ಹಿಜಾಬ್ ಧರಿಸಿ ಕಾಲೇಜು ಪ್ರವೇಶ ಕೋರಿ ಸಲ್ಲಿಸಿದ್ದ ಉಡುಪಿ ಜಿಲ್ಲೆಯ ವಿದ್ಯಾರ್ಥಿನಿಯರ ಅರ್ಜಿಯನ್ನು ಆಲಿಸುತ್ತಿದ್ದ ಹೈಕೋರ್ಟ್‌ನ ಏಕ ಸದಸ್ಯ ಪೀಠವು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸುವುದಾಗಿ ಬುಧವಾರ ಹೇಳಿದೆ. ಈ ಹಿನ್ನಲೆಯಲ್ಲಿ ಹೈಕೋರ್ಟ್ ಪ್ರಕರಣದ ವಿಚಾರಣೆಗಾಗಿ ಮೂವರು ಸದಸ್ಯರ ಪೀಠವನ್ನ ರಚಿಸಿದ್ದು, ಗುರುವಾರ(ಇಂದು) ಮದ್ಯಾಹ್ನ 02:30 ಕ್ಕೆ ವಿಚಾರಣೆ ಪ್ರಾರಂಭವಾಗಲಿದೆ.
ಅರ್ಜಿ ವಿಚಾರಣೆಯ ಎರಡನೇ ದಿನವಾದ ಬುಧವಾರ, “ವೈಯಕ್ತಿಕ ಕಾನೂನಿನ ಕೆಲವು ಅಂಶಗಳ ಹಿನ್ನಲೆಯಲ್ಲಿ ಮೂಲಭೂತ ಪ್ರಾಮುಖ್ಯತೆಯ ಕೆಲವು ಸಾಂವಿಧಾನಿಕ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ” ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಹೇಳಿ, ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು. ಜೊತೆಗೆ ವಿದ್ಯಾರ್ಥಿನಿಯರು ಮಧ್ಯಂತರ ಆದೇಶದ ಸಮಸ್ಯೆಯನ್ನು ಸಹ ವಿಸ್ತೃತ ಪೀಠವೇ ಪರಿಗಣಿಸುತ್ತದೆ ಎಂದು ಆದೇಶ ನೀಡಿದ್ದರು.
ಇದನ್ನೂ ಓದಿ: ಹಿಜಾಬ್ ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ ರಾಜ್ಯ ಹೈಕೋರ್ಟ್
ಈ ಹಿನ್ನಲೆಯಲ್ಲಿ ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೂರ್ಣ ಪೀಠವನ್ನು ರಚಿಸಿದೆ. ಈ ಪೀಠವು ಮುಖ್ಯ ನ್ಯಾಯಮೂರ್ತಿಯ ಜೊತೆಗೆ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿಯುದ್ದೀನ್ ಅವರನ್ನು ಒಳಗೊಂಡಿದೆ.
ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರು ಕಳೆದ ವರ್ಷ ಮಾರ್ಚ್‌ನಲ್ಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಹಿಳಾ ನ್ಯಾಯಾಧೀಶರಾಗಿದ್ದಾರೆ.
ವಿಶೇಷ ಪೀಠವು ಉಡುಪಿ ವಲಯದ ಕಾಲೇಜುಗಳ 18 ಬಾಲಕಿಯರ ಪರವಾಗಿ ಒಟ್ಟು ಐದು ಅರ್ಜಿಗಳನ್ನು ಗುರುವಾರ(ಇಂದು) ಮಧ್ಯಾಹ್ನ 02:30 ವಿಚಾರಣೆ ನಡೆಸಲಿದೆ.
“ಅರ್ಜಿಗಳಲ್ಲಿ ಮನವಿ ಮಾಡಲಾದ ತುರ್ತುಸ್ಥಿತಿಯನ್ನು ಪರಿಗಣಿಸಿ, ತಕ್ಷಣದ ಪರಿಗಣನೆಗೆ ಮುಖ್ಯ ನ್ಯಾಯಾಧೀಶರ ಮುಂದೆ ಪತ್ರಗಳನ್ನು ಇರಿಸಲು ರಿಜಿಸ್ಟ್ರಾರ್‌ಗೆ ಸೂಚಿಸಲಾಗಿದೆ” ನ್ಯಾಯಮೂರ್ತಿ ದೀಕ್ಷಿತ್ ಆದೇಶದಲ್ಲಿ ಟಿಪ್ಪಣಿಯಲ್ಲಿ ನಿನ್ನೆ ಹೇಳಿದ್ದರು. ಜೊತೆಗೆ, ವಿಸ್ತೃತ ಪೀಠಕ್ಕೆ ಸಂಬಂಧಿಸಿದಂತೆ ಮುಖ್ಯನ್ಯಾಯಮೂರ್ತಿ ನಿರ್ಧಾರ ತೆಗೆದುಕೊಂಡ ನಂತರ ಮಧ್ಯಂತರ ಆದೇಶವನ್ನು ಪಡೆಯಲು ಅರ್ಜಿದಾರರು ಮುಕ್ತವಾಗಿದ್ದಾರೆ ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: Hijab Live | ಹಿಜಾಬ್ ಅರ್ಜಿ ವಿಚಾರಣೆ ಲೈವ್ | ಪ್ರಕರಣಕ್ಕೆ ದೊಡ್ಡ ಪೀಠದ ಪರಿಗಣನೆಯ ಅಗತ್ಯವಿದೆ: ನ್ಯಾಯಮೂರ್ತಿ


