Homeಮುಖಪುಟಉತ್ತರ ಕರ್ನಾಟಕಕ್ಕೆ ಏನು ಬೇಕು? ಮುಂಬೈ ಕರ್ನಾಟಕ ಮುಂದಕ್ಕೆ ಚಲಿಸುತ್ತಲೇ ಇಲ್ಲ!

ಉತ್ತರ ಕರ್ನಾಟಕಕ್ಕೆ ಏನು ಬೇಕು? ಮುಂಬೈ ಕರ್ನಾಟಕ ಮುಂದಕ್ಕೆ ಚಲಿಸುತ್ತಲೇ ಇಲ್ಲ!

- Advertisement -
- Advertisement -

ಪಿ.ಕೆ. ಮಲ್ಲನಗೌಡರ್ |

ಧಾರವಾಡದಲ್ಲಿ ಈಗ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಡಗರ. ಉತ್ತರ ಕರ್ನಾಟಕಕ್ಕೇ ಸಂಬಂಧಿಸಿದ ಗೋಷ್ಠಿಯೂ ಒಂದಿದೆ. ಮತ್ತದೇ ಪ್ರಾದೇಶಿಕ ಅಸಮಾನತೆ, ನಂಜುಂಡಪ್ಪ ವರದಿ ಅನುಷ್ಠಾನ ಕುರಿತಂತೆ ತಜ್ಞರ ಭಾಷಣಗಳು ಹೊರಹೊಮ್ಮುತ್ತವೆ.
ನಿಜ, ಈ ಭಾಷಣ, ಚರ್ಚೆಗಳ ಸದಾಶಯ ಸ್ವಾಗತಾರ್ಹವೇ. ಆದರೆ, ಇದೇ ಧಾರವಾಡ, ಹುಬ್ಬಳ್ಳಿ ಮೂಲಕ ಪ್ರತಿದಿನ ಸಂಜೆ ಐವತ್ತಕ್ಕೂ ಅಧಿಕ ‘ಆರ್ಡಿನರಿ’ ಬಸ್‍ಗಳು ಸಾವಿರಾರು ಜನರನ್ನು ಹೊತ್ತು ಗೋವೆಯತ್ತ ತೆರಳುತ್ತವೆ. ಇದನ್ನು ‘ಬದುಕಿಗಾಗಿ ಗುಳೆ’ ಎಂದು ಸುಮ್ಮನಾಗಿ ಬಿಡುತ್ತದೆ ಆಡಳಿತ.
ಉತ್ತರ ಕರ್ನಾಟಕದ ಸಾವಿರಾರು ಸಂಖ್ಯೆಯ ಜನರು ಬೆಂಗಳೂರಿನ ಹೊರವಲಯದ ಖಾಲಿ ಜಾಗಗಳಲ್ಲಿ ಬಾಡಿಗೆ ನೀಡಿ, ಗುಡಿಸಲು ಹಾಕಿಕೊಂಡು ಬದುಕುತ್ತಿದ್ದಾರೆ. ಇವರೇ ಅಥವಾ ಇವರ ತಂದೆತಾಯಿ ಕಟ್ಟಿರಬಹುದಾದ ಫ್ಲೈಓವರ್‍ಗಳ ಮೇಲೆ ಉತ್ತರ ಕರ್ನಾಟಕದ ಅಧಿಕಾರಸ್ಥರ ಕಾರುಗಳು ಓಡಾಡುತ್ತಿದ್ದರೆ, ಈ ಶ್ರಮಿಕರು ಆ ಫ್ಲೈಓವರ್‍ಗಳ ಕೆಳಗೆ ನಿಲ್ಲಲೂ ಅನುಮತಿಯಿಲ್ಲದಂತಹ ಕಟುವಾಸ್ತವ ನಮ್ಮ ಮುಂದಿದೆ.
ಮೇಲಿನ ಎರಡು ಉದಾಹರಣೆ, ಉತ್ತರ ಕರ್ನಾಟಕದ ಕೃಷಿ ಬಿಕ್ಕಟ್ಟು, ನಿರುದ್ಯೋಗ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತೆಯೇ, ಇದೇ ಭಾಗದ ಅಧಿಕಾರಸ್ಥರ ಬಾಯಿಮಾತಿನ ಅಭಿವೃದ್ಧಿಗೂ ಸಾಕ್ಷಿಯಾಗಿವೆ.
