Homeಮುಖಪುಟಹಿಂಸಾಚಾರ ನಿರ್ದಿಷ್ಟ ಸಮುದಾಯಗಳನ್ನು ಮಾತ್ರ ಗುರಿಮಾಡುವುದಿಲ್ಲ, ಸಮಾಜವನ್ನು ಇಡಿಯಾಗಿ ವ್ಯಾಪಿಸುತ್ತದೆ; ಪ್ರತಾಪ್‌ ಭಾನು ಮೆಹತಾ ಸಂದರ್ಶನದ...

ಹಿಂಸಾಚಾರ ನಿರ್ದಿಷ್ಟ ಸಮುದಾಯಗಳನ್ನು ಮಾತ್ರ ಗುರಿಮಾಡುವುದಿಲ್ಲ, ಸಮಾಜವನ್ನು ಇಡಿಯಾಗಿ ವ್ಯಾಪಿಸುತ್ತದೆ; ಪ್ರತಾಪ್‌ ಭಾನು ಮೆಹತಾ ಸಂದರ್ಶನದ ಅನುವಾದ – ಭಾಗ 2

- Advertisement -
- Advertisement -

ʼದಿ ವೈರ್‌ʼ ಜಾಲತಾಣದಲ್ಲಿ 17 ಡಿಸೆಂಬರ್‌ 2021ರಂದು ಪ್ರಸಾರವಾದ ಸಂದರ್ಶನದ ಪಠ್ಯರೂಪದ ಎರಡನೇ ಭಾಗ ಇದುಸಂದರ್ಶಕರು ಕರಣ್‌ ಥಾಪರ್

ಪ್ರ: ನಾನು ಬೇಕಂತಲೆ ತಡೆಹಿಡಿದಿದ್ದ ವಿಷಯಕ್ಕೆ ಈಗ ಬರೋಣ. ನೀವು ಇದರ ಬಗ್ಗೆ ಪದೇಪದೇ ಮಾತನಾಡುತ್ತಿದ್ದೀರಿ. ನಾವು ಚಿಂತೆಗೀಡಾಗಿರುವ ಮೂರನೆಯ ಆಧಾರ ಸ್ಥಂಬ ನ್ಯಾಯಾಂಗದ ಬಗ್ಗೆ, ವಿಶೇಷವಾಗಿ ಸರ್ವೋಚ್ಛ ನ್ಯಾಯಾಲಯ. ನಾನು ವಿಷಯವನ್ನು ರೀತಿಯಲ್ಲಿ ವಿವರಿಸುತ್ತೇನೆ. 1970ರ ದಶಕದಲ್ಲಿ ನಡೆದ ಎಡಿಎಂ ಜಬಲ್ಪುಪುರ್ಪ್ರಕರಣದ ಬಳಿಕ ಸರ್ವೋಚ್ಚ ನ್ಯಾಯಾಲಯ ಭಾರತದ ಜನರ ಸ್ವಾತಂತ್ರ್ಯಗಳು ಮತ್ತು ಹಕ್ಕುಗಳನ್ನು ಕಾಪಾಡಲು ಸರ್ಕಾರದ ನೀತಿಗಳಿಗೆ ಅಡೆತಡೆ ಒಡ್ಡುವ ಒಂದು ಮಹಾ ಗೋಡೆಯಾಗುತ್ತದೆ ಎಂದು ಎಲ್ಲರೂ ಭಾವಿಸಿಬಿಟ್ಟರು. ಆದರೆ, ಈಚಿನ ವರ್ಷಗಳಲ್ಲಿ ಮೂಲಭೂತ ಸಾಂವಿಧಾನಿಕ ಮಹತ್ವವಿರುವ ಪ್ರಕರಣಗಳ ಬಗ್ಗೆ ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸಲು ನಿರಾಕರಿಸುತ್ತಿದೆಅವು ಕಾಶ್ಮೀರ, ಚುನಾವಣಾ ಬಾಂಡ್ಗಳು, ಹೀಬಸ್ಕಾರ್ಪಸ್ಅಥವ ಸಿಎಎ ಪ್ರಕರಣಗಳಿರಬಹುದು. ಅಲ್ಲದೆ, ಪ್ರಕರಣಗಳ ಪರಿಣಾಮ ಸರ್ಕಾರಕ್ಕೆ ಮುಜುಗರ ಉಂಟುಮಾಡಬಹುದೆಂದು ಭಾವಿಸಿ ವಿಷಯವನ್ನು ಮುಂದೂಡುತ್ತ ಬಂದಿದೆ. ನ್ಯಾಯಾಲಯ ಸಂವಿಧಾನದ ವಿಷಯಗಳಿಗೆ ಸಂಬಂಧಪಟ್ಟ ತನ್ನ ಕರ್ತವ್ಯಗಳಿಂದ ಪಲಾಯನಮಾಡುತ್ತಿದೆ ಎನ್ನುವ ಸತ್ಯ ಎಷ್ಟು ಚಿಂತಾಜನಕವಾದದ್ದು?

ಉ: ಇದು ಬಹಳ ಚಿಂತಾಜನಕವಾದ ವಿಷಯ. ಆದರೆ, ಇದನ್ನು ಇನ್ನೂ ಸ್ವಲ್ಪ ಸೂಕ್ಷ್ಮವಾದ ಐತಿಹಾಸಿಕ ದೃಷ್ಟಿಕೋನದಿಂದ ನೋಡಬೇಕು. ಸರ್ವೋಚ್ಚ ನ್ಯಾಯಾಲಯದ ಬಗ್ಗೆ ನಾನೊಬ್ಬ ಅಧ್ಯಯನಶೀಲ ವಿದ್ವಾಂಸನಾಗಿ ನನಗೆ ಒಂದು ಅಭಿಪ್ರಾಯ ಮೂಡಿದೆ. ಅದೇನೆಂದರೆ, ಸರ್ವೋಚ್ಚ ನ್ಯಾಯಾಲಯಕ್ಕೆ ಸರ್ಕಾರವನ್ನು ಎದುರುಹಾಕಿಕೊಂಡು ಅದನ್ನು ಉತ್ತರದಾಯಿಯಾಗಿ ಮಾಡುವ ಸಾಮರ್ಥ್ಯವನ್ನು ಅತಿಯಾಗಿ ಉತ್ರ್ಪೇಕ್ಷೆ ಮಾಡಲಾಗಿದೆ. ಅದು ಪ್ರದರ್ಶಿಸುವ ಬೊಗಳುವಿಕೆ ಅದರ ಕಚ್ಚುವಿಕೆಗಿಂತ ಬಹಳ ಕೆಟ್ಟದ್ದಾಗಿದೆ. ಅದು ಯಾವತ್ತೂ ರಾಜಕೀಯ ಸ್ಥಾಪಿತ ವ್ವವಸ್ಥೆಯನ್ನು (ಎಸ್ಟ್ಯಾಬ್ಲಿಷ್ಮೆಂಟ್)‌ ಎದುರುಹಾಕಿಕೊಂಡಿಲ್ಲ.

ಉದಾಹರಣೆಗೆ, ಪಿಐಎಲ್‌ ಕ್ರಾಂತಿಯು (ಸಾರ್ವಜನಿಕ ಹಿತಾಸಕ್ತಿ ಪ್ರಕರಣ) ಸರ್ವೋಚ್ಚ ನ್ಯಾಯಾಲಯ ಎಡಿಎಂ ಜಬಲ್ಪುರ್‌ ಪ್ರಕರಣದಲ್ಲಿ ತನ್ನ ವೈಫಲ್ಯವನ್ನು ಸರಿದೂಗಿಸಲು ಮಾಡಿದ ಪ್ರದರ್ಶನವಷ್ಟೆ. ಅವುಗಳಲ್ಲೂ ನ್ಯಾಯಾಲಯ ನೀಡಿದ ನಿರ್ದಿಷ್ಟವಾದ ಪರಿಹಾರಕ್ಕಿಂತ ನುಡಿದ ಹೇಳಿಕೆಗಳಲ್ಲಿನ ಅಟಾಟೋಪವೇ ಹೆಚ್ಚಾಗಿತ್ತು. ಆದ್ದರಿಂದ, ಸರ್ವೋಚ್ಚ ನ್ಯಾಯಾಲಯಕ್ಕೆ ಈ ಇತಿಹಾಸ ಇದೆ.

ಪ್ರ: ಹಾಗಾದರೆ, ನಾವು ನ್ಯಾಯಾಲಯವನ್ನು ಅತಿಯಾಗಿ ಹೊಗಳಿದ್ದೇವೆ, ಅಲ್ಲವೇ?

ಸಂಪೂರ್ಣವಾಗಿ.  ಪ್ರಜಾಪ್ರಭುತ್ವವನ್ನು ಕಾಪಾಡಲು ಯಾವತ್ತೂ ನಾವು ನ್ಯಾಯಾಂಗದ ಬಗ್ಗೆ ನಿರೀಕ್ಷೆಯಿಟ್ಟುಕೊಳ್ಳಬಾರದು. ಒಂದು ವೇಳೆ ಹಾಗೆ ಮಾಡಿದರೆ, ಈಗಾಗಲೇ ಯುದ್ಧವನ್ನು ಸೋತ ಹಾಗೆಯೆ.

ಹೀಗಿದ್ದರೂ, ಅದೇ ಮಾನದಂಡವನ್ನು ತೆಗೆದುಕೊಂಡರೂ, ಕಳೆದ ನಾಲ್ಕೈದು ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಕೈತೊಳೆದುಕೊಂಡಿರುವ ರೀತಿಯನ್ನು ನೋಡಿದರೆ ಅದಕ್ಕೆ ಯಾವುದೇ ಔಚಿತ್ಯ ಉಳಿದಲ್ಲ ಎನ್ನಿಸುತ್ತದೆ. ಸಂವಿಧಾನದ ಮೂಲ ಆಶಯಗಳನ್ನು ಕಾಪಾಡಲು ಅದು ಟೊಂಕಕಟ್ಟಿ ನಿಲ್ಲಲು ನಿರಾಕರಿಸಿದೆ. ಕೊಲೀಜಿಯಂ ಪದ್ಧತಿಯ ಪ್ರಕಾರ ತನ್ನ ಆಂತರಿಕ ಕಾರ್ಯನಿರ್ವಹಣೆಯ ರೀತಿ, ನ್ಯಾಯಾಧೀಶರನ್ನು ಪದೋನ್ನತಿ ಮಾಡುವ ರೀತಿ, ನ್ಯಾಯಾಧೀಶರನ್ನು ವರ್ಗಾವಣೆ ಮಾಡುವ ರೀತಿ – ಈ ವಿಷಯಗಳಲ್ಲಿ ಸರ್ವೋಚ್ಚ ನ್ಯಾಯಾಲಯವು ಸಂಸ್ಥೆಗಳನ್ನು ಹೇಗೆ ನಡೆಸಬೇಕೆಂಬುದರ ಬಗ್ಗೆ ಘೋರವಾದ ಮಾದರಿಯನ್ನು ಹಾಕಿಕೊಟ್ಟಿದೆ.

ಪ್ರ: ಹೀಬಸ್ಕಾರ್ಪಸ್ಗೆ ಸಂಬಂಧಪಟ್ಟ ವಿಚಾರವನ್ನು ತೆಗೆದುಕೊಳ್ಳೋಣ. ಇದು ಯಾವುದೇ ಪ್ರಜಾಪ್ರಭುತ್ವದಲ್ಲಿ ಒಬ್ಬ ನಾಗರಿಕನಿಗಿರುವ ಅತ್ಯಂತ ಮುಖ್ಯವಾದ ಹಕ್ಕು. ಇದರಲ್ಲಿಯೂ ಈಚಿನ ವರ್ಷಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ನಡೆ ಏರುಪೇರುಗಳಿಂದ ಕೂಡಿದೆ. ಅರ್ನಬ್ಗೋಸ್ವಾಮಿಗೆ 24 ಗಂಟೆಗಳಲ್ಲಿ ಜಾಮೀನು ನೀಡಲಾಯಿತು, ಆದರೆ ಸಿದ್ದಿಕ್‌ ಕಪ್ಪನ್ವಿಷಯದಲ್ಲಿ ಆರೋಪ ಪತ್ರವನ್ನು ಸಹ (ಚಾರ್ಜ್ಶೀಟ್) ಸಲ್ಲಿಸಿಲ್ಲ. ಒಂದು ವರ್ಷಕ್ಕೂ ಮಿಗಿಲಾಗಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಇದರ ಬಗ್ಗೆ ಯಾರಿಗೂ ಕಾಳಜಿ ಇದ್ದಂತಿಲ್ಲ. ಕಾಶ್ಮೀರದ ವಿಷಯದಲ್ಲಿ ನೂರಾರು ಅಲ್ಲದಿದ್ದರೂ ಅನೇಕ ಹೀಬಸ್ಕಾರ್ಪಸ್ಪ್ರಕರಣಗಳನ್ನು ವಿಚಾರಣೆಮಾಡಲೇ ಇಲ್ಲ. ಅವುಗಳಲ್ಲಿ ಕೆಲವು ಕಾಲಾವಧಿ ಮೀರಿ ಲುಪ್ತವಾಗಿವೆ, ಆದರೂ ಅವುಗಳು ವಿಚಾರಣೆಯಾಗದೆ ಉಳಿದಿವೆ. ಕಳೆದ ವರ್ಷ ಸರ್ವೋಚ್ಚ ನ್ಯಾಯಾಲಯ ಸಾವಿರಾರು ಸಾಮಾನ್ಯ ಜನರ ಪಾಡಿನ ಬಗ್ಗೆ ಕುರುಡಾಗಿತ್ತು ಮತ್ತು ಕಿವುಡಾಗಿತ್ತು. ಇವರು ಭಾರತದ ಪ್ರಜೆಗಳು, ಆದರೆ ಸರ್ವೋಚ್ಚ ನ್ಯಾಯಾಲಯ ಇವರ ಬಗ್ಗೆ ಯಾವುದೆ ಕಾಳಜಿ ಹೊಂದಿಲ್ಲ.

ಉ: ಒಂದು ಉದಾರವಾದಿ ಸಂವಿಧಾನಬದ್ಧ ಪ್ರಜಾಪ್ರಭುತ್ವದ ಸರ್ವೋಚ್ಚ ನ್ಯಾಯಾಲಯ ಎಂದು ತನ್ನನ್ನು ಕರೆದುಕೊಳ್ಳುವ ಸಂಸ್ಥೆ ಹೇಗೆ ತನ್ನ ಕರ್ತವ್ಯವನ್ನು ತೊರೆದುಬಿಟ್ಟುತು ಎನ್ನುವುದು ನಮ್ಮ ಗ್ರಹಿಕೆಯನ್ನು ಮೀರಿದ ಸಂಗತಿ. ನೀವು ಹೇಳಿದ ಹಾಗೆ ಅದು ಆಗಾಗ ಕೊಡುವ ತೀರ್ಪುಗಳೂ ಅಸಮಂಜಸವಾಗಿರುತ್ತವೆ. ನಿಮಗೆ ಅರ್ನಬ್‌ ಗೋಸ್ವಾಮಿಯ ಪ್ರಕರಣದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್‌ ನೀಡಿದ ಆಡಂಬರದ ಹೇಳಿಕೆ ಗೊತ್ತಿದೆ. ಅದು ಯಾವುದಕ್ಕೂ ಒಂದು ಪೂರ್ವಮಾದರಿಯನ್ನು (ಪ್ರಿಸಿಡೆಂಟ್) ಹಾಕಿಕೊಟ್ಟಿಲ್ಲ. ಏನಾದರೂ ಆಗಿದೆ ಅಂತಾದರೆ, ಯಾವುದರಲ್ಲಿ ಜಾಮೀನು ನೀಡಬೇಕು, ಯಾವುದರಲ್ಲಿ ನೀಡಬಾರದು ಎನ್ನುವ ಕ್ರಮಗಳನ್ನು ಇನ್ನೂ ಬಿಗಡಾಯಿಸಿದೆಯಷ್ಟೆ. ಜಾಮೀನನ್ನು ಪಡೆದುಕೊಳ್ಳುವ ಪ್ರಕರಣಗಳ ಮಾತು ಬೇರೆ.

ಜನರಿಗೆ ಸರ್ವೋಚ್ಚ ನ್ಯಾಯಾಲಯದ ಬಗ್ಗೆ ಇರುವ ಕಲ್ಪನೆಯನ್ನು ಅದು ಕೊಡವಿಕೊಳ್ಳಲು ಸಾಧ್ಯವಿಲ್ಲ. ಅದು ಒತ್ತಡದಿಂದ ಆಗುತ್ತಿರಬಹುದು ಅಥವ ಸೈದ್ಧಾಂತಿಕವಾಗಿ ಪರಿವರ್ತನೆಗೊಂಡಿರುವವರು ಸರ್ವೋಚ್ಚ ನ್ಯಾಯಾಲಯದಲ್ಲಿ ಇರಬಹುದು, ಹೇಗೇ ಆದರೂ ಸರ್ವೋಚ್ಚ ನ್ಯಾಯಾಲಯ ತನ್ನ ಕರ್ತವ್ಯವನ್ನು ಪಾಲಿಸುತ್ತಿಲ್ಲವಷ್ಟೆ.

ಪ್ರ: ಸರ್ವೋಚ್ಚ ನ್ಯಾಯಾಲಯ ನಮ್ಮನ್ನು ಕೈಬಿಟ್ಟಿದೆಯೇ?

ಉ: ಅದನ್ನು ನೀವು ಬಹಳ ಮೃದುವಾಗಿ ಹೇಳುತ್ತಿದ್ದೀರಿ.

ಪ್ರ: ಕೊಲೀಜಿಯಂ ವ್ಯವಸ್ಥೆಯಲ್ಲಿ ನ್ಯಾಯಾಧೀಶರು ಮತ್ತು ಕಾರ್ಯಾಂಗದ ನಡುವಿನ ಸಂಬಂಧ ಎಂತಹದ್ದು. ಅದನ್ನು ನೀವು ಸ್ವಲ್ಪ ಹೊತ್ತಿನ ಹಿಂದೆ ಟೀಕೆಮಾಡುತ್ತಿದ್ದಿರಿ; ಟೀಕೆ ಸರಿಯಾದದ್ದೇ.   ಆದರೆ, ವ್ಯವಸ್ಥೆಯಲ್ಲಿ ನ್ಯಾಯಾಧೀಶರು ತಮ್ಮನ್ನು ತಾವೇ ಆರಿಸಿಕೊಳ್ಳುತ್ತಾರಲ್ಲ?

ಸೆಪ್ಟೆಂಬರ್2014ರಲ್ಲಿ ಗೋಪಾಲ್ಸುಬ್ರಹ್ಮಣ್ಯಂ ಅವರ ವಿಷಯದಿಂದ ಆರಂಭವಾಗಿ ಸರ್ಕಾರ ಮತ್ತೆಮತ್ತೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೆಸರು ನಿರ್ದೇಶಿಸಲ್ಪಟ್ಟ ನ್ಯಾಯಾಧೀಶರನ್ನು ತಿರಸ್ಕರಿಸಿದೆ ಅಥವ ಅದರ ಬಗ್ಗೆ ಏನೂ ಮಾಡದೆ ಸರ್ವೋಚ್ಚ ನ್ಯಾಯಾಲಯವನ್ನು ವಿವಶವನ್ನಾಗಿಸಿದೆ. ಯಾವೊಂದು ಪ್ರಕರಣದಲ್ಲೂ ಸರ್ವೋಚ್ಚ ನ್ಯಾಯಾಲಯ ತಾನು ಸೂಚಿಸಿದ ಅಭ್ಯರ್ಥಿಯನ್ನು ಸರ್ಕಾರ ಸ್ವೀಕರಿಸಬೇಕೆಂದು ಒತ್ತಾಯಿಸಿಲ್ಲ. ಹೆಸರುಗಳು ಒಪ್ಪಿಗೆ ಪಡೆಯುವುದಿಲ್ಲ ಎನ್ನುವುದು ಇದು ಈಗಾಗಲೇ ತೀರ್ಮಾನವಾದ ವಿಷಯ (ಫೇಟ್ಅಕಂಪ್ಲಿ) ಎಂಬ ಭಾವನೆ ಹೊಂದಿದೆ.

ಉ: ಮತ್ತೆ ನಾನು ಸ್ವಲ್ಪ ಐತಿಹಾಸಿಕ ದೃಷ್ಟಿಕೋನವನ್ನು ಒದಗಿಸುತ್ತೇನೆ. ನ್ಯಾಯಾಧೀಶರ ಸಮಿತಿ (ಕೊಲೀಜಿಯಂ) ನ್ಯಾಯಾಧೀಶರನ್ನು ತಾನೇ ಯಾವಾಗಲೂ ಆರಿಸುತ್ತದೆಯಾದರೂ ಅದರ ಒಂದು ಕಣ್ಣು ಕಾರ್ಯಾಂಗದ ಕಡೆಗೆ ತಿರುಗಿರುತ್ತದೆ.

ನಿಮಗೆ ನ್ಯಾಯಮೂರ್ತಿ ಪಿ.ಎನ್.‌ ಭಗವತಿಯವರ ಸಾರ್ವಜನಿಕ ಪತ್ರ ನೆನಪಿರಬಹುದು, ನಂಬಲಸಾಧ್ಯವಾದಂತಹದ್ದು. ಅದರಲ್ಲಿ ಮಾಜಿ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರನ್ನು “ದೇಶದ ರಕ್ಷಕಿ” ಎಂದು ಹೊಗಳಿದ್ದರು. ಹಾಗಾಗಿ, ನಾವು ಇವತ್ತು ಏನನ್ನು ನೋಡುತ್ತಿದ್ದೇವೆಯೊ ಅದಕ್ಕೆ ಹಿಂದಿನ ಉದಾಹರಣೆಗಳು (ಪ್ರಿಸಿಡೆಂಟ್)‌ ಇವೆ.

ಆದರೆ, ಅವುಗಳ ಪ್ರಮಾಣ ಮತ್ತು ತೀವ್ರತೆಗಳು ಬಹಳ ತೀಕ್ಷ್ಣವಾಗಿ ಬದಲಾಗಿವೆ. ಒಂದು ಕಾರ್ಯಾಂಗ ಸರ್ಕಾರ 16 ತಿಂಗಳು ನೂರು ನ್ಯಾಯಾಧೀಶರ ನೇಮಕಾತಿಯನ್ನು ಸುಮ್ಮನೆ ತಡೆಹಿಡಿಯುತ್ತದೆ. ಸರ್ಕಾರಕ್ಕೆ ಪ್ರತಿಕೂಲವಾದ ಒಂದು ಹೆಸರನ್ನು ಸರ್ವೋಚ್ಚ ನ್ಯಾಯಾಲಯ ಮಣಿದು ಬಿಡುವವರೆಗೂ ಹಾಗೆ ಮಾಡುತ್ತದೆ. ಈ ಪ್ರಮಾಣದಲ್ಲಿ ಹೀಗಾಗುವುದನ್ನು ನಾವು ಕಂಡಿರಲಿಲ್ಲ. ನಾವು ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ ನ್ಯಾಯಮೂರ್ತಿ ಗೊಗೋಯ್ ಅವರ ನಡವಳಿಕೆಯನ್ನು ಗಮನಿಸಿದರೆ, ಜಗತ್ತಿನ ಯಾವುದೇ ನ್ಯಾಯಾಂಗದ ಚರಿತ್ರೆಯಲ್ಲಿ ಒಬ್ಬ ನ್ಯಾಯಾಧೀಶ ತನ್ನ ಪ್ರಕರಣದಲ್ಲಿ ತಾನೇ ನ್ಯಾಯಾಧೀಶರಾಗಿದ್ದ ಇನ್ನೊಂದು ಪ್ರಸಂಗ ಸಿಗುವುದು ಬಹಳ ಕಷ್ಟ. ನ್ಯಾಯವೆಂಬ ಮೂಲಭೂತವಾದ ನಂಬಿಕೆಯನ್ನು ಪಕ್ಕಕ್ಕೆ ಸರಿಸಲಾಗಿದೆ.

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ: ಮಾಜಿ ಸಿಜೆಐ ರಂಜನ್ ಗೊಗೊಯ್!
ಮಾಜಿ ಸಿಜೆಐ ರಂಜನ್ ಗೊಗೊಯ್

ಪ್ರ: ನಂತರ ನ್ಯಾಯಮೂರ್ತಿ ಗೊಗೋಯ್ರಾಜ್ಯಸಭೆಯ ನಾಮನಿರ್ದೇಶನ ಮಾಡಿದ ಸದಸ್ಯರಾದರು ಮತ್ತು ಅವರಿಗೆ ಹಿಂದೆ ನ್ಯಾಯಮೂರ್ತಿ ಪಿ. ಸದಾಶಿವಂ ಕೇರಳದ ರಾಜ್ಯಪಾಲರಾದರು.

