Homeಮುಖಪುಟಮೋದಿ ವಿರುದ್ಧ ರೈತರು, ಯೋಧರ ಸ್ಪರ್ಧೆಯು ಜಡಗೊಂಡ ನೈತಿಕ ಪ್ರಜ್ಞೆಗೆ ಚಾಟಿ ಏಟು

ಮೋದಿ ವಿರುದ್ಧ ರೈತರು, ಯೋಧರ ಸ್ಪರ್ಧೆಯು ಜಡಗೊಂಡ ನೈತಿಕ ಪ್ರಜ್ಞೆಗೆ ಚಾಟಿ ಏಟು

- Advertisement -
- Advertisement -

|ಬಿ. ಶ್ರೀಪಾದ ಭಟ್|

ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ.

ಮನುಶ್ಯರು ಎಂದರೆ ಏನು, ಯಾರು ಎನ್ನುವುದರ ಕುರಿತು ನನಗೆ ಆಸಕ್ತಿ ಇಲ್ಲ, ಆದರೆ ಅವರು ಏನಾಗಲು ಬಯಸುತ್ತಿದ್ದಾರೆ ಎಂಬುದು ನನಗೆ ಮುಖ್ಯ – ಜೀನ್ ಪೌಲ್ ಸಾರ್ತೆ

ಜನಸಾಮಾನ್ಯರು ಎಂದರೆ ಯಾರು? ವಿವಿದ ಜಾತಿಗಳು, ವರ್ಗಗಳು, ಜನಾಂಗೀಯ ಬಿನ್ನತೆಯಂತಹ ಸಂಕೀರ್ಣತೆಯನ್ನು ಒಳಗೊಂಡ ಸಮಾಜದಲ್ಲಿ ಬಹುಸಂಸ್ಕøತಿಯಲ್ಲಿ ಬದುಕುತ್ತಿರುವವರು ಎಂದು ಸರಳೀಕರಸಿ ಹೇಳಬಹದು. ಏಕರೂಪಿಯಾಗಿ ಶೂನ್ಯದಲ್ಲಿ ಈ ಜನಸಾಮಾನ್ಯ ಇರಲು ಸಾಧ್ಯವೇ ಇಲ್ಲ. ಇಲ್ಲಿ ಪ್ರಜೆಗಳು ಕೇವಲ ಗುಂಪು ಮಾತ್ರವಲ್ಲ, ಜೊತೆಗೆ ಮುಖ್ಯವಾಗಿ ನ್ಯಾಯವಂತ ಸಮುದಾಯವೂ ಹೌದು. ಬಾರತದಂತಹ ವೈವಿದ್ಯತೆಯ ದೇಶದಲ್ಲಿ ಈ ಎಲ್ಲ ಬಿನ್ನತೆ, ಬಹುತ್ವವನ್ನ ಒಳಗೊಂಡು ಪ್ರಜಾಪ್ರಬುತ್ವ ಕಟ್ಟಲ್ಪಟ್ಟಿರುತ್ತದೆ. ಈ ಬಾರತದಲ್ಲಿ ಈಗ 2019ರ ಸಾರ್ವತ್ರಿಕ ಚುನಾವಣೆಯ ಮೂಲಕ ಈ ಪ್ರಜಾಪ್ರಬುತ್ವ ಮತ್ತೊಮ್ಮೆ ಅಗ್ನಿಪರೀಕ್ಷೆಗೆ ಒಳಪಡುತ್ತಿದೆ. ಆದರೆ ಈ ಚುನಾವಣೆಯಲ್ಲಿ ಸಂಪೂರ್ಣ ಅಂಚಿಗೆ ತಳ್ಳಲ್ಪಟ್ಟ, ತಳಸಮುದಾಯಗಳ, ಅಲ್ಪಸಂಖ್ಯಾತರ, ವ್ಯವಸ್ಥೆಯ ಕಟ್ಟಕಡೆಯ ವ್ಯಕ್ತಿ ಪ್ರತಿನಿದಿಸಲ್ಪಡುತ್ತಿದ್ದಾನೆಯೆ ಎನ್ನುವ ಪ್ರಶ್ನೆಗೆ ದೊರಕುವ ಉತ್ತರ ತುಂಬಾ ನಿರಾಶಾದಾಯಕವಾಗಿದೆ. ಇಲ್ಲಿನ ರಾಜಕೀಯ ಪಕ್ಷಗಳು ತಮ್ಮ ಅಬ್ಯರ್ಥಿಗಳ ಆಯ್ಕೆಯ ವಿಚಾರದಲ್ಲಿ ಬಲಿಶ್ಟ ಜಾತಿ, ಕುಟುಂಬ, ಶ್ರೀಮಂತಿಕೆಗೆ ಆದ್ಯತೆ ಕೊಟ್ಟಿವೆ. ದಲಿತರು, ತಳಸಮುದಾಯಗಳು, ಮುಸ್ಲಿಂರ ಪ್ರಾತಿನಿದ್ಯ ಪ್ರಜ್ಞಾಪೂರ್ವಕವಾಗಿ ಕಡೆಗಣಿಸಲ್ಪಟ್ಟಿದೆ. ಇಂತಹ ಬಿಕ್ಕಟ್ಟಿನಲ್ಲಿ ಸಂವಿದಾನದ ನೀತಿಸಂಹಿತೆ ನೆನಪಿಸಿ ಪ್ರಜಾಪ್ರಬುತ್ವದ ಈ ಪ್ರಕ್ರಿಯೆ ಮುಂದುವರೆಸಲು ಜನ ಸಾಮಾನ್ಯರಿಗೆ ವೋಟ್ ಮಾಡಿ ಎಂದು ಮನವಿ ಮಾಡಿಕೊಳ್ಳಲಾಗುತ್ತಿದೆ. ಚುನಾವಣೋತ್ತರದಲ್ಲಿ ತನಗೆ ಯಾವುದೆ ಬಗೆಯ ಸಾಂತ್ವನ, ಅನುಕೂಲ ದೊರಕದೆ ಇದ್ದರು ಸಹ ಮತದಾರ ಮತಗಟ್ಟೆಗೆ ಹೋಗುತ್ತಿದ್ದಾನೆ. ಶೇಕಡಾ 60% ಪ್ರಮಾಣದಲ್ಲಿ ಮತದಾನವೂ ಆಗುತ್ತಿದೆ ಮತ್ತು ಈಗಾಗಲೆ ನಾಲ್ಕು ಹಂತದ ಮತದಾನ ಮುಗಿದಿದೆ.

ಈ ಬಾರಿ ಜನಸಾಮಾನ್ಯರು ಮತಾಂದ, ಪ್ಯಾಸಿಸ್ಟ್ ಪಕ್ಷ ಬಿಜೆಪಿಯನ್ನ ಮರಳಿ ಅದಿಕಾರಕ್ಕೆ ಬರದಂತೆ ತಡೆಯಲು ಉತ್ಸುಕರಾದಂತಿಲ್ಲ. ತಮಗೆ ಉದ್ಯೋಗ ಕೊಡದ, ಕೃಶಿ ಬಿಕಟ್ಟು ಬಗೆಹರಿಸದ, ಬಹುತ್ವವನ್ನ ನಾಶ ಮಾಡುತ್ತಿರುವ ಬಿಜೆಪಿ ಪಕ್ಷದ ವಿರುದ್ದ, ಮೋದಿ ಎಂಬ ನಿರಂಕುಶ ಆಡಳಿತಗಾರನ ವಿರುದ್ದ ಜನರ ಆಕ್ರೋಶವಿದೆ. ಆದರೆ ಆಯ್ಕೆ ಮಾಡುವ ನಿರ್ಣಾಯಕ ಸಂದರ್ಬದಲ್ಲಿ ಮತ್ತೆ ತನ್ನ ಶೋಶಕನನ್ನ, ಹಲ್ಲೆಗಾರನನ್ನ ಬೆಂಬಲಿಸುವ ಸಬಲ್ಟ್ರಾನ್ ಮನಸ್ಥಿತಿಯಲ್ಲಿ ಇಂದು ಬಾರತದ ಮತದಾರ ನರಳುತ್ತಿದ್ದಾನೆ. ಈ ವೈರುದ್ಯಗಳು ವಿವರಣೆಗೂ ನಿಲುಕುತ್ತಿಲ್ಲ. ಪತ್ರಕರ್ತ ನಿಸ್ಸಿಂ ಮಂತುಕರೆನ್ ಅವರು “ಬಾರ್ಬರಿಸಂ ಮತ್ತು ಪ್ರಾದೇಶಿಕ ಸಂಸ್ಕøತಿಯ ನಡುವೆ ಸಿಲುಕಿಕೊಂಡ ಸಾಮಾನ್ಯ ಜನತೆಯೇ ಬಾಸ್ಟಿಲ್‍ನಲ್ಲಿ ರಾಜ ದರ್ಬಾರನ್ನು ಕೆಳಗಿಳಿಸಿತು, ಹೈಟಿಯಲ್ಲಿ ಗುಲಾಮಿ ಸಂಸ್ಕøತಿಯ ವಿರುದ್ಧ ದಂಗೆಯೆದ್ದಿತು. ದ್ವಾರಪಾಲಕರಾಗಲು, ಕ್ಲರ್ಕಗಳಾಗಲು, ಗಾರ್ಡಗಳಾಗಲು, ನರೋಡಾ ಪಟಿಯಾದ, ರ್ವಾಂಡಾದ ಭವಿಷ್ಯದ ಮ್ಯಾನೇಜರ್‍ಗಳಾಗಲು ನಿರಾಕರಿಸುವಂತಹ “ಆಮ್ ಆದ್ಮಿ”ಗಳನ್ನು ಶೋಧಿಸೋಣ. ನಮ್ಮ “ಆಮ್ ಆದ್ಮಿ”ಗಳನ್ನು ನಾವೇ ಕಟ್ಟೋಣ” ಎಂದು ಹೇಳಿದ್ದರು. ಆದರೆ ಈ ಬಾರಿಯ ಚುನಾವಣೆಯಲ್ಲಿ ಅಂತಹ ಆಶಾಬಾವನೆ ಎಲ್ಲಿಯೂ ಕಂಡುಬರುತ್ತಿಲ್ಲ

ಆದರೆ ಈ ಎಲ್ಲಾ ಆತಂಕ, ಗೊಂದಲ, ಬೀತಿಯ ವಾತಾವರಣದ ನಡುವೆಯೂ ಆರೆಸ್ಸಸ್-ಮೋದಿಯ ಈ ಸರ್ವಾದಿಕಾರದ ದೋರಣೆಯ ವಿರುದ್ದ ಪ್ರತಿರೋದದ ದನಿ ಸದಾ ಜೀವಂತವಾಗಿದೆ. ಈ ಬಂಡಾಯ ಜನಸಾಮಾನ್ಯರ ನಡುವಿನಿಂದಲೆ ಹುಟ್ಟಿಕೊಳ್ಳುತ್ತಿದೆ. ಮೋದಿಯವರ ನಿರಂಕುಶ ಆಡಳಿತವು ಚುನಾವಣಾ ಸಂದರ್ಬದಲ್ಲಿ ಸಣ್ಣ ಮಟ್ಟದಲ್ಲಾರೂ ಸರಿ ಜನಸಾಮಾನ್ಯರ ಅಕ್ಟಿವಿಸಂಗೆ ಕಾರಣವಾಗುತ್ತಿದೆ. ಚುನಾವಣ ಸಂದರ್ಬದಲ್ಲಿ ಈ ಆಕ್ಟಿವಿಸಂ ಸಾಂಕೇತಿಕವಾಗಿದ್ದರೂ ಸಹ ಮಹತ್ವದಾಗಿರುತ್ತದೆ. ಸರಕಾರದ ಎಲ್ಲಾ ಸಂಸ್ಥೆಗಳು