ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ 1% ಮೀಸಲಾತಿಗೆ ಅವಕಾಶ ನೀಡುವುದಾಗಿ ಕರ್ನಾಟಕ ಸರ್ಕಾರ ಮಂಗಳವಾರ ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ಆ ಮೂಲಕ ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.
ಇದಕ್ಕಾಗಿ 1977 ರ ಕರ್ನಾಟಕ ನಾಗರಿಕ ಸೇವೆಗಳ ಸಾಮಾನ್ಯ ನೇಮಕಾತಿ (ನಿಯಮಗಳು) ಗೆ ತಿದ್ದುಪಡಿ ಮಾಡಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ವಿಭಾಗೀಯ ಪೀಠಕ್ಕೆ ಸರ್ಕಾರ ತಿಳಿಸಿದೆ.
ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗಳಿಗೆ ಮೀಸಲಾತಿ ನೀಡುವಂತೆ ಶಿಫಾರಸು ಮಾಡಿದ ವರದಿಯನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದೆ ಮತ್ತು ಅದರ ಪ್ರಕಾರ ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ವಕೀಲರರು ವಿಭಾಗೀಯ ಪೀಠಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ಅಕ್ಕಯ್ ಸಂದರ್ಶನ; ಮಂಗಳ ಮತ್ತು ಅಮಂಗಳ ಅನ್ನುವಂತದ್ದೆಲ್ಲ ಬ್ರಾಹ್ಮಣ್ಯ ಪ್ರೇರಿತ; ಇರುವುದು ಮನುಷ್ಯರು ಮತ್ತು ವೈವಿಧ್ಯತೆ
ಸಂಗಮ ಮತ್ತು ಇನ್ನಿತ್ತರ ಸರ್ಕಾರೇತರ ಸಂಸ್ಥೆಗಳು ಲೈಂಗಿಕ ಅಲ್ಪಸಂಖ್ಯಾತರಿಗೆ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ರಾಜ್ಯ ಸರ್ಕಾರದ ಅಭಿಪ್ರಾಯ ತಿಳಿಸುವಂತೆ ಹೈಕೋರ್ಟ್ ಕೇಳಿತ್ತು. ರಾಜ್ಯ ಸರ್ಕಾರವು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಮೀಸಲಾತಿಯನ್ನು ನೀಡುವ ಆದೇಶ ಹೊರಡಿಸಲಾಗಿದೆ.
ಶೇಕಡಾ ಒಂದರಷ್ಟು ಮೀಸಲಾತಿಯನ್ನು ನೇರ ನೇಮಕಾತಿಗಳ ಮೂಲಕ ಜಾರಿಗೊಳಿಸಲಾಗುವುದು. ಎ ದರ್ಜೆ ಸೇರಿದಂತೆ ಎಲ್ಲಾ ಸರ್ಕಾರಿ ಉದ್ಯೋಗಿಗಳಲ್ಲಿ ಅವರಿಗೆ ಮೀಸಲಾತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಕೊರೊನಾ ಸಮಯದಲ್ಲಿ ಪ್ರೈಡ್ ತಿಂಗಳು; ಸಮಸ್ಯೆಗಳ ಸಾಗರಕ್ಕೆ ಆತ್ಮಗೌರವವೇ ಸಮಾಧಾನ


