್ಟಿ ನಿಲ್ಲುತ್ತಿದ್ದ. ಆದರೆ ಅದೇ ವ್ಯಕ್ತಿ ಈ ದಿನ ಅಲ್ಲಾನ ನೆಲೆಯನ್ನು ಅಪವಿತ್ರಗೊಳಿಸಿದ್ದಾನೆ. ಈ ಅತಿಕ್ರಮಣಕ್ಕೆ ಅವನಿಗೆ ಶಿಕ್ಷೆ ಆಗಲೇಬೇಕು. ಅಂತಹ ಪಾಪಕ್ಕೆ ಶಿಕ್ಷೆ ಯಾವುದು? ನರಕ! ಬೆಂಕಿಯ ಕೂಪವೆನಿಸಿದ ನರಕ ಬಿಟ್ಟರೆ ತಕ್ಕ ಶಿಕ್ಷೆ ಮತ್ತೊಂದಿಲ್ಲ. ಅಲ್ಲಾನ ನೆಲೆಯನ್ನು ಯಾವನು ಉಲ್ಲಂಘಿಸುತ್ತಾನೆಯೋ ಅಂತಹವನು ಅಲ್ಲಾನನ್ನೇ ಹೀಗಳೆಯುತ್ತಾನೆ. ಅಲ್ಲಾನ ನಿಂದನೆಯೆ?
ಇದ್ದಕ್ಕಿದ್ದಂತೆ ಠಾಕೂರ್ ಭಜನ್ ಸಿಂಹ ಅವನೆದುರು ಬಂದು ನಿಂತ.
“ಮಸೀದಿಗೆ ನುಗ್ಗಿದ್ಯಾ?’’ ಎಂದು ಪ್ರಶ್ನಿಸಿದ ಉರಿಗಣ್ಣಿನ ನೋಟವೊಂದನ್ನು ಅವನತ್ತ ಎಸೆದು ಚೌಧುರಿ ಸಾಹಬ್.
“ಸಾಬ್, ಮುಲ್ಲಾಗಳು ನನ್ನ ಮೇಲೆ ತಟ್ಟನೆ ಎರಗಿದರು’’ ಎಂದು ಪ್ರತ್ಯುತ್ತರಿಸಿದ.
“ನನ್ನ ಪ್ರಶ್ನೆಗೆ ಉತ್ತರ ಕೊಡು-ಮಸೀದಿಗೆ ನುಗ್ಗಿದ್ಯಾ?’’
“ಮಸೀದಿ ಒಳಗಿನಿಂದ ನಮ್ಮ ಕಡೆ ಕಲ್ಲು ಬೀರಕ್ಕೆ ಶುರು ಮಾಡಿದ್ರು, ಆಗ ಅವರನ್ನ ಹಿಡಿಯಲು ನಾನು ಮಸೀದಿಯೊಳಗೆ ಹೋಗಬೇಕಾಯ್ತು.
“ನಿನಗೆ ಗೊತ್ತಾ, ಮಸೀದಿಯು ಅಲ್ಲಾನ ನೆಲೆ ಅಂತಾ?’’
“ಗೊತ್ತು ಸಾಬ್, ಅಷ್ಟೂ ನನಗೆ ಗೊತ್ತಿಲ್ವಾ?’’
“ಹೇಗೆ ದೇವಾಲಯ ದೇವರಿಗೆ ಪವಿತ್ರ ನೆಲೆಯೋ ಹಾಗೆನೇ ಮಸೀದಿಯೂ.’’
ಭಜನಸಿಂಹನಿಗೆ ಉತ್ತರ ಹೊಳೆಯಲಿಲ್ಲ ಇದಕ್ಕೆ.
