ಚಪ್ಪಾಳೆಯ ಶಕ್ತಿಯಿಂದ ಕೊರೊನಾ ನಾಶ ಟ್ವೀಟ್‌ : ಕಿಚ್ಚ ಸುದೀಪ್‌ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು..

ಸುದೀಪ್‌ ಸರ್‌ ನಾನು ನಿಮ್ಮ ಅಭಿಮಾನಿ. ಆದರೆ ನೀವು ಮಾಡಿದ ಈ ಕೆಲಸ ಮಾತ್ರ ಜನರನ್ನು ತಪ್ಪು ದಾರಿಗೆ ಎಳೆಯುವಂತದ್ದು...

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಾರ್ಚ್‌ 22ರಂದು ದೇಶದಾದ್ಯಂತ ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಸಾಧಕರಿಗೆ ಚಪ್ಪಾಳೆ ಹೊಡೆಯಲು ಕರೆ ನೀಡಿದ್ದರು. ಈ ಕರ್ಫೂವನ್ನು ಯಶಸ್ವಿ ಮಾಡುವ ಉದ್ದೇಶದಿಂದ ಮೋದಿ ಭಕ್ತರು ಹಲವಾರು ಭಕ್ತರು ಸುಳ್ಳು-ಪೊಳ್ಳು ಮಾಹಿತಿಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದರು.

ಅದರಲ್ಲಿ ಒಂದು ಹುಡುಗಿ ನೀವು ದೇವಸ್ಥಾನದಲ್ಲಿ ಗಂಟೆ ಬಾರಿಸುವುದು ಏಕೆಂದು ತಿಳಿದಿದ್ದೀರಿ? ಇದರಿಂದ ಬಿಡುಗಡೆಯಾಗುವ ಶಕ್ತಿಯು ಸುತ್ತಲಿನ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ಕೊಲ್ಲುತ್ತದೆ. ಅದೇ ರೀತಿ 132ಕೋಟಿ ಜನರು ಏಕಕಾಲಕ್ಕೆ ಚಪ್ಪಾಳೆ ತಟ್ಟುವುದುರಿಂದ ದೊಡ್ಡ ಮಟ್ಟದ ಎನರ್ಜಿ ಸೃಷ್ಟಿಯಾಗಿ ಕೊರೊನಾ ಮಾತ್ರವಲ್ಲ ಸುತ್ತಲಿನ ಎಲ್ಲಾ ಬ್ಯಾಕ್ಟೀರೀಯಾಗಳು ಸಾಯುತ್ತವೆ. ಮೋದಿಯ ವೈಜ್ಞಾನಿಕತೆಗೆ ಸೆಲ್ಯೂಟ್‌ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಳು.

ಅದನ್ನು ನೋಡಿದ್ದೆ ತಡ ಕನ್ನಡದ ಖ್ಯಾತ ನಟ ಸುದೀಪ್‌ ಹಿಂದು ಮುಂದು ನೋಡದೇ ತನ್ನ ಟ್ವಿಟ್ಟರ್‌ನಲ್ಲಿ ಷೇರ್‌ ಮಾಡಿಬಿಟ್ಟರು. ನಾವೂ ಮನೆಯಲ್ಲಿಯೇ ಇದ್ದು, ಕೊರೊನಾ ನಾಶಮಾಡೋಣ ಎಂದು ತಲೆಬರಹ ಕೊಟ್ಟಿದ್ದರು. ಇದು ಮೇಲ್ನೋಟಕ್ಕೆ ಸುಳ್ಳು ಸುದ್ದಿ ಎಂದು ಹಲವಾರು ಅಭಿಮಾನಿಗಳಿಗೆ ತಿಳಿದಿದ್ದರಿಂದ ಸರ್‌ ದಯವಿಟ್ಟು ಡಿಲೀಟ್‌ ಮಾಡಿ ಎಂದು ಕಮೆಂಟ್‌ ಹಾಕಿದರು.

 

ಅಲ್ಲ ಸುದೀಪ್‌ ಸರ್‌ “ವೈಜ್ಞಾನಿಕ ತಳಹದಿಯೇ ಇಲ್ಲದೇ ಬೇಕಾದಂತೆ ಹೇಳಿಕೆ ಕೊಟ್ಟಿರೋ ಈ ವ್ಯಕ್ತಿಯ ವಿಡಿಯೋವನ್ನು ಪ್ರಚಾರ ಮಾಡುತ್ತಿರಲ್ಲ ನಿಮಗೇನಾಗಿದೆ ಹೇಳಿ.. ನಮಗೆ ಬೇಕಿರೋದು True Science.. Psuedo Science ಅಲ್ಲ.. ಇಂತಹ ಬೂಟಾಟಿಕೆಯನ್ನು ಮೌಡ್ಯವನ್ನು ದೂರ ತಳ್ಳಿ.. ಅರಿಮೆಯ ಕಡೆ ಸಾಗಿ.. ಎಂದು ಮಲ್ಲಿಕಾರ್ಜುನ್‌ ಬಿ ಕಮೆಂಟ್‌ ಮಾಡಿದ್ದರು.

