Homeಅಂಕಣಗಳುಇದು ಜಯಮಾಲಾ ಮತ್ತು ಹೆಬ್ಬಾಳ್ಕರ್ ನಡುವಿನ ಜಗಳ ಅಲ್ಲ......!!

ಇದು ಜಯಮಾಲಾ ಮತ್ತು ಹೆಬ್ಬಾಳ್ಕರ್ ನಡುವಿನ ಜಗಳ ಅಲ್ಲ……!!

- Advertisement -
- Advertisement -

ಬಹಳ ಹಿಂದೆ ನಟಿಯಾಗಿ ಮಾಧ್ಯಮಗಳಿಗೆ ಸುದ್ದಿಯಾಗುತ್ತಿದ್ದ ಜಯಮಾಲಾ ಈ ಬಾರಿ ಹೊಸ ಸರ್ಕಾರದ ರಚನೆಯಾದ ನಂತರ ಬಹಳ ಕಾಲದ ಮೇಲೆ ಮತ್ತೊಮ್ಮೆ ಸುದ್ದಿಯಾದರು. ಒಂದೇ ಪಕ್ಷದ ಇಬ್ಬರು ಮಹಿಳಾಮಣಿಗಳ ನಡುವಿನ ವಾಗ್ವಾದದ ರೂಪದಲ್ಲಿ ಮಾಧ್ಯಮಗಳು ಆ ವಿಚಾರವನ್ನು ಹೇಳಿದವು. ಹಿಂದಿನ ಅವಧಿಯಲ್ಲಿ ಮಹಿಳಾ ಕಾಂಗ್ರೆಸ್‍ನ ಅಧ್ಯಕ್ಷೆಯಾಗಿದ್ದ ಈಗ ಬೆಳಗಾವಿಯಿಂದ ಶಾಸಕಿಯಾಗಿ ಗೆದ್ದಿರುವ ಲಕ್ಷ್ಮಿ ಹೆಬ್ಬಾಳ್ಕರ್, ಜಯಮಾಲಾ ಅವರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆಯಾಗಿ ಸಿಕ್ಕ ಉನ್ನತ ಪದವಿಯ ಬಗ್ಗೆ ಪ್ರತಿಕ್ರಿಯಿಸುತ್ತಾ “ಬಹುಶಃ ಅವರ ಸೇವೆ ಪಕ್ಷದ ವರಿಷ್ಠರಿಗೆ ಇಷ್ಟವಾಗಿರಬೇಕು. ಅದಕ್ಕಾಗಿ ಕೊಡುಗೆಯ ರೂಪದಲ್ಲಿ ಅವರಿಗೆ ಈ ಸ್ಥಾನ ದಕ್ಕಿರಬೇಕು” ಎಂದು ಬಹಳ ನಿಚ್ಚಳವಾಗಿಯೇ ಲಿಂಗಾಧಾರಿತ ಎಂದು ಕರೆಯಬಹುದಾದ ಹಾನಿಕಾರಕ ಹೇಳಿಕೆ ನೀಡಿದರು. ಇದಕ್ಕೆ ಉತ್ತರವಾಗಿ ಜಯಮಾಲಾ ಅವರೂ ಕೂಡಾ (ಚಾರಿತ್ರ್ಯದ ಪ್ರಶ್ನೆಯನ್ನು ಮಧ್ಯೆ ತರದೇ) “ಹೊಟ್ಟೆಕಿಚ್ಚಿಗೆ ಮದ್ದಿಲ್ಲ” ಎಂದು ಗಾದೆಯನ್ನು ಉಲ್ಲೇಖಿಸುತ್ತಾ ಸಾಕಷ್ಟು ಕಟುವಾಗಿಯೇ ಮಾತನಾಡಿದರು. ಇದು ಇನ್ನೂ ಒಂದಷ್ಟು ವಾದ ಪ್ರತಿವಾದಗಳಿಗೆ ದಾರಿಮಾಡಿತು. ಸಮಾಧಾನದ ಸಂಗತಿಯೆಂದರೆ ಇದೀಗ ಇಬ್ಬರೂ ಒಬ್ಬರನ್ನೊಬ್ಬರು ಸಮಾಧಾನಿಸುತ್ತಾ, ತಾವು ಪರಸ್ಪರರನ್ನು ಹೇಗೆ ಗೌರವಿಸುತ್ತೇವೆ ಎಂದು ಹೇಳಿರುವ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.
