ಇಟಲಿಯಲ್ಲೇಕೆ ಹಾಗಾಯಿತು? : ಯೂರೋಪ್ ವೈದ್ಯರೊಬ್ಬರ ಸಂದರ್ಶನ

ಇಟಲಿಯ ಜನರು ಮತ್ತು ಸರ್ಕಾರದ ಮೇಲಿರುವ ಆರೋಪವೆಂದರೆ, ಕೊರೊನಾ ಸೋಂಕು ಬಂದಿದೆ ಎಂದು ಗೊತ್ತಾದ ನಂತರವೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ.

ನಮ್ಮ ಪತ್ರಿಕೆಯ ಬಳಗದಲ್ಲಿನ ವೈದ್ಯರೊಬ್ಬರು ಇಂಗ್ಲೆಂಡಿನಲ್ಲಿದ್ದು, ಸ್ವತಃ ಕೊರೊನಾ ಶಂಕಿತರ ಆರೈಕೆಯಲ್ಲಿದ್ದಾರೆ ಮತ್ತು ಇಟಲಿಯ ಸಮಸ್ಯೆಯ ಕುರಿತು ಹತ್ತಿರದ ತಿಳುವಳಿಕೆಯನ್ನು ಹೊಂದಿದ್ದಾರೆ. ಈ ಸದ್ಯ ಪ್ರಪಂಚದಲ್ಲಿ ಅತೀ ಹೆಚ್ಚು ಸೋಂಕು ಮತ್ತು ಸಾವುಗಳು ಸಂಭವಿಸುತ್ತಿರುವುದು ಇಟಲಿಯಲ್ಲಾದ್ದರಿಂದ ಅವರನ್ನು ಮಾತಾಡಿಸಲಾಯಿತು. ಅವರ ಜೊತೆಗಿನ ಚರ್ಚೆಯ ಸಂಗತಿಗಳನ್ನು ಇಲ್ಲಿ ಸಂಗ್ರಹಿಸಿ ನೀಡಲಾಗಿದೆ. ಸದರಿ ವೈದ್ಯರು ಅವರ ಹೆಸರನ್ನು ಉಲ್ಲೇಖಿಸಿದಿರಲು ಸೂಚಿಸಿದ್ದಾರೆ.

ಇಟಲಿಯಲ್ಲಿ ಕೊರೊನಾ ಸೋಂಕು ಮತ್ತು ಸಾವುಗಳು ಇಷ್ಟೊಂದು ಏಕೆ ಹೆಚ್ಚಾಗಿದೆ?

ಬಹಳ ನಿರ್ದಿಷ್ಟವಾಗಿ ಹೀಗೆಯೇ ಎಂದು ಹೇಳುವುದು ಸಾಧ್ಯವಿಲ್ಲ. ಇನ್ನೂ ಪೂರ್ಣ ಗೊತ್ತಾಗಿಲ್ಲ ಎಂತಲೇ ಹೇಳಬಹುದು. ಆದರೆ, ಈ ಸಂಬಂಧ ಇರುವ ಮರ‍್ನಾಲ್ಕು ಥಿಯರಿಗಳನ್ನು ನಿಮಗೆ ಹೇಳಬಹುದು ಅಷ್ಟೇ.

ಮಿಲಾನ್ ಸುತ್ತಮುತ್ತ ಹೆಚ್ಚಿದೆ (ಅದೇ ಇಟಲಿಯ ಕೊರೊನಾದ ಕೇಂದ್ರ – ಎಪಿಸೆಂಟರ್). ಅದು ಇಟಲಿಯ ಶ್ರೀಮಂತ ಭಾಗ. ಆ ಭಾಗವು ಪ್ರಪಂಚದ ಬೇರೆ ಭಾಗಗಳ ಜೊತೆಗೆ ಹತ್ತಿರದ ಸಂಬಂಧ ಹೊಂದಿದೆ ಮತ್ತು ಅಲ್ಲಿಂದ ಅಕ್ಕಪಕ್ಕದ ಭಾಗಗಳಿಗೂ ಪ್ರತಿನಿತ್ಯ ದೊಡ್ಡ ಪ್ರಮಾಣದಲ್ಲಿ ಜನರು ಓಡಾಡುತ್ತಾರೆ. ಚೀನಾದ ಜೊತೆಗೂ ಈ ಭಾಗಕ್ಕೆ ಸಂಬಂಧವಿದೆ. (2018ರಲ್ಲಿ ಚೀನಾ ಮತ್ತು ಮಿಲಾನ್ ನಗರದ ನಡುವೆ ವಿಮಾನ ಪ್ರಯಾಣ ಮಾಡಿದವರ ಸಂಖ್ಯೆ 8,97,000 ಆಗಿತ್ತು. ವಾರದಲ್ಲಿ 24 ವಿಮಾನಗಳು ಈ ಮಾರ್ಗದಲ್ಲಿ ಹಾರಾಡಿದ್ದು ಸಾಲದೆಂದು ಹೊಸ ಒಪ್ಪಂದಗಳನ್ನು ಮಾಡಿಕೊಂಡು ಈ ಸಂಖ್ಯೆ ಇನ್ನಷ್ಟು ಹೆಚ್ಚಿತು.- ಸಂದರ್ಶಕ)

ಇಟಲಿಯು ಮಿಕ್ಕ ಯೂರೋಪ್ ದೇಶಗಳಿಗಿಂತ ಭಿನ್ನವಾಗಿರುವ ಇನ್ನೊಂದು ಅಂಶವೂ ಇದೆ. ಅಲ್ಲಿ ಜನರು ಪರಸ್ಪರ ಬೆರೆಯುವಿಕೆಯೂ ಹೆಚ್ಚು. ಕೌಟುಂಬಿಕ ಸಂಬಂಧಗಳೂ ಹತ್ತಿರದವು. ಅಂದರೆ ಇಂಗ್ಲೆಂಡ್ ಅಥವಾ ಅಮೆರಿಕಾದಂತಲ್ಲದೇ, ತಂದೆ-ತಾಯಿ, ಅಜ್ಜ-ಅಜ್ಜಿಯರ ಜೊತೆಗೆ ಮಕ್ಕಳು ಸಂಬಂಧ ಇಟ್ಟುಕೊಂಡಿರುತ್ತಾರೆ; ಪ್ರತಿದಿನವೂ ಭೇಟಿ ಮಾಡುವಷ್ಟು.

ಇನ್ನೊಂದು ಮುಖ್ಯವಾದ ಸಂಗತಿಯೇನೆಂದರೆ ವಯಸ್ಸಾದವರು (ಅದರಲ್ಲೂ 80 ವರ್ಷಕ್ಕೂ ಹೆಚ್ಚು ವಯಸ್ಸಿನವರು) ಅತೀ ಹೆಚ್ಚು. ಇದರಲ್ಲಿ ಜಗತ್ತಿನಲ್ಲೇ ಎರಡನೆಯ ಸ್ಥಾನದಲ್ಲಿದೆ ಮತ್ತು ಈ ವಯಸ್ಸಾದವರೂ ಸಕ್ರಿಯವಾಗಿರುತ್ತಾರೆ. ಉಳಿದ ದೇಶಗಳಿಗಿಂತ ಹೆಚ್ಚು ಜನಸಾಂದ್ರತೆಯೂ ಅಲ್ಲಿದೆ.

ಇಟಲಿಯ ಜನರು ಮತ್ತು ಸರ್ಕಾರದ ಮೇಲಿರುವ ಆರೋಪವೆಂದರೆ, ಕೊರೊನಾ ಸೋಂಕು ಬಂದಿದೆ ಎಂದು ಗೊತ್ತಾದ ನಂತರವೂ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಿಲ್ಲ. ಉತ್ತರ ಇಟಲಿಯ ಮಿಲಾನ್, ಲೊಂಬಾರ್ಡಿ ಮತ್ತು ವೆನಿಸ್‌ಗಳ ಲಾಕ್‌ಡೌನ್ ಮಾಡುವುದಕ್ಕೆ ಮುಂಚೆ ಸುದ್ದಿ ಲೀಕ್ ಆಗಿ, ಜನರು ಇಲ್ಲಿಂದ ಬೇರೆ ಕಡೆಗೆ ಹೊರಡಲು ಶುರು ಮಾಡಿದರು. ಅದೂ ಸಹಾ ಸೋಂಕು ಹರಡಲು ಕಾರಣವಾಯಿತು.

ಚೀನಾಗಿಂತ ಇಟಲಿಯಲ್ಲಿ ಇಷ್ಟೊಂದು ಹೆಚ್ಚಾಗಿದೆಯಲ್ಲಾ, ಚೀನಾದಲ್ಲಿ ಈಗ ಇಳಿಯಲು ಕಾರಣವೇನು?

