ದಹಿಕಾಟಾ ಮೀಸಲು ಅರಣ್ಯದೊಳಗಿನ 1,140 ಬಿಘಾ (376 ಎಕರೆಗೂ ಹೆಚ್ಚು) ಅರಣ್ಯ ಭೂಮಿಯ ಮೇಲಿನ ಅತಿಕ್ರಮಣವನ್ನು ತೆರವುಗೊಳಿಸಲು ಅಸ್ಸಾಂ ಸರ್ಕಾರ ಭಾನುವಾರ (ನ.9) ಗೋಲ್ಪಾರ ಜಿಲ್ಲೆಯಲ್ಲಿ ತನ್ನ ತೆರವು ಕಾರ್ಯಾಚರಣೆಯನ್ನು ಪುನರಾರಂಭಿಸಿದೆ. ಇದರಿಂದ ಸುಮಾರು 600 ಕುಟುಂಬಗಳ ಮೇಲೆ ಪರಿಣಾಮ ಬೀರಲಿದೆ ಎಂದು ವರದಿಗಳು ಹೇಳಿವೆ.
ಗೋಲ್ಪಾರ ಉಪ ಆಯುಕ್ತ ಪ್ರೊದೀಪ್ ತಿಮುಂಗ್ ಮಾಧ್ಯಮಗಳೊಂದಿಗೆ ಮಾತನಾಡಿ, ತೆರವು ಕಾರ್ಯಾಚರಣೆ ಶಾಂತಿಯುತವಾಗಿ ಮುಂದುವರೆದಿದ್ದು, ಎರಡು ವಾರಗಳ ಹಿಂದೆಯೇ ನೋಟಿಸ್‌ಗಳನ್ನು ನೀಡಿ, ನಿವಾಸಿಗಳು ಪ್ರದೇಶವನ್ನು ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
1,140 ಬಿಘಾ ಭೂಮಿಯನ್ನು 580 ಕುಟುಂಬಗಳು ಅತಿಕ್ರಮಣ ಮಾಡಿಕೊಂಡಿದ್ದವು. ಅವರಲ್ಲಿ ಸುಮಾರು 70% ಕುಟುಂಬಗಳು ನೋಟಿಸ್ ಪಡೆದ ನಂತರ ಈಗಾಗಲೇ ಖಾಲಿ ಮಾಡಿದ್ದಾರೆ ಮತ್ತು ಉಳಿದವರು ಸ್ಥಳಾಂತರಗೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ತಿಮುಂಗ್ ಅವರು ಪಿಟಿಐಗೆ ತಿಳಿಸಿದ್ದಾರೆ.
ತೆರವು ಕಾರ್ಯಾಚರಣೆಗೆ ದೊಡ್ಡ ಮಟ್ಟದ ಭದ್ರತಾ ಸಿಬ್ಬಂದಿಯ ತುಕಡಿಯನ್ನು ನಿಯೋಜಿಸಲಾಗಿದೆ. ಬುಲ್ಡೋಝರ್, ಟ್ರ್ಯಾಕ್ಟರ್ ಸೇರಿದಂತೆ ಭಾರೀ ಪ್ರಮಾಣದಲ್ಲಿ ಯಂತ್ರೋಪಕರಣಗಳನ್ನು ಬಳಸಿಕೊಳ್ಳಲಾಗಿದೆ. ಇಡೀ ಪ್ರದೇಶವನ್ನು ಐದು ಬ್ಲಾಕ್‌ಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ಒಂದರಲ್ಲಿ ಮಾತ್ರ ಪ್ರತಿರೋಧ ವರದಿಯಾಗಿದೆ. ದಿನಾಂತ್ಯದ ವೇಳೆಗೆ ಕಾರ್ಯಾಚರಣೆ ಪೂರ್ಣಗೊಳಿಸುವ ನಿರೀಕ್ಷೆಯಿದೆ ಎಂದು ತಿಮುಂಗ್ ಹೇಳಿದ್ದಾರೆ.
ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳನ್ನು ಈ ಹಿಂದೆ ಗುವಾಹಟಿ ಹೈಕೋರ್ಟ್ ವಿಚಾರಣೆ ನಡೆಸಿದೆ. ಹೈಕೋರ್ಟ್‌ನ ನಿರ್ದೇಶನಗಳಿಗೆ ಅನುಗುಣವಾಗಿ ತೆರವು ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಮುಂಗ್ ತಿಳಿಸಿದ್ದಾರೆ.
ತೆರವು ಕಾರ್ಯಾಚರಣೆಯಿಂದ ಮನೆಗಳನ್ನು ಕಳೆದುಕೊಳ್ಳಲಿರುವ ಹೆಚ್ಚಿನ ಜನರು ಬಂಗಾಳಿ ಮಾತನಾಡುವ ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ಅಧಿಕಾರಿಗಳು ಹೇಳಿದ್ದಾಗಿ ವರದಿಯಾಗಿದೆ.
2021ರಲ್ಲಿ ಹಿಮಂತ್ ಬಿಸ್ವಾ ಶರ್ಮಾ ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಬಳಿಕ, ಅತಿಕ್ರಮಣ ತೆರವು ಹೆಸರಿನಲ್ಲಿ ಜನರ ಮನೆಗಳನ್ನು ಧ್ವಂಸಗೊಳಿಸುವ ಕಾರ್ಯಾಚರಣೆ ಸರಣಿಯಾಗಿ ನಡೆಯುತ್ತಿವೆ. ಈ ಕಾರ್ಯಾಚರಣೆಗಳಲ್ಲಿ ಹೆಚ್ಚಾಗಿ ಬಂಗಾಳಿ ಮಾತನಾಡುವ ಮುಸ್ಲಿಮರು ತಮ್ಮ ನೆಲೆ ಕಳೆದುಕೊಂಡಿದ್ದಾರೆ.
“ನಮ್ಮ ಆಡಳಿತದಲ್ಲಿ ಅಕ್ರಮ ಮಿಯಾಗಳು (ಮಿಯಾ ಮುಸ್ಲಿಮರು) ಶಾಂತಿ ಕಂಡುಕೊಳ್ಳಲು ಸಾಧ್ಯವಿಲ್ಲ. ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸಿಎಂ ಶರ್ಮಾ ಇತ್ತೀಚೆಗೆ ಹೇಳಿದ್ದರು.
ಮೂಲತಃ ಅಸ್ಸಾಂನಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರಿಗೆ ನಿಂದನೆಯಾಗಿ ಬಳಸಲಾಗುತ್ತಿದ್ದ ಮಿಯಾ ಎಂಬ ಪದವನ್ನು ಇತ್ತೀಚಿನ ವರ್ಷಗಳಲ್ಲಿ ಆ ಸಮುದಾಯದ ಗುರುತಾಗಿ ಮಾರ್ಪಟ್ಟಿದೆ. ಈ ಮಿಯಾ ಮುಸ್ಲಿಮರನ್ನು ಸಿಎಂ ಶರ್ಮಾ ನೇರವಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪಗಳಿವೆ.
ದಲಿತ ಸಂಶೋಧನಾ ವಿದ್ಯಾರ್ಥಿಗೆ ಜಾತಿ ತಾರತಮ್ಯ ಆರೋಪ : ತನಿಖೆಗೆ ಆದೇಶಿಸಿದ ಸರ್ಕಾರ


