ಸಾಂಕ್ರಾಮಿಕದ ಎರಡನೇ ಅಲೆಯಿಂದಾಗಿ ಕಳೆದ 24 ಗಂಟೆಗಳ ಅವಧಿಯಲ್ಲಿ ಭಾರತದಲ್ಲಿ 1.84 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿ ದಾಖಲೆ ಸೃಷ್ಟಿಸಿವೆ. ದಿನದಲ್ಲಿ 1027 ಸಾವುಗಳು ಸಂಭವಿಸಿವೆ. ಈ ನಡುವೆಯೇ ಇಂದು ಕುಂಭಮೇಳದಲ್ಲಿ ಮೂರನೇ ಅತಿದೊಡ್ಡ ಶಾಹಿ ಸ್ನಾನ ಜರುಗಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬುಧವಾರ ಮುಂಜಾನೆ ಕುಂಭಮೇಳದ ಮೂರನೇ ಮತ್ತು ಅತಿದೊಡ್ಡ ‘ಶಾಹಿ ಸ್ನಾನ’ದ ಸಂದರ್ಭದಲ್ಲಿ ಭಕ್ತರು ಹರಿದ್ವಾರದ ಗಂಗಾದಲ್ಲಿ ಪವಿತ್ರ ಸ್ನಾನ ಮಾಡುವರು. ಪ್ರಮುಖ ಘಟನೆಗಳ ವೇಳಾಪಟ್ಟಿ ಪ್ರಕಾರ, ನಾಲ್ಕು ‘ಶಾಹಿ ಸ್ನಾನ’ ಮತ್ತು ಒಂಬತ್ತು ‘ಗಂಗಾ ಸ್ನಾನ’ಗಳು ಈ ವರ್ಷ ಹರಿದ್ವಾರದಲ್ಲಿ ನಡೆಯಲಿದೆ.
ಮಾರ್ಚ್ 11 ರಂದು ಮಹಾಶಿವರಾತ್ರಿಯಂದು ಮೊದಲ ಶಾಹಿ ಸ್ನಾನ ನಡೆದರೆ, ಎರಡನೆಯದು ಏಪ್ರಿಲ್ 12ರ ಸೋಮವಾರ ಸೋಮವತಿ ಅಮಾವಾಸ್ಯೆಯಲ್ಲಿ ನಡೆಯಿತು. ಇಂದು ಮೂರನೇ ಮತ್ತು ಅತಿ ದೊಡ್ಡ ಶಾಹಿ ಸ್ನಾನ ಜರುಗಲಿದೆ. ಹಿಂದೂಗಳ ಪವಿತ್ರ ಆಚರಣೆ ಎಂದು ಕರೆಯಲ್ಪಡುವ ಕುಂಭಮೇಳ ಪ್ರತಿ ವರ್ಷ ಮೂರ್ನಾಲ್ಕು ತಿಂಗಳು ನಡೆಯುತ್ತಿತ್ತು. ಈ ವರ್ಷ ಸಾಂಕ್ರಾಮಿಕದ ಕಾರಣದಿಂದಾಗಿ ಒಂದು ತಿಂಗಳಿಗೆ ಸೀಮಿತಗೊಳಿಸಲಾಗಿದೆ.
ಸೋಮವಾರ ಹೆಚ್ಚಿನ ಸಂಖ್ಯೆಯ ಭಕ್ತರು ಮಾಸ್ಕ್ ಧರಿಸಲಿಲ್ಲ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವೆಂದು ಕಂಡುಬಂದಿದೆ. ಉತ್ತರಾಖಂಡ ಸರ್ಕಾರದ ಹೇಳಿಕೆಯ ಪ್ರಕಾರ ಸುಮಾರು 35 ಲಕ್ಷ ಜನರು ಭಾಗವಹಿಸಿದ್ದರು ಎನ್ನಲಾಗಿದೆ.
ಇನ್ನೊಂದೆಡೆ ದಿನನಿತ್ಯದ ಪ್ರಕರಣಗಳಲ್ಲಿ ಬಹುದೊಡ್ಡ ಏರಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿಯೇ ಅತ್ಯಂತ ಹೆಚ್ಚಿನ ಸಾವುಗಳು (1,027) ಸಹ ನಿನ್ನೆ ಒಂದು ದಿನದಲ್ಲಿ ವರದಿಯಾಗಿವೆ. ಒಟ್ಟಾರೆಯಾಗಿ ಭಾರತವು 1.38 ಕೋಟಿ ಪ್ರಕರಣಗಳನ್ನು ದಾಖಲಿಸಿದ್ದು, 1,72,085 ಸಾವುಗಳನ್ನು ಕಂಡಿದೆ.
ಇದೇ ಸಂದರ್ಭದಲ್ಲಿ ಕಳೆದ ವರ್ಷದ ಮಾರ್ಚ್ ಮಧ್ಯಭಾಗದಲ್ಲಿ ತಬ್ಲಿಗಿಗಳು ಹಮ್ಮಿಕೊಂಡಿದ್ದ ಮರ್ಕಜ್ ಮತ್ತು ಈಗಿನ ಕುಂಭಮೇಳಕ್ಕೂ ಹೋಲಿಸುವುದು ಸರಿಯಲ್ಲ ಎಂದು ಉತ್ತರಖಂಡ ಸಿಎಂ ತಿರತ್ ಸಿಂಗ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮರ್ಕಜ್‌ನಲ್ಲಿ ಕಿರಿದಾದ ಜಾಗದಲ್ಲಿ, ಕಟ್ಟಡದ ಒಳಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಮತ್ತು ಅದರಲ್ಲಿ ವಿದೇಶಿಯರೂ ಭಾಗವಹಿಸಿದ್ದರು. ಆದರೆ ಕುಂಭಮೇಳವನ್ನು ವಿಶಾಲ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ ಮತ್ತು ನಮ್ಮ ಭಕ್ತರು ಮಾತ್ರ ಭಾಗವಹಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದಕ್ಕೆ ವ್ಯಾಪಕ ವಿರೋಧಗಳು ಕೇಳಿಬಂದಿದ್ದು, ಕಳೆದ ವರ್ಷ ಸಾಂಕ್ರಾಮಿಕ ಇನ್ನು ಆರಂಭಿಕ ಹಂತದಲ್ಲಿತ್ತು. ಸರ್ಕಾರಕ್ಕೆ ಅದರ ಬಗ್ಗೆ ಸ್ಪಷ್ಟ ಮಾಹಿತಿ ಇರಲಿಲ್ಲ ಮತ್ತು ಕೇವಲ 3 ಸಾವಿರ ಜನ ಅಲ್ಲಿ ಭಾಗವಹಿಸಿದ್ದರು. ಆದರೆ ಈಗ ಕೊರೊನಾ ಎಂತಹ ಅಪಾಯಕಾರಿ ಸಾಂಕ್ರಾಮಿಕ ಎಂದು ನಮಗೆ ತಿಳಿದಿದೆ, ಆದರೂ ಕುಂಭಮೇಳದಲ್ಲಿ 35 ಲಕ್ಷ ಜನ ಭಾಗವಹಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ.
ಇದನ್ನೂ ಓದಿ: ಇಫ್ತಾರ್ ಕೂಟ ನಡೆಸುವಂತಿಲ್ಲ, ರಂಜಾನ್‌ಗೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿ


