Homeಮುಖಪುಟಕೇಂದ್ರವು ರಾಜ್ಯಗಳ ತೆರಿಗೆಯ ಪಾಲಷ್ಟೇ ನೀಡುತ್ತಿದೆ ಹೊರತು, ಪೈಸೆಯಷ್ಟೂ ಹೆಚ್ಚು ನೀಡುತ್ತಿಲ್ಲ: ಪ್ರಣಬ್ ಸೇನ್

ಕೇಂದ್ರವು ರಾಜ್ಯಗಳ ತೆರಿಗೆಯ ಪಾಲಷ್ಟೇ ನೀಡುತ್ತಿದೆ ಹೊರತು, ಪೈಸೆಯಷ್ಟೂ ಹೆಚ್ಚು ನೀಡುತ್ತಿಲ್ಲ: ಪ್ರಣಬ್ ಸೇನ್

ಆರೋಗ್ಯ ತಹಬದಿಗೆ ಬರುವ ಹೊತ್ತಿಗೆ ರಾಜ್ಯ ಸರ್ಕಾರಗಳ ಹಣಕಾಸು ಪರಿಸ್ಥಿತಿ ಛಿದ್ರವಾಗಿರುತ್ತದೆ. ದಿನನಿತ್ಯದ ಚಟುವಟಿಕೆಗಳನ್ನು ಮುಂದುವರಿಸಲು ಅವು ಕೇಂದ್ರ ಸರ್ಕಾರದ ಮುಂದೆ ಭಿಕ್ಷಾಪತ್ರೆ ಹಿಡಿದು ನಿಲ್ಲಬೇಕಾಗುತ್ತದೆ.

- Advertisement -
- Advertisement -

ರಾಜ್ಯದ ಪರಿಸ್ಥಿತಿ ಈಗಾಗಲೇ ಛಿಧ್ರವಾಗಿದೆ. ಅದು ಸಾಲದು ಎಂಬಂತೆ ಇದ್ದಒಂದೆರಡು ದಾರಿಯನ್ನೂ ಬಂದ್ ಮಾಡಿ ಅವುಗಳ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಾಗಿದೆ. “ಅವಶ್ಯಕ ಸರಕುಗಳು ಮತ್ತು ಸೇವೆಗಳ” ಮೂಲ ಪಟ್ಟಿಯಲ್ಲಿದ್ದ ಮಧ್ಯ ಮತ್ತು ಇ-ಕಾಮರ್ಸ್ಇಂದ ರಾಜ್ಯಗಳಿಗೆ ವರಮಾನ ಬರುತ್ತಿತ್ತು. ಪಾನ ನಿಷೇಧ ಇಲ್ಲದ ಬಹುತೇಕ ಎಲ್ಲಾ ರಾಜ್ಯಗಳಿಗೆ ಶೇಕಡ 30-40ರಷ್ಟು ಆದಾಯ ಮದ್ಯದ ಮಾರಾಟದಿಂದ ಬರುತ್ತಿತ್ತು. ಅವಶ್ಯಕವಲ್ಲದ ಪದಾರ್ಥಗಳ ಇ-ವಾಣಿಜ್ಯದ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಏಪ್ರಿಲ್ 14ರಂದು ಲಾಕ್‌ಡೌನ್ ವಿಸ್ತರಿಸಿದಾಗ ಕೇಂದ್ರ ಸರ್ಕಾರ ಯಾವುದೇ ಕಾರಣವೂ ಇಲ್ಲದೆ ಇದನ್ನೂ ರದ್ದುಗೊಳಿಸಿದೆ. ಇದರಿಂದ ರಾಜ್ಯ ತೆರಿಗೆಯ ಶೇಕಡ 25ರಿಂದ 30ರಷ್ಟು ಕಡಿಮೆಯಾಯಿತು.

ಕೊರೊನಾ ಪಿಡುಗಿನಿಂದ ಒಂದು ದೊಡ್ಡ ವಿತ್ತೀಯ ಸವಾಲು ಎದುರಾಗಿದೆ. ಇತ್ತೀಚಿನ ದಿನಗಳಲ್ಲೇ ಇದು ಅತಿದೊಡ್ಡ ಸವಾಲು. ಈ ಸಮಸ್ಯೆಗೆ ಮೂರು ವಿಭಿನ್ನ ಆಯಾಮಗಳಿವೆ.
1. ರೋಗ ಪತ್ತೆ ಹಚ್ಚುವುದಕ್ಕೆ ಹಾಗೂ ಅದರ ಶುಶ್ರೂಷೆಗೆ ತಗಲುವ ವೆಚ್ಚ.
2. ಸೋಂಕನ್ನು ನಿಯಂತ್ರಿಸುವುದಕ್ಕೆ “ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು” ಇತ್ಯಾದಿ ಕ್ರಮಗಳಿಗೆ ಸಂಬಂಧಿಸಿದ ಖರ್ಚು ಮತ್ತು ಅದರ ಪರಿಣಾಮವಾಗಿ ತೀವ್ರಗೊಳ್ಳುವ ಜೀವನ ನಿರ್ವಹಣೆಯ ಸಂಕಷ್ಟ.
3. ಆರ್ಥಿಕ ಚಟುವಟಿಕೆಯ ಕುಸಿತದಿಂದ ತೆರಿಗೆಯ ಸಂಗ್ರಹಣೆಯಲ್ಲಿ ಆಗುವ ನಷ್ಟ.

