ಎಲ್ಲಕ್ಕೂ ಸಿದ್ಧರಾಗಿಯೇ ದಾವೋಸ್‍ಗೆ ಹೊರಟರೇ ಯಡಿಯೂರಪ್ಪ?

ಸಿಬಿಐ, ಇಡಿ ಇತ್ಯಾದಿಗಳೆಲ್ಲವೂ ಇರುವುದು ವಿರೋಧಪಕ್ಷದವರನ್ನು ಬ್ಲ್ಯಾಕ್‍ಮೇಲ್ ಮಾಡಲು ಎಂಬುದು ಈಗಿನ ಅಲಿಖಿತ ನಿಯಮ. ಅದನ್ನು ಮೀರಿ ತಮ್ಮದೇ ಪಕ್ಷದ ಮುಖ್ಯಮಂತ್ರಿಯೊಬ್ಬರ ವಿರುದ್ಧ ದಾಳ ಉರುಳಿಸಿದರೆ ಹೈಕಮಾಂಡ್ ಎದುರಿಸಬೇಕಾಗುವುದು ಯಡಿಯೂರಪ್ಪನವರನ್ನಷ್ಟೇ ಅಲ್ಲ; ಅವರ ಹಿಂದೆ ನಿಂತಿದೆ ಎಂದು ಕಾಣುತ್ತಿರುವ ಕರ್ನಾಟಕದ ಬಲಾಢ್ಯ ಸಮುದಾಯವನ್ನು

ಅದು ಯಡಿಯೂರಪ್ಪನವರ ಮೊದಲ ಅವಧಿಯ ಮುಖ್ಯಮಂತ್ರಿತ್ವದ ಸಮಯ. ಭ್ರಷ್ಟಾಚಾರದ ಮತ್ತು ತಮಗೆ ಬೇಕಾದವರಿಗೆ ಮಾತ್ರ ಮಣೆ ಹಾಕುತ್ತಾರೆನ್ನುವ ಆರೋಪ ಹೊತ್ತಿದ್ದ ಯಡಿಯೂರಪ್ಪನವರಿಗೆ ದೆಹಲಿಯಿಂದ ಬುಲಾವ್ ಬಂದಿತ್ತು. ಅಲ್ಲಿ ನೀವು ರಾಜೀನಾಮೆ ನೀಡಲೇಬೇಕೆಂದು ಅಂದಿನ ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿತ್ತು. ಯಡ್ಡಿ ಏನು ಹೇಳಿದ್ದರೆಂದು ಯಾರಿಗೂ ಗೊತ್ತಿರಲಿಲ್ಲ. ಬಿಜೆಪಿಯ ರಾಷ್ಟ್ರೀಯ ನಾಯಕರ ಭೇಟಿಯ ನಂತರ ಸೀದಾ ಬೆಂಗಳೂರು ವಿಮಾನ ಹತ್ತಲು ಇಂದಿರಾಗಾಂಧಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿ ವಿಮಾನ ಹತ್ತಿದರು ಎಂಬ ಸುದ್ದಿ ಟಿವಿಗಳಲ್ಲಿ ಬಿತ್ತರವಾಗುತ್ತಿದ್ದರೆ, ಯಡಿಯೂರಪ್ಪನವರ ಬೆಂಗಳೂರು ಮನೆಯ ಹತ್ತಿರ ಎಂಎಲ್‍ಎಗಳನ್ನು ಜಮಾಯಿಸಲಾಗುತ್ತಿತ್ತು. ಹೈಕಮಾಂಡ್‍ಗೆ ಸೆಡ್ಡು ಹೊಡೆದೇ ಸಿದ್ಧ ಎಂಬ ಸೂಚನೆ ಅದರಿಂದ ರವಾನೆಯಾಯಿತು. ಅದರ ನಂತರ ಕರ್ನಾಟಕದ ಮುಖ್ಯಮಂತ್ರಿ ಪಟ್ಟವನ್ನು ಹತ್ತಿದ ಇಬ್ಬರನ್ನೂ ಸ್ವತಃ ಯಡಿಯೂರಪ್ಪನವರೇ ಸೂಚಿಸಿದ್ದು ಎಂಬುದನ್ನು ನೆನಪಿಸಿಕೊಳ್ಳಬೇಕು.

