ಕಡೆಗೂ ಎಚ್ಚೆತ್ತುಕೊಂಡ ಫೇಸ್‍ಬುಕ್ಕು ಕೆಟ್ಟದೊಂದು ಪುಟಕ್ಕೆ ಫುಲ್‍ಸ್ಟಾಪ್ ಇಟ್ಟಿದೆ. ಅದು `ಪೋಸ್ಟ್‍ಕಾರ್ಡ್’! ಮಹೇಶ್ ವಿಕ್ರಮ್ ಹೆಗ್ಡೆ ಎಂಬ ಆರೆಸ್ಸೆಸ್ ಮಾಣಿ ನಡೆಸುತ್ತಿದ್ದ ಫೇಕ್ ನ್ಯೂಸ್‍ಗಳ ಸುಳ್ಳಿನ ಫ್ಯಾಕ್ಟರಿಯಂತಿದ್ದ ಅದು ಬಿತ್ತರಿಸುತ್ತಿದುದ್ದೆಲ್ಲ ಕೋಮು ಪ್ರಚೋದಕ ಸುಳ್ಳುಗಳನ್ನು. ಸಮಾಜದ ಸ್ವಾಸ್ಥ್ಯ ಕದಡುವ, ಇದೇ ಕಾರಣಕ್ಕೆ ಇತ್ತೀಚೆಗಷ್ಟೇ ಸೈಬರ್ ಕ್ರೈಮ್ ಪೊಲೀಸರು ಮಹೇಶ್ ವಿಕ್ರಂ ಹೆಗ್ಡೆಯನ್ನು ಅರೆಸ್ಟ್ ಮಾಡಿ ಜೈಲಿಗೂ ಗದುಮಿದ್ದರು. ಈಗ ಎಚ್ಚೆತ್ತುಕೊಂಡಿರುವ ಫೇಸ್‍ಬುಕ್ ಕೋಮುಕ್ರಿಮಿಯಿಂದ ತನಗೆ ಅಂಟಬಹುದಾದ ಕಳಂಕವನ್ನು ತೊಳೆದುಕೊಳ್ಳಲು ಆತನ ಪೋಸ್ಟ್‍ಕಾರ್ಡ್ ನ್ಯೂಸ್ ಫೇಸ್‍ಬುಕ್ ಪೇಜನ್ನು ರದ್ದು ಮಾಡಿ ಮಾನಸ್ಥ ಮನುಷ್ಯರ ಕೊಂಚ ನಿಟ್ಟುಸಿರುವ ಬಿಡುವಂತೆ ಮಾಡಿದೆ.
ಅಸಲಿಗೆ, ಬಿಜೆಪಿ ಮತ್ತು ಸಂಘ ಪರಿವೆಂದರೇನೆ ಪೇಕ್‍ನ್ಯೂಸ್‍ಗಳ ಪಿತೃಸ್ಥಾನಗಳಂತೆ ಎಂಬ ಆರೋಪವಿದೆ. ಅದನ್ನು ನಿಜ ಮಾಡುವಂತೆಯೇ ಅವರ ವರ್ತನೆಗಳಿರೋದು ದುರಾದೃಷ್ಟ. ರಾಜಕೀಯ ದುರುದ್ದೇಶದಿಂದ ಸೃಷ್ಟಿಸಿ, ಹರಿದಾಡಿಸಲ್ಪಟ್ಟ ಫೇಕ್ ನ್ಯೂಸ್‍ಗಳು ಜನರ ನೆಮ್ಮದಿಯನ್ನೇ ಹಾಳುಗೆಡವುತ್ತಿರೋದು ಈ ಸಂದರ್ಭದ ದುರಂತ. ಕನ್ನಡದ ವಾತಾವರಣದ ಮಟ್ಟಿಗೆ ಅಂತಹ ಸುದ್ದಿಗಳಿಗೆಲ್ಲ ತವರುಮನೆಯಂತಿದ್ದಿದ್ದು ಈ ಪೋಸ್ಟ್‍ಕಾರ್ಡ್ ವೆಬ್‍ಸೈಟು ಮತ್ತದರ ಫೇಸ್‍ಬುಕ್ ಪೇಜು!
