ಕಣ್ಣಿಗೆ ಕಾಣದ ವೈರಸ್ ಏನೆಲ್ಲಾ ಮಾಡಿತು? ಮತ್ತೇನು ನಿರೀಕ್ಷಿಸಬಹುದು?

‘ಮುಂದೇನಾಗಬಹುದು ಎಂದು ಹೇಳುವುದು ಕಷ್ಟ. ಅದರಲ್ಲೂ ಭವಿಷ್ಯದ ಬಗ್ಗೆ’ ಎಂದಿದ್ದ ಭೌತಶಾಸ್ತ್ರಜ್ಞ ನೀಲ್ ಬೋರ್. ಸದ್ಯಕ್ಕೆ ಕೊರೊನಾ ಕಾಯಿಲೆಯ ಪರಿಸ್ಥಿತಿಯೂ ಹಾಗೆ ಇದೆ. ಆದರೂ ರೋಗ ಶಾಸ್ತ್ರಜ್ಞರು, ಸಂಖ್ಯಾ ಶಾಸ್ತ್ರಜ್ಞರು (ಜ್ಯೋತಿಷ್ಯಿಗಳಲ್ಲ), ನೆಟ್‍ವರ್ಕ್ ವಿಜ್ಞಾನ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‍ಅನ್ನು ಬಳಸಿ ವಿವಿಧ ದೇಶಗಳಲ್ಲಿ ಎಷ್ಟು ಲಕ್ಷ ಜನ ಸಾವನ್ನಪ್ಪಬಹುದು ಎನ್ನುವುದನ್ನು ವಿಶ್ಲೇಷಿಸುತ್ತಿದ್ದಾರೆ. ಇದೆಲ್ಲವೂ ನಾವು ಹೇಗೆ ಸಾಮಾಜಿಕವಾಗಿ ಮತ್ತು ವೈಯುಕ್ತಿಕವಾಗಿ ವ್ಯವಹರಿಸುತ್ತೇವೆ ಎನ್ನುವುದರ ಮೇಲೆ ಅವಲಂಬಿಸಿದೆ.

ವ್ಯಕ್ತಿಯಿಂದ ಕುಟುಂಬ ದಾಟಿ ಸಮುದಾಯದತ್ತ ಕಾಲಿಟ್ಟಿರುವಂತೆ ಕಾಣುತ್ತಿದೆ. ಮುಂದಿನ ಸಾಧ್ಯತೆಗಳು: ಇಡೀ ದೇಶವನ್ನು ಆವರಿಸಿ ತನಗೆ ಬೇಕಾದಷ್ಟು ಬಲಿ ತೆಗೆದುಕೊಂಡು ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿಯನ್ನು ತರುವಂತದ್ದು (herd immunity). ಇದು ನಾಗರಿಕ ಸಮಾಜ ಕೈಚೆಲ್ಲಿದಾಗ ನಡೆಯುವಂತದ್ದು. ಇಲ್ಲವೇ ಇದರ ವಿರುದ್ಧ ಇದಾಗಲೇ 69 ಹಳೆಯ ಔಷಧಿಗಳನ್ನು ಹೊಸ ಕಾಯಿಲೆಗೆ ಬಳಸಬಹುದೇ ಎನ್ನುವ ಪರೀಕ್ಷೆಯಲ್ಲಿ ಯಶಸ್ಸು ಕಂಡರೆ ಕಾಯಿಲೆಗೆ ಅವುಗಳಲ್ಲಿ ಯಾವದಾದರೊಂದು ಉತ್ತಮ ಔಷಧವಾಗಬಹುದು ಅಥವಾ ಕಾಯಿಲೆ ಒಂದೇ ಸಮನೇ ಏರಿಳಿದು ಅತ್ಯಂತ ಹೆಚ್ಚು ಬಲಿ ಪಡೆಯುವುದನ್ನು ತಡೆಗಟ್ಟಿ, ಮಂದಗತಿಯಲ್ಲಿ ಮೂಗುದಾರ ಹಾಕಿ, ಸಾಗಿಸಿ ಒಂದುವರೆ ವರ್ಷ ಅಥವಾ ಎರಡುವರೆ ವರ್ಷದಲ್ಲಿ ಲಸಿಕೆಯನ್ನು ಕಂಡುಹಿಡಿದು ನಿಯಂತ್ರಿಸಬಹುದು.