ಬಿಜೆಪಿಯ ಇತರ ಪ್ರಮುಖ ನಾಯಕರುಗಳಾದ ಅನಂತಕುಮಾರ್, ಈಶ್ವರಪ್ಪ, ಅಶೋಕ್, ಜಗದೀಶ್ ಶೆಟ್ಟರ್, ಸದಾನಂದಗೌಡ ಇತ್ಯಾದಿಗಳಲ್ಲಿ ಯಾರೊಬ್ಬರೂ ಯಡಿಯೂರಪ್ಪನವರ ಪರ ಇರಲಿಲ್ಲ. ಅವರನ್ನು ಹೈಕಮಾಂಡ್ ಕೆಳಗಿಳಿಸಿದರೆ ಸಿಎಂ ಜಾಗಕ್ಕೆ ಟವೆಲ್ ಹಾಸಲು ಸಿದ್ಧರಾಗಿದ್ದವರೇ ಅವರು. ಹಾಗಾದರೆ ಯಡಿಯೂರಪ್ಪನವರ ಫೋನ್ ಫ್ಲೈಟ್ ಮೋಡ್‍ಗೆ ಹೋದ ಮೇಲೂ ಬೆಂಗಳೂರು ಮತ್ತು ರಾಜ್ಯದ ಇತರೆಡೆಗಳಲ್ಲಿದ್ದ ಶಾಸಕರನ್ನು ಸಿಎಂ ಮನೆಗೆ ಬರಬೇಕೆಂದು ಹುಕುಂ ಹೊರಡಿಸಿ ಕರೆಸಿದ್ದು ಯಾರು? ಏಕೆಂದರೆ ಜನಾರ್ಧನ ರೆಡ್ಡಿ, ಶ್ರೀರಾಮುಲು ಸಹಾ ಬಿಜೆಪಿಯ ಎಲ್ಲಾ ಶಾಸಕರ ಮೇಲೆ ಆ ರೀತಿ ಕಂಟ್ರೋಲ್ ಹೊಂದಿರಲಿಲ್ಲ ಮತ್ತು ನಿರ್ದಿಷ್ಟವಾಗಿ ಆ ದಿನ ಅವರುಗಳು ಫೀಲ್ಡಿಗೆ ಇಳಿದಿರಲಿಲ್ಲ. ಅಷ್ಟು ಹೊತ್ತಿಗೆ ಬಳ್ಳಾರಿ ಬ್ರದರ್ಸ್ ಮತ್ತು ಯಡ್ಡಿಯ ನಡುವೆ ಸಂಬಂಧ ಹಳಸಿಹೋಗಿತ್ತು.

ಆ ರೀತಿ ಶಾಸಕರಿಗೆ ಫೋನ್ ಮಾಡಿ ಕೂಡಲೇ ಸಿಎಂ ಮನೆಗೆ ಬರುವಂತೆ ಮಾಡಿದ್ದು ಮುರುಗೇಶ್ ನಿರಾಣಿ, ಉದಾಸಿ, ರೇಣುಕಾಚಾರ್ಯ ಅಥವಾ ಬಿ.ವೈ.ರಾಘವೇಂದ್ರ ಅವರುಗಳಷ್ಟೇ ಆಗಿರಲಿಲ್ಲ. ಯಡಿಯೂರಪ್ಪ ಎಂದರೆ ಅಖಂಡ ಲಿಂಗಾಯಿತ ಸಮಾಜ ಎಂಬ ಸಂದೇಶ ಆ ಹೊತ್ತಿಗೆ ನೀಡಲಾಗಿತ್ತು. ಉಳಿದ ಸಮಯದಲ್ಲಿ ಪ್ರಗತಿಪರ ಚಿಂತನೆಗಳನ್ನು ಹರಡುವ ಲಿಂಗಾಯಿತ ಸ್ವಾಮೀಜಿಗಳೂ ಯಡಿಯೂರಪ್ಪನವರ ವಿಚಾರಕ್ಕೆ ಬಂದಾಗ ಕಟ್ಟಾ ವೀರಶೈವರೇ. ಹಾಗಾಗಿ ಫೋನ್ ಯಾರೇ ಮಾಡಿದರೂ ಅದರ ಹಿಂದೆ ಒಂದಿಡೀ ಪ್ರಬಲ ಸಮುದಾಯವೇ ಇದೆ ಎಂಬ ಸಂದೇಶ ಇರುತ್ತಿತ್ತು. ನಾಡಿನ ಜನರೆಲ್ಲರೂ ಗೌರವಿಸುತ್ತಿದ್ದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಯಡಿಯೂರಪ್ಪನವರನ್ನು ನೋಡಲು ಜೈಲಿಗೇ ಹೋಗಿ ಬಂದರು ಎಂದರೆ ಇದರ ಪ್ರಭಾವವನ್ನು ಅರ್ಥ ಮಾಡಿಕೊಳ್ಳಬೇಕು.

ಮೇಲ್ನೋಟಕ್ಕೆ ಹುಂಬರಂತೆಯೂ, ಮುಂಗೋಪಿಯಂತೆಯೂ ಕಾಣುವ ಯಡಿಯೂರಪ್ಪನವರಲ್ಲಿ ಮತ್ತೊಂದು ಶಕ್ತಿ ಇದೆ. ಹಿಂದೆ ಎಸ್.ಬಂಗಾರಪ್ಪನವರಿಗೂ ಇದ್ದ ವಿಶೇಷ ಅದು. ‘ನಂಬಿದವರನ್ನು ಯಡಿಯೂರಪ್ಪ ಎಂದೂ ಕೈಬಿಡುವುದಿಲ್ಲ’ ಎಂಬ ಖ್ಯಾತಿ ರಾಜಕಾರಣದಲ್ಲಿ ಬಹುವಾಗಿ ಕೈ ಹಿಡಿಯುತ್ತದೆ. ಬಂಗಾರಪ್ಪನವರಿಗೆ ಇರದಿದ್ದ ಇನ್ನೊಂದು ಬಲ ಯಡಿಯೂರಪ್ಪನವರಿಗೆ ಇದೆ. ಅದು ಜಾತಿಬಲ.

ವಚನಾನಂದ ಸ್ವಾಮಿ ಸಾರ್ವಜನಿಕವಾಗಿ ಯಡಿಯೂರಪ್ಪನವರಿಗೆ ಬೆದರಿಕೆ ಒಡ್ಡಿದ್ದು, ಅದರಿಂದ ಅವರು ಮುಜುಗರಕ್ಕೊಳಗಾಗಿದ್ದು ಎಲ್ಲವೂ ನಿಜ. ಆದರೆ, ವಚನಾನಂದ ಹೇಳಿದ ಇನ್ನೊಂದು ಮಾತನ್ನು ಬಹಳಷ್ಟು ಜನರು ಗಮನಿಸಲಿಲ್ಲ. ‘ನಿಮ್ಮ ಮೇಲೆ ಯಾವ ಒತ್ತಡ ಇದೆಯೆಂಬುದು ಮೇಲಿನವರಿಗೂ ಗೊತ್ತಾಗಲಿ ಅಂತ ಈ ಮಾತು ಹೇಳುತ್ತಿದ್ದೇನೆ’. ಲಿಂಗಾಯಿತ ಸಮಾಜದ ಅತ್ಯಂತ ದೊಡ್ಡ ಸಮುದಾಯವಾದ ಪಂಚಮಸಾಲಿಗಳನ್ನು ಯಡಿಯೂರಪ್ಪ ಬಿಡಲು ಹೇಗೆ ಸಾಧ್ಯವಿಲ್ಲವೋ, ಪಂಚಮಸಾಲಿ ಸಮುದಾಯದ ಪಟ್ಟಭದ್ರರೂ ಯಡಿಯೂರಪ್ಪನವರನ್ನು ಬಿಡುವ ಸಾಧ್ಯತೆಯಿಲ್ಲ.