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಆಗಾಗ ಕೇಳಿಬರುತ್ತದಲ್ಲ? ಅದು ಕೂಡ ರಾಜಕೀಯ ಹುನ್ನಾರವೇ. ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಅಧಿಕಾರ ಸಿಗದೇ ಇರುವಾಗ ಈ ರೀತಿಯ ‘ಜನಹಿತ’ ನೆನಪಾಗುತ್ತಾ ಇರುತ್ತದೆ. ಹೈದರಾಬಾದ್-ಕರ್ನಾಟಕದ ಹಿಂದುಳಿದಿರುವಿಕೆಯ ಅಂಕಿಅಂಶಗಳನ್ನು ಎತ್ತಿ ತೋರಿಸಿ ಬೆಳಗಾವಿ ವಿಭಾಗಕ್ಕೆ ಕಾಮಗಾರಿ ಮಂಜೂರು ಮಾಡಿಸಿಕೊಳ್ಳುವ ಶೂರರೂ ಇದ್ದಾರೆ. ಇನ್ನೊಂದು ಕಡೆ ದಕ್ಷಿಣ ಕರ್ನಾಟಕಕ್ಕೆ ಸಾಕಷ್ಟು ಅನುದಾನ ಪ್ರಾಪ್ತಿ ಮಾಡಿಕೊಳ್ಳುವ ಒಂದು ವ್ಯವಸ್ಥಿತ ಜಾಲವೇ ಇದೆ. ಹಾಸನ, ಶಿವಮೊಗ್ಗ ಇತ್ಯಾದಿ ಕಡೆಯ ಬಸ್‍ಸ್ಟ್ಯಾಂಡ್‍ಗಳನ್ನು ನೋಡಿ, ಹುಬ್ಬಳ್ಳಿಗೆ ಇವತ್ತಿಗೂ ಅಂತಹ ವ್ಯವಸ್ಥಿತ ಬಸ್‍ಸ್ಟ್ಯಾಂಡ್ ಸಿಗಲೇ ಇಲ್ಲ. ಇಲ್ಲಿಂದ ಎಸ್. ಆರ್. ಬೊಮ್ಮಾಯಿ, ಜಗದೀಶ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದರು ಎಂಬುದನ್ನು ಗಣನೆಗೆ ತೆಗೆದುಕೊಂಡರೆ, ಇಲ್ಲಿನ ಜನಪ್ರತಿನಿಧಿಗಳ ನಿರ್ಲಕ್ಷತನ, ಸ್ವಾರ್ಥ ಕಣ್ಣಿಗೆ ರಾಚುತ್ತದೆ.
ನೀರಾವರಿ ಯೋಜನೆಗಳ ವಿಷಯಕ್ಕೆ ಬಂದರೆ, ಕೃಷ್ಣಾ ನೀರಾವರಿ ಯೋಜನೆ ಒಂದು ಹಂತಕ್ಕೆ ಬಂದಿತು. ಆದರೆ ‘ಬಿ’ ಸ್ಕೀಮ್‍ನಲ್ಲಿ ನಮ್ಮ ಪಾಲಿನ ನೀರನ್ನು ಬಳಸಿಕೊಳ್ಳುವ ಪ್ರಾಯೋಗಿಕ ಯೋಜನೆ, ಅನುಷ್ಠಾನದ ಕೊರತೆ ಎದ್ದು ಕಾಣುತ್ತಿದೆ.
ಸ್ವಾತಂತ್ರ್ಯಪೂರ್ವ ಕಾಲದಲ್ಲೇ ಮುಂಬೈ ಕರ್ನಾಟಕದಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡು ಶಿಕ್ಷಣ ಪ್ರಸಾರದ ಕೆಲಸವನ್ನು ಮಾಡಿದವು. ಆದರೆ ಇಂದು ಅವು ವೃತ್ತಿಪರ ಶಿಕ್ಷಣ ನಡೆಸುವ ಲಾಭಕೋರ ಸಂಸ್ಥೆಗಳಾಗಿಯಷ್ಟೇ ಉಳಿದಿವೆ. ಮತ್ತೊಂದು ಕಡೆ ಸರ್ಕಾರಿ ಶಿಕ್ಷಣ ಕೇಂದ್ರಗಳು ಮೂಲಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ.
