Homeಅಂಕಣಗಳುಚೋಮನ ಮಕ್ಕಳು ನಾವುಗಳು

ಚೋಮನ ಮಕ್ಕಳು ನಾವುಗಳು

- Advertisement -
- Advertisement -

ಮೊನ್ನೆ ಮಧ್ಯಾನ್ನ ಅದೇ ತಾನೇ ಕ್ಲಾಸ್‍ಗಳು ಮುಗಿದು ಸ್ಟಾಫ್ ರೂಂನಲ್ಲಿದ್ದೆ. ನನ್ನ ಸಹೋದ್ಯೋಗಿಯೊಬ್ಬರು ದಡಬಡಾಯಿಸಿಕೊಂಡು ಬಂದರು- ಮೇಡಂ ಸ್ವಲ್ಪ ಬನ್ನಿ. ಸ್ಟೂಡೆಂಟ್ಸ್‍ನ್ನ ಒಂದು ತಾಸು ಕೂರಿಸಿ, ಎಸ್.ಸಿ., ಎಸ್.ಟಿ. ಸೆಲ್ ಮೀಟಿಂಗು. ಪ್ರಿನ್ಸಿಪಾಲರು, ಗೆಸ್ಟ್ ಲೆಕ್ಚರರ್ಸ್ ಅಪಾಯಂಟ್‍ಮೆಂಟ್‍ನಲ್ಲಿ ಬ್ಯುಸಿ. ಅವರು ಬರೋವರ್ಗೂ ಹುಡುಗ್ರನ್ನ ಹಿಡಿದಿಡಬೇಕು… ಅಂತ. ಏನು ಎತ್ತ ಅಂತ ತಿಳಿದುಕೊಳ್ಳುವ ಪ್ರಯತ್ನದಲ್ಲಿಯೇ ಮೀಟಿಂಗ್ ಹಾಲ್‍ನೊಳಗೆ ಹೋಗಿಯಾಗಿತ್ತು. ಓಹ್! ಇವರ ಮುದ್ದು ಕಂಗಳಿಗೆ ಒಂದಿಷ್ಟು ಪ್ರಯತ್ನಶೀಲತೆಯ ಬೆಳಕು ಹಾಯಿಸಬೇಕು ಅನ್ನಿಸಿತ್ತು. ಅಂಬೇಡ್ಕರ್‍ಅವರ ಬದುಕಿನ ಪುಟಗಳನ್ನು ನಿಧಾನ ತೆರೆಯುತ್ತ; ನನ್ನೊಳಗೆ ಹಿಡಿದಿಟ್ಟುಕೊಂಡಿದ್ದ ಜ್ಯೋತಿಬಾ ಫುಲೆ- ಸಾವಿತ್ರಿಬಾಯಿ ಫುಲೆಯವರನ್ನು ಕಾಣಿಸುತ್ತ; ನಮ್ಮ ಮಕ್ಕಳು ಮಾಡಬೇಕಾದುದೇನು ಎಂಬ ಚರ್ಚೆಗೆ ಬಂದೆ. ಹಸಿದ ಹೊಟ್ಟೆಯಲ್ಲೂ ವಿದ್ಯಾರ್ಥಿಗಳು ತೀವ್ರವಾಗಿ ಸಂವಾದದಲ್ಲಿ ಪಾಲ್ಗೊಂಡರು. ಮಕ್ಕಳೊಂದಿಗಿನ ಸಂವಾದ ಇಷ್ಟೊಂದು ಸೊಗಸಾಗಿರುತ್ತದೆಯೇ? ಬೆರಗೆನ್ನಿಸಿತ್ತು.“ನನ್ನೂರ ದಲಿತನೊಬ್ಬ ಮಾಸ್ತರ ಆದ ದಿನ ತಲೆಗೆ ಮುಂಡಾಸ ಸುತ್ತಿಕೊಳ್ಳುತ್ತೇನೆ” ಅಂತ ಆಣೆಹಾಕಿಕೊಂಡು ಶತಪ್ರಯತ್ನ ಮಾಡಿ ಅದು ಈಡೇರಿದಾಗ ಊರಿಗೇ ಊಟ ಹಾಕಿಸಿದ್ದ ನನ್ನಜ್ಜ ನನ್ನೊಳಗೆ ಕುಳಿತು ನೋಡುತ್ತಿದ್ದಾನೆ ಅನ್ನಿಸೋ ಮುದ. ವಿದ್ಯಾರ್ಥಿಗಳಿಗೆ- ‘ನಿಮ್ಮ ಅನುಭವಗಳೇನು? ಅಪಮಾನ, ನೋವು, ಜಾತಿಯ ಕಾರಣಕ್ಕೆ ಮನಸ್ಸು ಮುದುಡುವ ಸಂದರ್ಭಗಳು ಎದುರಾಗಿತ್ತೇ? ಬನ್ನಿ ಮಾತಾಡಿ ನಿಮ್ಮ ಅನುಭವ ಇನ್ನೊಬ್ಬರಿಗೆ ದಾರಿಯ ಹೊಳಹಾಗಬಲ್ಲದು…’ ಎಂದು ಒತ್ತಾಯಿಸಿದೆ. ಕಳೆದ ಬಾಳನ್ನು ವ್ಯವಧಾನದಿಂದ ಮರುಪರೀಕ್ಷಿಸಿಕೊಳ್ಳುವ ರೂಢಿಯಾಗಲಿ, ಪುರುಸೊತ್ತಾಗಲೀ, ಇಲ್ಲದ ಮಕ್ಕಳು ತಕ್ಷಣಕ್ಕೇನೂ ಏಳಲಿಲ್ಲ. ಆದರೆ ತಮ್ಮ ಬಾಳ ಪುಟಗಳನ್ನು ಮುಗುಚಿ ನೋಡಿಕೊಳ್ಳುತ್ತಿರುವ ಸಣ್ಣಕಂಪನದ ಅಲೆಯಂತೂ ಎದ್ದಿತ್ತು. ಕೊನೆಗೂ ಹುಡುಗಿಯೊಬ್ಬಳು ಎದ್ದು ಬಂದಳು. ಅವಳ ಪ್ರಾಥಮಿಕ ಶಾಲೆಯ ದಿನಗಳಲ್ಲಿ ಕ್ಲಾಸ್‍ಟೀಚರೊಬ್ಬರು ಪದೇಪದೇ ಕೆಳಜಾತಿಯವಳೆಂದು ಅಪಮಾನಿಸುತ್ತಿದ್ದುದು, ಕೈಯಿಂದ ನೋಟ್‍ಬುಕ್ಕ್‍ನ್ನು ತಗೊಳ್ಳದೆ ‘ಅಲ್ಲಿಡು’ ಎನ್ನುತ್ತಿದ್ದುದು, ಶಾಲೆಯ ಆವರಣದಲ್ಲಿ ಏನಾದರೂ ಹೊಲಸು ಎತ್ತುವ ಕೆಲಸ ಬಂದರೆ ‘ನೀ ಹೋಗು, ತೆಗೆದು ಬಾ’ ಎಂದು ಒರಟಾಗಿ ಕಳಿಸುತ್ತಿದ್ದುದನ್ನು ನೆನಪಿಸಿಕೊಂಡಳು. ಅವರು ಗಣಿತ ಕಲಿಸುತ್ತಿದ್ದರಂತೆ. ಅವರ ಕಾರಣಕ್ಕಾಗಿಯೇನೋ ಇವಳಿಗೆ ಎಂದೂ ಗಣಿತ ತಲೆಗೆ ಹತ್ತಲಿಲ್ಲವಂತೆ. ಅವಳು ಹೇಳುತ್ತಿರುವ ಬಗೆಯಲ್ಲಿ- ಆ ಶಾಲೆಯಂಗಳದಲ್ಲಿ ಅಕಾರಣ ಅಪಮಾನದ ಶಿಕ್ಷೆಯ ದಾವೆ ಹಿಡಿದು ಅಲೆಯುತ್ತಿರುವವಳ ಹಾಗಿತ್ತು.