ಇಂತಹ ಧೈರ್ಯ ಇರುವುದರಿಂದಲೇ ವಿಮಾನದಲ್ಲಿ ಫೋನ್ ಫ್ಲೈಟ್‍ಮೋಡ್‍ಗೆ ಹೋಗಿದ್ದರೂ, ಇಷಾರೆಯೊಂದರಿಂದ ಮಿಕ್ಕವರನ್ನು ಮೊಬಿಲೈಸ್ ಮಾಡುವ ಶಕ್ತಿ ಯಡ್ಡಿಗಿದೆ. ಹಾಗಾಗಿಯೇ ಯಡಿಯೂರಪ್ಪನವರು ದಾವೋಸ್‍ಗೆ ವಿಮಾನ ಏರುವ ಮುನ್ನವೇ ಹೈಕಮಾಂಡ್ ಜೊತೆಗೆ ಮುಂದಿನ ಫೈಟ್‍ಗೆ ಮುಹೂರ್ತ ನಿಗದಿ ಮಾಡಿಯೇ ಹೋಗಿದ್ದಾರೆ. ‘ಕರ್ನಾಟಕಕ್ಕೆ ಬಂದಿದ್ದ ಅಮಿತ್‍ಷಾ ಅವರೊಡನೆ ಸಂಪುಟ ವಿಸ್ತರಣೆ ಕುರಿತು ಚರ್ಚಿಸಿದ್ದೇನೆ. ವಾಪಸ್ ಬಂದ ನಂತರ ಎರಡು ದಿನಗಳಲ್ಲೇ ಈ ಕೆಲಸ ಮಾಡುತ್ತೇನೆ’ ಎಂದು ಹೇಳಿದ್ದಾರೆ. ಅತ್ತ ಯಡಿಯೂರಪ್ಪ ದಾವೋಸ್‍ಗೆ ತೆರಳಿದರೆ, ಇತ್ತ ಅರ್ಹರೂ, ಅನರ್ಹರೂ ಜೊತೆಗೂಡಿ ಶಿರಡಿಯ ಕಡೆಗೆ ಪ್ರಯಾಣ ಬೆಳೆಸಿದ್ದಾರೆ.

ಯಡ್ಡಿ ನಿಗದಿ ಮಾಡಿದ ಮುಹೂರ್ತದಲ್ಲಿ ಸಂಪುಟ ಪುನರ್‍ರಚನೆ ಮಾಡುವುದಕ್ಕೆ ಒಪ್ಪಲು ಈಗಿನ ಹೈಕಮಾಂಡ್ ಪಟ್ಟದಲ್ಲಿ ಅಡ್ವಾಣಿ ಕುಳಿತಿಲ್ಲ. ಅಲ್ಲೀಗ ಸ್ವಪಕ್ಷೀಯರನ್ನು ಮಾತ್ರವಲ್ಲದೇ ವಿಪಕ್ಷೀಯರನ್ನೂ ಸದಾ ಬೆದರಿಸಿ ಇಡಬಲ್ಲ ಗುಜರಾತಿನ ಇಬ್ಬರು ಬಲಾಢ್ಯರು ಕೂತಿದ್ದಾರೆ. ಮೋದಿ ಶಾ ಭಾರತದ ವರ್ತಮಾನವನ್ನು ಮಾತ್ರವಲ್ಲದೇ ಭೂತಕಾಲವನ್ನೂ ಬದಲಿಸಲು ಹೊರಟಿದ್ದಾರೆ. ಬಿಜೆಪಿಯೊಳಗೆ ಅವರಿಗೆ ಎದುರಾಡುವ ಯಾವುದೇ ಗುಂಪು ಇರುವುದು ಈ ಹೊತ್ತಿಗಂತೂ ಸಾಧ್ಯವಿಲ್ಲ. ಅವರಿಬ್ಬರ ಜೊತೆಗೆ ಯಡಿಯೂರಪ್ಪನವರ ಅಖಂಡ ವೈರಿ ಬಿ.ಎಲ್.ಸಂತೋಷ್ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪಟ್ಟದಲ್ಲಿದ್ದಾರೆ. ಆ ಹುದ್ದೆ ಪಕ್ಷದ ಸಂಘಟನಾ ಉಸ್ತುವಾರಿ ಮಾಡುವುದಕ್ಕಷ್ಟೇ ಸೀಮಿತವಲ್ಲ. ಹೈಕಮಾಂಡ್ ಮಟ್ಟದಲ್ಲಿ ಆರೆಸ್ಸೆಸ್‍ಗೂ ಪಕ್ಷಕ್ಕೂ ನಡುವಿನ ಕೊಂಡಿ ಎಂದರೆ ಅದೇ ಹುದ್ದೆ.

