ಮತ್ತೆ ರಾಜ್ಯೋತ್ಸವ ಬಂದಿದೆ. ಹಳೆಯದನ್ನೆಲ್ಲಾ ನೆನೆಸಿಕೊಂಡು ಮತ್ತೊಮ್ಮೆ ರಾಜ್ಯೋತ್ಸವ ಆಚರಿಸಬಹುದು. ಮತ್ತೆ ಜಯಹೇ ಗಿರಿವನಗಳ ನಾಡೇ ಅಂತಲೋ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ಅಂತ ಹಾಡುತ್ತಾ ರಾಜ್ಯೋತ್ಸವವನ್ನು ಆಚರಿಸಬಹುದು. ಅಂದರೆ, ಕರ್ನಾಟಕದ ಹಳೆಯ ವೈಭವ-ವೈಭೋಗಗಳನ್ನೆಲ್ಲಾ ಹಾಗೆ ಮತ್ತೊಮ್ಮೆ ನೆನೆದು ಧನ್ಯರಾಗಬಹುದು. ಕರುನಾಡ ಪ್ರಕೃತಿಯ ಮೈಸಿರಿಯನ್ನು ಮತ್ತೊಮೆ ನೋಡಿಯೋ-ಊಹಿಸಿಯೋ ಮೈಮರೆತುಬಿಡಬಹುದು. ಆದರೆ ವರ್ತಮಾನದ ಆಗು-ಹೋಗುಗಳ ಆಳ-ಅಗಲಗಳನ್ನು ಗ್ರಹಿಸಬಲ್ಲ ನೋಟ ಇದ್ದವರಿಗೆ ಈ ವರ್ಷದ ರಾಜ್ಯೋತ್ಸವದ ಕುರಿತು ಯೋಚಿಸುವಾಗ ವಿಷಾದವಾಗಬೇಕು.
ಒಕ್ಕೂಟ ವ್ಯವಸ್ಥೆಯೊಳಗೊಂದು ರಾಜ್ಯವಾಗಿ ಕರ್ನಾಟಕ ಇಷ್ಟೊಂದು ದಣಿದು ನಿಂತ ಒಂದು ಕ್ಷಣ ಚರಿತ್ರೆಯಲ್ಲಿ ದಾಖಲಾಗಿರಲಿಕ್ಕಿಲ್ಲ. ಬಹುಕಾಲದಿಂದ ಕರ್ನಾಟಕ ಸಂಸ್ಕೃತಿಯ ಭಾಗವಾಗಿದ್ದ ಬಹುತ್ವದ ಪರಂಪರೆಯನ್ನು ವಿರೋಧಿಸುವ ಹಾದಿಯಲ್ಲಿ, ಕರ್ನಾಟಕ ಇಷ್ಟೊಂದು ಮುಂದುವರಿದಿರುವ ಇನ್ನೊಂದು ಕಾಲಘಟ್ಟ ರಾಜ್ಯದ ಚರಿತ್ರೆಯಲ್ಲಿ ಕಂಡುಬರುವುದಿಲ್ಲ. ಒಂದು ನಿರ್ದಿಷ್ಟ ಚಾರಿತ್ರಿಕ ಪರಂಪರೆಯಿಂದ ಕರ್ನಾಟಕ ಕಳಚಿಕೊಂಡು ನಿಂತಿದೆ. ಅದು ಸ್ವಂತಿಕೆಯ ಪರಂಪರೆ. ಅದು ಸ್ವಾಭಿಮಾನದ ಪರಂಪರೆ. ಅದು ವಿವಿಧ ರೀತಿಯ ಆಕ್ರಮಣಗಳ ಮತ್ತು ಹೇರಿಕೆಗಳ ವಿರುದ್ಧ ಯಾವತ್ತೂ ಜೀವಂತವಾಗಿದ್ದ ಒಂದು ಆರೋಗ್ಯಕರ ಪ್ರತಿರೋಧದ ಪರಂಪರೆ. ಮೆರೆವ ಕರ್ಣಾಟ ದೇಶದೊಲಿರುವ… ಎನ್ನುವ ಗೋವಿನ ಹಾಡಿನ ಸಾಲಿನಲ್ಲಿ ಕರ್ನಾಟಕವನ್ನು ದೇಶ ಅಂತ ಕರೆದದ್ದು ಅನಾಮಿಕ ಕವಿಯೊಬ್ಬನ ಕಲ್ಪನೆಯ ದೇಶವಾಗಿಯಷ್ಟೇ ಅಲ್ಲ. ಸಾಂವಿಧಾನಿಕ ವ್ಯವಸ್ಥೆಯೊಳಗೆ ಒಂದು ರಾಜ್ಯವಾಗಿರುವಾಗಲೂ ಕರ್ನಾಟಕ ಎಂದರೆ ದೇಶದೊಳಗಣ ದೇಶ ಎನ್ನುವಷ್ಟು ಸ್ವಂತಿಕೆ, ಸ್ವಾಭಿಮಾನ ಎಲ್ಲಾ ಇತ್ತು. ವರ್ತಮಾನದ ರಾಜಕೀಯ ಸ್ಥಿತ್ಯಂತರದಲ್ಲಿ ಸಿಲುಕಿ ಕರ್ನಾಟಕ ಇರುವದೆಲ್ಲವ ಬಿಟ್ಟು ಸಾಗಬಾರದ ಹಾದಿಯಲ್ಲಿ ಸಾಗುತ್ತಿದೆ. ಇದೊಂದು ಗಂಭೀರ ಎನ್ನಬಹುದಾದ ಬೆಳವಣಿಗೆ. ಈ ಸ್ಥಿತಿಯಲ್ಲಿ ಏನು ನಾಡು ಏನು ನಾಡ ಉತ್ಸವ ಎಂದು ನಿರಾಶೆಯಿಂದಲೇ ಕೇಳಬೇಕಾದಷ್ಟು ಗಂಬೀರವಾದ ಬದಲಾವಣೆ. ಹಾಗಾದರೆ ಇದ್ದದ್ದು ಏನು ಮತ್ತು ಈಗ ಕಳೆದುಕೊಂಡಿರುವುದೇನನ್ನು ಅಂತ ಸ್ವಲ್ಪ ನೋಡೋಣ.
ಕರ್ನಾಟಕದಲ್ಲಿ ಯಾವತ್ತೂ ಒಂದು ಆರೋಗ್ಯಕರವಾದ ಪ್ರತಿರೋಧದ ಪರಂಪರೆ ಇತ್ತು. ಅದು ಋಣಾತ್ಮಕ ಪ್ರತಿಭಟನೆಯ ಧೋರಣೆಯಲ್ಲ. ಏನನ್ನೋ ವಿರೋಧಿಸಬೇಕೆನ್ನುವ ಬೇಡಿಕೆಯ ಸೆರಗಲ್ಲಿ ಕಾಣಿಸಿಕೊಂಡ ಪ್ರತಿರೋಧದ ಸೆಳೆಯಲ್ಲ. ಅದು ಕರ್ನಾಟಕವನ್ನು ಈ ದೇಶದ ವೈವಿದ್ಯತೆಯ ಒಂದು ಘಟಕ ಅಂತ ಪರಿಭಾವಿಸಿ ಆ ಸ್ವಂತಿಕೆಯನ್ನು ಎಂತಹ ಸಂದರ್ಭದಲ್ಲೂ ಬಿಟ್ಟುಕೊಡಬಾರದು ಎನ್ನುವ ಒಂದು ಸಮಷ್ಟಿ ಮನೋಭಾವ. ಇದು ಕರ್ನಾಟಕದ ಸಂಸ್ಕೃತಿ, ಸಾಹಿತ್ಯ ಹೀಗೆ ಎಲ್ಲಾ ರಂಗಗಳಲ್ಲೂ ಜೀವಂತವಾಗಿತ್ತು. ಶೋಷಿತ ಸಮುದಾಯದ ಹುಡುಗನೊಬ್ಬನಿಗೆ ಶಸ್ತ್ರಾಭ್ಯಾಸ ನಿರಾಕರಿಸಲಾಯಿತು ಎನ್ನುವ ಅಂಶವನ್ನಿಟ್ಟು ಹುಟ್ಟಿಕೊಂಡ ಕದಂಬ ಸಾಮ್ರಾಜ್ಯದ ಐತಿಹ್ಯ ಈ ಪ್ರತಿರೋಧದ ಪರಂಪರೆಯನ್ನು ಸಾರುತ್ತದೆ. ಜಾತಿ ವ್ಯವಸ್ಥೆಯನ್ನು ಪ್ರಶ್ನಿಸಿ ’ಮನುಷ್ಯ ಕುಲಂ ತಾನೊಂದೇ ವಲಂ’ ಎಂದು ಸಾರಿದ ಪಂಪನ ಸಾತ್ವಿಕ ಪ್ರತಿಭಟನೆಯೂ ಅದನ್ನೇ ಹೇಳುತ್ತದೆ. ಹನ್ನೆರಡೆಯ ಶತಮಾನದಲ್ಲಿ ವೈದಿಕ ಪಾರಮ್ಯವನ್ನು ಪ್ರತಿಭಟಿಸಿ ಹುಟ್ಟಿಕೊಂಡ ಶರಣ ಚಳವಳಿ ಮುಂದುವರಿಸಿದ್ದು ಕೂಡಾ ಇದೇ ಪರಂಪರೆಯನ್ನು.
ಬಹಳ ಹಿಂದಿನದ್ದನ್ನು ಬಿಟ್ಟುಬಿಡೋಣ. ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ ಚರಿತ್ರೆಯನ್ನೇ ದೃಷ್ಟಿಯಲ್ಲಿಟ್ಟುಕೊಂಡರೂ ಕರ್ನಾಟಕದಲ್ಲೊಂದು ಆರೋಗ್ಯಕರ ಪ್ರತಿರೋಧದ ಪರಂಪರೆ ಕಾಣಿಸುತ್ತಿದೆ. ಆ ಪರಂಪರೆ ರಾಷ್ಟ್ರಮಟ್ಟದ ರಾಜಕೀಯ ನಾಯಕರ ಚಕ್ರಾಧಿಪತಿ ಧೋರಣೆಯ ವಿರುದ್ಧ ಎದ್ದುನಿಂತದ್ದನ್ನು ಕಾಣುತ್ತೇವೆ. ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುವ ಅಧಿಕಾರದ ಕೇಂದ್ರೀಕರಣದ ವಿರುದ್ಧ ಅದು ಧ್ವನಿ ಎತ್ತಿದ್ದನ್ನು ಕಾಣುತ್ತೇವೆ. ಬಹುತ್ವದ ಬೇರುಗಳು ಅಲುಗಾಡತೊಡಗಿದಾಗ ಅವುಗಳನ್ನು ಬಲಪಡಿಸಲು ಅದು ವಿವಿಧ ಹೋರಾಟಗಳ ರೂಪದಲ್ಲಿ ಮೇಲೆದ್ದು ಬಂದದನ್ನು ಕಾಣುತ್ತೇವೆ. ಕಾಂಗ್ರೆಸ್ ಇಬ್ಭಾಗವಾಗುವ ಕಾಲಕ್ಕೆ ಕರ್ನಾಟಕದ ನಿಜಲಿಂಗಪ್ಪ ಇಂದಿರಾ ಗಾಂಧಿ ವಿರೋಧಿ ಬಣದ ಮುಂಚೂಣಿಯಲ್ಲಿದ್ದರು. ಅಂದು ಕಾಂಗ್ರೆಸ್ಸಿನಲ್ಲಿ ಇಂದಿರಾ ಬಣ ಮತ್ತು ನಿಜಲಿಂಗಪ್ಪ ಬಣದ ನಡುವಣ ಮೇಲಾಟದ ಸೂಕ್ಷ್ಮಗಳು ಏನೇ ಇರಲಿ, ನಾಯಕತ್ವವನ್ನು ವಂಶವಾಹಿನಿಗಳ ಮೂಲಕ ದಾಟಿಸುವ ರಾಜಕೀಯಕ್ಕೆ ಪ್ರತಿರೋಧ ಒಡ್ಡಿದ ಮೊದಲ ಮಾದರಿಯದು.