ಆದರೆ ಜಯಮಾಲಾ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಇಂತಹ ವಾಗ್ಯುದ್ಧ ಏಕೆ ನಡೆಯಿತು? ಇದು ಕೇವಲ ಹೊಟ್ಟೆಕಿಚ್ಚಿನ ಪ್ರಶ್ನೆ ಮಾತ್ರವೆ? ಲಕ್ಷ್ಮಿಯವರ ಆಪಾದನೆಯಿಂದ ಹುಟ್ಟಿದೀ ವಿವಾದವನ್ನು ಕೊನೆಗೊಳಿಸುತ್ತಾ ಜಯಮಾಲಾ ಅವರು ಹೇಳಿರುವ “ಎಲ್ಲ ಮಹಿಳಾ ಜನಪ್ರತಿನಿಧಿಗಳಿಗೂ ಮುಖ್ಯವಾದ ಖಾತೆಗಳು ಸಿಗಬೇಕು” ಎಂಬ ಆಶಯವನ್ನು ವಿಸ್ತರಿಸಿದರೆ ನಮಗೆ ಸಿಗುವ ಉತ್ತರಗಳೇನು? ಇಂತಹ ದೊಡ್ಡ ಪ್ರಶ್ನೆಗಳು ಈ ಸಣ್ಣ ವಿವಾದದ ಹಿಂದೆ ಅಡಗಿವೆ. ಆದರೆ, ಇವರಿಬ್ಬರಾಗಲೀ, ಇನ್ನಿತರ ಶಾಸಕಿಯರಾಗಲೀ ಅಥವಾ ಇತರೆ ಸಂದರ್ಭಗಳಲ್ಲಿ ತಮ್ಮ ವಾಚಾಳಿತನಕ್ಕೆ ಹೆಸರಾದ ಶೋಭಾ ಕರಂÀದ್ಲಾಜೆಯವರಂತಹ ಮಹಿಳಾ ರಾಜಕಾರಣಿಗಳಾಗಲೀ ಈ ಸಂದರ್ಭದಲ್ಲಿ ಎತ್ತಲೇಬೇಕಿದ್ದ ಬಹಳ ಮುಖ್ಯವಾಗಿದ್ದ ಸಂಗತಿಗಳನ್ನು ಎಲ್ಲಿಯೂ ಮಾತನಾಡುವುದಿಲ್ಲ. ಹಿಂದೆಯೂ ಮಾತನಾಡಿರಲಿಲ್ಲ!
ಹಾಗೆ ನೋಡಿದರೆ ಚುನಾವಣೆಗಳಲ್ಲಿ ಮಹಿಳಾ ಪ್ರಾತಿನಿಧ್ಯವು, ನಮ್ಮ ದೇಶದಲ್ಲಿ ಬಹಳ ಕಾಲದಿಂದ ಭಾಷಣ ಬರವಣಿಗೆಗಳಲ್ಲಿ ಚರ್ಚೆಗೆ ಬಂದಿರುವ, ಯಾವ ರಾಜಕೀಯ ಪಕ್ಷವೂ ಕೈಗೆತ್ತಿಕೊಳ್ಳಲು ಬಯಸದ, ಚಳುವಳಿಯಾಗಿ ಸಾಂಕೇತಿಕವಾಗಿ ಕಂಡರೂ ಈವರೆಗೆ ಎಂದೂ ಹರಳುಗಟ್ಟದೇ ಹೋದ ಒಂದು ಬಹುಮುಖ್ಯವಾದ ವಿಚಾರ!
