Homeಮುಖಪುಟಪರಿಸರ ದಿನ: ಪರಿಸರ ಮಾಲಿನ್ಯಕ್ಕೆ ಯಾರನ್ನು ದೂಷಿಸಬೇಕು? ನಾವೇನು ಮಾಡಬೇಕು?

ಪರಿಸರ ದಿನ: ಪರಿಸರ ಮಾಲಿನ್ಯಕ್ಕೆ ಯಾರನ್ನು ದೂಷಿಸಬೇಕು? ನಾವೇನು ಮಾಡಬೇಕು?

ಎಲ್ಲಾ ನಾಗರೀಕತೆಗಳು ಹುಟ್ಟಿದ್ದು ನದಿ ಪಾತ್ರದಲ್ಲೇ. ನದಿಗಳಿಲ್ಲದೆ ನಾಗರೀಕತೆ ಇಲ್ಲ ಎಂಬ ಮಾತು ಎಷ್ಟು ಸತ್ಯವೋ.. ನಾಗರೀಕತೆ ಬೆಳೆಯುತ್ತಿದ್ದಂತೆ ನದಿಗಳು ಸಾಯುತ್ತಿವೆ ಎಂಬ ಮಾತೂ ಸಹ ಅಷ್ಟೇ ಸತ್ಯ!

- Advertisement -
- Advertisement -

ಇಂದು ಇಡೀ ವಿಶ್ವ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆ ಎಂದರೆ ಪರಿಸರ ಮಾಲಿನ್ಯ. ಕಳೆದ ಒಂದು ಶತಮಾನದ ಅವಧಿಯಲ್ಲಿ ಊಹೆಗೂ ನಿಲುಕದ ಮಟ್ಟಿಗೆ ಮಾನವ ಈ ಪರಿಸರವನ್ನು ಹಾಳುಗೆಡವಿದ್ದಾನೆ. ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ಧ ಮಾಲಿನ್ಯ, ಮಣ್ಣಿನ ಮಾಲಿನ್ಯ ಹಾಗೂ ಸಮುದ್ರ ಮಾಲಿನ್ಯ ಹಿಂದೆಂದಿಗಿಂತಲೂ ಇಂದು ವ್ಯಾಪಕವಾಗಿದೆ.

ಇದರ ಪರಿಣಾಮವಾಗಿ ಹಸಿರುಮನೆ, ಜಾಗತಿಕ ತಾಪಮಾನ ಏರಿಕೆ, ಜೀವವಾಯು ಆಮ್ಲಜನಕದ ಕೊರತೆ, ಶುದ್ಧ ಕುಡಿಯುವ ನೀರಿನ ಕೊರತೆ ಹಾಗೂ ವಿಪರೀತ ಮಳೆಯ ಅಭಾವವನ್ನು ಇಂದು ಮಾನವ ಎದುರಿಸುವಂತಾಗಿದೆ. ಅಲ್ಲದೆ ಕೊರೋನಾದಂತಹ ವಿವಿಧ ಹೆಸರಿನ ನಾನಾ ಖಾಯಿಲೆಗಳನ್ನು ಬಳುವಳಿಯಾಗಿ ಪಡೆಯುವಂತಾಗಿದೆ. ಇದು ಸ್ವತಃ ಮಾನವ ಜನಾಂಗದ ಸ್ವಯಂಕೃತ ಅಪರಾಧದ ಪರಿಣಾಮ.

ಪರಿಸರ ನಾಶವಾಗುತ್ತಿರುವ ಪರಿ ಹಾಗೂ ಇದರಿಂದ ಮಾನವ ಸೇರಿದಂತೆ ಭವಿಷ್ಯದ ಜೀವ ಸಂಕುಲ ಎದುರಿಸಲಿರುವ ಸಮಸ್ಯೆಯ ಕುರಿತು 80ರ ದಶಕದಲ್ಲೇ ಮುಂದಾಲೋಚನೆ ಮಾಡಿದ್ದ ವಿಶ್ವಸಂಸ್ಥೆ ಪರಿಸರ ಸಂರಕ್ಷಣೆ ಕುರಿತು ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ 1974 ಜೂನ್. 5ರಂದು ಅಂತಾರಾಷ್ಟ್ರೀಯ ಪರಿಸರ ಸಾಮಾನ್ಯ ಸಭೆ ಏರ್ಪಡಿಸಿತ್ತು.

