Homeಅಂಕಣಗಳುನೂರು ನೋಟ | ಎಚ್.ಎಸ್.ದೊರೆಸ್ವಾಮಿಮೋದಿ, ಹಿಟ್ಲರ್ ಮಾತ್ರವಲ್ಲ ಗೋಬೆಲ್ಸ್ ಕೂಡ....

ಮೋದಿ, ಹಿಟ್ಲರ್ ಮಾತ್ರವಲ್ಲ ಗೋಬೆಲ್ಸ್ ಕೂಡ….

- Advertisement -
- Advertisement -

‘ಕಾಂಗ್ರೆಸ್ ಪಕ್ಷ ಕಳೆದ 70 ವರ್ಷಗಳಿಂದ ರೈತರನ್ನು ಕಡೆಗಣಿಸಿದೆ, ರೈತ ವಿರೋಧಿ ನೀತಿಯನ್ನು ಪಾಲಿಸಿಕೊಂಡು ಬರುತ್ತಿದೆ, ಕಾಂಗ್ರೆಸ್ ರೈತರನ್ನು ವೋಟ್ ಬ್ಯಾಂಕಾಗಿ ಬಳಸಿಕೊಂಡಿದ್ದಾರೆ. ರೈತರಿಗೆ ಸುಳ್ಳು ಆಶ್ವಾಸನೆಗಳನ್ನಷ್ಟೆ ನೀಡಿದ್ದಾರೆ, ಬಹುಕಾಲದ ರೈತರ ಬವಣೆಯನ್ನು ನಿರ್ಲಕ್ಷಿಸಿದೆ’ ಎಂದು ಮೋದಿಯವರು ಆರೋಪಿಸಿದ್ದಾರೆ. ಇದೀಗ ಮೋದಿ ಸರ್ಕಾರ 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಮಾತಾಡುತ್ತಿದೆ.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರೈತರ ನೆನಪಾಗುತ್ತದೆ ಮೋದಿ ಸಾಹೇಬರಿಗೆ. ಬೆಂಬಲ ಬೆಲೆ ನಾಲ್ಕು ವರ್ಷಗಳ ಹಿಂದೆಯೇ ಜಾಹೀರು ಮಾಡಿದ್ದರೆ ನಿಜವಾಗಿ ಅವರಿಗೆ ರೈತರ ಬಗೆಗೆ ಕಾಳಜಿ ಇದೆ ಎಂದು ಭಾವಿಸಬಹುದಾಗಿತ್ತು. ಚುನಾವಣೆ ಮುಂದಿಟ್ಟುಕೊಂಡು ಬೆಂಬಲ ಬೆಲೆ ಮಾತಾಡಿ ರೈತರ ಬಾಯಲ್ಲಿ ನೀರೂರುವಂತೆ ಮಾಡಿ ಅವರ ಓಟು ಕೀಳುವ ಈ ತಂತ್ರ ಫಲ ನೀಡುವುದಿಲ್ಲವೆಂದು ಹೇಳಬಯಸುತ್ತೇನೆ.
ರೈತರ ಆದಾಯವನ್ನು ದ್ವಿಗುಣಗೊಳಿಸುತ್ತೇವೆಂದು, ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುತ್ತೇವೆಂದು ರೈತರಿಗೆ ಆಶ್ವಾಸನೆ ಕೊಟ್ಟು ಗೆದ್ದು ಬಂದ ಮೋದಿ ಸರ್ಕಾರ ಈ ನಾಲ್ಕು ವರ್ಷಗಳಲ್ಲಿ ಮಾಡಿದ್ದೇನು? ಭಾಷಣಗಳನ್ನು ಬಿಟ್ಟರೆ ಬೇರೇನೂ ಇಲ್ಲ. ತಮ್ಮ ಸರ್ಕಾರದ ರೈತ ವಿರೋಧಿ ನೀತಿಗಳ ವಿರುದ್ಧ ಎಲ್ಲೆಡೆ ರೈತರು ಬೀದಿಗಿಳಿದಿದ್ದಾರೆಂಬ ಕಟು ವಾಸ್ತವವನ್ನು ಮನಗಂಡಿರುವ ಮೋದಿಯವರು, ಇನ್ನು ತಮ್ಮ ಮಾಮೂಲಿ ಕಣ್ಕಟ್ಟು ಜಾದೂ ಮಾತುಗಾರಿಕೆ ಮೂಲಕ ಮರುಳು ಮಾಡಲು ಸಾಧ್ಯವಿಲ್ಲವೆಂಬುದನ್ನು ಅರಿತು ದಿಢೀರ್ ರೈತರ ಬಗ್ಗೆ ಕಾಳಜಿ ತೋರುತ್ತಿದ್ದಾರೆಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.
ಮೋದಿಯವರು ಹಿಟ್ಲರ್ ಮಾತ್ರವಲ್ಲ, ಗೋಬೆಲ್ಸ್ ಕೂಡ ಎಂದು ಹೇಳಬೇಕಾಗುತ್ತದೆ. ಪ್ರಚಾರ ಮಾಡುವುದು ಅವರ ಹಕ್ಕು. ಅದರೆ ಅಪಪ್ರಚಾರ ಮಾಡುವುದು ನೀಚತನ. ಮೋದಿಯವರು ಇತಿಹಾಸದ ವಾಸ್ತವಗಳನ್ನು ಮರೆಮಾಚಿ, ಸುಳ್ಳಿನ ಕಂತೆ ಹೆಣೆಯುತ್ತಿದ್ದಾರೆ.
ಕಾಂಗ್ರೆಸ್‍ನ ಸಿ.ಸುಬ್ರಹ್ಮಣ್ಯಂ ವ್ಯವಸಾಯ ಮಂತ್ರಿಗಳಾಗಿದ್ದಾಗ ಭಾರತದಲ್ಲಿ ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿ ಏಕಕಾಲದಲ್ಲಿ ಆಯಿತು. ವ್ಯವಸಾಯದಲ್ಲಿ ಸುಧಾರಣೆಗಳಾದವು. ಭಾರತದ ತುಂಬಾ ಡ್ಯಾಂಗಳನ್ನು ನಿರ್ಮಿಸಲಾಯಿತು. ಪೋಲಾಗಿ ಸಮುದ್ರಕ್ಕೆ ಸೇರುತ್ತಿದ್ದ ನದಿಗಳ ನೀರನ್ನೆಲ್ಲ ಈ ಅಣೆಕಟ್ಟೆಗಳನ್ನು ಕಟ್ಟುವ ಮೂಲಕ ಸಂಗ್ರಹಿಸಲಾಯಿತು. ಒಣಬೇಸಾಯ ನಡೆಯುತ್ತಿದ್ದ ಕಡೆÀಯಲ್ಲೆಲ್ಲಾ ಗೋಧಿ, ಭತ್ತ, ಕಬ್ಬು ಬೆಳೆಯುವಂತಾಯಿತು. ಒಂದು ಬೆಳೆ ಬೆಳೆಯುತ್ತಿದ್ದ ರೈತರು ವರ್ಷದಲ್ಲಿ 3 ಬೆಳೆ ಬೆಳೆಯತೊಡಗಿದರು. ಆಹಾರ ಪದಾರ್ಥಗಳ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸಲಾಯಿತು. ಸಕ್ಕರೆ, ಗೋಧಿಗಳ ರಫ್ತು ವ್ಯಾಪಾರಕ್ಕೂ ಉತ್ತೇಜನ ಸಿಕ್ಕಿತು. ‘ವ್ಯವಸಾಯ ಪ್ರಧಾನವಾದ ಭಾರತ ಆಹಾರ ಪದಾರ್ಥಗಳಿಗಾಗಿ ಜೋಳಿಗೆ ಹಿಡಿದು ಬೇರೆ ದೇಶಗಳ ಕೃಪೆಗಾಗಿ ಕಾಯುವುದು ನಾಚಿಕೆಗೇಡು’ ಎಂದಿದ್ದರು ಮಹಾತ್ಮ ಗಾಂಧಿ. ಈ ಮಾತನ್ನು ಅಂದಿನ ಕಾಂಗ್ರೆಸ್ ಸರ್ಕಾರ ಅಕ್ಷರಶಃ ಪಾಲಿಸಿತ್ತು.
ರೈತನು ಬೆಳೆದ ಆಹಾರ ಪದಾರ್ಥಗಳಿಗೆ ಈ 70 ವರ್ಷಗಳಲ್ಲಿ ಯಾವ ಸರ್ಕಾರವೂ  ಹಾಕಿರಲಿಲ್ಲ ಎಂಬುದು ಕಟು ವಾಸ್ತವ. ಮೋದಿಯವರೇ ನೀವೇ ಹೇಳಿ. ನೀವು ರೈತರಿಗಾಗಿ ಸ್ವರ್ಗವನ್ನೇ ಇಳಿಸಿಬಿಡುವ ಮಾತನ್ನಾಡುತ್ತಿದ್ದೀರಿ. 70 ವರ್ಷಗಳಿಂದ ಯಾರೂ ಹಾಕದೇ ಇದ್ದ ಜೆಸಿಯಾವನ್ನು ರೈತ ಹಿತೈಷಿಗಳೆನ್ನುವ ನೀವು ರೈತರ ಮೇಲೆ ಹೇರಿದ್ದೀರಿ. ಆಡುವುದೊಂದು ಮಾಡುವುದೊಂದು ನಿಮಗೆ ರಕ್ತಗತ ಆದಂತಿದೆ. ಮೊದಲು ರೈತರು ಬೆಳೆದ ಆಹಾರ ಧಾನ್ಯಗಳ ಮೇಲೆ ಹಾಕಿರುವ ಜೆಸಿಯಾವನ್ನು ತೆಗೆದುಹಾಕಿ ನಿಮ್ಮ ಪಾಪದ ಪ್ರಾಯಶ್ಚಿತ್ತ ಮಾಡಿಕೊಳ್ಳಿ.
ಮೋದಿಯವರೇ ನಿಮ್ಮ ಫಸಲ್ ಬೀಮಾ ಯೋಜನೆಯಿಂದ ಖಾಸಗಿ ಜೀವವಿಮಾ ಸಂಸ್ಥೆಗಳಿಗೆ ಲಾಭವಾಗುತ್ತಿದೆಯೇ ಹೊರತು ವಿಮೆಮಾಡುವ ರೈತರಿಗಲ್ಲ. ‘ಮೋದಿ ಪ್ರಧಾನಿಯಾಗುವುದಕ್ಕೆ ಮೊದಲು ಭಾರತ ಕತ್ತಲೆಯ ದೇಶವಾಗಿತ್ತು. ಅವತಾರ ಪುರುಷರಂತೆ ಬಂದ ಮೋದಿಯವರಿಂದ ಭಾರತ ಬೆಳಕು ಕಂಡಿತು. ಅಭಿವೃದ್ಧಿ ದಾಂಗುಡಿ ಇಡುತ್ತಿದೆ’ ಎಂದು ನಿಮ್ಮ ಪ್ರಚಾರ ಪಡೆ ಅಪ್ಪಟ ಸುಳ್ಳು ಹೇಳುತ್ತಿದೆ.