ಚೀನಾವು ಒಂದು ರೀತಿಯ ಸರ್ವಾಧಿಕಾರಿ ದೇಶವಾಗಿದೆ. ಎರಡು ವಾರಗಳಲ್ಲಿ ಅವರು ಎರಡು ಸ್ಟೇಡಿಯಂಗಳಷ್ಟು ಗಾತ್ರದ ಆಸ್ಪತ್ರೆಗಳನ್ನು ಕಟ್ಟಿಬಿಟ್ಟರು. ಮೊದಲು ಅವರೂ ನಿರ್ಲಕ್ಷ್ಯ ಮಾಡಿದ್ದರು. ಅವರ ಹೊಸ ವರ್ಷದ ಸಂಭ್ರಮಕ್ಕೆ ಮುಂಚೆ ಲಾಕ್ ಮಾಡುವುದು ಬೇಡ ಎಂದುಕೊಂಡಿದ್ದರಂತೆ. ನಂತರ ತಮಗೆ ಜಾಗತಿಕವಾಗಿ ಕೆಟ್ಟ ಹೆಸರು ಬರುವುದು ಬೇಡ ಎಂದು ಲಾಕ್‌ಡೌನ್ ಮಾಡಿದರು. ಓಡಾಟ ನಿರ್ಬಂಧಿಸಿದರು. ಆ ಹೊತ್ತಿಗಾಗಲೇ ಡ್ಯಾಮೇಜ್ ಆಗಿಬಿಟ್ಟಿತ್ತು. ಶಂಕಿತರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದರು; ಪಾಸಿಟಿವ್ ಬಂದ ಎಲ್ಲರನ್ನೂ ಆಸ್ಪತ್ರೆಯೊಳಗೆ ಸೇರಿಸಿ ನಿರ್ಬಂಧ ಹಾಕಿದರು, ಮನೆಯಲ್ಲಲ್ಲ. (ಇಲ್ಲೂ ಸಹಾ ಅದನ್ನು ಮಾಡಲಾಗಿಲ್ಲ).

ವಯಸ್ಸಾದವರು ಮಾತ್ರ ಹೆಚ್ಚು ತೊಂದರೆಗೆ ಒಳಗಾಗುತ್ತಾರೆ, ಸಾಯುತ್ತಾರೆ ಎಂಬುದು ನಿಜವೇ?

ಹೌದು ಬಹುಮಟ್ಟಿಗೆ ನಿಜ. ಆದರೆ ಈಚೆಗೆ ಕಡಿಮೆ ವಯಸ್ಸಿನವರೂ ತೊಂದರೆಗೊಳಗಾಗುತ್ತಿದ್ದಾರೆ. ಇದಕ್ಕೆ ಒಂದು ಕಾರಣವೆಂದರೆ ಅಷ್ಟು ತೊಂದರೆಯಿಲ್ಲದಿದ್ದರೂ ಭಯದ ಕಾರಣಕ್ಕೆ ಹೆಚ್ಚೆಚ್ಚು ಆಸ್ಪತ್ರೆಗೆ ಸೇರಿ, ವೈದ್ಯಕೀಯ ಚಿಕಿತ್ಸೆ ಎಲ್ಲರಿಗೂ ಸರಿಯಾಗಿ ಸಿಗುತ್ತಿಲ್ಲ. ಹಾಗಾಗಿ ಬದುಕುಳಿಯಬಲ್ಲವರೂ ತೊಂದರೆಗೆ ಸಿಲುಕುತ್ತಿದ್ದಾರೆ. ಉಳಿದಂತೆ ವಯಸ್ಸಾದವರು ಮತ್ತು ಬೇರೆ ಖಾಯಿಲೆಗಳಿಂದ ಬಳಲುತ್ತಿರುವವರೇ ಹೆಚ್ಚು ಸಾಯುತ್ತಿದ್ದಾರೆ.

ಸೋಂಕಿಗೆ ಒಳಗಾದವರಲ್ಲಿ ಐದರಲ್ಲಿ ನಾಲ್ಕು ಭಾಗಕ್ಕೆ ತೊಂದರೆಯಾಗುವುದಿಲ್ಲ ಎಂಬ ಕುರಿತು ನಿಮ್ಮ ಅಭಿಪ್ರಾಯವೇನು?

