ಭಾರತವಿನ್ನು ಜಾತಿಗ್ರಸ್ತ ದೇಶವಾಗಿಯೇ ಉಳಿದುಕೊಂಡಿದೆ. ನಾವು ಎಷ್ಟೇ ಮುಂದೆ ಸಾಗಿದರೂ, ಕೋವಿಡ್‌ನಂತಹ ಕರಾಳ ರೋಗಗಳು ಬಂದರೂ ಸಹ ಹಲವಾರು ಮೇಲ್ಜಾತಿ ಎಂದು ಕರೆಸಿಕೊಳ್ಳುವವರ ಮನಸ್ಸಿನಲ್ಲಿನ ಜಾತಿ ರೋಗ ಮಾತ್ರ ನಾಶವಾಗಿಲ್ಲ. ದಲಿತರು, ತಳಸಮುದಾಯವರು ಹೊಸ ಬಟ್ಟೆ ಧರಿಸುವಂತಿಲ್ಲ, ವಾಚ್ ಹಾಕುವಂತಿಲ್ಲ, ಅಂಬೇಡ್ಕರ್ ರಿಂಗ್ ಟೋನ್ ಹಾಕಿಕೊಳ್ಳುವಂತಿಲ್ಲ ಎಂದು ಕಟ್ಟಳೆಗಳನ್ನು ವಿಧಿಸಿ, ದೌರ್ಜನ್ಯವೆಸಗಿರುವ ಕ್ರೂರ ಘಟನೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಭಾರತದ ರಾಜಸ್ಥಾನದಲ್ಲಿ ಕಳೆದ 10 ವರ್ಷಗಳಲ್ಲಿ ದಲಿತರು ತಮ್ಮ ಮದುವೆ ಸಂದರ್ಭದಲ್ಲಿ ಮಧುಮಗ ಕುದುರೆ ಸವಾರಿ ಮಾಡಿದ್ದಕ್ಕಾಗಿ ಮೇಲ್ಜಾತಿಯವರಿಂದ ಹಲ್ಲೆಗೊಳಗಾದ 76 ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿವೆ. ಅಂದರೆ ‘ದಲಿತರು ಯಾವಗಾಲೂ ಕೆಳಗಿರುವವರು, ಕೆಳಗೇ ಇರಬೇಕು ಅಷ್ಟೇ. ಅವರು ಮೇಲೆ ಬಂದರೆ ನಾವು ಅದನ್ನು ಸಹಿಸುವುದಿಲ್ಲ’ ಎಂದು ಮೇಲ್ಜಾತಿ ಕ್ರೂರ ಮನಸ್ಸುಗಳು ದೌರ್ಜನ್ಯದ ಮೂಲಕ ಸಾರಿ ಹೇಳುತ್ತಿವೆ. ಇದರ ತಾತ್ಪರ್ಯವೆಂದರೆ ದಲಿತರು, ಕೆಳಜಾತಿಯವರು ನಮ್ಮ ಸೇವೆ ಮಾಡಿಕೊಂಡು ಬಿದ್ದಿರಬೇಕು ಹೊರತು ಮೇಲೆ ಬರಬಾರದು ಎಂಬ ಮನುಸ್ಮೃತಿಯ ಹೇರಿಕೆಯಾಗಿದೆ.