“ಮುಸ್ಲಿಂ ಏನಾದರೂ ದೇವಾಲಯವನ್ನು ಅಪವಿತ್ರಗೊಳಿಸಿದರೆ ಮರಣದಂಡನೆಗೆ ಬದ್ಧನಾಗುತ್ತಾನೆ. ಹಾಗೇನೆ ಮಸೀದಿಯನ್ನು ಕಲುಷಿತಗೊಳಿಸಿದ ಹಿಂದೂ ಅದೇ ಶಿಕ್ಷೆಗೆ ಅರ್ಹ’’ ಎಂದು ಚೌಧುರಿ ಸಾಹಬ್ ಹೇಳುತ್ತಾ ಹೋದ. ಭಜನಸಿಂಹ ಮೌನದಿಂದಿದ್ದ. ಚೌಧುರಿ ಸಾಹಬ್ ಈ ರೀತಿ ಕಿಡಿಕಾರುತ್ತಿದ್ದುದನ್ನು ಅವನೆಂದೂ ಕಂಡಿರಲಿಲ್ಲ.
“ನನ್ನ ಅಳಿಯನನ್ನು ಕೊಂದೆ, ಆದರೂ ಸಹ ನಿನ್ನ ವಕಾಲತ್ತನ್ನು ನಡೆಸಲು ವಕೀಲರನ್ನು ನೇಮಿಸಿದೆ. ನಾನು ಯಾಕೆ ಹಾಗೆ ಮಾಡಿದೆ. ಅನ್ನೋದು ನಿನ್ಗೆ ಗೊತ್ತಾ?…. ಯಾಕೆ ಗೊತ್ತಾ?… ನೀನು ನನ್ನಳಿಯನಿಗೆ ಕೊಟ್ಟ ಶಿಕ್ಷೆಗೆ ಅವನು ಅರ್ಹನಾಗಿದ್ದ ಅನ್ನೋ ವಿಷಯ ನನ್ಗೆ ಚೆನ್ನಾಗಿ ಗೊತ್ತಿತ್ತು. ಅಂತಹ ಹೀನ ಅತಿಕ್ರಮಣಕ್ಕೆ ನೀನು ನನ್ನ ಸ್ವಂತ ಮಗನನ್ನೇ… ಹೋಗ್ಲಿ, ನನ್ನನ್ನೇ ಕೊಂದಿದ್ದರೂ, ನಾನು ನಿನ್ನನ್ನು ಕ್ಷಮಿಸುತ್ತಿದ್ದನೇನೋ. ಈ ದಿನ ನೀನು ಅದೇ ಪಾಪವನ್ನು ಎಸಗಿದ್ದೀಯಾ. ನೀನು ಮಸೀದಿಯೊಳಗಡೆ ಇದ್ದಾಗ ಮುಸ್ಲಿಂರ್ಯಾರಾದರೂ ನಿನ್ನನ್ನು ನರಕದ ದಳ್ಳುರಿಗೆ ತಳ್ಳಿದ್ದರೂ, ಕೇಳು ಹೇಳ್ತೀನಿ… ನನ್ಗೆ ನಿಜಕ್ಕೂ ಪರಮಾನಂದವಾಗ್ತಿತ್ತು. ಆದರೆ ನೀನು ಅಲ್ಲಿಂದ ನಿರ್ಲಜ್ಜೆಯ ಪಾಪಿಯಂತೆ ಹೇಗೋ ತಪ್ಪಿಸಿಕೊಂಡು ಬಂದಿದ್ದೀ. ದೇವರು ನಿನ್ನ ಕುಕೃತ್ಯಕ್ಕೆ ತಕ್ಕ ಶಿಕ್ಷೆ ಕೊಡೊಲ್ಲ ಅಂತ ತಿಳಿದಿದ್ದೀಯಾ? ಯಾರು ಆತನಿಗೆ ಅಗೌರವವನ್ನು ತೋರುವರೋ ಅಂತಹವರು ತಮ್ಮ ತಲೆಯನ್ನು ಕತ್ತರಿಸಿಡಬೇಕೆನ್ನುವುದು ಆತನ ಕಟ್ಟಾಜ್ಞೆ. ಪ್ರತಿಯೋರ್ವ ಮುಸ್ಲಿಂನ ಆದ್ಯಕರ್ತವ್ಯವದು. ಕಳ್ಳನಿಗೆ ಶಿಕ್ಷೆಯಾಗದ ಮಾತ್ರಕ್ಕೆ ಅವನು ಕಳ್ಳ ಅನ್ನಿಸಿಕೊಳ್ಳಲ್ವೆ? ದೇವರಿಗೆ ಅಗೌರವ ತೋರಿಸಿದ್ದೀನಿ ಅನ್ನೋದ್ನಾ ನೀನು ಒಪೆÇ್ಕೀತಿಯಾ?’’
ಈ ವಿಷಯದಲ್ಲಿ ಠಾಕೂರ್ ತನ್ನ ತಪ್ಪನ್ನು ಅಲ್ಲಗಳೆಯಲಾಗಲಿಲ್ಲ. ಚೌಧುರಿ ಸಾಹಬ್‍ನ ಶುದ್ಧ ನಿಷ್ಕಲ್ಮಷ ಸಾಚಾತನ ಅವನ ಆತ್ಮವನ್ನು ಆವರಿಸಿದ್ದ ಎಲ್ಲ ಹಠಮಾರಿತನದ ಅವಶೇಷಗಳನ್ನು ಹೊಸಕಿ ಹಾಕಿತು.
“ಹೌದು ಸಾಬ್, ಈ ಪಾಪಕೃತ್ಯದ ಅಪರಾಧಿ…. ನಾನೇ’’ ಎಂದ ಸಿಂಹ.
“ನೀನು ಬೇರೊಬ್ಬರಿಗೆ ಈ ಹಿಂದೆ ನೀಡಿದ್ದ ಶಿಕ್ಷೆಯನ್ನು ನೀನೀಗ ಅನುಭವಿಸಲು ಸಿದ್ಧನಿದ್ದೀಯಾ?’’
“ದುಲ್ಹನ್-ಮಿಯಾನನ್ನು ತಿಳಿದು, ತಿಳಿದೂ ನಾನು ಕೊಲ್ಲಲಿಲ್ಲ.’’
“ಇರ್ಲಿ ತಿಳ್ಕೋ, ನೀನೇನಾದರೂ ಅವನನ್ನು ಕೊಲ್ಲದೆ ಬಿಟ್ಟಿದ್ದರೂ ನಾನೇ ನನ್ನ ಕೈಯಾರೆ ಆ ಕೆಲ್ಸನಾ ಮಾಡಿ ಮುಗ್ಸತಿದ್ದೆ… ಅಲ್ಲಾನ ವಿರುದ್ಧ ನೀನೀಗ ಮಾಡಿರುವ ಅಪವಿತ್ರ ಕಾರ್ಯಕ್ಕೆ ನಾನೀಗ ಮುಯ್ಯಿ ತೀರಿಸಲೇಬೇಕು. ನನ್ನ ಕೈಯಿಂದ್ಲೇ ಪ್ರತಿಫಲ ಉಣ್ಣುತ್ತಿಯೋ ಅಥವಾ ಕಾನೂನಿನ ಕೈಲಿ ಉಣ್ಣುತ್ತೀಯೋ?