ಇಷ್ಟಿದ್ದರೂ 17 ಜನ ಅರ್ಹ/ಅನರ್ಹ ಶಾಸಕರ ಶಿರಡಿ ಪ್ರಯಾಣಕ್ಕೆ ಹುಕುಂ ಕೊಟ್ಟು, ವಾಪಸ್ ಬಂದ ಎರಡು ದಿನಗಳಲ್ಲಿ ಕೆಲಸ ಮುಗಿಸುತ್ತೇನೆ ಎಂಬ ಮುಹೂರ್ತ ನಿಗದಿ ಮಾಡಿ ದಾವೋಸ್ ವಿಮಾನ ಹತ್ತುವಷ್ಟು ಶಕ್ತಿ ಯಡಿಯೂರಪ್ಪನವರಿಗೆ ಇರುವುದು ಮೇಲೆ ಹೇಳಲಾದ ಕಾರಣಗಳಿಂದಾಗಿ.

ಅದಲ್ಲದೇ ಇನ್ನೂ ಒಂದು ಕಾರಣವೂ ಇದೆ. ಮೋದಿ ಮತ್ತು ಅಮಿತ್‍ಶಾ ದೆಹಲಿಯಿ ಗದ್ದುಗೆಯೇರಿದ ಮೇಲೆ ಯಾವ ರಾಜ್ಯದಲ್ಲೂ ಬಿಜೆಪಿಯ ವತಿಯಿಂದ ಜನನಾಯಕರಾಗಿ ಬೆಳೆಯಬಲ್ಲವರನ್ನು ಪಟ್ಟಕ್ಕೇರಿಸಲಿಲ್ಲ. ಮರಾಠಾ ಪ್ರಾಬಲ್ಯದ ಮಹಾರಾಷ್ಟ್ರದಲ್ಲಿ ನಾಗಪುರದ ಮಾಜಿ ಮೇಯರ್ ಬ್ರಾಹ್ಮಣ ದೇವೇಂದ್ರ ಫಡ್ನವೀಸರನ್ನು ಕೂರಿಸಿದರು. ಹರಿಯಾಣದಲ್ಲಿ ರಾಜ್ಯದ ಸಾಂಪ್ರದಾಯಿಕ ವೈರಿ ಪಂಜಾಬಿನ ಮೂಲದ ಖಟ್ಟರ್‍ರನ್ನು ಕೂರಿಸಿದರು. ಉತ್ತರ ಪ್ರದೇಶದಲ್ಲಿ ಅದುವರೆಗೆ ಗೋರಖ್‍ಪುರಕ್ಕೆ ಸೀಮಿತವಾಗಿದ್ದ ಯೋಗಿ ಆದಿತ್ಯನಾಥರನ್ನು ಸಿಎಂ ಮಾಡಿದರು. ಜಾರ್ಖಂಡ್‍ನಂತಹ ಆದಿವಾಸಿ ರಾಜ್ಯಕ್ಕೆ ಆದಿವಾಸಿಯೇತರ ಮುಖ್ಯಮಂತ್ರಿಯನ್ನು ತಂದರು. ಮೋದಿಗಿಂತ ಸೀನಿಯರ್‍ಗಳಾಗಿದ್ದ ಮಧ್ಯಪ್ರದೇಶದ ಶಿವರಾಜ್‍ಸಿಂಗ್ ಚೌಹಾಣ್ ಮತ್ತು ರಾಜಸ್ಥಾನದ ವಸುಂಧರಾರಾಜೇ ಸಿಂಧಿಯಾಗಳಿಗೂ ಅವರ ಸ್ಥಾನ ತೋರಿಸಿದರು.