ಮಹೇಶ್ ವಿಕ್ರಮ್ ಹೆಗ್ಡೆಯ ಈ ಪೇಜ್‍ನಲ್ಲಿ ಮುಸ್ಲಿಂ ಸಮುದಾಯದ ವಿರುದ್ದ ಹಿಂದೂತ್ವದ ಕೋಮುಭಾವನೆ ಬಿತ್ತುವಂತ ಸುದ್ದಿಗಳದ್ದೇ ಕಾರುಬಾರು. ರಾಣಿ ಚೆನ್ನಮ್ಮ ಮತ್ತು ಒನಕೆ ಓಬವ್ವರ ಬಗ್ಗೆ ಅಶ್ಲೀಲ ಪೋಸ್ಟ್ ಹಾಕಿದ್ದ ಈತ, ಮಾರ್ಚ್ 18ರಂದು ಆಕ್ಸಿಡೆಂಟ್‍ನಲ್ಲಿ ಮರಣ ಹೊಂದಿದ್ದ ಜೈನ ಸನ್ಯಾಸಿಯನ್ನು ಮುಸ್ಲಿಂ ಯುವಕರು ಕೊಲೆ ಮಾಡಿದ್ದಾರೆಂದು ತನ್ನ ಪೋಸ್ಟ್‍ಕಾರ್ಡ್ ಪೇಜ್‍ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದ. ಈ ಸುಳ್ಳನ್ನು ಆಧಾರವಾಗಿಟ್ಟುಕೊಂಡೇ ಮಾರ್ಚ್ 29ರಂದು ಸೈಬರ್ ಕ್ರೈಮ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯಿದೆ 66 ಮತ್ತು ಐಪಿಸಿ ಸೆಕ್ಷನ್ 153ಎ ಅಡಿಯಲ್ಲಿ ಅರೆಸ್ಟ್ ಮಾಡಿ, ಸಿಲವರ್ ತಟ್ಟೆಯಲ್ಲಿ ಜೈಲೂಟ ಬಡಿಸಿದ್ದರು. ಈತನನ್ನು ಬಿಡುಗಡೆ ಮಾಡುವಂತೆ ಕೇಂದ್ರ ಸಚಿವ ಕಂ ಕಾಂಟ್ರವರ್ಸಿ ಕಿಂಗ್ ಅನಂತಕುಮಾರ್ ಹೆಗಡೆಯನ್ನೂ ಒಳಗೊಂಡಂತೆ ಬಿಜೆಪಿಯ ಹಲವಾರು ಲೀಡರುಗಳು ಒಂದು ಕ್ಯಾಂಪೇನನ್ನೇ ನಡೆಸಿದ್ದರು! ಮಹೇಶ್ ವಿಕ್ರಂ ಹೆಗ್ಡೆಯ ಫೇಕ್ ನ್ಯೂಸ್‍ಗಳ ಫಲಾನುಭವಿಗಳು ಯಾರು ಅನ್ನೋದಕ್ಕೆ ಇದೊಂದು Phಥಿsiಛಿಚಿಟ ನಿದರ್ಶನವಷ್ಟೆ. ಅಂದಹಾಗೆ, ಬಿಜೆಪಿ ಸಂಸದ ಪ್ರತಾಪ್ ಸಿಂಗ ಹೆಗ್ಡೆ ಈತನ ಅತ್ಯಾಪ್ತ!
