ನವದೆಹಲಿ: ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದ) ಹಿರಿಯ ನಾಯಕ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ಅವರು ಪದ್ಮಭೂಷಣ ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ. ಇದರ ಜೊತೆಗೆ ಬಂಗಾಳದ ಗಾಯಕಿ ಸಂಧ್ಯಾ ಮುಖರ್ಜಿ ಅವರೂ ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ್ದಾರೆ.
“ಈ ಪ್ರಶಸ್ತಿಯ ಬಗ್ಗೆ ನನಗೆ ಏನೂ ತಿಳಿದಿಲ್ಲ. ಅದರ ಬಗ್ಗೆ ಯಾರೂ ನನಗೆ ಏನೂ ಹೇಳಿಲ್ಲ. ಅವರು ನನಗೆ ಪದ್ಮಭೂಷಣ ನೀಡಲು ನಿರ್ಧರಿಸಿದ್ದರೆ, ನಾನು ಅದನ್ನು ಸ್ವೀಕರಿಸಲು ನಿರಾಕರಿಸುತ್ತೇನೆ” ಎಂದು ಭಟ್ಟಾಚಾರ್ಯ ಅವರು ಹೇಳಿಕೆ ನೀಡಿದ್ದಾರೆ.
ಅನಾರೋಗ್ಯದ ಕಾರಣ ಸಕ್ರಿಯ ರಾಜಕೀಯದಿಂದ ಹಿಂದೆ ಸರಿಯುವವರೆಗೂ ಮತ್ತು ನಂತರವೂ ಭಟ್ಟಾಚಾರ್ಯ ಅವರು ನರೇಂದ್ರ ಮೋದಿ ಸರ್ಕಾರದ ತೀವ್ರ ಟೀಕಾಕಾರರಾಗಿದ್ದರು.
ಅಧಿಕಾರಿಯೊಬ್ಬರು ಭಟ್ಟಾಚಾರ್ಯ ಅವರ ನಿವಾಸಕ್ಕೆ ಕರೆ ಮಾಡಿ ಸರ್ಕಾರದ ನಿರ್ಧಾರದ ಬಗ್ಗೆ ಅವರ ಪತ್ನಿಗೆ ತಿಳಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿಕೊಂಡಿದೆ. ಸಚಿವಾಲಯದೊಳಗಿನ ಹೆಸರು ಹೇಳಲಿಚ್ಛಿಸದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳಾದ ಎಎನ್‌ಐ ಮತ್ತು ಪಿಟಿಐ ವರದಿ ಮಾಡಿದ್ದು, “ಭಟ್ಟಾಚಾರ್ಯ ಅವರ ಕುಟುಂಬವು ಪ್ರಶಸ್ತಿಗೆ ವಿರೋಧ ವ್ಯಕ್ತಪಡಿಸಿಲ್ಲ” ಎಂದಿವೆ.
ಪದ್ಮ ಪ್ರಶಸ್ತಿಗೆ ಹೆಸರನ್ನು ಘೋಷಿಸುವ ಮೊದಲು ಕೇಂದ್ರ ಸರ್ಕಾರವು ಪ್ರಶಸ್ತಿ ಪುರಸ್ಕೃತರ ಒಪ್ಪಿಗೆಯನ್ನು ಪಡೆಯುವುದು ರೂಢಿಯಾಗಿದೆ ಎಂದು ಪಿಟಿಐ ವರದಿ ಮಾಡಿದೆ.
77 ವರ್ಷದ ಕಮ್ಯುನಿಸ್ಟ್ ನಾಯಕ 2000-2011ರ ಅವಧಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು. ಪದ್ಮಭೂಷಣ ಪ್ರಶಸ್ತಿಯನ್ನು ಅವರು ನಿರಾಕರಿಸಿರುವ ಕುರಿತು ಸಿಪಿಐ(ಎಂ) ಟ್ವಿಟರ್ ಹ್ಯಾಡಲ್ ತಿಳಿಸಿದೆ.
Com. Buddhadeb Bhattacharya who was nominated for the Padma Bhushan award has declined to accept it. The CPI(M) policy has been consistent in declining such awards from the State. Our work is for the people not for awards. Com EMS who was earlier offered an award had declined it. pic.twitter.com/fTmkkzeABl
— CPI (M) (@cpimspeak) January 25, 2022
“ಪದ್ಮಭೂಷಣ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದ ಕಾಮ್ರೇಡ್ ಬುದ್ಧದೇಬ್ ಭಟ್ಟಾಚಾರ್ಯ ಅವರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಪ್ರಭುತ್ವದ ಅಂತಹ ಪ್ರಶಸ್ತಿಗಳನ್ನು ನಿರಾಕರಿಸುವಲ್ಲಿ ಸಿಪಿಐ(ಎಂ) ನೀತಿಯು ಸ್ಥಿರವಾಗಿದೆ. ನಮ್ಮ ಕೆಲಸ ಪ್ರಶಸ್ತಿಗಾಗಿ ಅಲ್ಲ ಜನರಿಗಾಗಿ. ಈ ಹಿಂದೆ ಪ್ರಶಸ್ತಿಯನ್ನು ನೀಡಲಾಗಿದ್ದ ಕಾಮ್ರೇಡ್ ಇಎಂಎಸ್ (ನಂಬೂದರಿಪಾಡ್) ಅದನ್ನು ನಿರಾಕರಿಸಿದ್ದರು” ಎಂದು ಸಿಪಿಐ(ಎಂ) ಟ್ವೀಟ್ ಮಾಡಿದೆ.
