ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಮತದಾನ ಇಂದು ಆರಂಭವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಹತ್ತಿರದ ಮುಖಂಡನಾಗಿದ್ದ ಮತ್ತು ಈಗ ಬಿಜೆಪಿ ಸೇರಿ ಅಭ್ಯರ್ಥಿಯಾಗಿರುವ ಸುವೇಂಧು ಅಧಿಕಾರಿಯವರ ಕ್ಷೇತ್ರ ನಂದಿಗ್ರಾಮದಲ್ಲಿ ಇಂದು ಚುನಾವಣೆ ನಡೆಯಲಿದ್ದು ಕಾವೇರಿದ ವಾತಾವರಣ ನಿರ್ಮಾಣವಾಗಿದೆ. ಅದೇ ಸಂದರ್ಭದಲ್ಲಿ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿದ್ದು, 66 ವರ್ಷದ ಆಂಟಿ ಸಂಯಮದಿಂದಿರಬೇಕು ಎಂದು ಮಮತಾ ಬ್ಯಾನರ್ಜಿ ವಿರುದ್ಧ ಸುವೇಂಧು ಅಧಿಕಾರಿ ಟೀಕಾಪ್ರಹಾರ ನಡೆಸಿದ್ದಾರೆ.
“ಅವರು ಮುಖ್ಯಮಂತ್ರಿಯಾಗಿರುವುದರಿಂದ ಸ್ವಲ್ಪ ಸಂಯಮವನ್ನು ತೋರಿಸಬೇಕು. ಅವರು ಪ್ರಧಾನಿಗೆ ಹೊಲಸು ಭಾಷೆ ಬಳಸುತ್ತಾರೆ. ಅವರು 66 ವರ್ಷದ ಆಂಟಿ. ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಮತದಾನ ನಡೆಯುತ್ತಿರುವಾಗ ಅವರು ಗೂಂಡಾಗಿರಿಯಲ್ಲಿ ಪಾಲ್ಗೊಳ್ಳಬಾರದು” ಎಂದು ಅಧಿಕಾರಿ ಹೇಳಿದ್ದಾರೆ.
ಮತದಾನಕ್ಕೂ ಮುನ್ನ ಮಾತನಾಡಿದ್ದ ಮಮತಾ ಬ್ಯಾನರ್ಜಿ, “ನಂದಿಗ್ರಾಮದಲ್ಲಿ ನನ್ನ ಮೇಲೆ ಹಲ್ಲೆ ನಡೆಸಿದವರ ವಿಡಿಯೋ ಮತ್ತು ಫೋಟೊಗಳು ಲಭ್ಯವಿವೆ. ನಾನೆಂದು ಅವರನ್ನು ಕ್ಷಮಿಸುವುದಿಲ್ಲ. ಚುನಾವಣಾ ನಡೆಯುತ್ತಿರುವುದರಿಂದ ಸುಮ್ಮನಿದ್ದೇನೆ. ಚುನಾವಣೆ ಮುಗಿದ ನಂತರ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿ, ಮಮತಾ ಬ್ಯಾನರ್ಜಿಯವರು ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ. ಅವರು ಹೂಗ್ಲಿಯಲ್ಲಿ ಕಾನೂನುಬಾಹಿರವಾಗಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ನಂದಿಗ್ರಾಮ್ ಹೆಸರಿಸಿದ್ದಾರೆ. ನಂದಿಗ್ರಾಮದಲ್ಲಿಯೂ ಪತ್ರಿಕಾಗೋಷ್ಠಿ ನಡೆಸಿ ಮತದಾರರ ಮೇಲೆ ಪ್ರಭಾವ ಬೀರುವ ಕೆಲಸ ಮಾಡುತ್ತಿದ್ದಾರೆ. ಅವರು ಯಾವುದೇ ಹಿಂಸಾಚಾರವನ್ನು ಮಾಡಬಾರದು ಎಂದು ನಾವು ನಿರೀಕ್ಷಿಸುತ್ತೇವೆ. ಇಲ್ಲಿ ಎಲ್ಲರೂ ಸಕ್ರಿಯರಾಗಿದ್ದಾರೆ, ಕೇಂದ್ರ ಪಡೆಗಳು ಇಲ್ಲಿವೆ, 14 ಡ್ರೋನ್‌ಗಳನ್ನು ಬಳಸಲಾಗುತ್ತಿದೆ, 76 ಬೂತ್‌ಗಳನ್ನು ತ್ವರಿತ ಪ್ರತಿಕ್ರಿಯೆ ತಂಡ ಮತ್ತು ಇತರ ಪಡೆಗಳು ನಿರ್ವಹಿಸುತ್ತವೆ. ಶಾಂತಿಯುತವಾಗಿರುವುದಕ್ಕೆ ನನಗೆ ಸಂತೋಷವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ; ಬಿಜೆಪಿಯೇತರ ವಿರೋಧ ಪಕ್ಷಗಳಿಗೆ ಪತ್ರ ಬರೆದ ಬಂಗಾಳ ಮುಖ್ಯಮಂತ್ರಿ ಮಮತಾ ಹೇಳಿದ್ದೇನು?


