ಆ ಗುರುತು ಮಾರಿ ನಿಮ್ಮ ಊರು ಕಡೆ ಬಂದದೇನು?

ನಮ್ಮೂರ ಕಡೆ ಹಳ್ಳಿಯೊಳಗ ಒಂದು ಹೆಣ್ಣು ದೇವರು ಇರತದ. ಅದರ ಹೆಸರು ಗುರುತ ಮಾರಿ ಅಥವಾ ತುಪ್ಪದ ಮಾಳವ್ವ . ಇದೇನು ಬನಶಂಕರಿ ಜಾತ್ರಿಯೊಳಗ “ಓಡಿ ಹೋದ ಹುಡುಗಿ ಅರ್ಥಾತ್ ಬೆವರಿನ ಬೆಲೆ ನಿನಗೇನು ಗೊತ್ತೋ ಖೋಡಿ” ಅನ್ನೋ ಕಂಪನಿ ನಾಟಕದ ಹೆಸರು ಇದ್ದಂಗ ಐತೆಲ್ಲಾ ಅಂತ ಅನಬ್ಯಾಡ್ರಿ. ಸಂಸ್ಕೃತದ ಘೃತಮಾರಿ ಅನ್ನೋದು ಹೋಗಿ ಗುರುತು ಮಾರಿ ಅಂತ ಆಗೇತಿ.

ಆದರ ನಾನು ಈಗ ಹೇಳಲಿಕ್ಕೆ ಹೊಂಟಿದ್ದು ಆ ಗುರುತು ಮಾರಿ ಬಗ್ಗೆ ಅಲ್ಲ.

ಕೇಂದ್ರ ಸರಕಾರ ಹಾಗೂ ಕೆಲವು ರಾಜ್ಯ ಸರಕಾರಗಳು ಸೇರಿ ಗುಂಪಿನೊಳಗಿನ ನಮ್ಮ- ನಿಮ್ಮ ಗುರುತು ಹಚ್ಚಲಿಕ್ಕೆ ಏನು ಹೊಸಾ ತಂತ್ರಜ್ಞಾನ ಉಪಯೋಗಿಸಲಿಕ್ಕೆ ಹತ್ಯಾರಲ್ಲಾ ಆ ಗುರುತು ಮಾರಿ ಬಗ್ಗೆ.

ಅದು ಫೇಸಿಯಲ್ ರಿಕಗ್ನಿಷನ್ ಟೆಕ್ನಾಲಜಿ ಅಥವಾ ಅಡ್ವಾನ್ಸಡ ಫೇಸಿಯಲ್ ರಿಕಗ್ನಿಷನ್ ಟೆಕ್ನಾಲಜಿ (ಎಫ್ ಆರ್ ಟಿ ಅಥವಾ ಎ ಎಫ್ ಆರ್ ಟಿ). ಬಲಾಢ್ಯರು ಜನಸಾಮಾನ್ಯರು, ಅಮಾಯಕರು, ಮಾರಿ ಗುರುತು ಹಿಡದು ಇದು ಅವರ ಜೀವ ತೆಗೀಲಿಕ್ಕೆ ಅನುವು ಮಾಡಿಕೊಡೋ ವೈರಿ ಇದು. ಆದ್ದರಿಂದ ಇದನ್ನು ಗುರುತು ಮಾರಿ ಅಂತ ಅನ್ನೋದು.

ಈಗೇನಾದಪಾ ಅಂದರ ಗೋಂಡವಾನಾ ಪ್ರದೇಶದ ತಿಕ್ಕಾಟದಿಂದ ಹುಟ್ಟಿದ ಭರತಖಂಡದಾಗ ಒಂದು ಪ್ರಜಾತಂತ್ರ ವ್ಯವಸ್ಥೆ, ಅದಕ್ಕ ಒಂದು ಸಂವಿಧಾನಾ, ಚುನಾಯಿತ ಸರಕಾರ ಅಂತ ಅದಾವು. ಅದರಾಗ ಒಂದು ಮೂಲ ಮಂತ್ರ ಐತಿ. ಸರಕಾರದ ಯಾವುದೇ ಕೆಲಸದ ಹಿಂದೆ ಕಾನೂನಿಗೆ ಅನುಸಾರ ಆಗಿ ಇರಬೇಕು. ಅಂದರ ಯಾವ ವಿಷಯ ಕಾನೂನಿಗೆ ವಿರುದ್ಧವಾಗಿ ಅದನೋ ಅಥವಾ ಯಾವುದರ ಬಗ್ಗೆ ಕಾಚಿನೂನು ಇಲ್ಲವೋ ಅಂಥಾ ಕೆಲಸ ಸರಕಾರ ಮಾಡಬಾರದು, ಅಂತ.

