ಉದ್ಯೋಗಿಗಳ ಶೋಷಣೆ ಮಾಡುತ್ತಿದೆಯೇ ಮಂಗಳೂರಿನ “ಝೊಮೆಟೊ”?

ಆರಂಭದಲ್ಲಿ ಉತ್ತಮ ಉದ್ಯೋಗದಾತನಾಗಿ ಕಂಡಿದ್ದ ಈ ಕಂಪನಿ ಈಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಬೇಕು. ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಗ್ರಾಹಕರೂ ಕೂಡ ನಮಗೆ ಆಹಾರ ತಲುಪಿಸುವ ಉದ್ಯೋಗಿಗಳ ಪರ ದನಿ ಎತ್ತಬೇಕಿದೆ.

ಮನೆ ಮನೆಗೆ ಆಹಾರ ಪೂರೈಕೆಯ ಕಂಪನಿಗಳಾದ ಸ್ವಿಗ್ಗಿ, ಝೊಮೆಟೊ ಮತ್ತು ಉಬರ್‌ ಈಟ್ಸ್‌ ದೇಶಾದ್ಯಂತ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಿವೆ. ಜೊತೆಗೆ ಕುಳಿತಲ್ಲಿಗೆ ಬಯಸಿದ ಆಹಾರ ಸಿಗುವುದರಿಂದ ಗ್ರಾಹಕರು ಸಹ ಖುಷಿಗೊಂಡಿದ್ದರು. ಆರಂಭದಲ್ಲಿ ಉತ್ತಮ ಸೇವೆ ನೀಡಿದ್ದರಿಂದ ಗ್ರಾಹಕರು ಮತ್ತು ಉದ್ಯೋಗಿಗಳು ಇಬ್ಬರೂ ಸಂಭ್ರಮಪಟ್ಟಿದ್ದು ಸುಳ್ಳಲ್ಲ. ಆದರೆ ಬರುಬರುತ್ತಾ ಈ ಕಂಪನಿಗಳು ಲಾಭದ ದಾಹಕ್ಕೆ ಬಿದ್ದು ಉದ್ಯೋಗಿಗಳನ್ನು ಕಡೆಗಣಿಸುತ್ತಿದ್ದಾರೆ, ಅವರ ಶೋಷಣೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ತಮ್ಮ ಮೇಲಿನ ಶೋಷಣೆಯ ವಿರುದ್ಧ ಪ್ರತಿಭಟಿಸಲು ಉದ್ಯೋಗಿಗಳು ಹಿಂದೇಟು ಹಾಕುತ್ತಾರೆ. ಅದಕ್ಕೆ ಮೊದಲ ಕಾರಣ ಅವರನ್ನು ನೇಮಿಸಿಕೊಳ್ಳುವಾಗಲೇ ಉದ್ಯೋಗಿಗಳು ಅಥವಾ ಕಾರ್ಮಿಕರು ಎಂದು ಕರೆಯದೇ ಪಾಲುದಾರರು (ಪಾರ್ಟನರ್‍ಸ್‌) ಎಂದು ನೇಮಿಸಿಕೊಳ್ಳಲಾಗುತ್ತದೆ. ಹಾಗಾಗಿ ಹೋರಾಟ ಮಾಡುವುದು ಅವರ ಹಕ್ಕಾಗಿರುವುದಿಲ್ಲ ಎಂದು ಬೆದರಿಸಲಾಗುತ್ತದೆ.

