Homeಅಂಕಣಗಳುವಿಜ್ಞಾನದ ದಾರಿಯ ಹೆಣ್ಣು ಹೆಜ್ಜೆಗುರುತು ಕಮಲಾ ಸೊಹೊನಿ

ವಿಜ್ಞಾನದ ದಾರಿಯ ಹೆಣ್ಣು ಹೆಜ್ಜೆಗುರುತು ಕಮಲಾ ಸೊಹೊನಿ

- Advertisement -
- Advertisement -

ಬೆಂಗಳೂರು ಈಗ ಐಟಿಬಿಟಿ ನಗರವಾಗಿರಬಹುದು. ಆದರೆ ಈ ಕಿರೀಟ ಧರಿಸುವುದಕ್ಕಿಂತ ಮುನ್ನ ಅದು ಬೌದ್ಧಿಕತೆಯ ಕೇಂದ್ರವಾಗಿ, ವೈಜ್ಞಾನಿಕ ಸಂಶೋಧನೆಗಳ ನೆಲೆಯಾಗಿ ಗಮನ ಸೆಳೆದಿತ್ತು. ಬೆಂಗಳೂರು ವಿಶ್ವ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಪ್ರತಿಷ್ಠಿತ ಸಂಸ್ಥೆಗಳು ಅಲ್ಲಿದ್ದವು. ಅಂಥ `ಬೆಂಗಳೂರು ರತ್ನ’ಗಳಲ್ಲಿ 1909ರಲ್ಲಿ ಶುರುವಾದ ಭಾರತೀಯ ವಿಜ್ಞಾನ ಸಂಸ್ಥೆ (ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ – ಐಐಎಸ್‍ಸಿ) ಕೂಡಾ ಒಂದು.
ವಿವೇಕಾನಂದರೊಡನೆ ಹಡಗುಪ್ರಯಾಣ ಮಾಡುವಾಗ ನಡೆದ ಸಂಭಾಷಣೆಯಿಂದ ಪ್ರೇರಿತರಾದ ಜಮ್‍ಶೆಟ್‍ಜಿ ಟಾಟಾ ಹಾಗೂ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರು ಐಐಎಸ್‍ಸಿ (ಜನರ ಬಾಯಲ್ಲಿ ಟಾಟಾ ಇನ್‍ಸ್ಟಿಟ್ಯೂಟ್) ಅನ್ನು 1909ರಲ್ಲಿ ಶುರುಮಾಡಿದರು. ಭಾರತದ ಪ್ರತಿಷ್ಠಿತ, ಮೇಧಾವಿ ವಿಜ್ಞಾನಿಗಳನ್ನು ರೂಪುಗೊಳಿಸಿದ ಹೆಮ್ಮೆ ಆ ಸಂಸ್ಥೆಗಿದೆ. ಇವತ್ತಿಗೂ ಅದು ದೇಶದ ಅತ್ಯುಚ್ಛ ಸಂಶೋಧನಾ ಸಂಸ್ಥೆಯಾಗಿದೆ. ಏಷ್ಯಾದಲ್ಲೇ ವಿಜ್ಞಾನಕ್ಕೆ ನೊಬೆಲ್ ಬಹುಮಾನ ಪಡೆದ ಪ್ರಥಮ ಭೌತವಿಜ್ಞಾನಿ ಸರ್ ಸಿ.ವಿ.ರಾಮನ್ ಸೇರಿದಂತೆ ಹಲವರು ಸಂಸ್ಥೆಯನ್ನು ಬೆಳೆಸಿದ್ದಾರೆ.
ಆದರೆ ಆ ವಿಜ್ಞಾನ ದೇಗುಲಕ್ಕೆ ಬಹುಕಾಲದವರೆಗೂ ಮಹಿಳೆಯರಿಗೆ ಪ್ರವೇಶವಿರಲಿಲ್ಲ! ಈಗಲೂ ಮೇಲ್ಮಟ್ಟದ ಬೌದ್ಧಿಕತೆಯನ್ನು ಬಯಸುವ ಸಂಶೋಧನಾ ವಿಜ್ಞಾನ ಸಂಸ್ಥೆಯಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರಿದ್ದಾರೆ. ಶತಮಾನೋತ್ಸವ ಆಚರಿಸಿರುವ ಆ ಸಂಸ್ಥೆಯಲ್ಲಿ ಮಹಿಳಾ ಡೀನುಗಳು ಅತಿ ಕಡಿಮೆ. ಕೋರ್ಟ್ ಮತ್ತು ಕೌನ್ಸಿಲ್‍ನಂತಹ ನಿರ್ಧಾರಕ ಸ್ಥಾನಗಳಲ್ಲಿ ಮಹಿಳೆಯರು ಅತಿ ಕಡಿಮೆ. ಇದುವರೆಗು ಮಹಿಳೆಯೊಬ್ಬಳು ಸಂಸ್ಥೆಯ ನಿರ್ದೇಶಕ ಸ್ಥಾನಕ್ಕೆ ಬಂದಿಲ್ಲ. ಡೀನ್ ಇರಲಿ, ಮೆಟಲರ್ಜಿಯಂತಹ ವಿಭಾಗಗಳಲ್ಲಿ ಇವತ್ತಿನವರೆಗೂ ಒಬ್ಬ ಮಹಿಳೆಯೂ ಬಂದಿಲ್ಲ. 2017-18ರಲ್ಲಿ ಸಂಸ್ಥೆ ಸೇರಿದ 42 ಫ್ಯಾಕಲ್ಟಿ ಸದಸ್ಯರಲ್ಲಿ ನಾಲ್ವರಷ್ಟೇ ಮಹಿಳೆಯರು.
ಇಂಥ ಪ್ರತಿಕೂಲ ವಾತಾವರಣದಲ್ಲಿ ಭಾರತದ ಮೊತ್ತಮೊದಲ ಪಿಎಚ್‍ಡಿ ಪಡೆದ ಮಹಿಳಾ ವಿಜ್ಞಾನಿ ಕಮಲಾ ಸೊಹೊನಿ 1933ರಲ್ಲಿ ಐಐಎಸ್‍ಸಿಗೆ ಪ್ರವೇಶ ಗಿಟ್ಟಿಸಿದರು. ಕಮಲಾ ನಡೆಸಿದ ಸಂಶೋಧನೆಯದು ಒಂದು ತೂಕವಾದರೆ ಅವರು ವಿಜ್ಞಾನಿಯಾದ ಕಥೆ ಏಳು ತೂಕದ್ದಾಗಿದೆ.
`ಇಲ್ಲ, ಇಲ್ಲ..’
ಮಧ್ಯಪ್ರದೇಶದ ಇಂದೋರಿನಲ್ಲಿ 1912ರಲ್ಲಿ ಹುಟ್ಟಿದ ಕಮಲಾರ ತಂದೆ ನಾರಾಯಣ ಭಾಗವತ್ ಹಾಗೂ ದೊಡ್ಡಪ್ಪ ಬೆಂಗಳೂರಿನ ಟಾಟಾ ವಿಜ್ಞಾನ ಸಂಸ್ಥೆಯಲ್ಲಿ ಕಲಿತ ರಸಾಯನಶಾಸ್ತ್ರಜ್ಞರು. ಎಳವೆಯಿಂದಲೇ ವಿಜ್ಞಾನ ಕುತೂಹಲಿಯಾಗಿದ್ದ ಕಮಲಾ ಮನೆತನದ ಪರಂಪರೆಯಂತೆ ತಾನೂ ಭೌತಶಾಸ್ತ್ರ, ರಸಾಯನಶಾಸ್ತ್ರ ಬಿಎಸ್ಸಿಯನ್ನು ಮುಂಬಯಿ ವಿವಿಯಲ್ಲಿ ಮಾಡಿದರು. ಪಾರಿತೋಷಕಗಳೊಂದಿಗೆ ಪದವಿ ಪಡೆದು ಬೆಂಗಳೂರಿನ ಐಐಎಸ್‍ಸಿನಲ್ಲಿ ರಿಸರ್ಚ್ ಫೆಲೋಶಿಪ್‍ಗೆ ಸೀಟು ಸಿಗಬಹುದೆಂದು ಭಾವಿಸಿದ್ದರು. ಆದರೆ 22 ವರುಷದ ತರುಣಳು ಅರ್ಹಳಾಗಿದ್ದರೂ ಪ್ರವೇಶ ನಿರಾಕರಿಸಲಾಯ್ತು. ಪ್ರವೇಶಾವಕಾಶವನ್ನು ತಡೆಹಿಡಿದವರು ಬೇರಾರೂ ಅಲ್ಲ, ಸಂಸ್ಥೆಯ ನಿರ್ದೇಶಕರಾಗಿದ್ದ ಸರ್ ಸಿ. ವಿ. ರಾಮನ್!
ಮಹಿಳಾ ಶಿಕ್ಷಣ ಅಗತ್ಯವೆಂದು ಸಾರ್ವಜನಿಕವಾಗಿ ಪ್ರತಿಪಾದಿಸುತ್ತಿದ್ದ ರಾಮನ್, ಸಂಸ್ಥೆಯ ಹಳೆಯ ವಿದ್ಯಾರ್ಥಿಗಳಾಗಿದ್ದ ಕಮಲಾ ಕುಟುಂಬದವರು ವಿನಂತಿಸಿದರೂ ಪ್ರವೇಶ ನಿರಾಕರಿಸಿದರು. ಕೊನೆಗೆ ನಿರ್ದೇಶಕರ ಕಚೇರಿಯೆದುರು ಕಮಲಾ ಸತ್ಯಾಗ್ರಹ ಹೂಡಿ ಯಾಕೆ ಪ್ರವೇಶ ನೀಡುವುದಿಲ್ಲವೆಂದು ಲಿಖಿತವಾಗಿ ತಿಳಿಸಬೇಕೆಂದು ಕೇಳಿದರು. ದಾರಿಯಿಲ್ಲದೆ ರಾಮನ್ 1. ಮೊದಲ ವರ್ಷ ಪ್ರೊಬೇಷನ್‍ನಲ್ಲಿ (ರೆಗ್ಯುಲರ್ ಕ್ಯಾಂಡಿಡೇಟ್ ಆಗಿ ಅಲ್ಲ,) ಪೂರೈಸಬೇಕು 2. ಗೈಡ್ ಹೇಳಿದಲ್ಲಿ ರಾತ್ರಿಯೂ ಕೆಲಸ ಮಾಡಬೇಕು 3. ವಿದ್ಯಾರ್ಥಿಗಳ ಏಕತೆಗೆ ಭಂಗತರುವಂತೆ ನಡೆದುಕೊಳ್ಳಬಾರದು ಎಂಬ ಮೂರು ಷರತ್ತುಗಳೊಂದಿಗೆ ಪ್ರವೇಶ ನೀಡಿದರು.
ಅವಮಾನವೆನಿಸಿದರೂ ಷರತ್ತಿಗೆ ಒಪ್ಪಿ 1933ರಲ್ಲಿ ಕಮಲಾ ಬಯೋಕೆಮಿಸ್ಟ್ರಿ ವಿಭಾಗಕ್ಕೆ ಸೇರಿದಾಗ ಐಐಎಸ್‍ಸಿ ಸೇರಿದ ಮೊದಲ ಮಹಿಳೆಯಾದರು. ಮುಂದೊಮ್ಮೆ ಭಾರತೀಯ ಮಹಿಳಾ ವಿಜ್ಞಾನಿಗಳ ಸಂಘದಲ್ಲಿ, `ರಾಮನ್ ಮಹಾನ್ ವಿಜ್ಞಾನಿಯಾದರೂ ಸಣ್ಣಬುದ್ಧಿಯವರು. ಹೆಣ್ಣೆಂಬ ಕಾರಣಕ್ಕೆ ನನ್ನನ್ನು ನಡೆಸಿಕೊಂಡ ರೀತಿಯನ್ನು ಎಂದೂ ಮರೆಯಲಾರೆ. ನನ್ನನ್ನು ರೆಗ್ಯುಲರ್ ಸ್ಟೂಡೆಂಟ್ ಆಗಿ ತೆಗೆದುಕೊಳ್ಳದಿರುವುದು ದೊಡ್ಡ ಅವಮಾನ. ಆ ಕಾಲದಲ್ಲಿ ಮಹಿಳೆಯರ ಕುರಿತ ಪೂರ್ವಗ್ರಹ ಹಾಗಿತ್ತು. ನೊಬೆಲ್ ವಿಜೇತರೇ ಹಾಗಾದ ಮೇಲೆ ಉಳಿದವರಿಂದ ಇನ್ನೇನು ನಿರೀಕ್ಷಿಸುವುದು?’ ಎಂದು ನೆನಪಿಸಿಕೊಂಡಿದ್ದರು.
ಕಮಲಾರ ಗೈಡ್ ಪ್ರೊ. ಶ್ರೀನಿವಾಸಯ್ಯ ಕಟ್ಟುನಿಟ್ಟಿನ ವ್ಯಕ್ತಿ. ಕಮಲಾರ ಅಧ್ಯಯನಶಿಸ್ತು ರೂಪುಗೊಳ್ಳಲು ಸಹಾಯ ಮಾಡಿದರು. ಅವರ ಮಾರ್ಗದರ್ಶನದಲ್ಲಿ ಹಾಲು, ದವಸಧಾನ್ಯಗಳಲ್ಲಿರುವ ಪ್ರೊಟೀನ್ ಕುರಿತು ಕಮಲಾ ಸಂಶೋಧನೆ ನಡೆಸಿದರು. 1936ರಲ್ಲಿ ಡಿಸ್ಟಿಂಕ್ಷನ್‍ನೊಂದಿಗೆ ಎಂಎಸ್ಸಿ ಮುಗಿಸಿದರು. ಅವರ ಪರಿಶ್ರಮದಿಂದ ತೃಪ್ತಿಯಾದ ಸಿ.ವಿ.ರಾಮನ್ ಒಂದಷ್ಟು ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿದರು. ತಮ್ಮದೇ ವಿಭಾಗದಲ್ಲಿ ಮೂವರು ಹುಡುಗಿಯರಿಗೆ ಅವಕಾಶ ಕೊಟ್ಟರು.
