Homeಎಕಾನಮಿಉದ್ಯೋಗ ಸೃಷ್ಟಿಯಲ್ಲಿ ದಯನೀಯವಾಗಿ ಸೋತ ಕೇಂದ್ರ ಬಜೆಟ್‌... : ಡಾ.ಬಿ.ಸಿ ಬಸವರಾಜ್

ಉದ್ಯೋಗ ಸೃಷ್ಟಿಯಲ್ಲಿ ದಯನೀಯವಾಗಿ ಸೋತ ಕೇಂದ್ರ ಬಜೆಟ್‌… : ಡಾ.ಬಿ.ಸಿ ಬಸವರಾಜ್

ಹೋದವರ್ಷಕ್ಕಿಂತ ಈ 2020-21 ರ ಬಜೆಟ್‌ನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 9,500 ಕೋಟಿಗಳಷ್ಟು ಕಡಿಮೆ ಹಣ ತೆಗೆದಿರಿಸಲಾಗಿದೆ.

- Advertisement -
- Advertisement -

2019 – 20 ರಲ್ಲಿ ಭಾರತದ ಜಿಡಿಪಿ ಕೇವಲ 5% ಬೆಳವಣಿಗೆ ಕಾಣುತ್ತಿದ್ದು ಇಡೀ ದೇಶದ ಆರ್ಥಿಕ ಬೆಳವಣಿಗೆ ಕುಂಠಿತವಾಗಿದೆ. ಈಗಾಗಲೇ ತಿಳಿದಿರುವಂತೆ ಇದಕ್ಕೆ ಮುಖ್ಯ ಕಾರಣ, ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿರುವುದು ಅಥವಾ ಜನರ ಒಟ್ಟಾರೆ ಕೊಳ್ಳುವ ಶಕ್ತಿ ಕಡಿಮೆಯಾಗಿರುವುದು.

ಅಂದರೆ, ಜನರಲ್ಲಿ ಹಣ ಖರ್ಚು ಮಾಡುವ ಸಾಮರ್ಥ್ಯ ಕುಂದಿರುವುದು. ಇದನ್ನೇ ಇನ್ನೊಂದು ರೀತಿ ಹೇಳುವುದಾದರೆ, ಜನರ ಸಂಪಾದನೆ ಮಾಡುವ ಅವಕಾಶ ಕಡಿಮೆಯಾಗಿರುವುದು.

ಇದಕ್ಕೆ ಕಳೆದ ನಲವತೈದು ವರ್ಷಗಳಲ್ಲಿಯೇ ಅತಿಹೆಚ್ಚು ನಿರುದ್ಯೋಗ ಉಂಟಾಗಿರುವುದೂ ಪ್ರಮುಖ ಕಾರಣವಾಗಿದೆ.

ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಬಜೆಟ್ ಉದ್ಯೋಗ ಸೃಷ್ಟಿಸುವುದಕ್ಕೆ ಮತ್ತು ಅದರ ಮೂಲಕ ಜನರ ಕೊಳ್ಳುವ ಶಕ್ತಿ ಹೆಚ್ಚಿಸುವುದಕ್ಕೆ ಹೆಚ್ಚಿನ ಒತ್ತು ಕೊಡಬೇಕಿತ್ತು. ಆದರೆ, ಈ ಬಾರಿಯ ಬಜೆಟ್ ಇದರಲ್ಲಿ ದಯನೀಯವಾಗಿ ಸೋತಿರುವುದು ಕಾಣಿಸುತ್ತಿದೆ.

ಇದಕ್ಕೆ ಸರಳ ಉದಾಹರಣೆ ಎಂದರೆ ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (ನರೇಗಾ) ಕೇವಲ 61,500 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ.

ಹೋದವರ್ಷ ಅಂದರೆ 2019-20 ರಲ್ಲಿ ಈ ಯೋಜನೆಗೆ ಖರ್ಚಾಗಿದ್ದ ಹಣ 71,000 ಕೋಟಿ ರೂಪಾಯಿಗಳು.

ಹೋದವರ್ಷಕ್ಕಿಂತ ಈ 2020-21 ರ ಬಜೆಟ್‌ನಲ್ಲಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ 9,500 ಕೋಟಿಗಳಷ್ಟು ಕಡಿಮೆ ಹಣ ತೆಗೆದಿರಿಸಲಾಗಿದೆ.

