ವಿದೇಶಿಯರ ನ್ಯಾಯಮಂಡಳಿ ‘ವಿದೇಶಿಯರು’ ಎಂದು ಘೋಷಿಸಿರುವ ಹಿನ್ನೆಲೆ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಪೊಲೀಸರು 28 ಜನರನ್ನು (ಮುಸ್ಲಿಮರು) ಮಾಟಿಯಾ ‘ಟ್ರಾನ್ಸಿಟ್ ಕ್ಯಾಂಪ್’ (ಬಂಧನ ಕೇಂದ್ರ)ಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಾಲಯದ ಆದೇಶ ಅನುಸಾರ ಸೋಮವಾರ 19 ಪುರುಷರು ಮತ್ತು 9 ಮಹಿಳೆಯರನ್ನು ಟ್ರಾನ್ಸಿಟ್ ಕ್ಯಾಂಪ್‌ಗೆ ಕಳುಹಿಸಲಾಗಿದೆ ಎಂದು ಬಾರ್ಪೇಟಾ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.
ಟ್ರಾನ್ಸಿಟ್ ಕ್ಯಾಂಪ್‌ಗೆ ಕಳುಹಿಸಲ್ಪಟ್ಟ ಎಲ್ಲರೂ ‘ಬಂಗಾಳಿ ಮಾತನಾಡುವ ಮುಸ್ಲಿಮರಾಗಿದ್ದು’, ಕಾನೂನು ಪ್ರಕ್ರಿಯೆ ಬಳಿಕ ವಿದೇಶಿಯರೆಂದು ಘೋಷಿಸಲಾಗಿದೆ. ಅವರೆಲ್ಲ ಜಿಲ್ಲೆಯ ವಿವಿಧೆಡೆ ನೆಲೆಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಪೊಲೀಸರು ಎಲ್ಲಾ 28 ಜನರನ್ನು ಎಸ್‌ಪಿ ಕಚೇರಿಗೆ ಕರೆದಿದ್ದರು. ಅಲ್ಲಿಗೆ ಬಂದ ಅವರನ್ನು ಬಿಗಿ ಭದ್ರತೆಯ ನಡುವೆ ಟ್ರಾನ್ಸಿಟ್ ಕ್ಯಾಂಪ್‌ಗೆ ಕರೆದೊಯ್ಯಲಾಗಿದೆ. ಈ ವೇಳೆ ಅವರ ಕುಟುಂಬಸ್ಥರು ಮತ್ತು ಸಂಬಂಧಿಕರು ಎಸ್‌ಪಿ ಕಚೇರಿ ಬಳಿ ಜಮಾಯಿಸಿದ್ದರು. ಎಲ್ಲರನ್ನು ತಬ್ಬಿಕೊಂಡು ಅಳುತ್ತಾ ಕಳುಹಿಸಿಕೊಟ್ಟರು ಎಂದು ವರದಿಗಳು ಹೇಳಿವೆ.
28 Muslims from Bengali community in Assam have been declared foreigners & sent to a 'transit camp’
Videos show their family members gathered outside SP's office, crying & hugging each other, as some members of same family were declared 'foreigners' while others were not pic.twitter.com/u4XwWEZG61
— Maktoob (@MaktoobMedia) September 4, 2024
ವಿದೇಶಿಯರ ನ್ಯಾಯಮಂಡಳಿಗಳು ಶಂಕಿತ ವಿದೇಶಿಯರ ಪ್ರಕರಣಗಳನ್ನು ವ್ಯವಹರಿಸುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ. ಅಸ್ಸಾಂನಲ್ಲಿ ಅಂತಹ 100ಕ್ಕೂ ಹೆಚ್ಚು ನ್ಯಾಯಮಂಡಳಿಗಳು ಇವೆ.
ಮಾಟಿಯಾದಲ್ಲಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ‘ಟ್ರಾನ್ಸಿಟ್ ಕ್ಯಾಂಪ್’ ಸ್ಥಾಪಿಸಲಾಗಿದೆ. ಆರಂಭದಲ್ಲಿ ಅದನ್ನು ‘ಬಂಧನ ಕೇಂದ್ರ’ ಎನ್ನಲಾಗುತ್ತಿತ್ತು. ಆದರೆ, ಹೆಚ್ಚು ಮಾನವೀಯ ಸ್ಪರ್ಶ ನೀಡಲು ‘ಟ್ರಾನ್ಸಿಟ್ ಕ್ಯಾಂಪ್’ ಎಂದು ಮರುನಾಮಕರಣ ಮಾಡಲಾಗಿದೆ. ಮಾಟಿಯಾ ಕ್ಯಾಂಪ್ 3,000 ಜನರಿಗೆ ವಸತಿ ಒದಗಿಸುವ ಸಾಮರ್ಥ್ಯ ಹೊಂದಿದೆ.
ಅಸ್ಸಾಂನ ಗೋಲ್‌ಪಾರಾ ಜಿಲ್ಲೆಯ ಮಾಟಿಯಾದಲ್ಲಿರುವ ಟ್ರಾನ್ಸಿಟ್ ಕ್ಯಾಂಪ್ ದೇಶದಲ್ಲೇ ದೊಡ್ಡದು. ಪ್ರಸ್ತುತ ಅಲ್ಲಿ 210 ‘ಘೋಷಿತ ವಿದೇಶಿಗರು’ ಇದ್ದಾರೆ ಎಂದು ಅಸ್ಸಾಂ ಗೃಹ ಇಲಾಖೆ ಈ ಹಿಂದೆ ವಿಧಾನಸಭೆಗೆ ಮಾಹಿತಿ ನೀಡಿತ್ತು.
ಇದನ್ನೂ ಓದಿ : ಹಿಂಸಾತ್ಮಕ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುವ ಸ್ವಘೋಷಿತ ಗೋರಕ್ಷಕ ರಾಕಿ ರಾಣಾ : ಕ್ರಮಕ್ಕೆ ಆಗ್ರಹ


