Homeಮುಖಪುಟಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಮತ್ತು RSSನ ಮನಪರಿವರ್ತನೆ! : ಅಂಬೇಡ್ಕರ್‌ ಹೊಗಳಿದ ಬಿ.ಎಲ್‌ ಸಂತೋಷ್‌ಗೆ 9 ಪ್ರಶ್ನೆಗಳು

ಡಾ.ಬಿ.ಆರ್.ಅಂಬೇಡ್ಕರ್, ಸಂವಿಧಾನ ಮತ್ತು RSSನ ಮನಪರಿವರ್ತನೆ! : ಅಂಬೇಡ್ಕರ್‌ ಹೊಗಳಿದ ಬಿ.ಎಲ್‌ ಸಂತೋಷ್‌ಗೆ 9 ಪ್ರಶ್ನೆಗಳು

ಮನುಸ್ಮೃತಿ ಎಂಬ ಬ್ರಾಹ್ಮಣರ ಕೈಪಿಡಿಯನ್ನು ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು. ಹಾಗಾದರೆ ಅಂಬೇಡ್ಕರ್ ಮಾಡಿದ್ದಂತೆ ನೀವು ಮನುಸ್ಮೃತಿಯನ್ನು ಸುಡಲು ಈಗ ತಯಾರಿದ್ದೀರಾ?

- Advertisement -

ದೇಶದ ಸಾವಿರಾರು ವರ್ಷಗಳ ಇತಿಹಾಸದಲ್ಲಿ ಸಮಾಜದ ಜಾತಿ- ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಬುದ್ಧ, ಬಸವ, ಫುಲೆ, ಶಾಹು ಮಹಾರಾಜ್, ಅಂಬೇಡ್ಕರ್, ಪೆರಿಯಾರ್ ಹೀಗೆ ಅದೆಷ್ಟೋ ದಾರ್ಶನಿಕರು ತಮ್ಮ ಬದುಕುಗಳನ್ನೇ ಸಮರ್ಪಿಸಿದ್ದಾರೆ. ಆದರೂ ಈ ದೇಶದ ವೈದಿಕಶಾಹಿಯನ್ನು ಸೋಲಿಸಲು ಸಾಧ್ಯವಾಗದೇ ಅದು ಮತ್ತಷ್ಟು ಬಲಗೊಳ್ಳುತ್ತಲೇ ಹೋಗಿದೆ. ಅದು ತನ್ನ ಕಬಂಧ ಬಾಹುಗಳನ್ನು ಮೈಲುದ್ದಕ್ಕೆ ಬೆಳೆಸಿಕೊಂಡು ಮತ್ತೂ ಚಾಚಿಕೊಳ್ಳುತ್ತಾ ಎಲ್ಲವನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಲೇ ಇದೆ. ಇದಕ್ಕೆ ವೈದಿಕಶಾಹಿ ಎಲ್ಲಾ ಕಾಲದಲ್ಲಿ ದಮನದ ತಂತ್ರವನ್ನು ಮಾತ್ರ ಬಳಸಿದ್ದರೆ ಸಾಧ್ಯವಾಗುತ್ತಿರಲಿಲ್ಲ. ಬದಲಿಗೆ ಅದು ವಂಚನೆ-ನಯವಂಚನೆಯ ತಂತ್ರಗಳನ್ನು ಬಳಸಿರುವುದು ಪ್ರಮುಖ ಕಾರಣ ಎನಿಸುತ್ತದೆ. ಕೌಟಿಲ್ಯ ಹೇಳಿದ್ದ ರಾಜನೀತಿಯ ಚತುರೋಪಾಯಗಳಾದ ಸಾಮ, ದಾನ, ಭೇದ ಮತ್ತು ದಂಡ ಇವುಗಳನ್ನು ಪ್ರತಿ ಹಂತದಲ್ಲಿಯೂ ಅತ್ಯಂತ ಪರಿಣಾಮಕಾರಿಯಾಗಿ ವೈದಿಕಶಾಹಿ ಬಳಸಿಕೊಂಡಿರುವುದರಲ್ಲೇ ಅದರ ಯಶಸ್ಸನ್ನು ಕಾಣಬಹುದು.

ಮೊನ್ನೆ ನವೆಂಬರ್ 24ರಂದು ಬೆಂಗಳೂರಿನ ಆರ್ ವಿ ಕಾಲೇಜಿನಲ್ಲಿ ಬಿಜೆಪಿ ಆಚರಿಸಿದ ಸಂವಿಧಾನ ದಿನಾಚರಣೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ ಎಲ್ ಸಂತೋಷ್ ಆಡಿರುವ ಮಾತುಗಳನ್ನು ಮತ್ತು ಕೆಲ ದಲಿತ ಬಂಧುಗಳು ಆ ಮಾತುಗಳನ್ನು ಸಂಭ್ರಮಿಸಿರುವುದನ್ನು ನೋಡಿದಾಗ ವೈದಿಕಶಾಹಿ ನಡೆಸುವ ಈ ಕುಟಿಲ ಚಾಣಾಕ್ಷತನದ ಬಗ್ಗೆ ಯೋಚಿಸುವಂತಾಯಿತು.

ಬಿ ಎಲ್ ಸಂತೋಷ್ ಆಡಿರುವ ಮಾತುಗಳನ್ನು ಕೇಳಿದರೆ ಸಹಜವಾಗಿ ಈ ದೇಶದ ಸಂವಿಧಾನದ ಬಗ್ಗೆ ಮತ್ತು ಅಂಬೇಡ್ಕರ್ ಬಗ್ಗೆ ಅಭಿಮಾನ ಇರುವ ಯಾರೇ ಆದರೂ ಕ್ಲೀನ್ ಬೋಲ್ಡ್ ಆಗಿಬಿಡುತ್ತಾರೆ. ‘ವಾಹ್ ಎಂತಾ realization! ಅದೂ ಆರೆಸ್ಸೆಸ್ಸಿಗನ ಬಾಯಿಯಲ್ಲಿ ಅಂಬೇಡ್ಕರ್ ಕೊಂಡಾಟದ ಮಾತುಗಳು!’ ಎನಿಸಿಬಿಡುತ್ತವೆ. ಆದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳನ್ನು, ಅವರ ಆಶಯ ಕನಸುಗಳನ್ನು ಅರ್ಥ ಮಾಡಿಕೊಂಡ ಯಾರಿಗೇ ಆದರೂ ಈ ವೈದಿಕಶಾಹಿ ಸಂತೋಷನ ಮಾತುಗಳು ಖುಷಿಗೊಳಿಸುವುದಿಲ್ಲ, ಆಕ್ರೋಶ ತರಿಸುತ್ತವೆ.