ಭಾರತದಲ್ಲಿ ಕೊರೊನಾ ಪಿಡುಗು ಪ್ರಾರಂಭವಾದಾಗ ರಾಜ್ಯಗಳು ತಮ್ಮ ಕೈಲಾದಷ್ಟು ಮಟ್ಟಿಗೆ ಇದಕ್ಕೆ ಪ್ರತಿಸ್ಪಂದಿಸಿದವು. ಆರೋಗ್ಯ ಅನ್ನುವುದು ರಾಜ್ಯದ ವಿಷಯ. ರಾಜ್ಯಗಳು ರಾಜ್ಯ ಮಟ್ಟದ ಶಾಸನಗಳನ್ನು ಬಳಸಿಕೊಂಡು ಅದನ್ನು ನಿರ್ವಹಿಸುತ್ತಿದ್ದವು. ಸೋಂಕಿನ ನಿಯಂತ್ರಣ, ಸೋಂಕಿತರನ್ನು ಗುರುತಿಸುವುದು ಮತ್ತು ಅವರ ಶುಶ್ರೂಷೆ ಎಲ್ಲವನ್ನು ಅವೇ ಗಮನಿಸುತ್ತಿದ್ದವು. ಕೇಂದ್ರ ಚಿತ್ರದಲ್ಲೇ ಇರಲಿಲ್ಲ. ಎಲ್ಲಾ ರಾಜ್ಯಗಳು ತಮ್ಮದೇ ಆದ ರೀತಿಯಲ್ಲಿ ಲಾಕ್‌ಡೌನನ್ನು ಜಾರಿಗೆ ತಂದಿದ್ದವು. ಲಾಕ್‌ಡೌನ್ ನಡುವೆಯೂ ಹಲವಾರು ಆರ್ಥಿಕ ಚಟುವಟಿಕೆಗಳಿಗೆ ಅವಕಾಶವಿತ್ತು. ಅದರ ವ್ಯಾಪ್ತಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿತ್ತು. ಅವುಗಳು ಖಾಯಿಲೆಯನ್ನೂ ನಿಯಂತ್ರಿಸಬೇಕಿತ್ತು ಮತ್ತು ಕನಿಷ್ಠ ಜೀವನದ ಅವಶ್ಯಕತೆಗಳಿಗೆ ತೊಂದರೆಯಾಗದಂತೆಯೂ ನೋಡಿಕೊಳ್ಳಬೇಕಿತ್ತು. ಇವೆರಡರ ನಡುವೆ ಸಮತೋಲನವನ್ನು ಕಾಪಾಡಿಕೊಂಡೇ ನಿರ್ಧಾರವನ್ನು ತೆಗೆದುಕೊಳ್ಳಬೇಕಿತ್ತು.


ಇದನ್ನೂ ಓದಿ: ಸರ್ಕಾರ ತಪ್ಪು ದಿಕ್ಕಿನಲ್ಲಿ ಚಲಿಸುತ್ತಿದೆ: ಕೋವಿಡ್‌ ಪ್ಯಾಕೇಜ್‌ ಟೀಕಿಸಿದ ಆರ್‌ಎಸ್‌ಎಸ್ ಅಂಗಸಂಸ್ಥೆ ಬಿಎಂಎಸ್


ಈ ಸಮಯದಲ್ಲಿ ಕೇಂದ್ರ ಸರ್ಕಾರ ಘೋಷಿಸಿದ ಒಂದೇ ಒಂದು ಕಾರ್ಯಕ್ರಮ ಅಂದರೆ ಪಿಎಂ ಗರೀಬಿ ಕಲ್ಯಾಣ ಯೋಜನೆ. ಮಾರ್ಚ್ ತಿಂಗಳ ಮಧ್ಯ ಭಾಗದಲ್ಲಿ ಘೋಷಿಸಿದ ಇದು ಕೇಂದ್ರ ಮಟ್ಟದಲ್ಲಿ ರೂಪಿತವಾದ ಯೋಜನೆ. ಅದರಲ್ಲಿ ನೆರವು ನೇರವಾಗಿ ಜನರಿಗೆ ವರ್ಗಾವಣೆಯಾಗುತ್ತಿತ್ತು. ಆದರೆ ಅದರಿಂದ ರಾಜ್ಯಗಳಿಗೆ ಖಾಯಿಲೆಯನ್ನಾಗಲಿ, ಹಸಿವನ್ನಾಗಲಿ ನಿರ್ವಹಿಸುವುದಕ್ಕೆ ಯಾವ ರೀತಿಯಲ್ಲೂ ಪ್ರಯೋಜನವಾಗಲಿಲ್ಲ. ಅದಕ್ಕಾಗಿ ಖರ್ಚಾಗಿದ್ದು ಜಿಡಿಪಿಯ ಕೇವಲ ಶೇಕಡ 0.4ರಷ್ಟು. ಆದರೆ ಅದು ಕೇಂದ್ರವನ್ನು ಕುರಿತಂತೆ ಅಪಾರವಾದ ರಾಜಕೀಯ ಸದ್ಭಾವನೆಯನ್ನು ಮೂಡಿಸುವಲ್ಲಿ ನೆರವಾಯಿತು.