ನಂಜುಂಡಪ್ಪ ಸಮಿತಿಯ ವರದಿಯ ಪ್ರಕಾರ, ಕಲಬುರ್ಗಿ ವಿಭಾಗ ಅತಿ ಹಿಂದುಳಿದಿದ್ದರೆ, ಬೆಳಗಾವಿ ವಿಭಾಗ ಅಂದರೆ ಮುಂಬೈ ಕರ್ನಾಟಕ ಹಿಂದುಳಿದಿದೆ. ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ತೋಟಗಾರಿಕೆಗೆ ಸಾಕಷ್ಟು ಅವಕಾಶವಿದ್ದರೂ ಜನಪ್ರತಿನಿಧಿಗಳು ಆ ಕಡೆ ಗಮನ ಹರಿಸಲೇ ಇಲ್ಲ. ಗದಗ, ಹಾವೇರಿ ಜಿಲ್ಲೆಗಳಲ್ಲಿ ಒಂದೇ ಒಂದು ಹೇಳಿಕೊಳ್ಳುವಂತಹ ಉದ್ಯಮವಿಲ್ಲ. ನೇಕಾರಿಕೆಯನ್ನು ನಂಬಿದವರ ಕಷ್ಟಗಳನ್ನು ಬಗೆಹರಿಸುವ ಯಾವ ಕಾರ್ಯಕ್ರಮವನ್ನೂ ಸರ್ಕಾರಗಳು ಕೈಗೆತ್ತಿಕೊಂಡಿಲ್ಲ. ನೇಕಾರಿಕೆಯೇ ಬದುಕಿನ ಭಾಗ ಎಂಬಂತಿದ್ದ ರಬಕವಿ, ಬನಹಟ್ಟಿಗಳ ಕಡೆಯಿಂದ ಗೋವಾಕ್ಕೆ ಜನ ವಲಸೆ ಹೋಗುತ್ತಲೇ ಇದ್ದಾರೆ.
ಮನುಫ್ಯಾಕ್ಟರಿಂಗ್ ಮತ್ತು ಆಟೊಮೊಬೈಲ್ ಕ್ಷೇತ್ರಗಳ ಬಿಡಿಭಾಗಗಳು ಬೆಳಗಾವಿಯಲ್ಲಿ ತಯಾರಾಗುತ್ತಿವೆ. ಸರ್ಕಾರ ಈ ಸಣ್ಣ ಉದ್ಯಮಗಳಿಗೆ ವಿಶೇಷ ಗಮನ ನೀಡಿದ್ದರೆ, ಇವತ್ತು ಪುಣೆಗೆ ಸ್ಪರ್ಧೆ ಒಡ್ಡುವ ರೀತಿಯಲ್ಲಿ ಬೆಳಗಾವಿಯ ಉದ್ಯಮವನ್ನು ಅಭಿವೃದ್ಧಿ ಮಾಡಬಹುದಿತ್ತು. ಹುಬ್ಬಳ್ಳಿ-ಧಾರವಾಡಗಳಲ್ಲಿರುವ ಇಂಡಸ್ಟ್ರಿಯಲ್ ಕ್ಲಸ್ಟರ್‍ಗಳು ಇಂದು ನಷ್ಟಪೀಡಿತ ಉದ್ಯಮಗಳಿಂದ ತುಂಬಿವೆ. ಇದರಿಂದಾದ ಉದ್ಯೋಗ ನಷ್ಟದ ಕುರಿತು ಯಾವ ಅಧಿಕಾರಸ್ಥನಿಗೂ ಪರಿವೆಯೇ ಇಲ್ಲ.