ಕಾರಣವೇನೆಂದರೆ, ಯಾವ ವೈದಿಕಶಾಹಿಯನ್ನು ಹಿಮ್ಮೆಟ್ಟಿಸಲು ಬಾಬಾಸಾಹೇಬರು ತಮ್ಮ ಬದುಕಿನುದ್ದಕ್ಕೂ ಶ್ರಮಪಟ್ಟರೋ; ಯಾವ ವೈದಿಕಶಾಹಿಯ ಹುನ್ನಾರಗಳನ್ನು ತಮ್ಮ ಸಾವಿರಾರು ಪುಟಗಳ ಬರೆಹ ಮತ್ತು ಭಾಷಣಗಳಲ್ಲಿ ಎಳೆಎಳೆಯಾಗಿ ಬಿಡಿಸಿಟ್ಟರೋ; ಯಾವ ವೈದಿಕಶಾಹಿಯ ಹತಾರಗಳನ್ನು ಕಾಂಗ್ರೆಸ್ ಮತ್ತು ಮಹಾತ್ಮ ಗಾಂಧಿಯಲ್ಲೂ ಕಂಡು ಅಂಬೇಡ್ಕರ್ ಕೆಂಡಾಮಂಡಲವಾಗಿದ್ದರೋ; ಯಾವ ವೈದಿಕಶಾಹಿಯ ಹಿಡಿತದಿಂದ ತನ್ನ ಸಮುದಾಯವನ್ನು ಮಾತ್ರವಲ್ಲ ಇಡೀ ಭಾರತವನ್ನು ಬಿಡುಗಡೆಗೊಳಿಸಲು ಇಚ್ಚಿಸಿದ್ದರೋ: ಯಾವ ವೈದಿಕಶಾಹಿಯ ಹಿಡಿತದಿಂದ ಜನರನ್ನು ತಪ್ಪಿಸಲು ವೈದಿಕ ಹಿಂದೂ ಧರ್ಮವನ್ನು ತ್ಯಜಿಸಿ ಸಮತೆಯ ಬೌದ್ಧ ಧರ್ಮಕ್ಕೆ ಮತಾಂತರಗೊಂಡರೋ; ಯಾವ ವೈದಿಕಶಾಹಿಯನ್ನು ಎದುರಿಸಲು ತನ್ನ ಅನುಯಾಯಿಗಳಿಗೆ “ಹಿಂದೂ ದೇವರುಗಳಾದ ರಾಮ, ವಿಷ್ಣು, ಮೊದಲಾದ ದೇವರುಗಳನ್ನು ನಾನು ಪೂಜಿಸುವುದಿಲ್ಲ” ಎಂಬ ಪ್ರತಿಜ್ಞೆಯನ್ನು ಬೋಧಿಸಿದ್ದರೋ; ಯಾವ ವೈದಿಕಶಾಹಿಯ ಸಂಪೂರ್ಣ ನಾಶವನ್ನು ಅಂಬೇಡ್ಕರ್ ಬಯಸಿದ್ದರೋ ಅದೇ ವೈದಿಕಶಾಹಿಯು ಅಂಬೇಡ್ಕರ್ ಅವರನ್ನು ದಿಢೀರನೆ ಇನ್ನಿಲ್ಲದಂತೆ ಹಾಡಿ ಹೊಗಳಲು, ಕೊಂಡಾಡಲು ಶುರುಮಾಡಿದೆ!

ತನ್ನ ನರನಾಡಿಗಳಲ್ಲಿ ವೈದಿಕಶಾಹಿ ಚಿಂತನೆ ಮತ್ತು ಹುನ್ನಾರಗಳನ್ನೇ ಹೊಂದಿರುವ ಬಿ ಎಲ್ ಸಂತೋಷ್ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಮತ್ತು ಅವರು ರಚಿಸಿದ ಸಂವಿಧಾನವನ್ನು ಕೊಂಡಾಡಿದ್ದನ್ನು ಕಂಡು “ಓ ವೈದಿಕಶಾಹಿಯ ಮನಪರಿವರ್ತನೆ ಆಗುತ್ತಿದೆ” ಎಂದುಕೊಳ್ಳೋಣವೇ? “ಅಂಬೇಡ್ಕರ್ ಕುರಿತು ಆರೆಸ್ಸೆಸ್ ತನ್ನ ಅಭಿಪ್ರಾಯ ಬದಲಿಸಿಕೊಳ್ಳುತ್ತಿದೆ” ಎಂದು ಭ್ರಮಿಸಿ ಸಂಭ್ರಮ ಪಡೋಣವೇ?

ಹಲವರುಷಗಳ ಹಿಂದೆ ಇದೇ ಆರೆಸ್ಸೆಸ್ ಪಾಳಯದಲ್ಲಿ ಬೆಳೆದ ಅರುಣ್ ಶೌರಿ ಎಂಬಾತ ತನ್ನ Worshipping false gods” ಕೃತಿಯಲ್ಲಿ ಅಂಬೇಡ್ಕರ್ ಒಬ್ಬ ಪೊಳ್ಳು ದೇವರು ಎಂದು ಜರಿದು ಅಪಮಾನಿಸಿದ್ದ. ಒಂದೆರಡು ವರ್ಷಗಳ ಹಿಂದೆ ಜರ್ಮನಿಯ ಯೂನಿವರ್ಸಿಟಿಯೊಂದರಲ್ಲಿರುವ ಬಾಲಗಂಗಾಧರ ಎಂಬ ಅವಿವೇಕಿಯಂತೂ “ಅಂಬೇಡ್ಕರ್ ಒಬ್ಬ ಈಡಿಯಟ್” ಎಂದು ಹೇಳಿ ಬೆತ್ತಲಾಗಿದ್ದ. ಎರಡೇ ವರ್ಷದ ಹಿಂದೆ ಉತ್ತರ ಕನ್ನಡವನ್ನು ಪ್ರತಿನಿಧಿಸುವ ಆರೆಸ್ಸೆಸ್ ಚಿಂತನೆಯ ಬಚ್ಚಲುಬಾಯಿಯ ಮುಠ್ಠಾಳ ಸಂಸದನೊಬ್ಬ ‘ಸಂವಿಧಾನವನ್ನು ಬದಲಿಸಲೆಂದೇ ನಾವು ಬಂದಿರುವುದು’ ಎಂದು ಹೇಳಿ ಕೊನೆಗೆ ಸಂಸತ್ತಿನಲ್ಲೇ ಕ್ಷಮಾಪಣೆ ಕೇಳಿದ್ದ. ಇವರೆಲ್ಲರೂ ಈ ಕ್ಷಣದಲ್ಲೂ ಒಂದಲ್ಲ ಒಂದು ರೀತಿಯಲ್ಲಿ ಆರೆಸ್ಸೆಸ್ಸಿನ ನಿಕಟವರ್ತಿಗಳೇ.