ಸರ್ಕಾದ ಅಂಕಿಅಂಶಗಳ ಪ್ರಕಾರವೇ 2011-12 ರಲ್ಲಿ ಗ್ರಾಮೀಣ ಭಾಗದ ಪ್ರತಿ ವ್ಯಕ್ತಿಯ ತಿಂಗಳ ಖರ್ಚು ಸರಾಸರಿ ₹1216.88 ರಷ್ಟಿದ್ದರೆ ಅದು 2017-18 ರಲ್ಲಿ ₹1109.74 ರಷ್ಟಕ್ಕೆ ಇಳಿದಿದೆ. ಈ ಒಟ್ಟಾರೆ ಕುಸಿತದ ಪ್ರಮಾಣ ಶೇ 8.8 ರಷ್ಟಿದೆ. ಭಾರತದ ಗ್ರಾಮೀಣ ಆರ್ಥಿಕ ಕುಸಿತದ ಚಿತ್ರಣವನ್ನು ಈ ಅಂಕಿಅಂಶ ಸ್ಪಷ್ಟವಾಗಿ ತೋರಿಸುತ್ತವೆ.

ಇಂತಹ ಪರಿಸ್ಥಿತಿಯಲ್ಲಿ, ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ತಕ್ಷಣ ಉದ್ಯೋಗ ಸೃಷ್ಟಿ ಮಾಡುವ ಮತ್ತು ಗ್ರಾಮೀಣ ಭಾಗದ ಜನರ ಕೊಳ್ಳುವ ಸಾಮರ್ಥ್ಯವನ್ನು ತಕ್ಷಣವೇ ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದು ಅದನ್ನು ಹಾಗೆಯೇ ಬಳಸಿಕೊಳ್ಳಬೇಕಿತ್ತು.

ಅಂದರೆ, ಈ ಬಾರಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಬಜೆಟ್ಟಿನಲ್ಲಿ ಕನಿಷ್ಟ ಒಂದು ಲಕ್ಷ ಕೋಟಿಯಷ್ಟು ಅನುದಾನ ಕೊಡಬೇಕಿತ್ತು. ಇದರಿಂದಾಗಿ ಇವತ್ತಿಗೂ ಭಾರತದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಹಳ್ಳಿಗಳಲ್ಲಿ ತಾತ್ಕಾಲಿಕವಾದ ಉದ್ಯೋಗವಾದರೂ ಸೃಷ್ಟಿಯಾಗಿ ಅದರಿಂದ ಆರ್ಥಿಕ ಚೇತರಿಕೆಯೂ ಆಗುತ್ತಿತ್ತು.

ಆದರೆ, ಈ ಯೋಜನೆಗೆ ಕಳೆದ ಬಾರಿ ಖರ್ಚು ಮಾಡಿದ್ದಕ್ಕಿಂತ ಕಡಿಮೆ ಅನುದಾನ ಕೊಡುವ ಮೂಲಕ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಬಗ್ಗೆ ತನಗೆ ಬದ್ಧತೆಯಿಲ್ಲ ಎಂಬುದನ್ನು ತೋರಿಸಿದಂತಾಗಿದೆ.

ಹಾಗೆಯೇ, ಆರ್ಥಿಕ ಕುಸಿತದಿಂದ ದೇಶವನ್ನು ಮೇಲೆತ್ತುವ ಕ್ರಮಗಳ ಬಗ್ಗೆಯೂ ತನಗಿರುವ ಅಜ್ಞಾನವನ್ನು ತೋರಿಸಿದೆ.

ಆರ್ಥಿಕ ತಜ್ಞ ಕೇನ್ಸ್‌ನ ಪ್ರಖ್ಯಾತ ಹೇಳಿಕೆಯೊಂದಿದೆ.

“ಆರ್ಥಿಕ ಕುಸಿತದ ಕಾಲದಲ್ಲಿ ಸರ್ಕಾರ ಅತಿ ಹೆಚ್ಚು ಖರ್ಚು ಮಾಡಬೇಕು. ಜನರ ಕೈಯಲ್ಲಿ ಗುಂಡಿ ತೆಗೆಸಿ, ನಂತರ ಅದೇ ಗುಂಡಿಯನ್ನು ಅವರ ಕೈಲೇ ಪುನಃ ಮುಚ್ಚಿಸಿ ಅವರಿಗೆ ಆ ಕೆಲಸ ಮಾಡಿದ್ದಕ್ಕೆ ಸರ್ಕಾರ ಹಣ ಕೊಟ್ಟು ಜನರ ಕೈಯಲ್ಲಿ ಹಣ ಓಡಾಡುವಂತೆ ಮಾಡಬೇಕು.”

ಆರ್ಥಿಕ ತಜ್ಞ ಕೇನ್ಸ್‌

ಆದರೆ, ಈಗಿನ ಬಜೆಟ್‌ನಲ್ಲಿ ಇದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿ ಸರ್ಕಾರ ನಡೆದುಕೊಂಡಿರುವಂತೆ ಕಾಣುತ್ತದೆ.

ಶಿಕ್ಷಣ ಕ್ಷೇತ್ರಕ್ಕೆ ಹೋದಬಾರಿಗಿಂತ ಕೇವಲ 4,800 ಕೋಟಿಗಳಷ್ಟು ಮಾತ್ರ ಹೆಚ್ಚುವರಿ ಹಣ ನೀಡಲಾಗಿದೆ (ಹೋದಬಾರಿ 94,800 ಕೋಟಿ ಮತ್ತು ಈ ಬಾರಿ 99,300 ಕೋಟಿ). ಶಿಕ್ಷಣಕ್ಕೆ ಹೆಚ್ಚು ಹಣ ನೀಡಿ ಉತ್ತಮ ಶಿಕ್ಷಣ ಕೊಟ್ಟಾಗ ಮಾತ್ರ ಕ್ಷಮತೆಯುಳ್ಳ ಯುವಜನರು ತಯಾರಾಗಿ ಉದ್ಯೋಗಗಳನ್ನು ಪಡೆಯಲು ಅರ್ಹರಾಗುತ್ತಾರೆ. ಆದರೆ, ಈ ಬಜೆಟ್ ಶಿಕ್ಷಣಕ್ಕೆ ಅಗತ್ಯವಿರುವಷ್ಟು ಒತ್ತು ನೀಡಿಲ್ಲದಿರುವುದು ಮೇಲ್ನೋಟಕ್ಕೇ ಕಾಣಿಸುತ್ತಿದೆ.

ಹಾಗೆಯೇ, skill development ಗೆ ಈ ಬಜೆಟ್ ಮೀಸಲಿಟ್ಟಿರುವ ಹಣ ಕೇವಲ 3,000 ಕೋಟಿ.

ಇವತ್ತು ಕೋಟ್ಯಂತರ ನಿರುದ್ಯೋಗಿಗಳಿರುವಾಗ ಉದ್ಯೋಗ ಪಡೆಯಲು ಅಗತ್ಯ ತರಬೇತಿಯ ತುರ್ತಿತ್ತು. ಆದರೆ ಅದಕ್ಕೆ ಅತಿಕಡಿಮೆ ಹಣ ನಿಗದಿಪಡಿಸುವ ಮೂಲಕ ಸರ್ಕಾರ ಉದ್ಯೋಗ ಸೃಷ್ಟಿಯ ಬಗ್ಗೆ ತನಗಿರುವ ತಾತ್ಸಾರ ತೋರಿದಂತಾಗಿದೆ.

ಜೊತೆಗೆ, ಹೆಚ್ಚಿನ ಉದ್ಯೋಗ ಸೃಷ್ಟಿಸಬಲ್ಲ ಮೂಲಸೌಕರ್ಯ ಅಭಿವೃದ್ಧಿ, ಕಟ್ಟಡ ನಿರ್ಮಾಣ ಮತ್ತು ತಯಾರಿಕಾ ಕ್ಷೇತ್ರಗಳಿಗೆ ಈ ಕುಸಿತದ ಸಂದರ್ಭದಲ್ಲಿ ಮಾಮೂಲಿಗಿಂತ ಹೆಚ್ಚಿನ ಅನುದಾನ ನೀಡಬೇಕಿತ್ತು. ಇದು ಕೂಡ ಬಜೆಟ್ಟಲ್ಲಿ ಕಾಣುತ್ತಿಲ್ಲ.

ಒಟ್ಟಾರೆಯಾಗಿ, ಈ ಬಾರಿಯ ಬಜೆಟ್ ಅತೀ ಅವಶ್ಯವಿದ್ದ ಉದ್ಯೋಗ ಸೃಷ್ಟಿಗಾಗಲೀ ತನ್ಮೂಲಕ ಆರ್ಥಿಕ ಚೇತರಿಕೆಗಾಗಲೀ ಒತ್ತು ಕೊಟ್ಟಿಲ್ಲ ಎನ್ನುವುದು ಮೇಲ್ನೋಟಕ್ಕೇ ಕಾಣುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

“ನನ್ನ ಜನರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ; ನಾನು ಅಯೋಧ್ಯೆಗೆ ಹೋದರೆ ಸಹಿಸುವರೇ?”: ಮಲ್ಲಿಕಾರ್ಜುನ ಖರ್ಗೆ

0
ದೇಶದಾದ್ಯಂತ ಪರಿಶಿಷ್ಟ ಜಾತಿಗಳು (ಎಸ್‌ಸಿಗಳು) ಇನ್ನೂ ತಾರತಮ್ಯವನ್ನು ಎದುರಿಸುತ್ತಿವೆ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ಸರ್ಕಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರನ್ನು...