ನಂತರ ಕೇಂಬ್ರಿಜ್ ವಿವಿ ಸೇರಿದ ಕಮಲಾ ಡೆರೆಕ್ ರಿಕ್ಟರ್, ರಾಬಿನ್ ಹಿಲ್‍ರ ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿದರು. ಸಸ್ಯ ಅಂಗಾಂಶಗಳ ಬಗೆಗೆ ಅಭ್ಯಸಿಸಿದರು. ಅವರ ಅಧ್ಯಯನಾಸಕ್ತಿ ಕಂಡ ಸಹೋದ್ಯೋಗಿಗಳು ಫ್ರೆಡರಿಕ್ ಹಾಪ್ಕಿನ್ಸ್ ಸಂಶೋಧನಾಲಯದ ಫೆಲೋಶಿಪ್‍ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದರು. ಆಹಾರದಲ್ಲಿ ವಿಟಮಿನ್ನುಗಳ ಪ್ರಾಮುಖ್ಯತೆ ಬಗ್ಗೆ ಸಂಶೋಧಿಸಿ ನೊಬೆಲ್ ಪಡೆದಿದ್ದ ವಿಜ್ಞಾನಿ ಹಾಫ್ಕಿನ್ಸ್ ಅವರ ಪ್ರಯೋಗಾಲಯದಲ್ಲಿ ಫೆಲೋಶಿಪ್ ಸಿಕ್ಕಿತು. ಹಾಫ್ಕಿನ್ಸ್ ಅವರಿಂದಲೇ ಉತ್ತೇಜನ ಪಡೆಯುತ್ತಾ, ಆಲೂಗೆಡ್ಡೆಯ ಮೇಲೆ ಸಂಶೋಧನೆ ನಡೆಸುತ್ತಿದ್ದಾಗ ಅದರಲ್ಲಿರುವ ಸೈಟೋಕ್ರೋಮ್ ಸಿ ಎಂಬ ಕಿಣ್ವವನ್ನು ಪತ್ತೆ ಹಚ್ಚಿದರು. ಈ ಕಿಣ್ವ ಎಲ್ಲ ಸಸ್ಯ, ಪ್ರಾಣಿ, ಮನುಷ್ಯರಲ್ಲಿ `ಶಕ್ತಿಸಂಚಯ’ಕ್ಕಾಗಿ ಇರುವುದೆಂದು ಸಾಧಿಸಲ್ಪಟ್ಟಾಗ ಅದು ಮಹತ್ವದ ಸಂಶೋಧನೆಯೆ ನಿಸಿಕೊಂಡಿತು.
ಅವರು ಸಂಶೋಧನೆಯನ್ನು ಬರಿಯ 14 ತಿಂಗಳಲ್ಲಿ ಮುಗಿಸಿದ್ದರು. ನೂರಾರು, ಸಾವಿರಾರು ಪುಟ ಪ್ರಬಂಧ ಸಲ್ಲಿಸುವ ಕಾಲದಲ್ಲಿ ಕೇವಲ 40 ಪುಟಗಳ ಪ್ರಬಂಧ ಮಂಡಿಸಿ 1939ರಲ್ಲಿ ಪಿಎಚ್‍ಡಿ ಪಡೆದ ಮೊದಲ ಭಾರತೀಯ ಮಹಿಳೆಯಾದರು.
ಅಮೆರಿಕವೂ ಸೇರಿದಂತೆ ವಿದೇಶದ ಫಾರ್ಮಾ ಕಂಪನಿಗಳಿಂದ ಉದ್ಯೋಗಾವಕಾಶ ಅರಸಿ ಬಂತು. ಗಾಂಧಿ ವಿಚಾರಗಳಿಂದ ಪ್ರಭಾವಿತರಾಗಿದ್ದ ಕಮಲಾ 1939ರಲ್ಲಿ ಭಾರತಕ್ಕೆ ಬಂದರು. ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾದರು. 1947ರಲ್ಲಿ ವಿಮಾತಜ್ಞರಾಗಿದ್ದ ಎಂ. ವಿ. ಸೊಹೊನಿಯವರನ್ನು ಮದುವೆಯಾಗಿ ನಂತರ ಮುಂಬಯಿಗೆ ಹೋದರು.
ಕಮಲಾರ ಆಸಕ್ತಿಯ ಕ್ಷೇತ್ರ ಆಹಾರದ ಪೌಷ್ಟಿಕ ಮೌಲ್ಯ ಕುರಿತಾಗಿತ್ತು. ಆಹಾರ ವಿಜ್ಞಾನದ ಕುರಿತು ನಿರಂತರ ಸಂಶೋಧನೆ, ಬರಹ ನಡೆಸಿದರು. ಕೂನೂರಿನ ನ್ಯೂಟ್ರಿಷನ್ ರಿಸರ್ಚ್ ಇನ್ಸ್‍ಟಿಟ್ಯೂಟಿನ ನಿರ್ದೇಶಕರಾದರು. ಬಡಭಾರತೀಯರು ಸೇವಿಸುವ ಆಹಾರವನ್ನು ಸುಲಭವಾಗಿ, ಸರಳವಾಗಿ ಪೌಷ್ಟಿಕಗೊಳಿಸಲು ಸಂಶೋಧನೆ ನಡೆಸಿದರು. ವಿಶೇಷವಾಗಿ ಸಾಮಾನ್ಯವಾಗಿ ಬಳಕೆಯಲ್ಲಿರುವ ದವಸಗಳು ಮತ್ತು ತಾಳೆಮರದಿಂದ ಇಳಿಸುವ ನೀರಾದ ಪೌಷ್ಟಿಕಾಂಶ ಕುರಿತು ಸಂಶೋಧನೆ ನಡೆಯಿತು. ಜನರು ಶಕ್ತಿಕರವೆಂದು ಹೇಳುತ್ತಿದ್ದರೂ ಜನಪ್ರಿಯ ಪೇಯ ನೀರಾದ ಪೌಷ್ಟಿಕಾಂಶದ ಬಗೆಗೆ ವೈಜ್ಞಾನಿಕ ಸಂಶೋಧನೆ ಆಗಿರಲಿಲ್ಲ. ನೀರಾದಲ್ಲಿ ವಿಟಮಿನ್ ಎ, ಸಿ ಮತ್ತು ಕಬ್ಬಿಣಾಂಶ ಇದೆಯೆಂದು, ತಾಳೆಬೆಲ್ಲ ಮತ್ತು ಕಾಕಂಬಿ ಆದಮೇಲೂ ನೀರಾದ ವಿಟಮಿನ್ ಸಿ ಉಳಿದುಕೊಂಡು ಬರುವುದೆಂದು ಕಮಲಾ ಪತ್ತೆಮಾಡಿದರು. ಅವರಿಗೆ ರಾಷ್ಟ್ರಪತಿ ಪದಕ ತಂದುಕೊಟ್ಟ ಸಂಶೋಧನೆ ಅದು.
ಕಮಲಾ ಬರಹಗಾರ್ತಿಯೂ ಆಗಿದ್ದರು. ಯುವ ಮನಸುಗಳಿಗೆ ವಿಜ್ಞಾನ ವಿಷಯಗಳ ಕುರಿತು ಬರೆಯುತ್ತಿದ್ದರು. ಮರಾಠಿಯಲ್ಲು ಸಾಕಷ್ಟು ಪುಸ್ತಕ, ಬರಹ ಬರೆದಿದ್ದಾರೆ. ಒಂಭತ್ತು ಮಹಿಳೆಯರು ಸೇರಿ ಹುಟ್ಟುಹಾಕಿದ ಕನ್‍ಸ್ಯೂಮರ್ ಗೈಡೆನ್ಸ್ ಸೊಸೈಟಿ ಆಫ್ ಇಂಡಿಯಾದ ಸ್ಥಾಪಕ ಸದಸ್ಯೆ ಅವರು. ಕೊನೆಯ ದಿನಗಳವರೆಗೂ ಅಧ್ಯಯನ ನಿರತರಾಗಿದ್ದರು.
ಅನುಗಾಲದಿಂದ ಸೂಕ್ತ ಅವಕಾಶ, ಸೂಕ್ತ ಪ್ರತಿನಿಧಿತ್ವ, ಸೂಕ್ತ ವೇತನ ಇಲ್ಲದಿರುವುದು ಮಹಿಳಾ ವಾಸ್ತವವಾಗಿದೆ. ಈ ಸನ್ನಿವೇಶ ವರ್ತಮಾನದ ಅತ್ಯುಚ್ಛ ಶೈಕ್ಷಣಿಕೆ, ಬೌದ್ಧಿಕ ವಲಯದಲ್ಲೂ ಜೀವಂತವಾಗಿದೆ ಎನ್ನುವುದು ಕಾಲದ ಕೇಡಿಗೆ ಸಾಕ್ಷಿಯಾಗಿದೆ. ಹೆಣ್ಣಿನ ಜೈವಿಕ ಅನನ್ಯತೆಯನ್ನು ಗುರುತಿಸುವ ಬದಲು ಮೂದಲಿಸಿ ಮೂಲೆ ಹಿಡಿಸುವ ಸಮಾಜದ ಕೇಡುಗಳನ್ನು ಹಂತಹಂತವಾಗಿ ದಾಟಿಬಂದ ಕೆಲವೇ ಮಹಿಳೆಯರಲ್ಲಿ ಕಮಲಾ ಸೊಹೊನಿ ಒಬ್ಬರಾಗಿದ್ದಾರೆ.
ಐಐಎಸ್‍ಸಿಯು ವಿದ್ಯಾರ್ಥಿಗಳಿಗೆ 1911ರಲ್ಲಿ ತೆರೆದುಕೊಂಡಿತು. ಆಗ ಪುರುಷರಿಗೆ ಮಾತ್ರ ಹಾಸ್ಟೆಲ್ ಇತ್ತು. ಮಹಿಳೆಯರಿಗೆ ಹಾಸ್ಟೆಲ್ ರೂಪುಗೊಳ್ಳಲು 1942 ಬರಬೇಕಾಯ್ತು. 