ಮೋದಿಯವರೇ, ನೀವು ಪ್ರಧಾನಿಯಾಗುವ ಎಷ್ಟೋ ವರ್ಷ ಮೊದಲು ಭಾರತಾದ್ಯಂತ ಶ್ವೇತಕ್ರಾಂತಿಯಾದದ್ದು ನಿಮ್ಮ ಗಮನಕ್ಕೆ ಬರಲೇ ಇಲ್ಲವೇ? ಹಾಲಿನಕ್ರಾಂತಿ ನಿಮ್ಮ ಗುಜರಾತಿನಿಂದಲೇ ಆರಂಭವಾದದ್ದು ಎಂಬ ಸಂಗತಿಯೂ ನಿಮಗೆ ಗೊತ್ತಿಲ್ಲವೇ? ಕುರಿಯನ್‍ರವರು ಹಾಲಿನಕ್ರಾಂತಿಗೆ ಕಾರಣಧೂತರು. ಅಮುಲ್ ಹಾಲಿನಪುಡಿ ವಿಶ್ವಕ್ಕೆಲ್ಲ ಸರಬರಾಜಾದದ್ದನ್ನು ಮರೆಮಾಚುವ ನೀವು ದುಷ್ಟ ರಾಜಕಾರಣಿಗಳಲ್ಲವೇ? ಗುಜರಾತಿಗೆ ಹಾಲಿನಕ್ರಾಂತಿ ವರವಾಯಿತೆಂಬುದನ್ನು ತಿಳಿಯದಷ್ಟು ಅಜ್ಞಾನಿಗಳೇ ನೀವು? ರಾಜ್ಯದ ಮರಳುಗಾಡು ಜಿಲ್ಲೆಗಳ ಜನರಿಗೆ ವರವಾದ ಕುರಿಯನ್‍ರವರ ಈ ಯೋಜನೆಯನ್ನು ಮುಚ್ಚಿಹಾಕುವ ನೀವು ಕೃತಘ್ನರಲ್ಲವೇ?
* * * * * *
ಮೋದಿಯವರು ಜವಾಹರಲಾಲ್‍ನೆಹರು ಬಗ್ಗೆ ಹೋದಲ್ಲಿ ಬಂದಲ್ಲೆಲ್ಲಾ ಲಘುವಾಗಿ ಮಾತನಾಡುತ್ತಿದ್ದಾರೆ ಮತ್ತು ಕಾಂಗ್ರೆಸ್ಸನ್ನು ನಾಮಾವಶೇಷ ಮಾಡುತ್ತೇವೆಂದು ಪದೇಪದೇ ಘೋಷಿಸುತ್ತಿದ್ದಾರೆ. ಈ ಎರಡೂ ವಿಷಯಗಳ ಬಗ್ಗೆ ನಮ್ಮ ಆಕ್ಷೇಪಣೆ ಇದೆ.
ಜವಾಹರಲಾಲ್‍ನೆಹರು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವರು. ಅವರ ತಂದೆ ಮೋತಿಲಾಲ್‍ನೆಹರು ಹೆಸರಾಂತ ವಕೀಲರು. ವಕೀಲ ವೃತ್ತಿಯಿಂದ ಸಾಕಷ್ಟು ಆಸ್ತಿ ಸಂಪಾದಿಸಿದ್ದರು. ಜವಾಹರಲಾಲ್‍ಗೆ ಇಂಗ್ಲೆಂಡಿನಲ್ಲಿ ಶಿಕ್ಷಣ ದೊರೆಯಿತು. ಜವಾಹರಲಾಲ್ ಪ್ರಸಿದ್ಧ ವಾಗ್ಮಿ, ಒಳ್ಳೆಯ ಬರಹಗಾರ, ಸಾಹಸಿ ಆಗಿದ್ದರು. ಆದರೆ ಮೋದಿಯವರು ತಮ್ಮ ಸಭೆಗಳಿಗೆ ಜನರನ್ನು ಸೇರಿಸಲು, ಜನರಿಗೆ ಹಣಕೊಟ್ಟು