…..ನ್ಯಾಯಾಲಯ ನನಗೇನು ಮಾಡೀತು ಮಹಾ. ಕೊಟ್ಟರೆ ಕೆಲವು ವರ್ಷದ ಶಿಕ್ಷೆ ಕೊಡಬಹುದಷ್ಟೇ. ನಾನೇ… ನಿ…. ನ್ನ ಮುಗಿಸ್ತೀನಿ. ನೀನು ನನ್ನ ಸ್ನೇಹಿತ. ನಿನ್ನ ಮೇಲೆ ರವೆಯಷ್ಟು ಮತ್ಸರ ನನಗೆ ಇಲ್ಲ. ಆ ಅಲ್ಲಾನೊಬ್ಬನ ಬಿಟ್ಟು ಬೇರ್ಯಾರಿಗೂ ಗೊತ್ತಿಲ್ಲ. ಇದೆಂತಾ ಸಂಕಟವನ್ನು ತಂದಿತ್ತಿದೆ ನನ್ಗೆ ಅಂತ. ಆದರೂ ಕೂಡ ನಾನು ನಿನ್ನನ್ನು ಕೊಲ್ಲಲೇಬೇಕು. ನನ್ನ ಧರ್ಮದ ಕಟ್ಟಳೆ ಅದು’’ ಎಂದೆನ್ನುತ್ತಾ ಚೌಧುರಿ ಸಾಹಬ್ ಓರೆಯಿಂದ ಕತ್ತಿ ಹಿರಿದು ಠಾಕೂರ್‍ನ ಮುಂದೆ ನಿಂತ. ಅದೊಂದು ಅಪರೂಪದ ದೃಶ್ಯ. ನರೆಗೂದಲ ಮುದುಕ. ಬೆನ್ನು ಬಿಲ್ಲಾಗಿದೆ ವಯಸ್ಸಿನ ಭಾರದಿಂದ. ಕತ್ತಿ ಝಳಪಿಸುತ್ತ ನಿಂತಿದ್ದಾನೆ ಸದೃಢ ಯುವಕನೆದುರು. ಠಾಕೂರ್ ಆ ಮುದುಕನನ್ನು ತನ್ನ ಲಾಠಿಯಿಂದ ಒಂದೇ ಒಂದು ಏಟಿಗೆ ನೆಲಕಚ್ಚಿಸಬಹುದಿತ್ತು. ಆದರೆ ಅಲ್ಲವನು ಶಿರಬಾಗಿ ನಿಂತ. ಅವನ ಆತ್ಮದ ಪ್ರತಿಯೊಂದು ನರನಾಡಿಯಲ್ಲೂ ಆಳವಾದ ಗೌರವ ಮೂಡಿತು, ಆ ವೃದ್ಧನ ಮೇಲೆ. ಚೌಧುರಿ ಸಾಹಬ್ ಈ ಪರಿಯ ಕಟ್ಟಾ ಧರ್ಮ ಬೀರು ಎಂದು ಅವನೆಂದೂ ಊಹಿಸಿರಲಿಲ್ಲ. ಇತರರಿಗಿರುವಂತೆಯೇ ಠಾಕೂರ್‍ನಿಗೂ ಸಹ ಚೌಧುರಿ ಸಾಹಬ್ ಹಿಂದೂವೇ ಎಂಬ ತಪ್ಪು ಭಾವನೆ ಅವನ ಅಂತರಾಳದಲ್ಲಿ ಅಚ್ಚೊತ್ತಿತ್ತು. ನೇಣುಗಂಬದಿಂದ ಅವನನ್ನು ರಕ್ಷಿಸಿದ ಆ ವ್ಯಕ್ತಿಯ ವಿರುದ್ಧ ಸೇಡನ್ನು ತೀರಿಸಿಕೊಳ್ಳುವುದಾಗಲಿ ಅಥವಾ ಮೈಮೇಲೆ ಎರಗುವುದಾಗಲಿ ಅವನ ಮಂಡೆಗೆ ಸುಳಿಯಲೇ ಇಲ್ಲ. ಆತ ಪಕ್ಕಾ ಎಂಟೆದೆಯವ. ನಿಜವಾದ ಎಲ್ಲ ವೀರರಂತೆ ಆತ ಕಪಟ ಅಥವಾ ಠಕ್ಕಿನ ಕುಕೃತ್ಯಗಳಿಂದ ನಿಜಕ್ಕೂ ದೂರವಿದ್ದ. ಈ ಸಂದಿಗ್ಧದಲ್ಲಿ ಆತ ಪಶ್ಚಾತ್ತಾಪ ಪಟ್ಟನೇ ಹೊರತು ವ್ಯಗ್ರಗೊಳ್ಳಲಿಲ್ಲ. ಸಾವಿನ ನಿರೀಕ್ಷೆ ದುಃಖವನ್ನು ತರುತ್ತದೆಯೇ ವಿನಃ ಭಯವನ್ನಲ್ಲ.
ಠಾಕೂರ್‍ನೆದುರು ಚೌಧುರಿ ಸಾಹಬ್ ನಿಂತ. ಅವನ ಧರ್ಮ “ಅವನನ್ನು ಕೊಲ್ಲು’’ ಎಂದರೆ ಅವನ ಔದಾರ್ಯ “ಹೋಗಲಿ ಬಿಟ್ಟುಬಿಡು’’ ಎಂದಿತು. ಈ ದ್ವಂದ್ವ ಅವನೊಳಗೆ ಟಿಸಿಲೊಡೆಯಿತು.