ಹುಬ್ಬಳ್ಳಿ ಧಾರವಾಡಗಳಲ್ಲಿ ಐಟಿ-ಬಿಟಿ ಉದ್ಯಮವನ್ನು ಬಲಪಡಿಸುವ ಮಾತುಗಳನ್ನು ಪ್ರತಿವರ್ಷ ಕೇಳುತ್ತಲೇ ಇರುತ್ತೇವೆ. ಆದರೆ ಈ ಮಾತುಗಳು ಭರವಸೆಗಳಾಗಿ ಉಳಿದ ಪರಿಣಾಮ, ಐಟಿ-ಬಿಟಿಯಿಂದ ಸೃಷ್ಟಿಯಾಗಬಹುದಾಗಿದ್ದ ಇತರ ಉದ್ಯೋಗಗಳೂ ಇಲ್ಲಿನವರಿಗೆ ಸಿಗದಂತಾಗಿದೆ.
ಬೆಳಗಾವಿ, ಬಾಗಲಕೋಟೆಗಳ ಕಬ್ಬು ಬೆಳೆಗಾರರ ಸಮಸ್ಯೆ ಸರ್ಕಾರದ ಕಿವಿಗಾದರೂ ತಲುಪಿ, ಕಾಟಾಚಾರಕ್ಕಾದರೂ ಒಂದಿಷ್ಟು ಪರಿಹಾರ ಸಿಗುತ್ತದೆ. ಆದರೆ ಹತ್ತಿ, ಹೆಸರು, ಮೆಣಸಿನಕಾಯಿ, ಉಳ್ಳಾಗಡ್ಡಿ ಬೆಳೆಯುವ ರೈತರು ಸದಾ ಪರಿಪಾಟಲು ಪಡುತ್ತಲೇ ಇದ್ದರೂ, ಈ ಕುರಿತು ಸದನದಲ್ಲಿ ವಿಶೇಷ ಚರ್ಚೆಗಳೂ ನಡೆಯುವುದಿಲ್ಲ. ಒಣಭೂಮಿ ಬೇಸಾಯದ ರೈತರಿಗೆ ಅವರ ಉತ್ಪನ್ನಗಳನ್ನು ಮಾರಲು ಸೂಕ್ತ ವ್ಯವಸ್ಥೆಯೇ ಇಲ್ಲ. ಉಳ್ಳಾಗಡ್ಡಿ ಸಂರಕ್ಷಿಸಿ ಇಡಲು ಒಂದೇ ಒಂದು ಕೋಲ್ಡ್ ಸ್ಟೋರೇಜ್ ಘಟಕವೂ ಇಲ್ಲಿಲ್ಲ. ಈ ಎಲ್ಲ ಕಾರಣಗಳಿಂದ ಒಣಭೂಮಿ ಕೃಷಿಯ ಬಿಕ್ಕಟ್ಟು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಪರಿಣಾಮವಾಗಿ ಈ ಭಾಗದಿಂದ ಗೋವಾ, ಮಂಗಳೂರು, ಬೆಂಗಳೂರುಗಳಿಗೆ ಕಟ್ಟಡ, ರಸ್ತೆ ಕಾಮಗಾರಿಗಳಲ್ಲಿ ಕೆಲಸ ಮಾಡಲು ಭೂರಹಿತರು, ಸಣ್ಣ ಹಿಡುವಳಿದಾರರು ಗುಳೆ ಹೋಗುವುದು ತಪ್ಪೇ ಇಲ್ಲ.
ಅಭಿವೃದ್ಧಿ ಎಂದರೆ ಕಾಂಕ್ರೀಟ್ ರಸ್ತೆ, ಭವ್ಯ ಸರ್ಕಾರಿ ಕಟ್ಟಡಗಳು ಎಂಬಂತೆ ಬಿಂಬಿಸಿರುವ ರಾಜಕಾರಣಿಗಳು, ಇದರಲ್ಲಿ ತಮ್ಮ ಪಾಲನ್ನು ಪಡೆದು, ತಣ್ಣಗೆ ಕುಳಿತಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗಗಳ ಬಗ್ಗೆ ಗಮನವನ್ನೇ ನೀಡದ್ದರಿಂದ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮುಂಬೈ ಕರ್ನಾಟಕ ಸಾಕಷ್ಟು ಹಿಂದಿದೆ.