ಈ ಸಭೆಯಲ್ಲಿ ಎಲ್ಲಾ ರಾಷ್ಟ್ರಗಳು ಪಾಲ್ಗೊಂಡಿದ್ದವು. ಅಲ್ಲದೆ ಈ ಸಭೆಯಲ್ಲಿ ಪರಿಸರ ಸಂರಕ್ಷಣೆ ಕುರಿತಂತೆ ಎಲ್ಲಾ ರಾಷ್ಟ್ರಗಳು ಸೂಕ್ತ ಕಾರ್ಯಸೂಚಿ ರೂಪಿಸಬೇಕು ಎಂದು ತಾಕೀತು ಮಾಡಲಾಗಿತ್ತು. ಇದೇ ಕಾರಣಕ್ಕೆ ಪ್ರತಿ ವರ್ಷ ಜೂನ್. 5 ರಂದು ವಿಶ್ವ ಪರಿಸರ ದಿನ ಎಂದು ಆಚರಿಸಲಾಗುತ್ತದೆ.

ವಿಶ್ವ ಪರಿಸರ ಸಮ್ಮೇಳನ, 1992ರಿಂದ ನಿರಂತರವಾಗಿ ನಡೆಯುತ್ತಿರುವ ಭೂ ಸಮ್ಮೇಳನ ಸೇರಿದಂತೆ ಪರಿಸರ ರಕ್ಷಣೆ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಸಮ್ಮೇಳನಗಳು ನಡೆಯುತ್ತಲೇ ಇವೆ. ಆದರೂ, ಪರಿಸರ ಮಾತ್ರ ಮಾಲಿನ್ಯ ಎಂಬ ಭೂತದಿಂದ ಈವರೆಗೆ ದೂರವಾಗಲು ಸಾಧ್ಯವಾಗಿಲ್ಲ. ಹಾಗಾದ್ರೆ ಇಂದಿನ ಪರಿಸರದ ಪ್ರಸ್ತುತ ವಸ್ತುಸ್ಥಿತಿ ಏನು? ಜಲಮಾಲಿನ್ಯದ ಪರಿಣಾಮಗಳೇನು? ಕಳೆದ ಒಂದು ಶತಮಾನದಲ್ಲಿ ಭೂಮಿಯ ಮೇಲೆ ನಾಶವಾಗಿರುವ ಹಸಿರಿನ ಪ್ರಮಾಣವೆಷ್ಟು? ಆಮ್ಲಜನಕದ ಕೊರತೆಯಿಂದ ಉಂಟಾಗಬಹುದಾದ ಸಮಸ್ಯೆಗಳೇನು? ಇದಕ್ಕೆ ಕಾರಣ ಮತ್ತು ಪರಿಹಾರಗಳೇನು? ಇಲ್ಲಿದೆ ಈ ಕುರಿತ ಸಂಪೂರ್ಣ ಮಾಹಿತಿ.

ಜಲಮಾಲಿನ್ಯದಿಂದ ಸಾಯುತ್ತಿವೆ ಭಾರತದ ನದಿಗಳು!

ಈಜಿಪ್ಟ್ ನಾಗರೀಕತೆಯಿಂದ ಸಿಂದೂ ಬಯಲಿನ ವರೆಗೆ ಎಲ್ಲಾ ನಾಗರೀಕತೆಗಳು ಹುಟ್ಟಿದ್ದು ನದಿ ಪಾತ್ರದಲ್ಲೇ. ನದಿಗಳಿಲ್ಲದೆ ನಾಗರೀಕತೆ ಇಲ್ಲ ಎಂಬ ಮಾತು ಎಷ್ಟು ಸತ್ಯವೋ.. ನಾಗರೀಕತೆ ಬೆಳೆಯುತ್ತಿದ್ದಂತೆ ನದಿಗಳು ಸಾಯುತ್ತಿವೆ ಎಂಬ ಮಾತೂ ಸಹ ಅಷ್ಟೇ ಸತ್ಯ! ಇಂದು ನಾಗರೀಕತೆ ಎಂಬುದು ಆಕಾಶದ ಎತ್ತರಕ್ಕೆ ಬೆಳೆದಿದೆ. ಆದರೆ ಈ ಸಮುದಾಯ ತಾಂತ್ರಿಕವಾಗಿ ಬೆಳೆಯುತ್ತಾ ಸಾಗಿದಂತೆ ನಮ್ಮ ಜೀವನಾಡಿಯಾದ ನದಿಗಳನ್ನು ಮರೆಯುತ್ತಿದ್ದೇವೆ. ಅವುಗಳನ್ನು ಕೊಲ್ಲುತ್ತಿದ್ದೇವೆ ಎನ್ನುವುದು ಅಂಗೈ ಹುಣ್ಣಿನಷ್ಟೇ ಸತ್ಯ.