ಅನಂತರ ಮಾರ್ಚ್ 24ರಂದು ಪ್ರಧಾನ ಮಂತ್ರಿಗಳು ದೇಶಾದ್ಯಂತ ಜಗತ್ತಿನಲ್ಲೇ ಅತ್ಯಂತ ಸಮಗ್ರವಾದ ಮತ್ತು ಕಠೋರವಾದ ಲಾಕ್‌ಡೌನ್ ಘೋಷಿಸಿದರು. ದಿಢೀರನೆ ಶೇಕಡ 60ರಷ್ಟು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡವು. ಅದು ಯಾವುದೇ ಮುನ್ಸೂಚನೆಯೂ ಇಲ್ಲದೆ ಜಾರಿಗೆ ಬಂದಿತು. ಕೇವಲ ಕೆಲವು “ಅವಶ್ಯಕ ಸರಕು ಮತ್ತು ಸೇವೆಗಳಿಗೆ” ಮಾತ್ರ ಅವಕಾಶ ಕೊಡಲಾಗಿತ್ತು. ಅಲ್ಲೂ ಕೆಲವು ಷರತ್ತುಗಳಿದ್ದವು. ಅದರಿಂದ ರಾಜ್ಯದ ಹಣಕಾಸು ಸ್ಥಿತಿಗೆ ಎರಡು ರೀತಿಯಲ್ಲಿ ಪೆಟ್ಟು ಬಿತ್ತು. ಮೊದಲನೆಯದಾಗಿ ಜನರ ಬದುಕು ಮತ್ತಷ್ಟು ಕಷ್ಟಕರವಾಯಿತು. ಅವರ ಕ್ಷೇಮಕ್ಕಾಗಿ ರಾಜ್ಯ ಸರ್ಕಾರಗಳು ಹೆಚ್ಚು ಹಣ ಖರ್ಚು ಮಾಡಬೇಕಾಯಿತು. ಇದು ಅನಿವಾರ್ಯ. ನಗದಿನಲ್ಲಿ ಕೊಡುತ್ತಿದ್ದ ನೆರವಿನ ಪ್ರಮಾಣವನ್ನು ಹೆಚ್ಚಿಸಬೇಕಾಯಿತು. ಹಾಗೆಯೇ ಪುಕ್ಕಟೆಯಾಗಿ ಅಥವಾ ರಿಯಾಯಿತಿ ದರದಲ್ಲಿ ನೀಡುತ್ತಿದ್ದ ಆಹಾರ ಪದಾರ್ಥಗಳ ಪ್ರಮಾಣವನ್ನು ಕೂಡ ಹೆಚ್ಚಿಸಬೇಕಾಯಿತು. ವಲಸಿಗರು ಗುಂಪು ಗುಂಪಾಗಿ ಹಿಂತಿರುಗಿ ಬರಲು ಪ್ರಾರಂಭಿಸಿದ್ದರಿಂದ ಈ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು. ಇದರಿಂದ ರಾಜ್ಯಗಳ ಹೊರೆ ಹೆಚ್ಚಾಯಿತು. ವಲಸೆಗಾರರು ಹೊರಡುವ ಸ್ಥಳಗಳಲ್ಲಿ, ತಲುಪುವ ಸ್ಥಳಗಳಲ್ಲಿ, ಮಧ್ಯದಲ್ಲಿ ಅವರು ಹಾದು ಹೋಗುವ ಸ್ಥಳಗಳಲ್ಲಿ ಹೀಗೆ ಎಲ್ಲಾ ಕಡೆಗಳಲ್ಲೂ ಇದರ ಪರಿಣಾಮ ಆಯಿತು. ಕೇಂದ್ರ ಪಿಎಂಜಿಕೆವೈ ಘೋಷಿಸಿದ ಮೇಲೆ ಅದು ಇನ್ಯಾವುದೇ ರೀತಿಯಲ್ಲೂ ಅದು ರಾಜ್ಯಗಳಿಗೆ ನೆರವಾಗಲಿಲ್ಲ.