ಈಗ ಅದೇ ಆರೆಸ್ಸೆಸ್ಸಿನ ಬಿ.ಎಲ್ ಸಂತೋಷ್‌ ಸಂಪೂರ್ಣ summersault ಹೊಡೆದು “ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಂಡರೇನೇ ಸಂವಿಧಾನ ಅರ್ಥಮಾಡಿಕೊಳ್ಳಲು ಸಾಧ್ಯ ಎನ್ನುತ್ತಾರೆ! ಮಾತ್ರವಲ್ಲ “ಸಂವಿಧಾನ ಕೊಟ್ಟಿರುವ ಮೀಸಲಾತಿ ಇದೆಯಲ್ಲಾ ಅದು ನಾವು ಕೊಟ್ಟಿರುವ ಕೊಡುಗೆಯಲ್ಲ ಬದಲಿಗೆ ದಲಿತರನ್ನು ವಂಚಿಸಿದ ದೊಡ್ಡ ವರ್ಗವೊಂದು ಮಾಡಿಕೊಳ್ಳುತ್ತಿರುವ ಪ್ರಾಯಶ್ಚಿತ್ತ ಎನ್ನುತ್ತಾನೆ! ಎಂತಹಾ ದಾರ್ಶನಿಕ ಮಾತು ನೋಡಿ!! ಇದರಲ್ಲಿನ ತರ್ಕವೇನೋ ಸರಿಯಾಗಿದೆ. ಆದರೆ ಹೀಗೆ ಹೇಳುವಾಗ ಆತ “ಮೀಸಲಾತಿ ಪಡೆಯುತ್ತಿರುವವರನ್ನು ಈ ದೇಶದಲ್ಲಿ ವಂಚಿಸಿರುವುದು ಬಹುದೊಡ್ಡ ವರ್ಗ” ಎಂಬ ಹಸಿಹಸಿ ಸುಳ್ಳು ಹೇಳುತ್ತಿದ್ದಾನೆ.

ಬಿ.ಎಲ್‌ ಸಂತೋಷ್‌

ವಾಸ್ತವದಲ್ಲಿ ಇಡೀ ದೇಶದ ಬಹುದೊಡ್ಡ ವರ್ಗವನ್ನು, ಬಹುಸಂಖ್ಯಾತರನ್ನು ಕಳೆದ ಎರಡು ಸಾವಿರ ವರ್ಷಗಳಿಂದ ವಂಚಿಸಿರುವುದು, ಅವರ ಅವಕಾಶಗಳನ್ನು ಚಾರಿತ್ರಿಕವಾಗಿ ಕಿತ್ತುಕೊಂಡದ್ದು ಈ ದೇಶದ ಜನಸಂಖ್ಯೆಯ ಕೇವಲ 3-4 % ಇರುವ ಜನವರ್ಗ ಎಂಬ ಕಟು ಸತ್ಯವನ್ನು ಬೇಕೆಂದೇ ಮರೆಮಾಚುತ್ತಾರೆ ಈ ಆರೆಸ್ಸೆಸ್ಸಿಗ.

1911ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿಲ್ಲರ್ ಆಯೋಗದ ಅನುಸಾರವಾಗಿ ದಲಿತ-ಹಿಂದುಳಿತ ವರ್ಗಗಳ ಬಹುಸಂಖ್ಯಾತರಿಗೆ ಮೀಸಲಾತಿ ನೀಡಿದಾಗ ಅಂಡುಸುಟ್ಟ ಬೆಕ್ಕಿನಂತೆ, ಪ್ರಳಯವೇ ನಡೆದುಹೋದಂತೆ ಆಡಿದ ಜನವರ್ಗ ಯಾವುದಾಗಿತ್ತು? ಅದು ಬಹದೊಡ್ಡ ವರ್ಗವೋ ಕೇವಲ ಬ್ರಾಹ್ಮಣ ಜಾತಿಗೆ ಸೇರಿದ ವರ್ಗವೋ? ಇದೇ ಕಾರಣಕ್ಕೆ ರಾಜೀನಾಮೆ ನೀಡಿದ್ದ ಇಂಜಿನಿಯರ್ ಸರ್ ಎಂ ವಿಶ್ವೇಶ್ವರಯ್ಯ ಅವರ ತಲೆಯಲ್ಲಿದ್ದ ಜಾತಿಭೂತ ಯಾವುದಾಗಿತ್ತು? ಅತ್ಯಾಶ್ಚರ್ಯ ಎಂಬಂತೆ ಈಗ ಈ ಬ್ರಾಹ್ಮಣವಾದಿ ಆರೆಸ್ಸೆಸ್ಸಿಗ ಮೀಸಲಾತಿಯ ಸಮರ್ಥನೆಗೆ ನಿಂತಿದ್ದಾನೆ ಎಂದರೆ ಅದು ಮನಪರಿವರ್ತನೆ ಎಂದು ಸ್ವೀಕರಿಸೋಣವೇ?