ಬಸ್‍ಗಳಲ್ಲಿ ಕರೆದುಕೊಂಡು ಬರುವ ಸಂಪ್ರದಾಯವನ್ನು ಅಳವಡಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಚಳುವಳಿ ನಡೆಯುತ್ತಿದ್ದಾಗ ಜನರು ತಾವೇತಾವಾಗಿ ಸಾರ್ವಜನಿಕ ಸಭೆಗಳಿಗೆ ಬರುತ್ತಿದ್ದರು. ಗಾಂಧೀಜಿ, ನೆಹರು, ವಲ್ಲಭಾಯ್‍ಪಟೇಲ್ ಇವರ ಸಾರ್ವಜನಿಕ ಸಭೆಗಳಿಗೆ ಜನಸಾಗರವೇ ಬಂದು ಸೇರುತ್ತಿತ್ತು. ಅಂದಿನ ನಾಯಕರು ಸಾರ್ವಜನಿಕ ಸಭೆಗಳಿಗೆ ಅವರ ಮಾತುಗಳನ್ನು ಕೇಳಲು ಮೈಲುಗಟ್ಟಲೆ ನಡೆದುಕೊಂಡು ಜನ ಬರುತ್ತಿದ್ದರು. ಗಾಂಧೀಜಿ ರೈಲ್ವೆ ಪ್ರವಾಸ ಕೈಗೊಂಡರು ಎಂದರೆ ಪ್ರತಿ ರೈಲ್ವೆ ಸ್ಟೇಷನ್‍ನಲ್ಲೂ ಸಹಸ್ರಾರು ಜನ ಜಮಾಯಿಸಿ ಬಿಡುತ್ತಿದ್ದರು. ಗಾಂಧೀಜಿ ರೈಲಿನಿಂದ ಇಳಿದು ಬಂದು ಭಾಷಣ ಮಾಡಿಯೇ ಹೋಗಬೇಕಾಗಿತ್ತು. ಬ್ರಿಟಿಷ್ ಸರ್ಕಾರದ ಕೈಲಿ ರೈಲ್ವೆ ಇಲಾಖೆ ಇದ್ದರೂ ಗಾಂಧೀಜಿಗಾಗಿ ಪ್ರತಿ ಸ್ಟೇಷನ್‍ನಲ್ಲಿ 10-15 ನಿಮಿಷ ರೈಲು ನಿಲ್ಲುವುದು ಅನಿವಾರ್ಯವಾಗಿತ್ತು.
ಗಾಂಧೀಜಿ ದೇಶದ ಚುಕ್ಕಾಣಿ ಹಿಡಿದ ಒಡನೆ ಅವರೊಂದಿಗೆ ಅನೇಕ ರಾಜ್ಯ ಮಟ್ಟದ ನಾಯಕರು ಅವರೊಡನೆ ಕೈಜೋಡಿಸಿದರು. ಅಂತಹ ಚುಂಬಕಶಕ್ತಿ ಗಾಂಧೀಜಿಯವರದಾಗಿತ್ತು. ಹಾಗೆ ಆಕರ್ಷಿತರಾದವರಲ್ಲಿ ಜವಾಹರಲಾಲ್‍ರೂ ಒಬ್ಬರು.
ಜವಾಹರಲಾಲ್‍ನೆಹರು ಅವರಿಗೆ ಮೊದಲ ಬಾರಿಗೆ ಸೆರೆಮನೆಗೆ ಹೋಗುವ ಸಂದರ್ಭ ಒದಗಿತ್ತು. ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದ ಮಗ ಸೆರೆಮನೆಯಲ್ಲಿ ಎಷ್ಟು ಕಷ್ಟಪಡುವನೋ ಎಂಬ ಚಿಂತೆ ಅವರ ತಂದೆ ಮೋತಿಲಾಲರಿಗೆ. ಇಡೀ ರಾತ್ರಿ ಅವರಿಗೆ ನಿದ್ರೆ ಬರಲಿಲ್ಲ. ಮಗನ ಬಗೆಯ ಚಿಂತೆ ಸರಿಹೊತ್ತಿನಲ್ಲಿ ಅವರು ಪಲ್ಲಂಗ ಬಿಟ್ಟು ಬಂದು ನೆಲದಲ್ಲಿ ಮಲಗಿದರಂತೆ. ನನ್ನ ಮಗನಿಗೆ ಇದೆಂಥ ಪರಿಸ್ಥಿತಿ ಉಂಟಾಗಿರಬಹುದೋ ಎಂದು ಚಿಂತಿಸಿದರಂತೆ ಮುಂದೆ ಮೋತಿಲಾಲರು ಕಾಂಗ್ರೆಸ್ ಸೇರಿದರು. ಸೆರೆಮನೆಯ ವಾಸವನ್ನು ಅನುಭವಿಸಿದರು. ಮೋತಿಲಾಲರ ಮೊದಲ ಮಗಳು ವಿಜಯಲಕ್ಷ್ಮಿ ಪಂಡಿತ್ ಇನ್ನೊಬ್ಬ ಮಗಳು ಕೃಷ್ಣಹತೀಸಿಂಗ್ ಮತ್ತು ಅವರ ಗಂಡಂದಿರು ಎಲ್ಲರೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಸೆರೆಮನೆ ವಾಸ ಅನುಭವಿಸಿದರು. ದೇಶವನ್ನು ದಾಸ್ಯದಿಂದ ಬಿಡಿಸಲು ನೆಹರು ಮನೆತನದವರೆಲ್ಲ ದುಡಿದಿದ್ದಾರೆ. ಅವರು ತಮ್ಮ ಬಲಿದಾನಗಳಿಂದ ಗಳಿಸಿದ ಸ್ವತಂತ್ರ ಭಾರತಕ್ಕೆ, ದೇಶಕ್ಕಾಗಿ ಏನೂ ಮಾಡದ ಪಕ್ಷವೊಂದರ ವ್ಯಕ್ತಿ ದೇಶದ ಪ್ರಧಾನಿ ಆದದ್ದು ಒಂದು ದುರಂತ. ಬಂಜೆಗೇನು ಗೊತ್ತು ಗರ್ಭಿಣಿ ಹೆಣ್ಣಿನ ಬವಣೆ ನೋವು?
ಪುಕ್ಕಟೆ ಅಧಿಕಾರ ಗಿಟ್ಟಿಸಿದ ಮೋದಿ ಜವಾಹರಲಾಲರನ್ನು ವಾಚಾಮಗೋಚರವಾಗಿ ಬಯ್ಯುತ್ತಾರೆ. ಸ್ವತಂತ್ರಸಂಗ್ರಾಮದ ಕಾಲದಲ್ಲಿ ನೆಹರು ಅವರು ಅತಿ ಹೆಚ್ಚು ಕಾಲ ಸೆರೆಮನೆಯಲ್ಲಿದ್ದರು ಎಂಬುದನ್ನು ಪ್ರಧಾನಿ ಮೋದಿ ಮೊದಲು ಅರಿಯಬೇಕು. ಜವಾಹರಲಾಲ್‍ನೆಹರು ವಿಶ್ವದ ಎಲ್ಲ ರಾಷ್ಟ್ರ ನಾಯಕರಿಗೂ ಪರಿಚಿತರಾಗಿದ್ದರು. ಸ್ವಾತಂತ್ರಪ್ರಾಪ್ತಿಯಾಗುವ ಮೊದಲೇ ಎಷ್ಟೋ ಅಂತರಾಷ್ಟ್ರೀಯ ಸಭೆ ಸಮ್ಮೇಳನಗಳಿಗೆ ಅವರನ್ನು ಆಹ್ವಾನಿಸಲಾಗುತ್ತಿತ್ತೆಂಬುದೇ ಅವರ ವಿದ್ವತ್ತಿಗೆ ಸಾಕ್ಷಿ.