ಭಾರತ ಮತ್ತು ಮಹಿಳಾ ರಾಜಕಾರಣಿಗಳು: ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯದ ವಿಚಾರದಲ್ಲಿ ಭಾರತವು ಪ್ರಪಂಚದ 193 ದೇಶಗಳ ಪೈಕಿ 148ನೇ ಸ್ಥಾನದಲ್ಲಿದೆ ಎಂದು ಅಧ್ಯಯನಗಳು ಹೇಳುತ್ತವೆ. ಇರಾಕ್, ಸೊಮಾಲಿಯಾ, ಸೌದಿ ಅರೇಬಿಯಾದಂತಹ ಬಡ ಮತ್ತು ಅಶಾಂತ ಪ್ರದೇಶಗಳಲ್ಲಿರುವ ದೇಶಗಳಲ್ಲೂ ಮಹಿಳಾ ಪ್ರಾತಿನಿಧ್ಯ ಭಾರತಕ್ಕಿಂತ ಉತ್ತಮವಾಗಿದೆ. ಮಹಿಳಾ ಸಂಸತ್‍ಪಟುಗಳ ಸರಾಸರಿ ಜಾಗತಿಕ ಮಟ್ಟದಲ್ಲಿ 22 ಇದ್ದರೆ ಭಾರತದಲ್ಲಿ ಕಳೆದ ಚುನಾವಣೆಯಲ್ಲಿ ಇದು 11.8% ಇತ್ತು; ರಾಜ್ಯಸಭೆಯಲ್ಲಿ 11.1. ಅಂದರೆ ಭಾರತದ ಲೋಕಸಭೆಯಲ್ಲಿರುವ ಒಟ್ಟು 542 ಸ್ಥಾನಗಳಲ್ಲಿ (2014ರ ಅಂಕಿಸಂಖ್ಯೆಯ ಪ್ರಕಾರ) ಒಟ್ಟು ಮಹಿಳಾ ಸಂಸತ್‍ಸದಸ್ಯರ ಸಂಖ್ಯೆ ಕೇವಲ 64! (ನಂತರ ನಡೆದ ಉಪಚುನಾವಣೆಗಳ ಫಲಿತಾಂಶವನ್ನು ಸೇರಿಸಿಲ್ಲ).
ಇದರಲ್ಲಿ ಆಶ್ಚರ್ಯವೇನೂ ಇಲ್ಲ. ಏಕೆಂದರೆ ಅಷ್ಟೆಲ್ಲ ದೊಡ್ಡ ಘೋಷಣೆ ಯೋಜನೆಗಳನ್ನು ಹೊರಡಿಸುವ ಯಾವ ಪಕ್ಷವೂ ಚುನಾವಣೆಗಳ ಸಂದರ್ಭದಲ್ಲಿ ಮಹಿಳೆಯರನ್ನು ನಂಬುವುದಿಲ್ಲ; ಅಂದರೆ ಅವರು ಗೆಲ್ಲಬಲ್ಲ ಅಭ್ಯರ್ಥಿಗಳೆಂದು ರಾಜಕೀಯ ಪಕ್ಷಗಳು ಎಂದೂ ಭಾವಿಸಿಲ್ಲ. ಹಾಗಾಗಿ ಭಾರತದ ಅತಿ ಹಳೆಯ ಮತ್ತು ಈ ದೇಶದ ಮೊದಲ ಮಹಿಳಾ ಪ್ರಧಾನಿಯನ್ನು ನೀಡಿದ, ದೀರ್ಘಕಾಲ ಮಹಿಳೆಯರ ನಾಯಕತ್ವದಡಿಯಲ್ಲಿದ್ದ ಪಕ್ಷವಾದ ಕಾಂಗ್ರೆಸ್ ಕೇವಲ 60 ಮಂದಿ ಮಹಿಳೆಯರಿಗೆ ಟಿಕೆಟ್ ನೀಡಿದರೆ, ಹಲವು ಬಗೆಯಲ್ಲಿ ‘ಮಾತಾ ರಾಜಕಾರಣ’ ಮಾಡುವ (ಗೋಮಾತೆಯಿಂದ ಹಿಡಿದು ಗಂಗಾಮಾತೆ, ಭಾರತಮಾತೆಯವರೆಗೆ) ದೊಡ್ಡ ಪಕ್ಷ ಬಿಜೆಪಿ ಕೇವಲ 38 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಇತರ ರಾಷ್ಟ್ರೀಯ ಪಕ್ಷಗಳಾದ ಬಿಎಸ್‍ಪಿ 21, ಭಾರತೀಯ ಕಮ್ಯುನಿಸ್ಟ್ ಪಕ್ಷ 6, ಮಾಕ್ರ್ಸ್‍ವಾದಿ ಕಮ್ಯುನಿಸ್ಟ್ ಪಕ್ಷ 11 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ.