ನಿಶ್ಕ್ರಿಯೆಗೊಂಡಾಗ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವವನ್ನ ಮತ್ತಶ್ಟು ಗಟ್ಟಿಗೊಳಿಸಲು ಈ ಆಕ್ಟಿವಿಸಂ ಸಕ್ರಿಯವಾಗುತ್ತಿದೆ. ಉದಾಹರಣೆಗೆ ಅರಿಶಿಣ ಬೆಳೆಯುವ ತೆಲಂಗಾಣದ 25 ರೈತರು, ಬಹುಜನ ಚಳುವಳಿಯ ಬೀಮ್ ಆರ್ಮಿಯ ನಾಯಕ ಚಂದ್ರಶೇಖರ್ ಆಜಾದ್ ರಾವಣ್, ಮಾಜಿ ಸೈನಿಕ ತೇಜ್ ಬಹದ್ದೂರ್ ಯಾದವ್‍ರಂತಹ ಜನಸಾಮಾನ್ಯರು ವಾರಣಾಸಿ ಕ್ಷೇತ್ರದಲ್ಲಿ ಮೋದಿಯವರ ವಿರುದ್ದ ಸ್ಪರ್ದಿಸಲು ನಿರ್ದರಿಸಿದ್ದಾರೆ. ಇದಕ್ಕೂ ಮೊದಲು ತಮಿಳುನಾಡಿನ 111 ರೈತರು ವಾರಣಾಸಿಯಲ್ಲಿ ಮೋದಿಯ ವಿರುದ್ದ ಸ್ಪರ್ದಿಸುತ್ತೇವೆ ಎಂದು ಹೇಳಿದ್ದರು. ಇಂದು ದೇಶದ ಬಹುಪಾಲು ಯುವಜನತೆ, ಮದ್ಯಮವರ್ಗ ತಮ್ಮ ವಿವೇಚನೆ, ಸ್ವಂತಿಕೆ ಕಳೆದುಕೊಂಡು ಕುರುಡಾಗಿ ಮೋದಿಯನ್ನ ಬೆಂಬಲಿಸುತ್ತಿರುವ ಸಂದರ್ಬದಲ್ಲಿ ಮೇಲಿನ ಜನಸಾಮಾನ್ಯರು ಅದು ತಪ್ಪು ನಡುವಳಿಕೆ ಎಂದು ತಮ್ಮ ಸ್ಪರ್ದೆಯ ಮೂಲಕ ಎಚ್ಚರಿಸುತ್ತಿದ್ದಾರೆ. ಏನೂ ಮಾಡಲು ಸಾದ್ಯವಿಲ್ಲ ಎಂದು ಕೈಚೆಲ್ಲಿ ಕೂರಬೇಕಾಗಿಲ್ಲ ಎಂದು ಪ್ರಜ್ಞಾವಂತರಿಗೆ ಸಂದೇಶ ರವಾನಿಸುತ್ತಿದ್ದಾರೆ. 40ರ ದಶಕದಲ್ಲಿ ನೂಕ್ಲಿಯರ್ ಬಾಂಬಿನ ವಿರುದ್ಧದ ಹೋರಾಟವನ್ನು ಹಮ್ಮಿಕೊಂಡ ಬಟ್ರೆಂಡ್ ರಸೆಲ್ ಎಂದಿಗೂ ಏಕಾಂಗಿಯಾಗಿರಲಿಲ್ಲ. ರಸೆಲ್‍ನ ಬಂಡಾಯ ಸಾವಿರಾರು ಹೋರಾಟಗಾರರನ್ನ ಸೃಶ್ಟಿಸಿತ್ತು. ಇಂದು ರೈತರ, ಸೈನಿಕನ ಸ್ಪರ್ದೆ ಮುಂದಿನ ದಿನಗಳಲ್ಲಿ ಹೊಸ ಚೈತನ್ಯವನ್ನ ರೂಪಿಸುವ ಸಾದ್ಯತೆ ಇದೆ.