1951ರಲ್ಲಿ ವಿಜ್ಞಾನಿ ಮಹಿಳೆ ವಯಲೆಟ್ ಬಜಾಜ್ ನೆನಪಿಸಿಕೊಂಡಂತೆ ಪುರುಷರಿಗೆ ಅಯ್ಯರ್ ಮೆಸ್, ಅಯ್ಯಂಗಾರ್ ಮೆಸ್ ಎಂಬ ಎರಡು ಆಯ್ಕೆಗಳಿದ್ದರೆ, ವಿದ್ಯಾರ್ಥಿನಿಯರು ತಾವೇ ಅಡುಗೆ, ಸ್ವಚ್ಛತೆಯ ಕೆಲಸ ಮಾಡಿಕೊಳ್ಳಬೇಕಿತ್ತು. 1967ರಲ್ಲಿ ಅಲ್ಲಿದ್ದ ಇನಾರ್ಗ್ಯಾನಿಕ್ ಅಂಡ್ ಫಿಸಿಕಲ್ ಕೆಮಿಸ್ಟ್ರಿ ವಿದ್ಯಾರ್ಥಿನಿ ಡಿ. ಕೆ. ಪದ್ಮಾರ ಅನುಭವ ಕುತೂಹಲಕರವಾಗಿದೆ. ಆಕೆಯ ವಿಭಾಗದ ಮುಖ್ಯಸ್ಥರು ಅಡ್ಮಿಷನ್ನಿಗೆ ಮೊದಲು ಗಂಡನನ್ನು ಕರೆತರುವಂತೆ ಹೇಳಿದರು. ನಂತರ `ಒಬ್ಬ ವಿದ್ಯಾರ್ಥಿಯ ಭವಿಷ್ಯ ಮೊಟಕುಗೊಳಿಸಿ ನಿನಗೆ ಸೀಟು ಕೊಡುತ್ತಿರುವೆ, ಐದಾರು ವರ್ಷದಲ್ಲಿ ಸಂಶೋಧನೆ ಮುಗಿಸಲೇಬೇಕು, ಅಲ್ಲಿಯವರೆಗು ಮಕ್ಕಳನ್ನು ಹೆರಬಾರದು’ ಎಂದು ಷರತ್ತು ಹಾಕಿದ್ದರು! ಮಾಲಿಕ್ಯುಲಾರ್ ಬಯೋಫಿಸಿಕ್ಸ್ ಕಲಿತ ರೇವತಿ ನಾರಾಯಣ್ ಎಂಬಾಕೆಗೆ ಅವರ ವಿಭಾಗ ಮುಖ್ಯಸ್ಥರು, `ಓಹ್, ನಿನಗೆ ಮದುವೆಯಾಗಿದೆಯೆ? ಇನ್ನೊಂದು ವರ್ಷದಲ್ಲಿ ಬಿಟ್ಟು ಹೋಗುತ್ತೀ ಬಿಡು’ ಎಂದಿದ್ದರಂತೆ.
ಇವತ್ತಿಗೂ ಸಾಹಿತ್ಯ, ಕಲೆ, ಸಂಗೀತ, ಶಿಕ್ಷಣ, ರಾಜಕಾರಣ ಮೊದಲಾದ ಕ್ಷೇತ್ರಗಳಿಗಿಂತ ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಲು ಮಹಿಳೆಯರು ಹೆಣಗುತ್ತಿದ್ದಾರೆ. ಇದಕ್ಕೇನು ಕಾರಣ? ಅರ್ಹ ಮಹಿಳೆಯರೇ ತಯಾರಾಗುತ್ತಿಲ್ಲವೋ? ಅಥವಾ ಮಹಿಳೆಯರ ಅರ್ಹತೆ ಸಮಾಜಕ್ಕೆ ಕಾಣುತ್ತಿಲ್ಲವೋ? ಬೌದ್ಧಿಕ ಕಸರತ್ತು ಇರುವ ಕಡೆ ಮಹಿಳೆಯರನ್ನು ಕಡೆಗಣಿಸಿ, ನಿರಂತರ ದೈಹಿಕ ಶ್ರಮ ಇರುವ ಅದೃಶ್ಯ ಕೆಲಸಗಳನ್ನಷ್ಟೆ ಹೆಣ್ಮಕ್ಕಳ ಹೆಗಲಿಗೆ ಹೇರಿದುದರ ಪರಿಣಾಮ ಇದಾಗಿರಬಹುದೆ? ಭಾರತವು ವೈಜ್ಞಾನಿಕ ಮನೋಭಾವ ಮತ್ತು ಲಿಂಗಸೂಕ್ಷ್ಮತೆಯನ್ನು ಒಟ್ಟೊಟ್ಟಿಗೆ ಕಳೆದುಕೊಂಡಿತೆ?
ಇಂಥವೆಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತ ಹೋದಾಗ ಚರಿತ್ರೆಯ ಕೆಲವು ಪುಟಗಳು ಕಣ್ಣಿಗೆ ಬೀಳುತ್ತವೆ. ಕಮಲಾ ಅಂಥ ಒಂದು ಸ್ಮರಣೀಯ ಪುಟವಾಗಿದ್ದಾರೆ.