ಮಹಿಳೆಯರೇ ಅತ್ಯುನ್ನತ ನಾಯಕಿಯರಾಗಿರುವ ಪಕ್ಷಗಳಲ್ಲೂ ಮಹಿಳಾ ಪ್ರಾತಿನಿಧ್ಯವೇನೂ ಅತ್ಯುನ್ನತ ಸ್ಥಿತಿಯಲ್ಲಿಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು ಒಟ್ಟು 293 ಸೀಟುಗಳಲ್ಲಿ 43, ಬಹುಜನ ಸಮಾಜ ಪಕ್ಷವು ಒಟ್ಟು 403 ಸೀಟುಗಳಲ್ಲಿ 21, ತಮಿಳುನಾಡಿನ ಎಐಎಡಿಎಂಕೆ ಪಕ್ಷವು ಒಟ್ಟು 234 ಸೀಟುಗಳಲ್ಲಿ 29 ಮಹಿಳಾ ಅಭ್ಯರ್ಥಿಗಳಿಗೆ ಮಾತ್ರವೇ ಟಿಕೆಟ್ ನೀಡಿವೆ.
ಇದೆಲ್ಲದರ ಒಟ್ಟರ್ಥವೇನು? ಪಕ್ಷದ ಘೋಷಣೆ ಏನೇ ಆಗಿರಲಿ, ಪಕ್ಷದ ನಾಯಕರು ಯಾರೇ ಆಗಿರಲಿ ಮಹಿಳೆಯರಿಗೆ ದಕ್ಕುವುದು ಮಾತ್ರ ಹಿಡಿಯಷ್ಟು ಸ್ಥಾನವಷ್ಟೇ ಎಂದೇ ತಾನೆ? ಆ ಸ್ಥಾನವನ್ನೂ ದಕ್ಕಿಸಿಕೊಳ್ಳುವವರು ಯಾರು? ಅವರಿಗೆ ಕುಟುಂಬ ರಾಜಕಾರಣದ ಇತಿಹಾಸ ಇರಬೇಕು; ಜೊತೆಗೆ ಸಾಕಷ್ಟು ಮುಖ್ಯವಾಹಿನಿ ರಾಜಕಾರಣಿಗಳ ಶೈಲಿಯಲ್ಲಿ ದುಡ್ಡು ಚೆಲ್ಲುವ ಸಾಮಥ್ರ್ಯ ಇರಬೇಕು; ಅಥವಾ ಹಾಗೆ ದುಡ್ಡು ಚೆಲ್ಲಬಲ್ಲ ಮತ್ತು ಲಾಬಿ ಮಾಡಬಲ್ಲ ‘ಗಾಡ್‍ಫಾದರ್’ಗಳಿರಬೇಕು.
ಚುನಾವಣೆಯಲ್ಲಿ ಮಹಿಳಾ ಪ್ರಾತಿನಿಧ್ಯ-ಸ್ವಾತಂತ್ರ್ಯಪೂರ್ವದ ಕನಸು
ಜನಪ್ರತಿನಿಧಿಗಳಾಗಿ ತಾವೂ ಕೂಡಾ ಇರಬೇಕೆಂಬ ಹಕ್ಕೊತ್ತಾಯವನ್ನು ಭಾರತದಲ್ಲಿ ಮೊದಮೊದಲು ಮುಂದಿಟ್ಟಿದ್ದು 1920ರ ಸುಮಾರಿಗೆ. ಸ್ವಾತಂತ್ರ್ಯ ಚಳವಳಿಯ ಮೂಲಕ ಸಾಮಾಜಿಕ ವಲಯಕ್ಕೆ ಪ್ರವೇಶ ಪಡೆದಿದ್ದ ಮಹಿಳೆಯರು (ಬಹುಪಾಲು ಮೇಲ್ಜಾತಿ ಮೇಲ್ವರ್ಗಗಳ, ಒಂದಷ್ಟು ಶಿಕ್ಷಣವನ್ನೂ ಪಡೆದಿದ್ದ ಮಹಿಳೆಯರು), ದೇಶೀಯ ಪಕ್ಷ/ಸಂಘಟನೆಗಳು ಭಾರತೀಯ ಪ್ರತಿನಿಧಿತ್ವದ ಪ್ರಶ್ನೆಯನ್ನು ಎತ್ತಿದ ತಕ್ಷಣವೇ ಮಹಿಳಾ ಪ್ರತಿನಿಧಿತ್ವದ ಪ್ರಶ್ನೆಯನ್ನೂ ಎತ್ತಿದ್ದರು. ಕಮಲಾ ನೆಹರೂ, ಸರೋಜಿನಿ ನಾಯ್ಡು, ಮುತ್ತುಲಕ್ಷ್ಮಿ ರೆಡ್ಡಿ ಮೊದಲಾದ ಅನೇಕ ಮಹಿಳಾ ನಾಯಕಿಯರು ಇದಕ್ಕಾಗಿ ಆಂದೋಲನಗಳನ್ನು ನಡೆಸಿ ಬ್ರಿಟಿಷ್ ಸರ್ಕಾರಕ್ಕೆ ಮನವಿಗಳನ್ನು ಸಲ್ಲಿಸಿದರು. ಬ್ರಿಟೀಷ್ ಸರ್ಕಾರ ಈ ಬೇಡಿಕೆಯನ್ನು ಪರಿಶೀಲಿಸುವ ಭರವಸೆ ನೀಡಿತು. ವಿಪರ್ಯಾಸವೆಂದರೆ ರಾಷ್ಟ್ರೀಯ ಚಳವಳಿಯ ಭಾರತೀಯ ನಾಯಕರೇ ಇದನ್ನು ತೀವ್ರವಾಗಿ ವಿರೋಧಿಸಿದರು. ಸ್ವತಃ ಗಾಂಧೀಜಿ, ಈ ಎಲ್ಲ ಮಹಿಳೆಯರನ್ನು ಕರೆದು, ‘ಭಾರತದ ಒಳಿತು ಮತ್ತು ಸ್ವಾತಂತ್ರ್ಯ ಚಳವಳಿಯ ಐಕ್ಯತೆಯ’ ದೃಷ್ಟಿಯಿಂದ ಈ ಬೇಡಿಕೆಯಿಂದ ಹಿಂದೆ ಸರಿಯುವಂತೆ ಅವರ ಮನವೊಲಿಸಲು ನೋಡಿದರು. (‘ಆಧುನಿಕ ಭಾರತದಲ್ಲಿ ಮಹಿಳೆ’, ಲೇಖಕರು: ಜೆರಾಲ್ಡಿನ್ ಫೊಬ್ರ್ಸ್). ಆ ತಕ್ಷಣದಲ್ಲಿ ಈ ಬೇಡಿಕೆ ಸ್ವಲ್ಪ ಹಿನ್ನೆಲೆಗೆ ಸರಿದರೂ, ಆಗಾಗ ತೆರೆಸರಿಸಿ ಹೊರಬರುತ್ತಲೇ ಇತ್ತು. ಕೊನೆಗೆ ಮದ್ರಾಸ್ ಪ್ರಾಂತ್ಯ 1921ರಲ್ಲಿ ಮೊದಲ ಹಂತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಕಲ್ಪಿಸಿತು. (ಮತದಾನಕ್ಕೆ ಆಗ ಇದ್ದ ಷರತ್ತುಗಳಾದ ಪದವೀಧರರಾಗಿರುವುದು ಅಥವಾ ಆಸ್ತಿಯ ಒಡೆತನ ಹೊಂದಿರುವುದನ್ನು ಮಹಿಳೆಯರಿಗೂ ಅನ್ವಯಿಸಿತ್ತು).
ಆದರೆ, ಭಾರತದಲ್ಲಿ ಬೇರೂರಿರುವ ಆಳವಾದ ಬ್ರಾಹ್ಮಣೀಯ ಪಿತೃಪ್ರಧಾನತೆಯು ರಾಜಕಾರಣದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಕಲ್ಲುಮುಳ್ಳಿನ ಹಾದಿಯನ್ನಾಗಿ ಪರಿವರ್ತಿಸಿದೆ!! ಆದ್ದರಿಂದಲೇ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಇಲ್ಲಿಯವರೆಗೆ ಹೆಚ್ಚಬೇಕಿದ್ದ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಲೋಕಸಭೆಯಲ್ಲಿ ಕುಗ್ಗುತ್ತಿದೆ. ರಾಜ್ಯಗಳಲ್ಲೂ ಅಷ್ಟೇ; ಕರ್ನಾಟಕವನ್ನೇ ತೆಗೆದುಕೊಂಡರೂ ಈ ನೋಟ ನಿಚ್ಚಳವಾಗಿ ಕಾಣುತ್ತದೆ!