ಈಗ ನೋಡಿ, ಮೀಸಲಾತಿ ವಿರುದ್ಧವಾಗಿ ಇಡೀ ದೇಶವನ್ನು ಎತ್ತಿ ಕಟ್ಟುತ್ತಿದ್ದವರು ಇದೇ ಬ್ರಾಹ್ಮಣವಾದಿ ಸಂಘಿಗಳು. ಈಗ ಶೇಕಡಾ ಮೂರ್ನಾಲ್ಕು ಶೇಕಡಾ ಇರುವ ಮೇಲ್ಜಾತಿ ಜನರಿಗೆ ಕಳೆದ ವರ್ಷದಿಂದ 10% ಮೀಸಲಾತಿ ಸಿಗುವಂತೆ ಮಾಡಿಕೊಂಡಿದ್ದಾರೆ. ಇಷ್ಟೂ ವರ್ಷಗಳ ಕಾಲ ಮೀಸಲಾತಿ ಎಂದರೇ ಉರಿದು ಬೀಳುತ್ತಿದ್ದವರು ಈಗ ತಮ್ಮ ಜನಸಂಖ್ಯೆಗಿಂತಲೂ ಎರಡು ಮೂರು ಪಟ್ಟು ಮೀಸಲಾತಿ ಪಡೆದುಕೊಳ್ಳುತ್ತಿದ್ದಂತೆ ಮೀಸಲಾತಿಯನ್ನು ಕೊಂಡಾಡತೊಡಗಿದ್ದಾರೆ! ತಿಳಿಯಿತಲ್ಲ ಇವರ ಮನಪರಿವರ್ತನೆಯ ಹಿಂದಿನ ಹಕೀಕತ್ತು? ದೇಶದಲ್ಲಿ ನಡೆಯುವ ಮನಪರಿವರ್ತನೆಗಳ ಹಿಂದೆ ಅಡಗಿರುವ ಅಸಲೀ ಸ್ವಾರ್ಥವೇನು ಎಂದು ಅರಿಯದೇ ಹೋದರೆ ವೈದಿಕಶಾಹಿ ತೋಡುವ ಖೆಡ್ಡಾದಲ್ಲಿ ಬಿದ್ದು ಹೊರಳಾಡಬೇಕಾಗುತ್ತದೆ ಅಷ್ಟೇ.

ಈಗ ಮೀಸಲಾತಿಯನ್ನೂ, ಅಂಬೇಡ್ಕರ್ ಅವರನ್ನೂ ಹಾಡಿ ಹೊಗಳುತ್ತಿರುವ ಬಿ ಎಲ್ ಸಂತೋಷ್ ಮತ್ತು ಅವನ ಚೇಲಾ ಬಾಲಾಗಳಿಗೆ ನಾವು ಕೆಲವೊಂದಿಷ್ಟು ಪ್ರಶ್ನೆಗಳನ್ನು ಕೇಳೋಣ. ಉತ್ತರಿಸುವ ಪ್ರಾಮಾಣಿಕತೆ ತೋರುತ್ತಾರೋ ನೋಡೋಣ.
1. ನವೆಂಬರ್ 24ರಂದು ನೀವು ಹಮ್ಮಿಕೊಂಡ ಸಂವಿಧಾನ ದಿನಾಚರಣೆಯ ವಾರದ ಮೊದಲು ನೀವು ಪ್ರಚುರಪಡಿಸಿದ ಭಿತ್ತಿಪತ್ರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿತ್ರ ಇರಲಿಲ್ಲ. ಬದಲಾಗಿ ಸಂವಿಧಾನಕ್ಕೆ ಸಂಬಂಧವೇ ಇಲ್ಲದ ಶ್ಯಾಮ್ ಪ್ರಸಾದ್ ಮುಖರ್ಜಿಯ ಫೋಟೋ ಇತ್ತು. ಅಂಬೇಡ್ಕರ್ ವಾದಿಗಳು ನೀವು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನದ ಬಗ್ಗೆ ಆಕ್ಷೇಪ ಎತ್ತಿದ ಕೂಡಲೇ ಬದಲಿಸಿದಿರಿ. ಈ ಮೊದಲು ಬಾಬಾಸಾಹೇಬರಿಗೆ ನೀವು ಮಾಡಿದ ಅಪಮಾನಕ್ಕೆ ನಿಜವಾದ ಕಾರಣ ಏನು?

2. ಈಗ ಸಂವಿಧಾನವನ್ನು ಹೊಗಳಿದ್ದೀರಿ. ಆದರೆ ಈ ಸಂವಿಧಾನ ಜಾರಿಯಾದಾಗ “ಮನುಸ್ಮೃತಿಯೇ ನಮ್ಮ ಸಂವಿಧಾನವಾಗಬೇಕು ಎಂದು ಆರೆಸ್ಸೆಸ್ ಹೇಳಿತ್ತು. ಆದರೆ ಆ ಮನುಸ್ಮೃತಿ ಎಂಬ ಬ್ರಾಹ್ಮಣರ ಕೈಪಿಡಿಯನ್ನು ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಹಾಕಿದ್ದರು. ಹಾಗಾದರೆ ಅಂಬೇಡ್ಕರ್ ಮಾಡಿದ್ದಂತೆ ನೀವು ಮನುಸ್ಮೃತಿಯನ್ನು ಸುಡಲು ಈಗ ತಯಾರಿದ್ದೀರಾ?

3. 1991ರಲ್ಲಿ ಮಂಡಲ್ ಆಯೋಗದ ವರದಿಯನ್ನು ವಿ.ಪಿ ಸಿಂಗ್ ಜಾರಿಗೊಳಿಸಲು ಯತ್ನಿಸಿ ಹಿಂದುಳಿದ ವರ್ಗಗಳಿಗೆ (OBC) ಮೀಸಲಾತಿ ನೀಡಿದ ನಂತರ ವಿ ಪಿ ಸಿಂಗ್ ಗೆ ನೀಡಿದ್ದ ಬೆಂಬಲವನ್ನು ಬಿಜೆಪಿ ಹಿಂತೆಗೆದುಕೊಂಡಿತ್ತು. ನಂತರ ಇಡೀ ದೇಶದಾದ್ಯಂತ ಎಬಿವಿಪಿ ಮೂಲಕ ಮಂಡಲ್-ಕಮಂಡಲ್ ಎಂದು ಘೋಷಿಸಿ ವ್ಯಾಪಕ ಹಿಂಸೆಯನ್ನು ಬಿಜೆಪಿ ನಡೆಸಿತ್ತು. ಮೀಸಲಾತಿ ಎಂದರೆ ಮೇಲ್ಜಾತಿಗಳ ಪ್ರಾಯಶ್ಚಿತ್ತ ಎನ್ನುತ್ತಿರುವ ನೀವು ಈ ಹಿಂದೆ ನಡೆಸಿರುವ ಮೀಸಲಾತಿ ವಿರೋಧಿ ಹಿಂಸೆಗೂ ಪ್ರಾಯಶ್ಚಿತ್ತ ಪಟ್ಟುಕೊಳ್ಳುವಿರಾ?