ಈಗಿನ ನಮ್ಮ ಘನ ಸರಕಾರಗಳು ಥೇಟ್ ಇಂಥಾ ಕೆಲಸ ಮಾಡಲಿಕ್ಕೆ ಹತ್ಯಾವು. ಅದಕ್ಕ ನಮ್ಮೆಲ್ಲಾರೂ ಬುಡಕ್ಕ ಬಂದೇತಿ. ಅಂಥ ಅನೇಕ ವಿಷಯದಾಗ ಮೊದಲನೇದ್ದೂ ಹಾಗೂ ಭಾಳ ಅಪಾಯಕಾರಿಯಾದದ್ದೂ ಅಂದರ ಈ ಎಫ್ ಆರ್ ಟಿ ಗುರುತು ಮಾರಿ. ಅದು ಕೃತಕ ಬುದ್ಧಿಮತ್ತೆ ಉಪಯೋಗಿಸಿ ಗುಂಪಿನಾಗ ಜನರನ್ನ ಪತ್ತೆ ಹಚ್ಚೋ ಸಾಧನ.

ಮೊನ್ನಿನ ದೆಹಲಿ ದಂಗೆಯೊಳಗ ಯಾರ್ಯಾರು ಇದ್ದರೋ ಅವರನ್ನ ನಾವು ಗುರುತು ಮಾರಿಯಿಂದ ಕಂಡು ಹಿಡಿಲಾಕ ಹತ್ತೇವಿ. ಸುಮಾರು ಒಂದು ಸಾವಿರದಾ ಒಂದು ನೂರು ಜನಾ ಸಿಕ್ಕಾರ ಅಂತ ಹೇಳಿ ದೆಹಲಿ ಪೊಲಿಸ ಇಲಾಖೆ ಮುಖ್ಯಸ್ಥರೂ ಆಗಿರುವ ಕೇಂದ್ರ ಗೃಹ ಮಂತ್ರಿ ಅಮಿತಷಾ ಅವರು ಹೇಳ್ಯಾರು. ಹಂಗಂದರ ಏನು? ಒಂದು ಗುಂಪಿನ, ಪ್ರತಿಭಟನೆಯ, ಹೊಡೆದಾಟದ ವಿಡಿಯೋ ನೋಡಿ ಅದರಾಗ ಒಬ್ಬೊಬ್ಬರ ಮುಖ ಪರಿಚಯ ಹಿಡದು ಅವರನ್ನ ದಸ್ತಗಿರಿ ಮಾಡೋದು. ಆಮ್ಯಾಲೆ ಅವರ ವಿರುದ್ಧ ಅದ ವಿಡಿಯೋ ಸಾಕ್ಷಿ ಅಂತ ಕೋರ್ಟಿನ್ಯಾಗ ತೋರಸೋದು. ಅವರಿಗೆ ಶಿಕ್ಷೆ ಆಗೋ ಹಂಗ ಮಾಡೋದು.

ಮ್ಯಾಲ ನೋಟಕ್ಕ ಇದು ಇಷ್ಟು ಸರಳ ಅಂತ ಅನಿಸಿದರೂ ಸ್ವಲ್ಪ ವಿಚಾರ ಮಾಡಿದರೂ ಇದು ಅತಿ ಭಯಂಕರ ಅನ್ನೋದು ಗೊತ್ತಾಗತದ. ಮೊದಲನೇಯದಾಗಿ ಅದು ನೂರಕ್ಕ ನೂರು ಖಚಿತ ಅಲ್ಲ. ಅದರಲ್ಲಿ ಏನಾದರೂ ತಪ್ಪಾಗಿ ರಾಮನ ಬದಲಿಗೆ ರಹೀಮನ ದಸ್ತಗಿರಿ ಆತು ಅಂದರ ಅದನ್ನ ವಿರೋಧ ಮಾಡೋದು ಯಾರು? ಮಾನವರಿಂದ ತಪ್ಪಾಗಿಲ್ಲ, ಕಂಪ್ಯೂಟರಿನಿಂದ ತಪ್ಪಾಗೇದ ಅಂತ ಕೋರ್ಟಿಗೆ ಯಾರು ಹೇಳೋರು?