ಇಂತಹ ಮನುಸ್ಮೃತಿಯನ್ನು ಧಿಕ್ಕರಿಸಿ ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಕೊಟ್ಟ ಸಂವಿಧಾನವನ್ನು ಬಳಸಿ ಅದೇ ರಾಜಸ್ಥಾನದ ದಲಿತ ಮಧುಮಗನೊಬ್ಬ ಪೊಲೀಸರ ರಕ್ಷಣೆಯೊಂದಿಗೆ ಕುದುರೆ ಸವಾರಿ ಮಾಡಿದ ಐತಿಹಾಸಿಕ, ಅಪರೂಪದ, ದಿಟ್ಟ ಪ್ರತಿರೋಧದ ಘಟನೆ ಸೋಮವಾರ ನಡೆದಿದೆ. ಬುಂಡಿ ಜಿಲ್ಲೆಯ ಛಾಡಿ ಗ್ರಾಮದ 27 ವರ್ಷದ ಶ್ರೀರಾಮ್ ಮೇಘವಾಲ್ ಎಂಬ ಯುವಕ ಶೇರ್ವಾನಿಯ ಹೊಸ ಧಿರಿಸು ಧರಿಸಿ, ಸೊಂಟಕ್ಕೆ ಕತ್ತಿ ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕುದುರೆಯೇರಿ ಊರಿನ ಸುತ್ತ ಮೆರವಣಿಗೆ ನಡೆಸಿ ಕಲ್ಯಾಣ ಮಂಟಪಕ್ಕೆ ತೆರಳಿದರು. ಸುತ್ತಲೂ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವರನ ಸ್ನೇಹಿತರು ಜೈಭೀಮ್ ಘೋಷಣೆ ಕೂಗಿದರು. ಡಿ.ಜೆ ಸೌಂಡ್ ಆರ್ಭಟ ನಡೆಯಿತು. ಬಾಲಿವುಡ್ ಹಾಡುಗಳನ್ನು ಹಾಕಲಾಯಿತು. ಮಕ್ಕಳು ಮತ್ತು ಮಹಿಳೆಯರು ನೃತ್ಯ ಮಾಡಿದರು.
ಊರಿನ ಸುತ್ತಲೂ ಕುದುರೆ ಸವಾರಿ ಮುಗಿಸಿದ ವರ ನೇರವಾಗಿ ವೇದಿಕೆ ಏರಿದರು. ಹಿಂದೆ ಡಾ.ಬಿ.ಆರ್ ಅಂಬೇಡ್ಕರ್‌ರವರ ಬೃಹತ್ ಪೋಟೊ ಇದ್ದ ಬ್ಯಾಕ್‌ಡ್ರಾಪ್ ಹಾಕಲಾಗಿತ್ತು. ವೇದಿಕೆ ಮುಂಭಾಗದಲ್ಲಿ ಕಾವಲಿದ್ದ ತನ್ನ ಸ್ನೇಹಿತರಿಗೆ ವರ ಕೈಕುಲುಕಿ ಧನ್ಯವಾದ ತಿಳಿಸಿದರು. ಮದುವೆ ಸಾಂಗವಾಗಿ ನಡೆಯಿತು. ಆದರೆ ಅದಕ್ಕೂ ಮೊದಲು 60 ಪೊಲೀಸರು ಇಡೀ ಗ್ರಾಮದ ಸುತ್ತ ಪರೇಡ್ ನಡೆಸಿದ್ದರು. ಮೇಲ್ಜಾತಿ ಗೂಂಡಾಗಳು ಎಲ್ಲಿ ದಾಳಿ ಮಾಡುತ್ತಾರೆ ಎಂದು ಕಣ್ಣಲ್ಲಿ ಕಣ್ಣಿಟ್ಟು ಕಾದಿದ್ದರು!
ಮದುವೆ ನಂತರ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ ಮಧುಮಗ “ಈ ರಸ್ತೆಗಳಲ್ಲಿ ಕುದುರೆ ಸವಾರಿ ಮಾಡಿದ ಮೊದಲ ದಲಿತ ವರ ನಾನು. ಇದರಿಂದ ದಲಿತರು ಕೆಳಗಿದ್ದಾರೆ, ಕೆಳಗೇ ಉಳಿಯಬೇಕು ಎಂಬ ಮನಸ್ಥಿತಿ ಬದಲಾಗಲಿದೆ. ಇದು ಸಮಾನತೆಯತ್ತ ಒಂದು ಹೆಜ್ಜೆಯಾಗಿದೆ. ಇನ್ನು ಮುಂದೆ ಹಲವಾರು ದಲಿತ ಯುವಕರು ತಮ್ಮ ಮದುವೆಗಳಲ್ಲಿ ಕುದುರೆ ಸವಾರಿ ಮಾಡುತ್ತಾರೆ. ನಮ್ಮ ಸಮಾಜ ಬದಲಾಗುತ್ತದೆ” ಎಂದಿದ್ದಾರೆ.
