Homeನಾನು ಗೌರಿಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ. ಬನ್ನಿ ನಮ್ಮೊಡನೆ ಮಾತನಾಡಿ

ಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ. ಬನ್ನಿ ನಮ್ಮೊಡನೆ ಮಾತನಾಡಿ

- Advertisement -
- Advertisement -

| ಡಾ. ವಾಸು ಎಚ್.ವಿ |

ದೇಶದ ಸಮಸ್ಯೆಗಳ ಸುತ್ತ ಚುನಾವಣೆ ಎದುರಿಸಲು ಹಿಂಜರಿಯುತ್ತಿರುವ ಬಿಜೆಪಿ

2019ರ ಚುನಾವಣೆಯ ಒಂದು ಅತೀ ಮುಖ್ಯ ಲಕ್ಷಣವೆಂದರೆ, ಅಧಿಕಾರಾರೂಢ ಪಕ್ಷವು ದೇಶದ ಜನರ ಅಸಲೀ ಸಮಸ್ಯೆಗಳು ಚುನಾವಣೆಯಲ್ಲಿ ಚರ್ಚೆಯಾಗಬಾರದೆಂದು ಬಯಸುತ್ತಿದೆ. ಅದಕ್ಕಾಗಿ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಇದಕ್ಕೆ ಕಾರಣಗಳಿವೆ.

ಇನ್ನು 10 ವರ್ಷಗಳ ಕಾಲ ನಾನೇ ಪ್ರಧಾನಿ ಎಂದು ಖಚಿತವಾಗಿ ಭಾವಿಸಿಕೊಂಡಿದ್ದ ಬಿಜೆಪಿಯ ನಂಬಿಕೆ ಮೂರೂವರೆ ವರ್ಷಗಳಲ್ಲೇ ಅಲ್ಲಾಡಿತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದರೂ ಸಂಭ್ರಮಿಸಲಾಗದಷ್ಟು ತೆಳ್ಳಗಿನ ಮಾರ್ಜಿನ್‍ನಲ್ಲಿ ಗೆದ್ದಿದ್ದರು. ಆ ನಂತರ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಲ್ಲಾ ಕಡೆ ಸೋತರಷ್ಟೇ ಅಲ್ಲದೇ, ಈ ಹಿಂದೆ ಅಧಿಕಾರದಲ್ಲಿದ್ದ ಮೂರು ದೊಡ್ಡ ರಾಜ್ಯಗಳನ್ನು ಕಳೆದುಕೊಂಡಿದ್ದರು. ಇಲ್ಲಿಂದ ಬಿಜೆಪಿಯ ಗ್ರಾಫ್ ಇಳಿಯುತ್ತಾ ಹೋಯಿತು. ಆದರೆ, ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯವರ ಜನಪ್ರಿಯತೆ ರಾಹುಲ್ ಗಾಂಧಿಗಿಂತ ಎಷ್ಟೋ ಮೇಲೆ ಇತ್ತು, ಇಂದಿಗೂ ಇದೆ.

ಅದು ಕುಸಿಯಲು ಆರಂಭಿಸಿದ್ದು ರಾಫೇಲ್ ಭ್ರಷ್ಟಾಚಾರದ ಸದ್ದು ಹೆಚ್ಚಾಗುತ್ತಾ ಹೋದಂತೆ. ಜನವರಿಯ ನಂತರ ನಡೆದ ಸಮೀಕ್ಷೆಗಳಲ್ಲೆಲ್ಲಾ ಬಿಜೆಪಿಯ ಕುಸಿತವು ಕಾಣುತ್ತಾ ಬಂದಿತು. ಮೊದಮೊದಲು ಬಿಜೆಪಿಗೆ ಬಹುಮತ ಬರಲ್ಲ ಅಂತ ಇದ್ದದ್ದು, ಎನ್‍ಡಿಎಗೂ ಬಹುಮತ ಬರಲ್ಲ ಅಂತ ಖಚಿತವಾಯಿತು. ಚುನಾವಣೆ ಹೊತ್ತಿಗೆ ಈ ಗ್ರಾಫ್ ಮತ್ತಷ್ಟು ಇಳಿದರೆ ಏನು ಮಾಡೋದು ಎನ್ನುವ ಚಿಂತೆಯಲ್ಲಿದ್ದ ಅವರಿಗೆ ಪುಲ್ವಾಮಾ ನೆರವಿಗೆ ಬಂದಿತು.

