ದೃಢ, ವಿಷಯಾಧಾರಿತ ಕಥೆ ನಿರೂಪಣೆಯಿಂದ ಪ್ರಶಂಸಿಸಲಾದ ಮಲಯಾಳಂ ಮತ್ತು ತಮಿಳು ಸಿನಿಮಾಗಳಿಗಿಂತ ಭಿನ್ನವಾಗಿ, ಹಿಂದಿ ಸಿನಿಮಾ ತನ್ನ ಬೇರುಗಳನ್ನು ಕಳೆದುಕೊಂಡಿದೆ. ಹೆಚ್ಚು ಹೆಚ್ಚು ನಕಲಿ ಮತ್ತು ಹಣ-ಆಧಾರಿತವಾಗುತ್ತಿದೆ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
ಜನವರಿ 24 ರ ಶನಿವಾರ ನಡೆದ ಕೇರಳ ಸಾಹಿತ್ಯ ಉತ್ಸವದ (ಕೆಎಲ್‌ಎಫ್) ಒಂಬತ್ತನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಶಸ್ತಿ ವಿಜೇತ ನಟ, “ಹಿಂದಿ ಸಿನಿಮಾಗಳನ್ನು ಅವುಗಳ ಕೃತಕತೆಗಾಗಿ ಟೀಕಿಸಿದರು. ಅವು ಮೇಡಮ್ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದಂತೆ ಮಾರ್ಪಟ್ಟಿವೆ, ಅಲ್ಲಿ ಎಲ್ಲವೂ ಯಾವುದೇ ಸತ್ವವಿಲ್ಲದೆ ಸುಂದರವಾಗಿ ಕಾಣುತ್ತದೆ” ಎಂದು ಹೇಳಿದರು.
“ಪ್ರಸ್ತುತ ಸಂದರ್ಭದಲ್ಲಿ, ಮಲಯಾಳಂ ಮತ್ತು ತಮಿಳು ಸಿನಿಮಾಗಳು ಬಹಳ ಗಟ್ಟಿಕಥೆ ಸಿನಿಮಾಗಳನ್ನು ಮಾಡುತ್ತಿವೆ ಎಂದು ನಾನು ಭಾವಿಸುತ್ತೇನೆ… ಮತ್ತೊಂದೆಡೆ, ಹಿಂದಿ ಸಿನಿಮಾ ತನ್ನ ಬೇರುಗಳನ್ನು ಕಳೆದುಕೊಂಡಿದೆ. ಮೇಡಮ್ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದಲ್ಲಿ ನೀವು ನೋಡುವಂತೆ ಎಲ್ಲವೂ ಸುಂದರವಾಗಿ, ಅದ್ಭುತವಾಗಿ, ಪ್ಲಾಸ್ಟಿಕ್‌ನಂತೆ ಕಾಣುತ್ತದೆ” ಎಂದು ಟೀಕಿಸಿದರು.
“ನಮಗೆ (ದಕ್ಷಿಣ) ಇನ್ನೂ ಕಥೆಗಳು ಹೇಳಬೇಕಾಗಿದೆ, ತಮಿಳಿನ ಹೊಸ ಯುವ ನಿರ್ದೇಶಕರು ದಲಿತ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನಮಗೆ ಸಾಕಷ್ಟು ಭರವಸೆ ನೀಡುತ್ತಿದ್ದಾರೆ” ಎಂದರು. ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಕೆಲಸಕ್ಕೆ ಹೆಸರುವಾಸಿಯಾದ ಪ್ರಕಾಶ್ ರಾಜ್ ಪ್ರಶಂಸಿದರು.
ಹಿಂದಿ ಚಿತ್ರರಂಗವನ್ನು ಮತ್ತಷ್ಟು ವಿಶ್ಲೇಷಿಸಿದ ಪ್ರಜಾಶ್ ರಾಜ್, ಮಲ್ಟಿಪ್ಲೆಕ್ಸ್ ನಂತರದ ಯುಗಕ್ಕೆ ಅದರ ಅವನತಿಯನ್ನು ಗುರುತಿಸಿದರು. ಅದು ಮುಖ್ಯವಾಗಿ ನಗರ ಪ್ರೇಕ್ಷಕರಿಗೆ ಸೇವೆ ಸಲ್ಲಿಸಲು ಪ್ರಾರಂಭಿಸಿತು ಎಂದರು.
ಗ್ಲಾಮರ್ ಮತ್ತು ಮೇಲ್ಮೈ ಮಟ್ಟದ ಸೌಂದರ್ಯಶಾಸ್ತ್ರದ ಮೇಲೆ ಉದ್ಯಮದ ಗಮನವು ವೀಕ್ಷಕರೊಂದಿಗೆ ಅದರ ಭಾವನಾತ್ಮಕ ಸಂಪರ್ಕವನ್ನು ದುರ್ಬಲಗೊಳಿಸಿದೆ ಎಂದು ವಾದಿಸಿದರು.