ಹೆಚ್ಚು ಹಿಂಬಾಲಕರಿರುವ ವ್ಯಕ್ತಿಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು! ನೋಡಿ, ಮೋದಿಯವರು ಹೇಳಿದಂತೆ ಆರೋಗ್ಯ ಕಾರ್ಯಕರ್ತರಿಗೋಸ್ಕರ 5 ದಲ್ಲ 10 ನಿಮಿಷ ಚಪ್ಪಾಳೆ ತಟ್ಟುವ ಬೇಕಾದರೆ! ಆದರೆ ಅದರಿಂದ ವೈರಾಣು ಸಾಯುತ್ತದೆ ಎಂಬುದು ಬುರಡೆ. ದೇವಾಲಯದಲ್ಲಿ ಘಂಟೆ ಬಾರಿಸುವುದು, ಸೇರಿರುವ ಜನರ ಗಮನವನ್ನು ಮಂಗಳಾರತಿಯತ್ತ ಸೆಳೆಯಲು! ಎಂದು ಪ್ರಹ್ಲಾದ ಕೆ ಹನುಮಂತಯ್ಯ ಎಂಬುವವರು ಕಿಡಿಕಾರಿದ್ದಾರೆ.

ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವ ಗಾದೆ ನೆನಪಿಗೆ ಬರುತ್ತಿದೆ ಈ ನಿಮ್ಮ ಮಾತು ಕೇಳಿ… ಹಾಗಾದರೆ ಆಸ್ಪತ್ರೆಯಲ್ಲಿ ಡಾಕ್ಟರ್ ಗಳ ಕೈಯಲ್ಲಿ ಗಂಟೆ ಕೊಟ್ಟುಬಿಡೋಣ, ನರ್ಸ್ ಗಳ ಕೈಯಲ್ಲಿ ಶಂಖಗಳನ್ನು ಕೊಟ್ಟು ಬರೋಣ ಎಂದು ಮತ್ತೊಬ್ಬರು ಕಾಲೆಳೆದಿದ್ದಾರೆ.

ಮಾನ್ಯ ಸುದೀಪ ಅವರೇ, ನೀವು ನಿಮ್ಮದೇ ಒಂದು ವಿಡಿಯೋ ತುಣುಕು ಮಾಡಿ ಪ್ರಧಾನಿಗಳ ಬೆಂಬಲಕ್ಕೆ ನಿಲ್ಲಬಹುದಿತ್ತು. ಬದಲಿಗೆ ಅವೈಜ್ಞಾನಿಕವಾಗಿ ಎಲ್ಲರ ದಾರಿ ತಪ್ಪಿಸುತ್ತಿರುವ ಇಂತಹವರ ತುಣುಕು ಹಾಕಿ ಅವರನ್ನು ಮುಖ್ಯವಾಹಿನಿಗೆ ತರುವುದಲ್ಲದೇ, ಗಂಟೆಗಳು ಕಳೆದರೂ ಇದನ್ನು ತೆಗೆಯದಿರುವುದು ವಿಪರ್ಯಾಸ. ದಯವಿಟ್ಟು ಇನ್ನೊಮ್ಮೆ ಯೋಚಿಸಿ ವೈಶಾಖ್‌ ಭಾಗೀ ಹೇಳಿದ್ದಾರೆ.