4. ಮೋಹನ್ ಭಾಗವತ್ ಮೊನ್ನೆ ಮೊನ್ನೆಯಷ್ಟೇ ಮೀಸಲಾತಿ ಬಗ್ಗೆ ಚರ್ಚೆಯಾಗಬೇಕು ಎಂದ. ಎಲ್ಲಿಯವರೆಗೆ ಈ ದೇಶದಲ್ಲಿ ಅಸಮಾನತೆ, ವಂಚನೆ ಇರುತ್ತದೆಯೋ ಅಲ್ಲಿಯವರೆಗೂ ಮೀಸಲಾತಿಯ ಬೇಕೇ ಬೇಡವೇ ಎಂಬ ಚರ್ಚೆ ಅನಗತ್ಯ. ಆದರೆ ಚರ್ಚೆ ಬೇಕು ಎನ್ನುವು ಆರೆಸ್ಸೆಸ್ ಮುಖಂಡರಿಗೆ ಯಾವ ಪ್ರಾಯಶ್ಚಿತ್ತ ಮಾಡುತ್ತೀರಿ?

5. ಮೀಸಲಾತಿ ಎಂಬುದು ಅಂಬೇಡ್ಕರ್ ತಮಗಾದ ಅಪಮಾನದ ಕಾರಣಕ್ಕೆ ಸಂವಿಧಾನದಲ್ಲಿ ಸೇರಿಸಿದ್ದು ಎಂದಿದ್ದೀರಿ. ಆದರೆ ಇದು ಅರ್ಧ ಸತ್ಯ. ಈ ದೇಶದ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ದೇಶದ ನಾನಾ ಜಾತಿ- ವರ್ಗಗಳ ವಿಕಾಸವನ್ನು, ಅವು ತುಳಿತಕ್ಕೊಳಗಾದ ಬಗೆಯನ್ನು ದಾಖಲಿಸಿದ ಬೆರಳೆಣಿಕೆಯಷ್ಟು ವಿದ್ವಾಂಸರಲ್ಲಿ ಅಂಬೇಡ್ಕರ್ ಪ್ರಮುಖರು. ಸಂವಿಧಾನದಲ್ಲಿ ಮೀಸಲಾತಿ ಸೇರಿಸಲು ಸಮಾಜದ ಬಗ್ಗೆ ಅಂಬೇಡ್ಕರ್ ಅವರಿಗೆ ಇದ್ದ ಸಮಾಜದ ಮತ್ತು ಚರಿತ್ರೆಯ ಅವಗಾಹನೆ ಹಾಗೂ ಈ ದೇಶವನ್ನು ಸಮಾಜವಾದಿ ಹಾದಿಯಲ್ಲಿ ಕಟ್ಟಬೇಕು ಹಾಗೂ ಈ ಮೂಲಕ ಎಲ್ಲಾ ವಂಚಿತ ಸಮುದಾಯಗಳು ನ್ಯಾಯ ಪಡೆಯಬೇಕು ಎಂಬ ಅದಮ್ಯ ಆಸೆಯೇ ಪ್ರಮುಖ ಕಾರಣ. ಇದನ್ನು ಬೇಕೆಂದೇ ಮರೆಮಾಚುವ ಪ್ರಯತ್ನ ನೀವು ಮಾಡುತ್ತಿದ್ದೀರಲ್ಲವೇ?

6. ಮೇಲ್ಜಾತಿಗಳಿಗೆ 10% ಮೀಸಲಾತಿ ಸಿಕ್ಕಿದ ಮೇಲೆ ಮೀಸಲಾತಿಯ ಬಗ್ಗೆ ವರಸೆಯನ್ನೇ ಬದಲಿಸಿಕೊಳ್ಳುತ್ತಿರುವ ನೀವು ದೇಶದ ಪ್ರಮುಖ ಉದ್ಯೋಗ ಕ್ಷೇತ್ರವಾದ ಖಾಸಗಿ ಕ್ಷೇತ್ರಕ್ಕೆ ಮೀಸಲಾತಿ ವಿಸ್ತರಣೆ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ಹೇಳುತ್ತೀರಾ?. ಖಾಸಗಿ ಕ್ಷೇತ್ರ ಹೇಗೂ ಪ್ರಮುಖವಾಗಿ ಮೇಲ್ಜಾತಿ “ಪ್ರತಿಭೆಗಳ” ಹಿಡಿತದಲ್ಲೇ ಇರೋದರಿಂದ ಅಲ್ಲಿ ಮೀಸಲಾತಿ ಬೇಡ ಎಂಬುದು ನಿಮ್ಮ ಅಭಿಪ್ರಾಯವಾಗಿದ್ದರೆ ಸ್ಪಷ್ಟಪಡಿಸಿ. ಈ ಬಗ್ಗೆ ನಿಮ್ಮ ಕಾರ್ಪೊರೇಟ್ ಸಖ ಮೋಹನ್ ದಾಸ್ ಪೈ ಅಭಿಪ್ರಾಯವನ್ನೂ ಕೇಳಿ ಹೇಳಿ. ಮೀಸಲಾತಿ ಎನ್ನುವುದು ಮೇಲ್ಜಾತಿಗಳ ಜನ ಪ್ರಾಯಶ‍್ಚಿತ್ತ ಎನ್ನುವುದು ನಿಮ್ಮ ಪ್ರಾಮಾಣಿಕ ಅಭಿಪ್ರಾಯವಾಗಿದ್ದರೆ ಖಾಸಗಿ ಕ್ಷೇತ್ರದಲ್ಲಿಯೂ ಮೇಲ್ಜಾತಿ ಜನರಿಗೆ ಈ ಪ್ರಾಯಶ್ಚಿತ್ತ ಬೇಕು ಎಂದು ಒಪ್ಪಬೇಕಲ್ಲವೇ? ಹೌದು ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಖಾಸಗಿ ರಂಗದಲ್ಲಿ ಮೀಸಲಾತಿ ಜಾರಿಗೆ ತಿರುವ ಒತ್ತಾಯವನ್ನು ಯಾವಾಗ ಹಾಕುತ್ತೀರಿ ತಿಳಿಸಿ.

