Homeಚಳವಳಿಜಿಂದಾಲ್ ವಿರುದ್ಧ ಲೋಕಲ್ ಫೈಟ್ ಹತ್ತಿಕ್ಕಿದ ಸರ್ಕಾರದ ಆಡಳಿತ ವ್ಯವಸ್ಥೆ

ಜಿಂದಾಲ್ ವಿರುದ್ಧ ಲೋಕಲ್ ಫೈಟ್ ಹತ್ತಿಕ್ಕಿದ ಸರ್ಕಾರದ ಆಡಳಿತ ವ್ಯವಸ್ಥೆ

ಅತ್ಯಂತ ಬೆಲೆಬಾಳುವ ಭೂಮಿಯನ್ನು ತೀರಾ ಕಡಿಮೆ ರೊಕ್ಕಕ್ಕೆ ಮಾರಿದ ಬಡ ರೈತರು ಇವತ್ತಿಗೂ ಸರಿಯಾದ ಬದುಕು ಕಟ್ಟಿಗೊಂಡಿಲ್ಲ.

- Advertisement -

| ನಾನುಗೌರಿ ಡೆಸ್ಕ್ |

2016ರ ಸಂದರ್ಭದಲ್ಲಿ ಸ್ಥಳೀಯರು ಜಿಂದಾಲ್ ವಿರುದ್ಧ ಕಟ್ಟಿದ ಹೋರಾಟವನ್ನು ಪೊಲೀಸ್ ಶಕ್ತಿಯನ್ನು ಬಳಸಿ ಹತ್ತಿಕ್ಕಿದ್ದು ಆಡಳಿತ ವ್ಯವಸ್ಥೆಯೇ. ಆಗ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಇತರ ಯಾವ ಪಕ್ಷವೂ ಹೋರಾಟ ರೂಪಿಸಿದ ಜನರ ನೆರವಿಗೆ ನಿಲ್ಲಲಿಲ್ಲ. ಇಲ್ಲಿ ಎಲ್ಲ ಪಕ್ಷಗಳನ್ನು, ಅಧಿಕಾರಿಗಳನ್ನು ಜಿಂದಾಲ್ ‘ಒಳ ಹಾಕಿಕೊಂಡಿದೆ’ ಎಂಬುದು ಸ್ಥಳೀಯರ ಆರೋಪ,,,,

‘ಎಲ್ಲ ಪಾರ್ಟಿದವರೂ ಅವ್ರ ಜೊತೆಗಿನ ಅದಾರ್ರಿ. ಈಗ 3,600 ಎಕರೆ ಭೂಮೀನಾ ಜುಜಬಿ ರೇಟಿಗೆ ಸರ್ಕಾರ ಮಾರಾಕ ಹೊಂಟೈತಿ. ಈಗ್ಲೂ ನಾವು ಜನರನ್ನ ಸೇರಿಸೋಕ್ ಟ್ರೈ ಮಾಡ್ತಿದ್ದೀವಿ, ಆದ್ರ 2016ರೊಳಗ ಪ್ರತಿಭಟನೆ ಮಾಡಿದಾಗ, ಪೊಲೀಸರು ಮಂದಿಗೆ ಬಾಳ ಕಾಟ ಕೊಟ್ರು. 42 ಜನರ ಮ್ಯಾಲ ಕೇಸು ಹಾಕಿ ಕೋರ್ಟು ಕಚೇರಿ ಅಡ್ಡಾಡಿಸಿ ಸುಸ್ತು ಮಾಡಿದ್ರು. ಈಗ ಹೋರಾಟಕ್ಕ ಕರೆದ್ರ ಜನ ಯಾಕ್ ಬೇಕಪ್ಪ, ಎಲ್ಲ ಅವ್ರ ಕಡಿಗೆ ಅದಾರ’ ಎನ್ನುವ ಪರಿಸ್ಥಿತಿಯಿದೆ.

2016ರಲ್ಲಿ ಜಿಂದಾಲ್‍ನ ಡಾಂಬರು ಪ್ಲಾಂಟ್ (ECPL ಘಟಕ) ವಿರೋಧಿಸಿ ತೋರಣಗಲ್ಲಿನಲ್ಲಿ ಬೃಹತ್ ಪ್ತತಿಭಟನೆ ಮತ್ತು ಸಭೆ ನಡೆಸಿದ್ದ ಮುಂದಾಳುಗಳ ಪೈಕಿ ಒಬ್ಬರಾದ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಶರಣಪ್ಪ ಕೋಟಿಗನಾಳ 2016ರಲ್ಲಿ ನಡೆದ ಸರ್ಕಾರದ ದೌರ್ಜನ್ಯವನ್ನು ನೆನಪಿಸಿದರು.

‘ಆಗ ಜಿಂದಾಲ್ ಸಪೋರ್ಟು ಮಾಡಿದ್ದ ನಮ್ ಸರ್ಕಾರದ ವಿರುದ್ಧವೂ ನಾವು ನಿಂತಿದ್ದೀವಿ’ ಎನ್ನುತ್ತಾರೆ ಕಾಂಗ್ರೆಸ್‍ನಿಂದ ಆ ಭಾಗದಲ್ಲಿ 2011-15ರ ಅವಧಿಯಲ್ಲಿ ಜಿಪಂ ಸದಸ್ಯರಾಗಿದ್ದ ಶರಣಪ್ಪ. ‘ಜನರ ಬದುಕು, ಇಲ್ಲಿನ ಅಗ್ರಿಕಲ್ಚರ್ ಎಲ್ಲ ಎಕ್ಕುಟ್ಟಿ ಹೋಗುವಾಗ ಪಾರ್ಟಿ-ಗೀರ್ಟಿ ನೋಡಬಾರ್ದಲ್ಲರಿ?’ ಎನ್ನುತ್ತಾರೆ.

ಇನ್ಸುರನ್ಸ್ ಉದ್ಯೋಗಿಯಾಗಿದ್ದು ಆ ಹೋರಾಟದಲ್ಲಿ ಭಾಗವಹಿಸಿದ್ದ ಚನ್ನಬಸಯ್ಯ, ‘ಇವತ್ತು ಅದಾ ಪ್ರಾಬ್ಲಂ ಆಗೈತಿ. ಯಾವುದೋ ಪಕ್ಷದ ಸದಸ್ಯರು ಅಂತಾ ತಮಗ ತಾವ ಅನಕೊಂಡಿರುವ ಜನ್ರು ಕೂಡ ಪ್ರತಿಭಟನೆ ಅಂದ್ರ ಹಿಂದಕ್ಕ ಸರಿತಾರ…ಈ ಸಲ ನಾವು ಪ್ರೆಸ್‍ಗೆಲ್ಲ ಮಾಹಿತಿ ಕೊಟ್ಟೀವಿ…ಹೋರಾಟನೂ ಶುರು ಮಾಡ್ತೀವಿ…’ ಎಂದರು.

ಜಿಂದಾಲಿನ ಹೆಡ್ ಆಫೀಸ್ ಇರುವ ತೋರಣಗಲ್ಲಿನ ಈ ಇಬ್ಬರು ನಮ್ಮ ಪೋರ್ಟಲ್ ಮುಂದೆ ತೆರೆದಿಟ್ಟ ಜಿಂದಾಲಿನ ಕತೆ ಮತ್ತು ಜನರ ವ್ಯಥೆ ಇಲ್ಲಿದೆ. ಇಡೀ ರಾಜಕೀಯ ವ್ಯವಸ್ಥೆಯೇ ಹೇಗೆ ಜಿಂದಾಲ್ ಪರ ಎನ್ನುವುದರ ಒಳಸುಳಿಗಲೂ ಇವೆ:

“ತೋರಣಗಲ್ ಮತ್ತು ಸುತ್ತಮುತ್ತಲಿನ ಹಳ್ಳಿಗಳೆಲ್ಲ ಇವತ್ತು ಸ್ಲಮ್ ತರಹ ಆಗಿವೆ. ಜನರ ಆರೋಗ್ಯ ಮತ್ತು ಹಳ್ಳಿಗಳ ಬದುಕಿನ ಸ್ವಾಸ್ಥ್ಯವನ್ನೇ ಹಾಳು ಮಾಡುವ ಡಾಂಬರು ಪ್ಲಾಂಟು ಇಲ್ಲಿ ಬೇಡ. ಇಲ್ಲಿನ ಪರಿಸರಕ್ಕೆ ಇದು ಮಾರಕ. ಪ್ಲಾಂಟಿನ ಕಲ್ಮಷ ಅಂತರ್ಜಲಕ್ಕೆ ಸೇರಿದರೆ ದೊಡ್ಡ ಅಪಾಯ ಎಂದು ಹೋರಾಟ ಕಟ್ಟಿದ್ದೆವು. ತೋರಣಗಲ್, ಹಂಸಾಪುರ, ಕುಡತಿನಿ ಜನರೆಲ್ಲ ನಮಗೆ ಸಪೋರ್ಟು ಮಾಡಿದ್ದರು. ಆದರೆ ಈ ಪ್ರತಿಭಟನೆ ನೋಡಿ ದಂಗಾದ ಜಿಂದಾಲ್ ಜಿಲ್ಲೆಯ ಆಡಳಿತ ವ್ಯವಸ್ಥೆಯ ನೆರವು ಪಡೆದು ಜನರಲ್ಲಿ ಭೀತಿ ಉಂಟು ಮಾಡುವ ಮೂಲಕ ಹೋರಾಟವನ್ನು ಹತ್ತಿಕ್ಕಿತು. ಎಲ್ಲ ಪಕ್ಷಗಳ ಪ್ರಮುಖರೂ ಜಿಂದಾಲಿನ ಫಲಾನುಭವಿಗಳೇ ಆಗಿರುವುದರಿಂದ ಹೊರಗಿನ ಸಂಘಟನೆಗಳ ನೆರವನ್ನೂ ಪಡೆದು ಮತ್ತೆ ಹೋರಾಟ ಕಟ್ಟಬೇಕಿದೆ….

1971ರಲ್ಲಿ ಇಲ್ಲಿ ಸರ್ಕಾರಿ ಸ್ವಾಮ್ಯದ ಉಕ್ಕಿನ ಘಟಕ ಸ್ಥಾಪಿಸಲು ನಿರ್ಧರಿಸಿದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು 1972ರಲ್ಲಿ ನೋಟಿಫಿಕೆಷನ್ ಹೊರಡಿಸಿದರು. 1972ರಲ್ಲಿ ಇಲ್ಲಿ ಪ್ರತಿ ಎಕರೆಗೆ ಕೇವಲ 800ರಿಂದ 1,200 ರೂಗೆ ನೀಡಿ ಭೂಸ್ವಾಧಿನ ಮಾಡಿಕೊಳ್ಳಲಾಗಿತ್ತು. 1991-92ರಲ್ಲಿ ಮನಮೋಹನಸಿಂಗ್ ಸರ್ಕಾರದಲ್ಲಿ ಉಕ್ಕು ಖಾತೆಯ ಸಚಿವರಾಗಿದ್ದ ಇಲ್ಲಿನ ಸಂಸದ ಬಸವರಾಜ ಪಾಟೀಲ ಅನ್ವರಿಯವರು ದೆಹಲಿಯಲ್ಲಿ ಒಂದು ಪ್ರೆಸ್ ಮೀಟ್ ಮಾಡಿ, ನಷ್ಟದಲ್ಲಿರುವ ಸರ್ಕಾರಿ ಉಕ್ಕು ಉದ್ಯಮಗಳನ್ನು ಖಾಸಗಿಯವರಿಗೆ ಕೊಡುವ ನಿರ್ಧಾರ ಪ್ರಕಟಿಸಿದರು. ಅವರ ಮೂಲ ಉದ್ದೇಶವೇ ವಿಜಯನಗರ ಸ್ಟೀಲ್ಸ್ ಅನ್ನು ಜಿಂದಾಲ್ಗೆ ನೀಡೋದೇ ಆಗಿತ್ತು….ಕಾರ್ಮಿಕ ಸಂಘಟನೆಗಳ ಹೋರಾಟಗಳನ್ನೆಲ್ಲ ಮುರಿಯಲಾಗಿತು.