ಆ ನಂತರ ಕರ್ನಾಟಕದ ರಾಜಕೀಯದಲ್ಲಿ ದೈತ್ಯ ಶಕ್ತಿಯಾಗಿ ಎದ್ದು ನಿಂತ ದೇವರಾಜ ಅರಸರು ಮೊದಲಿಗೆ ದೆಹಲಿಯ ದೊಡ್ಡ ನಾಯಕಿಯ ದೊಡ್ಡ ನಾಯಕತ್ವದ ಜತೆ ಹೆಜ್ಜೆ ಹಾಕಿದರು. ಆದರೆ, ಆ ಮೈತ್ರಿ ತಾಳತಪ್ಪಿ ಅದು ಕರ್ನಾಟಕ ರಾಜಕೀಯದ ಸ್ವಾಭಿಮಾನವನ್ನು ಕೆಣಕಲು ಪ್ರಾರಂಭಿಸಿದಾಗ ಅರಸು ರಾಜ್ಯರಾಜಕಾರಣದ ಸ್ವಂತಿಕೆಯನ್ನು ಮೆರೆದರು. ಕಾಂಗ್ರೆಸ್ಸಿನಿಂದ ಹೊರ ಬಂದು ಸ್ವಂತ ಪಕ್ಷ ಕಟ್ಟಿದರು. ಅರಸು ಅಕಾಲಿಕ ಮರಣ ಹೊಂದಿದರು. ಹಾಗಾಗಿ ಪ್ರಾದೇಶಿಕ ರಾಜಕಾರಣದ ಆ ಮೊದಲ ಮಾದರಿ ಒಂದು ನಿರ್ಣಾಯಕ ಹಂತ ತಲುಪುವ ಮೊದಲೇ ಅಂತ್ಯಗೊಂಡಿತು. ಅದೇನೇ ಇರಲಿ, ದೇವರಾಜ ಅರಸರ ರಾಜಕೀಯ ಕರ್ನಾಟಕ ರಾಜಕಾರಣ ಸ್ವಂತಿಕೆಗೆಂದು ತುಡಿದ ಒಂದು ಉದಾಹರಣೆಯಾಗಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಅರಸು ಅವರು ಇಂದಿರಾ ಗಾಂಧಿಯವರ ಆಪ್ತವಲಯದಲ್ಲಿದ್ದಾಗಲೂ ಕರ್ನಾಟಕ ದೆಹಲಿಯ ಮಾದರಿಯನ್ನು ಅನುಸರಿಸಿದ್ದಕ್ಕಿಂತ ಹೆಚ್ಚಾಗಿ ದೆಹಲಿ ಕರ್ನಾಟಕದ ಮಾದರಿಯನ್ನು ಅನುಸರಿಸಿತ್ತು.
ಅರಸು ಇಂದಿರಾ ಗಾಂಧಿಯನ್ನು ಎಷ್ಟು ಅವಲಂಬಿಸಿದ್ದರೋ, ಅಷ್ಟೇ ಅರಸು ಅವರನ್ನು ಇಂದಿರಾ ಗಾಂಧಿ ಅವಲಂಬಿಸುವಂತೆ ಕರ್ನಾಟಕದ ರಾಜಕೀಯ ಇತ್ತು. ಬರಿಯ ರಾಜಕೀಯದಲ್ಲಿ ಮಾತ್ರವಲ್ಲ. ಇಂದಿರಾ ಗಾಂಧಿಯವರ ಬಹುಪ್ರಸಿದ್ಧ ಇಪ್ಪತ್ತು ಅಂಶಗಳ ಬಡತನ ನಿರ್ಮೂಲನದ ಯೋಜನೆಗೆ ಮೂಲ ಪ್ರೇರಣೆ ಅರಸು ಅವರು ಕರ್ನಾಟಕದಲ್ಲಿ ಹುಟ್ಟುಹಾಕಿದ್ದ ಸಮಾಜ-ಕಲ್ಯಾಣ ಯೋಜನೆಗಳೇ ಎಂದು ಇತಿಹಾಸ ದಾಖಲಿಸುತ್ತದೆ. ಜನತಾ ಪಕ್ಷದ ಅಧಿಕಾರದ ಅವಧಿಯುದ್ದಕ್ಕೂ ಇದುವೇ ಪರಂಪರೆ ಮುಂದುವರಿದದ್ದನ್ನು ಕಾಣುತ್ತೇವೆ. ಆಡಳಿತಾತ್ಮಕವಾಗಿ ಜನತಾ ಪಕ್ಷದ ಸರಕಾರ ಜಾರಿಗೆ ತಂಡ ಅಧಿಕಾರ ವಿಕೇಂದ್ರೀಕರಣದ ಮಾದರಿಯನ್ನು ಅನುಸರಿಸಿಯೇ ಮುಂದೆ ಕೇಂದ್ರ ಸರಕಾರ 73 ಮತ್ತು 74ನೆಯ ಸಾಂವಿಧಾನಿಕ ತಿದ್ದುಪಡಿಗಳನ್ನು ಜಾರಿಗೆ ತಂದು ವಿಕೇಂದ್ರೀಕರಣ ವ್ಯವಸ್ಥೆಯನ್ನು ದೇಶಾದ್ಯಂತ ಸಾಂವಿಧಾನಬದ್ಧಗೊಳಿಸಿದ್ದು. ಕರ್ನಾಟಕ ಅಧಿಕಾರ ಕೇಂದ್ರೀಕರಣದ ವಿರುದ್ಧ ತೋರಿಸಿದ ಜೀವಂತಿಕೆಗೆ ಜನತಾ ಪಕ್ಷದ ಸರಕಾರ ಜಾರಿಗೊಳಿಸಿದ ವಿಕೇಂದ್ರೀಕೃತ ಆಡಳಿತದ ಮಾದರಿಯೂ ಒಂದು ಉದಾಹರಣೆ.
ವಿವಿಧ ಕಾಲಘಟ್ಟಗಳಲ್ಲಿ ಕರ್ನಾಟಕದಲ್ಲಿ ನಡೆದು ಹೋದ ಗೋಕಾಕ್ ಚಳವಳಿ, ರೈತ ಚಳವಳಿ, ದಲಿತ ಚಳವಳಿ ಇತ್ಯಾದಿಗಳೆಲ್ಲಾ ವಿವಿಧ ರೀತಿಯ ಅಧಿಪತ್ಯಗಳ ವಿರುದ್ಧ ರಾಜ್ಯದ ರಾಜಕೀಯ ಜಾಗೃತವಾಗಿದ್ದಕ್ಕೆ ಸಂಕೇತಗಳಾಗಿ ಕಾಣಿಸುತ್ತವೆ. ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ಮೇಲೆದ್ದಿಲ್ಲ, ಹುಟ್ಟಿದರೂ ಬೆಳೆದಿಲ್ಲ. ಅದೊಂದು ಕೊರತೆ ನಿಜ. ಆದರೆ, ಇದನ್ನು ಇನ್ನೊಂದು ರೀತಿಯಲ್ಲೂ ನೋಡಬಹುದು. ಕರ್ನಾಟಕ ದಕ್ಷಿಣದ ಇತರ ರಾಜ್ಯಗಳಂತೆ ರಾಷ್ಟ್ರೀಯ ಪಕ್ಷಗಳನ್ನು ನಿರ್ನಾಮಗೊಳಿಸಲಿಲ್ಲ. ಹಾಗಂತ ರಾಷ್ಟ್ರೀಯ ಪಕ್ಷಗಳ ಪಾರಮ್ಯಕ್ಕೂ ಅವಕಾಶ ನೀಡಿಲ್ಲ. ತೃತೀಯ ಶಕ್ತಿಯೊಂದನ್ನು ಜೀವಂತವಾಗಿರಿಸಿಕೊಂಡು ರಾಷ್ಟ್ರೀಯ ಪಕ್ಷಗಳನ್ನು ಹದ್ದುಬಸ್ತಿನಲ್ಲಿಟ್ಟುಕೊಂಡಿರುವ ಕರ್ನಾಟಕದ ರಾಜಕಾರಣದಲ್ಲೂ ಒಂದು ಬಹುತ್ವದ ಮಾದರಿ ಇದೆ.