ಉ: ಖಂಡಿತ. ಈ ಪದ್ಧತಿ ಮುಂದುವರೆಯುತ್ತದೆ.

ಪ್ರ: ನ್ಯಾಯಮೂರ್ತಿಗಳು ನ್ಯಾಯಪೀಠಗಳನ್ನು ಅಲಂಕರಿಸಿರುವಾಗ ಬಹಿರಂಗವಾಗಿ ಪ್ರಧಾನ ಮಂತ್ರಿಯವರನ್ನು ಹೊಗಳುತ್ತಿದ್ದಾರೆ. “ಕೈ ಉದ್ದದಷ್ಟು ದೂರಇಲ್ಲವಾಗಿದೆ, ಅಲ್ಲವೆ?

ಪ್ರ: “ಕೈ ಉದ್ದದಷ್ಟು ದೂರ” ಇಲ್ಲದಿರುವುದಷ್ಟೇ ಅಲ್ಲ, ಸರ್ಕಾರ ಮಾಡುತ್ತಿರುವುದಕ್ಕೆ ಸೈದ್ಧಾಂತಿಕ ಔಚಿತ್ಯವನ್ನೂ ಅವರು ನೀಡುತ್ತಿದ್ದಾರೆ. ರಾಷ್ಟ್ರೀಯ ಮಾನವಹಕ್ಕುಗಳ ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಅರುಣ್‌ ಮಿಶ್ರ ಬಹಿರಂಗವಾಗಿ ಸರ್ಕಾರದ ಕೋಮುವಾದವನ್ನು ಸಮರ್ಥಿಸುತ್ತಾರೆ.

ಪ್ರ: ಆದ್ದರಿಂದ ಸಾಂವಿಧಾನಿಕ ಮಹತ್ವವಿರುವ ಮುಖ್ಯವಾದ ಪ್ರಕರಣಗಳನ್ನು ವಿಚಾರಣೆ ನಡೆಸುವುದೇ ಇಲ್ಲ. ಸರ್ಕಾರಕ್ಕೆ ಮುಜುಗರವಾಗುತ್ತದೆ ಎಂದು ಎಲ್ಲರಿಗೂ ಅನ್ನಿಸುವ ಪ್ರಕರಣಗಳನ್ನು ವಿಚಾರಣೆ ನಡೆಸದೆ ಮುಜುಗರವನ್ನು ತಪ್ಪಿಸಿಕೊಳ್ಳಲಾಗುತ್ತಿದೆ.

ಉ: ಅದು ಮುಜುಗರವನ್ನು ತಪ್ಪಿಸಿಕೊಳ್ಳುವ ಒಂದು ದಾರಿ. ಅಲ್ಲದೆ, ಕಾರ್ಯಾಂಗವನ್ನು ಉತ್ತರದಾಯಿಯಾಗಿ ಮಾಡಲು ನಿರಾಕರಿಸುವುದೂ ಆಗಿದೆ.

ಪ್ರ: ಮತ್ತೊಮ್ಮೆ, ಇವೆಲ್ಲ ಸರ್ವೋಚ್ಚ ನ್ಯಾಯಾಲಯ ನಮ್ಮನ್ನು ಕೈಬಿಟ್ಟಿರುವ ಸಂಗತಿಗಳು. ಹೇಬಸ್ಕಾರ್ಪಸ್ಪ್ರಕರಣಗಳನ್ನು ವಿಚಾರಣೆ ನಡೆಸದಿದ್ದಾಗ, ನಾಗರಿಕರನ್ನು ಕೈಬಿಡುತ್ತದೆ; ಕಾಶ್ಮೀರ, ಸಿಎಎ ಅಥವ ಚುನಾವಣಾ ಬಾಂಡ್ಗಳು ಅಥವ ಬೇರೆ ಯಾವುದೆ ವಿಷಯಗಳನ್ನು ತ್ವರಿತವಾಗಿ ವಿಚಾರಣೆ ನಡೆಸದಿದ್ದಾಗ ಸಂವಿಧಾನವನ್ನು ಕೈಬಿಡುತ್ತದೆ.

ಉ: ಖಂಡಿತವಾಗಿ. ಅಲ್ಲದೆ, ಅದರ ತೀರ್ಪುಗಳಲ್ಲಿ ಸ್ಥಿರತೆ ಇಲ್ಲದಿದ್ದರೆ ಆಗಲೂ ಜನರನ್ನು ಅದು ಕೈಬಿಡುತ್ತದೆ.

ಪ್ರ: ಸಾಂವಿಧಾನಿಕ ಮಹತ್ವವಿರುವ ಪ್ರಕರಣಗಳನ್ನು ವಿಚಾರಣೆಮಾಡದೆ ಇರುವುದರ ಅತ್ಯಂತ ಕೆಟ್ಟ ಪರಿಣಾಮವೇನೆಂದರೆ ಸಾಂವಿಧಾನಿಕ ಅನೌಚಿತ್ಯವನ್ನು (ಕಾನ್ಸ್ಟಿಟ್ಯೂಷನಲ್ಇಮ್ಪ್ರೊಪ್ರೈಟಿ) ಈಗಾಗಲೇ ತೀರ್ಮಾನಿಸಿದ ವಿಷಯವೆಂದು (ಫೇಟ್ಅಕಂಪ್ಲಿ) ಒಪ್ಪಿಕೊಳ್ಳಲಾಗುತ್ತದೆ ಮತ್ತು ಕೆಲವು ಬಾರಿ ಅದನ್ನು ಬದಲಾಯಿಸಿದರೂ ಪ್ರಯೋಜನವಿಲ್ಲದಷ್ಟು ವಿಳಂಬವಾಗಿಬಿಟ್ಟಿರುತ್ತದೆ.

ಉ: ಅನೌಚಿತ್ಯವನ್ನು ಈಗಾಗಲೇ ತೀರ್ಮಾನಿಸಿದ ವಿಷಯವೆಂದು ಒಪ್ಪಿಕೊಳ್ಳುವುದು ಮಾತ್ರವಲ್ಲ ಅದು ಹುಟ್ಟುಹಾಕುವ, ಎಲ್ಲೆಡೆ ವ್ಯಾಪಿಸಿರುವ ಭಯದ ವಾತಾವರಣವನ್ನೂ ಒಪ್ಪಿಕೊಳ್ಳಲಾಗಿದೆ. ನಾನು ಈಗಾಗಲೆ ಹೇಳಿದಂತೆ, ಹಿಂದೆ ಕೆಲವರು ಅಪಾಯ ತಂದುಕೊಳ್ಳುವುದಕ್ಕೆ ತಯಾರಾಗಿದ್ದರು. “ಕಾರ್ಯಾಂಗ ನನ್ನ ಬೆನ್ನುಹತ್ತಿದರೆ ನ್ಯಾಯಾಂಗ ನನಗೆ ನ್ಯಾಯ ಒದಗಿಸುತ್ತದೆ” ಎಂದು ಅವರು ನಂಬಿದ್ದರು. ಆದರೆ, ನನಗೆ ಈಗ ಹಲವಾರು ತಿಂಗಳು ಅಥವ ವರ್ಷಗಳೇ ಜಾಮೀನು ಸಿಗುವುದಿಲ್ಲ ಎಂದು ಗೊತ್ತಾಗಿದೆ. ಸುಧಾ ಭಾರದ್ವಾಜ್‌ ಅವರ ವಿಷಯವನ್ನು ಗಮನಿಸಿದರೆ ಅವರಿಗೆ ಸುಮಾರು ಮೂರು ವರ್ಷಗಳ ನಂತರ ಜಾಮೀನು ಸಿಕ್ಕಿತು. ನಾಗರಿಕ ಸಮಾಜದಲ್ಲಿ ಅಪಾಯಕ್ಕೆ ಒಡ್ಡಿಕೊಳ್ಳುವ ಲೆಕ್ಕಾಚಾರ ನಾಟಕೀಯವಾಗಿ ಬದಲಾಗಿಬಿಟ್ಟಿದೆ. ಆದ್ದರಿಂದ, ಇದು ಅನೌಚಿತ್ಯವನ್ನು ಸಮರ್ಥಿಸುವ ಸಂಗತಿ ಮಾತ್ರವಲ್ಲ, ಭಯ ಹುಟ್ಟಿಸುವ ಸಾಧನವೂ ಕೂಡ.

ಪ್ರ: ಸರ್ವೋಚ್ಚ ನ್ಯಾಯಾಲಯದಪಾಪಪ್ರಜ್ಞೆಅಥವ ಜವಾಬ್ದಾರಿ ಮಹತ್ತರವಾದದ್ದು. ಅದು ಸಾಂವಿಧಾನಿಕವಾಗಿ ಪ್ರತಿಕ್ರಿಯೆ ನೀಡುತ್ತಿಲ್ಲವಾದ್ದರಿಂದ ನಮಗೆಲ್ಲ, ಅಂದರೆ ಪ್ರತ್ರಕರ್ತರು, ಕಾರ್ಯಕರ್ತರು (ಆಕ್ಟಿವಿಸ್ಟ್)‌ ಅಥವ ವಕೀಲರಿಗೆ ಭಯ ಮತ್ತು ಅಹಿತದ ಭಾವನೆ ಹೆಚ್ಚಾಗುತ್ತಿದೆಕೊನೆಯ ಆಸರೆ (ಫೈನಲ್ರಿಕೋರ್ಸ್)‌ ಮತ್ತು ಪರಿಹಾರ ನಮಗೆಲ್ಲ ನ್ಯಾಯಾಲಯಗಳ ಮೂಲಕ ಸಿಗುತ್ತಿಲ್ಲವಾದ್ದರಿಂದ ನಮಗೆ ಹೀಗೆ ಅನ್ನಿಸುತ್ತಿದೆ.

ಉ: ಒಂದು ಸಂಸ್ಥೆಯಾಗಿ ಸರ್ವೋಚ್ಚ ನ್ಯಾಯಾಲಯ ಮಾತ್ರ ಎಲ್ಲ ಅಧಿಕಾರಗಳನ್ನೂ ಹೊಂದಿದ್ದು ಅದು ಅತ್ಯಂತ ಸ್ವತಂತ್ರವಾಗಿದೆ. ಆದ್ದರಿಂದಲೇ ಅದು ಈಗ ಮಾಡುತ್ತಿರುವ ಅಪರಾಧ ಎಲ್ಲಕ್ಕಿಂತ ಕೆಟ್ಟದ್ದು. ವಿವಿಧ ಕಾರಣಗಳಿಗೆ ಬೇರೆ ಎಲ್ಲ ಸಂಸ್ಥೆಗಳೂ  ಕೆಲವು ರೀತಿಗಳಲ್ಲಿ ಸರ್ಕಾರದ ಮೇಲೆ ಅವಲಂಬಿಸಿವೆ. ಈ ಸಂಸ್ಥೆ ಪೂರ್ಣವಾಗಿ ತನ್ನನ್ನು ತಾನೇ ನಡೆಸಿಕೊಳ್ಳುತ್ತದೆ, ತಾತ್ವಿಕವಾಗಿಯಾದರೂ ತನ್ನವರನ್ನು ನೇಮಕಾತಿಮಾಡಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಈ ಅರ್ಥದಲ್ಲಿ, ಅದು ಶಾಮೀಲಾಗಿರುವುದು ಇನ್ನೂ ಹೆಚ್ಚು ಆಶ್ಚರ್ಯಕರವಾದ ಸಂಗತಿ.

ಪ್ರ: ಆದ್ದರಿಂದ, ಸರ್ವೋಚ್ಚ ನ್ಯಾಯಾಲಯಕುಸಿದಿರುವುದುಎಲ್ಲಕುಸಿಯುವಿಕೆಗಳಿಗಿಂತ ಅತ್ಯಂತ ಕೆಟ್ಟದ್ದು, ಅಲ್ಲವೆ?