ಜವಾಹರಲಾಲ್‍ನೆಹರು ಪ್ರಧಾನಿಯಾದ ಮೇಲೆ ಒಂದು ನಿರ್ಧಾರಕ್ಕೆ ಬಂದರು. ಆಗ ವಿಶ್ವದ ಎರಡು ಶಕ್ತಿಕೇಂದ್ರಗಳಾಗಿದ್ದ ಅಮೆರಿಕ ಮತ್ತು ರಷ್ಯಗಳ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿತ್ತು. ಆಗ ಮಹಾತ್ಮಗಾಂಧಿ ಮತ್ತು ಜವಾಹರಲಾಲ್‍ನೆಹರು ವಿಶ್ವಶಾಂತಿಗಾಗಿ ಯುದ್ಧವಿಲ್ಲದ ವಿಶ್ವ ಸ್ಥಾಪನೆಗಾಗಿ ಪಣ ತೊಟ್ಟರು. ಶಕ್ತಿ ಬಣಗಳ ತೆಕ್ಕೆಗೆ ಬೀಳದೆ ಭಾರತವನ್ನು ಕೊನೆಯವರೆಗೂ ಅಲಿಪ್ತ ರಾಷ್ಟ್ರವನ್ನಾಗಿ ಉಳಿಸಿಕೊಂಡು ಬಂದರು. ಅವರು ಅಧಿಕಾರದಲ್ಲಿರುವವರೆಗೂ ಭಾರತ ಬಾಂಬ್ ತಯಾರಿಸಲು ಅವಕಾಶ ಕೊಡಲಿಲ್ಲ.
ಇಂತಹ ಒಬ್ಬ ಉದಾತ್ತ ನೆಹರುರನ್ನು ಕುರಿತು ಹಗುರವಾಗಿ ಮಾತನಾಡುವ ಮೂಢರನ್ನು ನಾವು ನಮ್ಮ ಪ್ರಧಾನಿಯನ್ನಾಗಿ ಆಯ್ಕೆ ಮಾಡಿಕೊಂಡಿದ್ದೇವಲ್ಲಾ ಎಂದು ನಮ್ಮನ್ನು ನಾವೇ ಶಪಿಸಿಕೊಳ್ಳಬೇಕು.
ಕಾಂಗ್ರೆಸ್ಸನ್ನು ಹೇಳಹೆಸರಿಲ್ಲದಂತೆ
ಮಾಡುತ್ತೇವೆ ಎನ್ನುವ ಪ್ರಧಾನಿ ಮೋದಿಗೆ ಪ್ರಜಾಪ್ರಭುತ್ವದಲ್ಲಿ ಲವಲೇಶವೂ ನಂಬಿಕೆ ಇಲ್ಲ ಎಂಬುದು ಸುಸ್ಪಷ್ಟ. ಒಂದು ಪಕ್ಷ ಇನ್ನೊಂದು ಪಕ್ಷವನ್ನು ಚುನಾವಣೆಯಲ್ಲಿ ಪರಾಭವಗೊಳಿಸುತ್ತೇನೆ ಎನ್ನುವುದು ಅದರ ಹಕ್ಕು. ಆದರೆ ತನಗಾಗದ ಒಂದು ಸಂಸ್ಥೆಯನ್ನು ನಿರ್ನಾಮ ಮಾಡುತ್ತೇನೆ ಎನ್ನುವುದು ಸರ್ವಾಧಿಕಾರಿಯ ಧೋರಣೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದವರ ಅಪಾಯಕಾರಿ ಧೋರಣೆ.

 

 – ಹೆಚ್.ಎಸ್.ದೊರೆಸ್ವಾಮಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರತ್ಯೇಕ ರಾಜ್ಯದ ಬೇಡಿಕೆ: ನಾಗಾಲ್ಯಾಂಡ್‌ನ 6 ಜಿಲ್ಲೆಗಳಲ್ಲಿ ಶೂನ್ಯ ಮತದಾನ

0
ನಾಗಾಲ್ಯಾಂಡ್‌ನ ಏಕೈಕ ಲೋಕಸಭಾ ಸ್ಥಾನಕ್ಕೆ ಶುಕ್ರವಾರ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಆದರೆ, ಈಶಾನ್ಯ ರಾಜ್ಯದ ಆರು ಜಿಲ್ಲೆಗಳಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಮುಂದಿಟ್ಟುಕೊಂಡು ಜನರು ಮತದಾನದಿಂದ ದೂರ ಉಳಿದಿದ್ದಾರೆ ಎಂದು 'ಇಂಡಿಯಾ...