ಈಗ ಆಗಬೇಕಾದದ್ದು ಏನು? ನಂಜುಂಡಪ್ಪ ಸಮಿತಿಯ ವರದಿಯ ಶಿಫಾರಸಿನಂತೆ ನೀಡುವ ವಿಶೇಷ ಅಭಿವೃದ್ಧಿ ಅನುದಾನದಲ್ಲಿ ಹೆಚ್ಚಳವಾಗಬೇಕು ಮತ್ತು ಈ ಅನುದಾನವನ್ನು ಸಾಮಾಜಿಕ ಸ್ಥಿತಿ ಸುಧಾರಿಸುವ ಯೋಜನೆಗಳಿಗೆ ಬಳಸುವಂತಾಗಬೇಕು.

 

ಹೈದರಾಬಾದ್ ಕರ್ನಾಟಕ ಅಭಿವೃದ್ಧಿಗೆ ಆಗಬೇಕಿರುವುದೇನು?

 ಭೀಮನಗೌಡ ಕಾಶಿರೆಡ್ಡಿ |
ಉತ್ತರ ಕರ್ನಾಟಕದ ಕೇಂದ್ರವಾಗಿರುವ ಧಾರವಾಡದಲ್ಲಿ ಈ ಬಾರಿ ಕನ್ನಡದ ಜಾತ್ರೆ ನಡೆಯುತ್ತಿದ್ದು, ಈ ಸಮ್ಮೇಳನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಒಂದಿಷ್ಟು ಅರ್ಥಪೂರ್ಣ ಚರ್ಚೆ ನಡೆಯಲಿ ಎಂಬ ಆಶಯದಿಂದ ಈ ಬರಹ. ಉತ್ತರ ಕರ್ನಾಟಕದಲ್ಲೆ ಅತ್ಯಂತ ಹಿಂದುಳಿದ ಹೈದರಾಬಾದ್ ಕರ್ನಾಟಕದ ಸರ್ವತೋಮುಖ ಪ್ರಗತಿ ಸಾಧಿಸಲು ನಿಜಕ್ಕೂ ಆಗಬೇಕಾಗಿರುವುದೇನು? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಪ್ರಯತ್ನ.
1)ಮೊದಲನೆಯದಾಗಿ ಈಗಿನ ಆಡಳಿತ ವ್ಯವಸ್ಥೆ ಯಲ್ಲಿ ಎಷ್ಟೇ ಸಾವಿರ ಕೋಟಿ ಅನುದಾನ ಕೊಟ್ಟರೂ,ಇನ್ನೂ 50 ವರ್ಷ ಕಳೆದರೂ ಹೈ.ಕ. ಹಿಂದುಳಿದ ಪ್ರದೇಶವಾಗಿಯೇ ಇರುತ್ತದೆ. ಆದ್ದರಿಂದ ಈ ಭಾಗದ ಅಭಿವೃದ್ಧಿಗಾಗಿ ಸ್ವಾಯತ್ತ ಪ್ರಾದೇಶಿಕ ಅಭಿವೃದ್ಧಿ ಮಂಡಳಿಯನ್ನು ರಚಿಸಬೇಕು. ಈ ಮಂಡಳಿಯು ಚುನಾಯಿತ ಜನಪ್ರತಿನಿಧಿಗಳನ್ನೊಳಗೊಂಡಿದ್ದು, ಶಾಸನ ರಚನೆಯ ಅಧಿಕಾರವನ್ನು ಹೊರತುಪಡಿಸಿ ಆಡಳಿತಾತ್ಮಕ, ಹಣಕಾಸು ಹಾಗೂ ಕಾಯಾರ್ಂಗೀಯ ಹೀಗೆ ಎಲ್ಲಾ ಅಧಿಕಾರವನ್ನು ಹೊಂದಿರಬೇಕು. ಇಂತಹ ಮಂಡಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅವಶ್ಯಕ ನಿಧಿಯನ್ನು ಒದಗಿಸಬೇಕು.