ಸಿಆರ್‍ಪಿಎಫ್ ಯೋಧರು ಸತ್ತಿದ್ದಕ್ಕೆ ಇಡೀ ದೇಶವೇ ಮರುಗಿತು. ಆದರೆ ಬಿಜೆಪಿಗೆ ಒಂಥರಾ ಸಂಭ್ರಮವಿತ್ತು. ಪಾಕಿಸ್ತಾನದ ಮೇಲೆ ಒಂದು ದಾಳಿ ನಡೆಸಿ (ಈ ದಾಳಿಯ ‘ಸಾಧನೆ’ಯ ಕುರಿತ ವಿವಾದಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ) ಮಸ್ಕುಲಾರ್ ನ್ಯಾಷನಲಿಸಂ ಮೂಲಕ ಚೇತರಿಕೆ ಪಡೆದುಕೊಳ್ಳಲು ನೋಡಿದರು. ಮಸ್ಕುಲಾರ್ ನ್ಯಾಷನಲಿಸಂ ಎಂದರೆ, ದೇಶದ ಅಸಲೀ ಸಮಸ್ಯೆಗಳನ್ನು ಬಗೆಹರಿಸಿ, ಜನರನ್ನು ಸಬಲಗೊಳಿಸಿ ದೇಶ ಕಟ್ಟುವ ಬದಲಿಗೆ ಹೊರಗಿನ ಶತ್ರುವಿನ ವಿರುದ್ಧ ತೋಳೇರಿಸುತ್ತಾ ತನ್ನ ಬಲ ಹೆಚ್ಚಿಸಿಕೊಳ್ಳುವುದು. ಒಂದು ವೇಳೆ ಶತ್ರು ಇಲ್ಲದಿದ್ದರೆ ಅಂತಹ ಶತ್ರುವನ್ನು ಸೃಷ್ಟಿಸುವುದು ಇದಕ್ಕೆ ಅಗತ್ಯವಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗೆ ನೆರವು ನೀಡುತ್ತಿರುವ ನೆರೆಯ ಪಾಕಿಸ್ತಾನ ಇರುವುದು ಬಿಜೆಪಿಗೆ ಬಹಳ ಅನುಕೂಲ. ಬಿಜೆಪಿ ಆಡಳಿತಾವಧಿಯಲ್ಲಿ ಹಿಂದಿಗಿಂತ ಹೆಚ್ಚು ಭಯೋತ್ಪಾದಕ ಚಟುವಟಿಕೆ ನಡೆದಿದ್ದರೂ, ಹೆಚ್ಚು ಸೈನಿಕರು ಸತ್ತಿದ್ದರೂ ಲೋಪ ಎಲ್ಲಾಯಿತು ಎಂದು ನೋಡಿಕೊಳ್ಳುವ ಬದಲು, ಸೈನಿಕರ ಶವವಿಟ್ಟುಕೊಂಡು ಅದರ ದುರ್ಬಳಕೆಗೆ ಮುಂದಾಯಿತು.

ನಿಧಾನಕ್ಕೆ ಈ ಏರ್‍ಸ್ಟ್ರೈಕ್‍ಗಳು ಜನರ ತಲೆಯಿಂದ ಮರೆಯಾಗುತ್ತಾ, ಅಸಲೀ ವಿಚಾರಗಳು ಮುಂದಕ್ಕೆ ಬಂದವು. ಜನರು ಮತ್ತೆ ನಿರುದ್ಯೋಗ, ರೈತರಿಗೆ ಬೆಲೆ ಇತ್ಯಾದಿಗಳನ್ನು ಮಾತಾಡುತ್ತಾ ಬಂದರು. ಜೊತೆಗೆ ರಾಹುಲ್‍ಗಾಂಧಿ ಬಡವರ ಖಾತೆಗೆ ಸರಾಸರಿ 72,000 ರೂ ಹಾಕುವ ನ್ಯಾಯ್ ಯೋಜನೆ ಪ್ರಕಟಿಸಿದರು. ಚರ್ಚೆ ಬಡವರ ಸುತ್ತಲೂ ಶುರುವಾಯಿತು.