ಉ: ಸರ್ವೋಚ್ಚ ನ್ಯಾಯಾಲಯ ತಾನೇ ಮಾಡಿಕೊಂಡಿರುವುದರಿಂದ, ಅದರ “ಕುಸಿಯುವಿಕೆ” ಎಲ್ಲಕ್ಕಿಂತ ಅತಿಕೆಟ್ಟ “ಕುಸಿಯುವಿಕೆ”ಯಾಗಿದೆ.

ಪ್ರ: ಈಗ ನಿಮ್ಮ ಜೊತೆ ಚರ್ಚಿಸಬೇಕಾದ ನಾಲ್ಕನೆಯ ವಿಷಯಕ್ಕೆ ಬರುತ್ತೇನೆ. ಅದು ಮುಸಲ್ಮಾನರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ. ಮೊದಲು ಅವರ ಮೇಲೆ ಲವ್ಜಿಹಾದ್ ನಡೆಸುತ್ತಿರುವುದಾಗಿ ಆಪಾದನೆ ಮಾಡಲಾಯಿತು, ನಂತರ ಅವರನ್ನುಗೋರಕ್ಷಣೆಯ ಹೆಸರಿನಲ್ಲಿ ಬಡಿದು ಸಾಯಿಸುವುದಕ್ಕೆ (“ಕೌ ಲಿಂಚಿಂಗ್”)‌ ಗುರಿ ಮಾಡಲಾಯಿತು. ಈಗ ಸ್ವಘೋಷಿತ ಧರ್ಮರಕ್ಷಕರು (ವಿಜಿಲಾಂಟೆ) ಮತ್ತು ಗಲಭೆಯ ಗುಂಪುಗಳು ಅವರನ್ನು ಗುರುಗ್ರಾಮದಲ್ಲಿ ಪ್ರಾರ್ಥನೆ ಮಾಡಲು ಬಿಡುತ್ತಿಲ್ಲ. ಗುಜರಾತಿನಲ್ಲಿ ಮಾಂಸಾಹಾರಿ ಆಹಾರ ಕೇಂದ್ರಗಳನ್ನು ನಡೆಸಲು ಬಿಡುವುದಿಲ್ಲ. ಉತ್ತರ ಪ್ರದೇಶದಲ್ಲಿ ಬಳೆ ಮಾರುವವರು, ತಿನಿಸುಗಳನ್ನು ಮಾರುವವರು ಮತ್ತು ತರಕಾರಿ ಮಾರುವವರು ತಮ್ಮ ವ್ಯಾಪಾರವನ್ನು ನಡೆಸಲು ಬಿಡುತ್ತಿಲ್ಲ. ಆದ್ದರಿಂದ, ಸರ್ಕಾರ ತನ್ನ ಮೌನದಿಂದ ಮತ್ತು ಕ್ರಮ ತೆಗೆದುಕೊಳ್ಳಲು ವಿಫಲವಾಗಿರುವುದರಿಂದ ಮಾತ್ರವಲ್ಲದೆ ಸಮಾಜವೂ ಭಾರತದಲ್ಲಿ ಮುಸಲ್ಮಾನರನ್ನು ಎರಡನೆಯ ದರ್ಜೆಯ ನಾಗರಿಕರನ್ನಾಗಿ ಮಾಡುತ್ತಿವೆಯೆ?

ಉ: ಖಂಡಿತವಾಗಿ. ಬಿಜೆಪಿಯ ಸೈದ್ಧಾಂತಿಕ ಯೋಜನೆ ಹಿಂದೂಗಳು ಸಂತ್ರಸ್ತರು ಎಂಬ ವಿಷಯವನ್ನು ಹೇಳುತ್ತಿರುತ್ತದೆ. ಒಂದು ವೇಳೆ ನೀವು ಈ ಪ್ರಶ್ನೆಯನ್ನು ಕೇಳಿದರೆ “ಹೇಗೆ ಸಂತ್ರಸ್ತರಾಗಿರುವ ಸ್ಥಿತಿಯನ್ನು ಮೀರಬಹುದು”, ಅದಕ್ಕೆ ಮುಚ್ಚುಮರೆಯಿಲ್ಲದೆ ಬರುವ ಉತ್ತರ “ಮುಸಲ್ಮಾನರ ಪ್ರಾಬಲ್ಯದ ಸಂಕೇತಗಳನ್ನು ಬುಡಮೇಲು ಮಾಡುವುದರಿಂದ ಹಿಂದೂಗಳ ಸಂತ್ರಸ್ತರಾಗಿರುವ ಸ್ಥಿತಿಯನ್ನು ಮೀರಬಹುದು” ಎಂದು. ಆದ್ದರಿಂದ, ದೇವಸ್ಥಾನಗಳ ಬಗ್ಗೆ ಗೀಳು ಹುಟ್ಟಿಕೊಂಡಿದೆ ಮತ್ತು ಮುಸಲ್ಮಾನರ ಮೇಲೆ ಹಿಂದೂಗಳ ಸಾಂಸ್ಕೃತಿಕ ದಬ್ಬಾಳಿಕೆಯನ್ನು ಮತ್ತೆ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಸೈದ್ಧಾಂತಿಕ ಯೋಜನೆಯ ಬಗ್ಗೆ ಗುಟ್ಟಾಗಿ ಏನೂ ಕೆಲಸವಾಗುತ್ತಿಲ್ಲ. ಆದರೂ, ನಾಗರಿಕ ಸಮಾಜದ ಬಹುತೇಕ ಜನರು ಕೋಪಗೊಂಡು ಇದರ ವಿರುದ್ಧ ಅಗತ್ಯವಿರುವ ಪ್ರಮಾಣದಲ್ಲಿ ಪ್ರತಿಭಟಿಸುತ್ತಿಲ್ಲ. ಇದಕ್ಕೆ ಭಾಗಶಃ ಕಾರಣ ನಾವು ಅನೇಕರು ಇದು ನಮ್ಮನ್ನು ಬಾಧಿಸುವುದಿಲ್ಲ ಎಂದು ತಿಳಿದಿದ್ದೇವೆ. ಎಂಭತ್ತು ಪ್ರತಿಶತ ಭಾರತೀಯರು ನಾವು ಸುರಕ್ಷಿತವಾಗಿದ್ದೇವೆ ಎಂದು ಭಾವಿಸಿದ್ದಾರೆ. ಈಗ ಇದು ಒಂದು ಭ್ರಾಂತಿಯಾಗಿ ಪರಿಣಮಿಸಬಹುದು, ಬಹಳ ಸಲ ಹೀಗಾಗುತ್ತದೆ. ಸರ್ವಾಧಿಕಾರಿ ಸರ್ಕಾರಗಳು ಒಮ್ಮೆ ಶುರುಮಾಡಿಕೊಂಡರೆ ಅವು ಒಂದು ಸಮುದಾಯಕ್ಕೆ ನಿಲ್ಲಿಸುವುದಿಲ್ಲ. ನನ್ನ ಬದುಕಿನಲ್ಲಿ ಇಷ್ಟು ಬಹಿರಂಗವಾಗಿ ಕೋಮುವಾದದ ವಿಷವನ್ನು ಈ ರೀತಿಯಲ್ಲಿ ಸಮರ್ಥಿಸುತ್ತಿರುವುದನ್ನು ಎಂದಿಗೂ ಕಂಡಿಲ್ಲ. ಇದನ್ನು ರಾಜಕೀಯ ವಲಯಗಳಲ್ಲಿ ಮಾತ್ರವಲ್ಲ, ನಮಗೆ ತಿಳಿದಿರುವ ಜನರು, ಅಂದರೆ ನಮ್ಮ ಸ್ನೇಹಿತರು, ಕುಟುಂಬದವರು ಮತ್ತು ಭಾರತದ ಪ್ರಭಾವಶಾಲಿ ಉತ್ಕೃಷ್ಟರಲ್ಲೂ ಕಾಣುತ್ತೇವೆ.

ಪ್ರ: ಮೋದಿ ಸರ್ಕಾರ ಇದನ್ನು ಹೊರಗೆಳೆದಿದೆಯೆ? ಇದು ಯಾವಾಗಲೂ ಇತ್ತು ಮತ್ತು ಅಂತರ್ಗತವಾಗಿತ್ತು ಎಂದು ಭಾವಿಸುತ್ತೇನೆ. ಆದರೆ, ಇದನ್ನು ಅದುಮಿಡಲಾಗಿತ್ತು. ಇದು ಒಪ್ಪುವಂತಹ ವಿಷಯವಲ್ಲ ಎಂದು ಪರಿಗಣಿಸಿ ಜನರು ಇದಕ್ಕೆ ಧ್ವನಿ ಕೊಡುತ್ತಿರಲಿಲ್ಲ. ಇದರ ಬಗ್ಗೆ ಮಾತನಾಡುವುದನ್ನು ಮತ್ತು ಕೆಲವೊಮ್ಮೆ ಜಂಬ ಕೊಚ್ಚುವುದನ್ನು ಒಪ್ಪುವ ವಿಷಯವನ್ನಾಗಿ ಮೋದಿ ಹೇಗೋ ಮಾಡಿಬಿಟ್ಟಿದ್ದಾರೆ.

ಉ: ಮೋದಿ ಇದನ್ನು ಕೇವಲ ಒಪ್ಪುವ ವಿಷಯವನ್ನಾಗಿ ಮಾಡಿಲ್ಲ. ಇದು ಈಗ ಅವರ ರಾಜಕೀಯ ಯಶಸ್ಸಿಗೆ ದಾರಿಯಾಗಿದೆ. ನೀವು ಅನುರಾಗ್‌ ಠಾಕುರ್‌, ಕಪಿಲ್‌ ಮಿಶ್ರ ಅಥವ ಸಾಧ್ವಿ ಪ್ರಾಗ್ಯ ಇವರುಗಳನ್ನು ನೋಡಿ. ಬಿಜೆಪಿಯೊಳಗೇ ಯೋಗಿ ಆದಿತ್ಯನಾಥ್‌ ತರಹದವರು ಹಿಂದಿನಿಂದಲೂ ಇದ್ದರು. ಇವರೆಲ್ಲ ಈ ರೀತಿಯ ಕೋಮುವಾದಿ ವಿಷವನ್ನು ಪ್ರದರ್ಶಿಸಿ ಅಧಿಕಾರದ ರಚನೆಯಲ್ಲಿ ಮೇಲಕ್ಕೇರಿರುವ ಅನುಭವಿಗಳು. ನಮ್ಮ ರಾಜಕೀಯ ವಲಯಗಳಲ್ಲಿ ಮತ್ತು ಈಗ ವೃತ್ತಿಪರ (ಪ್ರೊಫೆಷನಲ್)‌ ವಲಯಗಳಲ್ಲಿ ಕೂಡ ಯಾವ ರೀತಿಯ ವಿಷಯಗಳು ಖಂಡಿತವಾಗಿ ಒಪ್ಪಲಾರದವು, ಆದರೆ ಅವು ಮೇಲಕ್ಕೆ ಏರುವ ದಾರಿಗಳು ಎಂದು ನಾವು ತಿಳಿದಿದ್ದೆವೊ ಅವು ಈಗ ಒಮ್ಮಿಂದೊಮ್ಮೆಲೆ ಹಾಗು ಹೆಚ್ಚಿನ ಪ್ರಮಾಣದಲ್ಲಿ ಮುನ್ನುಗ್ಗುತ್ತಿವೆ.