ವಿಶ್ವದೆಲ್ಲೆಡೆ ಒಂದು ಕಾಲದಲ್ಲಿ ತುಂಬಿ ಹರಿಯುತ್ತಿದ್ದ ನದಿಗಳು ಇಂದು ಬಹುತೇಕ ಬರಿದಾಗಿವೆ. ನೀರಿಲ್ಲದೆ ನರಳುತ್ತಿವೆ. ಗಂಗೆ ಭಾರತದ ಪವಿತ್ರ ನದಿಗಳಲ್ಲೊಂದು. ಆದರೆ ಈ ದೇಶದಲ್ಲಿ ಗಂಗೆ ಮಲಿನವಾದಷ್ಟು ಇನ್ಯಾವ ನದಿಯೂ ಮಲಿನವಾಗಿಲ್ಲವೇನೋ? ನೆನಪಿರಲಿ ಇಡೀ ಭಾರತದಲ್ಲೇ ಅತ್ಯಂತ ಕಡಿಮೆ ಆಮ್ಲ ಜನಕವನ್ನು ಹೊಂದಿರುವ ನದಿಗಳೆಂದರೆ ಗಂಗಾ ಮತ್ತು ಯಮುನಾ ಎನ್ನುತ್ತಿವೆ ಕೇಂದ್ರ ಸರ್ಕಾರದ ಅನೇಕ ವರದಿಗಳು. ಆಮ್ಲ ಜನಕವಿಲ್ಲದ ನದಿ ಎಂದರೆ ಅದು ಹೆಚ್ಚು ಕಡಿಮೆ ಸತ್ತಂತೆಯೇ ಸರಿ. ನಮ್ಮ ನಾಗರೀಕತೆ ಹೀಗೆ ಸತ್ತ ನದಿಗಳನ್ನು ಸೃಷ್ಟಿಸುತ್ತಿವೆ.

ಗಂಗಾ-ಯಮುನಾ ಸಂಗಮದಲ್ಲಿ ಎಫ್‌ಸಿ ಬ್ಯಾಕ್ಟೀರಿಯಾ ಮಟ್ಟ ನಿಗದಿತ ಪ್ರಮಾಣಕ್ಕಿಂತ 5-13 ಪಟ್ಟು ಹೆಚ್ಚಾಗಿದೆ ಎನ್ನುತ್ತಿವೆ 2017ರಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಅಂಕಿಅಂಶಗಳು. ಈ ಬ್ಯಾಕ್ಟೀರಿಯಾ ಪ್ರಮಾಣ ಅಧಿಕವಿರುವ ನೀರಿನಲ್ಲಿ ಸ್ನಾನ ಮಾಡುವುದು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಒಂದು ಕಾಲದಲ್ಲಿ ಗಂಗೆಯಲ್ಲಿ ಮುಳುಗೆದ್ದರೆ ಪುಣ್ಯ ಎಂಬ ಮಾತು ಹೋಗಿ ಇದೀಗ ಗಂಗೆಯಲ್ಲಿ ಸ್ನಾನ ಮಾಡಿದರೆ ನಾನಾ ಖಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂಬ ಕೃತಕ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಂಡಿದ್ದೇವೆ.

ಈಗಾಗಲೇ ದೊಡ್ಡ ದೊಡ್ಡ ಫ್ಯಾಕ್ಟರಿ ಮಾಲೀಕರ ದುರಾಸೆಯಿಂದಾಗಿ ಉಂಟಾಗಿರುವ ಮಾಲಿನ್ಯಕ್ಕೆ ವಿಶ್ವದ ನಾನಾ ಕಡೆಗಳಲ್ಲಿ ನದಿಗಳೇ ಕಾಣೆಯಾಗಿ ಮರುಭೂಮಿಗಳಂತಾಗಿದೆ. ಭಾರತದಲ್ಲೂ ನದಿ ಮಾಲಿನ್ಯದ ಪರಿಸ್ಥಿತಿ ಹೀಗೆ ಮುಂದುವರೆದರೆ ದೇಶಕ್ಕೂ ಭವಿಷ್ಯದಲ್ಲಿ ಇಂತಹದ್ದೇ ಪರಿಸ್ಥಿತಿ ಎದುರಾದರೂ ಅಚ್ಚರಿ ಇಲ್ಲ.

ಜೀವ ಬಲಿ ಪಡೆಯುತ್ತಿದೆ ವಾಯುಮಾಲಿನ್ಯ

ಪ್ರಸ್ತುತ ವಿಶ್ವ ಹಾಗೂ ಭಾರತದ ಎದುರಿನ ಅತಿದೊಡ್ಡ ಸಮಸ್ಯೆ ಎಂದರೆ ವಾಯುಮಾಲಿನ್ಯ. ವರದಿಯ ಪ್ರಕಾರ ವಿಶ್ವದ ಪ್ರತಿ 10 ಜನರಲ್ಲಿ 9 ಜನ ಕಲುಷಿತಗೊಂಡಿರುವ ಗಾಳಿಯನ್ನು ಉಸಿರಾಡುತ್ತಿದ್ದಾರೆ.

ಗಾಳಿಯಲ್ಲಿರುವ ಸಲ್ಫೇಟ್, ನೈಟ್ರೇಟ್ಸ್ ಮತ್ತು ಕಪ್ಪು ಇಂಗಾಲದ ಅಂಶಗಳನ್ನು ‘ಪಿಎಂ2.5’ ಎಂಬ ಹೆಸರಿನಲ್ಲಿ ಅಳೆಯಲಾಗುತ್ತದೆ. ಇದು ಹೆಚ್ಚಾಗಿದ್ದಲ್ಲಿ ಪಾಶ್ವವಾಯು, ಶ್ವಾಸಕೋಶ ಕ್ಯಾನ್ಸರ್ ಮತ್ತು ಹೃದಯ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮರಗಳನ್ನು ಹೆಚ್ಚಾಗಿ ಕಡಿಯುತ್ತಿರುವುದು ಮತ್ತು ಕಲ್ಲಿದ್ದಲು, ಪೆಟ್ರೋಲಿಯಂ ಉತ್ಪನ್ನಗಳ ದಹನ ವಾಯು ಮಾಲಿನ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ.

ಪ್ರತಿವರ್ಷ ವಾಯುಮಾಲಿನ್ಯದ ಕಾರಣದಿಂದಾಗಿ ವಿಶ್ವದಲ್ಲಿ 70 ಲಕ್ಷ ಜನ ಸಾವಿಗೀಡಾಗುತ್ತಿದ್ದಾರೆ. ಇದರಲ್ಲಿ ಭಾರತದ ಪಾಲು 15 ಲಕ್ಷ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳು ಹೇಳುವ ಪ್ರಕಾರ ವಿಶ್ವದ ಉಳಿದೆಲ್ಲಾ ಭಾಗಗಳಿಗೆ ಹೋಲಿಸಿದರೆ ಚೀನಾ ಮತ್ತು ದಕ್ಷಿಣ ಏಷ್ಯಾದ ನಗರಗಳ ವಾಯುಮಂಡಲ ಅತೀ ಹೆಚ್ಚು ಮಲಿನಗೊಂಡಿವೆ.

ದಕ್ಷಿಣ ಏಷ್ಯಾದ ಕಲುಷಿತ ನಗರಗಳ ಟಾಪ್ 30ರ ಪಟ್ಟಿಯಲ್ಲಿರುವ ಅಷ್ಟೂ ನಗರಗಳು ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶಕ್ಕೆ ಸೇರಿವೆ. ಈ ಪೈಕಿ 22 ನಗರಗಳು ಭಾರತದಲ್ಲೇ ಇವೆ. ಹಾಗೆ ನೋಡಿದರೆ ದಕ್ಷಿಣಾ ಏಷ್ಯಾದ ವಾಯುಮಾಲಿನ್ಯ ಸೂಚ್ಯಾಂಕದಲ್ಲಿ ಭಾರತದ್ದೇ ಸಿಂಹಪಾಲು. ಇಲ್ಲಿನ ವಾತಾವರಣ ಹದಗೆಟ್ಟಿದ್ದು, ಜೀವಿಸಲು ಯೋಗ್ಯವಾಗಿಲ್ಲ ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ವರದಿಗಳು ಹೇಳುತ್ತಿವೆ.

ಏರಿಕೆಯಾಗುತ್ತಿರುವ ಜಾಗತಿಕ ತಾಪಮಾನ

ಮರಗಳ ಮಾರಣ ಹೋಮ ಹಾಗೂ ಅತಿಯಾದ ಇಂಧನ ದಹನಗಳ ಪರಿಣಾಮ ವಾಯುಮಾಲಿನ್ಯ ಒಂದೆಡೆಯಾದರೆ, ಇದರಿಂದ ಉಂಟಾಗುತ್ತಿರುವ ಮಳೆಯ ಕೊರತೆ ಹಾಗೂ ಏರಿಕೆಯಾಗುತ್ತಿರುವ ಜಾಗತಿಕ ತಾಮಪಾನದ ಸಮಸ್ಯೆ ಮತ್ತೊಂದೆಡೆ ಕಾಡುತ್ತಿದೆ.

ಇತ್ತೀಚೆಗೆ ಭಾರತದ 15 ನಗರಳನ್ನು ಪ್ರಖರ ಬಿಸಿಲು ಕಂಡ ನಗರಗಳು ಎಂದು ಗುರುತಿಸಲಾಗಿದೆ. ಇಲ್ಲಿ ಕನಿಷ್ಟ 50 ಡಿಗ್ರಿ ಸೆಲ್ಸಿಯಸ್ನಷ್ಟು ಬಿಸಿಲು ಕಂಡು ಬಂದಿದೆ. ದೇಶದ ಅನೇಕ ನಗರಗಳು ಇಂದು ಕಡು ಬಿಸಿಲಿಗೆ ಬಸವಳಿದಿವೆ. ಇದಕ್ಕೆ ಏಕೈಕ ಕಾರಣ ಅರಣ್ಯ ನಾಶ.

ಕೈಗಾರಿಕೀಕರಣ ಬೆಳೆದಂತೆ 1852ರ ವೇಳೆಗೆ ಜಾಗತಿಕ ಅರಣ್ಯ ನಾಶದ ಪ್ರಮಾಣ ತೀವ್ರಗತಿಯಲ್ಲಿ ಏರಿಕೆಯಾಗಿತ್ತು. 1947ರ ವೇಳೆಗೆ ಭೂಮಿಯನ್ನು ಆವರಿಸಿಕೊಂಡಿದ್ದ 16 ದಶಲಕ್ಷ ಚ.ಕಿಮೀ ವ್ಯಾಪ್ತಿಯ ಭೂ ಉಷ್ಣ ವಲಯದ ಅರಣ್ಯಗಳ ಪೈಕಿ 8 ದಶಲಕ್ಷ ಚ.ಕಿಮೀ ಅರಣ್ಯವನ್ನೇ ನಾಶ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಇದರ ಪ್ರಮಾಣ ದಿನದಿಂದ ದಿನಕ್ಕೆ ಏರಿಯಾಗುತ್ತಲೇ ಇದ್ದು, ಈವರೆಗೆ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೂಕ್ತ ಕ್ರಮಗಳನ್ನು ಜರುಗಿಸಲಾಗಿಲ್ಲ. ಪರಿಸ್ಥಿತಿ ಹೀಗೆ ಮುಂದುವರೆದರೆ 2030ರ ವೇಳೆಗೆ ಭೂಮಿಯಲ್ಲಿ ಕೇವಲ ಶೆ10 ರಷ್ಟು ಅರಣ್ಯಗಳು ಮಾತ್ರ ಉಳಿಯುತ್ತವೆ ಎಂದು ಎಚ್ಚರಿಸಲಾಗಿದೆ.