ವಲಸೆ ಕಾರ್ಮಿಕರ ಕಾಲ್ನಡಿಗೆ ಕರುಣಾಜನಕ; ವರದಿ ಸಲ್ಲಿಸಿ: ಸರ್ಕಾರಗಳಿಗೆ ಮದ್ರಾಸ್ ಹೈಕೋರ್ಟ್

ಎರಡನೆಯದಾಗಿ ಬಹುಪಾಲು ಎಲ್ಲಾ ರಾಜ್ಯಗಳ ತೆರಿಗೆಗಳು (ವಿಶೇಷವಾಗಿ ಸರಕು ಮತ್ತು ಸೇವಾ ತೆರಿಗೆ) “ಅವಶ್ಯಕವಲ್ಲದ” ಸರಕುಗಳ ಮೂಲಕವೇ ಬರುವುದು. ಹಾಗಾಗಿ ಲಾಕ್‌ಡೌನಿನಿಂದ ರಾಜ್ಯಗಳ ಕಂದಾಯ ಸಂಗ್ರಹಣೆ ತೀವ್ರವಾಗಿ ಕುಸಿಯಿತು. ಈ ಒಂದು ಕ್ರಮದಿಂದಲೇ ರಾಜ್ಯಗಳ ಕಂದಾಯ ಸಂಗ್ರಹಣೆ ಏಪ್ರಿಲ್ 2020ರಲ್ಲಿ ಶೇಕಡ 40ರಷ್ಟು ಕಡಿಮೆಯಾಯಿತು. ನಿಜ, ಕೇಂದ್ರದ ತೆರಿಗೆ ಸಂಗ್ರಹಣೆಯೂ ಕಡಿಮೆಯಾಗುತ್ತದೆ. ಆದರೆ ಅದಕ್ಕೆ ತೆರಿಗೆ ಬೇರೆ ಮೂಲಗಳಿಂದಲೂ ಬರುತ್ತದೆ. ಅದು ನಿಂತಿಲ್ಲ. ಮುಖ್ಯವಾಗಿ ವರಮಾನ ತೆರಿಗೆ, ಕಾರ್ಪೋರೇಟ್ ‌ತೆರಿಗೆ ಮತ್ತು ಕಸ್ಟಮ್ಸ್‌ ಡ್ಯೂಟಿ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಕೇಂದ್ರದ ಜಿಎಸ್‌ಟಿಯಲ್ಲಿ ಶೇಕಡ 40ರಷ್ಟು ತೆರಿಗೆಯನ್ನು ರಾಜ್ಯಗಳೊಂದಿಗೆ ಕೇಂದ್ರವೂ ಹಂಚಿಕೊಳ್ಳುತ್ತಿತ್ತು.

ಹಾಗಾಗಿ ಜಿಎಸ್‌ಟಿ ಕುಸಿದಾಗ ದೊಡ್ಡ ಹೊಡೆತ ಬೀಳುವುದು ರಾಜ್ಯಗಳಿಗೆ. ರಾಜ್ಯಗಳ ಮೇಲೆ ಇದರ ಒಟ್ಟಾರೆ ಪರಿಣಾಮ ತೀವ್ರವಾಗಿರುತ್ತದೆ. ಒಂದುಕಡೆ ರಾಜ್ಯಗಳ ಖರ್ಚು ತೀವ್ರವಾಗಿ ಹೆಚ್ಚುತ್ತಿದೆ. ಅದೇ ಸಮಯದಲ್ಲಿ ಅವುಗಳಿಗೆ ಬರಬೇಕಾದ ತೆರಿಗೆಯೂ ತೀವ್ರವಾಗಿ ಕಡಿಮೆಯಾಗುತ್ತಿದೆ. ಜೊತೆಗೆ ರಾಜ್ಯಗಳ ಸ್ಥಿತಿ ಕೇಂದ್ರಕ್ಕಿಂತ ತೀರಾ ಬೇರೆ. ಅವುಗಳಿಗೆ “ಕಠಿಣವಾದ ಬಜಿಟ್ ಮಿತಿ” ಕೂಡ ಇರುತ್ತದೆ. ರಾಜ್ಯಗಳಿಗೆ ಇರುವ ವರಮಾನದ ಮೂಲ ಕೆಲವೇ. ಅದನ್ನು ಬಳಸಿಕೊಂಡೇ ಅವು ಖರ್ಚು ಮಾಡಬೇಕು. ಒಂದು ತೆರಿಗೆಯಿಂದ ಬಂದದ್ದು (ಸ್ವಂತ ತೆರಿಗೆಗಳು ಮತ್ತು ಹಣಕಾಸು ಸಮಿತಿ ನಿರ್ದೇಶಿಸಿದ ಕೇಂದ್ರ ತೆರಿಗೆಯ ಪಾಲು), ಎರಡನೆಯದು ಶಾಸನಬದ್ಧವಲ್ಲದ ವರ್ಗಾವಣೆಯ ಅಡಿಯಲ್ಲಿ ಕೇಂದ್ರದಿಂದ ಬಂದ ಹಣ ಮತ್ತು ಮೂರನೆಯದು ರಾಜ್ಯ ಮಾರುಕಟ್ಟೆಯಿಂದ ಪಡೆದ ಸಾಲ. ಇಷ್ಟನ್ನು ಮಾತ್ರ ರಾಜ್ಯಗಳು ಖರ್ಚು ಮಾಡಬಹುದು. ಏಪ್ರಿಲ್ 2020ರಿಂದ ರಾಜ್ಯಸರ್ಕಾರಕ್ಕೆ ಬರಬೇಕಾದ ತೆರಿಗೆಯ ಪಾಲನ್ನಷ್ಟೇ ಕೇಂದ್ರ ಸರ್ಕಾರವು ಕಟ್ಟುನಿಟ್ಟಾಗಿ ರಾಜ್ಯಗಳಿಗೆ ಬಿಡುಗಡೆ ಮಾಡುತ್ತಿದೆ. ಕೇಂದ್ರ ಹಣಕಾಸು ಸಮಿತಿ ಸೂಚಿಸಿದ್ದಕ್ಕಿಂತ ಒಂದೇ ಒಂದು ಪೈಸೆಯನ್ನೂ ಹೆಚ್ಚಾಗಿ ನೀಡುತ್ತಿಲ್ಲ.


