ವಿಶ್ವ ಹಿಂದೂ ಪರಿಷತ್‌ನ(ವಿಹೆಚ್‌ಪಿ) ‘ವಿಧಿ ಪ್ರಕೋಷ್ಠ’ (ಕಾನೂನು ಕೋಶ) ಭಾನುವಾರ (ಸೆ.8) ಆಯೋಜಿಸಿದ್ದ ಸಭೆಯಲ್ಲಿ ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳ ಸುಮಾರು 30 ನಿವೃತ್ತ ನ್ಯಾಯಾಧೀಶರು ಭಾಗವಹಿಸಿದ್ದು, ವಾರಣಾಸಿ, ಮಥುರಾ ದೇವಸ್ಥಾನ-ಮಸೀದಿ ಕಾನೂನು ವಿವಾದ, ವಕ್ಫ್ (ತಿದ್ದುಪಡಿ) ಮಸೂದೆ, ಧಾರ್ಮಿಕ ಮತಾಂತರ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಕೂಡ ಸಭೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.
“ನಾವು ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನಿವೃತ್ತ ನ್ಯಾಯಾಧೀಶರನ್ನು ಸಭೆಗೆ ಆಹ್ವಾನಿಸಿದ್ದೆವು. ಸಮಾಜದ ಮುಂದಿರುವ ಸಾಮೂಹಿಕ ಸಮಸ್ಯೆಗಳಾದ ವಕ್ಫ್ (ತಿದ್ದುಪಡಿ) ಮಸೂದೆ, ದೇವಸ್ಥಾನಗಳನ್ನು ವಾಪಸ್ ಪಡೆಯುವುದು, ಸರ್ಕಾರದ ನಿಯಂತ್ರಣದಲ್ಲಿರುವ ದೇವಸ್ಥಾನಗಳನ್ನು ಸಮಾಜಕ್ಕೆ ಹಸ್ತಾಂತರಿಸುವುದು, ಮತಾಂತರ ಇತ್ಯಾದಿಗಳ ಕುರಿತು ಚರ್ಚಿಸಲಾಗಿದೆ. ನ್ಯಾಯಾಧೀಶರು ಮತ್ತು ವಿಹೆಚ್‌ಪಿ ನಡುವೆ ಮುಕ್ತ ಅಭಿಪ್ರಾಯ ವಿನಿಮಯ ಸಭೆಯ ಉದ್ದೇಶವಾಗಿದೆ. ಇದರಿಂದ ಎರಡೂ ಕಡೆಯವರು ಪರಸ್ಪರ ವಿಷಯಗಳನ್ನು ತಿಳಿದುಕೊಳ್ಳುತ್ತಾರೆ” ಎಂದು ವಿಹೆಚ್‌ಪಿ ಅಧ್ಯಕ್ಷ ಅಲೋಕ್ ಕುಮಾರ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ವಿಚಾರ ವಿನಿಮಯಕ್ಕೆ ಇದೊಂದು ವೇದಿಕೆಯಾಗಿದೆ. ರಾಷ್ಟ್ರೀಯತೆ ಮತ್ತು ಹಿಂದುತ್ವದ ಬಗ್ಗೆ ಚರ್ಚೆ ನಡೆದಿದೆ. ಹಿಂದೂಗಳ ಮೇಲೆ ಪರಿಣಾಮ ಬೀರುವ ಕಾನೂನುಗಳು, ದೇವಾಲಯಗಳ ವಿಮೋಚನೆ, ಧಾರ್ಮಿಕ ಮತಾಂತರ, ಗೋಹತ್ಯೆ ಮತ್ತು ವಕ್ಫ್ ಬೋರ್ಡ್ ಕುರಿತು ಚರ್ಚಿಸಲಾಗಿದೆ” ಎಂದು ವಿಹೆಚ್‌ಪಿ ವಕ್ತಾರ ವಿನೋದ್ ಬನ್ಸಾಲ್ ಹೇಳಿರುವುದಾಗಿ ವರದಿ ತಿಳಿಸಿದೆ.
ಭಾನುವಾರ ರಾತ್ರಿ ಸಚಿವ ಮೇಘವಾಲ್ ಅವರು ಹಲವಾರು ಮಾಜಿ ನ್ಯಾಯಾಧೀಶರ ಜೊತೆ ಅಲೋಕ್ ಕುಮಾರ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಜೈನ್ ಅವರಂತಹ ಹಿರಿಯ ವಿಹೆಚ್‌ಪಿ ನಾಯಕರನ್ನು ಒಳಗೊಂಡ ಫೋಟೋವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು. “ಇಂದು ವಿಶ್ವ ಹಿಂದೂ ಪರಿಷತ್ತಿನ ಕಾನೂನು ಕೋಶ ಆಯೋಜಿಸಿದ್ದ ಸಭೆಯಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಉದ್ದೇಶದಿಂದ ನ್ಯಾಯಾಂಗ ಸುಧಾರಣೆಗಳ ಕುರಿತು ವಿವರವಾದ ಚರ್ಚೆ ನಡೆಯಿತು. ನಿವೃತ್ತ ನ್ಯಾಯಾಧೀಶರು, ನ್ಯಾಯಶಾಸ್ತ್ರಜ್ಞರು, ಹಿರಿಯ ವಕೀಲರು ಮತ್ತು ಬುದ್ಧಿಜೀವಿಗಳು ಉಪಸ್ಥಿತರಿದ್ದರು”ಎಂದು ಬರೆದುಕೊಂಡಿದ್ದರು.
आज विश्व हिंदू परिषद के विधि प्रकोष्ठ द्वारा आयोजित Judge’s Meet समारोह में सहभागिता करके विकसित भारत के निर्माण संबंधित न्यायिक सुधारो से जुड़े विषयों पर विस्तृत संवाद किया।
इस अवसर पर विश्व हिंदू परिषद के अध्यक्ष श्री आलोक कुमार जी की गरिमामयी उपस्थित में सेवानिवृत्त… pic.twitter.com/4CSkoeuE0a— Arjun Ram Meghwal (@arjunrammeghwal) September 8, 2024
ವಿಹೆಚ್‌ಪಿ ಮೂಲಗಳ ಪ್ರಕಾರ, ಸಮಕಾಲೀನ ಕಾನೂನು ಸಮಸ್ಯೆಗಳನ್ನು ಚರ್ಚಿಸುವುದರ ಜೊತೆಗೆ, ನಿವೃತ್ತಿಯ ನಂತರ ನ್ಯಾಯಾಧೀಶರ ಪಾತ್ರ ಕೊನೆಗೊಳ್ಳುವುದಿಲ್ಲ. ಅವರು ‘ರಾಷ್ಟ್ರ ನಿರ್ಮಾಣ’ ದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕೊಡುಗೆ ನೀಡಬೇಕು ಎಂದು ಹಿರಿಯ ವಿಹೆಚ್‌ಪಿ ನಾಯಕರೊಬ್ಬರು ಹೇಳಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸಂಘ ಪರಿವಾರದ ಹಲವಾರು ಸೈದ್ಧಾಂತಿಕ ಪ್ರಕರಣಗಳು ಪ್ರಸ್ತುತ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವುದರಿಂದ ಈ ಬೆಳವಣಿಗೆಯು ಮಹತ್ವದ್ದಾಗಿದೆ. ವಾರಣಾಸಿಯ ಕಾಶಿ ವಿಶ್ವನಾಥ್-ಜ್ಞಾನವಾಪಿ ಮಸೀದಿ ಸಂಕೀರ್ಣ ಮತ್ತು ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಮಸೀದಿ ಈದ್ಗಾ ವಿವಾದಗಳು ಇದರಲ್ಲಿ ಸೇರಿವೆ.
ವಿವಿಧ ಬಿಜೆಪಿ ಆಡಳಿತದ ರಾಜ್ಯಗಳು ಜಾರಿಗೆ ತಂದ ಕೆಲವು ಮತಾಂತರ ವಿರೋಧಿ ಕಾನೂನುಗಳು ನ್ಯಾಯಾಲಯಗಳ ಪರಿಶೀಲನೆಗೆ ಒಳಪಟ್ಟಿವೆ. ವಕ್ಫ್ ಮಸೂದೆಯನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಗಿದೆ. ಬಿಜೆಪಿ ಪ್ರಮುಖ ಮಿತ್ರಪಕ್ಷಗಳಾದ ಜೆಡಿ(ಯು) ಮತ್ತು ಎಲ್‌ಜೆಪಿ ಈ ವಿಚಾರದಲ್ಲಿ ವ್ಯತಿರಿಕ್ತ ಅಭಿಪ್ರಾಯ ಹೊಂದಿದೆ.
ಇದನ್ನೂ ಓದಿ : ‘ಲೋಕಸಭೆ ಚುನಾವಣೆಗೂ ಮುನ್ನ ಜನರಲ್ಲಿ ಇದ್ದ ಭಯದ ಭಾವನೆ ಈಗ ಮಾಯವಾಗಿದೆ..’; ರಾಹುಲ್ ಅಭಿಪ್ರಾಯ