ಆದರೆ ಚಂದ್ರಶೇಖರ್ ರಾವಣ್ ಅವರು ತಮ್ಮ ಈ ಸ್ಪರ್ದೆಯಿಂದ ವಿರೋದ ಪಕ್ಷಗಳ ಮತಗಳು ವಿಬಜನೆ ಆಗುವುದು ಬೇಡ ಎಂದು ಕಣದಿಂದ ಹಿಂದಕ್ಕೆ ಸರಿದು ಎಸ್‍ಪಿ-ಬಿಎಸ್‍ಪಿ ಮೈತ್ರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ತೆಲಂಗಾಣದ ಕೃಶಿ ಬಿಕ್ಕಟ್ಟು ಕುರಿತಾಗಿ ದೇಶದ ಗಮನ ಸೆಳೆಯಲು ತೆಲಂಗಾಣದ 25 ರೈತರು ವಾರಣಾಸಿಯಲ್ಲಿ ಮೋದಿಯವರ ವಿರುದ್ದ ಸ್ಪರ್ದೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದರು. ಆದರೆ ಮೋದಿಯವರ ಸರ್ವಾದಿಕಾರಕ್ಕೆ ಶರಣಾಗಿ ತನ್ನ ಸ್ವಾಯತ್ತತೆ, ಸ್ವಾತಂತ್ರ್ಯವನ್ನ ಕಳೆದುಕೊಂಡು ದುರ್ಬಲಗೊಂಡಿರುವ ಬಾರತದ ಚುನಾವಣ ಆಯೋಗವು 24 ರೈತರಿಗೆ ಸ್ಪರ್ದಿಸುವ ಅವಕಾಶ ನಿರಾಕರಿಸಿ ಸುನ್ನಂ ನರಸಯ್ಯ ಎನ್ನುವ ರೈತರಿಗೆ ಮಾತ್ರ ಸ್ಪದಿಸಲು ಅದಿಕೃತವಾಗಿ ಮಾನ್ಯತೆ ಕೊಟ್ಟಿದೆ. ತೆಲಂಗಾಣ ಅರಿಶಿಣ ಬೆಳೆಗಾರರ ಸಂಘಟನೆಯ ಅದ್ಯಕ್ಷ ನರಸಿಂಹ ನಾಯಿಡು ಅವರು ‘ಚುನಾವಣಾ ಆಯೋಗವು ಮೋದಿಯವರಿಗೆ ಸಂಪೂರ್ಣ ಶರಣಾಗತವಾಗಿದೆ, ಇದು ಪ್ರಜಾಪ್ರಬುತ್ವದ ಕೊಲೆ. ನಮ್ಮ ಸ್ಪರ್ದೆಯನ್ನ ತಿರಸ್ಕರಿಸಿದ ಈ ಆಯೋಗದ ವಿರುದ್ದ ಸುಪ್ರೀಂ ಕೋರ್ಟನಲ್ಲಿ ದೂರು ದಾಖಲಿಸುತ್ತೇವೆ, ಇದಕ್ಕಾಗಿ 20 ವಕೀಲರು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.

ಮತ್ತೊಂದೆಡೆ ಈ ನಕಲಿ ಚೌಕಿದಾರ ಮೋದಿಯವರ ವಿರುದ್ದ ಸ್ಪರ್ದಿಸಿದ್ದ ಅಸಲಿ ಚೌಕಿದಾರ, ಮಾಜಿ ಸೈನಿಕ ತೇಜ ಬಹದ್ದೂರ್ ಯಾದವ್ ಅವರ ನಾಮಪತ್ರವನ್ನ ಕ್ಷುಲ್ಲಕ ಕಾರಣ ನೀಡಿ ಆಯೋಗವು ತಿರಸ್ಕøತಗೊಳಿಸಿದೆ. ಇದಕ್ಕೆ ನೀಡಿದ ಕಾರಣಗಳೂ ಅತ್ಯಂತ ಬಾಲಿಶವಾಗಿವೆ. ‘ಬ್ರಶ್ಟಾಚಾರ ಮತ್ತು ರಾಜ್ಯಕ್ಕೆ ವಿರುದ್ದವಾಗಿ ನಡೆದುಕೊಂಡ ಕೇಂದ್ರ, ರಾಜ್ಯ ಸರಕಾರದ ನೌಕರರು ಐದು ವರ್ಶಗಳ ಕಾಲ ಸ್ಪರ್ದಿಸುವಂತಿಲ್ಲ’ ಎನ್ನುವ ಕಾನೂನನ್ನ ಮುಂದಿಟ್ಟಿದ್ದಾರೆ. ಆದರೆ ತೇಜ ಬಹದ್ದೂರ ಅವರ ವಿರುದ್ದ ಬ್ರಶ್ಟಾಚಾರದ, ದೇಶದ್ರೊಹದ ಯಾವುದೆ ಆರೋಪಗಳಿರಲಿಲ್ಲ. ಆದರೆ ಚುನಾವಣ ಆಯೋಗದ ಈ ಏಕಪಕ್ಷೀಯ ನಿರ್ದಾರದ ವಿರುದ್ದ ಸುಪ್ರೀಂ ಕೋರ್ಟಗೆ ಅಪೀಲು ಸಲ್ಲಿಸಲು ತೇಜ್ ಬಹದ್ದೂರ್ ನಿರ್ದರಿಸಿದ್ದಾರೆ. ದ.ವೈರ್.ಇನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ತೇಜ ಬಹದ್ದೂರ ಅವರು ‘ಮೋದಿ ಒಬ್ಬ ಸುಳ್ಳುಗಾರ. ಕಳೆದ ಒಂದು ವರ್ಶದಲ್ಲಿ ಸೇನಾ ಅರೆಪಡೆಯಲ್ಲಿ ಸೇವೆ ಸಲ್ಲಿಸುತ್ತಿರುವ 997 ಸೈನಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಮೋದಿಯವರೆ ನೇರ ಹೊಣೆ. ನಾನು ಯೋದರಿಗೆ ಕಳಪೆ ಗುಣಮಟ್ಟದ ಆಹಾರ ಕೊಡುತ್ತಿರುವುದರ ವಿರುದ್ದ ಮಾತನಾಡಿದ್ದೆ, ಆದರೆ ಈ ಕಾರಣಕ್ಕೆ ನನ್ನ ವಜಾಗೊಳಿಸಿದರು. ಆದರೆ ಯೋದರ ಹೆಸರಿನಲ್ಲಿ ಮೋದಿ ರಾಜಕೀಯ ಮಾಡುತ್ತಿದ್ದಾರೆ. 50,000 ಮಾಜಿ ಸೇನಾ ಅದಿಕಾರಿಗಳು ನನ್ನ ಪರವಾಗಿ ಪ್ರಚಾರ ಮಾಡಲು ತಯಾರಿದ್ದಾರೆ’ ಎಂದು ಹೇಳಿದ್ದಾರೆ.

ಒಂದೆಡೆ ಚುನಾವಣ ಆಯೋಗವು ತನ್ನ ಸ್ವಾಯತ್ತತೆಯನ್ನ ಬಳಸಿಕೊಂಡು ಯಾವುದೆ ಪಕ್ಷಪಾತವಿಲ್ಲದೆ ತನಗಿರುವ ಶಾಸನಬದ್ದ ಅದಿಕಾರವನ್ನ ಚಲಾಯಿಸಬೇಕಾಗಿತ್ತು. ಇದಕ್ಕಾಗಿ ಹೊಸದಾದ ಯಾವುದೆ ಕಟ್ಟುಪಾಡುಗಳನ್ನ ರೂಪಿಸುವ ಅಗತ್ಯವಿರಲಿಲ್ಲ. ಟಿ.ಎನ್.ಶೇಶನ್, ಮೈಕೆಲ್ ಲಿಂಗ್ಡೊರಿಂದ ಮೊದಲುಗೊಂಡು ನಂತರ ಬಂದು ಬಹುತೇಕ ಮುಖ್ಯ ಚುನಾವಣ ಅದಿಕಾರಿಗಳು (2017-18ರ ಅವದಿಯಲ್ಲಿದ್ದ ಜ್ಯೋತಿ, ರಾವತ್‍ರಂತವರನ್ನ ಹೊರತುಪಡಿಸಿ) ಜವಬ್ದಾರಿಯಿಂದ, ಸ್ವಾತಂತ್ರ್ಯದಿಂದ ವಿವೇಚನೆಯಿಂದ ಕಾರ್ಯ ನಿರ್ವಹಿಸಿದ್ದಾರೆ. ಚುನಾವಣ ಆಯೋಗವು ಕೇಂದ್ರ ಸರಕಾರದ ಕೈಗೊಂಬೆಯಲ್ಲ ಎಂದು ತಮ್ಮದೆ ಮಿತಿಯೊಳಗೆ ಸಾಬಿತುಪಡಿಸಿದ್ದಾರೆ. ಆದರೆ ಈಗಿನ ಮುಖ್ಯ ಚುನಾವಣ ಅದಿಕಾರಿ ಸುನಿಲ್ ಅರೋರ ಸಂಪೂರ್ಣವಾಗಿ ಮೋದಿಯವರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಒಂದು ಪಂದ್ಯದಲ್ಲಿ ಯಾರು ಗೆದ್ದರು ಅಥವಾ ಸೋತರು ಎನ್ನುವುದರ ಜೊತೆಗೆ ಹೇಗೆ ಆಟವಾಡಿದರು ಎನ್ನುವುದು ಸಹ ಮುಖ್ಯವಾಗುತ್ತದೆ. ಇದೆ ರೀತಿ ಚುನಾವಣೆಯ ನಂತರ ಯಾರು ಗೆದ್ದರು ಅಥವಾ ಸೋತರು ಎನ್ನುವುದರ ಜೊತೆಗೆ ಇಡೀ ಚುನಾವಣೆಯನ್ನ ಯಾವ ರೀತಿ ನಡೆಸಲಾಯಿತು, ನಿಬಾಯಿಸಲಾಯಿತು ಎಂಬುದೂ ಮುಖ್ಯವಾಗುತ್ತದೆ. ಇದು ಪ್ರಜಾಪ್ರಬುತ್ವದ ಜೀವಂತಿಕೆಯನ್ನ ನಿರ್ದರಿಸುತ್ತದೆ. ಆದರೆ 2019ರ ಚುನಾವಣೆಯಲ್ಲಿ ಬಾರತ ಚುನಾವಣ ಆಯೋಗವು ಪ್ರಜಾಪ್ರಬುತ್ವವನ್ನ ದುರ್ಬಲಗೊಳಿಸಿದೆ

ಮತ್ತೊಂದೆಡೆ ತಮಗೆ ಯಾವುದೆ ಅದಿಕಾರ, ಸವಲತ್ತು ಮತ್ತು ಹಣದ ಬೆಂಬಲವಿಲ್ಲದಿದ್ದರೂ ವಾರಣಾಸಿಯಲ್ಲಿ ರೈತರ, ತೇಜ ಬಹದ್ದುರ್ ಅವರ ಈ ಸ್ಪರ್ದೆಯು ಈ ಚುನಾವಣೆ ಒಂದು ನಿರ್ವಾತದಲ್ಲಿ ನಡೆಯಲು ಸಾದ್ಯವಾಗದಂತೆ ತಡೆಯುತ್ತಿದೆ. ಈ ಸ್ಪರ್ದೆ ಮೇಲ್ನೊಟಕ್ಕೆ ಸಾಂಕೇತಿಕವಾದರೂ ಸಹ ಅದು ಪ್ರತಿರೋದದ ಚಿಲುಮೆಯಾಗಿ ಚಿಮ್ಮುತ್ತಿದೆ. ಇದರ ಮಹತ್ವವನ್ನ ಗೆಲುವು ಸೋಲುಗಳ ಮೂಲಕ ಅಳೆಯಲಾಗುವುದಿಲ್ಲ. ಒಂದೆಡೆ ಪ್ಯಾಸಿಸಂನ ಪ್ರತಿನಿದಿಸುವ ಮೋದಿ ಮತ್ತೊಂದೆಡೆ ಪ್ರಜಾಪ್ರಬುತ್ವವನ್ನ ಪ್ರತಿನಿದಿಸುತ್ತಿರುವ ರೈತರು, ಸೈನಿಕನ ನಡುವಿನ ಸ್ಪರ್ದೆ ಜಡಗೊಂಡ ದೇಶದ ನೈತಿಕ ಪ್ರಜ್ಞೆಯನ್ನ ಎಚ್ಚರಿಸಬಲ್ಲದು ಎನ್ನುವ ಆಶಾವಾದ ಇಲ್ಲಿ ಮೊಳಕೆಯೊಡೆಯುತ್ತಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...