ಬಿ. ಚಂದ್ರೇಗೌಡರ ಕಟ್ಟೆಪುರಾಣ – ಪ್ರವಾಹಕ್ಕೆ ಕಾಸು ಕೊಡದೋನು ಕೊರೋನಾಕ್ಕೆ ಕೊಟ್ಟನೆ

‘ಅಂತು ಎಡೂರಪ್ಪ ಕಡಿಗೂ ವಸಿ ಸಡ್ಳ ಮಾಡಿದ’ ಎಂದ ವಾಟಿಸ್ಸೆ.

‘ಮೋದಿಗಿಂತ ಪರವಾಗಿಲ್ಲ ಕಣೊ ಎಡೂರಪ್ಪ’ ಎಂದ ಉಗ್ರಿ.

‘ಅಂಗರಿವುನೆ ಪ್ರಧಾನಿಯಾಗಬೇಕಿತ್ತು ಕಂಡ್ಳ’ ಎಂದಳು ಜುಮ್ಮಿ.

‘ನೀನೇಳದು ನಿಜಕಣಕ್ಕ ಎಡೂರಪ್ಪ ಪ್ರಧಾನಿಯಾಗಿದ್ರೆ ಚನ್ನಾಗಿತ್ತು’.

‘ಮೋದಿ ತರದೊನು ಪ್ರಪಂಚದಲ್ಲೇ ಇಲ್ಲ ಅಂತ ಆ ಚಡ್ಡಿ ಮಂಜ ಹೇಳಿಕಂಡು ತಿರುಗ್ತನೆ’.

‘ಅವುಂದಿರ್ಲಿ ಇನ್ಯಾವಳೊ ವಾಟ್ಸಾಪ್ ಮಾಡ್ಯವುಳೆ ಕಣೊ ಉಗ್ರೀ, ಮೋದಿ ಸಾಧನೆ ನೋಡಿದ್ರೆ ಅವುನಂಥೊನಿಲ್ಲ ಅಂದವುಳೆ’.

‘ಅವುಳ್ಯಾವಳ್ಳ’ ಎಂದಳು ಜುಮ್ಮಿ.

‘ಅವುಳ್ಯಾವಳು ಅನ್ನಕ್ಕೆ ಬರದಿಲ್ಲ ಕಣಕ್ಕ. ಒಂದೊಂದು ಸತಿ ಬಿಜೆಪಿಗಳೆ ಬೃಹನ್ನಳೆಯಾಗಿ ಮೋದಿ ಸಾಧನೆ ಒಂದು ಮಹಿಳೆ ಹೆಸರಲ್ಲಿ ವ್ಯಾಟ್ಸಾಪ್ ಮಾಡಿಬುಡ್ತವೆ. ಆಗೇನೀಸಗಂಡೀ’.

‘ಅಂಗೂ ಮಾಡ್ತವ’.

‘ಅಂಗೂ ಮಾಡ್ತವಾ ಅಂತಿಯಲ್ಲಕ್ಕ, ಅವು ಮಾಡದೆ ಅಂಗೆ’.

‘ಮೋದಿಯಾ ಅಂಗೆ ಹೊಗಳಿಬುಟ್ಟವುಳಲ್ಲ ಅವುನು ಬಂದಮ್ಯಾಲೆ ಏಟು ಜನ ಸತೃ ಗೊತ್ತೆ’ ಎಂದ ಉಗ್ರಿ.

‘ಏಟು ಜನ ಸತ್ತಿದ್ದರ್ಲ’.

‘ನೋಡೆ ಅವುನು ಗುಜರಾತಿನ ಮುಖ್ಯಮಂತ್ರಿಯಾದಾಗ ಸರಕಾರನೆ ಬಳಸಿ ಸಾವುರಾರು ಜನ ಸಾಬರು ಸಾಯಂಗೆ ಮಾಡಿದ’.

‘ನಿಜವೇನ್ಲ’.

‘ಮರತುಬುಟ್ಟೇನೆ ನೀನು, ಅದ್ಕೆ ಪೇಪರ್ ಓದದ ಕಲ್ತಕೊ ಅನ್ನದು’.

‘ಪೇಪರ್ರ ಮೋದಿನೆ ಓತ್ತನೊ ಇಲುವೊ ಅವುಳಿಗೇಳ್ತಿಯಲ್ಲೊ ಉಗ್ರಿ’.

‘ನಿಜ ಇವತ್ತಿನ ಪೇಪ್ರ ಓದ್ದೆಯಿದ್ರೂ ಆಯ್ತದೆ’ ಎಂದ ವಾಟಿಸ್ಸೆ.

‘ಟಿವಿ ನೊಡದೆಯಿದ್ರು ಆಯ್ತದೆ ಕಣೊ’ ಎಂದ ಉಗ್ರಿ.

‘ಮೋದಿಗೇನು ಹೇಳ್ಳ.

‘ಸಾರಿ ಕಣಕ್ಕ, ಮೋದಿ ರಾತ್ರೊ ರಾತ್ರಿ ನೋಟ್‍ಬ್ಯಾನ್ ಮಾಡಿದ. ಆಗ ನೂರಾರು ಜನ ಸತೃ. ನಮ್ಮ ಯಸ್ಸೆಂ ಕಿಸ್ಣನಳಿಯ ನೀರಿಗೆ ಬಿದ್ದು ತೀರೊದದ್ದು ಅದ್ಕೆಯಾ’.

‘ಪಾಪ ಅವುನ್ನ ನ್ಯನಿಸಿಗಂಡ್ರೆ ಹ್ವಟ್ಯಲ್ಲ ಉರಿತದೆ’.