ಚೌಧುರಿ ಸಾಹಬ್‍ನ ಉಭಯ ಸಂಕಟವನ್ನು ಠಾಕೂರ್ ಅರಿತುಕೊಂಡ. ಗದ್ಗದಿತನಾಗಿ “ಸಾಬ್, ನನ್ನ ಮೇಲಿನ ನಿಮ್ಮ ಮಮತೆ, ನನ್ನ ಮೇಲೆ ನಿಮ್ಮ ಕೈ ಮೇಲೆತ್ತಲೂ ಬಿಡುತ್ತಿಲ್ಲ. ನೀವೇ ಸಾಕಿ ಬೆಳೆಸಿದ ನಿಮ್ಮ ಈ ಸೇವಕನನ್ನು ಕೊಲ್ಲಲು ನಿಮ್ಮಿಂದಾಗಲಾರದು. ಆದರೆ ಈ ಶಿರಸ್ಸು ನಿಮ್ಮದು. ಇದನ್ನು ಕಾಪಾಡಿದ್ದೀರಿ. ನಿಮಗೆ ಬೇಕೆನಿಸಿದಾಗ ಇದನ್ನು ತೆಗೆದುಕೊಳ್ಳಬಹುದು. ನ್ಯಾಯಸಮ್ಮತವಾಗಿ ನಿಮ್ಮದೇ ಆದ ಈ ನನ್ನ ಶಿರಸ್ಸನ್ನು ಪಡೆಯಲು ನಾಳೆ ಬೆಳಿಗ್ಗೆ ನನ್ನ ಮನೆಗೆ ಯಾರನ್ನಾದರೂ ಕಳಿಸಿ. ಈಗೇನಾದರೂ ನಾನು ಇದನ್ನು ತಮಗೆ ಅರ್ಪಿಸಿದರೆ ಈ ಪಟ್ಟಣದಲ್ಲಿ ಭಾರೀ ಪ್ರಮಾಣದಲ್ಲಿ ದೊಂಬಿಯಾಗಬಹುದು. ನನ್ನ ಮನೆಯಲ್ಲಾದರೆ ನನ್ನನ್ನು ಕೊಂದೋರು ಯಾರು ಆಂತ ಯಾರಿಗೂ ತಿಳಿಯುವುದಿಲ್ಲ. ತಿಳಿಯದೆ, ಎಂದಾದರೂ ತಮ್ಮ ಮನ ನೋಯ್ಸಿದ್ದರೆ ದಯಮಾಡಿ ಕ್ಷಮಿಸಿ.’’
ಹೀಗೆಂದ ಠಾಕೂರ್ ಅಲ್ಲಿಂದ ಹೊರಬಿದ್ದ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಡ ಜನರಿಗೆ ಬದುಕು ಕಟ್ಟಿಕೊಳ್ಳಲು ನೆರವಾದ ‘ಕಾಂಗ್ರೆಸ್‌’ ಸರಕಾರದ ‘ಗ್ಯಾರಂಟಿ ಯೋಜನೆ’ ಬಗ್ಗೆ ತೇಜಸ್ವಿ...

0
ಕರ್ನಾಟಕದ ಕಾಂಗ್ರೆಸ್‌ ಸರಕಾರ ಜಾರಿಗೆ ತಂದಿದ್ದ ಪಂಚ ಗ್ಯಾರಂಟಿಗಳ ಬಗ್ಗೆ ತುಚ್ಛವಾಗಿ ಮಾತನಾಡಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ರಾಜ್ಯದ ಕೋಟ್ಯಾಂತರ ಜನರಿಗೆ ಆಶ್ರಯವಾದ ಗ್ಯಾರಂಟಿ ಯೋಜನೆಗಳನ್ನು 'ಮತಿ ಹೀನ ಉಚಿತ ಕೊಡುಗೆ'...