ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷ ಕೆ.ಆರ್ಮ್‌ಸ್ಟ್ರಾಂಗ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿನ್ನೆ (ಜುಲೈ 5) ಸಂಜೆ ನಡೆದಿದೆ.
ಚೆನ್ನೈನ ಪೆರಂಬೂರ್‌ನಲ್ಲಿರುವ ಅವರ ಮನೆಯ ಬಳಿಯೇ ಕೃತ್ಯ ನಡೆದಿದೆ. ಸುಮಾರು 6 ಜನರು ದುಷ್ಕರ್ಮಿಗಳು ಬೈಕ್‌ನಲ್ಲಿ ಆಗಮಿಸಿ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆರ್ಮ್‌ಸ್ಟ್ರಾಂಗ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಘಟನೆಯ ಬಳಿಕ ಹಂತಕರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು. ಈ ನಡುವೆ 8 ಮಂದಿ ಅಣ್ಣಾನಗರ ಸಹಾಯಕ ಪೊಲೀಸ್ ಆಯುಕ್ತರ ಮುಂದೆ ಶರಣಾಗಿದ್ದಾರೆ. ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತಪ್ಪಿತಸ್ಥರ ಪತ್ತೆ ಮತ್ತು ಪ್ರಕರಣದ ತನಿಖೆಗಾಗಿ 10 ವಿಶೇಷ ತಂಡಗಳನ್ನು ರಚಿಸಲಾಗಿದೆ. ಚೆನ್ನೈ ಉತ್ತರ ಸಹಾಯಕ ಪೊಲೀಸ್ ಆಯುಕ್ತ ಅಸ್ರಾ ಗಾರ್ಗ್ ತನಿಖೆಯ ಉಸ್ತುವಾರಿ ವಹಿಸಿದ್ದಾರೆ. ಬಿಎಸ್‌ಪಿ ಬೆಂಬಲಿಗರು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಮಾಯಾವತಿ ಪ್ರತಿಕ್ರಿಯೆ :
ಆರ್ಮ್‌ಸ್ಟ್ರಾಂಗ್ ಹತ್ಯೆ ಕುರಿತು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಪ್ರತಿಕ್ರಿಯಿಸಿದ್ದು, “ಆರ್ಮ್‌ಸ್ಟ್ರಾಂಗ್ ಹತ್ಯೆ ಖಂಡನೀಯ. ವೃತ್ತಿಯಲ್ಲಿ ವಕೀಲರಾಗಿದ್ದ ಅವರು, ದಲಿತರ ಪರ ಗಟ್ಟಿ ಧ್ವನಿಯಾಗಿದ್ದರು. ರಾಜ್ಯ ಸರ್ಕಾರ ತಪ್ಪಿತಸ್ಥರನ್ನು ಶಿಕ್ಷಿಸಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ : ಹೊಸ ಕ್ರಿಮಿನಲ್ ಕಾನೂನಿನಲ್ಲಿ ಪೊಲೀಸ್ ಕಸ್ಟಡಿ ಅವಧಿ ಹೆಚ್ಚಳ: ಕಳವಳ ವ್ಯಕ್ತಪಡಿಸಿದ ಪಿಯುಸಿಎಲ್; ತಿದ್ದುಪಡಿಗೆ ಆಗ್ರಹ


