HomeUncategorizedಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

ಈ ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್ ಅಂದರೇನು?

- Advertisement -
- Advertisement -

ಹಣದುಬ್ಬರ ಅಥವಾ ಇನಫ್ಲೇಷನ್ ಅನ್ನೋದನ್ನ ಕೇಳಿಕೇಳಿ ಸಾಕಾಗಿಹೋಗೇದ. ಅದರ ಬಗ್ಗೆ ಸರಕಾರದವರು ಏನೂ ಮಾಡಲಾರದೇ ಇರೋದು ನೋಡಿ-ನೋಡಿ ಸಾಕಾಗಿಹೋಗೇದ. ಅದಕ್ಕ ಹೊಸಾದೊಂದು ಹುಡುಕೋಣ. ಅದರ ಹೆಸರು ಜಡದುಬ್ಬರ ಅಥವಾ ಸ್ಟ್ಯಾಗಫ್ಲೇಷನ್.

ಅದು ಸ್ಟ್ಯಾಗ್ನೇಷನ್ ಹಾಗೂ ಇನಫ್ಲೇಷನ್ ಸೇರಿದ ಆರ್ಥಿಕ ಮಾರಿ. ವಾರ್ಷಿಕ ಆರ್ಥಿಕ ಬೆಳವಣಿಗೆ 5 ಶೇಕಡಾ ಇದ್ದು ಹಣದುಬ್ಬರ ಶೇ. 8ರ ಆಸುಪಾಸಿಗೆ ಬಂದಿದ್ದಕ್ಕೆ ಭಾರತ ಜಡದುಬ್ಬರವನ್ನು ಎದುರು ನೋಡ್ತಾ ಇದೆ ಅಂತ ತಜ್ಞರ ಅಂಬೋಣ.

ಸರ್ವೇಸಾಮಾನ್ಯವಾಗಿ ಏನಾಗತದ ಅಂದರ ಹಣದುಬ್ಬರ ಇದ್ದಾಗ ಬೇಡಿಕೆ ಹೆಚ್ಚಿತ್ತು ಅಂದರ ಬೆಳವಣಿಗೆ ಇರತದ. ಜನರಿಗೆ ಹಣ ಖರ್ಚು ಆಗೋದು ಹೆಚ್ಚಾದರೂ ಸಹ ಅವರ ವರಮಾನ ಹೆಚ್ಚು ಆಗೋದಕ್ಕ ಜನರಿಗೆ ತೊಂದರೆ ಆಗಂಗಿಲ್ಲ. ಆದರ ಹಣದುಬ್ಬರ ಇದ್ದು, ಸರಕು-ಸೇವೆಗಳಿಗೆ ಬೇಡಿಕೆ ಕಡಿಮೆ ಆಗಿ ಆರ್ಥಿಕ ಹಿಂಜರಿತ ಉಂಟಾದರ, ಅದು ಆ ದೇಶದ ಜನರಿಗೆ ಭಾಳ ಕಿರಿಕಿರಿ ಆಗತದ. ಅವರ ದಿನ ನಿತ್ಯದ ಕೆಲಸನೂ ಆಗದಂಗ ತೊಂದರೆ ಆಗತದ.

ಹಿಂಗ 1973 ರಾಗ ಇಡಿ ಜಗತ್ತಿನೊಳಗ ಆಗಿತ್ತು. ಪೆಟ್ರೋಲು- ಡೀಸಲ್ ಬೆಲೆ ಹೆಚ್ಚಾಗಿ ಸಾಗಾಣಿಕೆ ವೆಚ್ಚ ಹೆಚ್ಚಾಗಿ, ಸರಕುಗಳ ಬೆಲೆ ಜಾಸ್ತಿ ಆತು. ಜನ ನೌಕರಿ ಕಳಕೊಂಡರು, ಸರಕು ಖರೀದಿ ಮಾಡೋದು ಕಡಿಮೆ ಮಾಡಿದರು, ಆದರ ಜನ ಖರೀದಿ ಕಮ್ಮಿ ಮಾಡಿದರು ಅಂತ ವೆಚ್ಚಕಮ್ಮಿ ಆಗಲಿಲ್ಲ. ಇಡೀ ವಿಶ್ವದ ಆರ್ಥಿಕ ವ್ಯವಸ್ಥೆ ಅಲುಗಾಡಿ ಹೋತು.