1994ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ದಾಗ ಜಿಂದಾಲ್‍ನ ಭೂಮಿಪೂಜೆ ನಡೆದೇ ಹೋಯ್ತು. ವಿಜಯನಗರ ಸ್ಟೀಲ್ಸ್‍ನ ಭೂಮಿಯೆಲ್ಲ ಜಿಂದಾಲ್ ಪಾಲಾಯಿತು. ಆಗ ರೈತರಿಗೆ ಎಕ್ಸಗ್ರೇಸಿಯಾ ಅಂತ 5 ಸಾವಿರ ಕೊಟ್ಟು ಮರಳು ಮಾಡಿದರು. ಲೀಸ್‍ನಲ್ಲಿರುವ ಈ ಭೂಮಿಯನ್ನು ಹತ್ತು ವರ್ಷಕ್ಕೊಮ್ಮೆ ರಿನೀವಲ್ ಮಾಡಬೇಕು. 2006ರಲ್ಲಿ ರಿನೀವಲ್ ಮಾಡುವಾಗ ಮತ್ತೆ ಭೂಮಿ ಕಳೆದುಕೊಂಡ ರೈತರಿಗೆ 5 ಸಾವಿರ ಎಕ್ಸ್‍ಗ್ರೇಸಿಯಾ ಕೊಟ್ಟು ಹಿಂದಕ್ಕೆ ತಳ್ಳಿದರು. ಫಲವತ್ತಾದ ಭೂಮಿ, ನೀರಿನ ಅನುಕೂಲವನ್ನು ಪಡೆದ ಭೂಮಿಯೂ ಉಕ್ಕಿಗಾಗಿ ನೆಗೆದು ಬಿದ್ದಂತಾಯಿತು…

ವ್ಯಾಪಾರದಲ್ಲಿ ಎಷ್ಟ ಕಿತ್ತಾಟ ಇರ್ಲಿ, ಅದಿರುಗಳ್ಳರೆಲ್ಲ ಇಂತಹಾ ವಿಷ್ಯದೊಳಗ ಒಂದಾಗ್ತಾರ..ಯಡಿಯೂರಪ್ಪ ಇದ್ದಾಗ ಇವರದೇ ಸಾಮ್ರಾಜ್ಯ ಮಾಡಿಕೊಂಡಿದ್ದರಲ್ಲ? ಅಕ್ರಮವಾಗಿ ಅದಿರು ಮಾರಿಕೊಂಡ ಆರೋಪವೂ ಜಿಂದಾಲ್ ಮ್ಯಾಲ ಇದೆ. ಸರ್ಕಾರ ವಶಪಡಿಸಿಕೊಂಡ ಅಕ್ರಮ ಅದಿರನ್ನು ಹರಾಜಿಗೆ ಹಾಕುವಾಗಲೂ ಇಲ್ಲಿ ದಂಧೆ ನಡೆತಾ ಇದೆ. ಉತ್ತಮ ದರ್ಜೇಯ ಅದಿರನ್ನು ಕಡಿಮೆ ದರ್ಜೆಯ ಅದಿರು ಎಂದು ನಮೂದಿಸುವ ಅಧಿಕಾರಿಗಳು ಜುಜುಬಿ ರೇಟಿಗೆ ಜಿಂದಾಲ್‍ನಂತಹ ಕಂಪನಿಗಳಿಗೆ ಮಾರಿ ತಾವೂ ದುಂಡಗಾಗ್ತಾರ…ಎಲ್ಲ ಪಾರ್ಟಿಗಳಿಗೂ ಇದೆಲ್ಲ ಗೊತ್ತು….