ಹಾಗೆ ನೋಡಿದರೆ, 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಗೆ ಭರಪೂರ ಫಸಲು ತಂದುಕೊಡುವಲ್ಲಿ ಇಂಥಾ ಫೇಕ್‍ಸುದ್ದಿ ವೀರರ ಪಾತ್ರವೂ ಇತ್ತೆಂದರೆ ತಪ್ಪಾಗಲಿಕ್ಕಿಲ್ಲ. ಮೋದಿಯ ಸುಳ್ಳು ಪೊಳ್ಳು ಭಾಷಣಗಳನ್ನು ಹೈಲೈಟ್ ಮಾಡಿ, ಫೋಟೋಶಾಪ್‍ನಲ್ಲೇ ಗುಜರಾತ್ ಅಭಿವೃದ್ಧಿಯನ್ನು ಸೃಷ್ಟಿಸಿ ಜನರ ನಡುವೆ ಹರಿಯಬಿಟ್ಟ ಇಂತವರಿಂದಾಗಿಯೇ ಮೋದಿ ಸಲೀಸಾಗಿ ಗದ್ದುಗೆ ಏರಲು ಸಾಧ್ಯವಾದದ್ದು. ಅಂತವರಿಂದ ಪ್ರೇರಣೆ ಪಡೆದೇ ವಿಕ್ರಂ ಹೆಗ್ಡೆ ಪೋಸ್ಟ್‍ಕಾರ್ಡ್‍ಗೆ ಜನ್ಮಕೊಟ್ಟಿದ್ದ. ಹಿಂದೂತ್ವದ, ರಾಷ್ಟ್ರಪ್ರೇಮದ ಹುಸಿ ಸುದ್ದಿಗಳ ಜೊತೆಗೆ ಮುಸ್ಲಿಂ ವಿರೋಧಿ ಒಗ್ಗರಣೆ ಬೆರೆಸಿ ಆತ ಬಿಡುಗಡೆ ಮಾಡುತ್ತಿದ್ದ ಪೋಸ್ಟ್‍ಗಳು ಕೋಮುಗಲಭೆ ಹಬ್ಬಲು ಏನು ಬೇಕೊ ಅದೆಲ್ಲವನ್ನು ಒಳಗೊಂಡಿರುತ್ತಿದ್ದವು. ಅಂತಹ ‘ಪೋಸ್ಟ್‍ಕಾರ್ಡ್ ನ್ಯೂಸ್’ ಫೇಸ್‍ಬುಕ್ ಪೇಜ್‍ನ ವಿರುದ್ಧ ಪ್ರಜ್ಞಾವಂತ ಜನರು ಫೇಸ್‍ಬುಕ್ ಮ್ಯಾನೆಜ್‍ಮೆಂಟ್‍ಗೆ ದೂರುತ್ತಲೇ ಬಂದಿದ್ದರು. ಆದರೆ ಮಾರ್ಕ್ ಜುಗರ್‍ಬರ್ಗ್‍ನ ಫೇಸ್‍ಬುಕ್ಕು ಎಚ್ಚೆತ್ತುಕೊಂಡಿರಲಿಲ್ಲ.
ಯಾವಾಗ ಫೇಕ್‍ಪೇಜ್‍ನ ಪಿತಾಮಹನನ್ನು ಪೊಲೀಸರು ಅರೆಸ್ಟ್ ಮಾಡಿದರೋ ಆಗ ಎಚ್ಚೆತ್ತುಕೊಂಡ ಫೇಸ್‍ಬುಕ್ ಆತನ ವಿರುದ್ಧ ತನಗೆ ಹರಿದುಬಂದ ಬೃಹತ್ ದೂರುಗಳನ್ನು ಮುಂದಿಟ್ಟುಕೊಂಡು ಜುಲೈ 16ರಂದು ಡಿಆಕ್ಟಿವೇಟ್ ಮಾಡಿದೆ. ಪೋಸ್ಟ್ ಕಾರ್ಡು ಇಷ್ಟು ದಿನ ಪ್ರಕಟಿಸಿದ್ದ ಸುದ್ದಿಗಳಲ್ಲಿ ಶೇ. 96ರಷ್ಟು ಸುದ್ದಿಗಳು ಮುಸ್ಲಿಂ ವಿರೋಧಿಯಾಗಿದ್ದವೆನ್ನುವುದು ವಿಕ್ರಂ ಹೆಗ್ಡೆಯ ಉದ್ದೇಶವನ್ನು ಬಿಚ್ಚಿಡುತ್ತದೆ.