ಇನ್ನೊಮ್ಮೆ ಹಿಂಗಾಗಿದ್ದು ಯಾವಾಗ ಅಂದರ ಚಂದ್ರಶೇಖರ ಅವರ ಕಾಲದಾಗ. ಸರಕಾರದ ನೀತಿಗಳು ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲಿಲ್ಲ. ಅದರ ಸರಕುಗಳ ಬೆಲೆ ಹೆಚ್ಚಾಗಿ ಕೂತವು. ಮಾರುವವರಿಗೂ ಅನುಕೂಲ ಆಗಲಿಲ್ಲ, ಖರೀದಿ ಮಾಡೋರಿಗೂ ಅನುಕೂಲ ಆಗಲಿಲ್ಲ.

ಇದನ್ನು ಕುಡಿಯಾಗಿದ್ದಾಗ ಚಿವುಟದಿದ್ದರೆ ಇದು ಅತ್ಯಂತ ದೊಡ್ಡ ಸಮಸ್ಯೆ ಆಗಬಹುದು. ಭಾಳ ದಿವಸ ಜಡದುಬ್ಬರ ಮುಂದುವರೆದರ ಅದು ಮಧ್ಯಮ ವರ್ಗದವರನ್ನೆಲ್ಲ ಬಡತನರೇಖೆಯ ಕೆಳಗೆ ದಬ್ಬಿ ಬಿಡತದ. ಆಡಳಿತ ಪಕ್ಷಕ್ಕೂ ಇದು ಒಳ್ಳೇದಲ್ಲ. ಸರಕಾರದ ಇಮೇಜು ಇದರಿಂದ ಕೆಡಬಹುದು. ಜನರನ್ನು ರೊಚ್ಚಿಗೆ ಎಬ್ಬಿಸಬಹುದು.

ಹಂಗಂತ ಅದನ್ನು ಸಂಭಾಳಿಸೋದು ಸರಳ ಇಲ್ಲ. ಸರಕಾರ ಅಥವಾ ರಿಸರ್ವ ಬ್ಯಾಂಕಿನಂಥ ಕೇಂದ್ರ ಬ್ಯಾಂಕು ಬಡ್ಡಿ ದರ ಹೆಚ್ಚು ಮಾಡಿದರ ಸಾಲಗಳು ದುಬಾರಿಯಾಗಿ ಯಾರೂ ತೊಗೊಳ್ಳಲಾರದಂತಾಗಿ, ಅಥವಾ ತೊಗೊಂಡವರು ವಾಪಸು ಕೊಡಲಿಕ್ಕೆ ಆಗಲಾರದಂತಾಗಿ ವ್ಯಾಪಾರ -ವ್ಯವಹಾರಕ್ಕೆ ತೊಂದರೆ ಆಗಬಹುದು. ಬಡ್ಡಿ ದರ ಕಮ್ಮಿ ಮಾಡಿದರ ಹಣದುಬ್ಬರ ಹೆಚ್ಚಾಗಿ ಜನ ಏನನ್ನೂ ಖರೀದಿ ಮಾಡದಂಗಾಗಬಹುದು, ಮಾಡಿದರ ಅವರ ಉಳಿತಾಯ ಕರಗಬಹುದು.

ಈ ವರ್ಷ ಏನಾಗೇದಪಾ ಅಂದರ ಪ್ರವಾಹ- ಬರಗಾಲದಿಂದ ಕೃಷಿ ಉತ್ಪನ್ನ ಕಮ್ಮಿ ಆಗೇದ. ಇದರಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗೇದ. ಇದು ಕೇಂದ್ರದ ಹೊಸ ಆಮದು ನೀತಿಯಿಂದ ಕಮ್ಮಿ ಆದರ, ಅಥವಾ ಆರ್ಥಿಕ ಬೆಳವಣಿಗೆ ಮುಂದಿನ ಎರಡು – ಮೂರು ತಿಂಗಳಲ್ಲಿ ಹೆಚ್ಚಿದರ ಜಡದುಬ್ಬರದ ಬರೋ ಸಾಧ್ಯತೆ ಕಮ್ಮಿ ಆಗಬಹುದು. ಕೇಂದ್ರದ ಮುಖ್ಯ ಆರ್ಥಿಕ ಸಲಹೆಗಾರ ಮಂಡಳಿ ಅವರು ಈಗಿನ ಹಣದುಬ್ಬರ ಕಮ್ಮಿ ಆಗತದ ಅಂತ ಹೇಳ್ಯಾರ.

ದೇಶದ ವರಮಾನ ಅಷ್ಟೇ ಉಳದು ಅಥವಾ ಕಮ್ಮಿ ಆಗುವಾಗ ಖರ್ಚು ಜಾಸ್ತಿ ಆದಂಗನ, ಪ್ರತಿ ಗೃಹಸ್ಥನ ಪರಿಸ್ಥಿತಿನೂ ಆಗಬಹುದು. ಅವನ ನೌಕರಿಗೆ ಖತರಾ ಬಂದು, ಯಾವಾಗ ಕೆಲಸ ಕಳಕೋತೇನಿ ಅನ್ನುವ ಹೆದರಿಕೆಯೊಳಗ ಇರೋವಾಗ, ಅಥವಾ ಅವನಿಗ ವಾರ್ಷಿಕ ಬಡ್ತಿ ಸಿಗಲಾರದೇ, ಸಂಬಳ ಹೆಚ್ಚಾಗಲಾರದೇ ಇದ್ದು, ವಸ್ತುಗಳ ಬೆಲೆ ಜಾಸ್ತಿ ಆಗತಾ ಹೋದರ ಅವನು ಬರೇ ಊಟ, ಮನಿ ಬಾಡಗಿ, ಅರವಿ- ಅಂಚಡಿ, ಸಾಲಿ ಫೀಸು ಇಷ್ಟ ಖರ್ಚು ಮಾಡತಾ ಹೋದಾ ಅಂದರ ಅವನು ದೇಶದ ಆರ್ಥಿಕ ಪರಿಸ್ಥಿತಿಗೆ ಯಾವ ಕೊಡುಗೆ ಕೊಡಲಾರ.

ಹೊಸ ಬಂಡವಾಳ ದೇಶಕ್ಕೆ ಬರಲಾರದು, ಹೊಸ ಉದ್ಯೋಗ ಸೃಷ್ಟಿ ಆಗಲಾರವು. ಜನರ ಕೈಯೊಳಗ ದುಡ್ಡು ನಿಲ್ಲಂಗಿಲ್ಲ. ಜನ ಬ್ಯಾಂಕಿನೊಳಗ, ಷೇರು ಮಾರುಕಟ್ಟೆಯೊಳಗ ಉಳಿತಾಯ ಮಾಡಿದರ ಅದಕ್ಕ ಬೇಕಷ್ಟು ಬಡ್ಡಿ ಬರಂಗಿಲ್ಲ.

ಜಡದುಬ್ಬರವನ್ನ ಸರಕಾರಗಳು ಕಮ್ಮಿ ಮಾಡಲಿಕ್ಕೆ ಕ್ರಮ ಕೈಕೊಳ್ಳಬೇಕು. ಸರಿಯಾದ ನೀತಿ ಪಾಲಿಸಿ ಮತ್ತ ಬರಲಾರದ ಹಂಗ ನೋಡಿಕೊಳ್ಳಬೇಕು. ಇಲ್ಲದಿದ್ದರ ಅನೇಕ ವರ್ಷಗಳ ಬೆಳವಣಿಗಿ ಹೊಳಿಯೊಳಗ ಹುಣಸೀಹಣ್ಣು ತೊಳದಂಗ ಆಗಿ ಬಿಡತದ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...