ಚೈನಾದಾಗ ಒಬ್ಬ ಮನಿಷಾ ಕಳ್ಳತನಾ ಮಾಡಿ ಒಂದು ಒಪೇರಾ ನಾಟಕ ಗೃಹಕ್ಕ ಹೋಗಿ ಕೂತ. ಅಲ್ಲಿ ಸುಮಾರು 35,000 ಜನಾ ಸೇರಿದ್ದರು. ನನ್ನ ಇಲ್ಲಿ ಯಾರು ಗುರುತು ಹಿಡೀತಾರ ಅಂತ. ಆದರ ಸರಕಾರದ ಸೀಸಿಟಿವಿಯೊಳಗಿನ ಗುರುತು ಮಾರಿ ಅವನನ್ನು ಗುರುತು ಹಿಡೀತು. ಆ ನಾಟಕ ಮುಗದ ಕೂಡಲೇ ಪೊಲೀಸರ ನಾಟಕ ಸುರು ಆತು. ಅವನನ್ನು ಹಿಡಕೊಂಡು ಜೈಲಿಗೆ ಹಾಕಿದರು. ಅದು ದೊಡ್ಡ ಸಾಧನೆ, ಮುಂದಿನ ಶತಮಾನದ ತಂತ್ರಜ್ಞಾನವನ್ನ ಇದ ಶತಮಾನದಾಗ ಬಳಸಿದ ದೇಶ ಚೈನಾ ಅಂತ ಅಂತಾರಾಷ್ಟ್ರೀಯ ಪೇಪರು- ಟೀವಿಗಳಲ್ಲೆ ಬಂತು. ಚೈನಾ ಅಧ್ಯಕ್ಷ ಷೀ ಸಾಹೇಬರು ಖುಷಿಯಾದರು. ಆದರ ಅದರಾಗ ಕಾನೂನುಬದ್ಧ ಪ್ರಕ್ರಿಯೆಯನ್ನ ಬಳಸಲಾಗಿತ್ತೇ? ಆ ಒಬ್ಬನನ್ನ ಹಿಡಿಯೋದರಾಗ 34,999 ಜನರ ಗುರುತು- ಚಹರೆ, ವೈಯಕ್ತಿಕ ಮಾಹಿತಿ, ಅಪರಾಧ ಹಿನ್ನೆಲೆ ಎಲ್ಲಾ ಸರಕಾರದ ಕಡೆ ಹೆಂಗ ಬಂತು ಅಂತ ಯಾರೂ ಕೇಳಲಿಲ್ಲ. ಅಮಾಯಕ ಸಾಮಾನ್ಯರ ವೈಯಕ್ತಿಕ ಮಾಹಿತಿ ಇಟಗೊಂಡು ಸರಕಾರ ಏನು ಮಾಡತದ? ಅದನ್ನು ಸರಕಾರ ಹೆಂಗ ಸಂಗ್ರಹ ಮಾಡತದ ಅಂತ ಚರ್ಚೆ ಆಗಲಿಲ್ಲ.

ಆ ಷೀ ಸಾಹೇಬರು ಮಾಡಿದರೂ ಅಂತ ನಮ್ಮ ಷಾ ಸಾಹೇಬರೂ ಅದನ್ನ ಮಾಡಲಿಕ್ಕೆ ಹತ್ಯಾರ.

ಈಗಿನ ಕಾನೂನುಪ್ರಕಾರ, ಇಲೆಕ್ಟ್ರಾನಿಕ ಸಾಕ್ಷಿಗಳನ್ನು ಮುಖ್ಯ ಸಾಕ್ಷಿ ಅಂತ ಕೋರ್ಟಿನಲ್ಲಿ ಪರಿಗಣಿಸೋಹಂಗಿಲ್ಲ . ಆದರ ಪೂರಕ ಸಾಕ್ಷಿ ಅಂತ ಪರಿಗಣಿಸಬಹುದು. ಈ ದೇಶದ ಅರ್ಧಕ್ಕರ್ಧ ಅಪರಾಧಗಳಿಗೆ ಪೂರಕ ಸಾಕ್ಷಿನ ಬಳಸಲಾಗತದ.