ಇನ್ನೊಬ್ಬ ವಿದ್ಯಾರ್ಥಿ- ಪುಟ್ಟದೊಂದು ಹಳ್ಳಿಯಿಂದ ಬರುತ್ತಿದ್ದ. ಆ ಹಳ್ಳಿಗೆ ಈಗಲೂ ದಿನಕ್ಕೆರಡೇ ಬಸ್ಸು. ಮನೆಯಲ್ಲಿ ಅಸಾಧ್ಯ ಬಡತನ. ಅವ್ವ ಕೂಲಿಯಾಳು. ಮನೆಗೆ ಬಂದ ಸಂಜೆ ಇವನ ಕೈಯಲ್ಲೊಂದು ಲೋಟ ಕೊಟ್ಟು ಗೌಡರ ಮನೆಗೆ ಓಡಿಸುತ್ತಿದ್ದಳಂತೆ. ಅವರು ನಿನ್ನೆಯ ಸಾರೋ ಪಲ್ಯವೋ ಉಳಿದಿದ್ದನ್ನು ಕೊಡುತ್ತಿದ್ದರಂತೆ. ಈಗಲೂ ಸಂಜೆಯಾದರೆ ಸಾರು ಇಸಕಂಬರೋದಿದೆ ಅನ್ನಿಸುವಷ್ಟು ಅವನ ಕಾಲುಗಳಿಗೆ ಅಭ್ಯಾಸ ಬಿದ್ದಿದ್ದಂತೆ. ಇವನು ಹೋಗುತ್ತಿದ್ದುದು ಅವ್ವ ಕಳಿಸುತ್ತಾಳಲ್ಲ ಎಂಬ ಕಾರಣಕ್ಕೇನೂ ಅಲ್ಲವಂತೆ. ಗೌಡರ ಮನೆಯ ಸಾರಿನ ಪರಿಮಳದ ಹಾದಿ ಒಯ್ಯುತ್ತಿತ್ತಂತೆ. ಇವನಿನ್ನೂ ಕನ್ನಡ ಶಾಲೆ ಕಲೀತಿದ್ದಾಗಲೇ ಗೌಡ ಸತ್ತು, ಅವನ ಮಗ ಗೌಡಿಕೆಗೆ ಬಂದನಂತೆ. ಅವನು ಬಂದಮೇಲೆ ಬಹಳ ದಿನವೇನೂ ಇದು ನಡೀಲಿಲ್ಲ. “ಅವ್ವ ಕಳಸ್ಯಾಳ? ಬಂದ್ಯಾ ಲೋಟ ಬಡ್ಕೋತಾ. ನಿಮಗ್ಯಾವ ಅವ್ವ-ಅಪ್ಪ? ಸರ್ಕಾರಿ ಮಕ್ಕಳ್ರೋ ನೀವು. ಹೋಗ್ ಹೋಗ್ ಉಚ್ಚೀ ಕುಡೀ ಹೋಗ್” ಎಂದು ದಬಾಯಿಸಿದ್ದನಂತೆ. ಹಿಂದಿನಿಂದ ‘ಬಂದ್ಬಿಟ್ಟಾ ಹೊಲ್ಯಾ..‘ ಎಂಬ ಬಯ್ಗಳ. ತಲೆದಾಟಿ ಬೆಳೆದು ನಿಂತ ಹುಡುಗ, ಹುಡುಗಿಯರೂ ಇರುವ ಹಾಲ್‍ನಲ್ಲಿ; ಇದೀಗ ಆ ಮಾತು ಕೇಳಿಸಿಕೊಳ್ಳುತ್ತಿದ್ದನೇನೋ ಅನ್ನಿಸುವಂತೆ ಮಿಡುಕುತ್ತ ಕಣ್ಣೊರೆಸಿಕೊಂಡಾಗ, ನಮ್ಮೆಲ್ಲರ ಮನಸ್ಸು ತೊಪ್ಪನೆತೊಯ್ದು ಹೋಗಿತ್ತು. ಅಳುವುದು ಅಪಮಾನವಲ್ಲ ಅನ್ನಿಸಿದ ಕ್ಷಣ ಅದು.