ಇದೀಗ ಮತ್ತೆ ಮೋದಿಯವರು ರಂಗಕ್ಕಿಳಿದರು. ಇಸ್ರೋ ಮುಖ್ಯಸ್ಥರು ಮಾಡಬೇಕಾದ ಪ್ರಕಟಣೆಯನ್ನು ತಾವೇ ಮಾಡಲು ನಿಂತರು. ಸಿನೀಮಿಯಗೊಳಿಸಲು ಬೆಳಿಗ್ಗೆ 11ಕ್ಕೆ ಒಂದು ಟ್ವೀಟ್ ಮಾಡಿ, ತಾನು 11.45ಕ್ಕೆ ರಾಷ್ಟ್ರವನ್ನುದ್ದೇಶಿಸಿ ಮಾತಾಡಲಿದ್ದೇನೆಂದು ಘೋಷಿಸಿದರು. ಆ ನಂತರ 20 ನಿಮಿಷಕ್ಕೂ ಹೆಚ್ಚು ಕಾಯಿಸಿ ಭಾಷಣ ಮಾಡಿದರು. ನಿಸ್ಸಂದೇಹವಾಗಿ ದೇಶವು ಹೆಮ್ಮೆ ಪಟ್ಟುಕೊಳ್ಳಬೇಕಾದ ಒಂದು ಸಾಧನೆಯನ್ನು, ಈ ದೇಶದ ವಿಜ್ಞಾನಿಗಳ ಸಾಧನೆಯನ್ನು ಮುಂದಿಟ್ಟರು. ಆದರೆ, ಅವರ ಉದ್ದೇಶ ಅದಾಗಿರಲಿಲ್ಲ. ಮತ್ತೆ ಗೋದಿ ಮೀಡಿಯಾ ಒಂದು ವಾರ ಕಾಲ ಚರ್ಚೆಯನ್ನು ದೇಶದೊಳಗಿನ ಸಮಸ್ಯೆಗಳ ಕುರಿತು ಯಾರೂ ಮಾತಾಡದಂತೆ ನೋಡಿಕೊಳ್ಳುತ್ತದೆ ಎಂಬುದು ಅವರಿಗೆ ಗೊತ್ತು.

ಬಿಜೆಪಿಗೆ ಏಕೆ ಇಷ್ಟೊಂದು ಹೆದರಿಕೆ? ಈಗ ದೇಶದಲ್ಲಿ ಶೇ.25ರಷ್ಟು ಕಡುಬಡವರಿದ್ದು, ಅವರ ಅಕೌಂಟಿಗೆ ಹಣ ಹಾಕುತ್ತೇವೆಂದು ರಾಹುಲ್‍ಗಾಂಧಿ ಪ್ರಕಟಿಸಿದಾಗ ಅವರನ್ನು ಕೌಂಟರ್ ಮಾಡುವುದು ಕಷ್ಟವೇ? ಅಲ್ಲಾ ಕಣಪ್ಪಾ, ಈ ದೇಶದಲ್ಲಿ 40 ವರ್ಷ ನಿಮ್ಮ ಕುಟುಂಬದವರೇ ಆಳಿದ್ದೀರಿ, ಈಗಲೂ ಇಷ್ಟು ಕಡುಬಡವರು ಏಕಿದ್ದಾರೆ ಎಂದು ಕೇಳಬಹುದಲ್ಲವೇ? ನಿರುದ್ಯೋಗ, ರೈತರಿಗೆ ಒಳ್ಳೆಯ ಬೆಲೆ ಇತ್ಯಾದಿಗಳ ವಿಚಾರದಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಅದ್ಭುತವಾದದ್ದೇನೂ ಮಾಡಿಲ್ಲ. ಆದರೆ ಅದನ್ನು ಪ್ರಶ್ನೆ ಮಾಡಲು ಹೊರಟರೆ, ಹೌದು ಕಾಂಗ್ರೆಸ್ ಅದ್ಭುತವಾದದ್ದನ್ನು ಮಾಡಿರಲಿಲ್ಲ, ಬಿಜೆಪಿ ಪರಿಸ್ಥಿತಿಯನ್ನು ಮತ್ತಷ್ಟು ಅಧ್ವಾನಗೊಳಿಸಿತು ಎಂಬುದು ಬಯಲಾಗುತ್ತದೆ. ಇದೇ ನಿಮ್ಮ ಸಮಸ್ಯೆಯೇ?

ಗಡಿಯಿಂದ ಒಳಕ್ಕೆ ಬನ್ನಿ ಬಾಹ್ಯಾಕಾಶದಿಂದ ಕೆಳಗಿಳಿದು ಬನ್ನಿ. ದೇಶದ ಅಸಲೀ ಸಮಸ್ಯೆಗಳ ಕುರಿತು ಚರ್ಚಿಸಿ. ಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ.

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...