ಈ ಬಾರಿಯ ಕರ್ನಾಟಕದ ಚುನಾವಣಾ ರಾಜಕಾರಣದ ನಕ್ಷೆಯಲ್ಲಿ ಮಹಿಳೆಯರ ಪ್ರಾತಿನಿಧ್ಯವನ್ನು ವಿಶ್ಲೇಷಿಸಬೇಕು. ಈ ಬಾರಿ ಕರ್ನಾಟಕದ ಚುನಾವಣಾ ಕಣದಲ್ಲಿ ಒಟ್ಟು 219 ಮಹಿಳಾ ಸ್ಫರ್ಧಿಗಳಿದ್ದರು. ಇದರಲ್ಲಿ ಪ್ರಮುಖ ಪಕ್ಷಗಳ ಪಾಲು ಈ ರೀತಿ ಇದೆ. ಬಿಜೆಪಿ ತನ್ನ ಒಟ್ಟು 213 ಅಭ್ಯರ್ಥಿಗಳಲ್ಲಿ 6 ಮಂದಿ ಮಹಿಳೆಯರಿಗೆ ಅವಕಾಶ ನೀಡಿತ್ತು, ಕಾಂಗ್ರೆಸ್ ಒಟ್ಟು 218ರಲ್ಲಿ 16 ಮಂದಿಗೆ ಅವಕಾಶ ನೀಡಿದ್ದರೆ, ಜೆಡಿಎಸ್ 4 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಉಳಿದ ಎಲ್ಲರೂ ಸ್ವತಂತ್ರವಾಗೋ ಇನ್ನಿತರ ಸಣ್ಣ ಪಕ್ಷಗಳಿಂದಲೋ ಸ್ಫರ್ಧಿಸಿದ್ದರು. ಇದರಲ್ಲಿ ಅಂತಿಮವಾಗಿ ಗೆದ್ದು ಶಾಸನ ಸಭೆಯ ಒಳಗೆ ಪ್ರವೇಶಿಸಿದವರ ಸಂಖ್ಯೆ ಕೇವಲ 7. ಕಾಂಗ್ರೆಸ್‍ನಿಂದ ಲಕ್ಷ್ಮಿ ಹೆಬ್ಬಾಳ್ಕರ್, ರೂಪಕಲಾ ಎಂ, ಕನೀಜ್ ಫಾತಿಮಾ ಹಾಗೂ ಡಾ.ಅಂಜಲಿ ನಿಂಬಾಳ್ಕರ್, ಸೌಮ್ಯರೆಡ್ಡಿ-ಈ ಐದು ಮಂದಿ ಗೆದ್ದರೆ, ಬಿಜೆಪಿಯಿಂದ ಗೆದ್ದರುವ ಶಶಿಕಲಾ ಜೊಲ್ಲೆ, ಪೂರ್ಣಿಮಾ ಕೆ ಹಾಗೂ ರೂಪಾಲಿ ಸಂತೋಷ್ ನಾಯ್ಕ್ ಸೇರಿದಂತೆ ಕೇವಲ 7 ಮಂದಿ ಮಾತ್ರ ಈ ಸವಾಲಿನ ಕೆಲಸದಲ್ಲಿ ಯಶಸ್ವಿಯಾಗಿದ್ದಾರೆ. 4 ಕ್ಷೇತ್ರಗಳಲ್ಲಿ ಮಹಿಳಾ ಸ್ಫರ್ಧಿಗಳು ಎರಡನೇ ಸ್ಥಾನಕ್ಕೆ ತಲುಪಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 175 ಮಂದಿ ಮಹಿಳೆಯರು ಸ್ಫರ್ಧಿಸಿದ್ದರು ಮತ್ತು ಅವರಲ್ಲಿ ಗೆದ್ದವರು ಕೇವಲ 6 ಮಾತ್ರ.
ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಮಹಿಳಾ ಶಾಸಕರು ಆಯ್ಕೆಯಾಗಿದ್ದು 1962ರಲ್ಲಿ. 18 ಮಂದಿ ಮಹಿಳೆಯರು ಶಾಸಕಿಯರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ್ದರು. ಆದರೆ ಅಲ್ಲಿಂದ ಮುಂದೆ ಈ ಸಂಖ್ಯೆಯಲ್ಲಿ ಹೆಚ್ಚಳವಾಗುವ ಬದಲು ನಿರಂತರವಾಗಿ ಇಳಿಕೆಯೇ ಆಗುತ್ತಾ ಬಂದಿರುವುದು ದುರಂತ.