ಇದೂ ಸಹಾ ಪ್ರಶ್ನೆಗೊಳಗಾಗುತ್ತಿದೆ. ಏಕೆಂದರೆ ನೀವು ಅಷ್ಟೊಂದು ಜನರನ್ನು ಪರೀಕ್ಷೆಗೇ ಒಳಪಡಿಸುತ್ತಿಲ್ಲ. ಹಾಗಾಗಿ ಸೋಂಕಿಗೆ ಒಳಗಾಗಿಯೂ ಖಾಯಿಲೆ ಹೆಚ್ಚಾಗುತ್ತಿಲ್ಲ ಅಥವಾ ಸಾಯುತ್ತಿಲ್ಲ ಎಂದು ಹೇಗೆ ಹೇಳುವುದು? ಅದಕ್ಕೆ ಆಧಾರಗಳಿಲ್ಲ. ಅದರ ಅರ್ಥ ಸೋಂಕಿಗೆ ಒಳಗಾದವರೆಲ್ಲರಿಗೂ ಸಮಸ್ಯೆ ಹೆಚ್ಚಾಗಿಬಿಡುತ್ತದೆ ಎಂತಲೂ ಅಲ್ಲ. ಅದರ ಬಗ್ಗೆ ಇನ್ನೂ ಸರಿಯಾದ ಡೇಟಾ ಬೇಕು.

ಈ ಗೊಂದಲಕ್ಕೆ ಕಾರಣವೇನು?

ಇದರಲ್ಲಿನ ಕ್ಲಿಷ್ಟತೆಯನ್ನು ಅರ್ಥ ಮಾಡಿಕೊಳ್ಳಬೇಕು. ವೈದ್ಯರು ಮತ್ತು ತಜ್ಞರು ಡೇಟಾ (ಅಂಕಿ ಅಂಶಗಳು) ಏನಿದೆ ಅದರ ಪ್ರಕಾರ ಮಾತಾಡಬೇಕು. ಆ ರೀತಿ ಮಾತಾಡಿದರೆ ಜನರು ಭಯಗ್ರಸ್ತರಾಗಿಬಿಡುತ್ತಾರೆ. ರಾಜಕಾರಣಿಗಳಿಗೆ ಅದನ್ನು ಮೀರಿದ ಆದ್ಯತೆಗಳಿರುತ್ತವೆ. ನೀವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಮಾಡಬೇಕು, ಆದರೆ ಭಯಕ್ಕೊಳಗಾಗಬಾರದು. ಇವೆರಡರ ನಡುವೆ ಬ್ಯಾಲೆನ್ಸ್ ಮಾಡಬೇಕು. ಅದನ್ನು ಮೀರಿ ರಾಜಕಾರಣಿಗಳು ತುರ್ತಾಗಿ ತಾತ್ಕಾಲಿಕ ಆಸ್ಪತ್ರೆಗಳನ್ನು ಕಟ್ಟುವುದು, ಒಳ್ಳೆಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ತಕ್ಷಣದಲ್ಲಿ ಮಾಡಬಹುದಾದ ಇತರ ಸಂಗತಿಗಳೇನಿವೆ ಎಂದು ಪರಿಶೀಲಿಸುವುದು, ಲಾಕ್‌ಡೌನ್ ಆದಾಗ ಅದನ್ನು ತಡೆದುಕೊಳ್ಳಲಾಗದವರಿಗೆ ಅವರ ಅಗತ್ಯಗಳನ್ನು ಪೂರೈಸುವುದು ಇಂತಹವನ್ನು ಮಾಡಬೇಕು. ಆಗ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮತ್ತು ಭಯಭೀತರಾಗದಂತೆ ನೋಡುವುದು ಎರಡೂ ಸಾಧ್ಯವಾಗುತ್ತದೆ.

ಕಾಮನ್ ಫ್ಲೂಗೂ ಇದಕ್ಕೂ ಏನು ವ್ಯತ್ಯಾಸವಿದೆ?