ಯಾವುದಾದರೂ ರಾಜ್ಯದಲ್ಲಿ ಸ್ಥಳೀಯವಾಗಿ ಪ್ರಬಲವಾದ ಜನನಾಯಕನೊಬ್ಬನನ್ನು ಸಿಎಂ ಪಟ್ಟಕ್ಕೆ ತಂದಿದ್ದರೆ ಅದು ಕರ್ನಾಟಕದಲ್ಲಿ ಮಾತ್ರವೇ, ಯಡಿಯೂರಪ್ಪನವರನ್ನು. ಬೇರೆಯವರನ್ನು ಸಿಎಂ ಮಾಡುವುದು ಸಾಧ್ಯವೂ ಇರಲಿಲ್ಲ. ಏಕೆಂದರೆ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸದೇ ಕರ್ನಾಟಕದಲ್ಲಿ ಚುನಾವಣೆಯಲ್ಲಿ ಗೆಲ್ಲವುದೂ ಬಿಜೆಪಿಗೆ ಸಾಧ್ಯವಿರಲಿಲ್ಲ ಮತ್ತು 17 ಜನ ಶಾಸಕರನ್ನು ರಾಜೀನಾಮೆ ಕೊಡಿಸಿ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ನಂತರ ಉಂಟಾದ ಅತಂತ್ರ ಸ್ಥಿತಿಯಲ್ಲಿ ಯಡಿಯೂರಪ್ಪನವರನ್ನು ಪಕ್ಕಕ್ಕೆ ಸರಿಸಲಾಗುತ್ತಿರಲಿಲ್ಲ. ಹಾಗಾಗಿ ಹೈಕಮಾಂಡ್ ಬೇರೊಂದು ದಾರಿಯನ್ನು ಕಂಡುಕೊಂಡಿತು. ಅದು ಸಂಪುಟ ರಚನೆಗೇ ಅವಕಾಶ ಕೊಡದೇ ತಿಂಗಳುಗಟ್ಟಲೆ ಸತಾಯಿಸಿದರು. ಸಂಪುಟ ರಚನೆ ಮಾಡುವಾಗ ಎಲ್ಲರಿಗಿಂತ ಮೊದಲು ಶಾಸಕರೇ ಅಲ್ಲದಿದ್ದ ಲಕ್ಷ್ಮಣ ಸವದಿ ಮತ್ತು ಸೀನಿಯರ್ ಅಲ್ಲದ ಸಿ.ಎನ್.ಅಶ್ವತ್ಥನಾರಾಯಣರ ಹೆಸರು ಇದ್ದ ಪಟ್ಟಿ ಕಳಿಸಿದರು. ಆ ನಂತರ ಗೋವಿಂದ ಕಾರಜೋಳರೊಂದಿಗೆ ಈ ಇಬ್ಬರನ್ನೂ ಡಿಸಿಎಂ ಮಾಡಲು ಸೂಚಿಸಿದರು.

‘ಯಡಿಯೂರಪ್ಪ ನವರನ್ನು ನಂಬಿಕೊಂಡು ಬಂದಿದ್ದ’ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಪಕ್ಷಾಂತರಿಗಳು ಗೆದ್ದು ಬಂದ ಮರುದಿನ ಸಂಪುಟ ವಿಸ್ತರಣೆ ಆಗಬೇಕೆಂದು ಆ ಶಾಸಕರು ಮತ್ತು ಯಡ್ಡಿ ಬಯಸಿದ್ದರು. ಅದಕ್ಕೂ ಹೈಕಮಾಂಡ್ ಅವಕಾಶ ಕೊಡಲಿಲ್ಲ. ಸದ್ಯಕ್ಕೆ ಬಿಜೆಪಿಯ ನೇತಾರರಿಗೆ ಇರುವ ದಾರಿಯೆಂದರೆ ಅದು. ಕಾಯಿಸುವುದು, ಸತಾಯಿಸುವುದು ಮತ್ತು ಕಡೆಗೆ ಒಂದಷ್ಟು ರಾಜಿಗೆ ಯಡಿಯೂರಪ್ಪನವರನ್ನು ಬಗ್ಗಿಸುವುದು. ಗೆದ್ದ ಎಲ್ಲಾ 12 (ಅನರ್ಹ) ಶಾಸಕರಲ್ಲದೇ, ಚುನಾವಣೆಗೆ ನಿಲ್ಲದ ಆರ್.ಶಂಕರ್ ಮತ್ತು ಸೋತ ಇಬ್ಬರಿಗೂ ಮಂತ್ರಿ ಮಾಡಬೇಕೆಂದು ಪಟ್ಟು ಹಿಡಿದಿರುವ ಅವರ ಪಟ್ಟಿಯನ್ನು ಕುಗ್ಗಿಸುವುದು ಹೈಕಮಾಂಡ್ ಇರಾದೆ. ಇದಕ್ಕೆ ಮುಖ್ಯಮಂತ್ರಿ ಒಪ್ಪದೇ ಹೋದರೆ, ‘ಆಯಿತು ದೆಹಲಿಗೆ ಬನ್ನಿ, ಮಾತಾಡೋಣ’ ಎನ್ನುವುದು; ಯಾವಾಗ ಬರಬೇಕು ಎನ್ನುವ ದಿನ ನಿಗದಿ ಮಾಡದೇ ಹತಾಶೆಗೆ ದೂಡುವುದು. ಇದು ಅಮಿತ್‍ಶಾ ಕಂಡುಕೊಂಡಿರುವ ದಾರಿ. ಈಗ ಇನ್ನೂ ಒಂದು ನೆಪವೂ ಅವರಿಗೆ ಸಿಕ್ಕಿದೆ. ಹೊಸ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಬಳಿ ಮಾತನಾಡಿ ಎಂದು ಯಡಿಯೂರಪ್ಪನವರಿಗೆ ಹೇಳಿ ಇನ್ನೊಂದಷ್ಟು ದಿನ ದೂಡಲಾಗುತ್ತಿದೆ. ನಡ್ಡಾ ಚೆಂಡನ್ನು ಮತ್ತೆ ಅಮಿತ್‍ಶಾ ಅಂಗಳಕ್ಕೇ ಎಸೆಯುತ್ತಾರೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ.

ಪ್ರಶ್ನೆಯಿರುವುದು ಯಡಿಯೂರಪ್ಪನವರು ಇದಕ್ಕೆ ಪ್ರತಿಕ್ರಿಯಿಸುವ ರೀತಿ ಏನಾಗಿರಬಹುದು ಎಂದು. ಅದನ್ನೂ ಈಗಾಗಲೇ ಅವರು ತೋರಿಸಿದ್ದಾರೆ. ತುಮಕೂರಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಬಹಿರಂಗವಾಗಿಯೇ ರಾಜ್ಯದ ನೆರೆ ಸಂತ್ರಸ್ತ ಜನರಿಗೆ ಪರಿಹಾರ ನೀಡಲು ಕೇಂದ್ರವಿನ್ನೂ ಅನುದಾನ ನೀಡಿಲ್ಲ ಎಂದು ಹೇಳಿದ್ದು, ಮೋದಿ ಬರುವ ಹಿಂದೆ ಮುಂದೆ ಪಕ್ಕಾ ಬಿಜೆಪಿ ಪತ್ರಿಕೆಗಳಲ್ಲಿ ರಾಜ್ಯಕ್ಕೆ ಅನ್ಯಾಯ ಎಂಬ ಸುದ್ದಿಯೂ, ದೇಶ ಕಗ್ಗತ್ತಲಿನತ್ತ ಸಾಗಿದೆ ಎಂಬ ಲೇಖನವೂ ಪ್ರಕಟವಾಗುವಂಥೆ ನೋಡಿಕೊಂಡಿದ್ದು ಅಕಸ್ಮಾತ್ತಾಗಿ ಅಲ್ಲ. ಹಾಗೆಯೇ ದೆಹಲಿಗೆ ಹೋಗಿ ಮಾತಾಡಬೇಕಿದೆ, ಆದರೆ ಅಮಿತ್‍ಷಾ ಅವರು ನನಗೆ ಸಮಯ ಕೊಟ್ಟಿಲ್ಲ ಎಂದೂ ಉದ್ದೇಶಪೂರ್ವಕವಾಗಿಯೇ ಹೇಳಿದ್ದಾರೆ. ಅಂದರೆ ತನ್ನ ಸ್ಥಾನ ಭದ್ರ ಮಾಡಿಕೊಳ್ಳುತ್ತಲೇ ಮುಂದಕ್ಕೆ ನುಗ್ಗಿ ಹಾಯಲು ಬೇಕಾದ ತಯಾರಿಯನ್ನು ಯಡಿಯೂರಪ್ಪ ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಟ್ಟಾರೆ ಬ್ಯಾಲೆನ್ಸ್‍ಅನ್ನು ಮೀರಿ ಶಿಸ್ತಿನ ಗಡಿ ದಾಟದೇ ತಮ್ಮ ದಾಳಗಳನ್ನು ಉರುಳಿಸುತ್ತಿದ್ದಾರೆ. ಆದರೆ ಮುಂದಿನ ಸಚಿವ ಸಂಪುಟ ವಿಸ್ತರಣೆಯು ಈ ಸಮತೋಲನವನ್ನು ಕದಡುತ್ತದಾ ಇಲ್ಲವಾ ಎಂದು ಗೊತ್ತಾಗಲು ಬಹಳ ದಿನಗಳು ಬೇಕಿಲ್ಲ.

