ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ಬಲವಾದ ಗಾಳಿ ಬೀಸಿದ್ದರಿಂದ ಗಂಗಾ ನದಿಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದೆ. ಸೇತುವೆಯ ವೀಡಿಯೊಗಳು ನೀರಿನ ಸುತ್ತಲಿನ ಸೇತುವೆಯ ಮೇಲೆ ಜನರು ಸಿಕ್ಕಿಬಿದ್ದಿರುವುದನ್ನು ತೋರಿಸುತ್ತದೆ. ಈ ಸೇತುವೆಯು ರಾಘೋಪುರವನ್ನು ವೈಶಾಲಿ ಜಿಲ್ಲಾ ಕೇಂದ್ರಕ್ಕೆ ಸಂಪರ್ಕಿಸುತ್ತದೆ ಎಂದು ಸುದ್ದಿ ಸಂಸ್ಥೆ ANI ಯ ವರದಿ ಮಾಡಿದೆ.
ಇದು ತಾತ್ಕಾಲಿಕ ಸೇತುವೆಯಾಗಿದ್ದು ಜೂನ್ 20ರೊಳಗೆ ಈ ಸೇತುವೆಯನ್ನು ತಗೆದುಹಾಕಬೇಕಿತ್ತು, ಆದರೆ ಬಿಹಾರದಲ್ಲಿ ಸುರಿಯುತ್ತಿರುವ ಮಾನ್ಸೂನ್ ಮಳೆಯಿಂದಾಗಿ ಸೆತುವೆ ತಗೆದುಹಾಕುವ ಕೆಲಸವು ವಿಳಂಬವಾಯಿತು ಎಂದು ಸ್ಥಳೀಯ ವರದಿಗಳು ಹೇಳಿವೆ.
ಈ ಘಟನೆ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದು, ಒಂದೇ ತಿಂಗಳಲ್ಲಿ ಮೂರನೇ ಸೇತುವೆಗೆ ಹಾನಿ ಎಂದು ಪೋಸ್ಟ್ ಮಾಡಿದ್ದಾರೆ. ಇನ್ನು ಕೆಲವರು ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ 12ನೇ ಸೇತುವೆ ಕುಸಿತ ಹಾಗೂ 2023ರಲ್ಲಿನ ಏಳನೇ ಸೇತುವೆ ಕುಸಿತ ಪ್ರಕರಣ ಇದಾಗಿದೆ.
- ಜೂನ್ 4ರಂದು ಖಗಾರಿಯಾ ಜಿಲ್ಲೆ ಹಾಗೂ ಭಾಗಲ್ಪುರವನ್ನು ಸಂಪರ್ಕಿಸಬೇಕಿದ್ದ ನಿರ್ಮಾಣ ಹಂತದ ಸೇತುವೆ ಮುರಿದು ಬಿದ್ದಿತ್ತು. ಈ ದುರಂತವು ವಿಡಿಯೋದಲ್ಲಿ ಸೆರೆಯಾಗಿತ್ತು. ಒಬ್ಬ ಸೆಕ್ಯುರಿಟಿ ಗಾರ್ಡ್ ಅವಘಡದಲ್ಲಿ ಮೃತಪಟ್ಟಿದ್ದರು.
- ಜೂನ್ 23ರಂದು ಕಿಶನ್‌ಗಂಜ್ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಸೇತುವೆಯ ಭಾಗವೊಂದು ನೆಲಕಚ್ಚಿದೆ.
- ಜೂನ್ 28ರಂದು ವೈಶಾಲಿ ಜಿಲ್ಲೆಯಲ್ಲಿ ಬಲವಾದ ಗಾಳಿ ಬೀಸಿದ್ದರಿಂದ ಗಂಗಾ ನದಿಗೆ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆಯ ಒಂದು ಭಾಗ ಕೊಚ್ಚಿ ಹೋಗಿದೆ.