6. ಅಂಬೇಡ್ಕರ್ ಅವರನ್ನು ನೀವು ಅರ್ಥ ಮಾಡಿಕೊಳ್ಳಲು ಶುರು ಮಾಡಿದ್ದು ತೀರಾ ಇತ್ತೀಚೆಗೆ ಎಂದು ಹೇಳಿದ್ದೀರಿ. ಸಂತೋಷ. ಅಂಬೇಡ್ಕರ್ ಅವರು ಹಿಂದೂ ಧರ್ಮದ ಕುರಿತು ಖಚಿತ ನಿರ್ಧಾರಗಳಿಗೆ ಬಂದಿದ್ದರು. ಉದಾಹರಣೆಗೆ ಹಿಂದೂ ಧರ್ಮದಲ್ಲಿ ಪ್ರಜಾಪ್ರಭುತ್ವಕ್ಕೆ ಅವಕಾಶವಿಲ್ಲ. “ಹಿಂದೂ ಧರ್ಮ ಜಾತಿಗಳಿಂದ ನಿರ್ಮಿಲ್ಪಟ್ಟ ಮೆಟ್ಟಿಲುಗಳಿಲ್ಲದ ಉಪ್ಪರಿಗೆ ಮನೆ” ಎಂದು ಮಾರ್ಮಿಕವಾಗಿ ಹೇಳಿದ್ದರು. ಇಲ್ಲಿ ಜಾತಿಜಾತಿಗಳ ನಡುವೆ ಸಹೋದರತೆಗೆ ಅವಕಾಶವಿಲ್ಲ, ಸ್ವಾತಂತ್ರ್ಯ, ಸಮಾನತೆಗಳೂ ಇಲ್ಲ. ಹೀಗಾಗಿ ಹಿಂದೂ ಧರ್ಮದ ಈ ಚೌಕಟ್ಟಿನಿಂದ ಹೊರಬರದೇ ತಳಸಮುದಾಯಗಳಿಗೆ ಬಿಡುಗಡೆ ಇಲ್ಲ ಎಂದು ಖಚಿತವಾಗಿ ಹೇಳಿದ್ದರು. ಅಂಬೇಡ್ಕರ್ ತಮ್ಮ “ಫಿಲಾಸಫಿ ಆಫ್ ಹಿಂದೂಯಿಸಂ” ನಲ್ಲಿ ಹಿಂದೂ ಧರ್ಮ ಯಾವುದರ ತಳಹದಿಯ ಮೇಲೆ ನಿಂತಿದೆ ಎಂದು ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ಹಿಂದೂ ಧರ್ಮದ ಕುರಿತ ಅಂಬೇಡ್ಕರ್ ಅವರ ಈ ಖಚಿತ ಮತ್ತು ದಿಟ್ಟ ಅಭಿಪ್ರಾಯಗಳ ಕುರಿತು ನಿಮ್ಮ ಖಚಿತ ಅಭಿಪ್ರಾಯವೇನು?

7. ಹಿಂದೂ ರಾಷ್ಟ್ರದ ಸ್ಥಾಪನೆ ಈ ದೇಶದ ದಲಿತರಿಗೆ-ಶೂದ್ರರಿಗೆ, ಬಹುಜನರ ಪಾಲಿಗೆ ಕಟ್ಟುವ ಸಮಾಧಿ ಎಂಬುದು ಅಂಬೇಡ್ಕರ್ ಅವರ ಅಭಿಪ್ರಾಯವಾಗಿತ್ತು. ನೀವಿದನ್ನು ಒಪ್ಪುತ್ತೀರಾ?

8. ಕಾಶ್ಮೀರದ ಕುರಿತಂತೆ ಅಂಬೇಡ್ಕರ್ 1951ರಲ್ಲಿ ಸ್ಪಷ್ಟವಾಗಿ ತಿಳಿಸುತ್ತಾ, ಕಾಶ್ಮೀರಿಗಳ ಜನಾಭಿಪ್ರಾಯ ಸಂಗ್ರಹಿಸುವುದೇ ಏಕೈಕ ಪರಿಹಾರ ಮಾರ್ಗ ಎಂದು ಹೇಳಿದ್ದರು. ಅಂಬೇಡ್ಕರ್ ಅವರು ಎಲ್ಲಿಯೂ ಆರ್ಟಿಕಲ್ 370 ರದ್ದಾಗಬೇಕು ಎಂದು ಹೇಳಿದ ದಾಖಲೆ ಇಲ್ಲ. ಕಾಶ್ಮೀರದ ಸಮಸ್ಯೆಗೆ ಅಂಬೇಡ್ಕರ್ ತಿಳಿಸಿದ್ದ ಪರಿಹಾರ ಮಾರ್ಗವನ್ನು ನೀವು ಒಪ್ಪಿಕೊಳ್ಳುತ್ತೀರಾ? ಸಾಧ್ಯವಿಲ್ಲ ಅಲ್ಲವೇ?

9. ನಿಮ್ಮ ಆರೆಸ್ಸೆಸ್- ಬಿಜೆಪಿ ಕಾರ್ಯಕರ್ತರಿಗೆ ಅಂಬೇಡ್ಕರ್ ಅವರ “ಫಿಲಾಸಫಿ ಆಫ್ ಹಿಂದೂಯಿಸಂ” “ಅನ್ಹಿಲೇಶನ್ ಆಫ್ ಕ್ಯಾಸ್ಟ್” “ಬುದ್ಧ ಅಂಡ್ ಹಿಸ್ ದಮ್ಮ” ಇವುಗಳನ್ನು ಓದಿಸುವ ಧೈರ್ಯ ನಿಮಗಿದೆಯೇ? ಅಥವಾ ಕಾಂಗ್ರೆಸ್ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಅಸಮಾಧನವನ್ನು ಮಾತ್ರ ಸೆಲೆಕ್ಟಿವ್ ಆಗಿ ಉಣಬಡಿಸುತ್ತಾ ನಿಮ್ಮ ಅಜೆಂಡಾವನ್ನಷ್ಟೇ ಈಡೇರಿಸಿಕೊಳ್ಳುತ್ತೀರೋ?