ಅಲ್ಲಿ ಆ ಮೂಲೆಯಲ್ಲಿ ಕೂತಿದ್ದ ಮೊದಲ ವರ್ಷದ ಹುಡುಗನೊಬ್ಬ ತನ್ನ ಇತ್ತ ಕೂತ ಹುಡುಗರನ್ನೂ ಅತ್ತತ್ತ ಕೂತಿದ್ದ ಹುಡುಗಿಯರನ್ನೂ ಏನೋ ಒತ್ತಾಯಿಸುತ್ತಿದ್ದ. ಅವನಿಗೆ ಮಾತು ಸರಿಯಾಗಿ ಆಡಲಾಗುತ್ತಿರಲಿಲ್ಲ. ತೊದಲು ಅಂತ ಗೊತ್ತಿತ್ತು. ‘ಬಾ ನೀನೇ ಮಾತಾಡು’ ಎನ್ನಲಾಗಲಿಲ್ಲ. ಕಡೆಗೂ ಅವನ ಒತ್ತಾಯಕ್ಕೆ ಮಣಿದು ಎಂಬಂತೆ ಇಬ್ಬರು ಹುಡುಗಿಯರು ಮುಂದೆ ಬಂದರು. ಒಬ್ಬಳು ಮರೆತರೆ, ತಡವರಿಸಿದರೆ ಇನ್ನೊಬ್ಬಳು ಸಪೋರ್ಟಿಗೆ ಅಂತೆ. ವಿದ್ಯಾರ್ಥಿಗಳೊಂದಿಗಿನ ಅಸಾಂಪ್ರದಾಯಿಕ ಹರಟೆ ಗೋಷ್ಠಿಗೆ ಇರುವ ತ್ರಾಣಕ್ಕೆ ನಾನು ಅವಾಕ್ಕಾಗಿದ್ದೆ. ಇವಳು ಮಾತು ಶುರು ಮಾಡುವ ಮೊದಲು, ಯಾರೂ ತಪ್ಪು ತಿಳೀಬಾರ್ದು. ನಾನು ಟೀಚರ್ಸ್ ಬಗ್ಗೆ ಮಾತಾಡ್ತಾ ಇದೀನಿ. ಪಿಯುಸಿ ಕಾಲೇಜಿನಲ್ಲಿ ನಾವು ಕ್ಲಾಸ್‍ರೂಮಿನಿಂದ ಕಣ್ಣೀರು ಕಟ್ಟಿಕೊಂಡು ಮನೆಗೆ ಹೋಗಿ ಬಿಕ್ಕುತಿದ್ವಿ- ಅಂತ ಪೀಠಿಕೆ ಹಾಕಿದಳು. ಒಂದು ನಿರ್ದಿಷ್ಟ ಕಾಲೇಜಿನಿಂದ ಬಂದಿದ್ದ ಈ ಮಕ್ಕಳು ತಮಗೆ ಪಾಠ ಮಾಡುತ್ತಿದ್ದ ಯಂಗ್ ಅಂಡ್ ಎನರ್ಜಟಿಕ್ ಆಗಿದ್ದ ಇಬ್ಬರು ಟೀಚರ್ಸ್ ಬಗ್ಗೆ ಅಪರಿಮಿತ ಮುನಿಸನ್ನು ತುಂಬಿ ತಂದಿದ್ದರು. ಅವರುಗಳು ಒಂದಿಷ್ಟು ಸಂದರ್ಭಾವಕಾಶ ಒದಗಿದರೆ ಸಾಕು- ಕೆಳಜಾತಿಯವರಿಂದ ಮೇಲ್ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ನ್ಯಾಯಬದ್ಧವಾಗಿ ಮೇಲ್ಜಾತಿಯ ಬುದ್ಧಿವಂತರಿಗೆ ಸಿಗಬೇಕಾದ ಅವಕಾಶಗಳು ಕೆಳಜಾತಿಯ ಪ್ರತಿಭಾಹೀನರ ಪಾಲಾಗುತ್ತಿದೆ ಎಂದು ವಾದಿಸುತ್ತಿದ್ದರಂತೆ. ಉದಾಹರಣೆಗೆ- ಭಾರತದ ಹಿಂದೂ ಧರ್ಮದಲ್ಲಿ ಜಾತಿವ್ಯವಸ್ಥೆ ಇದೆಯೆಂದು ಕೆಲವರ ಆಕ್ಷೇಪ. ಆದರೆ ನಿಜಕ್ಕೂ ಜಾತಿಗಳೆಂದರೆ ಏನು? ಕುಲಕಸಬುಗಳು ತಾನೇ? ವೃತ್ತಿಗಳು ತಾನೇ? ಈಗ ಹೇಗೆ ಬೇರೆ ಬೇರೆ ವೃತ್ತಿಗಳಿವೆಯೋ ಹಾಗೆ, ಆಗಲೂ ವೃತ್ತಿಗಳಿದ್ದವು. ಅವರವರ ಕುಲ ಕಸಬುಗಳಲ್ಲಿ ನಿಷ್ಣಾತರಾದ ಮನೆಗಳಿಂದಲೇ ಮದುವೆ ಸಂಬಂಧ ಮಾಡುತ್ತಿದ್ದರು. ಅದು ಅನುಕೂಲ ಹೌದಾ? ಅಲ್ವಾ? ಆಗಿನ ಜನರೇನು ಬಡಿದಾಡಿಕೊಳ್ಳುತ್ತಿದ್ದರಾ? ಎಲ್ಲರೂ ತಂತಮ್ಮ ವೃತ್ತಿಯಲ್ಲಿ ಸುಖವಾಗಿದ್ದರು- ಎಂಬ ಕಾಗಕ್ಕ ಗುಬ್ಬಕ್ಕನ ಕಥೆ ಸೋಶಿಯಾಲಜಿಯ ಪಾರ್ಟ್ ಆಗಿ ಪುನರಾವರ್ತನೆಯಾಗುತ್ತಿತ್ತಂತೆ. ಇತಿಹಾಸದ ಉಪನ್ಯಾಸಕರಿಗಂತೂ ಭಾರತದ ಸಮಸ್ತ ಸಮಸ್ಯೆಗಳಿಗೆ ಘಜನಿ ಮಹಮ್ಮದ ಘೋರಿ, ಮಹಮ್ಮದರ ದಂಡಯಾತ್ರೆಯೇ ಕಾರಣ. ಮುಸ್ಲಿಮರು ಎಂದರೆ ಮತಾಂತರಿಗಳು, ಹಂತಕರು, ಅತ್ಯಾಚಾರಿಗಳು- ಎಂದು ವಿದ್ಯಾರ್ಥಿಗಳ ತಲೆಯಲ್ಲಿ ತಿಕ್ಕಿ ತೀಡಿ ಬೆರೆಸಲಾಗಿತ್ತು.
ನಾವು ಸರ್ಕಾರದಿಂದ ಪಡೆದುಕೊಳ್ಳುವ ವಿಶೇಷ ಅನುದಾನ ಯೋಜನೆಯಡಿಯ ಪುಸ್ತಕಗಳ ಸೌಲಭ್ಯಗಳನ್ನು, ಅದರಲ್ಲೂ ಸ್ಕಾಲರ್‍ಶಿಪ್‍ನ್ನು ಹಂಗಿಸಿದ್ದು ಅದೆಷ್ಟು ಬಾರಿಯೋ. ಲೆಕ್ಕ ಇಡುವುದೂ ಸಾಧ್ಯವಿಲ್ಲ- ಎನ್ನುವಾಗ ಅವಳ ಕೊರಳ ಸೆರೆ ಬಿಗಿದಿತ್ತು. “ಅದ್ಯಾಕೆ ಸ್ಕಾಲರ್‍ಶಿಪ್ ವಿಷ್ಯ ಕ್ಲಾಸರೂಂನಲ್ಲಿ ಬರುತ್ತಿತ್ತು?”- ನಾನು ಅವಳ ಕಣ್ಣೀರು ಆರಲಿ ಅಂತ ಪ್ರಶ್ನೆ ಹಾಕಿದೆ. “ಅಯ್ಯೋ ಮೇಡಂ, ನೋಟಿಸ್ ಬರ್ತಿತ್ತಲ್ಲ. ಇಂಥ ಸ್ಕಾಲರ್‍ಶಿಪ್ ಇದೆ- ಎಸ್.ಸಿ., ಎಸ್.