ಅರಣ್ಯ ನಾಶಗಳ ನೇರ ಪರಿಣಾಮ ಉಂಟಾಗುವುದು ಭೂ ತಾಪಮಾನದ ಮೇಲೆ. ಇತ್ತೀಚಿನ ಐಪಿಸಿಸಿ ವರದಿಯಲ್ಲಿನ ಹವಾಮಾನದ ಮಾದರಿ ಪ್ರಕ್ಷೇಪಗಳ ಪ್ರಕಾರ ಜಾಗತಿಕ ಮೇಲ್ಮೈ ಉಷ್ಣತೆಯು ಸುಮಾರು ಶೇ. 6.4 ಸೆಲ್ಸಿಯಸ್ ನಷ್ಟು ಏರಿಕೆಯಾಗಿದೆ. 21ನೇ ಶತಮಾನದಲ್ಲಿ ಇದು ತೀರಾ ಅತ್ಯಧಿಕ ಪ್ರಮಾಣ ಎನ್ನಲಾಗುತ್ತಿದೆ. ಇದು ಪರಿಸರದ ಮೇಲೆ ಭಾರೀ ಬದಲಾವಣೆಯನ್ನುಂಟು ಮಾಡುತ್ತಿದ್ದು ಬಿಸಿಲಿನ ಪ್ರಕರತೆ ಹೀಗೆ ಮುಂದುವರೆದರೆ 2100ರ ವೇಳೆಗೆ ಭೂಮಿಯಲ್ಲಿ ಮಾನವ ಬದುಕುವುದೂ ಸಹ ದುಸ್ಸಾಧ್ಯ ಎನ್ನಲಾಗುತ್ತಿದೆ.

ಇದಲ್ಲದೆ ಹೆಚ್ಚುತ್ತಿರುವ ತಾಪಮಾನ ಮಾನವನ ಎದುರು ಮತ್ತೊಂದು ಸವಾಲನ್ನು ಮುಂದಿಟ್ಟಿದೆ. ಅದೆಂದರೆ ಧೃವ ಪ್ರದೇಶಗಳ ಕರಗುವಿಕೆ. ಈಗಾಗಲೇ ಹೆಚ್ಚುತ್ತಿರುವ ತಾಪಮಾನದಿಂದಾಗಿ ಧೃವ ಪ್ರದೇಶಗಳಲ್ಲಿ ಸುಮಾರು 9,500 ಬಿಲಿಯನ್ ಟನ್‌ಗೂ ಹೆಚ್ಚು ಮಂಜುಗಡ್ಡೆಗಳು ಕರಗಿದ್ದು ಸಮುದ್ರದ ಮಟ್ಟ ಏರಿಕೆಯಾಗುತ್ತಿದೆ.

ಇದು ಹೀಗೆ ಮುಂದುವರೆದರೆ ಮುಂದಿನ ದಿನದಲ್ಲಿ ಧೃವ ಪ್ರದೇಶಗಳಲ್ಲಿ ಮಂಜುಗಡ್ಡೆಗಳೆ ಕಣ್ಮರೆಯಾಗಿ ಸಮುದ್ರ ತೀರ ಪ್ರದೇಶಗಳು ಮುಳುಗಿದರೂ ಅಚ್ಚರಿ ಇಲ್ಲ ಎನ್ನುತ್ತಿದ್ದಾರೆ ವಿಜ್ಞಾನಿಗಳು. ಇನ್ನೂ ಉತ್ತರ ಭಾರತದ ನದಿಗಳಿಗೆ ಜೀವನಾಡಿಯಾಗಿರುವ ಹಿಮಾಲಯ ಸಂಪೂರ್ಣ ಕರಗಿ ನದಿಗಳು ಶೀಘ್ರದಲ್ಲಿ ಸಾಯಲಿವೆ ಎಂದೂ ಎಚ್ಚರಿಸಲಾಗಿದೆ.

ಕಾರಣರಾರು?