“ಮಲ್ಟಿಪ್ಲೆಕ್ಸ್‌ಗಳ ನಂತರ, ಬಾಂಬೆ ಚಲನಚಿತ್ರೋದ್ಯಮವು ಮಲ್ಟಿಪ್ಲೆಕ್ಸ್‌ಗಳಿಗಾಗಿ ಮಾತ್ರ ಚಲನಚಿತ್ರಗಳನ್ನು ಮಾಡಲು ಪ್ರಾರಂಭಿಸಿತು. ಏಕೆಂದರೆ, ಅವು ಚೆನ್ನಾಗಿ ಓಡುತ್ತಿದ್ದವು. ಅವರು ಆ ಪೇಜ್-3 ಸಂಸ್ಕೃತಿಗೆ ಹೋದರು. ಅದರೊಂದಿಗೆ ಗ್ರಾಮೀಣ ರಾಜಸ್ಥಾನ ಮತ್ತು ಬಿಹಾರದೊಂದಿಗಿನ ಸಂಪರ್ಕವನ್ನು ಕಳೆದುಕೊಂಡರು” ಎಂದು ಅವರು ವಿವರಿಸಿದರು.
ಈ ಬದಲಾವಣೆಯು ಸ್ವಾತಂತ್ರ್ಯಾನಂತರದ ಹಿಂದಿ ಸಿನಿಮಾವನ್ನು ಒಂದು ಕಾಲದಲ್ಲಿ ವ್ಯಾಖ್ಯಾನಿಸುತ್ತಿದ್ದ ರಾಷ್ಟ್ರ ನಿರ್ಮಾಣ ನಿರೂಪಣೆಗಳ ಅವನತಿಗೆ ಕಾರಣವಾಯಿತು ಎಂದು ಅವರು ವಾದಿಸಿದರು.
ತಮ್ಮ ಮಾತನ್ನು ಸಮರ್ಥಿಸಲು ಅವರು 1977 ರ ಬ್ಲಾಕ್‌ಬಸ್ಟರ್ ‘ಅಮರ್ ಅಕ್ಬರ್ ಆಂಥೋನಿ’ ಮತ್ತು ಅದರ ಪ್ರಸಿದ್ಧ ದೃಶ್ಯವಾದ ವಿವಿಧ ಧರ್ಮಗಳ ಮೂವರು ಪುರುಷರು ಒಬ್ಬ ವ್ಯಕ್ತಿಯನ್ನು ಉಳಿಸಲು ರಕ್ತದಾನ ಮಾಡುವ ಮೂಲಕ ಹಂಚಿಕೊಳ್ಳುವ ಮೌಲ್ಯ, ಸಾಮಾಜಿಕ ಸಾಮರಸ್ಯ ಮತ್ತು ಸಾಮೂಹಿಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ದೃಶ್ಯವನ್ನು ಉಲ್ಲೇಖಿಸಿದರು.
“ಇನ್ನು ಮುಂದೆ ಹಾಗೆಲ್ಲಾ ಇರುವುದಿಲ್ಲ. ಇಂದು, ಹಣ ಮತ್ತು ಐಡೆಂಟಿಟಿ ಬಗ್ಗೆ ಇರುತ್ತದೆ. ರೀಲ್‌ಗಳು, ಪೇಜ್-3 ವರದಿ ಮತ್ತು ಸ್ವಯಂ ಪ್ರಚಾರ. ಈ ಪ್ರಕ್ರಿಯೆಯಲ್ಲಿ, ಉದ್ಯಮವು ಪ್ರೇಕ್ಷಕರೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ನನಗೆ ಅನಿಸುತ್ತದೆ” ಎಂದು ಅವರು ತಮ್ಮ ಮಾತು ಮುಕ್ತಾಯಗೊಳಿಸಿದರು.
ನಾಲ್ಕು ದಿನಗಳ ಸಾಹಿತ್ಯ ಸಂಭ್ರಮದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾದ ಅಬ್ದುಲ್ ರಜಾಕ್ ಗುರ್ನಾ ಮತ್ತು ಅಭಿಜಿತ್ ಬ್ಯಾನರ್ಜಿ, ಗಗನಯಾತ್ರಿ ಸುನಿತಾ ವಿಲಿಯಮ್ಸ್, ಲೇಖಕಿ ಕಿರಣ್ ದೇಸಾಯಿ, ಪ್ರಬಂಧಕಾರ ಪಿಕೊ ಅಯ್ಯರ್, ಜ್ಞಾನಪೀಠ ವಿಜೇತ ಪ್ರತಿಭಾ ರೇ, ಕ್ರೀಡಾ ದಿಗ್ಗಜರಾದ ರೋಹನ್ ಬೋಪಣ್ಣ ಮತ್ತು ಬೆನ್ ಜಾನ್ಸನ್ ಮತ್ತು ವಿಕಿಪೀಡಿಯಾ ಸಂಸ್ಥಾಪಕ ಜಿಮ್ಮಿ ವೇಲ್ಸ್ ಸೇರಿದಂತೆ 400 ಕ್ಕೂ ಹೆಚ್ಚು ಭಾಷಣಕಾರರು ಭಾಗವಹಿಸಲಿದ್ದಾರೆ.


