Homeಮುಖಪುಟಕೊರೊನಾ ಸಂಕಟ : ಸಿನಿಮಾ ಮಂದಿಯ ಪೀಕಲಾಟ

ಕೊರೊನಾ ಸಂಕಟ : ಸಿನಿಮಾ ಮಂದಿಯ ಪೀಕಲಾಟ

- Advertisement -
- Advertisement -

ಜಗತ್ತನ್ನೇ ನಿಬ್ಬೆರಗುಗೊಳಿಸಿರುವ ಕೊರೊನಾ ವೈರಸ್, ಶೇರು ಮಾರುಕಟ್ಟೆಯ ಗೂಳಿಯನ್ನೇ ಅಲುಗಾಡಿಸಿದೆ. ದಿನ ಕಳೆದಂತೆ ಕೊರೊನಾ ವೈರಸ್ ಮೇಲಿನ ಆತಂಕ ಹೆಚ್ಚಾಗುತ್ತಲೇ ಇದೆ. ಭಾರತದಲ್ಲೂ ಅಘೋಷಿತ ತುರ್ತುಪರಿಸ್ಥಿತಿ ರೀತಿಯ ಸಂದರ್ಭ ನಿರ್ಮಾಣವಾಗಿದೆ. ಮಾಲ್‍ಗಳು, ಥಿಯೇಟರ್‍ಗಳು, ಹೋಟೆಲ್‍ಗಳನ್ನು ಬಂದ್ ಮಾಡಲಾಗಿದ್ದು, ಸಭೆ-ಸಮಾರಂಭಗಳುನ್ನು ರದ್ದುಗೊಳಿಸಲಾಗಿದೆ. ಔದ್ಯೋಗಿಕ ಕ್ಷೇತ್ರವೂ ಕುಸಿದಿದ್ದು, ಕೆಲವೆಡೆ ರಜೆ ಘೋಷಿಸಲಾಗಿದ್ದರೆ, ಕೆಲವೆಡೆ ಹಲವರು ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ. ದಿನಗೂಲಿ ಕೆಲಸ ಮಾಡುವವರಿಗೆ ತಮ್ಮ ಬದುಕನ್ನೇ ಕಳೆದುಕೊಂಡಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಕೆಲವು ರಾಜ್ಯಗಳ ಸರ್ಕಾರಗಳು ಅಂತಹ ಜನರಿಗೆ ಪಡಿತರ ಆಹಾರ, ಉಚಿತ ಊಟಗಳಂತಹ ಕೆಲವು ತುರ್ತು ಕೆಲಸಗಳನ್ನು ಮಾಡುತ್ತಿವೆ.

ಕೊರೊನಾ ವೈರಸ್ ಪ್ರಭಾವ ಸಿನಿಮಾ ಕ್ಷೇತ್ರವನ್ನೇನೂ ಬಿಟ್ಟಿಲ್ಲ. ಸಿನಿಮಾ ಚಿತ್ರೀಕರಣದ ಮೇಲೆ ನಿರ್ಬಂಧ ಹೇರಲಾಗಿದೆ. ಮಾಲ್/ಥಿಯೇಟರ್‍ಗಳು ಬಂದ್ ಆಗಿರುವುದರಿಂದ ಸಿನಿಮಾ ಪ್ರದರ್ಶನಗಳು ನಿಂತಿವೆ. ಹೊರ ದೇಶಗಳಲ್ಲಿ ಚಿತ್ರೀಕರಣಕ್ಕೆ ಹೋಗಿದ್ದ ಹಲವಾರು ಸ್ಟಾರ್‍ಗಳು ದೇಶಕ್ಕೆ ಹಿಂದಿರುಗಿದ್ದಾರೆ. ಕೆಲವರು ಸ್ವಗೃಹ ಬಂಧನಕ್ಕೆ ಒಳಗಾಗಿದ್ದಾರೆ.ಆದರೆ, ಬಾಲಿವುಡ್‍ನ ಗಾಯಕಿ ಕನಿಕಾ ಕಪೂರ್ ಅವರು ಲಂಡನ್‍ನಿಂದ ಹಿಂದಿರುಗಿದ್ದು, ವಿಮಾನ ನಿಲ್ದಾಣದಲ್ಲಿ ಕೊರೊನಾ ಪರೀಕ್ಷೆಗೂ ಒಳಪಡದೆ ಕೆಲವು ಕಾರ್ಯಕ್ರಮಗಳಲ್ಲಿ ಓಡಾಡಿ ಜನರನ್ನು ಮತ್ತಷ್ಟು ಪೀಕಲಾಟಕ್ಕೆ ಸಿಕ್ಕಿಸಿದ್ದಾರೆ. ಕನಿಕಾ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ್ದರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆಯವರು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ.

