ಪ್ರಧಾನಿಯ ಜನತಾ ಕರ್ಫ್ಯೂಗೆ ದೇವೇಗೌಡರಿಂದ ಬೆಂಬಲ

ಭಾನುವಾರ ಪ್ರಧಾನ ಮಂತ್ರಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಮಾಜೀ ಪ್ರಧಾನಮಂತ್ರಿ ದೇವೇಗೌಡ ಬೆಂಬಲ ನೀಡಿದ್ದಾರೆ. ಮಾರ್ಚ್ 22 ರ ಆದಿತ್ಯವಾರದಂದು ಒಂದು ದಿನ ಜನತಾ ಕರ್ಫ್ಯೂಗೆ ಪ್ರಧಾನಿ ಮೋದಿ ನಿನ್ನೆ ಕರೆ ನೀಡಿದ್ದರು.

“ಕೇಂದ್ರ ಸರ್ಕಾರ ಮತ್ತು ದೇಶದ ಎಲ್ಲಾ ರಾಜ್ಯ ಸರ್ಕಾರಗಳು ತೆಗೆದು ಕೊಂಡಿರುವ ಮುನ್ನೆಚ್ಚರಿಕೆಯ ಉಪಕ್ರಮಗಳಿಗಾಗಿ ಅಭಿನಂದಿಸುತ್ತೇನೆ” ಎಂದಿರುವ ದೇವೇಗೌಡರು, “ಪ್ರಧಾನಿಯವರು ಮಾಡಿದ ಭಾಷಣ ಮತ್ತು ಕೊಟ್ಟ ಕರೆ ಅತ್ಯಂತ ಸಮಯೋಚಿತವೂ ಮತ್ತು ಆಚರಣೆ ಯೋಗ್ಯವೂ ಆಗಿದೆ. ಈ ಮಹಾಮಾರಿಗೆ ಮಂತ್ರ ಮತ್ತು ಮದ್ದು ಇಲ್ಲದಾಗ ಅದನ್ನು ಪ್ರತಿಯೊಬ್ಬ ಪ್ರಜೆಯೂ ಸ್ವಯಂ ಸಂಕಲ್ಪ ಮತ್ತು ಸಂಯಮದಿಂದಲೇ ಎದುರಿಸಬೇಕೆಂಬ ಪ್ರಧಾನಿಯವರ ಮಾತು ಪಾಲನೆಯೋಗ್ಯವಾಗಿದೆ. ಸಾಮಾಜಿಕ ಕರ್ತವ್ಯದ ದೃಷ್ಟಿಯಿಂದ ಜನತಾ ಕರ್ಫ್ಯೂವನ್ನು ಯಶಸ್ಸೀಗೊಳಿಸಬೇಕೆಂದು ಪ್ರಧಾನಿ ನೀಡಿರುವ ಕರೆಯನ್ನು ಪಾಲಿಸಲೇ ಬೇಕು” ಎಂದು ತನ್ನ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ತಮ್ಮ ಟ್ವೀಟ್ಟರ್ ಹ್ಯಾಂಡಲ್ ನಲ್ಲಿ ಟ್ವೀಟ್ ಮಾಡಿರುವ ದೇವೇಗೌಡರು “ಕೊರೋನಾ ಮಹಾಮಾರಿಯನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ವಯಂ ‌ಸಂಕಲ್ಪ ಹಾಗೂ ಸಂಯಮದಿಂದ ಎದುರಿಸಬೇಕೆಂಬ ಪ್ರಧಾನಿಯವರ ಮಾತು‌ ಪಾಲನಯೋಗ್ಯವಾಗಿದ್ದು, ಮಾರ್ಚ್ 22 ಭಾನುವಾರದಂದು ಪ್ರಧಾನಿ ಕರೆ ನೀಡಿರುವ ‘ಜನತಾ ಕರ್ಫ್ಯೂ’ವನ್ನು ಬೆಂಬಲಿಸುವ ಮೂಲಕ ಸಾಮಾಜಿಕ ಕರ್ತವ್ಯವನ್ನು ಪಾಲಿಸೋಣ” ಎಂದಿದ್ದಾರೆ.

ಅಲ್ಲದೆ, ಪ್ರಾಣವನ್ನೂ ಲೆಕ್ಕಿಸದೆ ಜನಸೇವೆಯಲ್ಲಿ ನಿರತರಾಗಿರುವವರ ಅನುಪಮ ಸೇವೆಗೆ ಮಾರ್ಚ್‌ 22 ರಂದು ಸಂಜೆ 5 ಗಂಟೆಗೆ 5 ನಿಮಿಷಗಳ ಕಾಲ ತಾವಿರುವ ತಾಣದಿಂದಲೇ ಧನ್ಯವಾದಗಳನ್ನು ಸಲ್ಲಿಸಬೇಕೆಂದು ಕೊಟ್ಟಿರುವ ಕರೆಯೂ ಸ್ವಾಗತಾರ್ಹವಾದುದು ಎಂದು ದೇವೇಗೌಡರು ಹೇಳಿದ್ದಾರೆ.

“ಪ್ರಧಾನಿಯವರ ಕರೆಯನ್ನು ಯಾವುದೇ ರಾಜಕೀಯ ಲೇಪ ಹಚ್ಚದೇ ನಾವೆಲ್ಲರೂ ಸ್ವಾಗತಿಸಬೇಕು ಹಾಗೂ ಪಾಲಿಸಬೇಕು. ಅದರ ಜೊತೆಗೆ ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ತೆಗೆದು ಕೊಳ್ಳಬಹುದಾದ ಸಾರ್ವಜನಿಕ ಹಿತಾಸಕ್ತಿ ಹಾಗೂ ನಮ್ಮೆಲ್ಲರ ಸ್ವಾಸ್ಥ್ಯ ಕಾಪಾಡುವ ಉಪಕ್ರಮಗಳಿಗೆ ನಾವೆಲ್ಲರೂ ವೈಯಕ್ತಿಕವಾಗಿ ಬದ್ಧರಾಗಿರಬೇಕು” ಎಂದು ಮಾಜಿ ಪ್ರಧಾನಿ ಮನವಿ ಮಾಡಿದ್ದಾರೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here