‘ಅಮ್ಯಾಲೆ ಮೋದಿ ಸಿಎಎ ಅಂತ ತಂದ. ಅದರ ಗಲಾಟಿ ಗೋಲಿಬಾರಲ್ಲಿ ಜನ ಸತೃ. ಅದೂ ಸಾಬರು’.

‘ಅದ್ಕೆ ಸಾಬ್ರು ಕರೋನಾ ತಂದು ಹಬ್ಬುಸ್ತಾ ಅವುರೆ ಅಂತ ಚೆಡ್ಡಿ ಮಂಜ ಹೇಳತಿದ್ದ ಕಂಡ್ಳ’.

‘ಯಕ್ಕ ಚೆಡ್ಡಿ ಮಂಜನ ಮಾತ ಅತ್ತಗೆ ಮಡಗಿ ಯೋಚನೆ ಮಾಡು ಬಂಬಾಯಿಂದ ಸಾತೆನಳ್ಳಿಗೆ ಬಂದು ಸುತ್ಲಳ್ಳಿಗ್ಯಲ್ಲ ಕೊರೋನಾ ಹರಡಿದನಲ್ಲ ಅವುನು ಸಾಬರೋನಾ? ನಮ್ಮೋನೆ ಅಲವೇನಕ್ಕ’.

‘!?’

‘ಏನೂ ಬ್ಯಾಡವ್ವ, ತುಪ್ಪದಮಡಕ್ಕೆ ಇಬ್ರು ಬಂಬಾಯಿಂದ ಬಂದವುರೆ. ಅವು ನಮ್ಮ ಸಮಂದಿಕರೆಯ. ಅವುರು ಸಾಬರೆ’.

‘ಅದಿರ್ಲಿ ಕಣೊ ಕೆ.ಆರ್.ಪೇಟೆ ನಾರಾಯಣಗೌಡ ಬಂಬಾಯಿಂದ ಕರುಸ್ತಾ ಅವುನಲ್ಲ ಅವುರಿಗ್ಯಲ್ಲ ಕರೋನಾ ಹಟಕಾಯಿಸಿಗಂಡದೆ, ಅವುರ್ಯಾರು ಸಾಬರಲ್ಲ. ಯಲ್ಲ ನಮ್ಮೋರೆಯ ಇದಕೇನೇಳ್ತಿ’ ಎಂದ ಉಗ್ರಿ.

‘ಈ ಬಿಜೆಪಿಗಳೆ ಅಷ್ಟು ಕಣೊ. ಏನೇ ಆದ್ರು ಸಾಬರಮ್ಯಾಲಾಕ್ತರೆ. ಇಡೀ ದೇಸಕ್ಕೆ ಕರೋನಾ ಹರಡಿದೋರೆ ಅವುರು ಅಂತ ಹೇಳಿಕಂಡು ತಿರುಗ್ತ ಅವುರೆ ಏನು ಮಾಡನ’.

‘ಏನೂ ಮಾಡ ಬ್ಯಾಡ ಸುಳ್ಳೆಳೊ ಸೂಳೆ ಮಕ್ಕಳ ಬಾಯಿಮ್ಯಾಲೆ ಹ್ವಡಕಂಡೋಗಬೇಕು ಆಷ್ಟೆಯ’.

‘ಮೋದಿ ಏನೊ ಲಕ್ಷಾಂತೃಪಾಯಿ ದುಡ್ಡು ಕೊಡ್ತನಂತಲ್ಲಾ’.

‘ಯಾರಿಗೆ ಕೊಡ್ತನಕ್ಕ’.

‘ರೈತರು, ಕೂಲಿಮಾಡೋರು, ಕ್ವಟ್ಣಕುಟ್ಟೋರು ಯಲ್ಲಾರಿಗೂ ಲಕ್ಸ ಲಕ್ಸ ಕೊಡ್ತನಂತೆ’.

‘ಕೊಡ್ತನಿರು ಈಸ್ಕಳಿವೆ’.

‘ಅಂಗರೆ ಕೊಡಕಿಲ್ಲ ಅನ್ನು’.

‘ಅಕ್ಕಾ ಹಾದ್ನೆ ವರಸೆ, ಮಳೆ ವಡದು ಪ್ರವಾಹ ಬಂದು ಜನ ಮನೆ ಮಠ ಕಳಕಂಡು ಬೀದಿಗೆ ಬಿದ್ರು. ಆಗ ಸಿದ್ದರಾಮಯ್ಯ ಒಂದು ಲಕ್ಸ ಕೋಟಿ ಲಾಸಾಗ್ಯದೆ ಅಂದ. ಎಡೂರಪ್ಪ ಮುವ್ವತೆಂಟು ಸಾವುರ ಕೋಟಿ ಲಾಸು ಅಂತ ತೋರಿಸಿ ದುಡ್ಡು ಕೊಡಿ ಅಂತ ಮೋದಿಗೆ ಅರ್ಜಿ ಬರದ. ಆ ಅರ್ಜಿಗೆ ಇವತ್ತಿಗೂ ಉತ್ತರ ಕೊಟ್ಟಿಲ್ಲ ಇನ್ನ ಕೊರೋನಾಕ್ಕೆ ಕಾಸು ಕೊಡ್ತನೇನಕ್ಕ’.

‘ನಿಜವೇನ್ಲ ನೀನೇಳದು’.

‘ಮೋದಿ ತಾಯಿ ಆಣೆ ನಿಜಕಣಕ್ಕ’.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here