ಈ ಪ್ರಶ್ನೆಗಳಿಗೆ ಬಿ.ಎಲ್ ಸಂತೋಷ್ ಆಗಲೀ, ಕಾರ್ಪೊರೇಟ್ ವಕ್ತಾರ ಮೋಹನ್ ದಾಸ್ ಪೈ ಆಗಲೀ ಇನ್ನಾರೇ ಆರೆಸ್ಸೆಸ್ ಪಂಡಿತರಾಗಲೀ ಪ್ರಾಮಾಣಿಕವಾಗಿ ಉತ್ತರಿಸುತ್ತಾರೆ ಎಂಬ ಭ್ರಮೆ ಇಲ್ಲ. ಆದರೆ ಇವರ ಬಂಡವಾಳ ಬಯಲು ಮಾಡಲು ಈ ಪ್ರಶ್ನೆಗಳ ಜೊತೆಗೆ ಇನ್ನಷ್ಟು ಇಂತದೇ ಪ್ರಶ್ನೆಗಳು ಇವರ ಮುಖಕ್ಕೆ ಹಿಡಿಯಬೇಕು.
ಒಂದು ಕಡೆಯಲ್ಲಿ ಬಾಬಾಸಾಹೇಬರಂತೆಯೇ ಅಸ್ಪೃಶ್ಯತೆ, ಜಾತಿ ಅಪಮಾನ ನೊಂದು, ಬೆಂದು ಛಲದಿಂದ ಸಂಶೋಧನೆ ನಡೆಸುತ್ತಿದ್ದ, ಬದುಕಿದ್ದರೆ ಮುಂದೊಮ್ಮೆ ಪ್ರಕಾಶಮಾನವಾಗಿ ಬೆಳಗಲಿದ್ದ ರೋಹಿತ್ ವೇಮುಲನಂತಹವರನ್ನು ಆತ್ಮಹ್ಯತ್ಯೆಗೆ ತಳ್ಳುವುದು, ನಂತರ ಅವನು ಭಯೋತ್ಪಾದಕ ಎಂಬಂತೆ ಬಿಂಬಿಸಿದ್ದನ್ನು ದೇಶವೇ ಕಂಡಿದೆ.

ಹಾಗೆಯೇ ಡಾ. ಆನಂದ್ ತೇಲ್ತುಂಬ್ಡೆ, ಡಾ. ಸತ್ಯನಾರಾಯಣ ಅವರಂತಹ ಅಪ್ರತಿಮ ಅಂಬೇಡ್ಕರ್ ವಾದಿ ವಿದ್ವಾಂಸರನ್ನು ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಸುಳ್ಳು ಕೇಸುಗಳಲ್ಲಿ ಫಿಟ್ ಮಾಡುವುದು, ಅವರನ್ನು ಅರ್ಬನ್ ನಕ್ಸಲ್ ಎಂದು ಹಣೆಪಟ್ಟಿ ಹಚ್ಚುವುದು, ಈ ಮೂಲಕ ಇಂತಹ ಅಂಬೇಡ್ಕರ್ ವಾದಿ ಮೇಧಾವಿಗಳು ದೇಶದ ತಳಸಮುದಾಯಗಳಲ್ಲಿ ಅಂಬೇಡ್ಕರ್ ಚಿಂತನೆಗಳನ್ನು ಬಿತ್ತುತ್ತಿರುವುದನ್ನು ತಡೆಯುವ, ಅವರ ಧ್ವನಿಗಳನ್ನು ಹತ್ತಿಕ್ಕುವ ದಂಡೋಪಾಯವನ್ನು ಬಳಸುತ್ತಿರುವುದನ್ನು ಎಲ್ಲರೂ ನೋಡುತ್ತಿದ್ದೇವೆ. ಮತ್ತೊಂದು ಕಡೆಯಲ್ಲಿ ಉಪಾಯದಿಂದ, ನಯವಂಚಕತನದಿಂದ, ದುಡ್ಡು ಮತ್ತು ಹುದ್ದೆಗಳ ಆಮಿಷದ ಮೂಲಕ ದಲಿತ ಮುಖಂಡರನ್ನು ಆಪೋಶನ ತೆಗೆದುಕೊಳ್ಳುವ “ಸಾಮ-ದಾನ”ದ ಮೂಲಕ ಇಲ್ಲವೇ ತಳಸಮುದಾಯಗಳನ್ನು ಒಬ್ಬರ ಮೇಲೆ ಮತ್ತೊಬ್ಬರನ್ನು ಎತ್ತಿಕಟ್ಟಿ ನಡೆಡಸುವ “ಭೇದ” ನೀತಿಯನ್ನು ಪ್ರಯೋಗಿಸುವ ಮೂಲಕ ವೈದಿಕ ಹಿತಾಸಕ್ತಿ ಕಾಪಾಡುವುದು…

ಇದೇ ಈ ದೇಶ ಸಾವಿರಾರು ವರ್ಷಗಳಿಂದ ಮತ್ತೆ ಮತ್ತೆ ಮೋಸಹೋಗಲು ಕಾರಣವಾಗಿರುವುದು.
ಹೀಗಾಗಿಯೇ ಈ ಕುಟಿಲ ವೈದಿಕಶಾಹಿಯು ಅಂಬೇಡ್ಕರ್ ಅವರನ್ನೇ ಆಪೋಶನ ತೆಗೆದುಕೊಳ್ಳುತ್ತಿರುವಾಗ ಅಂಬೇಡ್ಕರ್ ಅವರ ಮೇಲಿನ ಅಭಿಮಾನ ಪ್ರೀತಿ ಮಾತ್ರ ಸಾಲುವುದಿಲ್ಲ. ವಂಚಕ ಜಾಲಗಳು ಹೊಂಚು ಹಾಕುತ್ತಿರುವಾಗ ಅಂಬೇಡ್ಕರ್ ರಥವನ್ನು ಮುಂದಕ್ಕೆ ಒಯ್ಯುವುದು ಮತ್ತೂ ಕಠಿಣವಾಗಿದೆ ಎಂಬ ಅರಿವಿನಲ್ಲಿ ಅಂಬೇಡ್ಕರ್ ಅವರು ಕನಸಿದ್ದ ಭಾರತವನ್ನು ನಾವೂ ಕನಸಬೇಕಿದೆ, ಅಂಬೇಡ್ಕರ್ ಆಶಿಸಿದ್ದ ಸಮತೆ-ಕರುಣೆ-ಪ್ರಜ್ಞೆಗಳು ನಮ್ಮೊಳಗೆ ಇಳಿಯಬೇಕಿದೆ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

  1. ಮೊದಲನೆಯದಾಗಿ ಗೌರಿ ಪತ್ರಿಕೆ ಬಳಗದವರಿಗೆ ನನ್ನ ಅಭಿನಂದನೆಗಳು, ನಮ್ಮ ದೇಶದ ರಾಜಕೀಯ,ಹಾರ್ದಿಕ ,ಮತ್ತು ನ್ಯಾಯ 3 ವಿಷಯಗಳ ಮೇಲೆ ಸಮಗ್ರವಾದ ಮಾಹಿತಿಯನ್ನು ನೀಡುತ್ತಿದ್ದೀರಿ, ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ನಡೆಯುತ್ತಿರುವ ಚಟುವಟಿಕೆಗಳ ಕುರಿತಂತೆ ನನ್ನ ಅಭಿಪ್ರಾಯ, ರಾಜಕೀಯವಾಗಿ ಮೇಲ್ವರ್ಗದವರು ಪುನಹ ದಲಿತರನ್ನು ಶೋಷಿತರನ್ನು ,ಅಲ್ಪಸಂಖ್ಯಾತರನ್ನು, ನೀವು ಕೆಳಗೆ ಇರಬೇಕು ಎನ್ನುವ ಸಂದೇಶ ಸಾರುವಂತಹ ಕೆಲಸಗಳು ನಡೆಯುತ್ತಿವೆ. ಸಂವಿಧಾನ ಆಚರಣೆಯ ಮೊದಲು ಬಿತ್ತಿ ಪತ್ರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರ ವಿಲ್ಲದೆ ಸ್ಯಾಮ್ ಮುಖರ್ಜಿ ಪ್ರಸಾದ್ರವರರವರ ಭಾವಚಿತ್ರವನ್ನು ಹಾಕಿದ್ದೀರಿ,ನೀವು ಏನನ್ನು ಹೇಳಲು ಹೊರಟಿದ್ದೀರಿ ಎಂಬುದು ನಮಗೆ ಸ್ಪಷ್ಟವಾಗಿ ತಿಳಿಯುತ್ತದೆ,ಕರ್ನಾಟಕ ಶಿಕ್ಷಣ ಇಲಾಖೆಯು ಪಠ್ಯಪುಸ್ತಕದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು , ಮರೆಮಾಚು ಅಂತಹ ಕೆಲಸ, ಸಂವಿಧಾನವನ್ನು ಬದಲಿಸುವ ಮಾತು,ಎಲ್ಲವನ್ನು ಗಮನಿಸುತ್ತಿದ್ದೇವೆ ಪುನಃ ವೈದಿಕಶಾಹಿ ವರ್ಗದವರು ಕೆಳವರ್ಗದವರನ್ನು ಶೋಷಿಸುವ ಕೆಲಸ ಮೊದಲಿನ ಸ್ಥಿತಿಯಲ್ಲಿ ಕೊಂಡೊಯ್ಯುವ ಹುನ್ನಾರಗಳು ನಡೆಯುತ್ತಿವೆ, ಇದನ್ನೆಲ್ಲಾ ನಾವು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ,ಹೀಗೆ ಮುಂದುವರೆದರೆ ಮುಂದೆ ದೊಡ್ಡ ಮಟ್ಟದ ಖಂಡನೀಯ ಹೋರಾಟ ನಡೆಸಬೇಕಾಗುತ್ತದೆ, ನಿಮ್ಮ ಈ ಕುತಂತ್ರದ ಚಟುವಟಿಕೆಗಳನ್ನು ಇನ್ನು ಮುಂದೆ ಮುಂದುವರಿಸಲು ನಾವು ಬಿಡುವುದಿಲ್ಲ.

  2. Very well, thoughtfully written article. I am from Dalit community, but studied in private institution, and now self employed in abroad. I am surrounded by mainly so called upper cast crowd. In past 70 years, our constitution and by the grace of Bhagavan Baba saheb, huge number of dalits have got educated and they are now enjoying equal or even better living condition and education amoung general population. Having said that, I want to highlight, main problem within our dalit population, mainly the succesful dalits fall for the cunning policies of BJP. They have forgetting the suffering of their eldrs in the unfair social system, and they dont want to get recognised amoung rest of their own people. The solidarity amoung our own commununity is main reason, for the upper cast people to feast on. We need srong meadia which can unite us, you are putting wonderfull effort in this regard, I wish your spirit wont diminish for any reason. Jai Bheem.

LEAVE A REPLY

Please enter your comment!
Please enter your name here

- Advertisment -

Must Read

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ ಮಹಿಳೆ | Naanu Gauri

ಆಸ್ಪತ್ರೆ ಸಿಬ್ಬಂದಿಗೆ ಲಂಚ ನೀಡಲು ಸಾಧ್ಯವಾಗದೆ ರಸ್ತೆಯಲ್ಲೆ 6 ತಿಂಗಳ ಶಿಶುವಿಗೆ ಜನ್ಮ ನೀಡಿದ...

0
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ನಿರಾಕರಿಸಿದ ಕಾರಣಕ್ಕೆ ಮಹಿಳೆಯೊಬ್ಬರು ರಸ್ತೆಯಲ್ಲೇ ಆರು ತಿಂಗಳ ಶಿಶುವಿಗೆ ಜನ್ಮ ನೀಡಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಆರು ತಿಂಗಳ ಗರ್ಭಿಣಿಯಾಗಿದ್ದ ಕಲ್ಲೋ ಬಾಯಿಯನ್ನು...
Wordpress Social Share Plugin powered by Ultimatelysocial