ಹಂಗಿದ್ದಾಗ ಇದು ಮಷೀನಿನ ತಪ್ಪು ಇದನ್ನು ಸಾಕ್ಷಿಯಾಗಿ ಒಪ್ಪಬಾರದು ಅಂತ ಸನ್ಮಾನ್ಯ ನ್ಯಾಯಾಲಯಕ್ಕ ಯಾರು ಹೇಳಿಕೊಡೋದು? ಯಾರರ ರಸ್ತೆ ಬಾಜೂ ಕಾಯಿಪಲ್ಲೆ ಮಾರವ ಅಥವಾ ಟೈರ ಪಂಚರ್ ಮಾಡೋ ಸಲೀಮನ್ನ ಹಿಡದು ನೀನು ವಿಡಿಯೋದಾಗ ಇದ್ದೀ, ನಿನ್ನನ್ನ ಗುರುತುಮಾರಿ ಗುರುತು ಹಿಡದದ ಅಂತ ಪೊಲೀಸರ ಒದ್ದು ಎಳಕೊಂಡು ಹೋದರ ಏನು ಹೇಳಬೇಕು? ನಮ್ಮ ಪೊಲೀಸರಿಗೆ – ವಕೀಲರಿಗೆ ಇರಬೇಕಾದ ಬುದ್ಧಿಮತ್ತೆನ ಇರೋದು ಕಮ್ಮಿ ಇನ್ನು ಕೃತಕ ಬುದ್ಧಿಮತ್ತೆಯ ವಿರುದ್ಧ ಅವರು ಸೆಣಸಾಡೋದು- ವಾದ ಮಾಡೋದು ಹೆಂಗ ಸಾಧ್ಯ ಆಕ್ಕೆತಿ?

ಪೊಲೀಸರು ತಮಗ ಆಗಲಾರದವರನ್ನ, ಆಳುವ ಪಕ್ಷದ ವಿರೋಧಿಗಳನ್ನ, ಸರಕಾರವನ್ನ ತೆಗಳಿದವರನ್ನ , ಇತರರು ಆರಾಧಿಸುವ ಸೂಪರ್ ಹೀರೋ ನಾಯಕನನ್ನ ಸಕಾರಣವಾಗಿ ಟೀಕೆ ಮಾಡಿದವರನ್ನ ಸಿಕ್ಕಸಿಕ್ಕಂಗ ಹಿಡಕೊಂಡು ಹೋಗಿ ನಮ್ಮ ವಿಡಿಯೋ ಹೇಳೇತಿ, ಅದಕ್ಕ ಕರಕೊಂಡು ಹೊಂಟೇವಿ ಅಂತ ಅಂದರ ಹೆಂಗ? ಕಾನೂನುಪಾಲಕರು ತಮ್ಮ ತಲಿ ಉಪಯೋಗಿಸಬೇಕೇ ಹೊರತು ವಿಡಿಯೋ ನೋಡುವ ಕಂಪ್ಯೂಟರ್‍ನಲ್ಲ. ಅವರಿಗೆ ಇರಬೇಕಾದ್ದು ಮಾನವೀಯತೆ ಹಾಗೂ ಸಂತಾಪ. ಅದು ಇಲ್ಲದೇ ತಮ್ಮ ಬುದ್ಧಿ ತೊಗೊಂಡು ಹೋಗಿ ಮಷೀನಿಗೆ ಕೊಟ್ಟರ ಏನಾನ ಅನಾಹುತ ಆಗತಾವೋ ಏನೋ?

ಟಾಮ್ ಕ್ರೂಸ್ ಅನ್ನೋ ಹಾಲಿವುಡ್ ಹೀರೋ ಮೈನಾರಿಟಿ ರಿಪೋರ್ಟು ಅನ್ನೋ ಪಿಚ್ಚಿರಿನಾಗ ಮಾಡಿದ್ದ. ಅದರಾಗ ಮೂರು ಜನ ಅಕಶೇರುಕಗಳು ಈ ಊರಿನ್ಯಾಗ ಇನ್ನ ಮುಂದ ಏನ ಅಪರಾಧ ಆಗತದ ಅಂತ ಭವಿಷ್ಯ ಹೇಳತಾವು. ಅದನ್ನು ನೋಡಿ ಪೊಲೀಸರು ಭಾವಿ ಅಪರಾಧಿಗಳನ್ನ ಹಿಡೀತಾರ. ಇದನ್ನ ಭಾರತದ ಮಟ್ಟಿಗೆ ಕಲ್ಪಿಸಿಕೊಳ್ಳಲಿಕ್ಕೂ ಹೆದರಿಕಿ ಆಗತದ. ಆದರ ನಮ್ಮ ಘನ ಕೇಂದ್ರ ಸರಕಾರ ಈಗಾಗಲೇ ಒಂದು ಸಾಫ್ಟವೇರು ಉಪಯೋಗಿಸಲಿಕ್ಕೆ ಹತ್ತೇದ. ಅದು ಪ್ರಿಡಿಕ್ಟಿವ್ ಪೊಲಿಸಿಂಗ್ ಅಂತ. ಇದನ್ನ ಪೊಲೀಸ್ ಕಣಿಗಾರಿಕೆ ಅಂತ ಕರೀಬಹುದು. ಕಣೀ ಹೇಳವರನ್ನ ಕೇಳಿ ಪೊಲೀಸ ಇಲಾಖೆ ನಡೆಸಲಿಕ್ಕೆ ಆಗತದಾ? ಅದರ ಸಾಧ್ಯಾಸಾಧ್ಯತೆಗಳು ಏನು? ಅಪಾಯಗಳೇನು? ಇವನ್ನ ಯಾರು ವಿಚಾರ ಮಾಡ್ಯಾರ? ಕೊಲೆ- ಅತ್ಯಾಚಾರ ಮಾಡ್ಯಾರ ಅಂತ ಸಿದ್ಧ ಆದ ಮ್ಯಾಲೆ ಸಹಿತ ಅಪರಾಧಿಗಳನ್ನ ಗಲ್ಲಿಗೆ ಹಾಕಲಿಕ್ಕೆ – ಜೈಲಿಗೆ ಕಳಸಲಿಕ್ಕೆ ಹಿಂದ- ಮುಂದ ನೋಡೋ ಮಂದಿ ನಾವು. ಇನ್ನ ಇನ್ನ ಮುಂದ ಇವರು ಅಪರಾಧ ಮಾಡತಾರ ಅಂತ ಯಾರನ್ನಾದರೂ ಹಿಡಯೋದು ಹೆಂಗ?