ದೊಡ್ಡ ದೊಡ್ಡ ಕಂಪೆನಿಗಳಿಗೆ ತನ್ನ ಉದ್ಯೋಗಿಗಳೆಂದರೆ ಯಾವತ್ತಿಗೂ ಅಷ್ಟಕ್ಕಷ್ಟೇ. ಉದ್ಯೋಗಿಗಳ ಅಳಲನ್ನು ಅವು ಕೇಳುವುದೇ ಇಲ್ಲ. ತನ್ನ ಉದ್ಯೋಗಿಗಳನ್ನು ಆದಷ್ಟು ದುಡಿಸಿ ತನ್ನ ಜೇಬನ್ನು ತುಂಬಿಕೊಳ್ಳುವ ಆಲೋಚನೆಯನ್ನೇ ಹೆಚ್ಚಿನ ಕಂಪೆನಿಗಳು ಹೊಂದಿವೆ. ದಿನವಿಡೀ ದುಡಿದರೂ ತನ್ನ ಕುಟುಂಬದ ಹೊಟ್ಟೆಗೆ ಆಹಾರ ನೀಡುವಷ್ಟು ಹಣ ಉಳಿಯುವುದಿಲ್ಲ ಎಂದರೆ ಅಂತಹ ಉದ್ಯೋಗಿಗಳ ಪಾಡನ್ನು ನೀವೇ ಆಲೋಚಿಸಿ. ಇಂತಹುದೇ ಆರೋಪದಲ್ಲಿ ಆಹಾರ ಪೂರೈಕೆಯ ದಿಗ್ಗಜ ಎನಿಸಿಕೊಂಡ “ಝೊಮೆಟೊ” ಸಿಲುಕಿಕೊಂಡಿದೆ. ಉದ್ಯೋಗಿಗಳು ರಕ್ತ ಬಸಿದು ದುಡಿದರೂ ಅವರಿಗೆ ನ್ಯಾಯಯುತ ಪಾಲನ್ನು ಕಂಪೆನಿ ನೀಡದೆ ಅನ್ಯಾಯ ಮಾಡುತ್ತಿದೆ ಎಂಬ ಆರೋಪ ದಟ್ಟವಾಗಿ ಕೇಳಿಬಂದಿದೆ.

ಮೋಸ ಎಲ್ಲಿ?

ಈ ಮೊದಲು ಒಂದು ಆರ್ಡರ್‌ಗೆ 35 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 10ರೂ ಕೊಡಲಾಗುತ್ತಿತ್ತು. ಆನಂತರ ಒಂದು ಆರ್ಡರ್‌ಗೆ 30 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 10ರೂ ಇತ್ತು. ಈಗ ಒಂದು ಆರ್ಡರ್‌ಗೆ 20 ರೂಗಳು ಮತ್ತು ಉತ್ತಮ ರೇಟಿಂಗ್‌ಗೆ 5 ರೂ ಇಳಿಸಲಾಗಿದೆ. ಮಾರ್ಚ್‌ನಿಂದ ಆರ್ಡರ್‌ವೊಂದಕ್ಕೆ 16ರೂಗಿಳಿಸಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.

ಮೊದಲು 10 ಆರ್ಡರ್‌ಗಳನ್ನು ಪೂರೈಸಿದರೆ 200-300ರೂ ಇನ್ಸೆಂಟೀವ್‌ ಸಿಗುತ್ತಿತ್ತು. ಈಗ ಅಷ್ಟು ಸಿಗಬೇಕಾದರೆ ದಿನಕ್ಕೆ 20 ಆರ್ಡರ್‌ಗಳನ್ನು ಪೂರೈಸಬೇಕು ಮತ್ತು ಕನಿಷ್ಠ ದಿನದಲ್ಲಿ 10:30 ಗಂಟೆಗಳ ಕಾಲ ಆನ್‌ಲೈನ್‌‌ನಲ್ಲಿ ಇರಬೇಕು ಎಂಬ ನಿಯಮ ಹೇರಲಾಗಿದೆ.

ಈ ಮೊದಲ 160 ಗಂಟೆಗಳು ಕೆಲಸ ನಿರ್ವಹಿಸಿದ್ದರೆ ಕೊಡುತ್ತಿದ್ದ ಇನ್ಸೆಂಟೀವ್‌ ಅನ್ನು ಈಗ 190 ಗಂಟೆಗಳಿಗೆ ಏರಿಸಲಾಗಿದೆ.

ಸ್ವಿಗ್ಗಿ ಕಂಪನಿ
ಝೊಮೆಟೊ

ಒಟ್ಟಾರೆ ದಿನೇ ದಿನೇ ಉದ್ಯೋಗಿಗಳಿಗೆ ಸಿಗುತ್ತಿದ್ದ ಹಣದಲ್ಲಿ ಕಡಿತವಾಗುತ್ತಿದೆ. ಮೊದಲು ಒಂದೇ ರೆಸ್ಟೋರೆಂಟ್‌ನಿಂದ ಆಹಾರ ತೆಗೆದುಕೊಂಡು ಹೋಗುತ್ತಿದ್ದವರು ಈಗ ಒಂದೇ ಆರ್ಡರ್‌ಗೆ ಎರಡು ರೆಸ್ಟೋರೆಂಟ್‌ಗಳಿಂದ ತೆಗೆದುಕೊಂಡುಹೋಗಬೇಕಾಗಿದೆ. ಪೆಟ್ರೊಲ್‌ ಖರ್ಚು ಕಳೆದು ದಿನಕ್ಕೆ 500 ರೂ ಉಳಿಸಿ ತಿಂಗಳಿಗೆ 15000 ರೂ ಸಂಪಾದಿಸುತ್ತಿದ್ದ ಉದ್ಯೋಗಿಗಳು ಈಗ ತಿಂಗಳಿಗೆ 10000 ಉಳಿಸುವುದೇ ಕಷ್ಟ ಎನ್ನುತ್ತಿದ್ದಾರೆ. ಮೊದಲು ಪಾರ್ಟ್ ಟೈಂ ಆಗಿ ಕೆಲಸ ಮಾಡುತ್ತಿದ್ದವರಿಗೆ ಈಗ ಹೊಸ ನಿಯಮಗಳ ಬಳಿಕ ಅವಕಾಶವೇ ಇಲ್ಲದಂತಾಗಿದೆ.

ಮಂಗಳೂರಿನ ಝೊಮೆಟೊ ಸಂಸ್ಥೆಯಲ್ಲಿನ ಡೆಲಿವರಿ ಬಾಯ್‌ಗಳು ಕಳೆದ ಮೂರು ದಿನದಿಂದ ಕೆಲಸಕ್ಕೆ  ಹೋಗದೆ ತನ್ನ ಕಂಪೆನಿಯ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪೆನಿ ತಮ್ಮ ಬೆವರಿನ ಪಾಲನ್ನು ನೀಡುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ‌. ಆದರೂ ಕಂಪೆನಿಯು ಅವರನ್ನು ಮಾತನಾಡಿಸದೇ ಕೆಲಸದಿಂದ ಕಿತ್ತೊಗೆಯುವ ಬೆದರಿಕೆಯ ಜೊತೆಗೆ, ತಮ್ಮ ವಿರುದ್ಧ ಮಾತನಾಡಿದ ಉದ್ಯೋಗಿಗಳಿಗೆ ಆರ್ಡರ್ ಸಿಗದಂತೆ ಅವರ ಮೊಬೈಲನ್ನು ಬ್ಲಾಕ್ ಮಾಡಿದೆ ಎಂಬ ಆರೋಪಗಳಿವೆ.