ವಿರೋಧ ಪಕ್ಷದವರನ್ನು ಅಥವಾ ಸ್ವಪಕ್ಷೀಯರನ್ನೇ ಸಿಬಿಐ ಇತ್ಯಾದಿ ಗುಮ್ಮ ತೋರಿಸಿ ಹೆದರಿಸಿದಂತೆ ಯಡಿಯೂರಪ್ಪನವರನ್ನು ಬೆದರಿಸುವುದು ಸುಲಭವಲ್ಲ. ಯಡಿಯೂರಪ್ಪನವರ ಮೇಲೆ ಪೆಂಡಿಂಗ್ ಕೇಸುಗಳಿಲ್ಲ ಎಂದಲ್ಲ. ಹಳೇ ಕೇಸುಗಳನ್ನು ಕೆದಕುವುದೂ ಕಷ್ಟವಲ್ಲ. ಆದರೆ, ಅವುಗಳನ್ನು ಇಟ್ಟುಕೊಂಡು ಯಡಿಯೂರಪ್ಪನವರನ್ನು ಬ್ಲ್ಯಾಕ್‍ಮೇಲ್ ಮಾಡುವುದು ಮಾತ್ರ ಕಷ್ಟ. ಸಿಬಿಐ, ಇಡಿ ಇತ್ಯಾದಿಗಳೆಲ್ಲವೂ ಇರುವುದು ವಿರೋಧಪಕ್ಷದವರನ್ನು ಬ್ಲ್ಯಾಕ್‍ಮೇಲ್ ಮಾಡಲು ಎಂಬುದು ಈಗಿನ ಅಲಿಖಿತ ನಿಯಮ. ಆ ಸಂಬಂಧ ಎಲ್ಲ ಲಜ್ಜೆಯನ್ನು ಬಿಜೆಪಿ ಪಕ್ಕಕ್ಕಿಟ್ಟುಬಿಟ್ಟಿದೆ. ಅದನ್ನು ಮೀರಿ ತಮ್ಮದೇ ಪಕ್ಷದ ಮುಖ್ಯಮಂತ್ರಿಯೊಬ್ಬರ ವಿರುದ್ಧ ದಾಳ ಉರುಳಿಸಿದರೆ ಅವರು ಎದುರಿಸಬೇಕಾಗುವುದು ಯಡಿಯೂರಪ್ಪನವರನ್ನಷ್ಟೇ ಅಲ್ಲ; ಅವರ ಹಿಂದೆ ನಿಂತಿದೆ ಎಂದು ಕಾಣುತ್ತಿರುವ ಕರ್ನಾಟಕದ ಬಲಾಢ್ಯ ಸಮುದಾಯವನ್ನು.

ಜಾತಿಯೊಂದು ಈ ರೀತಿ ತಮ್ಮ ಸಮುದಾಯದ ವ್ಯಕ್ತಿಯೊಬ್ಬರ ಹಿಂದೆ ನಿಲ್ಲುವುದು ದುರಂತವೇ ಸರಿ. ಆದರೆ ಅದೇ ಇಂದಿನ ವಾಸ್ತವ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here