ನೋಡಿ, ಆಸ್ಪತ್ರೆಗೆ ಸೇರುವುದು ಮತ್ತು ಸಾವಿನ ಪ್ರಮಾಣದಲ್ಲಿ ಕಾಮನ್ ಫ್ಲೂಗೂ ಈ ಕೊರೊನಾ ವೈರಸ್‌ಗೂ ಹೆಚ್ಚಿನ ವ್ಯತ್ಯಾಸ ಇಲ್ಲ. ಇದನ್ನು ಈಗಾಗಲೇ ತಜ್ಞರು ಪ್ರಮಾಣಿಸಿ ನೋಡಿ ಅಭಿಪ್ರಾಯ ಹೇಳಿದ್ದಾರೆ. ಆದರೆ ಸಮಸ್ಯೆ ಇರುವುದು ಎಲ್ಲಿ ಗೊತ್ತೇ? ಕೊರೊನಾ ವೈರಸ್ ಬೇಗನೇ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಫ್ಲೂ ಅಷ್ಟು ಬೇಗ ಅಷ್ಟೊಂದು ಜನರಿಗೆ ಹರಡುವುದಿಲ್ಲ. ಇದು ಮುಖ್ಯ ವ್ಯತ್ಯಾಸ. ಖಾಯಿಲೆ ಬಂದವರಲ್ಲಿ ಬಹಳ ಕಡಿಮೆ ಜನರು ಸಾಯುತ್ತಾರಾದರೂ, ಖಾಯಿಲೆ ಬರುವವರ ಸಂಖ್ಯೆಯೇ ಬಹಳ ಹೆಚ್ಚಾಗುವುದರಿಂದ ಒಟ್ಟಾರೆ ಸಾವಿನ ಸಂಖ್ಯೆ ಹೆಚ್ಚಿರುತ್ತದೆ.

ಸಾರ್ಸ್ ಮತ್ತು ಎಬೋಲಾಗಳ ವಿಚಾರದಲ್ಲಿ ಖಾಯಿಲೆ ಬಂದವರಲ್ಲಿ ಸಿಕ್ಕಾಪಟ್ಟೆ ಜನರು ಸಾಯುತ್ತಿದ್ದರು. ಆ ಖಾಯಿಲೆಗಳು ಹೆಚ್ಚೆಚ್ಚು ಜನರಿಗೆ ಹರಡಲೂ ಇಲ್ಲ. ರೋಗಿಗಳು ಸಾಯುತ್ತಿದ್ದುದರಿಂದಲೂ ಜೊತೆಗೆ ಆ ವೈರಸ್‌ನ ಹರಡುವಿಕೆಯ ಪ್ರಮಾಣ ಕಡಿಮೆಯಿದ್ದುದರಿಂದಲೂ ಒಟ್ಟಾರೆ ಜನಸಂಖ್ಯೆಯಲ್ಲಿ ಕಡಿಮೆ ಜನರು ಸಾಯುತ್ತಿದ್ದರು.

ಹಾಗಾದರೆ ಈಗ ಏನು ಮಾಡಬೇಕು?

ಎಷ್ಟರ ಮಟ್ಟಿಗೆ ಲಾಕ್‌ಡೌನ್ ಮಾಡಲು ಸಾಧ್ಯ ಎಂಬುದನ್ನು ಸರ್ಕಾರಗಳು ತೀರ್ಮಾನ ತೆಗೆದುಕೊಳ್ಳಬೇಕು. ಆ ರೀತಿ ಮಾಡಿದಾಗ ಜನರು ಒತ್ತಡಕ್ಕೊಳಗಾಗಿ ಹೊರಗೆ ಬಂದು ಬಿಡದಂತೆ ಮಾಡಲು ಅವರ, ವಿಶೇಷವಾಗಿ ಬಡಜನರ ಅಗತ್ಯಗಳನ್ನು ಪೂರೈಸಬೇಕು. ಇದರ ಸಾಧ್ಯಾಸಾಧ್ಯತೆಗಳು ಎಷ್ಟು ಎನ್ನುವುದನ್ನು ಆಯಾ ದೇಶಗಳು ನೋಡಿ ತೀರ್ಮಾನಿಸಬೇಕು. ಉಳಿದಂತೆ ಈಗಾಗಲೇ ಹೇಳಿರುವಂತೆ ಸಾಧ್ಯವಾದಷ್ಟೂ ತುರ್ತಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಬೇಕು. ಜನರು ಸೋಂಕು ಹರಡದಂತೆ ಏನು ಮಾಡಬೇಕೆಂಬುದರ ಕುರಿತು ಸಾಕಷ್ಟು ಹೇಳಲಾಗಿದೆ. ಅವನ್ನು ಪಾಲಿಸಿದರೆ ಒಳ್ಳೆಯದು.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here