ಓದಿ: ವಲಸೆ ಕಾರ್ಮಿಕರ ಕಷ್ಟ ನಿವಾರಣಗೆ ಕೇಂದ್ರ, ರಾಜ್ಯ ಸರ್ಕಾರಗಳು ಮಾಡಿದ್ದೇನು?: ಮದ್ರಾಸ್ ಹೈಕೋರ್ಟ್ ಪ್ರಶ್ನೆ


ರಾಜ್ಯದ ಪರಿಸ್ಥಿತಿ ಈಗಾಗಲೇ ಛಿಧ್ರವಾಗಿದೆ. ಅದು ಸಾಲದು ಎಂಬಂತೆ ಇದ್ದಒಂದೆರಡು ದಾರಿಯನ್ನೂ ಬಂದ್ ಮಾಡಿ ಅವುಗಳ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲಾಗಿದೆ. “ಅವಶ್ಯಕ ಸರಕುಗಳು ಮತ್ತು ಸೇವೆಗಳ” ಮೂಲ ಪಟ್ಟಿಯಲ್ಲಿದ್ದ ಮಧ್ಯ ಮತ್ತು ಇ-ಕಾಮರ್ಸ್ಇಂದ ರಾಜ್ಯಗಳಿಗೆ ವರಮಾನ ಬರುತ್ತಿತ್ತು. ಪಾನ ನಿಷೇಧ ಇಲ್ಲದ ಬಹುತೇಕ ಎಲ್ಲಾ ರಾಜ್ಯಗಳಿಗೆ ಶೇಕಡ 30-40ರಷ್ಟು ಆದಾಯ ಮದ್ಯದ ಮಾರಾಟದಿಂದ ಬರುತ್ತಿತ್ತು. ಅವಶ್ಯಕವಲ್ಲದ ಪದಾರ್ಥಗಳ ಇ-ವಾಣಿಜ್ಯದ ಮೇಲೆ ಜಿಎಸ್‌ಟಿ ವಿಧಿಸಲಾಗುತ್ತಿತ್ತು. ಏಪ್ರಿಲ್ 14ರಂದು ಲಾಕ್‌ಡೌನ್ ವಿಸ್ತರಿಸಿದಾಗ ಕೇಂದ್ರ ಸರ್ಕಾರ ಯಾವುದೇ ಕಾರಣವೂ ಇಲ್ಲದೆ ಇದನ್ನೂ ರದ್ದುಗೊಳಿಸಿದೆ. ಇದರಿಂದ ರಾಜ್ಯತೆರಿಗೆ ಶೇಕಡ 25ರಿಂದ 30ರಷ್ಟು ಕಡಿಮೆಯಾಯಿತು.

ರಾಜ್ಯಗಳ ವಿತ್ತೀಯ ಸಂಕಟ ಇಲ್ಲಿಗೆ ನಿಲ್ಲುವುದಿಲ್ಲ. ಇನ್ನೂ ಮೂರು ಹೊಡೆತಗಳನ್ನು ಅವು ನಿಭಾಯಿಸಬೇಕು. ಮೊದಲನೆಯದಾಗಿ ಕೇಂದ್ರವು ಎಲ್ಲಾ ಮಂತ್ರಾಲಯ/ವಿಭಾಗಗಳ (10ನ್ನು ಬಿಟ್ಟು) ಖರ್ಚಿನಲ್ಲಿ ಶೇಕಡ 5-10ರಷ್ಟನ್ನು ಸದ್ದಿಲ್ಲದೆ ಕಡಿತಗೊಳಿಸಿದೆ.

