ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ‘ಪ್ರಧಾನಮಂತ್ರಿ ಪೋಷಣ್ ಯೋಜನೆ’ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.
ಕೇಂದ್ರ ಶಿಕ್ಷಣ ಸಚಿವಾಲಯ ಬುಧವಾರ (ಡಿ. 17) ರಾಜ್ಯಸಭೆಯಲ್ಲಿ ನೀಡಿದ ಮಾಹಿತಿಯ ಪ್ರಕಾರ, 84,453 ಶಾಲೆಗಳ ಈ ಕಡಿತವು, ಕಳೆದ ಐದು ವರ್ಷಗಳಲ್ಲಿ ಶೇಕಡ 7.5ರಷ್ಟು ಕುಸಿತವನ್ನು ಸೂಚಿಸುತ್ತದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಆಮ್ ಆದ್ಮಿ ಪಕ್ಷದ (ಎಎಪಿ) ಸಂಸದ ಸಂಜಯ್ ಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ, 2020-21 ಮತ್ತು 2021-22ರ ನಡುವೆ ಅತಿದೊಡ್ಡ ಇಳಿಕೆ ಕಂಡುಬಂದಿದೆ. ಒಂದೇ ವರ್ಷದಲ್ಲಿ 35,574 ಶಾಲೆಗಳು ಯೋಜನೆಯ ವ್ಯಾಪ್ತಿಯಿಂದ ಹೊರಬಂದಿವೆ ಎಂದು ತಿಳಿಸಿದ್ದಾರೆ.
ರಾಜ್ಯಗಳ ಪೈಕಿ, ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಕುಸಿತ ಕಂಡುಬಂದಿದ್ದು, 2020-21ರಲ್ಲಿ 1.67 ಲಕ್ಷವಿದ್ದ ಫಲಾನುಭವಿ ಶಾಲೆಗಳ ಸಂಖ್ಯೆ 2024-25ರಲ್ಲಿ 1.41 ಲಕ್ಷಕ್ಕೆ ಇಳಿದಿದ್ದು, 25,361 ಶಾಲೆಗಳು ಯೋಜನೆಯಿಂದ ಹೊರಬಿದ್ದಿವೆ ಎಂದು ವರದಿಗಳು ಹೇಳಿವೆ.
ಮಧ್ಯಪ್ರದೇಶ ಮತ್ತು ಅಸ್ಸಾಂನಲ್ಲಿ ಕ್ರಮವಾಗಿ 24,704 ಮತ್ತು 9,321 ಶಾಲೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.
ಈ ಕುಸಿತಕ್ಕೆ ಕಾರಣಗಳನ್ನು ಚೌಧರಿ ಸ್ಪಷ್ಟಪಡಿಸದಿದ್ದರೂ, “ಅರ್ಹ ಮಕ್ಕಳಿಗೆ ಬಿಸಿ ಮತ್ತು ಪೌಷ್ಟಿಕ ಆಹಾರವನ್ನು ಒದಗಿಸುವ ಒಟ್ಟಾರೆ ಜವಾಬ್ದಾರಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಮೇಲಿದೆ” ಎಂದು ಅವರು ಹೇಳಿದ್ದಾರೆ.