ಪ್ರ: ಕಳೆದ ಏಳು ವರ್ಷಗಳಲ್ಲಿ ಬಹಳವಾಗಿ ಕಾಣುತ್ತಿರುವುದು ಪದೇಪದೇ ಕೋಮುವಾದಿ ಸಂದೇಶಗಳಿಗೆಡಾಗ್ವಿಝ಼ಲ್‌ʼ) ಮೊರೆಹೋಗುವುದು. ಇದೊಂದು ರೂಢಿಯಾಗಿಬಿಟ್ಟಿದೆ. ಯೋಗಿ ಆದಿತ್ಯನಾಥ್ಮೇಲಿಂದಮೇಲೆಅಬ್ಬ ಜಾನ್”‌ ಎಂದು ಹೇಳುತ್ತಿರುತ್ತಾರೆ. ಅದರ ಅರ್ಥ ಏನೆಂದು ನಮಗೆಲ್ಲರಿಗೂ ಗೊತ್ತಿದೆ. ಪ್ರಧಾನ ಮಂತ್ರಿಗಳು ಔರಂಗಜ಼ೇಬ್ಹೆಸರನ್ನು ಅಗೆದು ಹೊರಗೆ ತೆಗೆದಾಗ ಅದೇ ರೀತಿಯ ಗಮನಸೆಳೆಯುವ ಉದ್ದೇಶ ಹೊಂದಿರುತ್ತಾರೆ. ಈಗ ವಿಶ್ವ ಹಿಂದೂ ಪರಿಷತ್ತಿನ ಮುಖ್ಯಸ್ಥರುಇಸ್ಲಾಂ ಒಂದು ಅರ್ಬುದಮತ್ತು ಅದಕ್ಕೆರಾಸಾಯನಿಕ ಚಿಕಿತ್ಸೆ (ಕೀಮೋಥರಪಿ) ಅಗತ್ಯವಿದೆ ಎಂದು ಸಾರಿದ್ದಾರೆ. ನಮ್ಮ ಬಾಲ್ಯದಲ್ಲಿ ಅಥವ 20-30 ವರ್ಷಗಳ ಹಿಂದೆ ರೀತಿಯ ನಡವಳಿಕೆಗೆ ಒಪ್ಪಿಗೆಯಾಗುತ್ತಿರಲಿಲ್ಲ. ಸಾರ್ವಜನಿಕವಾಗಿ ಅದನ್ನು ಸಹಿಸಿಕೊಳ್ಳಲಾಗುತ್ತಿರಲಿಲ್ಲ, ಆದರೆ ಈಗ ಅದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ಭಾರತ ಎಷ್ಟು ಮಟ್ಟಿಗೆ ಬದಲಾಗಿದೆ ಎನ್ನುವುದಕ್ಕೆ ಇದೊಂದು ಸಂಕೇತವೇ?

ಉ: ಇದು ಭಾರತದಲ್ಲಿ ಮಾತ್ರವಲ್ಲ, ಐತಿಹಾಸಿಕ ದೃಷ್ಟಿಯಿಂದ ನೋಡಿದರೆ, ಇಡೀ ದಕ್ಷಿಣ ಏಷ್ಯದಲ್ಲಿ ಒಂದು ಸಂಕೇತವಾಗಿಬಿಟ್ಟಿದೆ. ಪಾಕಿಸ್ತಾನವು ಇಸ್ಲಾಮೀಕರಣಗೊಳ್ಳುವುದು ಕಡಿಮೆಯಾಗುತ್ತದೆ ಎಂದು ನಾವೆಲ್ಲ ತಿಳಿದಿದ್ದೆವು. ಅದರ ಕಾವು ಆರಿಹೋಗುತ್ತದೆ ಎಂದುಕೊಂಡಿದ್ದೆವು. ಆದರೆ, ಅದರ ವೇಗ ಮತ್ತು ತೀವ್ರತೆ ಹೆಚ್ಚುತ್ತಿವೆ. ಆದ್ದರಿಂದ, ನಾವೆಲ್ಲ ಒಂದು ಹೆಜ್ಜೆ ಹಿಂದಕ್ಕೆ ಹೋಗಿ, “ದಕ್ಷಿಣ ಏಷ್ಯವಿಗೆ ಸಮಗ್ರವಾಗಿ ಏನಾಗುತ್ತಿದೆ?” ಎಂಬ ಪ್ರಶ್ನೆಯನ್ನು ಕೇಳಬೇಕು. 1947ರಲ್ಲಿ ನಡೆದ ವಿಭಜನೆಯೆಂಬ ಇತ್ಯರ್ಥದಿಂದ ಭಾರತ ಒಂದು ಧರ್ಮನಿರಪೇಕ್ಷ ಗಣರಾಜ್ಯವಾಗುತ್ತದೆ ಮತ್ತು ಪಾಕಿಸ್ತಾನ ಒಂದು ಇಸ್ಮಾಮೀಯ ಪ್ರಭುತ್ವವಾಗುತ್ತದೆ, ಆದರೆ ಅದು ಒಂದು ಮಾಡರೇಟ್ಆದ ಇಸ್ಲಾಮೀಯ ಪ್ರಭುತ್ವವಾಗಿ, ಆಧುನಿಕ ವೃತ್ತಿಪರತೆಯ ಸಂಸ್ಥೆಗಳನ್ನು ಹೊಂದಿರುತ್ತದೆ ಎಂಬ ಆಶಯ ಹೊಂದಿದ್ದೆವು. ಇವೆರಡರ ಜೊತೆಗೆ ಈಗ ತನ್ನ ಆರ್ಥಿಕ ಯಶಸ್ಸಿನ ವೈಭವದಲ್ಲಿ ಮೆರೆಯುತ್ತಿರುವ ಬಾಂಗ್ಲಾದೇಶವನ್ನೂ ಸೇರಿಸಿ ನೋಡಿದರೆ, ಈ ಇಡೀ ಯೋಜನೆ ತೀವ್ರವಾದ ಸೈದ್ಧಾಂತಿಕ ಒತ್ತಡದಿಂದ ತನ್ನೊಳಗೇ ಬಳಲುತ್ತಿದೆ.

ಪ್ರ: ಶ್ರೀಲಂಕೆಯ ವಿಷಯದಲ್ಲೂ ಇದು ನಿಜವೇ?

ಉ: ಶ್ರೀಲಂಕೆಯಲ್ಲಿ ಇದು ಬಹಳ ಕಾಲದಿಂದ ನಡೆಯುತ್ತಿದೆ. ದಕ್ಷಿಣ ಏಷ್ಯದ ದೇಶಗಳಲ್ಲಿ 1947ರ ಇತ್ಯರ್ಥಕ್ಕೆ ಏನಾಗುತ್ತಿದೆ? ಅಂದರೆ, ಒಂದು ಆಧುನಿಕ ಸಾಮಾಜಿಕ ಒಪ್ಪಂದದಲ್ಲಿ ನಾವು ಒಬ್ಬರು ಮತ್ತೊಬ್ಬರ ಸ್ವಾತಂತ್ರ್ಯನ್ನು ಮತ್ತು ವೈಯಕ್ತಿಕ ಘನತೆಯನ್ನು ಗೌರವಿಸುವ ವ್ಯವಸ್ಥೆಯನ್ನು ರೂಪಿಸುತ್ತೇವೆ ಎಂಬ ಇತ್ಯರ್ಥವಿತ್ತು. ಆದರೆ, ಈಗ ಎಲ್ಲ ಕಡೆ ಈ ಒಪ್ಪಂದ ಸಂಪೂರ್ಣವಾಗಿ ಸಾಮೂಹಿಕ ಆತ್ಮರತಿಗೆ (ನಾರ್ಸಿಸಿಸಂ) ಅಧೀನವಾಗಿದೆ.

ಪ್ರ: 20–30 ವರ್ಷಗಳ ಹಿಂದೆ ನಾವು ಕಲ್ಪಿಸಿಕೊಳ್ಳಲು ಸಹ ಅಸಾಧ್ಯವಾಗಿದ್ದ ರೀತಿಯಲ್ಲಿ ಭೂಮಿಯ ಭಾಗದಲ್ಲಿ ಬಹುಸಂಖ್ಯಾತರ ಪ್ರಾಬಲ್ಯ (ಮೆಜಾರಿಟೇರಿಯಾನಿಸಂ) ಹರಡುತ್ತಿದೆ. ನಿಮ್ಮ ಮಾತನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಆದರೆ, ನಮ್ಮ ಮಾತನ್ನು ಭಾರತಕ್ಕೆ ಮಾತ್ರ ಸೀಮಿತಗೊಳಿಸಿವುದಾದರೆ, ಪ್ರಧಾನ ಮಾಂತ್ರಿ ಅಥವ ಉತ್ತರಪ್ರದೇಶದ ಮುಖ್ಯಮಂತ್ರಿಯಂತಹ ರಾಜಕಾರಣಿಗಳು ಮುಸಲ್ಮಾನರನ್ನುಅಬ್ಬಾ ಜಾನ್”‌ ಎನ್ನುವುದು ಅಥವ ಔರಂಗಜ಼ೇಬ್ಬಗ್ಗೆ ಪ್ರಸ್ತಾಪಮಾಡಿ ಹಂಗಿಸುವುದನ್ನು ಮಾಡುವಾಗ, ಯಾರಿಗೆ ಬೊಟ್ಟುಮಾಡಿ ಇವುಗಳನ್ನು ಹೇಳುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತು. ರೀತಿಯ ವರ್ತನೆ ಹಿಂದೆ ಯಾವಾಗಲಾದರೂ ನಡೆದಿರುವುದು ನಿಮಗೆ ನೆನಪಿದೆಯೆ?  

ಉ: ಎರಡು ಉದಾಹರಣೆಗಳು ಇವೆ. 1930-40ರ ದಶಕಗಳಲ್ಲಿ ಇದು ಬಹಳ ವ್ಯಾಪಕವಾಗಿ ಬಿಟ್ಟಿತ್ತು ಮತ್ತು ಅಂತಹ ನಾಗರಿಕ ಸಮಾಜದ ಪರಿಣಾಮವಾಗಿ ಏನಾಯಿತು ಎಂದು ನಮಗೆ ಗೊತ್ತಿದೆ.

ಪ್ರ: ಅದೃಷ್ಟ, ಅದು ನಾವು ಹುಟ್ಟುವುದಕ್ಕೆ ಮುಂಚೆಯಾದದ್ದು, ಅಲ್ಲವೆ?

ಉ: ಹೌದು, ಆದರೆ ಜನರನ್ನು ಆ ರೀತಿ ಸಂಘಟಿಸುವುದರಿಂದ ನಾವು ಕಲಿಯಬೇಕಾದ ಪಾಠಗಳು ಇವೆ. ಉದಾಹರಣೆಗೆ, ಒಂದು ರೀತಿಯಲ್ಲಿ ರಾಮ ಜನ್ಮಭೂಮಿ ಚಳವಳಿಯ ವಿಷಯದಲ್ಲಿ, ಇಡೀ ಚಳವಳಿ ನಿರ್ದಿಷ್ಟ ಜನರಿಗೆ ಕೋಮುವಾದಿ ಸಂದೇಶ ನೀಡಿತು (ʼಡಾಗ್‌ ವಿಜ಼ಲ್‌ʼ* ಆಗಿತ್ತು). ಆದರೆ, ಈ ಮಟ್ಟಕ್ಕೆ ಅದಕ್ಕೆ ಚುನಾವಣೆಯಲ್ಲೂ ಸಮರ್ಥನೆ ಬರುತ್ತದೆ ಮತ್ತು ವ್ಯಾಪಕವಾದ ಅಂಗೀಕಾರ ಸಿಗುತ್ತದೆ ಎಂದು ನಾವು ಯಾವತ್ತೂ ತಿಳಿದಿರಲಿಲ್ಲ.

ಪ್ರ: ಈ ಮಟ್ಟದ ಅಂಗೀಕಾರ ಚಳವಳಿಗೆ ಮೋದಿ ಕೊಟ್ಟಿರುವ ಉಡುಗೊರೆ.

ಉ: ಹೌದು, ಅದು ಆ ಚಳವಳಿಗೆ ಮೋದಿ ಕೊಟ್ಟಿರುವ ಉಡುಗೊರೆ. ಇಲ್ಲಿ ಒಂದು ಆಸಕ್ತಿಕರವಾದ ಪ್ರಶ್ನೆ ಹುಟ್ಟುತ್ತದೆ –  ಎಷ್ಟರ ಮಟ್ಟಿಗೆ ಜನರು ಮೋದಿಯವರನ್ನು ನಂಬಿರುವುದರಿಂದ ಹಾಗಾಗಿರುವುದಕ್ಕೆ ಸಾಧ್ಯವಾಗಿದೆ? ಏಕೆಂದರೆ ಆ ಸಿದ್ಧಾಂತವನ್ನು ಅವರ ವ್ಯಕ್ತಿತ್ವದ ವರ್ಚಸ್ಸು ಮುನ್ನಡೆಸುತ್ತಿದೆ. ಇನ್ನೊಂದು, ಎಷ್ಟರ ಮಟ್ಟಿಗೆ ಜನ ಸೈದ್ಧಾಂತಿಕವಾಗಿ ಬದಲಾವಣೆ ಹೊಂದಿದ್ದಾರೆ?