ವರ್ಷಗಳಿಂದಲೂ ಝೊಮೆಟೊ ಸಂಸ್ಥೆಯಲ್ಲಿ ದುಡಿಯುತ್ತಿರುವ ಹೆಸರು ಹೇಳಲು ಇಚ್ಚಿಸದ ಉದ್ಯೋಗಿಯೊಬ್ಬರ ಪ್ರಕಾರ “ನಾವು ಕಳೆದ ಮೂರು ದಿನದಿಂದ ಸುಮಾರು ಇನ್ನೂರರಷ್ಟು ಉದ್ಯೋಗಿಗಳು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ ಕಂಪೆನಿಯು ಸೌಜನ್ಯಕ್ಕಾದರೂ ನಮ್ಮೊಂದಿಗೆ ಮಾತುಕತೆ ನಡೆಸುತ್ತಿಲ್ಲ. ಅವರ ವಿರುದ್ಧ ಮಾತಾನಾಡಿದ ಸುಮಾರು ಆರು ಜನರ ಮೊಬೈಲಿನ ಆರ್ಡರನ್ನು ಕಂಪೆನಿ ಬ್ಲಾಕ್ ಮಾಡಿದೆ. ಕಳೆದ ಒಂದು ವರ್ಷದಿಂದ ಈ ಕಂಪೆನಿಯಲ್ಲಿ ದುಡಿಯುತ್ತಾ ಇದ್ದೇವೆ. ಈಗ ಸತತವಾಗಿ ನಮ್ಮ ‌ದುಡಿಮೆಯ ಹಣವನ್ನು ಇಳಿಕೆ ಮಾಡುತ್ತಿದ್ದಾರೆ. ಈಗಲೇ ನೋಡಿ ಎಂಟು ಗಂಟೆಯಿಂದ ಕರ್ತವ್ಯದಲ್ಲಿ ಇದ್ದೇನೆ ಆದರೂ ನೂರೈವತ್ತು ರುಪಾಯಿಗಳ ದುಡಿಮೆಯೂ ಆಗಿಲ್ಲ” ಎಂದು ಅಳಲು ತೋಡಿಕೊಂಡರು.

ಅವರ ದುಡಿಮೆಯನ್ನು ತಿಳಿಸುವ ಸ್ಕ್ರೀನ್‌ ಶಾಟ್‌ ಹೀಗಿದೆ.

ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಉದ್ಯೋಗಿ “ಝೊಮೆಟೊ ಕಂಪೆನಿಯು ಸತತವಾಗಿ ರೇಟ್ ಕಾರ್ಡ್ ಇಳಿಸುತ್ತಿದೆ. ಹಿಂದೆಯೆಲ್ಲ ಒಂದು ಆರ್ಡರ್ ಸುಮಾರು ಇಪ್ಪತ್ತು ‌ನಿಮಿಷದಲ್ಲಿ ಮುಗಿಯುತ್ತಿತ್ತು. ಈಗ ಕಂಪನಿಯೂ ಎರೆಡೆರೆಡು ರೆಸ್ಟೊರೆಂಟಿನ ಆರ್ಡರ್ ನೀಡುತ್ತಿದೆ. ಇದರಿಂದ ಒಂದು ಆರ್ಡರ್‌ನ ಆಹಾರವನ್ನು ತಲುಪಿಸಲು ಸುಮಾರು ಒಂದರಿಂದ ಒಂದುವರೆ ಗಂಟೆಗಳು ತಗುಲುತ್ತದೆ. ಅಲ್ಲದೆ ಹಿಂದೆಯೆಲ್ಲ ನಮ್ಮ ಟಾರ್ಗೆಟ್‌ ಮುಗಿಸಿ ಯಾವಾಗ ಬೇಕಾದರೂ ನಾವು ಮನೆಗೆ ಹೋಗಬಹುದಾಗಿತ್ತು. ಆದರೆ ಈಗ ರಾತ್ರಿ ಹತ್ತರಿಂದ ಹನ್ನೊಂದು ಗಂಟೆಯವರೆಗೂ ಕೆಲಸ ನಿರ್ವಹಿಸಬೇಕು ಇಲ್ಲವೆಂದರೆ ನಮ್ಮ ಇನ್ಸೆಂಟಿವ್ ಕಡಿತಗೊಳಿಸುತ್ತಾರೆ” ಎಂದು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಮಂಗಳೂರಿನ ಝೊಮೆಟೊ ಕಛೇರಿಯ ಮೇಲ್ವಿಚಾರಕರಾದ ಹರಿ ಪ್ರಸಾದ್ ಅವರನ್ನು ನಾನುಗೌರಿ.ಕಾಂ ವತಿಯಿಂದ ಸಂಪರ್ಕಿಸಿಲು ಪ್ರಯತ್ನಿಸಿತು. ಆದರೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಮತ್ತೊಬ್ಬ ಮೇಲ್ವಿಚಾರಕರಾದ ಸಿರಾಜ್ ಅವರನ್ನು ಸಂಪರ್ಕಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.

ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸುವುದರಲ್ಲಿ ತಳಮಟ್ಟದ ಉದ್ಯೋಗಿಗಳ ಕೊಡುಗೆ ಮಹತ್ತದ್ದೇ ಆಗಿದೆ. ಕಂಪೆನಿಯು ಏಕಾಏಕಿ ಸತತವಾಗಿ ತಮ್ಮ ರೇಟ್ ಕಾರ್ಡನ್ನು ಇಳಿಕೆ ಮಾಡಿದುದರ ಫಲವಾಗಿ ಉದ್ಯೋಗಿಗಳು ಕಂಗಾಲಾಗಿದ್ದಾರೆ. ರಾತ್ರಿ ಹತ್ತು ಗಂಟೆಯವರೆಗೂ ದುಡಿದರೂ ದುಡಿಮೆಗೆ ಸರಿಯಾದ ಪ್ರತಿಫಲ ಸಿಗುತ್ತಿಲ್ಲ. ಹೊಸ ಉದ್ಯೋಗಿಗಳನ್ನು ಇಟ್ಟು ಅವರನ್ನು ಬೆದರಿಸುತ್ತಾ ದುಡಿಸುತ್ತಿದ್ದಾರೆ ಹಾಗಾಗಿ ನಮ್ಮ ಧ್ವನಿ ಅವರಿಗೆ ಕೇಳುತ್ತಿಲ್ಲ ಎಂದು ಉದ್ಯೋಗಿಗಳು ಆರೋಪಿಸುತ್ತಿದ್ದಾರೆ. ಉದ್ಯೋಗಿಗಳ ಮನವಿಯನ್ನು ಕೇಳದ ಝೊಮೆಟೊ ಸಂಸ್ಥೆಯ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಸುವ ಬಗ್ಗೆ ಆಲೋಚಿಸುತ್ತಿರುವುದಾಗಿ ಉದ್ಯೋಗಿಗಳು ತಿಳಿಸಿದ್ದಾರೆ.

ಆದರೆ ಪ್ರತಿಭಟನೆಗೆ ಮುಂದಾದರೆ ಝೊಮೆಟೊ ಕಂಪನಿಯು ಪೊಲೀಸ್‌ ಕೇಸ್‌ ಹಾಕುವ ಬೆದರಿಕೆಯೊಡ್ಡಿದೆ. ಇದು ಕೇವಲ ಮಂಗಳೂರಿನ ಕಥೆ ಮಾತ್ರ ಅಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಈ ಶೋಷಣೆ ಮುಂದುವರೆಯುತ್ತಿದೆ. ಆರಂಭದಲ್ಲಿ ಉತ್ತಮ ಉದ್ಯೋಗದಾತನಾಗಿ ಕಂಡಿದ್ದ ಈ ಕಂಪನಿ ಈಗ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಬೇಕು. ಖುಷಿಯಿಂದ ಹೊಟ್ಟೆ ತುಂಬಿಸಿಕೊಳ್ಳುವ ಗ್ರಾಹಕರೂ ಕೂಡ ನಮಗೆ ಆಹಾರ ತಲುಪಿಸುವ ಉದ್ಯೋಗಿಗಳ ಪರ ದನಿ ಎತ್ತಬೇಕಿದೆ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here