ಹಲವು ವರ್ಷಗಳಿಂದ ಇವೆಲ್ಲವನ್ನೂ ಬಲ್ಲ ನನಗೆ ಇದರಪರಿಣಾಮ ಸ್ಪಷ್ಟವಾಗಿ ಗೊತ್ತು. ಈ ಕಡಿತ ಸಂಪೂರ್ಣವಾಗಿ ಆಗುವುದು ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ (ಸಿಎಸ್‌ಎಸ್). ಈ ಸಿಎಸ್‌ಎಸ್ ಯೋಜನೆಗಳನ್ನು ರಾಜ್ಯ ಸರ್ಕಾರಗಳು ಜಾರಿಗೊಳಿಸುತ್ತವೆ. ಆದರೆ ಅವುಗಳಿಗೆ ಹಣ ಹೂಡುವುದು ಕೇಂದ್ರ. ಅದರಲ್ಲಿ ಬಹುಪಾಲು ಕೇಂದ್ರ ರಾಜ್ಯಗಳಿಗೆ ಮಾಡುವ ಶಾಸನ ಬದ್ಧವಲ್ಲದ ವರ್ಗಾವಣೆಗಳು.  ಹೀಗೆ ಖರ್ಚಿನಲ್ಲಿ ಕಡಿತವಾದಾಗಲೆಲ್ಲಾ ಎಲ್ಲಾ ಮಂತ್ರಾಲಯಗಳು/ವಿಭಾಗಗಳು ತಮ್ಮ ನಿಯಂತ್ರಣದಲ್ಲಿ  ಬರುವ ವಿಭಾಗಗಳ ಬಜೆಟ್‌ನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತವೆ. ಸಿಎಸ್‌ಎಸ್ ಈ ಗುಂಪಿನಲ್ಲಿ ಬರುವುದಿಲ್ಲ. ಹಾಗಾಗಿ ಆಗುವ ಕಡಿತಗಳೆಲ್ಲಾ ಹೆಚ್ಚು ಕಮ್ಮಿ ಸಿಎಸ್‌ಎಸ್ ಯೋಜನೆಗಳಲ್ಲೇ ಆಗುತ್ತವೆ.

ಎರಡನೆಯದಾಗಿ, ಜಾಗತಿಕತೈಲ ಬೆಲೆಯಲ್ಲಿ ಕುಸಿತವಾಗಿರುವುದರಿಂದ ತೈಲವನ್ನು ಅಮದು ಮಾಡಿಕೊಳ್ಳುತ್ತಿದ್ದ ಭಾರತದಂತಹ ದೇಶಗಳಿಗೆ ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಢೀಕರಿಸಲು ಅವಕಾಶ ಸಿಕ್ಕಿದೆ. ಮೊದಲು ಹಾಗೆ ಬಂದಂತಹ ಆದಾಯ ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯಾಗುತ್ತಿತ್ತು. ಆದರೆ ಈ ಸಲ ಕೇಂದ್ರ ಸ್ವತಂತ್ರವಾಗಿ ತೆರಿಗೆಯನ್ನು ವಿಧಿಸುವ ಮೂಲಕ ಇಡೀ ಅವಕಾಶವನ್ನು ತಾನೇ ಬಳಸಿಕೊಂಡಿದೆ. ಅದರ ಸಾಧ್ಯತೆಯ ಬಗ್ಗೆ ರಾಜ್ಯಗಳು ಎಚ್ಚೆತ್ತುಕೊಳ್ಳುವ ಮೊದಲೇ ಕೇಂದ್ರ ಅದಕ್ಕೆ ಕೈ ಹಾಕಿದೆ. ಪ್ರಯಾಣಕ್ಕೆ ನಿರ್ಬಂಧ ಇರುವುದರಿಂದ ಹಾಗೂ ಸಾರಿಗೆ ಕೈಗಾರಿಕೆ ಬಿಕ್ಕಟ್ಟಿನಲ್ಲಿರುವುದರಿಂದ ಪೇಟ್ರೋಲಿಯಂ ಉತ್ಪನ್ನಗಳ ಬೇಡಿಕೆ ತೀರಾ ಕಡಿಮೆಯಾಗುತ್ತಿದೆ. ಹಾಗಾಗಿ ರಾಜ್ಯಗಳಿಗೆ ತಮ್ಮ ಮಟ್ಟದಲ್ಲಿ ತೆರಿಗೆಯನ್ನು ವಿಧಿಸುವ ಸಾಧ್ಯತೆ ಇಲ್ಲವೇ ಇಲ್ಲ ಅನ್ನಬಹುದು(ಆದರೂ ಕೆಲವು ಸಣ್ಣ ರಾಜ್ಯಗಳು ತೆರಿಗೆ ವಿಧಿಸಿವೆ).