ಈಗ ಕರ್ನಾಟಕದ ಕತೆ ಬದಲಾಗಿದೆ. ಕೇಂದ್ರೀಕರಣದ ವಿರುದ್ಧ, ಏಕರೂಪತೆಯ ವಿರುದ್ಧ ಸದಾ ಎಚ್ಚರದಿಂದಿರುತ್ತಿದ್ದ ಕರ್ನಾಟಕ ಈಗ ರಾಜಕೀಯ ಸ್ವಾತಂತ್ರ್ಯವನ್ನು ಕಳೆದುಕೊಂಡ ವಸಾಹತಿನಂತೆ ಕಂಡರೆ ಅಚ್ಚರಿಯೇನಿಲ್ಲ. ಕರ್ನಾಟಕವನ್ನು ಹಿಂದೆಯೂ ರಾಷ್ಟ್ರೀಯ ಪಕ್ಷಗಳು ಆಳಿವೆ. ಹಿಂದೆಯೂ ರಾಷ್ಟ್ರ ಮಟ್ಟದಲ್ಲಿ ಪ್ರಬಲ ನಾಯಕರುಗಳಿದ್ದಾಗ ಅವರದೇ ಪಕ್ಷದ ಸರಕಾರಗಳು ಕರ್ನಾಟಕದಲ್ಲಿ ಆಗಿಹೋಗಿವೆ. ಅದೆಂತಹ ಪರಿಸ್ಥಿತಿ ಇದ್ದರೂ ಕರ್ನಾಟಕದ ರಾಜಕಾರಣ ಒಕ್ಕೂಟ ತತ್ವಕ್ಕೆ ಸದಾ ಧ್ವನಿಯಾಗುತಿತ್ತು. ರಾಜ್ಯದ ಸ್ವಾಭಿಮಾನವನ್ನು ಪಣಕ್ಕಿಟ್ಟು ಕರ್ನಾಟಕದ ರಾಜಕಾರಣ ಯಾವತ್ತೂ ಕೈಕಟ್ಟಿ ಕುಳಿತದ್ದಿಲ್ಲ.
ಈಗ ಇವೆಲ್ಲವೂ ಆಗುತ್ತಿದೆ. ಕರ್ನಾಟಕದಲ್ಲಿ ಒಕ್ಕೂಟ ತತ್ವ ಕಾಲುಮುರಿದು ಬಿದ್ದಿದೆ. ರಾಜ್ಯದಲ್ಲೊಬ್ಬ ಮುಖ್ಯಮಂತ್ರಿ ಇದ್ದಾರೆ ಅಂತ ಅನ್ನಿಸುವುದಿಲ್ಲ. ಅದ್ಯಾರೋ ಕೇಂದ್ರದ ಸಾಮಂತ ಕರ್ನಾಟಕದ ಮುಖ್ಯಮಂತ್ರಿ ಪೀಠದಲ್ಲಿ ಕುಳಿತಂತಿದೆ. ಕರ್ನಾಟಕದಲ್ಲೊಂದು ಸ್ವತಂತ್ರ ಸರಕಾರ ಅಧಿಕಾರದಲ್ಲಿದೆ ಅಂತ ಅನ್ನಿಸುವುದಿಲ್ಲ. ಕೇಂದ್ರ ಸರಕಾರದ ಇಲಾಖೆಯೊಂದು ಕರ್ನಾಟಕದಲ್ಲಿ ಆಳ್ವಿಕೆ ನಡೆಸುವಂತಿದೆ. ಬಹುಶಃ ಚರಿತ್ರೆಯಲ್ಲಿ ಮೊತ್ತಮೊದಲ ಬಾರಿಗೆ ದೆಹಲಿ ದಾಸ್ಯವನ್ನು ಕಾಯ ವಾಚಾ ಮನಸಾ ಒಪ್ಪಿಕೊಂಡ ಸರಕಾರವೊಂದು ಅಸ್ತಿತ್ವದಲ್ಲಿ ಇದೆ. ಅಷ್ಟೇ ಅಲ್ಲ ಕೇಂದ್ರದಲ್ಲಿ ಅಧಿಕಾರ ಹಿಡಿದಿರುವ ಪಕ್ಷ ಮತ್ತು ಅದರ ಬಹುತ್ವ ವಿರೋಧಿ ಧೋರಣೆಗೆ ಕರ್ನಾಟಕದ ರಾಜಕೀಯ ಧ್ವನಿಯಾಗುತ್ತಿದೆ. ಬಹುತ್ವದ ಬಗ್ಗೆ, ಸಾಮರಸ್ಯದ ಬಗ್ಗೆ ಅಸಹನೆಯುಳ್ಳ ಶಕ್ತಿಗಳೆಲ್ಲಾ ತಮ್ಮ ಧೋರಣೆಗೆ ವಿರೋಧವಾಗಿ ಏನಾದರೂ ನಡೆಯುತ್ತಿದೆ ಅಂತ ಅನ್ನಿಸಿದ ಕೂಡಲೇ ಹಿಂಸೆಗಿಳಿಯುತ್ತವೆ.