ಮೂಗುದಾರವೆಂದರೆ, ಇದಾಗಲೇ ಸುದ್ದಿಯಲ್ಲಿರುವ ಪರಸ್ಪರ ಜನರ ಮಧ್ಯೆ ಅಂತರವನ್ನು ಕಾಪಾಡಿಕೊಳ್ಳುವುದು; ಜನಜಂಗುಳಿ, ಹಬ್ಬಹರಿದಿನ, ಜಾತ್ರೆ ಮತ್ತು ದೇವಾಲಯಗಳಲ್ಲಿ ಸಾವಿರಾರು ಜನ ಒಟ್ಟಿಗೆ ಸೇರದಿರುವುದು. ಸೋಂಕಿತರು ತಾವಾಗಿಯೇ ರೋಗ ಲಕ್ಷಣಗಳು ಕಂಡುಬಂದಲ್ಲಿ ಆಸ್ಪತ್ರೆಗೆ ದಾಖಲಾಗುವುದು. ದಕ್ಷಿಣ ಕೊರಿಯಾದಂತೆ ಅತೀ ಹೆಚ್ಚು ಜನರನ್ನು ಪರೀಕ್ಷೆಗೆ ಒಳಪಡಿಸುವುದು, ಶೀಘ್ರಗತಿಯಲ್ಲಿ ತೀವ್ರ ನಿಗಾಯಿಡುವ ಆಸ್ಪತ್ರೆಯ ಹಾಸಿಗೆಗಳನ್ನು ಸಿದ್ಧ ಮಾಡುವುದು, ಸಾವಿರಾರು ಕೃತಕ ಉಸಿರಾಟ ಉಪಕರಣಗಳನ್ನು ವ್ಯವಸ್ಥೆ ಮಾಡುವುದು. ಸ್ಟೇಡಿಯಂ, ಮದುವೆ ಚೌಲ್ಟ್ರಿ, ಹೊಟೇಲ್‍ಗಳನ್ನು ಈ ರೋಗಕ್ಕೆ ಆಸ್ಪತ್ರೆಗಳಾಗಿ ಸಿದ್ಧಮಾಡಿಕೊಳ್ಳುವುದು.

ಬ್ರಿಟಿಶ್ ಸರ್ಕಾರ ಜಗತ್ತಿನ ಶ್ರೇಷ್ಟ ಕಾರು ಮತ್ತು ವಿಮಾನ ಇಂಜಿನ್ ತಯಾರಿಕೆಯ ರೋಲ್ಸ್‍ರಾಯ್ಸ್ ಕಂಪೆನಿಗೆ ಕೃತಕ ಉಸಿರಾಟ ಯಂತ್ರಗಳನ್ನು ತಯಾರಿಸುವಂತೆ ನಿರ್ದೇಶಿಸಿದೆ. ಉಸಿರು ಉಳಿದರೆ ಹಾರಾಟ ಮುಂದೆ ನೋಡೋಣ ಎನ್ನುವಂತಾಗಿದೆ. 69 ಹಳೆಯ ಔಷಧಿಗಳನ್ನು ಕೊರೊನಾಗೆ ಪರೀಕ್ಷಿಸುತ್ತಿರುವ (repurposing) ಪಟ್ಟಿಯಲ್ಲಿ ಮಲೇರಿಯಾ ಕಾಯಿಲೆಗೆ ಬಳಸುತ್ತಿದ್ದ ಕ್ಲೋರೊಕ್ವಿನ್, ಎಚ್‍ಐವಿ ಏಡ್ಸ್‍ಗೆ ಬಳಸುತ್ತಿರುವ ಔಷಧಿಗಳು, ಮಧುಮೇಹ ಔಷಧಿಗಳು ಸೇರಿವೆ.