ರಾಜಕೀಯ ಪಕ್ಷಗಳ ಮಹಿಳಾಪರ (ಅಥವಾ ಇನ್ನಿತರ) ಘೋಷಣೆಗಳ ಖೆಡ್ಡಾಗೆ ಬಿದ್ದು ತಮ್ಮದೇ ಹಿತಾಸಕ್ತಿಗೆ ವಿರುದ್ಧವಾದರೂ ಸರಿಯೇ, ಕುರುಡಾಗಿ ಮತಚಲಾಯಿಸುವ ಮತಬ್ಯಾಂಕುಗಳಾಗಿ ಮಹಿಳೆಯರು ಬೇಕು; ಅಧಿಕಾರವನ್ನು ಹಂಚಿಕೊಳ್ಳುವ ರಾಜಕಾರಣಿಗಳಾಗಿ ಬೇಡ!!! ಆದ್ದರಿಂದಲೇ, ಸಾಮಾನ್ಯ ಸಂದರ್ಭಗಳಲ್ಲಿ ಸ್ನೇಹದಿಂದಲೇ ಇದ್ದಿರಬಹುದಾದ ಜಯಮಾಲಾ ಮತ್ತು ಲಕ್ಷ್ಮಿಯವರಂತಹ ಮಹಿಳಾ ರಾಜಕಾರಣಿಗಳು ಸಿಕ್ಕ ಒಂದು ಅಪರೂಪದ ಅವಕಾಶಕ್ಕಾಗಿ ಸಾರ್ವಜನಿಕವಾಗಿ ಹಾನಿಕರ ಟೀಕೆಗಳಿಗಿಳಿಯಬೇಕಾಗುತ್ತದೆ; ಅದಕ್ಕಿಂತಲೂ ದುರಂತವೆಂದರೆ, ಅಧಿಕಾರಕ್ಕಾಗಿ ನಡೆಯುವ ಪೈಪೋಟಿಗಳಲ್ಲಿ ಪುರುಷ ರಾಜಕಾರಣಿಗಳ ಇಂತಹ ಚೇಷ್ಟೆಗಳು ‘ರಾಜಕೀಯ ಮುತ್ಸದ್ದಿತನ’ವೆಂಬ ವ್ಯಾಖ್ಯಾನಕ್ಕೊಳಪಟ್ಟರೆ, ಮಹಿಳಾ ರಾಜಕಾರಣಿಗಳು ಕಂಡವರ ಬಾಯಿಗೆ ಅಗಿಯುವ ಅಡಿಕೆಯಾಗುತ್ತಾರೆ. ಕರ್ನಾಟಕದ ಖ್ಯಾತ ಚಿಂತಕರೊಬ್ಬರು ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ತಾವು ಸೈದ್ಧಾಂತಿಕವಾಗಿ ವಿರೋಧಿಸುವ ಪಕ್ಷದ ಮಹಿಳಾ ರಾಜಕಾರಣಿಯೊಬ್ಬರನ್ನು ಬಹಳ ವ್ಯಂಗ್ಯವಾಗಿ ‘………….ಅವರ ಮುದ್ದಿನ ಗಿಣಿ’ ಎಂದೇ ಉಲ್ಲೇಖಿಸುತ್ತಾರೆ ಮತ್ತು ಸಭೆಯಲ್ಲಿ ನೆರೆದಿರುವ ಎಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಾರೆ!! ಉಳಿದ ವಿಚಾರಗಳು ಬಂದಾಗ ಬಹಳ ಸಂವೇದನಾಶೀಲರಾಗಿ ವರ್ತಿಸುವ ಪ್ರಗತಿಪರರು ಸಹಾ ಮಹಿಳೆಯರ ವಿಚಾರ ಬಂದಾಗ ಹೀಗೆ ವರ್ತಿಸುವುದು ಹೊಸದೇನಲ್ಲ. ಆದರೆ ದುರಂತವಂತೂ ಹೌದು.

– ಮಲ್ಲಿಗೆ ಸಿರಿಮನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...