ಈ ಕೇಸರಿ ಮಂದಿ ಅದೆಷ್ಟು ದೂ(ದು)ರಾಲೋಚನೆ ಹೊಂದಿರುತ್ತಾರೆಂದರೆ, ಮಾರ್ಚ್‍ನಲ್ಲಿ ವಿಕ್ರಂ ಹೆಗ್ಡೆ ಅರೆಸ್ಟಾಗುತ್ತಿದ್ದಂತೆಯೇ, ಸದ್ಯದಲ್ಲೇ ತಮ್ಮ ಫೇಸ್‍ಬುಕ್ ಪೇಜ್ ಕೂಡಾ ರದ್ದಾಗಬಹುದೆನ್ನುವುದನ್ನು ಅಂದಾಜಿಸಿ, ಏಪ್ರಿಲ್‍ನಲ್ಲಿ ಅದೇ ಹೆಸರಿನಲ್ಲಿ ಮತ್ತೊಂದು ಇಂಗ್ಲಿಷ್ ಭಾಷೆಯ ಪೇಜ್ ಓಪನ್ ಮಾಡಿದ್ದರು. ಪೋಸ್ಟ್‍ಕಾರ್ಡ್ ಇಂಗ್ಲಿಷ್ ನ್ಯೂಸ್ ಎಂಬ ಹೆಸರಿನ ಆ ಪುಟ ಕನ್ನಡ ಪೋಸ್ಟ್‍ಕಾರ್ಡ್ ಪುಟದ ವಿನ್ಯಾಸ, ಲೋಗೊಗಳನ್ನೇ ಹೊಂದಿದೆ. ಇತ್ತ ಫೇಸ್‍ಬುಕ್, ಕನ್ನಡದ ಪೋಸ್ಟ್ ಕಾರ್ಡ್ ರದ್ದು ಮಾಡುತ್ತಿದ್ದಂತೆಯೇ, ಇಂಗ್ಲಿಷ್ ಪುಟದ ಲಿಂಕನ್ನು ಮುಂಚೂಣಿಗೆ ತಂದು, ತಮ್ಮ ಪುಟವನ್ನು ಫೇಸ್‍ಬುಕ್ ರದ್ದು ಮಾಡಿಲ್ಲ, ಇದೆಲ್ಲಾ ಸುಳ್ಳು ಸುದ್ದಿ ಎಂದು ಜನರನ್ನು ಯಾಮಾರಿಸಲು ಯತ್ನಿಸಿತ್ತು. ಆದರೆ ಅಧಿಕೃತ ಮೂಲಗಳೇ ಫೇಸ್‍ಬುಕ್ ನಿರ್ಣಯವನ್ನು ಖಾತ್ರಿಪಡಿಸಿದ ತರುವಾಯ ಇದೀಗ ಅವರ ಬಣ್ಣ ಬಯಲಾಗಿದೆ. ಆದರೇನಂತೆ ಇಂಗ್ಲಿಷ್ ಪುಟದಲ್ಲಿ ಯಥಾ ಪ್ರಕಾರ ತಮ್ಮ ಕೋಮುವಾಂತಿಯನ್ನು ಮುಂದುವರಿಸಿದ್ದಾರೆ. ಫೇಸ್‍ಪುಸ್ತಕ ಅದಕ್ಕೆ ಯಾವಾಗ ಒಂದು ಗತಿ ಕಾಣಿಸುತ್ತೋ ನೋಡಬೇಕು.
-ಸೋಮಶೇಖರ್ ಚೆಲ್ಯ