ಭಾರತದ ಆರೋಗ್ಯ ವ್ಯವಸ್ಥೆಯಲ್ಲಿ ಮೂಲತಃ ಇರುವ ಸಮಸ್ಯೆಗಳೆಂದರೆ ಸರ್ಕಾರ ನಮ್ಮ ಒಟ್ಟು ಆರ್ಥಿಕ ವ್ಯವಸ್ಥೆ (ಜಿಡಿಪಿ)ಯ ಶೇ.1.2ನ್ನು ಮಾತ್ರ ಆರೋಗ್ಯಕ್ಕೆ ಖರ್ಚು ಮಾಡುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಅದು ಕನಿಷ್ಟ ಶೇ.2.5 ಆಗಿರಬೇಕು. ಜಗತ್ತಿನಲ್ಲಿ ಸರಾಸರಿ ಶೇ.18ರಷ್ಟು ಆರೋಗ್ಯದ ಖರ್ಚನ್ನು ಜನರು ತಮ್ಮ ಜೇಬಿನಿಂದ ನಿರ್ವಹಿಸುತ್ತಾರೆ. ಆದರೆ ಬಡ ಭಾರತದಲ್ಲಿ ಜನರು ತಮ್ಮ ಆರೋಗ್ಯದ ಶೇ.67ರಷ್ಟು ಖರ್ಚನ್ನು ತಾವೇ ಭರಿಸುತ್ತಿದ್ದಾರೆ. ಸಾವಿರ ಜನಕ್ಕೆ ಒಬ್ಬ ವೈದ್ಯ ಬೇಕೆನ್ನುವುದು ಇನ್ನೊಂದು ನಿಯಮ. ನಮ್ಮಲ್ಲಿ 1500 ಜನಕ್ಕೆ ಒಬ್ಬ ವೈದ್ಯರಿದ್ದಾರೆ. ಅಲ್ಲದೇ ನಗರ ಕೇಂದ್ರಿತವಾಗಿರುವ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿ ಶೇ.80ರಷ್ಟು ವೈದ್ಯರು ಶೇ.20ರಷ್ಟು ಜನರಿಗಾಗಿ ಮಾತ್ರ ಮೀಸಲಾಗಿದ್ದಾರೆ. ಜೊತೆಗೆ ಇಡೀ ದೇಶಕ್ಕೆ ಸುಮಾರು 35 ಸಾವಿರ ತೀವ್ರ ನಿಗಾ ಇಡುವ ಹಾಸಿಗೆಗಳಿವೆ ಎಂದು ಸರ್ಕಾರ ಹೇಳುತ್ತಿದೆ (2.3 bed per lakh). ನಮ್ಮಲ್ಲಿ ಹುಟ್ಟಿನಿಂದ ಬದುಕುಳಿಯುವ ಆಯಸ್ಸು 68 ಎಂದು ಪರಿಗಣಿಸಲಾಗಿದೆ. ಜಗತ್ತಿನ ಸರಾಸರಿ 72 ಆಗಿದೆ. ಆದರೂ 138 ಕೋಟಿ ಜನಸಂಖ್ಯೆಯಲ್ಲಿ ಸುಮಾರು 14 ಕೋಟಿ 60 ವರ್ಷ ದಾಟಿದವರಿದ್ದಾರೆ. ಹೀಗಾಗಿ ಆಕಸ್ಮಿಕವಾಗಿ ಕಾಯಿಲೆ ವೇಗಗತಿಯಲ್ಲಿ ಹರಡಿ ಇದರಲ್ಲಿ ಶೇ.1ರಷ್ಟು ಜನಕ್ಕೆ ತೀವ್ರ ನಿಗಾ ಇಡುವ ಅವಶ್ಯಕತೆ ಇದ್ದರೂ, 14 ಲಕ್ಷ ಕೃತಕ ಉಸಿರಾಟ ವ್ಯವಸ್ಥೆ ಇರುವ ಹಾಸಿಗೆ ಬೇಕಾಗಬಹುದು.

ಕೊರೊನಾ ಸದ್ಯಕ್ಕೆ ಇಡೀ ಜಗತ್ತಿನ ವ್ಯವಹಾರವನ್ನು ಸ್ಥಗಿತಗೊಳಿಸುವುದು ಮಾತ್ರವಲ್ಲದೇ ಬದುಕಿನ ಮೂಲಭೂತ ಪ್ರಕ್ರಿಯೆಗೂ ಕುತ್ತು ತಂದಿದೆ. ಮಾರ್ಕ್ ಟ್ವೈನ್ ಹೀಗೆಂದಿದ್ದ “ಸರಳ ಜೀವನ, ಪ್ರಖರ ಪ್ರೇಮ, ಹಾಗೆಯೇ ಹಾದಿಯ ಬದಿಯಲ್ಲಿ ಅರಳಿದ ಮಲ್ಲಿಗೆಯ ಮೊಗ್ಗಿನ ಕಂಪನ್ನು ಸವಿಯಲು ಮರೆಯದಿರಿ ಎಂದಿದ್ದ”. ಆದರೆ ದುರಂತವೆಂದರೆ ಕೊರೊನಾ ಕಾಯಿಲೆ ತಗುಲಿದವರಿಗೆ ನಾಸಿಕ ಗ್ರಂಥಿಯ ಸೂಕ್ಷ್ಮಗಳೇ ಮರೆಯಾಗುತ್ತವೆಯಂತೆ. ಇದು ಕೂಡ ರೋಗ ಲಕ್ಷಣದ ಸೂಚನೆ ಎಂದು ನಿನ್ನೆ ಮೊನ್ನೆ ಕಂಡುಕೊಂಡಿದ್ದಾರೆ. ಏಡ್ಸ್ ವೈರಾಣು ಎಪಿಡೆಮಿಕ್ ಆಗಿ ಹುಟ್ಟಿ ಪ್ಯಾಂಡೆಮಿಕ್ ಆಗಿ ಹರಡಿ ಎಂಡೆಮಿಕ್ ಆಗಿ ಇಲ್ಲಿಯೇ ಉಳಿಯಿತು. ಎಪಿಡೆಮಿಕ್ ಎಂದರೆ ಸ್ಥಳೀಯವಾಗಿಯೇ ಹುಟ್ಟಿ ಅಲ್ಲಿಯೇ ಹರಡಿಕೊಳ್ಳುವುದು. ಪ್ಯಾಂಡೆಮಿಕ್ ಎಂದರೆ ವಿಶ್ವವ್ಯಾಪಿಯಾಗುವುದು. ಎಂಡೆಮಿಕ್ ಎಂದರೆ ಬಂದು ತೊಲಗದೆ ಇಲ್ಲಿಯೇ ನೆಲಕಚ್ಚಿಕೊಳ್ಳುವುದು. ಎಚ್‍ಐವಿ ಏಡ್ಸ್ ಗಂಡು ಹೆಣ್ಣಿನ ಮೂಲಭೂತ ಸಂಬಂಧವನ್ನೇ ಛಿದ್ರಮಾಡಿತು. ಈ ಕೊರೊನಾ ಜನಜನರ ನಡುವೆ ಆರು ಅಡಿ ದೂರವಿರುವಂತೆ ಮಾಡಿದೆ.

