ಕೇರಳದ ಕಾಸರಗೋಡಿನ ಪೆರಿಯದಲ್ಲಿ 2019ರಲ್ಲಿ ನಡೆದ ಇಬ್ಬರು ಯುವ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣದ 14 ಮಂದಿ ಆರೋಪಿಗಳನ್ನು ದೋಷಿಗಳೆಂದು ಘೋಷಿಸಿ ಕೊಚ್ಚಿಯ ಸಿಬಿಐ ವಿಶೇಷ ನ್ಯಾಯಾಲಯ ಇಂದು (ಡಿ.28) ತೀರ್ಪು ಪ್ರಕಟಿಸಿದೆ.
ಪ್ರಕರಣದ ಇತರ 10 ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. 14 ಅಪರಾಧಿಗಳ ಶಿಕ್ಷೆಯನ್ನು ಜನವರಿ 3,2025ರಂದು ಪ್ರಕಟಿಸಲಿದೆ. ಕಳೆದ 6 ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.
ಪ್ರಮುಖ ಸಿಪಿಐ(ಎಂ) ಮುಖಂಡರಾದ ಮಾಜಿ ಶಾಸಕ ಹಾಗೂ ಸಿಪಿಎಂ ಜಿಲ್ಲಾ ನಾಯಕ ಕೆ.ವಿ.ಕುಂಞಿರಾಮನ್, ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್, ಪೆರಿಯ ಸ್ಥಳೀಯ ಸಮಿತಿ ಮಾಜಿ ಸದಸ್ಯ ಎ.ಪೀತಾಂಬರನ್, ಪೆರಿಯ ಸ್ಥಳೀಯ ಸಮಿತಿಯ ಮಾಜಿ ಕಾರ್ಯದರ್ಶಿ ಎನ್.ಬಾಲಕೃಷ್ಣನ್, ಪಕ್ಕಂ ಸ್ಥಳೀಯ ಸಮಿತಿಯ ಮಾಜಿ ಕಾರ್ಯದರ್ಶಿ ರಾಘವನ್ ವೆಲುತ್ತೋಳಿ, ಸಿಐಟಿಯು ಮುಖಂಡ ಎ ಸುಭೀಶ್ ಮತ್ತು ಸಿಪಿಐ(ಎಂ) ಎಚಿಲಡುಕ್ಕಂ ಶಾಖೆಯ ಮಾಜಿ ಕಾರ್ಯದರ್ಶಿ ರಾಜೇಶ್ ಸೇರಿದಂತೆ ಒಟ್ಟು 24 ಮಂದಿ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದರು.
ಈ ಪೈಕಿ, ಪೀತಾಂಬರನ್, ಸಾಜಿ ಜಾರ್ಜ್, ಕೆ.ಎಂ ಸುರೇಶ್, ಕೆ. ಅನಿಲ್‌ಕುಮಾರ್, ಜಿಜಿನ್, ಶ್ರೀರಾಗ್, ಅಶ್ವಿನ್, ಸುಧೀಶ್, ರೆಂಜಿತ್, ಸುರೇಂದ್ರನ್, ಮಣಿಕಂಠನ್, ಕುಂಞಿರಾಮನ್, ವೆಲುತ್ತೋಳಿ ರಾಘವನ್ ಮತ್ತು ಎ.ವಿ. ಭಾಸ್ಕರನ್ ಅವರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ.
ಪೆರಿಯ ಪರಿಸರದಲ್ಲಿ ಸಿಪಿಐ (ಎಂ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆಯುತ್ತಿದ್ದ ಸರಣಿ ದಾಳಿ ಮತ್ತು ಪ್ರತಿದಾಳಿಗಳ ಭಾಗವಾಗಿ ನಡೆದ ಇಬ್ಬರ ಕೊಲೆಯು ರಾಜಕೀಯ ಪ್ರೇರಿತ ಎಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್‌ಶೀಟ್‌ನಲ್ಲಿ ಹೇಳಿತ್ತು.
ಫೆಬ್ರವರಿ 17, 2019ರಂದು ಕಾಸರಗೋಡಿನ ಪೆರಿಯದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ 19 ವರ್ಷದ ಕೃಪೇಶ್ ಮತ್ತು 24 ವರ್ಷದ ಶರತ್ ಲಾಲ್ ಅವರ ಹತ್ಯೆ ನಡೆದಿತ್ತು. ಸಿಪಿಐ (ಎಂ) ಸದಸ್ಯರು ಈ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.