ಸಿನಿಮಾ ಶೂಟಿಂಗ್ ಇಲ್ಲದೆ ಖಾಲಿ ಕುಳಿತಿರುವ ಕೆಲವು ಸ್ಟಾರ್‍ಗಳು ಕೊರೊನಾ ಸುತ್ತಾ ಆರೆಸ್ಸೆಸ್ ಫೇಕ್ ಫ್ಯಾಕ್ಟರಿಯಿಂದ ಹರಿಬಿಡಲಾಗಿದ್ದ ಸುಳ್ಳು ಮಾಹಿತಿಗಳನ್ನು ವಿಶ್ಲೇಷಣೆಯನ್ನೂ ಮಾಡದೇ ಶೇರ್ ಮಾಡಿದ್ದಾರೆ. ಅವರಲ್ಲಿ ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಎಂದು ಖ್ಯಾತಿ ಪಡೆದಿರುವ ಸುದೀಪ್ ಕೂಡ ಒಬ್ಬರು. ಸುದೀಪ್ ಫೇಕ್‍ನ್ಯೂಸ್ ಶೇರ್ ಮಾಡಿರುವುದನ್ನು ಅಭಿಮಾನಿಗಳೂ ತೀಕ್ಷ್ಣವಾಗಿ ವಿರೋಧಿಸಿದ್ದಾರೆ. ಮತ್ತೆ ಕೆಲವರು ಗಂಟೆ-ಜಾಗಟೆ-ಚಪ್ಪಾಳೆ ಬಾರಿಸಿಕೊಂಡು ಕುಳಿತಿದ್ದಾರೆ. ಚಪ್ಪಾಳೆ ಬಾರಿಸುವುದರಿಂದ ಕೊರೊನಾ ನಾಶವಾಗುವುದಿಲ್ಲ ಹಾಗೂ ವೈದ್ಯರಿಗಾಗಿ ಚಪ್ಪಾಳೆ ಬಾರಿಸುವ ಸಮಯವೂ ಇದಲ್ಲ, ವೈದ್ಯರು ಕಾರ್ಯನಿರ್ವಹಿಸಲು ಬೇಕಿರುವ ಅಗತ್ಯ ಮೆಡಿಕಲ್ ಮೆಟಿರಿಯಲ್‍ಗಳನ್ನು ಒದಗಿಸಬೇಕು. ಇದಕ್ಕಾಗಿ ಸರ್ಕಾರವನ್ನು ಪ್ರಶ್ನೆ ಮಾಡಬೇಕು ಅಥವಾ ತಾವೂ ನೆರವಾಗಬೇಕು ಎಂಬ ಸಾಮಾನ್ಯ ಜ್ಞಾನವೂ ಇವರಿಗಿಲ್ಲದಿರುವುದು ಅಭಿಮಾನಿಗಳ ದೌರ್ಭಾಗ್ಯ.

ಸಿನಿಮಾ ಸ್ಟಾರ್‍ಗಳ ಇಂತಹ ಹುಚ್ಚಾಟ-ಪೀಕಲಾಟಗಳ ನಡುವೆ ಸಿನಿಮಾ ನಿರ್ಮಾಪಕರು ಕಂಗಾಲಾಗಿ ಕುಳಿತಿದ್ದಾರೆ. ಅಪಾರ ದುಡ್ಡು ಸುರಿದು ಸಿನಿಮಾ ಮಾಡಿ, ಬಿಡುಗಡೆ ಮಾಡಿದ್ದ ಸಿನಿಮಾಗಳು ಬಿಡುಗಡೆಯಾದ ಎರಡು ಮೂರು ದಿನಕ್ಕೆ ಥಿಯೇಟರ್‍ಗಳ ಮೇಲಿನ ನಿರ್ಬಂಧದಿಂದಾಗಿ ಪ್ರದರ್ಶನವಾಗದೇ ಉಳಿದುಹೋಗಿವೆ. ಕಳೆದ ಎರಡು ವಾರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದ ಸಿನಿಮಾಗಳ ಬಿಡುಗಡೆಯ ದಿನಾಂಕ ಮುಂದೆ ಹೋಗಿವೆ. ಆದರೂ ಒಂದು ವಾರಕ್ಕೆ ಒಂದೇ ಇಂಡಸ್ಟ್ರಿಯ 10 ರಿಂದ 20 ಸಿನಿಮಾಗಳು ಥಿಯೇಟರ್ ಮುಂದೆ ಸಾಲುಗಟ್ಟಿ ನಿಲ್ಲುವ ಇಂದಿನ ವರ್ಷಗಳಲ್ಲಿ ರಿಲೀಸಿಂಗ್ ಡೇಟ್ ಮುಂದೂಡಲಾಗಿರುವ ಸಿನಿಮಾಗಳು ಬಿಡುಗಡೆಯ ನಂತರದ ದಿನಗಳ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ.

ಇನ್ನು ಈಗಾಗಲೇ ಬಿಡುಗಡೆಯಾಗಿರುವ ದೊಡ್ಡ ಬಜೆಟ್‍ನ ಸಿನಿಮಾಗಳಾದ ಭಾಗಿ-3, ತಪ್ಪಡ್, ಅಂಗ್ರೈಸ್, ದ್ರೋಣ, ಶಿವಾರ್ಜುನಗಳಂತಹ ಸಿನಿಮಾಗಳು ರಿಲೀಸ್‍ಆದ ಮೂರ್ನಾಲ್ಕು ದಿನಗಳಿಗೆ ಥಿಯೇಟರ್‍ಗಳು ಮುಚ್ಚಿದ್ದರಿಂದ ಭಾರಿ ಹೊಡೆತಕ್ಕೆ ಸಿಕ್ಕಿಕೊಂಡಿವೆ. ಸಿನಿಮಾ ನಿರ್ಮಾಣಕ್ಕೆ ಹಾಕಿದ್ದ ಬಂಡವಾಳವೂ ವಾಪಸ್ ಬರುವಂತೆ ಕಾಣುತ್ತಿಲ್ಲ. ಥಿಯೇಟರ್‍ಗಳ ಮೇಲಿನ ಬಂದ್ ತೆರವುಗೊಳಿಸಿದ ನಂತರವೂ ಹೊಸ ಸಿನಿಮಾಗಳು ಥಿಯೇಟರ್‍ಗಳ ಬಾಗಿಲು ಬಡಿಯುವುದರಿಂದ ಈಗಾಗಲೇ ರಿಲೀಸ್ ಆಗಿರುವ ಸಿನಿಮಾಗಳು ಮತ್ತೆ ಹಿಟ್ ಲಿಸ್ಟ್‍ನಲ್ಲಿ ಓಡುತ್ತವೆ ಎಂಬ ನಿರೀಕ್ಷೆಯನ್ನು ನಿರ್ಮಾಪಕರೂ ಇಟ್ಟುಕೊಂಡಿಲ್ಲ.

ಕಳೆದ 15 ದಿನಗಳಿಂದ ಚಿತ್ರೋದ್ಯಮ ಕಂಪ್ಲೀಟ್ ಲಾಕ್‍ಡೌನ್ ಆಗಿದೆ. ಸಿನಿಮಾಕ್ಷೇತ್ರದ ವಹಿವಾಟು ಸ್ತಬ್ಧಗೊಂಡಿದೆ. ಅಲ್ಲದೆ, ಕಿರುತೆರೆಯ ಸೀರಿಯಲ್‍ಗಳ ಕಥೆಗಳು ವ್ಯಥೆಗಳಾಗಿವೆ. ಎಪಿಸೋಡ್‍ಗಳಿಗೆ ಬೇಕಿರುವಷ್ಟು ಚಿತ್ರೀಕರಣವನ್ನು ಕೆಲವು ಸೀರಿಯಲ್‍ಗಳ ನಿರ್ಮಾಪಕ-ನಿರ್ದೇಶಕರು ಸಿದ್ಧತೆ ಮಾಡಿಕೊಳ್ಳದ ಕಾರಣದಿಂದಾಗಿ ಕಣ್-ಕಣ್ ಬಿಡುತ್ತಿದ್ದಾರೆ. ಕೆಲವು ಸೀರಿಯಲ್ ಎಪಿಸೋಡ್‍ಗಳಲ್ಲಿ ಧಾರಾವಾಹಿಗಿಂತ ಹೆಚ್ಚು ಸಮಯ ಜಾಹೀರಾತುಗಳೇ ರಾರಾಜಿಸುತ್ತಿವೆ. ಜಾಹಿರಾತುಗಳನ್ನು ತುಂಬಿಸಿ ಸೀರಿಯಲ್‍ಗಳನ್ನು ಒಂದಷ್ಟು ದಿನಗಳ ಮಟ್ಟಿಗೆ ಎಳೆಯಲು ಶುರುಮಾಡಿಕೊಂಡಿದ್ದಾರೆ.

ಇದೆಲ್ಲದರ ಮಧ್ಯೆ, ರಿಯಾಲಿಟಿ ಶೋಗಳು ನಮಗೂ-ಕೊರೊನಾಗೂ ಸಂಬಂಧವೇ ಇಲ್ಲ. ಅದರಿಂದ ನಮಗಾವ ಸಮಸ್ಯೆಯೂ ಇಲ್ಲವೆಂಬಂತೆ ತಮ್ಮ ಶೋ, ಶೂಟಿಂಗ್‍ಗಳನ್ನು ಆರಾಮಾಗಿ ಮಾಡಿಕೊಂಡು ಹೋಗುತ್ತಿವೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾರ್ಚ್ 22ರಂದು ದೇಶದಾದ್ಯಂತ ಜನತಾಕಫ್ರ್ಯೂಗೆ ಕರೆ ನೀಡಿದ್ದರು. ಸಾಧಕರಿಗೆ ಚಪ್ಪಾಳೆ ಹೊಡೆಯಲು ಕರೆ ನೀಡಿದ್ದರು. ಈ ಕಫ್ರ್ಯೂವನ್ನು ಯಶಸ್ವಿ ಮಾಡುವ ಉದ್ದೇಶದಿಂದ ಮೋದಿ ಭಕ್ತರು ಹಲವಾರು ಸುಳ್ಳು-ಪೊಳ್ಳು ಮಾಹಿತಿಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದರು.

ಅದರಲ್ಲಿ ಒಂದು ಹುಡುಗಿ ನೀವು ದೇವಸ್ಥಾನದಲ್ಲಿ ಗಂಟೆ ಬಾರಿಸುವುದು ಏಕೆಂದು ತಿಳಿದಿದ್ದೀರಿ? ಇದರಿಂದ ಬಿಡುಗಡೆಯಾಗುವ ಶಕ್ತಿಯು ಸುತ್ತಲಿನ ಬ್ಯಾಕ್ಟೀರಿಯಾ ಮತ್ತು ವೈರಸ್‍ಗಳನ್ನು ಕೊಲ್ಲುತ್ತದೆ. ಅದೇರೀತಿ 132 ಕೋಟಿ ಜನರು ಏಕಕಾಲಕ್ಕೆ ಚಪ್ಪಾಳೆ ತಟ್ಟುವುದರಿಂದ ದೊಡ್ಡ ಮಟ್ಟದ ಎನರ್ಜಿ ಸೃಷ್ಟಿಯಾಗಿ ಕೊರೊನಾ ಮಾತ್ರವಲ್ಲ ಸುತ್ತಲಿನ ಎಲ್ಲಾ ಬ್ಯಾಕ್ಟೀರಿಯಾಗಳು ಸಾಯುತ್ತವೆ. ಮೋದಿಯ ವೈಜ್ಞಾನಿಕತೆಗೆ ಸೆಲ್ಯೂಟ್ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಳು.

ಅದನ್ನು ನೋಡಿದ್ದೆ ತಡ ಕನ್ನಡದ ಖ್ಯಾತ ನಟ ಸುದೀಪ್ ಹಿಂದುಮುಂದು ನೋಡದೇ ತನ್ನ ಟ್ವಿಟ್ಟರ್‍ನಲ್ಲಿ ಶೇರ್ ಮಾಡಿಬಿಟ್ಟರು. ನಾವೂ ಮನೆಯಲ್ಲಿಯೇ ಇದ್ದು, ಕೊರೊನಾ ನಾಶಮಾಡೋಣ ಎಂದು ತಲೆಬರಹ ಕೊಟ್ಟಿದ್ದರು. ಇದು ಮೇಲ್ನೋಟಕ್ಕೆ ಸುಳ್ಳು ಸುದ್ದಿ ಎಂದು ಹಲವಾರು ಅಭಿಮಾನಿಗಳಿಗೆ ತಿಳಿದಿದ್ದರಿಂದ ಸರ್ ದಯವಿಟ್ಟು ಡಿಲೀಟ್ ಮಾಡಿ ಎಂದು ಕಮೆಂಟ್ ಹಾಕಿದರು.

ನಟ ಚೇತನ್, ಇದು ಸುಳ್ಳುಸುದ್ದಿ, ಜನರನ್ನು ದಿಕ್ಕು ತಪ್ಪಿಸಲಾಗುತ್ತಿದೆ. ನಾನು ವೈದ್ಯರ ಮಗನಾಗಿದ್ದು, ವೈದ್ಯ ಸಮೂಹದ ಮೇಲೆ ಗೌರವವಿದೆ. ಆದರೆ ಇಂತಹ ಅವೈಜ್ಞಾನಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಜನರನ್ನು ಮೌಢ್ಯಕ್ಕೆ ತಳ್ಳಿದಂತಾಗುತ್ತದೆ ಎಂದು ರಿಪ್ಲೇ ಮಾಡಿದ್ದರು.

ನಂತರ ಚೇತನ್ ಮೇಲೂ ಕೆಲವು ಸುದೀಪ್ ಅಭಿಮಾನಿಗಳು ಹರಿಹಾಯ್ದು ನಿಂದಿಸಿದ್ದರು.ಇಷ್ಟೆಲ್ಲಾ ಬೆಳವಣಿಗೆಗಳನ್ನು ಕಂಡ ಮತ್ತು ವೈಜ್ಞಾನಿಕ ಅರಿವಿರುವ ಸುದೀಪ್ ಅಭಿಮಾನಿಗಳು ತಮ್ಮ ಸ್ಟಾರ್ ನಟ ಅಂತಹ ವಿಡಿಯೋಗಳನ್ನು ಹಂಚಿಕೊಂಡಿರುವುದು ತಪ್ಪು, ಇದು ನಿಜಕ್ಕೂ ಜನರನ್ನು ಮಿಸ್‍ಗೈಡ್ ಮಾಡುತ್ತದೆ. ಹಲವಾರು ಜನರು ಸಿನಿಮಾಸ್ಟಾರ್‍ಗಳ ಮೇಲೆ ಅಭಿಮಾನ ಇಟ್ಟಿರುತ್ತಾರೆ. ಫಾಲೋ ಮಾಡುತ್ತಿರುತ್ತಾರೆ. ಅಂತಹ ಜನರನ್ನು ದಾರಿ ತಪ್ಪಿಸುವಂತಹ ಪೋಸ್ಟ್ಗಳನ್ನು ಸ್ಟಾರ್‍ಗಳು ಹಾಕುವುದು ತಪ್ಪು ಎಂದು ಸುದೀಪ್‍ರನ್ನು ತರಾಟೆಗೆ ತೆಗೆದುಕೊಂಡು, ಸುದೀಪ್ ಖಾತೆಯಲ್ಲೇ ರಿಪ್ಲೇಟ್ವೀಟ್ ಮಾಡಿದ್ದಾರೆ.ಸದ್ಯಕ್ಕೆ ಸುದೀಪ್ ಅಭಿಮಾನಿಗಳಲ್ಲೇ ಪರ-ವಿರೋಧ ಹಗ್ಗಜಗ್ಗಾಟ ಶುರುವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...