ಸೂಕ್ಷ್ಮಜೀವಿಗಳ ಜಗತ್ತೇ ವಿಚಿತ್ರ. ಸೂಕ್ಷ್ಮಜೀವಿಗಳ ತಂತ್ರಗಾರಿಕೆಯನ್ನು ಇನ್ನೂ ನಾವು ಸರಿಯಾಗಿ ಗ್ರಹಿಸಿಲ್ಲ. ಇಲ್ಲೊಂದು ವಿಚಿತ್ರ ರೀತಿಯ ಸೂಕ್ಷ್ಮಜೀವಿಗಳ ವ್ಯವಹಾರವನ್ನು ಗಮನಿಸೋಣ. ಟಾಕ್ಸೊಪ್ಲಾಸ್ಮ ಗುಂಡಿಯೈ ಎನ್ನುವ ಪೆಟೊಜೋವಾ ರೋಗಾಣು ಇಲಿಯ ದೇಹಕ್ಕೆ ಹೊಕ್ಕಿ ಇಲಿಯ ಮೆದುಳಿನ ಕಾರ್ಯವೈಖರಿಯನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡು ಇಲಿಯಲ್ಲಿ ಬೆಕ್ಕಿನ ಉಚ್ಚೆಯ ಆಸೆಯನ್ನು ಹುಟ್ಟಿಸುತ್ತದೆ. ಇಲಿ ಆಗ ಬೆಕ್ಕನ್ನು ಹುಡುಕಿಕೊಂಡು ಅಲೆದಾಡುತ್ತದೆ. ಈ ಇಲಿಗೆ ಬೆಕ್ಕೆಂದರೆ ಭಯವಿಲ್ಲ. ಬೆಕ್ಕನ್ನು ಬಯಸಿ ಬೇಡುತ್ತಿರುವ ಈ ಇಲಿ ಬೆಕ್ಕಿಗೆ ಸುಲಭವಾಗಿ ಸಿಕ್ಕಿ ಅಥವಾ ತಾನೇ ಅದರ ಬಾಯಿಗೆ ಬಿದ್ದು ತಿನ್ನಲ್ಪಡುತ್ತದೆ. ಆಗ ಈ ಟಾಕ್ಸೊಪ್ಲಾಸ್ಮ ಗುಂಡಿಯೈ ಬೆಕ್ಕಿನ ಹೊಟ್ಟೆಯಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಉಚ್ಚೆಯ ಮೂಲಕ ಹೊರಬರುತ್ತದೆ. ಇದೆಲ್ಲ ಈ ಸೂಕ್ಷ್ಮಜೀವಿ ತನ್ನ ಸಂತಾನೋತ್ಪತ್ತಿಗಾಗಿ ಹೆಣೆದ ಮಾಯಾಜಾಲ. ಹೀಗಾಗಿ ಬೆಕ್ಕಿನ ಉಚ್ಚೆಯಿಂದ ದೂರವಿರುವುದು ಆರೋಗ್ಯಕ್ಕೆ ಉತ್ತಮವೆನ್ನುವುದು ವೈದ್ಯಕೀಯ ರಂಗದಲ್ಲಿ ತಿಳಿದಿರುವ ಸಂಗತಿ.

ಇತ್ತೀಚೆಗೆ ಮನುಷ್ಯರಲ್ಲಿ ಕ್ಲಾಸ್ಟ್ರೀಡಿಯಮ್ ಡಿಫಿಕಿಲೆ ಎನ್ನುವ ಬ್ಯಾಕ್ಟೀರಿಯಾ ರೋಗಾಣು ಅಲ್ಲಲ್ಲಿ ಕಂಡು ಬರುತ್ತಿದೆ. ಇದರ ವಿಶೇಷವೇನೆಂದರೆ ಇದಕ್ಕೆ ನಮ್ಮ ಬತ್ತಳಿಕೆಯಲ್ಲಿರುವ ಯಾವುದೇ ಆಂಟಿಬಯಾಟಿಕ್‍ಗಳು ಕೆಲಸ ಮಾಡುವುದಿಲ್ಲ. ಸದ್ಯಕ್ಕೆ ಇದಕ್ಕಿರುವ ಉತ್ತಮ ಔಷಧ ಮಲ ತಿನ್ನಿಸುವುದಾಗಿದೆ. ಇದನ್ನು ಫೀಕಲ್ ಥೆರಫಿ ಎನ್ನುತ್ತಾರೆ. ಆಶ್ಚರ್ಯಕರ ವಿಷಯವೇನೆಂದರೆ ಈ ರೋಗಾಣು ನಮ್ಮ ಹೊಟ್ಟೆಯಲ್ಲಿ ತನ್ನ ಹೆಡೆಯನ್ನು ಚಾಚಲು ಕಾರಣ, ಅತೀ ಹೆಚ್ಚು ಆಂಟಿಬಯಾಟಿಕ್‍ಗಳ ಸೇವನೆಯಿಂದ ಅಥವಾ ಕೃಷಿಯಲ್ಲಿ ಬಳಕೆಮಾಡುವ ಆಂಟಿಬಯಾಟಿಕ್‍ಗಳು ನಮ್ಮ ದೇಹಕ್ಕೆ ಸೇರಿ ನಮಗೆ ಪೂರಕವಾಗಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವುದರಿಂದಾಗಿದೆ.

ಸೋಂಕು ರೋಗ ತಗಲುವುದು ಸೂಕ್ಷ್ಮಜೀವಿಗಳಿಂದಲೇ ಎನ್ನುವುದು ನಮ್ಮಲ್ಲಿರುವ ಸಾಮಾನ್ಯ ನಂಬಿಕೆ. ಅಂದರೆ ವೈರಾಣು, ಬ್ಯಾಕ್ಟೀರಿಯಾ, ಶಿಲಿಂಧ್ರ ಅಥವಾ ಪೆಟೊಜೋವಾಗಳಾಗಿರಬೇಕು ಎನ್ನುವುದಾಗಿದೆ. ಆದರೆ ಯುರೋಪ್‍ನಲ್ಲಿ ಕಂಡುಬಂದ ಸಿಜೆಡಿ ರೋಗ ಅಂದರೆ ಕ್ರೆಜ್ಡ್ ಫೆಲ್ಡ್ ಯಾಕೊಬ್ ಡಿಸೀಸ್ (creuzfeldt-jakob disease) ಈ ನಂಬಿಕೆಯನ್ನೇ ಬುಡಮೇಲು ಮಾಡಿತು. ಕಾರಣ ನಿರ್ಜೀವಿಯಾದ ರಾಸಾಯನಿಕ ವಸ್ತುವಾದ ಪ್ರಯಾನ್ (prion) ಎನ್ನುವ ಪೆಟೀನ್‍ವೊಂದು ಈ ಸೋಂಕು ರೋಗವನ್ನುಂಟುಮಾಡುವುದಾಗಿದೆ. ಇದಕ್ಕೆ ಕಾರಣ ಹಸು ಮಾಂಸ ತಿಂದದ್ದು. ಅದಕ್ಕೆ ಕಾರಣ ಆ ಸಸ್ಯಹಾರಿ ಹಸುವಿಗೆ ಮಾಂಸದೂಟ ಬಡಿಸಿದ್ದು. ಮಾಂಸದೂಟವೆಂದರೆ ಹುರಿದ ಮಾಂಸವನ್ನು ಮೇವಿನಲ್ಲಿ ತಿನ್ನಿಸಿದಾಗಿತ್ತು. ಉದ್ದೇಶವೇನೊ ಹೆಚ್ಚು ಹಾಲು ಮತ್ತು ಮಾಂಸ ಬರಲಿ ಎನ್ನುವುದಾಗಿತ್ತು. ಆದರೆ ಮೆದುಳಿಗೆ ತಗಲುವ ಈ ಸಿಜೆಡಿ ಕಾಯಿಲೆ ಇಂಗ್ಲೆಂಡ್ ದೇಶವನ್ನು ತಲ್ಲಣಗೊಳಿಸಿತ್ತು. ಇದನ್ನು ತಡೆಹಿಡಿಯಲು ಲಕ್ಷಾಂತರ ಹಸುಗಳನ್ನು ಬೆಂಕಿಯಲ್ಲಿ ಆಹುತಿ ಮಾಡಲಾಯಿತು. ಇದರಿಂದ ಒಂದು ಸಸಾರಜನಕ ಕೂಡ ಸೋಂಕು ರೋಗವನ್ನುಂಟುಮಾಡಬಹುದೆಂದು ಜಗತ್ತಿಗೆ ಹೊಸ ಅರಿವಾಯಿತು. ಆದರೆ ಈ ಸೋಂಕು ತಿಂದ ತಕ್ಷಣವೇ ಬರುವಂತದಲ್ಲ. ರೋಗದ ಚಿಹ್ನೆಗಳು ಕಂಡುಬರಲು ಕೆಲವು ಬಾರಿ ದಶಕಗಳು ಬೇಕಾಗಬಹುದು. ಇಂಗ್ಲೆಂಡ್‍ನಲ್ಲಿ ಲಕ್ಷಾಂತರ ಜನರಲ್ಲಿ ಈ ಕಾಯಿಲೆ ಇದ್ದು, ಇನ್ನೂ ಹೊರಹೊಮ್ಮಿಲ್ಲ ಎನ್ನುವ ವರದಿಗಳಿವೆ.

ಕೊರೊನಾ ತನ್ನದೇ ಆದ ರೀತಿಯಲ್ಲಿ ಮಹತ್ತರವಾದ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡುತ್ತಿದೆ.