ಬಾಬರಿ ಮಸೀದಿ ದ್ವಂಸ ಮಾಡಿದವರಿಗೆ ಶಿಕ್ಷೆ ಪ್ರಕಟಿಸಿದ ವಿಶೇಷ ನ್ಯಾಯಾಲಯ: ಶಿಕ್ಷೆ ಏನು ಗೊತ್ತೇ?
PC: The Federal

ಪ್ರ: ಉತ್ತರಪ್ರದೇಶದ ಚುನಾವಣೆಗೆ ಪ್ರಚಾರ ಶುರುವಾಗಿರುವುದರಿಂದ ಮುಸಲ್ಮಾರನ್ನು ರಕ್ಕಸರು ಎಂದು ಬಣ್ಣಿಸಿ (ಡೆಮೊನೈಜ಼್) ಮತದಾರರನ್ನು ಆಕರ್ಷಿಸುವ ಹುನ್ನಾರ ನಡೆಯುತ್ತಿದೆ.   ರಾಜ್ಯದಲ್ಲಿರುವ 80 ಪ್ರತಿಶತ ಹಿಂದುಗಳು ಮತ್ತು 20 ಪ್ರತಿಶತ ಮುಸಲ್ಮಾನರನ್ನು ಧ್ರುವೀಕರಿಸುವುದು ಮತ್ತು ಪ್ರತ್ಯೇಕಿಸುವುದು ನಡೆಯುತ್ತಿದೆ. ಜನರಿಗೆ ಬೇಕಾದ ವಿಷಯಗಳ ಬಗ್ಗೆಅಂದರೆ ಆರ್ಥಿಕ ಪ್ರಗತಿ, ಒಳ್ಳೆಯ ಆಡಳಿತ ಅಥವ ಕೋವಿಡ್-‌19 ಸಾಂಕ್ರಾಮಿಕವನ್ನು ಹೇಗೆ ನಿಭಾಯಿಲಾಯಿತು ಚರ್ಚೆನಡೆಯುತ್ತಿಲ್ಲ. ಜನರ ನಡುವೆಯಿರುವ ಕೋಮು ಸಂಬಂಧದ ಮೇಲ್ಮೈಯನ್ನು ಕೆರೆದು ಸಮಸ್ಯೆಯನ್ನು ಉಲ್ಬಣಗೊಳಿಸಲಾಗುತ್ತಿದೆ.

ಉ: ಅವರು ಈಗಾಗಲೇ ಆ ಕೋಮು ಧ್ರುವೀಕರಣವನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾವು ಒಂದು ವಿಷಯದ ಬಗ್ಗೆ ಹುಶಾರಾಗಿರಬೇಕು. ಇಲ್ಲೇ ನಾವು ಮೋದಿಯವರ ಸಾಮರ್ಥ್ಯವನ್ನು ಕಮ್ಮಿ ಅಂದಾಜುಮಾಡುತ್ತೇವೆ – ಈಗ “ಇದು ಅಥವ ಅದು” ಎಂಬ ಪರಿಸ್ಥಿತಿಯಿಲ್ಲ. ಎರಡೂ ಇವೆ. ಅನೇಕ ಜನರಿಗೆ ಒಂದೇ ಸಮಯದಲ್ಲಿ ಆರ್ಥಿಕ ವಿಷಯಗಳ ಮತ್ತು ಕೋಮುವಾದಿ ವಿಷಯಗಳ ಬಗ್ಗೆ ಮಾತನಾಡವುದರಲ್ಲಿ ಯಾವ ಅಸಮಂಜಸತೆಯೂ ಕಾಣುವುದಿಲ್ಲ. ನಾವು ಹೇಗೊ ನಮ್ಮ ಸಂವಾದವನ್ನು ಮತ್ತೆ ಆರ್ಥಿಕ ವಿಷಯಗಳ ಕಡೆಗೆ ತಿರುಗಿಸಿಬಿಟ್ಟರೆ ಈ ಅಂತರ್ಗತವಾಗಿರುವ ಕೋಮು ಧ್ರುವೀಕರಣ ತಾನಾಗಿಯೇ ಹೊರಟುಹೋಗುತ್ತದೆ ಎನ್ನುವ ಭ್ರಮೆಯನ್ನು ಹೊಂದಿರಬಾರದು.

ಪ್ರ: ಈಅಂತರ್ಗತವಾಗಿರುವ ಕೋಮುವಾದಿ ಧ್ರುವೀಕರಣಈಗ ಆಚೆಗೆ ಬಂದಿದೆ ಮತ್ತು ಇದು ಭಾರತದಲ್ಲಿ ಇನ್ನೂ ಕೆಲವು ದಶಕಗಳು ಇರುತ್ತದೆ. ಸುಮ್ಮನೆ ಮಾಯವಾಗಿಬಿಡುವುದಿಲ್ಲ, ಅಲ್ಲವೆ?

ಉ: ಇದು ತೆಗೆದುಹಾಕಲು ಬಹಳ ಕಷ್ಟಕರವಾದಂತಹ ವಿಷ. ನಾನು ಆಗಲೆ ಹೇಳಿದ ಹಾಗೆ, 1930 ಮತ್ತು 40ರ ದಶಕಗಳನ್ನು ಯಾಕೆ ನೆನಪಿಸಿಕೊಳ್ಳುತ್ತಿರುತ್ತೇವೆ ಅಂದರೆ, ಆ ಪ್ರಕ್ರಿಯೆಯ ಪರಿಣಾಮವಾಗಿ ಭಾರತ ವಿಭಜನೆಗೊಂಡಿದ್ದು ಮಾತ್ರವಲ್ಲ ಅದರ ಜೊತೆಗೆ ಭೀಕರವಾದ ಹಿಂಸಾಚಾರವೂ ನಡೆಯಿತು.

ಪ್ರ: ಅದೇ ತರಹದ್ದು ಏನಾದರೂ ಮತ್ತೆ ಆಗಬಹುದಲ್ಲವೆ?

ಉ: ಅದೇ ತರಹ ಮತ್ತೆ ಹಿಂಸಾಚಾರ ನಡೆಯುವ ಎಲ್ಲ ಸಾಧ್ಯತೆಯಿದೆ. ನನ್ನ ವಿಶ್ಲೇಷಣೆಯ ಪ್ರಕಾರ ಮಹಾತ್ಮ ಗಾಂಧಿಯವರ ಹತ್ಯೆಯಾಗದೆ ಇದ್ದಿದ್ದರೆ, ಬಹುಶಃ ಆ ಪ್ರಮಾಣದ ಹಿಂಸಾಚಾರ ನಿಲ್ಲುತ್ತಿರಲಿಲ್ಲ. ಒಮ್ಮೆ ಈ ಕೋಮಿನ ನಂಜು ನಾಗರಿಕ ಸಮಾಜದಲ್ಲಿ ನೆಲೆಸಿಬಿಟ್ಟರೆ ಅದು ಏನನ್ನು ಹೊರಗೆಡವಬಹುದು ಎನ್ನುವುದರ ಬಗ್ಗೆ ನಾವು ಎಚ್ಚರಿಕೆಯನ್ನು ಮರೆತುಬಿಡಬಾರದು.

ಪ್ರ: ಹಾಗಾದರೆ, ಭಾರತ ಇದರಿಂದಾಗಿ ತನ್ನನ್ನು ಒಡೆದುಕೊಳ್ಳುತ್ತಿದೆ, ಅಲ್ಲವೆ?

ಉ: ಭಾರತ ತನ್ನನ್ನು ಬಹಳವಾಗಿ ಒಡೆದುಕೊಳ್ಳುತ್ತಿದೆ. ಭಾರತದ ಬಗ್ಗೆ ನಾನು ಹಿಂದೆಂದೂ ಇಷ್ಟು ಚಿಂತಾಕ್ರಾಂತನಾಗಿರಲಿಲ್ಲ. ಕೋಮುವಾದದ ಪ್ರಕ್ರಿಯೆಗಳು ಎಲ್ಲಿಗೆ ಹೋಗಿ ಮುಟ್ಟುತ್ತವೆಯೋ ಎನ್ನುವುದರ ಬಗ್ಗೆ ನನಗೆ ದುಃಸ್ವಪ್ನಗಳು ಬರುತ್ತವೆ.

ಪ್ರ: ನಿಮ್ಮ ದುಃಸ್ವಪ್ನ ಯಾರ ತರಹದ್ದು? ಒಂದು ರೀತಿಯ ಛಿದ್ರಗೊಳ್ಳುವಿಕೆಯೇ? (ಬಾಲ್ಕನೈಜ಼ೇಷನ್)‌ ಅಥವ ಆಂತರಿಕ ಯುದ್ಧವೇ? (ಸಿವಿಲ್ವಾರ್)

ಉ: ಅದು ರಾಜಕೀಯ ಸ್ವರೂಪ ಪಡೆದುಕೊಂಡರೆ ದೊಡ್ಡ ಪ್ರಮಾಣದ ಹಿಂಸಾಚಾರವಾಗುತ್ತದೆ. ಭಾರತದಲ್ಲಿ ಬೇರೆಬೇರೆ ಸಮುದಾಯಗಳು ಹರಡಿಕೊಂಡಿರುವುದನ್ನು ಗಮನಿಸಿದರೆ ಅದು ಎಂದಿನಂತೆ ಪ್ರತ್ಯೇಕಗೊಳ್ಳುವ ಚಳವಳಿ ಅಥವ ಇನ್ನೊಂದು ವಿಭಜನೆಯ ಸ್ವರೂಪ ಪಡೆಯುವುದಿಲ್ಲವೆಂದು ತೋರುತ್ತದೆ. ಅದು ರಾಜಕೀಯವಾಗಿ ಕಾರ್ಯಸಾಧ್ಯವಾದದ್ದಲ್ಲ. ಆದರೆ, ನಮ್ಮ ದೇಶ ಹೆಚ್ಚುಹೆಚ್ಚಾಗಿ ಪ್ರಭುತ್ವ ಪ್ರಚೋದನೆಗೊಳಿಸುವ ಹಿಂಸಾಚಾರ ನಡೆಯುವ ದೇಶವಾಗಬಹುದು. ಈ ದೇಶವನ್ನು ತಮ್ಮದು ಎಂದು ತಿಳಿದುಕೊಳ್ಳಲು ಜನಸಂಖ್ಯೆಯ ಸಾಕಷ್ಟು ಭಾಗದ ಜನರಿಗೆ “ಅವಕಾಶ” ಕೊಡದೆ ಹೋದರೆ ಅವರು ಸಂಪೂರ್ಣವಾಗಿ ಪರಕೀಯತೆಯನ್ನು ಅನುಭವಿಸಬಹುದು. ಆ ಜನ ಈ ದೇಶವನ್ನು ತಮ್ಮದು ಎಂದು ಭಾವಿಸಿದರೂ, ಅದಕ್ಕೆ ಅವಕಾಶ ನೀಡದೆ ತಡೆಯುವುದು ಅದು. ಅದು ಒಂದು ರೀತಿಯ ಹಿಂಸಾಚಾರದ ಪ್ರಕ್ರಿಯೆಯನ್ನೇ ಆರಂಭಿಸಬಹುದು ಅಥವ ಅದಕ್ಕೆ ಪ್ರೇರಕ ಶಕ್ತಿಯನ್ನು ಶುರುಮಾಡಬಹುದು, ನಾವು ಈವರೆಗೆ ನೋಡದಂತಹ ಪ್ರಮಾಣದಲ್ಲಿ ಹಿಂಸಾಚಾರವಾಗಬಹುದು.

ಪ್ರ: ನಾವು 200 ದಶಲಕ್ಷ ಜನರ ಬಗ್ಗೆ ಮಾತನಾಡುತ್ತಿದ್ದೇವೆ. ಕೇವಲ ಮುಸಲ್ಮಾನರ ಜನಸಂಖ್ಯೆಯ ಬಗ್ಗೆ ಮಾತನಾಡುತ್ತಿದೇವೆ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕು.

ಉ: ಒಮ್ಮೆ ಈ ರೀತಿಯ ಹಿಂಸಾಚಾರವನ್ನು ಸಾಂಸ್ಥೀಕರಿಸಿದರೆ (ಇನ್‌ಸ್ಟಿಟ್ಯೂಷನಲೈಜ಼್), ಆಗ ಅದು ನಿರ್ದಿಷ್ಟ ಸಮುದಾಯಗಳನ್ನು ಮಾತ್ರ ಗುರಿಮಾಡುವುದಿಲ್ಲ. ಅದು ಸಮಾಜವನ್ನು ಇಡಿಯಾಗಿ ವ್ಯಾಪಿಸುತ್ತದೆ ಮತ್ತು ಸಾಧಾರಣವಾದ ವಿಷಯವಾಗಿಬಿಡುತ್ತದೆ.

ಪ್ರ: ಮೋದಿ ಬಿಟ್ಟುಹೋಗುವ ಅತಿದೊಡ್ಡಪರಂಪರೆಇದಾಗಿರುತ್ತದೆ. ಅಂದರೆ, ಭಾರತವನ್ನು ಬಹಿರಂಗವಾಗಿ ಕಾಣುವ ಹಾಗೆ ಕೋಮುವಾದೀಕರಿಸುವುದು.

ಉ: ಇದೇ ರೀತಿಯ ಪ್ರವೃತ್ತಿ ಮುಂದುವರೆದರೆ, ಹಾಗಾಗುವುದು ಖಂಡಿತ.

ಪ್ರ: ಮುಗಿಸುವುದಕ್ಕೆ ಮುನ್ನ ಎರಡು ವಿಷಯಗಳು. ನಾನು ಕಂಡಂತೆ ಸಾರ್ವಜನಿಕ ಜೀವನದಲ್ಲಿ ಹಿಂದೂ ಧರ್ಮದ ಲಕ್ಷಣಗಳು ಹೆಚ್ಚುಹೆಚ್ಚಾಗಿ ಕಾಣುತ್ತಿವೆ. ಕಾಶಿಯಲ್ಲಿ ಅವತ್ತು ಏನು ನಡೆಯಿತು ಎಂದು ನೀವು ಆಗಲೆ ಹೇಳಿದಿರಿ. ಹಿಂದೂ ಧರ್ಮಾಚರಣೆಯ ಜೊತೆ ಪ್ರಧಾನ ಮಂತ್ರಿಗಳ ನಿಕಟವಾದ ಸಂಬಂಧವನ್ನು ಕಂಡೆವು. ಅದೇ ತರಹದಲ್ಲಿ ನಗರಗಳ ಹೆಸರುಗಳನ್ನು ಬದಲಾಯಿಸುವುದರಲ್ಲಿ, ಇತಿಹಾಸವನ್ನು ಮತ್ತೆ ಬರೆಯುವುದರಲ್ಲಿ ಮತ್ತು ಭೂಸೇನೆಯ ಪಥಸಂಚಾರದಲ್ಲಿ (ಪೆರೇಡ್) ಆರತಿ ಎತ್ತುವುದರಲ್ಲಿಯೂ ಇದೇ ನಡೆಯುತ್ತಿದೆ. ಧರ್ಮನಿರಪೇಕ್ಷತೆಯ ಬಗ್ಗೆ ಭಾರತದ ಸಾಂವಿಧಾನಿಕ ಬದ್ಧತೆ ಕ್ರಮೇಣ ನಾಶವಾಗುತ್ತಿದೆಯೆ?

ಉ: ಧರ್ಮನಿರಪೇಕ್ಷತೆಯ ಬಗ್ಗೆ ಸಂವಿಧಾನಕ್ಕೆ ಇರುವ ಬದ್ಧತೆ ನೀವು ಈಗ ಹೇಳಿದ ಎಲ್ಲ ರೀತಿಗಳಲ್ಲೂ ಖಂಡಿತವಾಗಿ ನಾಶವಾಗುತ್ತಿದೆ. ಆದರೆ, ಎರಡು ರೀತಿಯ ಅಪಾಯಗಳನ್ನು ಬೇರ್ಪಡಿಸಿ ನೋಡಬೇಕು. ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರು. ಪ್ರಜಾಪ್ರಭುತ್ವ ಆಳಕ್ಕೆ ಇಳಿದಾಗ, ಅದು ವಿವಿಧ ಸಮುದಾಯಗಳಲ್ಲಿ ಹರಡಿಕೊಂಡಾಗ  (ವರ್ನಾಕ್ಯುಲರೈಜ಼ೇಷನ್‌ ಆಫ್‌ ಡೆಮಾಕ್ರಸಿ) ಒಂದು ರೀತಿಯ ಮಂಥನ ಆಗುವುದು ಅನಿವಾರ್ಯ. ಉದಾಹರಣೆಗೆ, ಭಾರತದ ಐತಿಹಾಸಿಕ ಗತಕಾಲವನ್ನು ಹೇಗೆ ಪ್ರತಿನಿಧಿಸಬೇಕು ಎನ್ನುವುದರ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತವೆ, ಹಾಗೂ ಅವುಗಳಲ್ಲಿ ಬಹಳ ಚರ್ಚೆಗಳು ಸರಿಯಾದವುಗಳೇ. ಕೆಲವು ವರ್ಗದವರಿಗೆ ಸಾರ್ವಜನಿಕ ಸಂಸ್ಕೃತಿಯನ್ನು ಮತ್ತೆ ಪಡೆದುಕೊಳ್ಳುವ ಆಸೆ ಇರುತ್ತದೆ. ಅದನ್ನು ನಾವು ಒಪ್ಪಬಹುದು ಬಿಡಬಹುದು, ಆದರೆ ಎಲ್ಲ ಸಮಾಜಗಳೂ ಈ ಪ್ರಕ್ರಿಯೆಗಳಿಗೆ ಒಳಗಾಗುತ್ತವೆ. ಆದರೆ, ನಾಗರಿಕ ಸಮಾಜದ ಮುಕ್ತ ಚರ್ಚೆಗಳಾಗಬೇಕಿದ್ದ ವಿಷಯಗಳ ದಿಕ್ಕನ್ನು ನಿರ್ಧರಿಸಲು-ಮರುನಿರ್ದೇಶಿಸಲು ವ್ವಸ್ಥಿತವಾದ ರಾಜಕೀಯ ಅಧಿಕಾರವನ್ನು ಬಳಸುತ್ತಿರುವುದರಿಂದ ಈ ಸಮಯ ಕಪಟದಿಂದ ಕೂಡಿದ್ದು ಮತ್ತು ಅಪಾಯಕಾರಿಯಾದದ್ದು.

ಬೇಕಿದ್ದರೆ, ಮಧ್ಯಯುಗಗಳ ಇತಿಹಾಸದ ಬಗ್ಗೆ ಚರ್ಚಿಸೋಣ. ಬೇರೆಬೇರೆ ಪಂಥಗಳ ಇತಿಹಾಸಕಾರರು ತಮ್ಮ ವಾದಗಳ ಮೂಲಕ ಚರ್ಚೆಮಾಡುವುದನ್ನು ನೋಡಲು ಖುಷಿಯಾಗುತ್ತದೆ. ಆದರೆ ಅವುಗಳ ನಂತರ ಯಾವುದೇ ಜನರ ಮಾರಣಹೋಮ ನಡೆಯುವುದಿಲ್ಲ ಎಂಬ ಆಶ್ವಾಸನೆಯಿರಬೇಕು. ಆ ರೀತಿಯ ರಾಜಕೀಯದ ಮತ್ತು ಸಾಂಸ್ಕೃತಿಕ ಅಧಿಕಾರದ ಜೋಡಣೆ ಅಲ್ಪಸಂಖ್ಯಾತರನ್ನು ಗುರಿಮಾಡುತ್ತದೆ ಎನ್ನುವುದಕ್ಕಾಗಿ ಅದು ಅಪಾಯಕಾರಿಯಾದದ್ದಲ್ಲ, ಈಗ ಒಂದು ರಾಜಕೀಯ ಪಕ್ಷ “ಯಾರು ಅಪ್ಪಟ ಹಿಂದೂಗಳು ಎಂದು ಪರಿಗಣಿಸುವುದರಲ್ಲಿ ನಾವು ಮಧ್ಯಸ್ತಿಕೆ ವಹಿಸುತ್ತೇವೆ” ಎಂದು ಹೇಳಲು ಶುರುಮಾಡಿರುವುದರಿಂದ ಅದು ಅಪಾಯಕಾರಿಯಾದದ್ದು.

ಪ್ರ: ನೀವುರಾಜಕೀಯ ಪಕ್ಷಗಳುಎಂದು ಬಹುವಚನ ಬಳಸಿದಿರಿ, ಆದರೆ ಬಿಜೆಪಿ ಒಂದೇ ಪಕ್ಷ ಹಾಗೆ ಮಾಡುತ್ತಿರುವುದಲ್ಲವೆ?

ಉ: ಅನೇಕ ಪಕ್ಷಗಳು ಅವರನ್ನು ಅನುಸರಿಸುತ್ತಿವೆ. ಅರವಿಂದ ಕೇಜ್ರೀವಾಲ್‌ ತೀರ್ಥಯಾತ್ರಾ ರೈಲುಗಳನ್ನು ಓಡಿಸುವ ಮೂಲಕ ಏನನ್ನು ಮಾಡುತ್ತಿದ್ದಾರೆ? ರಾಹುಲ್‌ ಗಾಂಧಿ ಕೂಡ ಹಾಗೆಯೆ ಮಾಡುತ್ತಿದ್ದಾರೆ. ಅವರ ಉದ್ದೇಶ ಸರಿಯಾಗಿರಬಹುದು, ಆದರೆ ಒಂದು ರಾಜಕೀಯ ಪಕ್ಷ “ಯಾರು ನಿಜವಾದ ಹಿಂದೂ ಮತ್ತು ಯಾರು ಅಲ್ಲ ಎನ್ನುವುದನ್ನು ನಾವು ನಿರ್ಧರಿಸುತ್ತೇವೆ” ಎಂದು ಹೇಳುವ ಸ್ಥಿತಿಗೆ ಬಂದಿರುವುದು ಬಹಳ ಅಪಾಯಕಾರಿಯಾದ ಸನ್ನಿವೇಶ; ಅದರ ಉದ್ದೇಶಗಳು ಏನೇ ಇರಲಿ.

ಪ್ರ: ಹಾಗಾದರೆ, ರಾಜಕೀಯದ ಜೊತೆ ಧರ್ಮ ಹೆಚ್ಚು ಬಹಿರಂವಾಗಿ ತೊಡಗಿಕೊಳ್ಳುತ್ತಿದೆ. ಅವುಗಳ ನಡುವೆ ಇರುವ ವ್ಯತ್ಯಾಸ ಮತ್ತು ಅಂತರ ಸವೆಯುತ್ತಿವೆ.

ಉ: ನಮ್ಮ ಸಾರ್ವಜನಿಕ ವಲಯದಲ್ಲಿ ಅದು ಕುಸಿದುಹೋಗಿದೆ ಎಂದೇ ಹೇಳಬಹುದು.

ಪ್ರ: ಇಂತಹ ಸನ್ನಿವೇಶದಲ್ಲಿ ಧರ್ಮನಿರಪೇಕ್ಷತೆ ನಾಶವಾಗಿದೆ.

ಉ: ಖಂಡಿತ.

ಪ್ರ: ನಮ್ಮ ಸಾರ್ವಜನಿಕ ಜೀವನ ಹೆಚ್ಚುಹಿಂದೂ ಅಂಶಗಳಿಂದ ಕೂಡಿರುತ್ತದೆ” (ಹಿಂದೂಐಸ್ಡ್), ಅಲ್ಲವೆ?

ಉ: ಅದು ತಾನಾಗಿಯೆ ಮುಕ್ತವಾಗಿ ವ್ಯಕ್ತವಾದರೆ ಏನೂ ಸಮಸ್ಯೆಯಿಲ್ಲ. ಮುಸಲ್ಮಾನರು ತಮ್ಮ ಮತವನ್ನು ಸಾರ್ವಜನಿಕ ಸಂಸ್ಕೃತಿಯಲ್ಲಿ ವ್ಯಕ್ತಗೊಳಿಸುವುದರಲ್ಲಿ ಯಾವುದೆ ತಪ್ಪಿಲ್ಲದಂತೆ ಇದೂ ಸರಿಯಷ್ಟೆ. ಆದರೆ, ಸರ್ಕಾರದಿಂದ ರಾಜಕೀಯ ಅಧಿಕಾರವನ್ನು ಸಂಘಟಿಸಲು ಇದನ್ನು ಬಳಸುವುದರಿಂದ ಇದು ಅಷ್ಟು ಅಪಾಯಕಾರಿಯಾದದ್ದು.

ಪ್ರ: ಇಲ್ಲಿಯವರೆಗೆ ನಾವು ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾದ ಕಳೆದ ಏಳು ವರ್ಷಗಳಲ್ಲಿ ನಡೆಯುತ್ತಿರುವ ಒಂದು ಪ್ರಕ್ರಿಯೆಯ ಬಗ್ಗೆ ಮಾತನಾಡಿದೆವು. ಅನೇಕ ಜನ ನಂಬುವಂತೆ, ಬಿಜೆಪಿ ಮತ್ತು ನರೇಂದ್ರ ಮೋದಿ 2024ರ ಚುನಾವಣೆಯನ್ನು ಗೆದ್ದರೆ ದಶಕದ ಕೊನೆಯಲ್ಲಿ ಭಾರತ ಹೇಗಿರುತ್ತದೆ?

ಉ: ಎರಡು ಎಚ್ಚರಿಕೆಯ ಮಾತುಗಳನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಒಂದು, ಅವರಿಗೆ ಆಡಳಿತ ನಡೆಸುವುದರಲ್ಲಿ ಎಷ್ಟು ಸಾಮರ್ಥ್ಯ ಇದೆ ಎನ್ನುವುದರ ಮೇಲೆ ಬಹಳಷ್ಟು ವಿಷಯಗಳು ನಿಂತಿವೆ; ಇದನ್ನು ನಾವು ಇತಿಹಾಸದಿಂದ ಕಲಿತಿದ್ದೇವೆ. ನನ್ನ ಪ್ರಕಾರ ಈ ಪ್ರವೃತ್ತಿ ಮುಂದುವರೆದರೆ ಭಾರತವನ್ನು ಆಳುವುದು ಕಷ್ಟಕರವಾಗುತ್ತದೆ. ನಮ್ಮ ಅನೇಕ ಸಂಘರ್ಷಗಳು ಸಂವಿಧಾನಬಾಹಿರ ಮಾದರಿಗಳಾಗಿ ವಿಸ್ತಾರಗೊಳ್ಳುತ್ತವೆ. ಇದನ್ನು ನಾವು ಈಗಾಗಲೆ ನೋಡುತ್ತಿದ್ದೇವೆ. ಅರ್ಥವ್ಯವಸ್ಥೆಯ ಸ್ಥಿತಿಗೆ ಬಹಳ ಮಹತ್ವವಿದೆ. ಜನರು ಅರ್ಥವ್ಯವಸ್ಥೆಯ ಬಗ್ಗೆ ಕೇವಲ ನಿಮಿತ್ತದ ರೀತಿಯಲ್ಲಿ ಮತ ಚಲಾಯಿಸುವುದಿಲ್ಲ.  ಆದರೆ, ಅತಿಯಾದ ಬೆಲೆ ಏರಿಕೆ ಮತ್ತು ಅತಿಯಾದ ನಿರುದ್ಯೋಗ ಇದ್ದರೆ, ಯಾವುದೊ ಘಟ್ಟದಲ್ಲಿ ಅದು ಮೋದಿಯವರ ಅನುಯಾಯಿಗಳ ವಲಯದಲ್ಲೂ ಯಾವುದಾದರೂ ರಾಜಕೀಯ ವಿರೋಧ ಅಥವ ಅಸಮಾಧಾನವಾಗಿ ವ್ಯಕ್ತವಾಗುತ್ತದೆ. ರಾಜಕೀಯವಾಗಿ ಯಾವುದೇ ದಾರಿಯಿಲ್ಲ ಎಂದು ನಾವು ಮೊದಲೇ ತೀರ್ಮಾನಿಸಬಾರದು. ಈ ಸರ್ಕಾರದ ನಡೆಗಳ ಬಗ್ಗೆ ಜನರು ನಿಜವಾಗಿಯೂ ಯೋಚಿಸುವಂತಹ ವಿಷಯಗಳು ಇವೆ ಎನ್ನುವುದನ್ನು ತೋರಿಸಬಹುದು. ಅಂತಹ ಒಂದು ವಿಷಯ ಬೆಲೆ ಏರಿಕೆ. ಅದು ಬಿಜೆಪಿಯನ್ನು ನಡುಗಿಸಿದೆ.

ಈಗ ಏಳುವ ಪ್ರಶ್ನೆ “ಈ ಅವಕಾಶಗಳನ್ನು ಬಳಸಿಕೊಳ್ಳುವ ಚುರುಕಾದ ಮತ್ತು ವಿಶ್ವಾಸಾರ್ಹವಾದ ಪ್ರತಿಪಕ್ಷಗಳ ಒಕ್ಕೂಟ ರಚನೆಯಾಗುತ್ತದೆಯೆ?” ಭಾರತದಂತಹ ದೊಡ್ಡ ಮತ್ತು ಸಂಕೀರ್ಣವಾದ ದೇಶವನ್ನು ಮೋದಿ ವ್ಯವಸ್ಥಿತವಾಗಿ ನಿಯಂತ್ರಿಸಲು ಪ್ರಯತ್ನಪಡುವುದು ಸಾಧ್ಯವೆ ಎಂದು ನನಗೆ ನಂಬಲು ಕಷ್ಟವಾಗುತ್ತಿದೆ. ಅಲ್ಲಲ್ಲಿ ಚಿಕ್ಕದಾಗಿ ವಿರೋಧ ಬರುತ್ತದೆ. ಒಂದು ಜನಪ್ರಿಯ ಹಾಡು ಹೇಳುವಂತೆ “ಬೆಳಕು ಸಂದುಗಳ ಮೂಲಕ ಯಾವಾಗ ಬೇಕಾದರೂ ಬರಬಹುದು”.

ಪ್ರ: ವಿರೋಧ ಪಕ್ಷಗಳು ಎಚ್ಚೆತ್ತುಕೊಂಡು ತಮ್ಮನ್ನು ದಕ್ಷವಾಗಿ ಸಂಘಟಿಸಿಕೊಳ್ಳದಿದ್ದರೆ ಮೋದಿಯವರನ್ನು ಯಾರೂ ತಡೆಯಲಾರರು. ದುರಾಡಳಿತ ನಡೆಸಿ, ಬೆಲೆ ಏರಿಕೆಗೆ ಅವಕಾಶ ಕೊಟ್ಟು ಅರ್ಥವ್ಯವಸ್ಥೆಯನ್ನು ಕುಲಗೆಡಿಸಿದ್ದರೂ ಅವರಿಗೆ ದಾರಿ ಸುಗಮವಾಗಿರುತ್ತದೆ.

ಉ: ಖಂಡಿತ. ಒಂದು ಪ್ರತಿಹೊಡೆತ ಉಂಟಾಗಬೇಕಾದರೆ (ಬ್ಯಾಕ್ಲಾಷ್)‌ ಅವರು ಅರ್ಥವ್ಯವಸ್ಥೆಯನ್ನು ಅತ್ಯಂತ ವಿನಾಶಕಾರಿಯಾದ ಮಟ್ಟಕ್ಕೆ ಹಾಳುಮಾಡಿರಬೇಕಾಗುತ್ತದೆ. ಆದರೆ, ಅವರ ಈಗಿನ ಸಾಧನೆಯನ್ನು ನೋಡಿದರೆ, ವಿರೋಧ ಪಕ್ಷಗಳು ನಿರೀಕ್ಷಿಸುವಷ್ಟು ಪ್ರತಿಹೊಡೆತವನ್ನು ಅದು ಉಂಟುಮಾಡಲಾರದು.

ಪ್ರ: ವಿರೋಧ ಪಕ್ಷಗಳು ತಮ್ಮನ್ನು ತಾವು ದಕ್ಷವಾಗಿ ಸಂಘಟಿಸಿಕೊಳ್ಳಲು ವಿಫಲರಾಗಿರುವುದು ಅಥವ ಅಸಮರ್ಥರಾಗಿರುವುದು ಮೋದಿಯವರ ಬತ್ತಳಿಕೆಗೆ ಇನ್ನೊಂದು ಅಸ್ತ್ರವನ್ನು ಕೊಟ್ಟ ಹಾಗೆ ಎಂದು ಹೇಳುತ್ತ ನಾವು ಮುಗಿಸಬಹುದಲ್ಲವೆ?

ಉ: ವಿರೋಧ ಪಕ್ಷಗಳು ಮೋದಿಯವರಿಗೆ ಅತ್ಯಂತ ದೊಡ್ಡ ಉಡುಗೊರೆ.

ಪ್ರ: ಈ ಸಂದರ್ಶನ ನೀಡಿದ್ದಕ್ಕಾಗಿ ಬಹಳ ಧನ್ಯವಾದಗಳು. ಇದು ಕಣ್ತೆರೆಸುವಂತಹದ್ದು. ಸೊಗಸಾಗಿರುವುದರ ಜೊತೆಗೆ ಬಹಳ ಭವಿಷ್ಯದ ಬಗ್ಗೆ ನಿರಾಶೆಯನ್ನು ವ್ಯಕ್ತಪಡಿಸುವಂಥದ್ದು ಕೂಡ. ವಿಶೇಷವಾಗಿ, ಇವೆಲ್ಲ ಎಲ್ಲಿಗೆ ಹೋಗಿ ಮುಟ್ಟುತ್ತವೆ ಎನ್ನುವುದರ ಬಗ್ಗೆ ನಿಮಗೆ ದುಃಸ್ವಪ್ನಗಳು ಬರುತ್ತವೆ ಎನ್ನುವುದನ್ನು ನಾನು ಮರೆಯಲಾರೆ.

ಉ: ನನಗೆ ಅವುಗಳು ಬರದೆ ಇದ್ದರೆ ಚೆನ್ನಾಗಿರುತ್ತಿತ್ತು. ಆದರೆ, ನಿಮ್ಮ ಕಾರ್ಯಕ್ರಮದಲ್ಲಿ ನಾನು ಸತ್ಯವನ್ನು ಮಾತನಾಡಲೇಬೇಕು.

ಬಹಳ ಧನ್ಯವಾದಗಳು. ಆರೋಗ್ಯ ನೋಡಿಕೊಳ್ಳಿ. ಸುರಕ್ಷಿತವಾಗಿರಿ.

ಟಿಪ್ಪಣಿಗಳು

. ಡಾಗ್ವಿಜ಼ಲ್ – ರಾಜ್ಯಶಾಸ್ತ್ರದಲ್ಲಿ “ಡಾಗ್‌ ವಿಸಲ್”‌ ಎಂಬ ಪರಿಭಾಷೆಯ ಅರ್ಥ ಒಂದು ಸಂದೇಶನ್ನು ಒಂದು ನಿರ್ದಿಷ್ಟ ಗುಂಪಿನವರನ್ನು ಗುರಿಯಾಗಿಟ್ಟುಕೊಂಡು ಕೊಡಲಾಗುತ್ತದೆ ಮತ್ತು ಅದು ಆ ಗುಂಪಿನವರಿಗೆ ಮಾತ್ರ ಅರ್ಥವಾಗುತ್ತದೆ.

. ವಾರ್ಆಫ್ಅಟ್ರಿಷನ್ (ಸಮೆಯಿಸುವ ಯುದ್ಧ)ಎದುರು ಪಕ್ಷದವರ ಮೇಲೆ ನಿರಂತರವಾಗಿ ಧಾಳಿಮಾಡುವುದರಿಂದ ಅಥವ ಕಾಟಕೊಡುವುದರಿಂದ ಅವರನ್ನು ದುರ್ಬಲಗೊಳಿಸುವುದು.

. ಅಟ್ಆರ್ಮ್ಸ್ಲೆನ್ತ್‌ (ಕೈ ಉದ್ದದಷ್ಟು ದೂರ) – ಇದೊಂದು ಆಂಗ್ಲ ನುಡಿಗಟ್ಟಿನ ಅನುವಾದ. ಒಂದು ವ್ಯವಹಾರದಲ್ಲಿ ವೈಯಕ್ತಿಕ ಸಂಪರ್ಕ ಅಥವ ಪರಿಚಯ ಇಲ್ಲದಿರುವಷ್ಟು ಅಂತರವನ್ನು ಕಾಪಾಡಿಕೊಳ್ಳಬೇಕೆಂದು ಸೂಚಿಸುತ್ತದೆ.

(ಕೃಪೆ): ದ ವೈರ್

ಕನ್ನಡ ಅನುವಾದ ಮತ್ತು ಅಕ್ಷರ ರೂಪ: ಎಂ. ಆರ್. ರಕ್ಷಿತ್ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...