ದೇಶದ 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 26 ಗ್ರಾಮೀಣ ಬ್ಯಾಂಕ್‌ಗಳನ್ನು ವಿಲೀನಗೊಳಿಸಲಾಗಿದೆ. ಮೇ 1ರಿಂದ ಇದು ಅಧಿಕೃತವಾಗಿ ಜಾರಿಯಾಗಿದೆ.
“11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 26 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ (ಆರ್‌ಆರ್‌ಬಿ) ವಿಲೀನವು ಇಂದಿನಿಂದ ಜಾರಿಗೆ ಬರಲಿದೆ. ಇದು ಆರ್‌ಆರ್‌ಬಿಗಳನ್ನು ಬಲಿಷ್ಠಗೊಳಿಸುವುದು, ಉತ್ತಮ ಆಡಳಿತ, ಸುಧಾರಿತ ಸಾಲದ ಹರಿವು ಮತ್ತು ಆರ್ಥಿಕ ಸೇರ್ಪಡೆಯತ್ತ ಮಹತ್ವದ ಹೆಜ್ಜೆಯಿಡುವುದನ್ನು ಸೂಚಿಸುತ್ತದೆ” ಎಂದು ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್) ಎಕ್ಸ್‌ನಲ್ಲಿ ಗುರುವಾರ (ಮೇ 1) ಪೋಸ್ಟ್ ಮಾಡಿದೆ.
Amalgamation of 26 Regional Rural Banks (RRBs) in 11 States/UT takes effect from today, marking a significant step toward strong RRBs, better governance, improved credit flow and financial inclusion.#RRBs #OneStateOneRRB@FinMinIndia @nsitharamanoffc @PIB_India @DDNewslive
— DFS (@DFS_India) May 1, 2025
ಏಪ್ರಿಲ್ 8ರಂದು, ಡಿಎಫ್‌ಎಸ್ ‘ಒಂದು ರಾಜ್ಯ ಒಂದು ಗ್ರಾಮೀಣ ಬ್ಯಾಂಕ್’ ತತ್ವದಡಿ 26 ಆರ್‌ಆರ್‌ಬಿಗಳ ವಿಲೀನಕ್ಕೆ ಅಧಿಸೂಚನೆ ಹೊರಡಿಸಿತ್ತು. ಇದು ಆರ್‌ಆರ್‌ಬಿಗಳ ವಿಲೀನದ ನಾಲ್ಕನೇ ಹಂತವಾಗಿದೆ.
ಈ ಹಿಂದೆ ನಡೆದ ವಿಲೀನಗಳಿಂದಾಗಿ ಆರ್‌ಆರ್‌ಬಿಗಳ ದಕ್ಷತೆಯಲ್ಲಿ ಸುಧಾರಣೆಯಾಗಿದೆ ಎಂದ ಹಣಕಾಸು ಸಚಿವಾಲಯ, ನವೆಂಬರ್ 2024ರಲ್ಲಿ ಪಾಲುದಾರರೊಂದಿಗೆ ಸಮಾಲೋಚನೆಗಾಗಿ ವಿಲೀನ ಯೋಜನೆಯನ್ನು ರೂಪಿಸಿತ್ತು.
ಪಾಲುದಾರರೊಂದಿಗೆ ಸಮಾಲೋಚನೆ ನಡೆಸಿದ ನಂತರ, 10 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ 26 ಆರ್‌ಆರ್‌ಬಿಗಳ ವಿಲೀನವನ್ನು ಪ್ರಾಥಮಿಕವಾಗಿ ಪ್ರಮಾಣದ ದಕ್ಷತೆ ಮತ್ತು ವೆಚ್ಚ ತರ್ಕಬದ್ಧಗೊಳಿಸುವಿಕೆಯ ಸುಧಾರಣೆಯ ಮೇಲೆ ಕೇಂದ್ರೀಕರಿಸಲಾಗಿತ್ತು.
ಇತ್ತೀಚಿನ ವಿಲೀನದ ನಂತರ, 26 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ 28 ಆರ್‌ಆರ್‌ಬಿಗಳು ಉಳಿದುಕೊಂಡಿವೆ. ಇವುಗಳು 700 ಜಿಲ್ಲೆಗಳಲ್ಲಿ 22,000ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿವೆ.
ಆರ್‌ಆರ್‌ಬಿಗಳ ಪ್ರಮುಖ ಕಾರ್ಯಕ್ಷೇತ್ರ ಗ್ರಾಮೀಣ ಪ್ರದೇಶಗಳಲ್ಲಿದ್ದು, ಶೇಕಡ 92ರಷ್ಟು ಶಾಖೆಗಳು ಗ್ರಾಮೀಣ ಅಥವಾ ಅರೆ ನಗರ ಪ್ರದೇಶಗಳಲ್ಲಿವೆ.
ಈ ಹಿಂದಿನ ಮೂರು ಹಂತಗಳಲ್ಲಿ, ಅಂದರೆ ಹಂತ-I (ಹಣಕಾಸು ವರ್ಷ 2006 ರಿಂದ 2010) ಆರ್‌ಆರ್‌ಬಿಗಳ ಸಂಖ್ಯೆಯನ್ನು 196 ರಿಂದ 82ಕ್ಕೆ ಇಳಿಸಲಾಗಿತ್ತು. ಹಂತ-2 (ಹಣಕಾಸು ವರ್ಷ 2013ರಿಂದ 2015) ಆರ್‌ಆರ್‌ಬಿಗಳ ಸಂಖ್ಯೆಯನ್ನು 82ರಿಂದ 56ಕ್ಕೆ ಇಳಿಸಲಾಗಿತ್ತು. ಹಂತ-3 (ಹಣಕಾಸು ವರ್ಷ 2019 ರಿಂದ 2021) ಆರ್‌ಆರ್‌ಬಿಗಳ ಸಂಖ್ಯೆಯನ್ನು 56ರಿಂದ 43ಕ್ಕೆ ಇಳಿಸಲಾಗಿತ್ತು.

ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ವ್ಯಾಪಾರ, ವಾಣಿಜ್ಯ, ಕೈಗಾರಿಕೆ ಮತ್ತು ಇತರ ಉತ್ಪಾದಕ ಚಟುವಟಿಕೆಗಳ ಅಭಿವೃದ್ಧಿಗೆ, ವಿಶೇಷವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರು, ಕೃಷಿ ಕಾರ್ಮಿಕರು, ಕುಶಲಕರ್ಮಿಗಳು ಮತ್ತು ಸಣ್ಣ ಉದ್ಯಮಿಗಳಿಗೆ ಸಾಲ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳನ್ನು (ಆರ್‌ಆರ್‌ಬಿ) 1975ರಲ್ಲಿ ಸ್ಥಾಪಿಸಲಾಯಿತು.
ಕರ್ನಾಟಕದ ಎರಡು ಬ್ಯಾಂಕ್‌ಗಳು ವಿಲೀನ
ಕರ್ನಾಟಕದಲ್ಲಿ ಎರಡು ರೀತಿಯ ಗ್ರಾಮೀಣ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿತ್ತು. 1. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಕೆವಿಜಿಬಿ) ಮತ್ತು 2. ಕರ್ನಾಟಕ ಗ್ರಾಮೀಣ ಬ್ಯಾಂಕ್ (ಕೆಜಿಬಿ). ಇದೀಗ ಈ ಎರಡೂ ಬ್ಯಾಂಕ್‌ಗಳನ್ನು ವಿಲೀನಗೊಳಿಸಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಆಗಿ ಮಾಡಲಾಗಿದೆ. ಈ ಬ್ಯಾಂಕ್‌ನ ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ಇರಲಿದೆ.
ಗಮನಾರ್ಹವಾಗಿ, 1970ರ ದಶಕದಲ್ಲಿ ರಾಜ್ಯದಲ್ಲಿ 13 ರೀತಿಯ ಗ್ರಾಮೀಣ ಬ್ಯಾಂಕ್‌ಗಳು ಇದ್ದವು. ಅವುಗಳನ್ನು ಹಂತ, ಹಂತವಾಗಿ ವಿಲೀನಗೊಳಿಸುತ್ತಾ ಬಂದು, ಅಂತಿಮವಾಗಿ ಎರಡು ಗ್ರಾಮೀಣ ಬ್ಯಾಂಕ್‌ಗಳು ಉಳಿದಿದ್ದವು. ಇದೀಗ, ಅವುಗಳನ್ನೂ ವಿಲೀನಗೊಳಿಸಲಾಗಿದೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ರಾಜ್ಯದ 9 ಜಿಲ್ಲೆಗಳಲ್ಲಿ 629 ಶಾಖೆಗಳನ್ನು ಹೊಂದಿತ್ತು. ಕರ್ನಾಟಕ ಗ್ರಾಮೀಣ ಬ್ಯಾಂಕ್ ರಾಜ್ಯದ 22 ಜಿಲ್ಲೆಗಳಲ್ಲಿ 1,122 ಶಾಖೆಗಳನ್ನು ಹೊಂದಿತ್ತು. ಇದೀಗ ಎರಡೂ ಬ್ಯಾಂಕ್‌ಗಳ ವಿಲೀನದೊಂದಿಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ದೇಶದ ಎರಡನೇ ಅತಿದೊಡ್ಡ ಗ್ರಾಮೀಣ ಬ್ಯಾಂಕ್ ಎನಿಸಿಕೊಂಡಿದೆ.
ಹಿಂತೆಗೆದುಕೊಂಡ ಬಳಿಕವೂ ಚಲಾವಣೆಯಲ್ಲಿ ರೂ. 6266 ಕೋಟಿ ಮೌಲ್ಯದ ರೂ.2000 ನೋಟುಗಳು