2) ಎರಡನೆಯದಾಗಿ ಈ ಭಾಗದಲ್ಲಿ ವ್ಯಾಪಕವಾಗಿರುವ ‘ಗುಳೆ’ ಹೋಗುವುದನ್ನು ತಪ್ಪಿಸಲು ಮಾನವ ಸಂಪನ್ಮೂಲ ಆಧರಿತ ಸಿದ್ಧ ಉಡುಪುಗಳ ಕಾರ್ಖಾನೆಗಳನ್ನು ಹೆಚ್ಚಾಗಿ ಸ್ಥಾಪಿಸಬೇಕು.ಇದಕ್ಕೆ ಪೂರಕವಾದ ಕುಶಲ ಕಾರ್ಮಿಕರನ್ನು ಒದಗಿಸಲು ಎಲ್ಲಾ ತಾಲ್ಲೂಕುಗಳಲ್ಲಿ ನಿರಂತರ ಹೊಲಿಗೆ ತರಬೇತಿ ಕೇಂದ್ರಗಳನ್ನು ಆರಂಭಿಸಬೇಕು. ಅದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಿಗಮವೊಂದನ್ನು ಸ್ಥಾಪಿಸಬೇಕು.3) ಈ ಭಾಗದ ಆರ್ಥಿಕತೆಯು ಶೇಕಡಾ 80 ರಷ್ಟು ಕೃಷಿಯನ್ನು ಅವಲಂಬಿಸಿರುವುದರಿಂದ, ಸತತ ಬರಗಾಲ ಹಾಗೂ ಮಳೆಯ ಕೊರತೆ ಹೆಚ್ಚಾಗಿರುವುದರಿಂದ ಕೃಷ್ಣಾ ‘ಬಿ’ ಸ್ಕೀಮ್ ಸೇರಿದಂತೆ ಇತರ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯನ್ನು “ರಾಷ್ಟ್ರೀಯ ಯೋಜನೆ” ಎಂದು ಘೋಷಿಸಬೇಕು.
4) ಹೈನುಗಾರಿಕೆಗೆ ಪ್ರೋತ್ಸಾಹ ನೀಡಿ ಹೆಚ್ಚು ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ದಿಸೆಯಲ್ಲಿ, ಗುಜರಾತಿನ “ಅಮುಲ್” ಮಾದರಿಯ ಕಾರ್ಯಯೋಜನೆಯನ್ನು ಕುರಿಯನ್‍ರಂತಹ ಪರಿಣಿತರ ನೇತೃತ್ವದಲ್ಲಿ ಶೀಘ್ರ ಪ್ರಾರಂಭಿಸಬೇಕು.ಪ್ರಸ್ತುತ ಹೈದರಾಬಾದ್ ಕರ್ನಾಟಕದಲ್ಲಿ ಮೂರು ಜಿಲ್ಲೆಗೊಂದರಂತೆ ಕೇವಲ ಎರಡು ಹಾಲು ಒಕ್ಕೂಟಗಳಿವೆ. (ಬೀದರ್, ಕಲಬುರ್ಗಿ, ಯಾದಗಿರಿ ಜಿಲ್ಲೆ ಸೇರಿ ಒಂದು ಮತ್ತು ಬಳ್ಳಾರಿ, ರಾಯಚೂರು, ಕೊಪ್ಪಳ ಸೇರಿ ಮತ್ತೊಂದು) ಇವನ್ನು ವಿಭಜಿಸಿ ಪ್ರತಿ ಜಿಲ್ಲೆಗೊಂದರಂತೆ ಆರು ಒಕ್ಕೂಟಗಳನ್ನು ರಚಿಸಿ, ಈ ಒಕ್ಕೂಟಗಳನ್ನೊಳಗೊಂಡ ಪ್ರತ್ಯೇಕ ಮಹಾಮಂಡಳಿಯನ್ನು ಸ್ಥಾಪಿಸಬೇಕು.
5) ಇಲ್ಲಿನ ಪ್ರಮುಖ ಬೆಳೆಗಳಾದ ಭತ್ತ, ಜೋಳ ಹಾಗೂ ತೊಗರಿ ಬೆಳೆಗಾರರು ಬೆಲೆ ಏರಿಳಿತದಿಂದಾಗಿ ಪ್ರತಿ ವರ್ಷ ನಷ್ಟ ಅನುಭವಿಸುತ್ತಿರುವುದನ್ನು ತಪ್ಪಿಸಲು ಕನಿಷ್ಠ ಬೆಂಬಲ ಬೆಲೆ ನೀಡುವ , ವರ್ಷಪೂರ್ತಿ ಕಾರ್ಯನಿರ್ವಹಿಸುವ ಶಾಶ್ವತ ಖರೀದಿ ಕೇಂದ್ರಗಳನ್ನು ತೆರೆಯಬೇಕು.

6) ನಾಗರಿಕ ಆಡಳಿತ, ಬ್ಯಾಂಕಿಂಗ್ ಹಾಗೂ ರೇಲ್ವೆ ಗಳಲ್ಲಿ ಈ ಭಾಗದ ಯುವಜನರಿಗೆ ನ್ಯಾಯಯುತ ಪ್ರಾತಿನಿಧ್ಯ ಕಲ್ಪಿಸುವ ದೃಷ್ಟಿಯಿಂದ ಪ್ರತಿ ಜಿಲ್ಲೆಗೊಂದರಂತೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಈ ಕೇಂದ್ರಗಳು ಉಚಿತ ಹಾಸ್ಟೆಲ್ ಸೌಲಭ್ಯ ಒಳಗೊಂಡಿರಬೇಕು.
7) ತುಂಗಭದ್ರಾ ನದಿ ಹಾಗೂ ಜಲಾಶಯಗಳಿಂದ ನೀರನ್ನು ಕಳ್ಳತನ ಮಾಡುತ್ತಿರುವ ಕಾರ್ಖಾನೆಗಳಿಗೆ ಕಡಿವಾಣ ಹಾಕಬೇಕು. ಹಾಗೂ ರೈತರ ಹಕ್ಕಿನ ನೀರಿನ ಲಭ್ಯತೆಯನ್ನು ಖಚಿತಪಡಿಸಬೇಕು. ತುಂಗಭದ್ರಾ ನದಿ ಪಾತ್ರದಲ್ಲಿಯೇ ಉತ್ತಮ ಗುಣಮಟ್ಟದ ಸಕ್ಕರೆ ಉತ್ಪಾದಿಸುತ್ತಿದ್ದು ಈಗ ದುರಾಡಳಿತದಿಂದ ಮುಚ್ಚಿ ಹೋಗಿರುವ ಕಂಪ್ಲಿ ಸಹಕಾರಿ ಸಕ್ಕರೆ ಕಾರ್ಖಾನೆ, ಹೊಸಪೇಟೆಯ ಐ.ಎಸ್.ಆರ್.ಸಕ್ಕರೆ ಕಾರ್ಖಾನೆ, ಮುನಿರಾಬಾದ್‍ನ ಸಾಲರ್ ಜಂಗ್ ಸಕ್ಕರೆ ಕಾರ್ಖಾನೆ ಹಾಗೂ ಮರಳಿ ಸಕ್ಕರೆ ಕಾರ್ಖಾನೆಗಳನ್ನು ಕೂಡಲೇ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು8) ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿಯೂ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಅತಿ ಹಿಂದುಳಿದಿರುವುದರಿಂದ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವ ದೃಷ್ಟಿಯಿಂದ ಈ ಭಾಗದ ಎಲ್ಲಾ ಜಿಲ್ಲೆಗಳಲ್ಲಿಯೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸಬೇಕು. ಕ್ಯಾನ್ಸರ್, ಹೃದ್ರೋಗ ಹಾಗೂ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಉನ್ನತ ವೈದ್ಯಕೀಯ ಸಂಸ್ಥೆಗಳನ್ನು ಪ್ರಾರಂಭಿಸಬೇಕು.ಅಷ್ಟಲ್ಲದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಜಾಲವನ್ನು ಸದೃಢಗೊಳಿಸಬೇಕು.
9) ಈ ಪ್ರದೇಶದಲ್ಲಿ IIಖಿ, IIಒಗಳಂತಹ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕು. ಬಾಲಕಿಯರಿಗಾಗಿ ಆಂಗ್ಲ ಮಾಧ್ಯಮ ವಸತಿಶಾಲೆಗಳನ್ನು ಹೋಬಳಿಗೊಂದರಂತೆ ಆರಂಭಿಸಬೇಕು.
ಒಟ್ಟಾರೆಯಾಗಿ ಹೇಳುವುದಾದರೆ ಹೈ.ಕರ್ನಾಟಕದ ಸಮಗ್ರ ಅಭಿವೃದ್ಧಿಗಾಗಿ ಬಹು – ಆಯಾಮಗಳ ಕಾರ್ಯಸೂಚಿಯನ್ನು ಜಾರಿಗೊಳಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...