ಪ್ರಕರಣದ ಹಿನ್ನೆಲೆ : ಜನವರಿ 5,2019 ರಂದು ನಡೆದ ವಿಚಾರಣೆಯ ಪ್ರಕಾರ, ಕಳ್ಳಿಯೋಟ್‌ನಲ್ಲಿ ಎಸ್‌ಎಫ್‌ಐ ಮತ್ತು ಯೂತ್ ಕಾಂಗ್ರೆಸ್ ನಡುವಿನ ಘರ್ಷಣೆಯ ನಂತರ, ಶರತ್ ಲಾಲ್ ಮತ್ತು ಇತರರು ಮೊದಲ ಪ್ರಕರಣದ ಅಪರಾಧಿ ಪೀತಾಂಬರನ್ ಮತ್ತು ಇನ್ನೋರ್ವ ಅಪರಾಧಿ ಸುರೇಂದ್ರನ್ ಅಲಿಯಾಸ್ ವಿಷ್ಣು ಸುರ ಮೇಲೆ ಹಲ್ಲೆ ನಡೆಸಿದ್ದರು. ಫೆಬ್ರವರಿ 17, 2019ರಂದು, ಕೃಪೇಶ್ ಮತ್ತು ಶರತ್ ಲಾಲ್ ಅವರು ಪೆರುಮ್ಕಾಲಿಯಾಟ್ಟಂ ದೇವಸ್ಥಾನದ ಉತ್ಸವದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಕಳ್ಳಿಯೋಟ್-ತನ್ನಿತೋಡ್ ರಸ್ತೆಯಲ್ಲಿ ಅವರ ಮೇಲೆ ದಾಳಿ ನಡೆದಿತ್ತು. ಇದರಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಇಬ್ಬರೂ ಸಾವನ್ನಪ್ಪಿದ್ದರು.
ಫೆಬ್ರವರಿ 19, 2019 ರಂದು ಎ. ಪೀತಾಂಬರನ್ ಅವರನ್ನು ಪ್ರಕರಣದ ಪ್ರಮುಖ ಆರೋಪಿಯಾಗಿ ಬಂಧಿಸಲಾಗಿತ್ತು. ಎರಡು ದಿನಗಳ ನಂತರ ಕೇರಳ ಪೊಲೀಸ್ ಕ್ರೈಂ ಬ್ರಾಂಚ್ ತನಿಖೆಯನ್ನು ವಹಿಸಿಕೊಂಡಿತ್ತು. ಮೇ 20, 2019 ರಂದು, ಕ್ರೈಂ ಬ್ರಾಂಚ್ ತನ್ನ ಚಾರ್ಜ್‌ಶೀಟ್ ಸಲ್ಲಿಸಿತ್ತು. ಅದರಲ್ಲಿ 14 ಆರೋಪಿಗಳನ್ನು ಹೆಸರಿಸಿತ್ತು. ಎಲ್ಲರೂ ಸಿಪಿಐ(ಎಂ) ಪಕ್ಷದೊಂದಿಗೆ ಸಂಪರ್ಕ ಹೊಂದಿವರಾಗಿದ್ದರು.
ಸೆಪ್ಟೆಂಬರ್ 30,2019 ರಂದು, ಕೇರಳ ಹೈಕೋರ್ಟ್‌ನ ಏಕಸದಸ್ಯ ಪೀಠ ಕ್ರೈಂ ಬ್ರಾಂಚ್ ಚಾರ್ಜ್‌ಶೀಟ್ ರದ್ದುಗೊಳಿಸಿ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಅಕ್ಟೋಬರ್ 26, 2019 ರಂದು, ಕೇರಳ ಸರ್ಕಾರವು ಸಿಬಿಐ ತನಿಖೆಯ ವಿರುದ್ಧ ಹೈಕೋರ್ಟ್‌ನ ವಿಭಾಗೀಯ ಪೀಠಕ್ಕೆ ಮನವಿ ಸಲ್ಲಿಸಿತ್ತು. ಆಗಸ್ಟ್ 25, 2020ರಂದು, ವಿಭಾಗೀಯ ಪೀಠವು ತನಿಖೆಯನ್ನು ಸಿಬಿಐಗೆ ವರ್ಗಾಯಿಸುವ ಏಕ ಸದಸ್ಯ ಪೀಠದ ಆದೇಶವನ್ನು ಎತ್ತಿಹಿಡಿದಿತ್ತು. ಸೆಪ್ಟೆಂಬರ್ 12, 2020ರಂದು, ಕೇರಳ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿತ್ತು. ಡಿಸೆಂಬರ್ 1,2020 ರಂದು, ಸುಪ್ರೀಂ ಕೋರ್ಟ್ ಕೂಡ ರಾಜ್ಯ ಸರ್ಕಾರದ ಅರ್ಜಿಯನ್ನು ವಜಾಗೊಳಿಸಿತ್ತು. ಪ್ರಕರಣವನ್ನು ಸಿಬಿಐಗೆ ವಹಿಸಲು ಅವಕಾಶ ಮಾಡಿಕೊಟ್ಟಿತ್ತು.
ಡಿಸೆಂಬರ್ 14, 2020 ರಂದು ಸಿಬಿಐ ಔಪಚಾರಿಕವಾಗಿ ತನಿಖೆಯ ಹೊಣೆಯನ್ನು ವಹಿಸಿಕೊಂಡಿತ್ತು. ಡಿಸೆಂಬರ್ 1, 2021 ರಂದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಐವರನ್ನು ಬಂಧಿಸಿತ್ತು. ಫೆಬ್ರವರಿ 2, 2023 ರಂದು ಕೊಚ್ಚಿಯ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭವಾಗಿತ್ತು.
ಇದನ್ನೂ ಓದಿ : ಹಣ ಅಕ್ರಮ ವರ್ಗಾವಣೆ ಆರೋಪ : ವಿಚಾರಣೆಗೆ ಹಾಜರಾಗುವಂತೆ ಕೆಟಿಆರ್‌ಗೆ ಇಡಿ ಸಮನ್ಸ್