ಓದಿ:  ಭಿನ್ನಮತ ದಮನಕ್ಕೆ ಕೇಂದ್ರ ಸರಕಾರದಿಂದ ಕೋವಿಡ್- 19 ಅಸ್ತ್ರ ಬಳಕೆ


ಮೂರನೆಯದಾಗಿ ಕೇಂದ್ರ ವಿದ್ಯುತ್ ‌ಉತ್ಪಾದಕ ಕಂಪೆನಿಗಳು ತಾವು ಬಳಸುವ ವಿದ್ಯುತ್ತಿಗೆ ಮುಂಗಡವಾಗಿ ಹಣ ನೀಡಬೇಕೆಂದು ರಾಜ್ಯಗಳನ್ನು ಒತ್ತಾಯಿಸುತ್ತಿವೆ. ಇದರಿಂದ ರಾಜ್ಯಗಳಿಗೆ ಕ್ಲಿಷ್ಟಕರವಾದ ಸಂದಿಗ್ಧತೆ ಎದುರಾಗುತ್ತದೆ. ರಾಜ್ಯಗಳು ಈಗಾಗಲೇ ತೀವ್ರವಾದ ಹಣದ ಕೊರತೆಯನ್ನು ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ತಿಗಾಗಿ ಮುಂಗಡ ಹಣ ಕೊಡಬೇಕಾದರೆ ಇನ್ನೆಲ್ಲೋ ಖರ್ಚನ್ನು ಕಡಿಮೆ ಮಾಡಬೇಕಾಗುತ್ತದೆ. ಮಾನವೀಯ ಕಾರಣಕ್ಕೆ ಮಾಡುತ್ತಿರುವ ಪ್ರಯತ್ನಗಳಿಗೂ ಹೊಡೆತ ಬೀಳುತ್ತದೆ.
ಆದರೆ ವಿದ್ಯುತ್ ನಿಂತು ಹೋದರೆ ಅದು ಎಲ್ಲಾ ಚಟುವಟಿಕೆಗಳ ಮೇಲೂ ಘೋರವಾದ ಪರಿಣಾಮ ಬೀರುತ್ತದೆ. ಹಾಗೆಯೇ ಜನರ ಬದುಕು ತೀವ್ರವಾಗಿ ಸಂಕಷ್ಟಕ್ಕೆ ಸಿಲುಕುತ್ತದೆ. ಇದುಯಾವುದೇ ಲೆಕ್ಕಕ್ಕೂ ಸಿಗುವುದಿಲ್ಲ. ಇವೆಡರ ನಡುವೆ ಆಯ್ಕೆಯಾದರೂ ಹೇಗೆ ಸಾಧ್ಯ?.

ಹಾಗಾಗಿ ರಾಜ್ಯಗಳಿಗೆ ಇರುವ ಒಂದೇ ಆಯ್ಕೆಯೆಂದರೆ, ಸಾಲದ ಪ್ರಮಾಣವನ್ನು ಹೆಚ್ಚಿಸಬೇಕು. ಆದರೆ ಅದಕ್ಕೆ ಕೇಂದ್ರದ ಅನುಮತಿ ಬೇಕು. ಇಲ್ಲಿಯವರೆಗೆ ಹೆಚ್ಚುವರಿ ಸಾಲಕ್ಕೆ ರಾಜ್ಯಗಳಿಗೆ ಕೇಂದ್ರ ಸರ್ಕಾರವು ಅನುಮತಿ ಕೊಟ್ಟಿಲ್ಲ. ಆದರೆ ಒಂದು ಅವಕಾಶ ಕೊಟ್ಟಿದ್ದಾರೆ. ರಾಜ್ಯಗಳು ವರ್ಷದ ಸಾಲವನ್ನೆಲ್ಲಾ ಬೇಕಾದರೆ ಈಗಲೇ ಮಾಡಿಕೊಳ್ಳಬಹುದು. ಆದರೆ ವಾರ್ಷಿಕ ಮಿತಿಯನ್ನು ಮೀರುವಂತಿಲ್ಲ. ಅದರ ಪರಿಣಾಮ ಸ್ಪಷ್ಟ. ಮುಂದೆ ರಾಜ್ಯಗಳಿಗೆ ಸಾಲದ ಮಿತಿಯಲ್ಲಿ ಯಾವುದೇ ರಿಯಾಯಿತಿ ಸಿಗದೇ ಹೋದರೆ ಅವುಗಳು ತಮ್ಮ ಒಟ್ಟಾರೆ ಖರ್ಚಿನಲ್ಲಿ ತೀವ್ರವಾದ ಕಡಿತವನ್ನು ಅನಿಯವಾರ್ಯವಾಗಿ ಮಾಡಬೇಕಾಗುತ್ತದೆ.

ಇದು ಇಂದು ರಾಜ್ಯಗಳಿರುವ ಆತಂಕದ ಪರಿಸ್ಥಿತಿ. ಹಲವು ರಾಜ್ಯಗಳನ್ನು ಹಣ ಸಂಘಟಿಸುವುದಕ್ಕೆ ಹೆಚ್ಚುವರಿ ರಾಜ್ಯ ಸರ್ಕಾರಿ ಬಾಂಡುಗಳನ್ನು ಬಿಡುಗಡೆ ಮಾಡಿವೆ. ರಾಜ್ಯ ಸರ್ಕಾರಗಳು ಅನಿವಾರ್ಯವಾಗಿ ಅವುಗಳಿಗೆ ಹೆಚ್ಚಿನ ಬೆಲೆಯನ್ನು ತೆತ್ತಿವೆ. ಶೇಕಡ 7.5ರಷ್ಟಿದ್ದ ಬಡ್ಡಿಗೆ ಶೇಕಡ 1.5ರಷ್ಟು ಹೆಚ್ಚು ಬಡ್ಡಿಯನ್ನು ಕೊಟ್ಟಿವೆ. ಅಂದರೆ ಮುಂದೆ ಅವು ತೆರಬೇಕಾದ ಬಡ್ಡಿಬಾಬ್ತು ಶೇಕಡ 20ರಷ್ಟು ಹೆಚ್ಚಾಗುತ್ತದೆ. ಈಗಲೂ ಕೇಂದ್ರ ಸರ್ಕಾರಕ್ಕೆ ಶೇಕಡ 7ಕ್ಕಿಂತ ಕಡಿಮೆ ಬಡ್ಡಿಗೆ ಸಾಲ ಪಡೆದುಕೊಂಡು ರಾಜ್ಯಗಳಿಗೆ ಸಾಲ ಕೊಡುವುದಕ್ಕೆ ಅವಕಾಶವಿದೆ. ಆದರೆ ಕೇಂದ್ರ ಹಾಗೆ ಮಾಡುವ ಯಾವ ಸೂಚನೆಯೂ ಕಾಣುತ್ತಿಲ್ಲ. ಇದೇ ಪರಿಸ್ಥಿತಿ ಹಲವು ದಿನ ಮುಂದುವರಿಯುವ ಸಾಧ್ಯತೆಗಳು ಹೆಚ್ಚು. ಹೆಚ್ಚೆಚ್ಚು ರಾಜ್ಯಗಳು ಶಾಶ್ವತವಾಗಿ ಹೆಚ್ಚುವರಿ ಸಾಲವನ್ನು ತಮ್ಮ ಬಜೆಟ್ಟಿಗಾಗಿ ಮಾಡಬೇಕಾಗಬಹುದು.

ಇದು ಸಾಲದೂ ಎಂಬಂತೆ, ಕೇಂದ್ರವೂ ಗಾಯಕ್ಕೆ ಉಪ್ಪು ಹಾಕುತ್ತಿದೆ. ಪಿಎಂ ಕೇರ್ಸ್ ನಿಧಿ, ಪಾರದರ್ಶಕವೂ ಅಲ್ಲ, ಅದಕ್ಕೆ ಲೆಕ್ಕ ಪರಿಶೋಧನೆಯೂ ಇರುವುದಿಲ್ಲ, ಅದು ಸಂಪೂರ್ಣವಾಗಿ ಪ್ರಧಾನ ಮಂತ್ರಿಗಳ ಮರ್ಜಿಗೆ ಬಿಟ್ಟಿದ್ದು. ಕೇಂದ್ರವು ಸ್ಥಾಪಿಸಿರುವ ಈ ನಿಧಿಗೆ ಸಿಎಸ್‌ಆರ್-ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಹಣವನ್ನು ತೊಡಗಿಸಬಹುದು. ಆದರೆ ಇದೇ ಅವಕಾಶ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇಲ್ಲ. ಹಾಗಾಗಿ ಕಾರ್ಪೊರೇಟುಗಳಿಗೆ ತಾವಿರುವ ರಾಜ್ಯಗಳಿಗೆ ನೆರವಾಗಬೇಕೆಂದು ಬಯಸಿದರೂ ಸಾಧ್ಯವಾಗುವುದಿಲ್ಲ. ಕೇಂದ್ರದ ನಿಯಮ ಅದಕ್ಕೆ ಅವಕಾಶ ಕೊಡುವುದಿಲ್ಲ.

ಆರೋಗ್ಯ ತಹಬದಿಗೆ ಬರುವ ಹೊತ್ತಿಗೆ ರಾಜ್ಯ ಸರ್ಕಾರಗಳ ಹಣಕಾಸು ಪರಿಸ್ಥಿತಿ ಛಿದ್ರವಾಗಿರುತ್ತದೆ. ದಿನನಿತ್ಯದ ಚಟುವಟಿಕೆಗಳನ್ನು ಮುಂದುವರಿಸಲು ಅವು ಕೇಂದ್ರ ಸರ್ಕಾರದ ಮುಂದೆ ಭಿಕ್ಷಾಪತ್ರೆ ಹಿಡಿದು ನಿಲ್ಲಬೇಕಾಗುತ್ತದೆ.

ಮೂಲ: ಪ್ರಣಬ್ ಸೇನ್, ಕೇಂದ್ರ ಸರ್ಕಾರ ನೇಮಿಸಿರುವ ಆರ್ಥಿಕ ಅಂಕಿಅಂಶಗಳ ಸ್ಥಾಯೀ ಸಮಿತಿಯ ಮುಖ್ಯಸ್ಥರು.

ಅನುವಾದ: ವೇಣುಗೋಪಾಲ್ ಟಿ ಎಸ್  

[ಐಡಿಯಾಸ್ ಫಾರ್ ‌ಇಂಡಿಯ ಬ್ಲಾಗ್‌ಇಂದ ಆರಿಸಿಕೊಂಡ ಲೇಖನ]


ನಮ್ಮ ಯೂಟ್ಯೂಬ್ ಚಾನೆಲಿಗೆ ಬೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...