“ಕಮ್ಯುನಿಸ್ಟರು ಪ್ರಭುತ್ವದ ಪ್ರಶಸ್ತಿಗಳಿಗೆ ಹಾತೊರೆಯುವುದಿಲ್ಲ. ಈ ಹಿಂದೆ ಜ್ಯೋತಿ ಬಸು ಅವರು 2008ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಹಾಗಾಗಿ ಇದನ್ನೂ ನಿರೀಕ್ಷಿಸಲಾಗಿತ್ತು” ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಸದಸ್ಯ ಸುಜನ್ ಚಕ್ರವರ್ತಿ ಹೇಳಿದ್ದಾರೆ.
‘ಅತ್ಯಂತ ಅವಮಾನಕರ’

ಜನಪ್ರಿಯ ಹಿನ್ನೆಲೆ ಗಾಯಕಿ ಸಂಧ್ಯಾ ಮುಖರ್ಜಿ ಅವರು ಪ್ರಶಸ್ತಿ ನಿರಾಕರಣೆಯನ್ನು ಮಾಡಿರುವ ಕುರಿತು ಅವರ ಪುತ್ರಿ ಸೌಮಿ ಸೇನ್‌ಗುಪ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿರುವ ಅವರು, “90ನೇ ವಯಸ್ಸಿನಲ್ಲಿ ಸಂಗೀತ ದಂತಕಥೆಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡುವುದು ಅತ್ಯಂತ ಅವಮಾನಕರ” ಎಂದು ಸೌಮಿ ಸೇನ್‌ಗುಪ್ತಾ ಹೇಳಿದ್ದಾರೆ.
“ಪದ್ಮಶ್ರೀ ಪ್ರಶಸ್ತಿಯನ್ನು ತಿರಸ್ಕರಿಸುವ ಮುಖರ್ಜಿ ಅವರ ನಿರ್ಧಾರವು ರಾಜಕೀಯ ಪ್ರೇರಿತವಲ್ಲ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
”ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅವರು ಯಾವುದೇ ರಾಜಕೀಯವನ್ನು ಮೀರಿದವರು. ದಯವಿಟ್ಟು ಅದರಲ್ಲಿ ಯಾವುದೇ ರಾಜಕೀಯ ಕಾರಣಗಳನ್ನು ಹುಡುಕಲು ಪ್ರಯತ್ನಿಸಬೇಡಿ. ಅವರು ಅವಮಾನಿತರಾಗಿದ್ದಾರೆ ಅಷ್ಟೇ” ಎಂದು ಸೌಮಿ ಅವರು ತಿಳಿಸಿದ್ದಾರೆ.
ಸಂಧ್ಯಾ ಮುಖರ್ಜಿ ಅವರು ಪಶ್ಚಿಮ ಬಂಗಾಳ ಸರ್ಕಾರವು ನೀಡುವ ಅತ್ಯುನ್ನತ ನಾಗರಿಕ ಗೌರವವಾದ ಬಂಗಾ ಬಿಭೂಷಣವನ್ನು 2011ರಲ್ಲಿ ಪಡೆದಿದ್ದಾರೆ. ಹಾಲಿವುಡ್ ಕ್ಲಾಸಿಕ್ ‘ಸೌಂಡ್ ಆಫ್ ಮ್ಯೂಸಿಕ್’ನ ಬಂಗಾಳಿ ರಿಮೇಕ್ ಆದ ‘ಜಯ್ ಜಯಂತಿ’ಗಾಗಿ ಅವರು 1970ರಲ್ಲಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದ್ದಾರೆ.
ಇದನ್ನೂ ಓದಿರಿ: ‘ಅಕ್ಕಿ ಕದ್ದನೆಂದು ಆದಿವಾಸಿ ಯುವಕನನ್ನು ಕೊಂದು 4 ವರ್ಷವಾಯಿತು, ವಿಚಾರಣೆ ಮಾತ್ರ ಆರಂಭವಾಗಲಿಲ್ಲ’