ಇನ್ನು ಮತ್ತೊರ್ವ ಸಾಮಾಜಿಕ ಕಾಳಜಿಯ ನಟ ಚೇತನ್‌, “ಸುದೀಪ್ ಸರ್, ಚಿತ್ರರಂಗದಲ್ಲಿ ನೀವು ಮಾಡಿರುವ ಕೆಲಸಗಳನ್ನು ಮತ್ತು ಸಾಧನೆಗಳನ್ನು ನಾನು ಗೌರವಿಸುತ್ತೇನೆ.. ಅಪ್ಪ, ಅಮ್ಮ ಇಬ್ಬರು ವೈದ್ಯರ ಮಗನಾಗಿ, ವೈದ್ಯರಿಗೆ ಪ್ರತಿಯೊಬ್ಬರು ಗೌರವವನ್ನು ನೀಡಬೇಕಾಗುತ್ತದೆ ಅದನ್ನ ನಾನು ಒಪ್ಪುತ್ತೇನೆ. ಆದರೆ ಈ ರೀತಿಯ ಅವೈಜ್ಞಾನಿಕವಾದಂತಹ ವಿಚಾರಗಳು (‘energy medicine’) ನಮ್ಮನ್ನು ತಪ್ಪುದಾರಿಗೆ ಕರೆದೊಯ್ಯುವುದಲ್ಲದೆ, ಮೌಢ್ಯವನ್ನು ಬಿತ್ತುತ್ತವೆ.. ಕೊರೋನ ವೈರಸ್ ನ ವಿರುದ್ಧ ಹೋರಾಡೋಣ, ವೈಜ್ಞಾನಿಕವಾಗಿ”.. ಎಂದು ಪ್ರತಿಕ್ರಿಯೆ ನೀಡಿದ್ದರು.

ನಂತರ ಚೇತನ್‌ ಮೇಲೂ ಕೆಲವು ಸುದೀಪ್‌ ಅಭಿಮಾನಿಗಳು ಹರಿಹಾಯ್ದು ನಿಂದಿಸಿದ್ದರು. ಇಷ್ಟೆಲ್ಲಾ ಬೆಳವಣಿಗಳನ್ನು ಕಂಡ ಮತ್ತು ವೈಜ್ಞಾನಿಕ ಅರಿವಿರುವ ಸುದೀಪ್‌ ಅಭಿಮಾನಿಗಳು ತಮ್ಮ ಸ್ಟಾರ್‌ ನಟ ಅಂತಹ ವಿಡಿಯೋಗಳನ್ನು ಹಂಚಿಕೊಂಡಿರುವುದು ತಪ್ಪು, ಇದು ನಿಜಕ್ಕೂ ಜನರನ್ನು ಮಿಸ್‌ ಗೈಡ್‌ ಮಾಡುತ್ತದೆ. ಹಲವಾರು ಜನರು ಸಿನಿಮಾ ಸ್ಟಾರ್‌ಗಳ ಮೇಲೆ ಅಭಿಮಾನ ಇಟ್ಟಿರುತ್ತಾರೆ. ಫಾಲೋ ಮಾಡುತ್ತಿರುತ್ತಾರೆ. ಅಂತಹ ಜನರನ್ನು ದಾರಿ ತಪ್ಪಿಸುವಂತಹ ಪೋಸ್ಟ್‌ಗಳನ್ನು ಸ್ಟಾರ್‌ಗಳು ಹಾಕುವುದು ತಪ್ಪು ಎಂದು ಸುದೀಪ್‌ರನ್ನು ತರಾಟೆಗೆ ತೆಗೆದುಕೊಂಡು, ಸುದೀಪ್‌ ಖಾತೆಯಲ್ಲೇ ರಿಪ್ಲೇ ಟ್ವೀಟ್‌ ಮಾಡಿದ್ದಾರೆ. ಸಧ್ಯಕ್ಕೆ ಸುದೀಪ್‌ ಅಭಿಮಾನಿಗಳಲ್ಲೇ ಪರ-ವಿರೋಧ ಹಗ್ಗಜಗ್ಗಾಟ ಶುರುವಾಗಿದೆ.

ಇನ್ನು ಸುದೀಪ್‌ ತಮ್ಮ ಟ್ವೀಟ್‌ ಅನ್ನು ಅಳಿಸಿಲ್ಲ. ಆದರೆ ಆ ಟ್ವೀಟ್‌ನಲ್ಲಿ ಆ ಹುಡುಗಿ ಮಾತನಾಡಿರುವ ಕೊನೆಯ 44 ಸೆಕೆಂಡ್‌ ವಿಡಿಯೋ ಮಾತ್ರ ಕಾಣುತ್ತಿದೆ. ಆ ಹುಡುಗಿ ಮಾತನಾಡಿರುವುದು 2.12 ನಿಮಿಷವಾಗಿದೆ. ಒಟ್ಟಿನಲ್ಲಿ ಈ ಫೇಕ್‌ ಸುದ್ದಿಗಳ ಮಾಯಾಜಾಲಕ್ಕೆ ಸ್ಟಾರ್‌ ನಟರು ಬಲಿಯಾಗುವುದು ದುರಂತವಾಗಿದೆ.

ಆಕೆಯ ಪೂರ್ತಿ ಸುಳ್ಳು ಭಾಷಣ ಇಲ್ಲಿದೆ ನೋಡಿ.

https://www.facebook.com/vasu.hv.5/videos/2992908607418844/

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here