ಗ್ರಾಮ ಪಂಚಾಯಿತಿಯಲ್ಲಿ ಗುತ್ತಿಗೆ ನೌಕರನಾಗಿರುವ ಶ್ರೀರಾಮ್ ಮೇಘವಾಲ್ ದ್ರೌಪದಿ ಎಂಬುವವರನ್ನು ವರಿಸಿದರು. ಜಿಲ್ಲೆಯಲ್ಲಿ ಈಗಾಗಲೇ ಈ ರೀತಿಯ ಕುದುರೆ ಸವಾರಿ ವೇಳೆ ದಲಿತರ ಮೇಲೆ ದೌರ್ಜನ್ಯಗಳು ನಡೆದಿದ್ದರಿಂದ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಬುಂಡಿ ಜಿಲ್ಲಾಡಳಿತ ಒಂದು ಸಮಿತಿ ರಚಿಸಿ ಅದರ ಮೇಲುಸ್ತುವಾರಿಯಲ್ಲಿ ಈ ಮದುವೆ ಆಯೋಜಿಸಿತ್ತು. ಅದಕ್ಕೆ ‘ಆಪರೇಷನ್ ಸಮಂತಾ (ಆಪರೇಷನ್ ಸಮಾನತೆ)’ ಎಂದು ಹೆಸರಿಡಲಾಗಿತ್ತು. ದಲಿತ ಸಮುದಾಯದ ಮದುವೆಗಳಿಗೆ ಕಾನೂನು ರೀತ್ಯಾ ರಕ್ಷಣೆ ಒದಗಿಸಿ, ಯಾವುದೇ ದೌರ್ಜನ್ಯ ನಡೆಯದಂತೆ ತಡೆಯುವುದು ಅದರ ಗುರಿಯಾಗಿದೆ. ಈ ಸಮಿತಿಯು ದಲಿತ ಸಮುದಾಯಗಳನ್ನು ಭೇಟಿ ಮಾಡಿ ಧೈರ್ಯದಿಂದ ಮದುವೆ ಮಾಡಿಕೊಳ್ಳಿ, ಏನಾದರೂ ಸಹಾಯ ಬೇಕಾದರೂ ನೀಡುತ್ತೇವೆ ಎಂದು ತಿಳಿಸುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಮದುವೆಗೂ ಮುಂಚೆಯೇ ಎಲ್ಲಾ ಸಮುದಾಯಗಳ ಸಭೆ ಸೇರಿಸಿ ಶಾಂತಿ ಕಾಪಾಡಲು ಮನವಿ ಮಾಡಿದ್ದರು. ಎಲ್ಲಾ ಸಮುದಾಯಗಳು ಬೆಂಬಲ ನೀಡಿದರು ಎಂದು ಅವರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ರಾಜಸ್ಥಾನದಲ್ಲಿ ವಿವಾಹದ ಸಂದರ್ಭದಲ್ಲಿ ಸಿಂಗಾರಗೊಂಡ ವರ ಊರಿನ ಸುತ್ತಾ ಕುದುರೆ ಸವಾರಿ ಮಾಡುವ ಸಂಪ್ರದಾಯವಿದೆ. ಇತ್ತೀಚೆಗೆ ದಲಿತರು ಸಹ ಕುದುರೆ ಸವಾರಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಕ್ರೂರ ಜಾತೀಯತೆಯ ಇತಿಹಾಸ ಹೊಂದಿರುವ ರಾಜಸ್ಥಾನದಲ್ಲಿ ಅದು ತಮ್ಮ ಪ್ರತಿಷ್ಟೆಗೆ ಧಕ್ಕೆ ಎಂದು ಭಾವಿಸಿರುವ ಮೇಲ್ಜಾತಿ ಗೂಂಡಾಗಳು ಅದನ್ನು ತಡೆಯಲು ಹಲ್ಲೆ, ದೌರ್ಜನ್ಯ ನಡೆಸಿದ್ದಾರೆ. ಇದುವರೆಗೂ 76 ಪ್ರಕರಣಗಳು ದಾಖಲಾಗಿವೆ ಎನ್ನುತ್ತಾರೆ ರಾಜಸ್ಥಾನ ಪೊಲೀಸರು. ಆದರೆ 77 ನೇ ಮದುವೆಯಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಜಿಲ್ಲಾಡಳಿತದ ನೆರವು ಪಡೆದು ದಲಿತ ವರನೊಬ್ಬ ಕುದುರೆ ಸವಾರಿ ನಡೆಸಿಯೇ ತಮ್ಮ ಮದುವೆ ಮಾಡಿಕೊಂಡಿದ್ದಾರೆ.