2019ರ ನವೆಂಬರ್‌ನಲ್ಲಿಯೇ ಪೂರ್ಣಗೊಳ್ಳಬೇಕಿದ್ದ ಸೇತುವೆ ಕಾಮಗಾರಿ, ಗಡುವು ಮುಗಿದು ನಾಲ್ಕು ವರ್ಷಗಳಾದರೂ ಮುಗಿದಿರಲಿಲ್ಲ. ಗಂಗಾ ನದಿಗೆ ನಿರ್ಮಿಸಲಾಗುತ್ತಿದ್ದ 3.16 ಕಿಮೀ ಉದ್ದದ, ನಾಲ್ಕು ಲೇನ್‌ನ ಈ ಸೇತುವೆ ಕುಸಿದು ಬಿದ್ದಿದ್ದು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದ ಬಿಹಾರ ಎಂಜಿನಿಯರಿಂಗ್ ಸೇವೆಗಳ ಸಂಸ್ಥೆ, ರಾಜ್ಯದಲ್ಲಿನ ಎಲ್ಲ ಸೇತುವೆಗಳ ರಚನಾತ್ಮಕ ಪರಿಶೀಲನೆ ಅಗತ್ಯವಿದೆ ಹಾಗೂ ನಿರ್ಮಾಣ ಹಂತದಲ್ಲಿರುವ ಸೇತುವೆಗಳ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದೆ.
ಕಿಶನ್‌ಗಂಜ್‌ನಲ್ಲಿ ನಿರ್ಮಾಣ ಹಂತದ ಸೇತುವೆ ಕುಸಿತ
ಶುಕ್ರವಾರ, ಬಿಹಾರದ ಕಿಶನ್‌ಗಂಜ್ ಜಿಲ್ಲೆಯ ಗೋರಿಚಕ್‌ನಲ್ಲಿ 100 ಮೀಟರ್ ನಿರ್ಮಾಣ ಹಂತದ ಸೇತುವೆ ಕುಸಿದಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಂಡು ನಾಲ್ವರು ಅಧಿಕಾರಿಗಳನ್ನು- ಇಬ್ಬರು ಎಂಜಿನಿಯರ್‌ಗಳು ಮತ್ತು ಇಬ್ಬರು ಯೋಜನಾ ವ್ಯವಸ್ಥಾಪಕರನ್ನು ಅಮಾನತುಗೊಳಿಸಿತು.
ರಾಜಧಾನಿ ಪಾಟ್ನಾದಿಂದ ಸುಮಾರು 400 ಕಿಮೀ ದೂರದಲ್ಲಿನ ರಾಷ್ಟ್ರೀಯ ಹೆದ್ದಾರಿ 327ಇ ಯಲ್ಲಿ ಈ ಘಟನೆ ನಡೆದಿದೆ. ಮೆಚಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯ ಒಂದು ಪಿಲ್ಲರ್ ಕುಸಿದಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಅರವಿಂದ್ ಕುಮಾರ್ ಹೇಳಿದ್ದಾರೆ.
“ಎನ್‌ಎಚ್- 327ಇ ವ್ಯಾಪ್ತಿಯಲ್ಲಿನ ನಿರ್ಮಾಣ ಹಂತದಲ್ಲಿರುವ ಸೇತುವೆಯು ಪೂರ್ಣಗೊಂಡ ನಂತರ ಕಿಶನ್‌ಗಂಜ್ ಮತ್ತು ಕತಿಹಾರ್ ಪಟ್ಟಣಗಳನ್ನು ಸಂಪರ್ಕಿಸುತ್ತಿತ್ತು” ಎಂದು ಅವರು ತಿಳಿಸಿದ್ದಾರೆ.
”ಪ್ರಾಥಮಿಕ ತನಿಖೆಯ ಪ್ರಕಾರ, ಇತ್ತೀಚೆಗೆ ನೇಪಾಳದಿಂದ ಮೀಚಿ ನದಿಯಲ್ಲಿ ಹಠಾತ್ ನೀರಿನ ಹರಿವು ಕಂಡುಬಂದಿದ್ದರಿಂದ ಈ ಸೇತುವೆ ಕುಸಿತ ಕಂಡಿದೆ ಎಂದು ಹೇಳಲಾಗುತ್ತದೆ. ನಿರ್ಮಾಣ ಚಟುವಟಿಕೆಯ ಸಮಯದಲ್ಲಿ ಸಂಪೂರ್ಣ ನದಿಯನ್ನು P2-P3-P4 ಸ್ಪ್ಯಾನ್‌ಗಳ ಮೂಲಕ ಚಾನಲ್ ಮಾಡಲಾಗಿದೆ ಎಂದು ಹೆಚ್ಚಿನ ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ” ಎಂದು ಪ್ರಾದೇಶಿಕ ಅಧಿಕಾರಿ (NHAI) ಅಬ್ದೇಶ್ ಕುಮಾರ್ ಹೇಳಿದ್ದಾರೆ.


