ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನಿನ ವಿರುದ್ದ ಕಳೆದ 21 ದಿನಗಳಿಂದ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಲ್ಲಿ, ಕನಿಷ್ಠ 22 ಮಂದಿ ಮೃತಪಟ್ಟಿದ್ದಾರೆ ಎಂದು ರೈತ ಸಂಘಟನೆ ಸಂಯುಕ್ತ್ ಕಿಸಾನ್ ಮೋರ್ಚಾ ತಿಳಿಸಿದೆ.
ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ಪ್ರಾರಂಭವಾದಾಗಿನಿಂದ ಇಪ್ಪತ್ತು ರೈತರು ಸಾವನ್ನಪ್ಪಿದ್ದಾರೆ ಮತ್ತು ಇದಕ್ಕೆ ಕಾರಣವಾಗಿರುವ ಸರ್ಕಾರವು ಬೆಲೆ ತೆರಬೇಕಾಗುತ್ತದೆ ಎಂದು ರೈತ ಮುಖಂಡರು ಸಿಂಘೂ ಗಡಿಯಿಂದ ಘೋಷಿಸಿದ್ದಾರೆ. ಡಿಸೆಂಬರ್ 20 ಅನ್ನು ”ಶೋಕ ದಿನ” ಎಂದು ಘೋಷಿಸಲಾಗಿದೆ ಮತ್ತು “ಪ್ರತಿ ಹಳ್ಳಿಯ ಹುತಾತ್ಮರಿಗೆ ಗೌರವ ಸಲ್ಲಿಸಲಾಗುವುದು” ಎಂದು ಅವರು ತಿಳಿಸಿದ್ದಾರೆ.
ದೆಹಲಿಯ ತಾಪಮಾನ ನಿನ್ನೆ 4.1 ಸೆಲ್ಸಿಯಸ್ ಡಿಗ್ರಿ ತಲುಪಿದ್ದು ಇದು ಸಾಮಾನ್ಯಕ್ಕಿಂತ ಐದು ಡಿಗ್ರಿಗಳಷ್ಟು ಕಡಿಮೆಯಾಗಿದೆ ಎಂದು ಸಫ್ದರ್‌ಜಂಗ್ ವೀಕ್ಷಣಾಲಯ ಹೇಳಿತ್ತು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನನ್ನು ರದ್ದುಗೊಳಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ಇದುವರೆಗೂ ನಡೆದ ಆರು ಸುತ್ತಿನ ಮಾತುಕತೆ ವಿಫಲಗೊಂಡಿದೆ.
ಇದನ್ನೂ ಓದಿ: ಅಂಬೇಡ್ಕರ್ ಚಿಂತನೆಗಳನ್ನು ತಿರುಚುವ ಕುತ್ಸಿತ ಶಕ್ತಿಗಳು ಮತ್ತು ಅವರ ಆಶಯಗಳನ್ನು ಮಣ್ಣುಗೂಡಿಸುವ ಕಾನೂನುಗಳು
ಪ್ರತಿಭಾರಿ ಮಾತುಕತೆಯಲ್ಲೂ ಕೇಂದ್ರವು ಒಂದೆ ರೀತಿಯ ಪ್ರಸ್ತಾಪದೊಂದಿಗೆ ಬರುತ್ತಿರುವುದಕ್ಕೆ ರೈತ ಹೋರಾಟಗಾರರು ಅಸಮಧಾನಗೊಂಡಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜಾರಿಗೆ ತಂದಿರುವ ಕಾನೂನುಗಳು ಕಾರ್ಪೋರೇಟ್ ವಲಯಕ್ಕೆ ಪ್ರಯೋಜನವನ್ನು ನೀಡುತ್ತದೆ ಹೊರತು ರೈತರಿಗಲ್ಲ ಎಂದು ಪ್ರತಿಭಟನಾ ನಿರತ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂದೋಲನವು ಸೋಮವಾರದಿಂದ ತೀವ್ರಗೊಂಡಿದ್ದು, ಹೋರಾಟ ನಿರತ ರೈತರು ಉಪವಾಸ ಸತ್ಯಾಗ್ರಹಕ್ಕೆ ಕರೆಕೊಟ್ಟಿದ್ದರು. ಅಲ್ಲದೆ ಆಂದೋಲನವನ್ನು ಸೇರಿಕೊಳ್ಳಲು ತಮಿಳುನಾಡು, ರಾಜಸ್ಥಾನ ಸೇರಿದಂತೆ ಇನ್ನೂ ಸಾವಿರಾರು ರೈತರು ದೆಹಲಿಗೆ ಹೊರಟಿದ್ದಾರೆ ಎಂದಿದ್ದರು. ಆಂದೋಲನ ತೀವ್ರಗೊಳ್ಳುತ್ತಿದ್ದರೂ ಪ್ರಧಾನಿ ಮೋದಿ ನಿನ್ನೆ ಕೂಡಾ ವಿವಾದಿತ ಕಾನೂನನ್ನು ಸಮರ್ಥಿಸಿಕೊಂಡಿದ್ದು, “ವಿಪಕ್ಷಗಳು ಹೋರಾಟ ನಿರತ ರೈತರನ್ನು ದಾರಿ ತಪ್ಪಿಸುತ್ತಿವೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಮಹಿಷಾಸುರ ತೋಡಾ ಬುಡಕಟ್ಟಿನವನೇ? ನಾಗ ಕುಲದವನೇ? ಬೌದ್ಧ ಅರಸನೇ?