ವರನ ತಂದೆ ಬಾಬುಲಾಲ್ ಮೇಘಾವಾಲ್ ತನ್ನ ಮಗನ ಮದುವೆ ಸಾಂಗವಾಗಿ ನೆರವೇರಿದ್ದಕ್ಕಾಗಿ ಜಿಲ್ಲಾಡಳಿತ ಮತ್ತು ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ. “ಈ ಮೊದಲು ಹಲ್ಲೆ, ದೌರ್ಜನ್ಯದ ಭಯದಿಂದ ದಲಿತ ಮಧುಮಕ್ಕಳು ಕುದುರೆ ಸವಾರಿ ಮಾಡುತ್ತಿರಲಿಲ್ಲ. ಆದರೆ ನನ್ನ ಮಗ ಅದನ್ನು ಬದಲಿಸಿದ್ದಾನೆ” ಎಂದು ಅವರು ತಿಳಿಸಿದ್ದಾರೆ.
ರಾಜಸ್ಥಾನದ ಈ ಘಟನೆಯು ದಲಿತ ಸಮುದಾಯದೊಳಗಿನ ಪ್ರಜ್ಞೆ ಮತ್ತು ಪ್ರತಿರೋಧದ ಮನೋಭಾವವನ್ನು ತೋರುತ್ತದೆ. ಇತ್ತೀಚಿನ ದಿನಗಳಲ್ಲಿ ದಲಿತ ಮತ್ತು ತಳ ಸಮುದಾಯಗಳ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಸಹ ದೇವಾಸ್ಥಾನ ಪ್ರವೇಶಕ್ಕಾಗಿ ಹಲವಾರು ಗ್ರಾಮಗಳಲ್ಲಿ ಹೋರಾಟ ಆರಂಭವಾಗಿದೆ. ಅದಕ್ಕೆ ಮೇಲ್ಜಾತಿಗಳಿಂದ ವಿರೋಧ, ಹಲ್ಲೆ ಎದುರಾದ ಹಲವಾರು ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನ ಜಿಲ್ಲಾಡಳಿತದ ಆಪರೇಷನ್ ಸಮಾನತೆ ಒಳ್ಳೆಯ ನಡೆಯಾಗಿದ್ದು ಹಲವರಿಗೆ ಧೈರ್ಯ ನೀಡಲಿದೆ. ಇದು ಎಲ್ಲಾ ರಾಜ್ಯಗಳಲ್ಲಿಯೂ ಜಾರಿಗೆ ಬರಬೇಕಿದೆ.
ಇದನ್ನೂ ಓದಿ: ‘ಧೀರ ಭಗತ್ ರಾಯ್’ ಮೂಲಕ ಮೀಸಲು ಕ್ಷೇತ್ರದ ರಾಜಕೀಯ ಕಥೆಯನ್ನು ಹೇಳಲು ಹೊರಟಿರುವ ನಿರ್ದೇಶಕ ಕರ್ಣನ್



After many decades of freedom this country is not yet ready to allow the untouchable Enjoy the freedom. This country wants the untouchable to be like decades ago. It’s unfortunate!! Hats off to the bride, family and police department.