ಕೊರೊನಾ ಕಾಯಿಲೆಗಾಗಿ ಪರಸ್ಪರ ದೂರವನ್ನು ಕಾಪಾಡಿಕೊಳ್ಳಿ ಎನ್ನುವ ವೈದ್ಯಕೀಯ ಸಲಹೆಯನ್ನು, ನಮ್ಮ ದೇಶದ ಹೇಯವಾದ ಅಸ್ಪಶ್ಯತೆಗೆ ತಳುಕುಹಾಕಿ ನಮ್ಮ ಪೂರ್ವಜರು ವೈಜ್ಞಾನಿಕ ಮನೋಭಾವವುಳ್ಳವರು ಎಂದು ಹೊಸ ವ್ಯಾಖ್ಯಾನ ಮಾಡಲು ಹೊರಟಿದ್ದಾರೆ. ಕೊರೊನಾ ಪೀಡಿತರು ಜಾಗತಿಕ ಕಾಯಿಲೆಗೆ ಬಲಿಪಶು ಎನ್ನುವುದನ್ನು ಬಿಟ್ಟು ವ್ಯಕ್ತಿಯನ್ನೇ ಸಾಮಾಜಿಕ ಪಿಡುಗೆಂದು ಕಾಣುವ ಮನಸ್ಸು ನಮ್ಮಲ್ಲಿದೆ. ಮೊನ್ನೆ ಕೊರೊನಾ ಕಾಯಿಲೆಯಿಂದ ಆಸ್ಪತ್ರೆಯಿಂದ ಹೊರ ಬಂದ ವ್ಯಕ್ತಿಯೊಬ್ಬರು ನಮ್ಮನ್ನು ಹೀನಾಯವಾಗಿ ಕುಷ್ಟರೋಗಿಗಳಂತೆ ನೋಡಿಕೊಂಡರು ಎಂದರು. ಅವರ ಮಾತಿನಲ್ಲಿಯೇ ನಮ್ಮ ಮಾನಸಿಕತೆಯ ಮರ್ಮ ಅಡಗಿದೆ. ಕೆಲವರು ಹೇಳುವುದುಂಟು ನನಗೆ ಯಾವ ಜಾತಿಯಲ್ಲೂ ನಂಬಿಕೆಯಿಲ್ಲ. ಅವರ ಬ್ರಾಹ್ಮಣರು ಇರಬಹುದು, ಶೂದ್ರರೂ ಇರಬಹುದು ಎಂದು!

ಆದರೆ ಕೊರೊನಾ ಕಾಯಿಲೆ ಚೈನಾ ದೇಶದಲ್ಲಿ ಸಮುದಾಯ ಪ್ರಜ್ಞೆಯನ್ನು ಹೆಚ್ಚು ಬೆಸೆಯಿತು ಎನ್ನಬಹುದು. ಅಪಾರ್ಟ್‍ಮೆಂಟ್‍ಗಳಲ್ಲಿ ವಾಸಿಸುವವರು ವೈಯಕ್ತಿಕವಾಗಿ ಏನನ್ನು ಕೊಳ್ಳದೇ ಒಟ್ಟಾಗಿ ಸೇರಿ ತಮಗೆ ಬೇಕಾದ ವಸ್ತುಗಳನ್ನು ಕೊಳ್ಳಲು ಆರಂಭಿಸಿದರು. ಒಂದು ಅಪಾರ್ಟ್‍ಮೆಂಟ್‍ನಲ್ಲಿ ಸಾವಿರ ಮನೆಯಿದ್ದರೇ, ಸಾವಿರ ಆರ್ಡರ್ ಮಾಡಿ ಸಾವಿರ ಟ್ರಿಪ್ ಮಾಡುವ ಬದಲು ಒಂದೇ ಟ್ರಿಪ್‍ಗೆ ಇಳಿಸಿದರು.

ಇದರ ಜೊತೆಗೆ ಕೊರೊನಾ ಕಾಯಿಲೆಯಿಂದ ನಮ್ಮ ಕೊಳ್ಳಬಾಕತನಕ್ಕೆ ಕೊಡಲಿ ಏಟು ಬಿದ್ದು ಪರಿಸರ ಪ್ರಜ್ಞೆ ಹೆಚ್ಚಾಗುತ್ತದೆಂದು ನಿರೀಕ್ಷಿಸಬಹುದೇ? ಟಿಬಿ (tuberculosis) ಎಂದರೆ ಮೂಲ ಅರ್ಥ ಕೊಳ್ಳಬಾಕತನವೇ ಆಗಿತ್ತು. Sometimes the best comes out of worst.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here