ಗೃಹ ಸಚಿವರು ಈ ತಂತ್ರಜ್ಞಾನದ ಬಳಕೆಯ ಬಗ್ಗೆ ಅತಿ ಅಭಿಮಾನದಿಂದ ಲೋಕಸಭಾದಾಗ ಹೇಳಲಿಕ್ಕೆ ಹತ್ತಿದಾಗ ಅಲ್ಲಿದ್ದ ವಿರೋಧ ಪಕ್ಷದ ಸದಸ್ಯರು ಸುಮ್ಮನೇ ಬಾಯಿ ಮುಚ್ಚಿಕೊಂಡು ಕೂತಾರು. ಯಾಕ ಅಂದರ `ಎಫ್‍ಆರ್ ಟಿ’ ಅಂದರ ಏನಂದರ ಅವರಿಗೆ ಗೊತ್ತಿಲ್ಲ. ಅವರಿಗೆ ಯಾಕ ಗೊತ್ತಿಲ್ಲ ಅಂದರ ನಮಗ ಗೊತ್ತಿಲ್ಲ. ನಾವು ಜವಾಬ್ದಾರಿಯಿಂದ ಅವರನ್ನ ಆರಿಸಂಗಿಲ್ಲ. ನಮಗೆ ಲಾಯಕ್ಕಾದ ನಾಯಕರನ್ನೇ ನಾವು ಲೋಕಸಭೆಗೆ ಕಳಿಸತೇವೆಲ್ಲಾ. ಅವರು ಇಲ್ಲಿಂದ ದಿಲ್ಲಿಗೆ ಹೋಗುವಾಗ ನಾಯಕರ ನಡುವೆ ಒಂದು `ಲಾ’ ಸೇರಿಕೊಂಡು ಬಿಟ್ಟಿರತದ. ಅವರಿಗೆ ‘ಲಾ’ ಗೊತ್ತಿರಲಿ, ಬಿಡಲಿ. ಇಷ್ಟು ಘನಘೋರ ಘಟನೆಗಳು ನಮ್ಮ ಸುತ್ತ ನಡೀತಾ ಇದ್ದಾಗಲೂ ಸಹ ನಮ್ಮ ತಥಾಕಥಿತ ಪ್ರತಿನಿಧಿಗಳು ಸುಮ್ಮನೇ ಕೂತಾರ. ಆದರ ನಮಗ ಏನೂ ಮಾಡಲಿಕ್ಕೆ ಆಗವಲ್ಲದಲ್ಲಾ ಅಂತ ಅನಕೋ ಬ್ಯಾಡರಿ.

ಇಂಟರನೆಟ ಫ್ರೀಡಮ್ ಫೌಂಡೇಶನ್ ಅನ್ನೋ ಸಂಸ್ಥೆ ಇದರ ವಿರುದ್ಧ ಹೋರಾಟ ನಡೆಸೇದ. ಅದರ ವಕೀಲರು ಸರಕಾರದ ವಿರುದ್ಧ ನೋಟಿಸು ಕಳಿಸ್ಯಾರ. ಅದರ ಅಂತರ್ಜಾಲ ತಾಣಕ್ಕೆ (https://internetfreedom.in/) ಭೆಟ್ಟಿ ಕೊಟ್ಟು ಸದಸ್ಯರಾಗಿ, ಅವರಿಗೆ ನೈತಿಕ ಬೆಂಬಲ ಸೂಚಿಸಬಹುದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here