ಯಾವಗಲೂ ಮಾನವನ ದುರಾಸೆಗೆ ಪರಿಸರ ನಾಶವಾಗುತ್ತಿದೆ ಎಂಬ ಒಂದು ವಾಕ್ಯದ ಸಿದ್ದ ಉತ್ತರ ಸಿಗುತ್ತಿರುತ್ತದೆ. ಅದು ಅದು ಸಂಪೂರ್ಣ ಸತ್ಯವಲ್ಲ. ಅತಿ ದೊಡ್ಡ ಬಂಡವಾಳಶಾಹಿಗಳು ಲಾಭದ ದುರಾಸೆಗೆ ಬಿದ್ದು ಪರಿಸರ ಕಾನೂನುಗಳನ್ನು ಗಾಳಿಗೆ ತೂರಿ ದರ್ಪ ಮೆರೆಯುತ್ತಿರುವುದು. ಸರ್ಕಾರವು ಅಭಿವೃದ್ದಿ ಹೆಸರಿನಲ್ಲಿ ಕಾಡುಗಳ ಮಾರಣಹೋಮಕ್ಕೆ ಸಿದ್ದವಾಗಿರುವುದು ಪರಿಸರ ಮಾಲಿನ್ಯಕ್ಕೆ ಅತಿ ದೊಡ್ಡ ಕಾರಣಗಳಾಗಿವೆ.

ಇದಲ್ಲದೆ ಹೆಚ್ಚುತ್ತಿರುವ ಪ್ಲಾಸ್ಟಿಕ್ ಬಳಕೆಯಿಂದಾಗಿ ಮಣ್ಣು ಹಾಗೂ ಸಮುದ್ರ ಮಾಲಿನ್ಯ, ಶಬ್ಧ ಮಾಲಿನ್ಯ ಸೇರಿದಂತೆ ಮಾನವನ ಅನೇಕ ಮಾಲಿನ್ಯಕ್ಕೆ ಕಾರಣನಾಗಿದ್ದಾನೆ. ಬೆಳೆಯುತ್ತಿರುವ ನಾಗರೀಕತೆ ಪರಿಸರದ ಮೇಲೆ ಈಗಾಗಲೇ ಅನೇಕ ಕ್ರೌರ್ಯಗಳನ್ನು ನಡೆಸಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಲೇಬೇಕಿದೆ. ಪರಿಸರವನ್ನು ಉಳಿಸಿಕೊಳ್ಳಲೇಬೇಕಿದೆ. ಹೀಗಾಗಿ ಹೆಚ್ಚು ಮರಗಳನ್ನು ವನ್ಯ ಜೀವಿಗಳನ್ನು ಉಳಿಸಿ ಬೆಳೆಸುವುದರ ಜೊತೆಗೆ ದೊಡ್ಡ ಹೋರಾಟ, ಜನಜಾಗೃತಿ ಅತ್ಯಗತ್ಯವಾಗಿದೆ. ಸರ್ಕಾರಗಳ ಮೇಲೆ ಒತ್ತಡ ತಂದು ಪರಿಸರ ಉಳಿವಿಗೆ ಸಂಬಂಧಿಸಿದ ದೊಡ್ಡ ಕಾನೂನು ಬದಲಾವಣೆಗಳಾಗಬೇಕಿದೆ. ಇದು ಪರಿಸರ ದಿನಾಚರಣೆಯಂದು ನಾವು ಮಾಡಬೇಕಾದ ಪ್ರಮುಖ ಕೆಲಸವಾಗಿದೆ. ಈ ಮೂಲಕ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕಾದ ಅಗತ್ಯತೆ ಹಿಂದೆಂದಿಗಿಂತಲೂ ಇಂದು ಅಧಿಕವಾಗಿದೆ. ಇಲ್ಲದಿದ್ದರೆ ಪರಿಸರದಲ್ಲಿ ನಾವೇ ಸೃಷ್ಟಿಸಿರುವ ಬೃಹತ್ ಕಂದಕಕ್ಕೆ ನಾವೇ ಬಲಿಯಾದರೂ ಅಚ್ಚರಿ ಇಲ್ಲ.


ಇದನ್ನೂ ಓದಿ: ಎಲ್ಲರಿಗೂ ಭೂಮಿ ಕೊಡಿ, ಸರ್ಕಾರದ ಮುಂದೆ ರೈತರನ್ನು ಭಿಕ್ಷುಕರನ್ನಾಗಿ ಮಾಡಬೇಡಿ 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...