– ಡಾ.ಎಚ್.ಎಸ್.ಅನುಪಮಾ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ಮೇಲೆ ದಾಳಿ : ಅಮೆರಿಕ ವಿಮಾನಗಳಿಗೆ ತನ್ನ ವಾಯುಪ್ರದೇಶ ಮುಚ್ಚಿದ ಸ್ಪೇನ್

ಇರಾನ್ ಮೇಲಿನ ದಾಳಿಗಳಲ್ಲಿ ಭಾಗಿಯಾಗಿರುವ ಅಮೆರಿಕದ ವಿಮಾನಗಳಿಗೆ ಸ್ಪೇನ್ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ರಕ್ಷಣಾ ಸಚಿವೆ ಮಾರ್ಗರಿಟಾ ರೋಬಲ್ಸ್ (ಮಾ.30) ಸೋಮವಾರ ತಿಳಿಸಿದ್ದಾರೆ. ಜಂಟಿಯಾಗಿ ನಿರ್ವಹಿಸುವ ಸೇನಾ ನೆಲೆಗಳನ್ನು ಬಳಸಲು ಈ...

ಜನಗಣತಿ-2027 : ‘ಸ್ಥಿರ’ ಲಿವ್-ಇನ್ ಜೋಡಿಗೆ ವೈವಾಹಿಕ ಸ್ಥಾನಮಾನ

ತಮ್ಮ ಸಂಬಂಧ 'ಸ್ಥಿರ' ಎಂದು ಹೇಳಿಕೊಳ್ಳುವ ಲಿವ್-ಇನ್ ಜೋಡಿಗಳನ್ನು 2027ರ ಜನಗಣತಿಯಲ್ಲಿ ವಿವಾಹಿತ ದಂಪತಿಯೆಂದು ಪರಿಗಣಿಸಲಾಗುತ್ತದೆ ಎಂದು ವರದಿಯಾಗಿದೆ. ಜನಗಣತಿ ವೆಬ್‌ಸೈಟ್‌ನ FAQ (ಪದೇ ಪದೇ ಕೇಳಲಾಗುವ ಪ್ರಶ್ನೆಗಳು) ವಿಭಾಗದಲ್ಲಿ ಈ ಬಗ್ಗೆ ಸ್ಪಷ್ಟನೆ...

ಉನ್ನತ ಸಾಂಸ್ಥಿಕ ಹುದ್ದೆಗಳಲ್ಲಿ ‘ಬಹುಜನ’ ಪ್ರಾತಿನಿಧ್ಯದ ಕೊರತೆ: ವ್ಯವಸ್ಥಿತ ತಾರತಮ್ಯದ ರೂಪ ಎಂದ ರಾಹುಲ್ ಗಾಂಧಿ 

ಉನ್ನತ ಸಂಸ್ಥೆಗಳ ಹಿರಿಯ ನಾಯಕತ್ವದಲ್ಲಿ "ಬಹುಜನ" ಸಮುದಾಯಗಳಿಗೆ ಪ್ರಾತಿನಿಧ್ಯದ ಕೊರತೆಯಿದೆ ಎಂದು ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ. ಇದು ವ್ಯವಸ್ಥಿತ ತಾರತಮ್ಯದ ಒಂದು ರೂಪವಾಗಿದ್ದು ಅದನ್ನು ಪರಿಹರಿಸಬೇಕು ಎಂದು ಹೇಳಿದ್ದಾರೆ.  ಲೋಕಸಭೆಯ ವಿರೋಧ ಪಕ್ಷದ...

ಗಾಯಗಳ ತೀವ್ರತೆಯಿಂದಾಗಿ ನೌಕಾಪಡೆಯ ಮುಖ್ಯಸ್ಥ ತಂಗ್ಸಿರಿ ಸಾವನ್ನಪ್ಪಿದ್ದಾರೆ: ದೃಢಪಡಿಸಿದ ಇರಾನ್

ತಾನು ನಡೆಸಿದ ದಾಳಿಯಿಂದ ಇರಾನ್‌ ನೌಕಾಪಡೆಯ ರಿಯರ್ ಅಡ್ಮಿರಲ್ ಅಲಿರೆಜಾ ತಂಗ್ಸಿರಿ ಸಾವನ್ನಪ್ಪಿದ್ದಾರೆ ಎಂದು ಕಳೆದ ಗುರುವಾರ (ಮಾ.26) ಇಸ್ರೇಲ್ ಹೇಳಿಕೊಂಡಿತ್ತು. ಸುದ್ದಿ ಖಷಿತಪಡಿಸಿರುವ ಇರಾನ್, ದಾಳಿಯಿಂದ ಸಂಭವಿಸಿದ ತೀವ್ರ ಗಾಯಗಳಿಂದ ತಂಗ್ಸಿರಿ...