ಒಂದು ಕಾಲದಲ್ಲಿ ಸಾಮರಸ್ಯದ ಸಂದೇಶಗಳನ್ನು, ಕೊಡುಕೊಳ್ಳುವಿಕೆಯ ಸಂಸ್ಕೃತಿಯನ್ನು, ಆಡಳಿತ ಸುಧಾರಣೆಯ ಮಾದರಿಗಳನ್ನು, ಜನಕಲ್ಯಾಣದ ಯೋಜನೆಗಳನ್ನು ದೇಶಕ್ಕೆಲ್ಲಾ ಪರಿಚಯಿಸುತ್ತಿದ್ದ ಕರ್ನಾಟಕ ಈಗ ಇತರ ರಾಜ್ಯಗಳಿಗೆ ಕಳುಹಿಸಿಕೊಡುತ್ತಿರುವುದು ಸಮೂಹ ಸನ್ನಿಗಳ ಮಾದರಿಗಳನ್ನು – ಗುಂಪು ಹಿಂಸೆ, ಅನೈತಿಕ ಪೋಲೀಸುಗಿರಿ ಇತ್ಯಾದಿ. ರಾಜಕೀಯದಲ್ಲಿ ಕರ್ನಾಟಕ ಈಗ ದೇಶದ ಮುಂದಿಡುವುದು ಆಪರೇಷನ್ ಕಮಲಗಳಂತಹ ವಿನಾಶಕಾರಿ ಮಾದರಿಗಳನ್ನು. ಈ ವಿನಾಶಕಾರಿ ರಾಜಕೀಯ ಅರ್ಬುದದಿಂದಾಗಿ ಮೇಲೆ ವಿವರಿಸಿದ ಕರ್ನಾಟಕದ ರಾಜಕೀಯ ಬಹುತ್ವ ಶಿಥಿಲವಾಗುತ್ತಿದೆ. ಕರ್ನಾಟಕದಲ್ಲಿ ಏನಾಗುತ್ತಿದೆ, ಕರ್ನಾಟದಲ್ಲಿ ಯಾಕೆ ಹೀಗೆಲ್ಲಾ ಆಗುತ್ತಿದೆ ಮತ್ತು ಈ ಮೂಲಕ ಕರ್ನಾಟಕ ಏನೇನ್ನೆಲ್ಲಾ ಕಳೆದುಕೊಳ್ಳುತ್ತಿದೆ ಎನ್ನುವ ಪ್ರಶ್ನೆಗಳನ್ನು ಕೇಳುವ ಮೂಲಕ ಈ ವರ್ಷದ ರಾಜ್ಯೋತ್ಸವವನ್ನು ಆಚರಿಸಿದರೆ ಅದು ಅರ್ಥಪೂರ್ಣ ಅನ್ನಿಸುತ್ತದೆ.
ಎ ನಾರಾಯಣ
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಪ್ರಧ್ಯಾಪಕರು
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ: ಒಂದು ವಾರ ’ಮಾತಾಡ್ ಮಾತಾಡ್ ಕನ್ನಡ’ ಅಭಿಯಾನ