ಟಿ. ವಿದ್ಯಾರ್ಥಿಗಳು ಆಫೀಸಿಗೆ ಭೆಟ್ಟಿಯಾಗ್ಬೇಕು” ಅಂತ. ಆಗೆಲ್ಲ ಅವರ ಪಿತ್ತ ಕೆರಳೋದು. ಹ್ಞಾಂ, ಮೇಡಂ ಹೀಗೆ ನಿಲ್ಲೋರು. (ಅವರಂತೆ ಕೈಕಟ್ಟಿ ನಿಂತು ತೋರಿಸಿ)- “ನೋಡಿ, ನಮಗೆ ಎಲ್ಲರೂ ಒಂದೇ. ವಿದ್ಯಾರ್ಥಿಗಳೆಂದರೆ ವಿದ್ಯಾರ್ಥಿಗಳು. ಅವರು ಯಾವ ಜಾತಿ-ಧರ್ಮಕ್ಕೆ ಸೇರಿದವರು ಅನ್ನೋದು ಅವರ ಎಬಿಲಿಟಿಯನ್ನು ಅಳೆಯೋ ಮಾನದಂಡ ಆಗ್ಬಾರ್ದು ಅಲ್ವಾ? ಸರ್ಕಾರ ಸ್ಕಾಲರ್‍ಶಿಪ್ ಕೊಡೋದಾದ್ರೆ ವಿದ್ಯಾರ್ಥಿಗಳ ಅಂಕ, ಪ್ರತಿಭೆಗಳನ್ನು ಮಾನದಂಡವಾಗಿಸಿ ಕೊಡಲಿ. ಇಲ್ಲಾಂದ್ರೆ ಬಡತನದ ಕಾರಣಕ್ಕಾಗಿ ಕೊಡಲಿ. ಅದು ಬಿಟ್ಟು ಜಾತಿ-ಧರ್ಮ ಅಂತ ಸ್ಕಾಲರ್‍ಶಿಪ್ ಕೊಡೋದು ಉಳಿದವರಿಗೆ ಅನ್ಯಾಯ ಮಾಡಿದಂತೆ ಅಲ್ವಾ? ಏನಂತೀರಿ ಅಂತ ಕೇಳೋರು. ಅವರ ಪಾಠ ನಮಗೆಲ್ಲ ಇಷ್ಟ ಆಗ್ತಿದ್ದರಿಂದ ಯಾರೂ ಇಲ್ಲ ಅಂತಿರಲಿಲ್ಲ. ನಾವೂ ಅಷ್ಟೇ. ತುಂಬಿದ ಕ್ಲಾಸಲ್ಲಿ ಅವ್ರು ಹಿಂಗೆಲ್ಲ ಹೇಳುವಾಗ ನಮಗೆ ಸತ್ತು ಹೋಗಾಂಗಾಗ್ತಿತ್ತು. ಆಗೆಲ್ಲ ನಮಗೆ, ಈ ಮೀಸಲಾತಿ, ಸಬ್ಸಿಡಿ, ನಮಗೇ ಸ್ಕಾಲರ್‍ಶಿಪ್ ಯಾಕೆ ಕೊಡ್ತಾರೆ ಎಂಬ ಬಗ್ಗೆ ಸರಿಯಾಗಿ ಗೊತ್ತಿರಲಿಲ್ಲ. ನಾವು ಕೀಳುಜಾತಿಯವರು, ಬಡವರು. ನಮ್ಮನ್ನು ಉದ್ಧಾರ ಮಾಡಲು ಸರ್ಕಾರ ಸವಲತ್ತನ್ನು ಕೊಡ್ತದೆ ಅಂತಾನೇ ತಿಳಿದುಕೊಂಡಿದ್ವಿ. ಸಾವಿರಾರು ವರ್ಷಗಳಿಂದ ನಮ್ಮ ಹಕ್ಕನ್ನು ಕಸಿದುಕೊಂಡು, ಆ ಅನ್ಯಾಯ ಸರಿಪಡಿಸಲು ನಮಗೆ ಹೀಗೆಲ್ಲ ಸವಲತ್ತುಗಳನ್ನು ಕೊಡಲಾಗ್ತಿದೆ ಅಂತ ಗೊತ್ತಿರಲಿಲ್ಲ- ಎಂದಳು. ಅವಳ ಮಾತಿಗೆ ಬಹುತೇಕ ವಿದ್ಯಾರ್ಥಿಗಳು ತಲೆದೂಗುತ್ತಿದ್ದರು. “ಡಿಗ್ರಿಗೆ ಹೋಗ್ರಿ. ನಿಮಗಂತೂ ಪುಕ್ಕಟೆ ಲ್ಯಾಪ್‍ಟಾಪ್ ಸಿಗ್ತದೆ’ ಅಂತ ಮಾಕ್ರ್ಸ್‍ಕಾರ್ಡ್ ತಗೊಂಡು ಬರಲು ಹೋದ ದಿನವೂ ವ್ಯಂಗ್ಯವಾಡಿದರು ಎಂದು ಇನ್ನೊಬ್ಬಳು ದನಿಗೂಡಿಸಿದಳು. ಅವರು ಆರೋಪಿಸುತ್ತಿರಲಿಲ್ಲ. ನೋವಿನ ಹಗೇವಿನಿಂದ ಎದ್ದು ಬಂದವರಂತಿದ್ದರು. ಅವರ ಮನಸ್ಸಿನಲ್ಲಿ ಸಾಮಾಜಿಕ ಅಸಹನೀಯತೆಯ ಪರಚುಗಾಯ ಕೀವಾಡುತ್ತಿತ್ತು. ದಿನಬೆಳಗಾದರೆ, ಒಳ್ಳೆಯ ಬಟ್ಟೆತೊಟ್ಟರೆಂದು, ಡಾನ್ಸು ಮಾಡಿದರೆಂದು, ಮದುವೆಯಲ್ಲಿ ಕುದುರೆ ಮೇಲೆ ಕೂತು ಮೆರವಣಿಗೆ ಮಾಡಿಸಿಕೊಂಡವರೆಂದು, ಮೇಲ್ಜಾತಿಯ ಹುಡುಗಿಯೊಂದಿಗೆ ಪ್ರೇಮವೆಂದು, ಅನುಮಾನಾಸ್ಪದ ಅಪರಿಚಿತರೆಂದು, ಶಂಕಿತ ಕಳ್ಳರೆಂದು, ಕೆಳಜಾತಿ ಹುಡುಗಿಯೆಂದು… ವಿವಿಧ ಕಾರಣಗಳಿಗಾಗಿ ಹೊಡೆತ-ಬಡಿತ, ಕೊಲೆ, ಅತ್ಯಾಚಾರ, ಬಹಿಷ್ಕಾರಗಳು ಸುರಳೀತ ನಡೆಯುತ್ತಿವೆ.
ಅಲ್ಪಸಂಖ್ಯಾತ ಸಮುದಾಯದ ಅದರಲ್ಲೂ ಮುಸ್ಲಿಮ್ ಸಮುದಾಯದ ಮಕ್ಕಳ ಅನುಭವ ಇದಕ್ಕಿಂತ ಬೇರೆಯಲ್ಲ. ತಮ್ಮ ಅಪಮಾನದ ಕಡತ ಬಿಚ್ಚಿದ ಮಕ್ಕಳು ನಮ್ಮ ಶಿಕ್ಷಣ ವ್ಯವಸ್ಥೆಯ ಕಡೆ ಬೊಟ್ಟು ಮಾಡುತ್ತಿದ್ದರಲ್ಲವೇ? ಇದು ಬದಲಾಗದ ವಾಸ್ತವ ಎಂಬ ಹತಾಶೆ ಅವರ ಮಾತುಗಳಲ್ಲಿ ತೊಟ್ಟಿಕ್ಕುತ್ತಿತ್ತು. ಮಕ್ಕಳ ಮನಸ್ಸುಗಳಲ್ಲಿ ಮಾನವೀಯತೆಯ ಸೆಲೆಯುಕ್ಕಿಸಬೇಕಾದ ಶಿಕ್ಷಕರು ಕೋಮುವಾದ-ಮತೀಯವಾದಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆಯೇ? ತಮ್ಮ ಯೋಚನಾ ಸಾಮಥ್ರ್ಯವನ್ನು ಮತೀಯ ಸಂಘಟನೆಗಳ ಅಜೆಂಡಾಗಳಿಗೆ ಅಡವಿಟ್ಟು, ತಮ್ಮನ್ನೆಲ್ಲ ಉದ್ಧರಿಸುವವರಿಗಾಗಿ ಕಾಯುತ್ತ, ಜಗನ್ನಿಯಾಮಕ ಅವತರಿಸಿದ್ದಾನೆಂದೋ, ಅವತರಿಸುತ್ತಾನೆಂದೋ ನಂಬಿದವರು. ಹೌದು, ಬರಹಗಾರರನ್ನು ಹತ್ಯೆ ಮಾಡಲು, ಸಹಜೀವಿಗಳನ್ನು ಹಿಂಸಿಸಲು, ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳುವ ಯುವಕರು- ಈ ಇಂಥ ಬಾಗಿಲಿನಿಂದ ಒಳಬಂದು ಹೊರಹೋದವರು.

 

– ವಿನಯಾ ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...