ಬಹುಭಾಷಾ ನಟ ಪ್ರಕಾಶ್ ರಾಜ್‌ ತಾಯಿ ಸ್ವರ್ಣಲತಾ ನಿಧನ

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ತಮ್ಮ 86 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿಯೊಂದಿಗೆ ಇದ್ದ...

ಮುಂಬೈ: ಸ್ವ-ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ಆಕ್ರೋಶ: ದಾದರ್‌ನಲ್ಲಿ ಮೂಢನಂಬಿಕೆ ವಿರೋಧಿ ಅಭಿಯಾನ

ಮುಂಬೈ: ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರ ಚಟುವಟಿಕೆಗಳ ಸುತ್ತ ವ್ಯಾಪಕ ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ವಿವೇಕ್ ಜಾಗರ್ ಉಪಕ್ರಮದಡಿಯಲ್ಲಿ ಮಹಾರಾಷ್ಟ್ರ ಅಂಧಾಶ್ರದ್ಧ ನಿರ್ಮೂಲನ ಸಮಿತಿ (MANS) ಮಹಾರಾಷ್ಟ್ರ ಘಟಕವು ಭಾನುವಾರ...

ನೋಟಿಸ್ ನೀಡದೆ ಮಸೀದಿ ಬಂದ್; ಉತ್ತರ ಪ್ರದೇಶ ಸರ್ಕಾರವನ್ನು ಪ್ರಶ್ನಿಸಿದ ಅಲಹಾಬಾದ್ ಹೈಕೋರ್ಟ್

ಪೂರ್ವ ಸೂಚನೆ ನೀಡದೆ ಅಥವಾ ಮಾಲೀಕರಿಗೆ ವಿಚಾರಣೆಗೆ ಅವಕಾಶ ನೀಡದೆ ಪ್ರಾರ್ಥನಾ ಸ್ಥಳಕ್ಕೆ ಬೀಗ ಹಾಕಬಹುದೇ ಎಂಬ ಬಗ್ಗೆ ವಿವರಣೆ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ಕೇಳಿದೆ. ಮುಜಫರ್‌ನಗರದಲ್ಲಿ ಮಸೀದಿಯನ್ನು...

ಬಿಜು ಪಟ್ನಾಯಕ್ ಕುರಿತು ಹೇಳಿಕೆ : ಬಿಜೆಪಿ ಸಂಸದ ನಿಶಿಕಾಂತ್ ದುಬೆ ವಿರುದ್ಧ ತೀವ್ರ ಆಕ್ರೋಶ

ಒಡಿಶಾದ ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರ ಕುರಿತು ಬಿಜೆಪಿ ಸಂಸದ ನಿಶಿಕಾಂತ್ ದುಬೆ ನೀಡಿರುವ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ದುಬೆ ನೇತೃತ್ವದ ಸಂವಹನ ಮತ್ತು ಐಟಿ ಕುರಿತ ಸಂಸದೀಯ ಸ್ಥಾಯಿ...

ಮುರ್ಷಿದಾಬಾದ್ ರಾಮನವಮಿ ಹಿಂಸಾಚಾರ; ಆರ್‌ಎಸ್‌ಎಸ್ ನಾಯಕ ಸೇರಿದಂತೆ 30 ಜನರ ಬಂಧನ

ಮಾರ್ಚ್ 27 ರಂದು ಮುರ್ಷಿದಾಬಾದ್ ಜಿಲ್ಲೆಯ ಜಂಗಿಪುರ ಉಪವಿಭಾಗದ ರಘುನಾಥಗಂಜ್‌ನಲ್ಲಿ ನಡೆದ ರಾಮನವಮಿ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದ ನಂತರ ಸುಮಾರು 30 ಜನರು ಗಾಯಗೊಂಡರು. ಈ ಘಟನೆಯು ವ್ಯಾಪಕ ಉದ್ವಿಗ್ನತೆಗೆ ಕಾರಣವಾಗಿದ್ದು, ಅಂಗಡಿ...

ದೆಹಲಿ ಗಲಭೆ ಪ್ರಕರಣ: ಮಧ್ಯಂತರ ಜಾಮೀನು ಅವಧಿ ಅಂತ್ಯ; ಇಂದು ತಿಹಾರ್ ಜೈಲಿಗೆ ಮರಳಲಿರುವ ಶಾರ್ಜೀಲ್ ಇಮಾಮ್

2020 ರ ಈಶಾನ್ಯ ದೆಹಲಿ ಗಲಭೆಯ ಹಿಂದಿನ ದೊಡ್ಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ನೀಡಿದ್ದ 10 ದಿನಗಳ ಮಧ್ಯಂತರ ಜಾಮೀನು ಅವಧಿ ಮುಗಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಕಾರ್ಯಕರ್ತ ಶಾರ್ಜೀಲ್ ಇಮಾಮ್...