ಅತ್ಯಂತ ಬೆಲೆಬಾಳುವ ಭೂಮಿಯನ್ನು ತೀರಾ ಕಡಿಮೆ ರೊಕ್ಕಕ್ಕೆ ಮಾರಿದ ಬಡ ರೈತರು ಇವತ್ತಿಗೂ ಸರಿಯಾದ ಬದುಕು ಕಟ್ಟಿಗೊಂಡಿಲ್ಲ. ಈಗ ಮತ್ತೆ ಲೀಸ್ ಭೂಮಿಯನ್ನು ತೀರಾ ಕಡಿಮೆ ದರಕ್ಕೆ ಕ್ರಯಪತ್ರ ಮಾಡಾಕ್ ಹೊರಟ ಸರ್ಕಾರದ ವಿರುದ್ಧ ರಾಜ್ಯದ ತುಂಬ ದೊಡ್ಡ ದನಿ ಎತ್ತಬೇಕು. ರಾಜಕೀಯ ಪಕ್ಷಗಳನ್ನು ಈ ಹೋರಾಟದ ಸನಿಹಕ್ಕೂ ಬಿಡಬಾರದು. ಅವೂ ಬರೋದೂ ಇಲ್ಲ ಬಿಡ್ರಿ…

ಆಗೀಗ ಕೊಟ್ಟ ಭೂಮಿ ಲೆಕ್ಕ ಹಾಕಿದ್ರ ಜಿಂದಾಲ್ ಹತ್ರ ಈಗ ಸಾವಿರ ಎಕರೆ ಭೂಮಿನ ಇರಬಹುದು. ಡಾಂಬರು. ಪೇಂಟ್ಸ್ ಅಂತಾ ಕೆಮಿಕಲ್ ವ್ಯಹಾರಕ್ಕ ಅವ್ರು ಬ್ಯಾರೆದಾರ ಜತಿ ಒಪ್ಪಂದ ಮಾಡಿಕೊಂತ ಹೊಂಟಾರ,,,ಇದೂ ಒಂದ ತರಹ ರಿಯಲ್ ಎಸ್ಟೇಟ್ ದಂಧೇನಾ…ಸಿಎಸ್‍ಆರ್ ಯೋಜನೆ ಅಡಿ ಇಲ್ಲಿಯ ಹಳ್ಳಿಗಳ ಶಾಲೆಗಳನ್ನಾದರೂ ದತ್ತು ತಗೋಬಹುದಿತ್ತು.. ಆದರೆ ಪ್ರವಾಸಿಗರು ಬರುವ ಹೊಸಪೇಟೆ ಬಸ್‍ಸ್ಟ್ಯಾಂಡ್ ಸೌಂದರ್ಯೀಕರಣ ಮಾಡ್ಯಾರ…ಇಲ್ಲಿವರೆಗೆ ಇಪ್ಪಂದದಂತೆ ಜಿಂದಾಲ್ ನಡೆದುಕೊಂಡಿದೆಯಾ, ಸ್ಥಳಿಯರಿಗೆ ಎಷ್ಟು ಕೆಲಸ ನೀಡಿದೆ ಇವೆಲ್ಲವನ್ನೂ ಸಾರ್ವಜನಿಕರ ಮುಂದೆ ಇಡುವ ಕೆಲಸವನ್ನು ಸರ್ಕಾರ ಮೊದಲು ಮಾಡ್ಲಿ… ಆಮ್ಯಾಲ ಹ್ಯಂಗ ಭೂಮಿ ಕೊಡ್ತಾರ ನೋಡೋಣಂತ….”

ಇವು ಹೋರಾಟದ ಮುಂಚೂಣಿ ವಹಿಸಿದ್ದ ಹತ್ತಾರು ಮುಂದಾಳುಗಳಲ್ಲಿದ್ದ ಶರಣಪ್ಪ ಮತ್ತು ಚನ್ನಬಸಯ್ಯರ ಮಾತುಗಳು. ಬಳ್ಳಾರಿ ಜಿಲ್ಲೆಯ ಪ್ರಗತಿಪರ ಸಂಘಟನೆಗಳೆಲ್ಲ ಸೇರಿ ಒಂದು ದೊಡ್ಡ ಆಂದೋಲನ ಕಟ್ಟುತ್ತಿವೆ ಎಂಬ ಮಾತು ಕೇಳಿ ಬಂದಿವೆ. ಅದೂ ಆದಷ್ಟು ಬೇಗ ಶುರುವಾಗಲಿ… ಗಟ್ಟಿಗೊಳ್ಳಲಿ ಎಂಬುದು ನಮ್ಮ ಆಶಯ..

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares